ಶನಿವಾರ, ಜೂನ್ 6, 2020
27 °C

ಮಧ್ಯಮ ಬೆಲೆಗೆ ಉತ್ತಮ ಕ್ಯಾಮೆರಾ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಮಧ್ಯಮ ಬೆಲೆಗೆ ಉತ್ತಮ ಕ್ಯಾಮೆರಾ

ನನಗೆ ವೃತ್ತಿಪರರು ಬಳಸುವ ಎಸ್‌ಎಲ್‌ಆರ್ ಬೇಡ, ಅದರೆ ಒಂದು ಶಕ್ತಿಶಾಲಿಯಾದ ಕ್ಯಾಮೆರಾ ಬೇಕು, ಯಾವುದನ್ನು ಕೊಳ್ಳಲಿ? ಈ ಪ್ರಶ್ನೆ ಆಗಾಗ ಕೇಳಿಬರುತ್ತದೆ.ಈ ಪ್ರಶ್ನೆಗೆ ಉತ್ತರವೆಂದರೆ ನಿಮಗೆ ಬೇಕಾಗಿರುವುದು ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವ ಸೂಪರ್‌ಝೂಮ್ ಅಥವಾ ಮೆಗಾಝೂಮ್ ಕ್ಯಾಮೆರಾ. ಒಂದು ಕಾಲದಲ್ಲಿ 10x ಝೂಮ್ ಅಂದರೆ ಅದುವೇ ಅತ್ಯಂತ ಅಧಿಕ ಎನ್ನುವ ಕಾಲವಿತ್ತು.ಈಗೀಗ 16x ಝೂಮ್ ಎನ್ನುವುದು ಸಾಮಾನ್ಯವೆನಿಸಿಕೊಳ್ಳುತ್ತಿದೆ. ಆದುದರಿಂದ 18x ಅಥವಾ 20x ಮತ್ತು ಅದಕ್ಕಿಂತ ಅಧಿಕ ಝೂಮ್ ಇರುವ ಕ್ಯಾಮೆರಾ ಮೆಗಾಝೂಮ್ ಅಥವಾ ಸೂಪರ್‌ಝೂಮ್ ಎನಿಸಿಕೊಳ್ಳುತ್ತಿದೆ. ಬಹುತೇಕ ಎಲ್ಲ ಕ್ಯಾಮೆರಾ ಕಂಪೆನಿಗಳು ಇಂತಹ ಕ್ಯಾಮೆರಾ ತಯಾರಿಸುತ್ತಿವೆ. ಇವುಗಳ ಗಾತ್ರ ಬಹುಮಟ್ಟಿಗೆ ಎಸ್‌ಎಲ್‌ಆರ್ ಕ್ಯಾಮೆರಾಗಳಿಗೆ ಹತ್ತಿರವಿರುತ್ತದೆ. ತೂಕ ಕೂಡ ಹಾಗೆಯೇ ಸುಮಾರು ಅರ್ಧ ಕಿಲೋ ಇರುತ್ತವೆ. ಅಂತಹ ಒಂದು ಮೆಗಾಝೂಮ್ ಕ್ಯಾಮೆರಾ ನಿಕಾನ್ ಕೂಲ್‌ಪಿಕ್ಸ್ ಎಲ್820 (Nikon Cooplpix L820) ನಮ್ಮ ಈ ವಾರದ ಗ್ಯಾಜೆಟ್.ಮೊದಲನೆಯದಾಗಿ ಇದರ ಗುಣವೈಶಿಷ್ಟ್ಯಗಳು (specifications): 16 ಮೆಗಾಪಿಕ್ಸೆಲ್, 30x ಮೆಗಾಝೂಮ್, 4-120 ಮಿ.ಮೀ. ಫೋಕಲ್ ಲೆಂತ್ (35 ಮಿ.ಮೀ. ಕ್ಯಾಮೆರಾಕ್ಕೆ ಇದನ್ನು ಹೋಲಿಸುವುದಾದರೆ ಇದು 22.5-675 ಮಿ.ಮೀ. ಆಗುತ್ತದೆ), F/3.0-5.8 ಲೆನ್ಸ್, 4x ಡಿಜಿಟಲ್ ಝೂಮ್, ಕೈ ಅಲುಗಾಡಿದರೂ ಚಿತ್ರ ಸ್ಥಿರವಾಗಿ ಬರಲು ವಿಆರ್ (VR = Vibration Reduction), ಸಾಮಾನ್ಯ ಆಯ್ಕೆಯಲ್ಲಿ 50 ಸೆ.ಮೀ.ನಿಂದ ಅನಂತದ ತನಕ ಮತ್ತು ಮ್ಯೋಕ್ರೋ ಆಯ್ಕೆಯಲ್ಲಿ 1 ಸೆ.ಮೀ.ನಿಂದ ಅನಂತದ ತನಕ ಫೋಟೊ ತೆಗೆಯಬಹುದು, 3 ಇಂಚು ಗಾತ್ರದ ಎಲ್‌ಸಿಡಿ ಪರದೆ, ಐಎಸ್‌ಒ 125 ರಿಂದ 3200, ಮೂರು ವಿಧ ಬ್ಯಾಟರಿ ಆಯ್ಕೆ, ಹಲವು ವಿಧದ ದೃಶ್ಯಗಳ ಆಯ್ಕೆ, ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆ, ಪೂರ್ತಿ ಹೈಡೆಫಿನಿಶನ್ ವಿಡಿಯೊ ಮಾಡುವ ಸೌಲಭ್ಯ, ಯುಎಸ್‌ಬಿ ಮತ್ತು ಎಚ್‌ಡಿಎಂಐ ಕಿಂಡಿ, ಲೆನ್ಸ್ ಪೂರ್ತಿ ಒಳಹೋದಾಗ ಸುಮಾರು 111.0 x76.3 x 84.5 ಮಿ.ಮೀ. ಗಾತ್ರ, 470 ಗ್ರಾಂ ತೂಕ, ಹಲವು ಬಣ್ಣಗಳಲ್ಲಿ ಲಭ್ಯ, ಇತ್ಯಾದಿ.ಮೊದಲೇ ತಿಳಿಸಿದಂತೆ ಇದೊಂದು ಸರಳ ಏಮ್ ಆಂಡ್ ಶೂಟ್ ಕ್ಯಾಮೆರಾ. ಎಸ್‌ಎಲ್‌ಆರ್‌ನ ಕ್ಲಿಷ್ಟ ಆಯ್ಕೆಗಳನ್ನು ಬಳಸಿ ವೃತ್ತಿಪರರಂತೆ ಫೋಟೊ ತೆಗೆಯಲು ನಮ್ಮಿಂದ ಸಾಧ್ಯವಿಲ್ಲಪ್ಪ ಎನ್ನುವವರಿಗಾಗಿ ತಯಾರಾದುದು. ಅಂತೆಯೇ ಇದರಲ್ಲಿ ಹಲವು ನಮೂನೆಯ ದೃಶ್ಯಗಳ (scene) ಆಯ್ಕೆ ಇದೆ.ಅವುಗಳಲ್ಲಿ ಕೆಲವು ಪ್ರಮುಖವಾದವು -ಪೋರ್ಟ್ರೈಟ್, ಮ್ಯೋಕ್ರೋ, ಲ್ಯಾಂಡ್‌ಸ್ಕೇಪ್, ಮರಳ ಕಿನಾರೆ, ರಾತ್ರಿ, ಪಟಾಕಿ, ಪನೋರಾಮ, ಮೂರು ಆಯಾಮ, ಇತ್ಯಾದಿ. ಸಂಪೂರ್ಣ ಸ್ವಯಂಚಾಲಿತ ಆಯ್ಕೆಯೂ ಇದೆ. ನಿಮಗೆ ಬೇಕಾದ ದೃಶ್ಯ ಆಯ್ಕೆ ಮಾಡಿಕೊಂಡು ಲೆನ್ಸ್ ಅನ್ನು ಬೇಕಾದ ಮಟ್ಟಕ್ಕೆ ಝೂಮ್ ಮಾಡಿಕೊಂಡು ಕ್ಲಿಕ್ ಗುಂಡಿ ಒತ್ತಿದರೆ ಆಯಿತು. ಫೋಟೋ ಸಿದ್ಧ. ಬುದ್ಧಿವಂತಿಕೆಯೇ ಬೇಡ. ನಿಮ್ಮ ಬದಲಿಗೆ ಎಲ್ಲ ಆಲೋಚನೆಗಳನ್ನು ಕ್ಯಾಮರಾವೇ ಮಾಡುತ್ತದೆ.ಇದರ -ಪೋರ್ಟ್ರೈಟ್ ಸ್ವಲ್ಪ ವಿಶಿಷ್ಟವಾಗಿದೆ. ಹಲವು ಜನ ನಿಂತಿದ್ದಾಗ ಎಲ್ಲರ ಮುಖಗಳನ್ನು ಗುರುತಿಸುತ್ತದೆ. ಮುಖದಲ್ಲಿ ಇರುವ ಬೆಳಕಿಗೆ ಸರಿಯಾಗಿ ಷಟರ್ ವೇಗ ಮತ್ತು ಅಪರ್ಚರ್ ಆಯ್ಕೆ ಮಾಡಿಕೊಳ್ಳುತ್ತದೆ. ಮುಗುಳ್ನಗು ನೀಡಿದಾಗ ಮಾತ್ರ ಫೋಟೊ ತೆಗೆಯುತ್ತದೆ! ಫೋಟೊ ತೆಗೆಯುವ ಸಮಯದಲ್ಲಿ ಯಾರಾದರೂ ಕಣ್ಣುಮುಚ್ಚಿದರೆ ಅದನ್ನೂ ತಿಳಿಸುತ್ತದೆ! ಆಗ ನೀವು ಇನ್ನೊಂದು ಫೋಟೊ ತೆಗೆಯಬಹುದು. ಪಾಸ್‌ಪೋರ್ಟ್ ಗಾತ್ರದ ಫೋಟೊ ತೆಗೆಸಲು ನೀವು ಸ್ಟುಡಿಯೊಗೆ ಅಲೆದಾಡಬೇಕಾಗಿಲ್ಲ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ತೆಗೆಯಬಹುದು. ಇದರ ಮ್ಯೋಕ್ರೋ ಆಯ್ಕೆ ತುಂಬ ಚೆನ್ನಾಗಿದೆ. ಅತಿ ಹತ್ತಿರ ಎಂದರೆ ಒಂದು ಸೆ.ಮೀ. ದೂರದಿಂದಲೂ ಅತಿ ಸಣ್ಣ ವಸ್ತುಗಳ, ಉದಾಹರಣೆಗೆ ಚಿಕ್ಕ ಇರುವೆ, ಫೋಟೊ ತೆಗೆಯಬಹುದು. 

 

ಇದರಲ್ಲಿ ಹೈಡೆಫಿನಿಶನ್ ವಿಡಿಯೊ ತೆಗೆಯುವ ಸೌಲಭ್ಯ ಇದೆ. ಇದಕ್ಕಾಗಿ ನೀವು ಸ್ಥಿರಚಿತ್ರದಿಂದ ವಿಡಿಯೊಗೆ ಬದಲಿಸಲು ಹಲವು ಸಲ ಹಲವು ಕಡೆ ಒತ್ತಬೇಕಾಗಿಲ್ಲ. ಅದಕ್ಕೆಂದೇ ಇರುವ ಒಂದು ಗುಂಡಿ ಒತ್ತಿದರೆ ಸಾಕು. ಕ್ಯಾಮೆರಾ ಯಾವ ಪರಿಸ್ಥಿತಿಯಲ್ಲಿದ್ದರೂ ನೇರವಾಗಿ ವಿಡಿಯೊ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ರೆಕಾರ್ಡ್ ಆದ ವಿಡಿಯೊವನ್ನು ಅದರ ಪರದೆಯಲ್ಲೇ ಪ್ಲೇ ಮಾಡಿ ನೋಡಬಹುದು. ಅಥವಾ ಅವರೇ ನೀಡಿರುವ ಕೇಬಲ್ ಮೂಲಕ ಟಿ.ವಿ.ಗೆ ಜೋಡಿಸಿ ನೋಡಬಹುದು.ಇದರಲ್ಲಿ ಸುಲಭ ಪನೋರಾಮ ಎಂಬ ಆಯ್ಕೆ ಇದೆ. ಇದರಲ್ಲಿ 180 ಮತ್ತು 360 ಡಿಗ್ರಿಗಳ ಆಯ್ಕೆ ಇದೆ. ಒಮ್ಮೆ ಬೇಕಾದುದನ್ನು ಆಯ್ಕೆ ಮಾಡಿಕೊಂಡರೆ ಪರದೆಯಲ್ಲಿ ಅಡ್ಡ ನೀಟ ಗೆರೆಗಳನ್ನು ಮೂಡಿಸುತ್ತದೆ. ಈ ಗೆರೆಗಳ ಸಹಾಯದಿಂದ ಕ್ಯಾಮೆರಾವನ್ನು ತಿರುಗಿಸಿ ಪನೋರಾಮ ಫೋಟೊ ತೆಗೆಯಬಹುದು. ಬರಿಗೈಯಲ್ಲೇ ಹಿಡಿದುಕೊಂಡು ತೆಗೆಯಬಹುದಾದರೂ ಉತ್ತಮ ಪನೋರಾಮ ಫೋಟೊ ಬೇಕಿದ್ದರೆ ಕ್ಯಾಮೆರಾ ಸ್ಟ್ಯಾಂಡ್ ಬಳಸುವುದು ಒಳ್ಳೆಯದು.ಸ್ಪೋರ್ಟ್ಸ್ ಎಂದು ಆಯ್ಕೆ ಮಾಡಿಕೊಂಡರೆ ಷಟರ್ ಗುಂಡಿ ಒತ್ತಿ ಹಿಡಿದಷ್ಟು ಸಮಯವೂ ಹಲವು ಫೋಟೊಗಳನ್ನು ತೆಗೆಯುತ್ತಲೇ ಹೋಗುತ್ತದೆ. ನಂತರ ನಿಮಗೆ ಬೇಕಾದುದನ್ನು ಇಟ್ಟುಕೊಂಡು ಬೇಡವಾದುದನ್ನು ಅಳಿಸಬಹುದು. ಮೂರು ಆಯಾಮ ಎಂದು ಆಯ್ಕೆ ಮಾಡಿಕೊಂಡು ಮೂರು ಆಯಾಮದ ಫೋಟೊ ತೆಗೆಯಬಹುದು. ಮೊದಲು ಒಂದು ಫೋಟೊ ತೆಗೆದು ನಂತರ ಕ್ಯಾಮೆರಾವನ್ನು ನಮ್ಮ ಕಣ್ಣುಗಳ ನಡುವಿನ ದೂರದಷ್ಟು ಬಲಕ್ಕೆ ಸರಿಸಿ ಪರದೆಯಲ್ಲಿ ಮೂಡಿಬರುವ ಚಿತ್ರದ ಸಹಾಯದಿಂದ ಇನ್ನೊಮ್ಮೆ ಕ್ಲಿಕ್ ಮಾಡಿದರೆ ಮೂರು ಆಯಾಮದ ಚಿತ್ರ ಸಿದ್ಧ. ಆದರೆ ಅದನ್ನು ವೀಕ್ಷಿಸಲು ನಿಮ್ಮಲ್ಲಿ ಮೂರು ಆಯಾಮದ ಟಿ.ವಿ. ಇರಬೇಕು.ಇದರಲ್ಲಿ ಬಣ್ಣದ ಆಯ್ಕೆ ಕೂಡ ಇದೆ. ಹಲವು ಬಣ್ಣಗಳ ವಸ್ತುಗಳ ಮಧ್ಯೆ ಒಂದು ಹಳದಿ ಬಣ್ಣದ ವಸ್ತು ಇದೆ ಎಂದುಕೊಳ್ಳಿ. ಕ್ಯಾಮೆರಾದಲ್ಲಿ ಹಳದಿ ಬಣ್ಣ ಎಂದು ಆಯ್ಕೆ ಮಾಡಿಕೊಂಡರೆ ಹಳದಿ ಬಣ್ಣ ಬಿಟ್ಟು ಇತರೆ ವಸ್ತುಗಳು ಕಪ್ಪು ಬಿಳುಪಿನಲ್ಲಿ ಚಿತ್ರಿತವಾಗುತ್ತವೆ. ನಿಜವಾಗಿ ನೊಡಿದರೆ ಇದು ಫೋಟೊಶಾಪ್‌ನ ಸೌಲಭ್ಯ. ಇದೇ ರೀತಿ ಫೋಟೊಶಾಪ್ ನೀಡುವ ಇನ್ನೂ ಒಂದೆರಡು ಸವಲತ್ತುಗಳು ಕ್ಯಾಮೆರಾದಲ್ಲೇ ಅಡಕವಾಗಿವೆ.ಮೊದಲೇ ತಿಳಿಸಿದಂತೆ ಇದು ಸಂಪೂರ್ಣ ಆಟೋಮ್ಯೋಟಿಕ್ ಆಗಿದೆ. ನೀವು ಸ್ವಲ್ಪ ಪರಿಣತ ಛಾಯಾಗ್ರಾಹಕರಾದರೆ ನಿಮಗೆ ಬೇಗನೆ ಸ್ವಲ್ಪ ನಿರಾಸೆ ಆಗಬಹುದು. ಯಾಕೆಂದರೆ ಇದರಲ್ಲಿ ಸ್ವಲ್ಪವೂ ಮ್ಯೋನುಯಲ್ ಆಯ್ಕೆ ಇಲ್ಲ. ಎಲ್ಲವೂ ಸ್ವಯಂಚಾಲಿತ. ಒಂದಾದರೂ ಮ್ಯೋನುಯಲ್ ಆಯ್ಕೆ ನೀಡಿದ್ದರೆ ಚೆನ್ನಾಗಿತ್ತು. ಜೊತೆಗೆ ಇದರ ಗಾತ್ರದ ಕಡೆಗೂ ಸ್ವಲ್ಪ ಗಮನ ನೀಡುವುದು ಒಳಿತು. ಇದೇನೂ ಚಿಕ್ಕ ಕ್ಯಾಮೆರಾವಲ್ಲ.ನೀವು ಕೊಂಡ ಬ್ಯಾಟರಿ ಆಲ್ಕಲೈನ್ ಅಥವಾ ರಿಚಾರ್ಜೇಬಲ್ ಆಗಿರಬಹುದು. ಅದನ್ನೂ ಆಯ್ಕೆ ಮಾಡಿಕೊಳ್ಳಬಹುದು. ಇದೊಂದು ಉತ್ತಮ ಸವಲತ್ತು. ಯಾಕೆಂದರೆ ಆಲ್ಕಲೈನ್ ಬ್ಯಾಟರಿ 1.5 ವೋಲ್ಟ್ ಆಗಿರುತ್ತದೆ ಮತ್ತು ರಿಚಾರ್ಜೇಬಲ್ ಬ್ಯಾಟರಿ 1.2  ವೋಲ್ಟ್ ಆಗಿರುತ್ತದೆ. ಇದಕ್ಕೆ ನಾಲ್ಕು ಬ್ಯಾಟರಿ ಹಾಕಬೇಕು. ಸುಮಾರು 300 ರಿಂದ 400 ಫೋಟೊ ತೆಗೆಯಬಹುದು. ಫ್ಲಾಶ್ ಬಳಸಿದರೆ ಕಡಿಮೆ ಫೋಟೊ ಬರುತ್ತದೆ. ಹೊರಗಡೆಯಿಂದ 5 ವೋಲ್ಟ್ ಡಿ.ಸಿ. ನೀಡಲು ಕಿಂಡಿ ಇದೆ. ಆದರೆ ಸೂಕ್ತ ಅಡಾಪ್ಟರ್ ನೀಡಿಲ್ಲ. ಅದನ್ನು ಕೊಳ್ಳಬೇಕು.ಒಟ್ಟಿನಲ್ಲಿ ಹೇಳುವುದಾದರೆ, ನೀವು ಫೋಟೊಗ್ರಫಿ ಕ್ಷೇತ್ರಕ್ಕೆ ಹೊಸಬರಾಗಿದ್ದಲ್ಲಿ ಅಥವಾ ತುಂಬ ಸರಳ ಏಮ್ ಆಂಡ್ ಶೂಟ್ ಕ್ಯಾಮೆರಾ ಬೇಕು ಆದರೆ ಅದು ತುಂಬ ಶಕ್ತಿಶಾಲಿಯಾಗಿರಬೇಕು ಎನ್ನುವವರಿಗೆ ಇದು ಸೂಕ್ತ. ಇದರ ಅಧಿಕೃತ ಬೆಲೆ 15,400 ರೂ. ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.