ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಡ್: ದಲಿತರ ಚಾರಿತ್ರಿಕ ದಂಗೆಯ ಕಥನ

Last Updated 15 ಮಾರ್ಚ್ 2016, 19:53 IST
ಅಕ್ಷರ ಗಾತ್ರ

ಈ ಕಾಲದ ಮುಖ್ಯ ಚಿಂತಕರಲ್ಲೊಬ್ಬರಾದ ಆನಂದ್ ತೇಳ್ ತುಂಬ್ಡೆ ನಾಲ್ಕೈದು ವರ್ಷಗಳಿಂದ ಬರೆಯುತ್ತಿದ್ದ ‘ಮಹಾಡ್: ದಿ ಮೇಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೋಲ್ಟ್’ (ಆಕಾರ್ ಬುಕ್ಸ್, ನವದೆಹಲಿ) ಪುಸ್ತಕ ಮೊನ್ನೆ ಬಂದಿದೆ. ‘ಇಂಡಿಯಾದ ದಲಿತ ಚಳವಳಿಯ ಜಾನಪದವೇ ಆಗಿಹೋಗಿರುವ’ 20 ಮಾರ್ಚ್ 1927ರ ಮಹಾಡ್ ಸಮ್ಮೇಳನವನ್ನು ಆನಂದ್ ‘ಜಗತ್ತಿನ ಮೊದಲ ಮುಖ್ಯ ನಾಗರಿಕ ಹಕ್ಕುಗಳ ಹೋರಾಟಗಳಲ್ಲಿ ಒಂದು’ ಎನ್ನುತ್ತಾರೆ.

ಆನಂತರ 25 ಡಿಸೆಂಬರ್ 1927ರಂದು ಬೃಹತ್ ಮಹಾಡ್ ಸತ್ಯಾಗ್ರಹವನ್ನು ಏರ್ಪಡಿಸಿದ ಅಂಬೇಡ್ಕರ್ ಅಲ್ಲಿ ಮನುಸ್ಮೃತಿಯನ್ನು ಸುಟ್ಟರು. ಈ ಎರಡು ಚಾರಿತ್ರಿಕ ಸಮ್ಮೇಳನಗಳನ್ನು ಕುರಿತು ಮರಾಠಿಯಲ್ಲಿರುವ ಅನೇಕ ದಾಖಲೆಗಳು, ವಸಾಹತು ಆಡಳಿತದ ಟಿಪ್ಪಣಿಗಳು, ಅಂಬೇಡ್ಕರರ ‘ಬಹಿಷ್ಕೃತ ಭಾರತ’ ಪತ್ರಿಕೆಯ ಸಂಪಾದಕೀಯಗಳನ್ನು ಆನಂದ್ ಮಂಡಿಸಿದ್ದಾರೆ; ಆಳವಾಗಿ ವಿಶ್ಲೇಷಿಸಿದ್ದಾರೆ.

ಮೊದಲ ಮಹಾಡ್ ಸಮ್ಮೇಳನದ ಮುಂಚೂಣಿ ಸಂಘಟಕರಾದ ರಾಮಚಂದ್ರ ಬಾಬಾಜಿ ಮೋರೆಯವರ ನಿರೂಪಣೆಯೂ ಇಲ್ಲಿದೆ. ಕೊಂಚ ಅನುಕೂಲಸ್ಥ ಮನೆತನದಿಂದ ಬಂದ ಬಾಲಕ ಮೋರೆ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಪ್ರೈಮರಿ ವಿದ್ಯಾಭ್ಯಾಸ ಮುಗಿಸಿ ಸ್ಕಾಲರ್‌ಶಿಪ್ ಪಡೆದಿದ್ದರೂ ಮಹರ್ ಎಂಬ ಕಾರಣಕ್ಕೆ ಅವನನ್ನು ಮಹಾಡ್ ಹೈಸ್ಕೂಲಿಗೆ ಸೇರಿಸಿಕೊಳ್ಳಲಿಲ್ಲ.

ಹನ್ನೊಂದರ ಹರೆಯದ ಮೋರೆ ಈ ಅನ್ಯಾಯದ ವಿರುದ್ಧ ಸರ್ಕಾರಕ್ಕೆ ಬಹಿರಂಗ ಪತ್ರವೊಂದನ್ನು ಬರೆದು ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿದ. ಸರ್ಕಾರದ ಅನುದಾನ ಕಳೆದುಕೊಂಡೇವೆಂಬ ಭಯಕ್ಕೆ ಸ್ಕೂಲಿನವರು ಮೋರೆಯನ್ನು ಸೇರಿಸಿಕೊಂಡರೂ ಅವನನ್ನು ತರಗತಿಯ ಹೊರಗೆ ಕೂರಿಸುತ್ತಿದ್ದರು. ಮುಂದೆ ಇಂಥ ಅವಮಾನಗಳ ವಿರುದ್ಧ ಬಂಡೆದ್ದ ತರುಣ ಮೋರೆ ದಲಿತ ಸಮುದಾಯವನ್ನು ಎಚ್ಚರಿಸುತ್ತಾ, ಅವರಿಗೆ ಆಗುತ್ತಿದ್ದ ಅವಮಾನಗಳ ವಿರುದ್ಧ ಹೋರಾಡತೊಡಗಿದರು. 

ಆ ಹೊತ್ತಿಗಾಗಲೇ ಲಂಡನ್ ಹಾಗೂ ಕೊಲಂಬಿಯಾದಿಂದ ಎರಡು ಡಾಕ್ಟರೇಟ್ ಹಾಗೂ ಬಾರ್ ಅಟ್ ಲಾ ಪದವಿ ಪಡೆದು ಹಿಂದಿರುಗಿದ್ದ ಅಂಬೇಡ್ಕರ್  ಸಾಧನೆಯ ಬಗ್ಗೆ ಮೋರೆಗೆ ಅಪಾರ ಹೆಮ್ಮೆ ಹಾಗೂ ಗೌರವವಿತ್ತು. ಅಂಬೇಡ್ಕರರನ್ನು ಮಹಾಡ್‌ಗೆ ಕರೆಸಿ ಸನ್ಮಾನ ಮಾಡಿ, ದಲಿತ ಮಕ್ಕಳು ಅವರಂತೆ ಸಾಧನೆ ಮಾಡಲು ಸ್ಫೂರ್ತಿ ತುಂಬಬೇಕು; ದಲಿತರನ್ನು ಹೀನಾಯವಾಗಿ ಕಾಣುವ ಸವರ್ಣೀಯರು ಅಂಬೇಡ್ಕರ್ ಸಾಧನೆ ಕಂಡು ನಾಚಿಕೊಳ್ಳುವಂತೆ ಮಾಡಬೇಕು ಎಂಬ ಆಸೆಯಿಂದ ಅಂಬೇಡ್ಕರರನ್ನು ಕಂಡ ಮೋರೆ ಮಹಾಡಿನಲ್ಲಿ ದಲಿತ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಕೋರುತ್ತಾರೆ.

ತರುಣ ಮೋರೆಯ ಉತ್ಸಾಹ ಕಂಡ ಅಂಬೇಡ್ಕರ್ ಕೆಲವು ತಿಂಗಳ ನಂತರ ಮಹಾಡ್‌ನ ‘ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್’ ಸಿದ್ಧತೆಗಳನ್ನು ಪರಿಶೀಲಿಸಲು ತಮ್ಮ ಸಂಗಾತಿಗಳನ್ನು ಕಳಿಸುತ್ತಾರೆ. ಮುಂಬೈಯಲ್ಲಿಯೂ ಈ ಕುರಿತ ಸಭೆಗಳು ನಡೆಯುತ್ತವೆ. ಅಂಬೇಡ್ಕರ್ ಸಮ್ಮೇಳನಾಧ್ಯಕ್ಷರ ಭಾಷಣವನ್ನು ತರುಣ ಸಿ.ಬಿ. ಖೈರ್ಮೋಡೆಯವರಿಗೆ ಹೇಳಿ ಬರೆಸತೊಡಗುತ್ತಾರೆ (ಖೈರ್ಮೋಡೆ ಮುಂದೆ ಮರಾಠಿಯಲ್ಲಿ ಅಂಬೇಡ್ಕರ್ ಜೀವನಚರಿತ್ರೆಯ 12 ಸಂಪುಟಗಳನ್ನು ಬರೆದರು. ಮೊದಲ ಸಂಪುಟವನ್ನು ಅಂಬೇಡ್ಕರ್ ನೋಡಿದ್ದರು).

ಈ ಸಮ್ಮೇಳನ ನಡೆಸಲು ತಕ್ಕ ಜಾಗವೇ ಸಿಗದೆ, ಕೊನೆಗೂ ತಮಾಷಾ ನಾಟಕ ನಡೆಸುವ ಸ್ಥಳವೊಂದು ಸಿಕ್ಕುತ್ತದೆ. 1927ರ ಮಾರ್ಚ್ 19ರ ಹೊತ್ತಿಗೆ ಮಹಾರಾಷ್ಟ್ರದ ಅನೇಕ ದಿಕ್ಕುಗಳಿಂದ ತಮ್ಮ ಜಾತಿಯ ಸಂಕೇತವಾದ ಲಾಠಿ ಹಿಡಿದು ಮಹರ್ ಸಮುದಾಯದವರು ಅಲ್ಲಿ ಸೇರುತ್ತಾರೆ. ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಆ ಸುತ್ತಲಿನ ಅಸ್ಪೃಶ್ಯ ಸಮುದಾಯದವರು 19ನೆಯ ಶತಮಾನದಲ್ಲಿ ಮಿಲಿಟರಿ ಸೇರಿ ಉತ್ತಮ ಸ್ಥಿತಿಯಲ್ಲಿದ್ದುದನ್ನು, ಅವರ ಮಕ್ಕಳು ಮಿಲಿಟರಿ ಶಾಲೆಗಳಲ್ಲಿ ಕಲಿತು ವಿದ್ಯಾವಂತರಾಗುತ್ತಿದ್ದ ಕಾಲವನ್ನು ನೆನೆಸಿಕೊಳ್ಳುತ್ತಾರೆ.

ನಂತರ ಕೆಲವರ ಚಿತಾವಣೆಯಿಂದಾಗಿ ಮಿಲಿಟರಿ ಸೇವೆಯ ಬಾಗಿಲು ಮುಚ್ಚಿ, ದಲಿತರ ಪ್ರಗತಿ ಕುಸಿಯಿತು; ಆದ್ದರಿಂದ ಸರ್ಕಾರಿ ಸೇವೆಗೆ ತಕ್ಕ ಶಿಕ್ಷಣ ಹಾಗೂ ಕೃಷಿ ಎರಡನ್ನೂ ದಲಿತರು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕೆಂದು ಅಂಬೇಡ್ಕರ್ ಹೇಳುತ್ತಾರೆ. ಆನಂತರ ದಲಿತರನ್ನು ಬೆಂಬಲಿಸಿ ಮಾತಾಡಿದ ಸವರ್ಣೀಯ ಹಿಂದೂ ನಾಯಕ ಶೇಟ್ ‘ಮಹಾಡ್ ಮುನಿಸಿಪಾಲಿಟಿ ಈಚೆಗೆ ಚವ್ದಾರ್ (ಸಿಹಿನೀರು) ಕೆರೆಯ ನೀರನ್ನು ಅಸ್ಪೃಶ್ಯರೂ ಸೇರಿದಂತೆ ಎಲ್ಲರೂ ಬಳಸಿಕೊಳ್ಳಬಹುದು ಎಂಬ ನಿರ್ಣಯ ಮಾಡಿದೆ’ ಎಂಬುದನ್ನು ಸಭೆಯ ಗಮನಕ್ಕೆ ತರುತ್ತಾರೆ.

ಮಾರನೆಯ ದಿನ ಸಮ್ಮೇಳನದ ಬೆಂಬಲಿಗರಾದ ಟಿಪ್ನಿಸ್ ಮನೆಯಲ್ಲಿ ಅಂಬೇಡ್ಕರ್ ಮತ್ತು ಸಂಗಾತಿಗಳು ಈ ಕುರಿತು ಮಾತಾಡುತ್ತಿರುವಾಗ, ಅವತ್ತಿನ ಸಮಾವೇಶದ ನಂತರ ಎಲ್ಲರೂ ಚವ್ದಾರ್ ಕೆರೆಗೆ ಹೋಗಿ ಮುನಿಸಿಪಾಲಿಟಿ ನಿರ್ಣಯವನ್ನು ಜಾರಿಗೆ ತರಲು ತೀರ್ಮಾನಿಸಿದರು. ಸಮಾವೇಶದ ಕೊನೆಯಲ್ಲಿ ಸಂಘಟಕರಾದ ಭಾಯಿಚಿತ್ರೆ ಮುನಿಸಿಪಾಲಿಟಿಯ ನಿರ್ಣಯದಂತೆ ಚವ್ದಾರ್ ಕೆರೆಯ ನೀರನ್ನು ಕುಡಿಯಲು ಸಮ್ಮೇಳನಾಧ್ಯಕ್ಷರೊಂದಿಗೆ ಎಲ್ಲರೂ ಕೆರೆಯತ್ತ ನಡೆಯಬೇಕೆಂದು ಇದ್ದಕ್ಕಿದ್ದಂತೆ ಘೋಷಿಸಿದಾಗ ಸಭೆ ರೋಮಾಂಚನಗೊಂಡಿತು.

ಅಲ್ಲಿದ್ದ ಜನಸಮುದಾಯದ ಜೊತೆ ಚವ್ದಾರ್ ಕೆರೆಯತ್ತ ಹೆಜ್ಜೆ ಹಾಕಿದ ಅಂಬೇಡ್ಕರ್ ಬೊಗಸೆಯಲ್ಲಿ  ಕೆರೆಯ ಸಿಹಿನೀರು ಕುಡಿದರು. ಸಾವಿರಾರು ವರ್ಷಗಳಿಂದ ಮಲೆತುಹೋಗಿದ್ದ ಇಂಡಿಯಾದ ಚರಿತ್ರೆ ಇದ್ದಕ್ಕಿದ್ದಂತೆ ಚಲಿಸಿತ್ತು. ಸಮಾವೇಶ ಮುಗಿಸಿ ಊರಿಗೆ ಹೊರಡುವ ಮುನ್ನ ಪ್ರತಿನಿಧಿಗಳು ಊಟ ಮಾಡತೊಡಗಿದರು. ಭದ್ರತೆಯ ಕಾರಣಕ್ಕಾಗಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿದ್ದ ಅಂಬೇಡ್ಕರ್ ಮತ್ತಿತರರು ಅಲ್ಲಿಗೆ ಮರಳಿದರು. 

ಎರಡು ಗಂಟೆಯ ಹೊತ್ತಿಗೆ ವೀರೇಶ್ವರ ದೇವಾಲಯದ ಪೂಜಾರಿ ‘ಅಸ್ಪೃಶ್ಯರು ದೇವಾಲಯ ಪ್ರವೇಶಿಸುತ್ತಿದ್ದಾರೆ; ಕಾಪಾಡಿ, ಕಾಪಾಡಿ’ ಎಂದು ಊರ ತುಂಬಾ ಕೂಗುತ್ತಾ ಓಡತೊಡಗಿದ. ಇನ್ನು ಕೆಲವರು ‘ಮಹರ್ ಜನ ಚವ್ದಾರ್ ಕೆರೆಯ ನೀರನ್ನು ಅಪವಿತ್ರಗೊಳಿಸಿ ನಿಮ್ಮ ದೇವಾಲಯಗಳಿಗೆ ಹೋಗಲು ತಯಾರಾಗುತ್ತಿದ್ದಾರೆ’ ಎಂದು ಕುಣಬಿ ಸಮುದಾಯದವರನ್ನು ರೊಚ್ಚಿಗೆಬ್ಬಿಸಿದರು.

ಸವರ್ಣೀಯರು ಲಾಠಿ ಹಿಡಿದು ವೀರೇಶ್ವರ ದೇವಸ್ಥಾನದ ಬಳಿ ಬಂದು ಸೇರಿದರು. ಈ ನಡುವೆ ತಮ್ಮನ್ನು ಕಂಡ ಪೊಲೀಸ್ ಅಧಿಕಾರಿಗೆ ಅಂಬೇಡ್ಕರ್ ತಮ್ಮವರಿಗೆ ದೇವಾಲಯ ಪ್ರವೇಶಿಸುವ  ಇರಾದೆಯೇ ಇಲ್ಲ ಎಂದು ಹೇಳಿದರು. ಅತ್ತ ಊರಿಗೆ ಹೊರಟ ದಲಿತರ ಮೇಲೆ ಸವರ್ಣೀಯ ಗೂಂಡಾಗಳು ಹಲ್ಲೆ ಮಾಡಿದರು. ಸಮ್ಮೇಳನದ ಅಡುಗೆಮನೆಗೆ ನುಗ್ಗಿ ಅಲ್ಲಿದ್ದ ಹೆಂಗಸರು ಮಕ್ಕಳನ್ನೂ ಹೊಡೆದರು. ಗೂಂಡಾಗಳಿಂದ ತಪ್ಪಿಸಿಕೊಂಡು ಓಡುತ್ತಾ ಆಸರೆ ಬೇಡುತ್ತಿದ್ದ ದಲಿತರನ್ನು ಮೇಲುಜಾತಿಯ ಬಹುತೇಕರು ಮನೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ.

ಮುಸಲ್ಮಾನರು ಅವರ ರಕ್ಷಣೆಗೆ ಬರದಿದ್ದರೆ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿರುತ್ತಿತ್ತು. ಮುಸಲ್ಮಾನರು ಮತ್ತು ಕಾಯಸ್ಥ ಜಾತಿಯವರು ಮಾತ್ರ ಅವರ ನೆರವಿಗೆ ಬಂದರು. ಜನರನ್ನು ಸಂತೈಸುತ್ತಾ, ‘ಏನೇ ಆಗಲಿ ಶಾಂತಿಯಿಂದ ಇರಿ’ ಎಂದು ಅಂಬೇಡ್ಕರ್ ಕೇಳಿಕೊಂಡರು. ಅಲ್ಲಿ ಸೇರಿದ್ದ, ಮಿಲಿಟರಿ ಸೇವೆಯಿಂದ ನಿವೃತ್ತರಾಗಿದ್ದ ದೃಢಕಾಯ ದಲಿತರಿಗೇನಾದರೂ ಅಂಬೇಡ್ಕರ್ ‘ಹೂಂ’ ಎಂದಿದ್ದರೆ ಕತೆಯೇ ಬೇರೆಯಾಗುತ್ತಿತ್ತು ಎಂದು ತೇಳ್‌ತುಂಬ್ಡೆ ಬರೆಯುತ್ತಾರೆ. ಆನಂತರ ಕೆರೆಯ ಸಿಹಿನೀರನ್ನು ಪುರೋಹಿತರು ಸಗಣಿ, ಗಂಜಲ ಹಾಕಿ ‘ಶುದ್ಧಿ’ ಮಾಡಿದ ಕತೆಯೂ ಕೆಲವು ಪುಸ್ತಕಗಳಲ್ಲಿದೆ. 

ಮಹಾಡ್‌ನಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಕೆಲವರಿಗೆ ನಂತರ ಶಿಕ್ಷೆಯಾಯಿತು. ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದ ಮಹಾಡ್ ಸತ್ಯಾಗ್ರಹಕ್ಕಾಗಿ ಅಂಬೇಡ್ಕರ್ ವ್ಯಾಪಕ ಸಿದ್ಧತೆ ಶುರು ಮಾಡಿದರು. ಇದೆಲ್ಲದರ ಮಧ್ಯೆ, ತಾವೂ ಮಹಾಡ್ ಸತ್ಯಾಗ್ರಹವನ್ನು ಬೆಂಬಲಿಸುತ್ತೇವೆಂದು ಬಂದ ದಲಿತ ಸಾಧುಗಳು ಅಂಬೇಡ್ಕರ್ ‘ಅರೆ ರುದ್ರಾವತಾರಿ’ ಎಂದು ಪ್ರತಿಪಾದಿಸತೊಡಗಿದರು! ಇದನ್ನು ಕೇಳಿ ಮೊದಲು ನಕ್ಕ ಅಂಬೇಡ್ಕರ್, ನಂತರ ಗಂಭೀರವಾಗಿ ಹೇಳಿದರು: ‘ಇಂಥ ಕಲ್ಪನೆಗಳಿಂದಲೇ ಬ್ರಾಹ್ಮಣರು ಸಮಾಜವನ್ನು ನಾಶ ಮಾಡಿರುವುದು. ಇಂಥದ್ದನ್ನೆಲ್ಲಾ ಎಂದೂ ಸಮುದಾಯದಲ್ಲಿ ಹಬ್ಬಿಸಬಾರದು’.

ಈ ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿರುವಾಗಲೇ ಮಹಾಡ್ ಮುನಿಸಿಪಾಲಿಟಿ ಚವ್ದಾರ್ ಕೆರೆಯ ನೀರನ್ನು ಎಲ್ಲರೂ ಬಳಸಬಹುದು ಎಂಬ ನಿರ್ಣಯವನ್ನು ವಾಪಸ್ ತೆಗೆದುಕೊಂಡಿತು. ದಲಿತರು ಈ ಕೆರೆಯ ನೀರನ್ನು ಬಳಸಬಾರದೆಂದು ಸವರ್ಣೀಯರು ಕೋರ್ಟಿನಿಂದ ತಡೆಯಾಜ್ಞೆ ತಂದರು; ಸಮ್ಮೇಳನಕ್ಕೆ ಜಾಗವೇ ಸಿಗದಂತೆ ಮಾಡಿದ್ದೇವೆಂದು ಗುಜಾರ್ ಬ್ರಾಹ್ಮಣರು ಹಿಗ್ಗಿನಲ್ಲಿದ್ದರು.

ಆದರೆ ಫತೇಹ್ ಖಾನ್ ಎಂಬಾತ ಸಂತೋಷದಿಂದ ಸಮ್ಮೇಳನಕ್ಕೆ ಜಾಗ ಕೊಟ್ಟ. ಗುಜಾರ್ ಬ್ರಾಹ್ಮಣರ ಒತ್ತಡಕ್ಕೆ ಫತೇಹ್ ಖಾನ್ ಮಣಿಯಲಿಲ್ಲ; ಅವನ ಹೊಲದಲ್ಲಿ ಹಾಕಿದ ದೊಡ್ಡ ಪೆಂಡಾಲಿನಲ್ಲಿ, 25 ಡಿಸೆಂಬರ್ 1927ರಂದು ಹತ್ತು ಸಾವಿರ ಪ್ರತಿನಿಧಿಗಳ ಸತ್ಯಾಗ್ರಹ ಸಮ್ಮೇಳನ ಶುರುವಾಯಿತು. ಕೆಲವು ದಲಿತೇತರ ನಾಯಕರೂ ಸಮ್ಮೇಳನದಲ್ಲಿ ಮಾತಾಡಿದರು.

ಅಂಬೇಡ್ಕರರ ಚಾರಿತ್ರಿಕ ಭಾಷಣದ ನಂತರ ಜಾತಿಪದ್ಧತಿಯ ಬೇರುಗಳಿಗೆ ಮಾರಣಾಂತಿಕ ಹೊಡೆತ ಕೊಡಲು ಮನುಸ್ಮೃತಿಯನ್ನು ಸುಡಲಾಯಿತು. ಚವ್ದಾರ್ ಕೆರೆಯ ನೀರನ್ನು ಬಳಸುವ ವಿಚಾರದಲ್ಲಿ ಮುಂದೊಮ್ಮೆ ಕಾನೂನಿನ ಸಮರವನ್ನು ಗೆಲ್ಲುವ ಛಲದಿಂದ ಅಂಬೇಡ್ಕರ್ ಸಾವಿರಾರು ಅನುಯಾಯಿಗಳೊಡನೆ ಮಹಾಡಿನ ಬೀದಿಗಳಲ್ಲಿ ಮೆರವಣಿಗೆ ಹೊರಟು ನಾಲ್ಕೂ ದಿಕ್ಕುಗಳಿಂದ ಕೆರೆಯ ಸುತ್ತ ಸೇರಿ ಕಾರ್ಯಕ್ರಮ ಮುಗಿಸಿದರು.

ಮರುದಿನ ಚಮ್ಮಾರರ ಸಭೆಗಳನ್ನು ಉದ್ದೇಶಿಸಿ ಅಂಬೇಡ್ಕರ್ ಮಾತಾಡಿದರು. ಈ ನಡುವೆ ಅಕ್ಕಪಕ್ಕದ ಊರುಗಳಿಂದ ಆತಂಕಗೊಂಡು ಮಹಾಡಿಗೆ ಓಡಿ ಬಂದ ಹೆಂಗಸರು ಬಾಬಾಸಾಹೇಬರನ್ನು ನೋಡಿ ನೆಮ್ಮದಿಗೊಂಡರು; ಕಾರಣ, ಅಂಬೇಡ್ಕರರ ಹತ್ಯೆಯಾಗಿದೆಯೆಂದು ಪುಕಾರು ಹಬ್ಬಿತ್ತು. ಮಹರ್ ಮಹಿಳೆಯರು ಬಟ್ಟೆ ತೊಡುವ ಕ್ರಮದಲ್ಲಿ ಇದ್ದ ಜಾತಿದೈನ್ಯತೆಯನ್ನು ಮೊದಲು ಬಿಡಬೇಕೆಂದು ಅಂಬೇಡ್ಕರ್ ಹೇಳಿದರು. ಸಮ್ಮೇಳನದ ನಂತರ ಊರಿಗೆ ಹೊರಟ ಮಹಿಳೆಯರು ತಮ್ಮ ಉಡುಪಿನ ಶೈಲಿಯನ್ನು ಬದಲಿಸಿಕೊಂಡಿದ್ದರು.

ಮಹಾಡ್ ಮುನಿಸಿಪಾಲಿಟಿಯ ಸ್ವೀಪರುಗಳು ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದರು. ಮಹಾಡ್ ಸಮ್ಮೇಳನಗಳ ಅನುಭವ ಬಾಬಾಸಾಹೇಬರಿಗೆ ದಲಿತರ ಸಂಘಟನೆ-ಹೋರಾಟದ ಸಾಧ್ಯತೆಗಳ ಬಗ್ಗೆ ಅಪಾರ ಭರವಸೆ ಮೂಡಿಸಿತು. ಮಹಾಡ್ ತೋರಿದ ಹಕ್ಕಿನ ಪ್ರತಿಪಾದನೆಯ ಅರ್ಥಪೂರ್ಣತೆಯನ್ನು ಇವತ್ತಿಗೂ ದಲಿತ ಸಂಘಟನೆಗಳು ನೆನೆಯುತ್ತವೆ. ಅಂಬೇಡ್ಕರ್ ಬದುಕಿರುವವರೆಗೂ ಮನುಸ್ಮೃತಿ ಸುಟ್ಟ ದಿನವನ್ನು ಆಚರಿಸುತ್ತಿದ್ದರು.

ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಗಳಲ್ಲಿ ಈ ಆಚರಣೆ ಇವತ್ತಿಗೂ ಮುಂದುವರಿದಿದೆ. ಸ್ವಾತಂತ್ರ್ಯಾನಂತರ ಮಹಾಡ್ ಹೋರಾಟ ಚರಿತ್ರೆಗೆ ಸಂದಿದೆಯೆಂದು ಭಾವಿಸಲಾಗದು; ಕಳೆದ ವರ್ಷವಷ್ಟೇ ಚೆನ್ನರಾಯಪಟ್ಟಣದ ಕುರುವಂಕದಲ್ಲಿ ಕಲ್ಯಾಣಿಯೊಂದರ ನೀರು ಬಳಸಲು ದಲಿತರು ಹೋರಾಡಬೇಕಾಗಿ ಬಂದಿತ್ತು.  ಆದ್ದರಿಂದಲೇ ಮಹಾಡ್ ಇವತ್ತಿಗೂ ದಲಿತರ ನಿರಂತರ ಹೋರಾಟದ ದಿಟ್ಟ ಸಂಕೇತದಂತಿದೆ.

ಕೊನೆ ಟಿಪ್ಪಣಿ: ಸಿಹಿನೀರಿಗಾಗಿ ಸುದೀರ್ಘ ಹೋರಾಟ
‘ಚವ್ದಾರ್ ಕೆರೆ ಸಾರ್ವಜನಿಕ ಕೆರೆಯಲ್ಲ; ಅದು ‘ಚೌಧರಿ’ ಎಂಬುವವರು ಕಟ್ಟಿಸಿದ ಖಾಸಗಿ ಕೆರೆ’ ಎಂದು ಸವರ್ಣೀಯರು ಸುಳ್ಳುವಾದ ಹೂಡಿ, ದಲಿತರು ಕೆರೆಯ ನೀರನ್ನು ಮುಟ್ಟದಂತೆ ಕೋರ್ಟಿನಿಂದ ತಡೆಯಾಜ್ಞೆತಂದಿದ್ದರು.

‘ಚವ್ದಾರ್ ಕೆರೆಯ ನೀರನ್ನು ಮುಟ್ಟಿ ನಾನು ಜೈಲಿಗೆ ಹೋಗಲು ಸಿದ್ಧ; ನಿಮ್ಮಲ್ಲಿ ಎಷ್ಟು ಜನ ಜೈಲಿಗೆ ಹೋಗಲು ಸಿದ್ಧರಿದ್ದೀರಿ, ಹೆಸರು ಕೊಡಿ’ ಎಂದು ಅಂಬೇಡ್ಕರ್ ಸತ್ಯಾಗ್ರಹ ಸಮ್ಮೇಳನದಲ್ಲಿ ಕೇಳಿದರು; ಹೆಸರು ಬರೆಸಿದವರ ಸಂಖ್ಯೆ ಮೂರು ಸಾವಿರ ದಾಟತೊಡಗಿತು; ಸಮ್ಮೇಳನದಲ್ಲಿದ್ದ ಬಹುತೇಕರು ಜೈಲಿಗೆ ಹೋಗಲು ಸಿದ್ಧರಿದ್ದರು.

ಸತ್ಯಾಗ್ರಹಕ್ಕೆ ಹೊರಡುವ ಕೆಲವು ಮಹರ್ ಗಂಡಸರು ತಮ್ಮ ಹೆಂಡತಿಯರ ಕುಂಕುಮವನ್ನು ಅಳಿಸಿ ಯುದ್ಧಭೂಮಿಗೆ ಹೊರಡುವಂತೆ ಮಹಾಡಿಗೆ ಬಂದಿದ್ದರು. ಅವರು ಹಿಂದೆ ಸರಿವ ಪ್ರಶ್ನೆಯೇ ಇರಲಿಲ್ಲ. ಮುಂದೆ ಕೋರ್ಟಿನಿಂದ ಕೋರ್ಟಿಗೆ ದಾಟಿದ ಈ ಕೇಸನ್ನು ಅಂಬೇಡ್ಕರ್ ಗೆದ್ದದ್ದು 1937ರಲ್ಲಿ. ಆದರೆ ಅಂಬೇಡ್ಕರ್ ಅಷ್ಟುಹೊತ್ತಿಗಾಗಲೇ ದಲಿತರನ್ನು ಬಹುದೂರ ಕರೆದೊಯ್ದಿದ್ದರು. ಜೊತೆಗೆ, ದಲಿತರ ಬಿಡುಗಡೆಗೆ ಕಾನೂನು ಹಾಗೂ  ಹೋರಾಟಗಳೆರಡೂ ಮುಖ್ಯವೆಂಬುದನ್ನೂ ತೋರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT