ಭಾನುವಾರ, ಮೇ 9, 2021
19 °C

ಮಾಟಮಂತ್ರಾದಿಗಳ ವಿಚಾರ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಮಾಟಮಂತ್ರಾದಿಗಳ ವಿಚಾರ

ಚೆಗೆ ಮಂತ್ರತಂತ್ರಾದಿಗಳ ಪರ ಮತ್ತು ವಿರುದ್ಧ ಚರ್ಚೆಗಳು ನಡೆದಿವೆ. ಇವು­ಗಳು ಅಜ್ಞಾನ ಮತ್ತು ಶೋಷಣೆಗಳಿಗೆ ಕಾರಣ­ವಾದ್ದ­ರಿಂದ ಮಾಟ ಇತ್ಯಾದಿಗಳನ್ನು ಕಾನೂನು­ಬಾಹಿರ­ವೆಂದು ಘೋಷಿಸಬೇಕೆಂಬ ಒತ್ತಡ ಬುದ್ಧಿ­ಜೀವಿಗಳ ಕಡೆಯಿಂದ ಬಂದಿದೆ. ಹಾಗೆಯೇ, ಇವು ನಮ್ಮ ಸಂಸ್ಕೃತಿಯ ಭಾಗವಾಗಿದ್ದು ಅವುಗಳ ವಿರುದ್ಧದ ಕ್ರಮ ಸಂಸ್ಕೃತಿಯ ಮೇಲಿನ ಹಲ್ಲೆ ಎಂಬ ಆಕ್ರಂದನ ಸಂಪ್ರದಾಯಸ್ಥರ ಕಡೆಯಿಂದ ಬಂದಿದೆ.ಈ ಬಗ್ಗೆ ಯೋಚಿಸುವಾಗ ಒಂದು ಸತ್ಯ ಘಟನೆ ನೆನಪಾಗುತ್ತಿದೆ.  ಸುಮಾರು ಹದಿನೆಂಟು ವರ್ಷಗಳ ಹಿಂದೆ ಹೀಗಾಯಿತು: ನನ್ನ ಯುವ ರಾಜಕಾರಣಿ ಸ್ನೇಹಿತನೊಬ್ಬ ಒಬ್ಬ ಮಹಾ ಪುರುಷನನ್ನು ಕಂಡುಹಿಡಿದಿದ್ದ. ಆತ ಅಘಟಿತಘಟಿತನೆಂದೂ ಜಗತ್ತಿನ ಯಾವ ಸಮಸ್ಯೆ­ಯನ್ನು ಬೇಕಾದರೂ ಪರಿಹರಿಸುವ ಶಕ್ತಿವಂತ­ನೆಂದೂ ಅವನಿಗೆ ಅನುಭವವಾಗಿತ್ತಂತೆ.

ಅವನ ಬಳಿ ನನ್ನನ್ನು ಕರೆದೊಯ್ಯುವ ಉತ್ಸಾಹ ತೋರಿದ. ತೆರೆದ ಮನಸ್ಸಿನವನಾಗಿದ್ದ ನಾನು, ‘ನಡಿ, ನೋಡಿಬಿಡೋಣ’ ಎಂದೆ. ಮಹಾಪುರುಷ ಕೋಣನಕುಂಟೆಯ ಬಾಡಿಗೆ ಮನೆಯಲ್ಲಿ ಪತ್ನಿ­ಪರಿವಾರ ಸಮೇತ ವಾಸಿಸುತ್ತಿದ್ದ. ನಾನು ಬರು­ವು­ದನ್ನು ಆ ಯುವಮಿತ್ರ ಅವನಿಗೆ ಮೊದಲೇ ತಿಳಿಸಿದ್ದನಂತೆ. ಮಹಾಪುರುಷ ತನ್ನ ಪೂರ್ಣ ತಾಕತ್ತನ್ನು ನನಗೆ ತೋರಿಸುವ ತೀರ್ಮಾನ ಮಾಡಿದ್ದ. ಅವನ ಮನೆಯಲ್ಲಿ ಎರಡು ಕೋಣೆಗಳು. ಒಂದು ಕೋಣೆ­ಯಲ್ಲಿ ಮಹಾಪುರುಷ ಒಂದು ಡಜನ್ ದೇವತೆಗಳ ಫೋಟೊಗಳ ನಡುವೆ ಕೂತು ಜನ­ರನ್ನು ಮಾತಾಡಿಸುತ್ತಿದ್ದ. ಆ ಕೋಣೆ ಪುಷ್ಪದೀಪ­ದೂಪಗಳಿಂದ ಗಮಗಮಿಸುತ್ತಿತ್ತು.ಅವನ ಈ ಪೂಜಾಗೃಹಕ್ಕೆ ನನಗೆ ಪ್ರವೇಶ ಸಿಕ್ಕಿತು. ‘ನಿಮ್ಮ ಸಮಸ್ಯೆ ಏನು’ ಎಂದು ಕೇಳಿದ. ನಾನು ಹೇಳಲು ಹೊರಟೆ. ನನ್ನನ್ನು ತಡೆದು ನನ್ನ ಕೈಗೆ ಕಾಗದದ ಚೂರನ್ನು ಕೊಟ್ಟು ಪಕ್ಕದ ಕೋಣೆಗೆ ಹೋಗಲು ಹೇಳಿದ. ನಾನೊಬ್ಬನೇ ಅಲ್ಲಿ ಕೂತು ನನ್ನ ಪ್ರಶ್ನೆಯನ್ನು ಬರೆದು ಆ ಕಾಗದದ ಚೂರನ್ನು ಮಡಿಚಿ ನನ್ನ ಕೈಯಲ್ಲಿಟ್ಟು ಕೊಂಡು ಬರಬೇಕೆಂದು ಹೇಳಿದ. ನಾನು ಹಾಗೇ ಮಾಡಿದೆ. ಪೂಜಾಗೃಹಕ್ಕೆ ಹಿಂತಿರುಗಿ ನಾನು ಬರೆದದ್ದನ್ನು ಕೊಡಲು ಹೋದರೆ ಅವನು ಪಡೆ­ಯದೆ ಅದನ್ನು ನನ್ನ ಮುಷ್ಟಿಯಲ್ಲೇ ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ ನಾನು ಬರೆದಿದ್ದನ್ನು ಅಕ್ಷರಶಃ ಹೇಳಿದ.

‘ಅದರಲ್ಲಿ ಎರಡನೇ ಸಾಲಿನ ಮೂರನೇ ಅಕ್ಷರವನ್ನು ಹೊಡೆದುಹಾಕಿ ಮತ್ತೆ ಬರೆದಿದ್ದೀರಾ’ ಎಂದ. ಅದು ನಿಜವಾಗಿತ್ತು. ನನಗೆ ಆಶ್ಚರ್ಯವಾಯಿತು. ಅದರಿಂದ ಚೇತರಿಸಿ­ಕೊಳ್ಳುವಷ್ಟರಲ್ಲಿ ಇನ್ನೊಂದು ಚಮತ್ಕಾರ ಮಾಡಿದ. ಎರಡು ವೀಳ್ಯದೆಲೆಗಳನ್ನು ನನಗೆ ಕೊಟ್ಟು ಅವುಗಳ ನಡುವೆ ಅರಿಶಿಣ, ಕುಂಕುಮ ತುಂಬಿಕೊಳ್ಳಲು ಹೇಳಿದ. ಆ ಬಳಿಕ ಅದನ್ನು ನನ್ನ ಕೈಯಲ್ಲಿ ಒತ್ತಿ ಹಿಡಿದುಕೊಳ್ಳಲು ಹೇಳಿದ. ತನ್ನ ಬಳಿಯಿದ್ದ ದಂಡವೊಂದನ್ನು ತೆಗೆದುಕೊಂಡು ಅರ್ಥವಾಗದ ಮಂತ್ರವೊಂದನ್ನು ಉಚ್ಚರಿಸಿದ. ಆಗ ನನ್ನ ಎರಡೂ ಕೈಗಳ ನಡುವೆ ಇದ್ದ ಎಲೆ ಉಬ್ಬುತ್ತಿದ್ದ ಅನುಭವವಾಯಿತು. ಆಮೇಲೆ ಕೈಗಳನ್ನು ಬಿಚ್ಚಿ ನೋಡಲು ಹೇಳಿದ. ದೊಡ್ಡ ಆಶ್ಚರ್ಯ ಕಾದಿತ್ತು. ಎರಡು ಎಲೆಗಳ ನಡುವೆ ಚಿನ್ನದ ಶ್ರೀಚಕ್ರ ಸೃಷ್ಟಿಯಾಗಿತ್ತು.‘ಇದು ನಮ್ಮ ತಾಕತ್ತು. ಯಾವುದೋ ಪುಣ್ಯ, ಇಲ್ಲಿಯವರೆಗೂ ಬಂದಿದ್ದೀರಾ. ಇದನ್ನು ಮನೆ­ಯಲ್ಲಿಟ್ಟುಕೊಂಡು ದಿನಾ ಪೂಜೆ ಮಾಡಿ. ನಾನು ಕರೆದಾಗ ಬನ್ನಿ. ಒಂದು ಎಚ್ಚರಿಕೆ. ಇವತ್ತಿನಿಂದ ನಾನೇ ನಿಮ್ಮ ಗುರು. ಇದನ್ನು ಒಪ್ಪಿಕೊಂಡು ಆ ಪ್ರಕಾರ ನಡೆದುಕೊಳ್ಳದಿದ್ದರೆ ಎಲ್ಲವನ್ನೂ ರಿವರ್ಸ್ ಮಾಡಿಬಿಡುತ್ತೇನೆ. ನನ್ನ ಮುಂದೆ ಯಾವ ಗುರುವೂ ಇಲ್ಲ’ ಎಂದು ಹೇಳಿದ. ಮಹಾಪುರುಷನ ಎರಡು ಚಮತ್ಕಾರಗಳಿಂದ ಚಕಿತನಾಗಿದ್ದರೂ ಅವನ ದುರಹಂಕಾರದ ಬೆದರಿಕೆ ನನ್ನಲ್ಲಿ ಹೇಸಿಗೆಯ ಭಾವನೆಯನ್ನುಂಟು ಮಾಡಿತು.

ಅದನ್ನು ವ್ಯಕ್ತಪಡಿಸುವ ಧೈರ್ಯ ಬರಲಿಲ್ಲ. ‘ಆಗಲಿ’ ಎಂದು ಹೂಂಗುಟ್ಟಿ ಜಾಗ ಖಾಲಿ ಮಾಡಿದೆ. ಅವನು ಕೊಟ್ಟ ವಸ್ತು ನನ್ನ ಮನಸ್ಸಿನಲ್ಲಿ ತೀವ್ರ ಪ್ರತಿರೋಧವನ್ನುಂಟು ಮಾಡಿ­ದರೂ ಅದನ್ನು ಬಿಸಾಕುವ ಧೈರ್ಯ ಬರಲಿಲ್ಲ. ಒಂದೆರಡು ದಿನ ಅದನ್ನು ನನ್ನ ಬಳಿ ಇಟ್ಟುಕೊಂಡಿದ್ದೆ.  ಶ್ರೀಚಕ್ರ ನನಗೆ ಪವಿತ್ರತೆಯ ಸಂಕೇತವಾಗಿದ್ದರೂ ಅವನು ಕೊಟ್ಟಿದ್ದ ಕಾರಣ ಅದು ಅಪವಿತ್ರವೆನ್ನಿಸಿತು. ಮೂರನೆಯ ದಿನ ಅದನ್ನು ಬಿಸಾಕಿಬಿಟ್ಟೆ. ಮನಸ್ಸು ಹಗುರ­ವಾ­ಯಿತು. ಇನ್ನೆಂದಿಗೂ ಇಂಥವರ ಮುಖದರ್ಶನ ಮಾಡಬಾರದೆಂದು ತೀರ್ಮಾನಿಸಿದೆ.ಅದಾದನಂತರ ನನ್ನ ಯುವಮಿತ್ರ, ಗುರುಗಳು ನನ್ನನ್ನು ಬರಹೇಳಿದ್ದಾರೆಂದು ಮತ್ತೆ ಮತ್ತೆ ಹೇಳು­ತ್ತಿದ್ದ. ಯಾವುದಾದರೂ ನೆಪ ಹೇಳಿ ಮಾತು ಬದಲಾಯಿಸುತ್ತಿದ್ದೆ. ಒಂದು ದಿನ ಧೈರ್ಯ ಮಾಡಿ ಹೇಳಿಬಿಟ್ಟೆ: ‘ಅವನಿಗೆ ಹೋಗಿ ಹೇಳು. ನನಗೆ ಅವನಿಂದ ಆಗಬೇಕಾದ್ದೇನೂ ಇಲ್ಲ. ನಾನಲ್ಲಿ ಬರುವುದಿಲ್ಲ’. ‘ಗುರುಗಳಿಗೆ ಕೋಪವಾದರೆ ತುಂಬಾ ಕಷ್ಟ’ ಎಂದ ಆತ. ನನ್ನ ನಿರ್ಧಾರ ಅಚಲವಾಗಿತ್ತು. ನನ್ನ ಯುವಮಿತ್ರನಿಗೂ ಆತ ಅದೇ ರೀತಿಯ ಶ್ರೀ­ಚಕ್ರವನ್ನು ಕೊಟ್ಟಿದ್ದನಂತೆ. ಮೂರು ತಿಂಗಳು ಪೂಜೆ ಮಾಡಿದರೆ ಅವನಿಗೆ ಎಂ.ಎಲ್.ಎ. ಸೀಟು ಸಿಗುತ್ತದೆಂದು ಆಶ್ವಾಸನೆ ನೀಡಿದ್ದನಂತೆ. ಅದೇನೂ ಆಗುವುದಿಲ್ಲವೆಂದು ನನಗೆ ಗೊತ್ತಿತ್ತು.ಮೂರು ತಿಂಗಳ ನಂತರ ಆ ಯುವ ಮಿತ್ರ ಒಂದು ದಿನ ಬೆಳಗ್ಗೆ ನನ್ನನ್ನು ನೋಡಲು ಬಂದ. ‘ಏನಪ್ಪ ಹೆಂಗಿದ್ದಾನೆ ನಿನ್ನ ಗುರು ಮಹಾ­ಪುರುಷ?’ ಎಂದು ಕೇಳಿದೆ. ‘ಅಯ್ಯೋ, ಅದನ್ನೇ ಹೇಳೋಕೆ ಬಂದೆ. ಅವನು ಕಳ್ಳ ನನ್ನಮಗ. ಯಾರೋ ಹುಡುಗೀನ ವಶೀ­ಕರಣ ಮಾಡಿಕೊಂಡು ದುರುಪಯೋಗಪಡಿಸಿ­ಕೊಂಡಿದ್ದನಂತೆ. ಅದರಿಂದ ದೊಡ್ಡ ಗಲಾಟೆ­ಯಾಗಿ ನೆರೆಯವರು ಅವನನ್ನು ಚೆನ್ನಾಗಿ ಹೊಡೆದು ಬಡಿದು ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ಚೆನ್ನಾಗಿ ಬೆಂಡೆತ್ತಿಸಿದರಂತೆ. ಮನೆ ಮಾಲೀಕ ಅವನನ್ನು ಮನೆಯಿಂದ ಹೊರಗೆ ಹಾಕಿದ. ಅವನು ಊರೇ ಬಿಟ್ಟು ಹೋದನಂತೆ’.ಖದೀಮ ಸಿಕ್ಕಿಬಿದ್ದನಲ್ಲ ಅಂತ ನನಗೆ ಸಂತೋಷ­ವಾಯಿತು. ಇದಾದ ಮೇಲೆ ನನ್ನ ಯುವ­ಮಿತ್ರನೂ ಮಹಾಪುರುಷ ನೀಡಿದ್ದ ಪವಿತ್ರ ಸಂಕೇತ­ವನ್ನು ಬೀದಿಪಾಲು ಮಾಡಿದನಂತೆ. ಮಹಾಪುರುಷನ ಮಾಂತ್ರಿಕ ಶಕ್ತಿ ಅವನಿಗೇ ರಕ್ಷಣೆ ನೀಡಿರಲಿಲ್ಲ. ನನಗೆ ಅತಿಮಾನುಷ ಶಕ್ತಿಗಳ ಹಲವು ಅನು­ಭವ­ಗಳಾಗಿವೆ. ಮಾಟಮಂತ್ರಾದಿಗಳ ಹಲವು  ಪರಿಣಾಮವನ್ನು  ಸ್ವಾನುಭವದಲ್ಲಿ ಕಂಡುಕೊಂಡಿದ್ದೇನೆ. ಮಾಟಮಂತ್ರಾದಿಗಳು ನಿಜವೇ ಎಂದು ಕೇಳಿದರೆ ನನ್ನ ಉತ್ತರ ಹೌದು. ಅವು ಇರಬೇಕೇ ಎಂದು ಕೇಳಿದರೆ ನನ್ನ ಉತ್ತರ: ಖಂಡಿತಾ ಇರಕೂಡದು.ಮಾಟಮಂತ್ರದವರು, ಜ್ಯೋತಿಷದವರು ಸುಲಿಗೆ ಮಾಡಿ ಹೊಟ್ಟೆ ಹೊರೆಯುವುದನ್ನು ಹಲವು ಬಾರಿ ಕಂಡಿದ್ದೇನೆ. ಅವರ ಬಲೆಗೆ ಬೀಳುವವರು ಮುಗ್ಧರು, ಬಡವರು ಮಾತ್ರವಲ್ಲ, ಶ್ರೀಮಂತರು, ತಿಳಿವಳಿಕಸ್ಥರು ಕೂಡ ದುರ್ಬಲ ಕ್ಷಣಗಳಲ್ಲಿ ಅವರಿಗೆ ವಶವಾಗುತ್ತಾರೆ.  ನನ್ನ ಕೆಲವು ಉಗ್ರ ವಿಚಾರವಾದಿ ಮಿತ್ರರೂ ತಮ್ಮ ವೇದಿಕೆಯ ನಿಲುವುಗಳಿಗೆ ವ್ಯತಿರಿಕ್ತವಾಗಿ ಜ್ಯೋತಿಷಿ­ಗಳ ಮತ್ತು ಮಾಟಮಂತ್ರದವರ ದಾಸ­ರಾಗಿರುವುದನ್ನು ಕಂಡಿದ್ದೇನೆ.

ಇಂಥ ಶೋಷಣೆ­ಯನ್ನು ಕಾನೂನಿನ ಮೂಲಕ ನಿಯಂತ್ರಿಸ­ಬೇಕೆಂಬ ಅಹವಾಲು ನ್ಯಾಯಯುತವೇ ಆಗಿದೆ. ಆದರೆ ಕಾನೂನಿನ ಮೂಲಕ ಅವುಗಳನ್ನು ಹತ್ತಿಕ್ಕಲು ಸಾಧ್ಯವೇ ಅನ್ನುವುದರ ಬಗ್ಗೆ ನನಗೆ ಅನುಮಾನವಿದೆ. ಜನ ಅತಿಮಾನುಷ ಶಕ್ತಿಯವರ ತೋರುಂಬ ಲಾಭಕ್ಕೆ ಯಾಕೆ ಬೇಸ್ತು ಬೀಳು­ತ್ತಾರೆ? ಬಹಳ ಸಲ ಮೌಢ್ಯ ಕಾರಣವಾಗಿರು­ತ್ತದೆ. ಆದರೆ ಅದೊಂದೇ ಕಾರಣವಲ್ಲ. ಸರ್ವ­ಶಕ್ತಿತ್ವದ ಬಯಕೆ ನಮ್ಮೆಲ್ಲರಲ್ಲೂ ಸುಪ್ತವಾಗಿದ್ದು ಅದರ ಪೂರೈಕೆಯ ಪ್ರಯತ್ನಗಳೇ ಮಾನವ­ನಿರ್ಮಿತಿಯ ಮಹಾನ್ ಕೌಶಲಕ್ಕೆ ಕಾರಣ­ವಾಗಿವೆ.

‘When man gets something, the cry is for more. For nothing but ALL can satisfy man’

-–-ಹೀಗೆನ್ನುತ್ತಾನೆ ಇಂಗ್ಲೆಂಡಿನ ದಾರ್ಶನಿಕ ಕವಿ ವಿಲಿಯಂ ಬ್ಲೇಕ್.ಸರ್ವಗ್ರಾಹಿತ್ವದ ಬಯಕೆ ಮಾನವಸ್ವಭಾವ­ದಲ್ಲಿ ರೂಢ ಮೂಲವಾಗಿದ್ದು ಅದರ ಪೂರೈಕೆ ಇತ್ಯಾತ್ಮಕವಾಗಿ ಪ್ರಕಟವಾದಾಗ ಅದು ಸಂಗೀತಾದಿ ಕಲೆಗಳಿಗೂ ನೇತ್ಯಾತ್ಮಕವಾಗಿ ಪ್ರಕಟ­ವಾದಾಗ ಸರ್ವಾಧಿಕಾರಿ ದೌರ್ಜನ್ಯ­ಗಳಿಗೂ ಪ್ರೇರಣೆಯಾಗುತ್ತದೆನ್ನುತ್ತಾನೆ ನೈಜೀರಿಯಾದ ಮಹಾನ್ ನಾಟಕಕಾರ ವೊಲೆ ಶೋಯಿಂಕಾ.ಪ್ರತಿಕೂಲವಾದ ಭೌತಿಕ ವಾತಾವರಣವನ್ನು ಅನುಕೂಲಕರವಾಗಿ ಮಾಡಿಕೊಳ್ಳುವ ಎಲ್ಲ ಮಾನವ ಪ್ರಯತ್ನಗಳ ಮೂಲಸೆಲೆ ಇಲ್ಲಿದೆ. ಇತ್ಯಾತ್ಮಕವಾದಾಗ ಈ ಅದಮ್ಯ ಪ್ರವೃತ್ತಿ ವಸತಿಗಳ, ನಗರಗಳ, ರಸ್ತೆಗಳ,  ಕೃಷಿ ಕೌಶಲ­ಗಳ, ಬಟ್ಟೆಬರೆಗಳ, ಮನೋವಿಕಾಸಕಾರಿ ಆಧ್ಯಾತ್ಮಿಕ ವಿದ್ಯೆಗಳ, ಕಲೆಗಳ, ಔಷಧಿಗಳ, ಜೀವ­ಕಲ್ಯಾಣಕಾರೀ ಪ್ರಕ್ರಿಯೆಗಳ ನಿರ್ಮಾಣಕ್ಕೆ ಎಡೆ­ಮಾಡಿಕೊಟ್ಟಿದೆ. ಅಡ್ಡದಾರಿ ಹಿಡಿದಾಗ ಇದೇ ಪ್ರವೃತ್ತಿ ಹಿಂಸಾತ್ಮಕ ಅಸ್ತ್ರ-ಶಸ್ತ್ರಗಳ, ವಿನಾಶಕ ಯುದ್ಧಗಳ, ಆತ್ಮ–ಪರಹಿಂಸಾಕಾರಿ ಪ್ರವೃತ್ತಿಗಳ, ಶೋಷಣಾವ್ಯವಸ್ಥೆಗಳ, ಹತ್ಯಾಕಾಂಡಗಳ ಕಾರಣ­ವಾ­ಗಿದೆ.

ತನ್ನೊಳಗಿರುವ ಸರ್ವ­ಗ್ರಾಹಿತ್ವದ ಆದಿಮ ಪ್ರವೃತ್ತಿಗಳಿಗೆ ಪ್ರಕೃತಿ ಮತ್ತು ಸಮಾಜ ತಿರುತಿರುಗಿ ಸವಾಲುಗಳನ್ನೊಡ್ಡುತ್ತಿ­ರುವುದರಿಂದ ನಮ್ಮ ಸೃಜನಾತ್ಮಕತೆ ಹಾಗೂ ವಿನಾಶಗಳಲ್ಲಿ ಹೊಸಹೊಸ ಆವಿಷ್ಕಾರಗಳು ಜರುಗುತ್ತಲೇ ಇರುತ್ತವೆ. ದೀಪ ಹಚ್ಚುವ ಕೈಗಳೇ ದೀಪಗಳನ್ನು ಆರಿಸುತ್ತಲೂ ಇರುತ್ತವೆ.  ಅಲ್ಲದೇ ತನ್ನಲ್ಲಿರುವ ಈ ಶಕ್ತಿಯ ಬಗ್ಗೆ ಮಾನವನಿಗೆ ಆಕರ್ಷಣೆ ವಿಕರ್ಷಣೆಗಳು ಏಕಕಾಲದಲ್ಲಿ ಇರು­ತ್ತವೆ.  ಆ ಶಕ್ತಿಯ ಮೂಲ ತನ್ನಲ್ಲೇ ಇರುವ ಜವಾಬುದಾರಿ­ಯನ್ನು ಒಪ್ಪಿಕೊಳ್ಳುವ ಧೈರ್ಯ ಇಲ್ಲವಾಗಿ ತನ್ನ ಕಲ್ಪನೆಯ ಶಿಶುಗಳಾದ ದೇವತೆಗಳನ್ನು ಕಲ್ಪಿಸಿಕೊ­ಳ್ಳು­ತ್ತಾನೆ ಮಾನವ.

ಒಂದರ್ಥದಲ್ಲಿ ದೇವರು ಮತ್ತು ದೇವತೆ­ಗಳು ಕಾರ್ಲ್ ಮಾರ್ಕ್ಸ್ ಹೇಳುವ ಹಾಗೆ ‘ಪರಕೀಯವಾದ ಆತ್ಮಸತ್ವಗಳು’ ಈ ದೇವರು ಮತ್ತು ದೇವತೆಗಳು ಇತ್ಯಾತ್ಮಕವಾಗಿ ಬಳಕೆ­ಯಾದಾಗ ನಮ್ಮ ಶಕ್ತಿಗಳನ್ನು ಸಬಲ­ಗೊಳಿಸಿ ಕಾರ್ಯಸಾಧನೆಗೆ ನೆರವಾಗಬಲ್ಲುವು. ಆದರೆ ಹಲವು ಸಲ ಅವು ನಮ್ಮ ಸ್ವಯಮಾ­ರೋಪಿತ ದೌರ್ಬಲ್ಯಗಳ ವಿಕೃತರೂಪಗಳಾಗಿ ನಮ್ಮನ್ನು ತಿರಿದು ಉಂಬ, ಉರಿದು ತಿಂಬ ಶಕ್ತಿಗಳಾಗಿ ವಿನಾಶಕವಾಗಿಬಿಡುತ್ತವೆ- ಶಿವಶಕ್ತಿ ಸಾಧನ­ಗಳಾದ ಎಲ್ಲ ಯಂತ್ರ-ತಂತ್ರಗಳ ಹಾಗೆ. ಆದ್ದ­ರಿಂದಲೇ ಅಲ್ಲಮ ಕೇಳಿದ್ದು: ‘ಬದುಕುವನ್ನಕ್ಕ ಭಜಿಸುತ್ತಿದ್ದರೆ ಇನ್ನು ತಾನಹ ದಿನವಾವುದೋ?’ಸಂಪೂರ್ಣ ಆಧ್ಯಾತ್ಮಿಕ ವಿಕಾಸದ ಗುರಿ ನಮ್ಮಿಂದ ಹೊರತುಗೊಳಿಸಲ್ಪಟ್ಟ ಶಕ್ತಿಗಳನ್ನು ನಮ್ಮೊಳಗೆ ಪುನಃ ಸಮಾವೇಶಗೊಳಿಸಿ­ಕೊಳ್ಳು­ವುದೇ ಆಗಿದೆ. ಯೋಗ, ಮಂತ್ರ, ತಂತ್ರ ವಿದ್ಯೆಗಳ ಅಂತಿಮ ಗುರಿ ಇದೇ.  ಇಂತಹಾ ಸ್ಥಿತಿಯಿಂದ ಅಲ್ಲಮ ಕೇಳುತ್ತಾನೆ: ‘ಭಜಿಸು ಭಜಿಸು ಎಂದರೆ ಏನ ಭಜಿಸುವೆನಯ್ಯಾ, ಎನ್ನ ಕಾಯವೇ ಕೈಲಾಸ­ವಾಗಿರಲು’. ಈ ಸ್ಥಿತಿ ಅಹಮಿಕೆಯ ವಿನಾಶ ಹೇಗೋ ಹಾಗೆಯೇ ತಾನೆಂಬ ಮಿತಿಯಿಂದ ಬಿಡುಗಡೆ ಹೊಂದಿದ ಪೂರ್ಣ ಹಂತತೆಯ ಉನ್ಮೇಷ.ಯೋಗಪಥದಲ್ಲಿ ಯೋಗಭ್ರಷ್ಟರಾಗುವುದು ಸುಲಭ. ಸಾಧನೆಯಿಂದ ಕೆಲವು ಸಣ್ಣಪುಟ್ಟ ಅಸಾಧಾರಣ ಸಿದ್ಧಿಗಳು ಕರವಶವಾದಾಗ ಅದೇ ಮಟ್ಟಿಗೆ ಲೋಕಕಾರುಣ್ಯಭಾವವನ್ನು ಬೆಳೆಸಿ­ಕೊಳ್ಳದ ಸಾಧಕರು ಸಣ್ಣಪುಟ್ಟ ತೆವಲುಗಳನ್ನು ತೀಟೆಗಳನ್ನು ತೀರಿಸಿಕೊಳ್ಳತೊಡಗುತ್ತಾರೆ. ಭ್ರಷ್ಟ­ಗುರುಗಳಷ್ಟೇ ದೊಡ್ಡಸಂಖ್ಯೆಯಲ್ಲಿರುವ ಭ್ರಷ್ಟ ಶಿಷ್ಯರು ಅವರಿಗೆ ಜೋತುಬೀಳುತ್ತಾರೆ. ಅಂಧಕ ಅಂಧಕನ ನಡೆಸುವಂತೆ ಆ ಗುರುಗಳು ಒಳ­ಗಣ್ಣನ್ನು ತೆರೆಸುವ ಬದಲು ಅದನ್ನು ಕಿತ್ತು­ಹಾಕುವ ಕೆಲಸಗಳನ್ನು ಶಿಷ್ಯರ ಸಮ್ಮತಿಯಿಂದ ಮಾಡತೊಡಗಿ ಹಾಳಾಗುತ್ತಾರೆ.ಇಂತಹ ಸನ್ನಿವೇಶದಲ್ಲಿ ಜ್ಯೋತಿಷಾದಿ ತಂತ್ರವಿದ್ಯೆಗಳು ಶೋಷಣೆಯ, ಸುಲಿಗೆಯ, ಆತ್ಮ ಮತ್ತು ಪರವಂಚನೆಯ ರಾಜಮಾರ್ಗಗಳಾಗಿಬಿಡು­ತ್ತವೆ. ಇವನ್ನೇ ನಮ್ಮ ಸನಾತನ ಸಂಸ್ಕೃತಿಯ ಸಾರಸರ್ವಸ್ವ­ವೆಂದು ಚಾರ್ ಸೌಬೀಸ್‌ಗಳನ್ನು ಸಮರ್ಥಿಸಲು ಹೆಣಗುತ್ತಿರುವ ಹುಸಿಸನಾತನಿ­ಗಳು ಇಂದಿನ ಭೌತಿಕ ವಿಜ್ಞಾನದ ತಥ್ಯಗಳೇ ಮಾನವಾಭಿವ್ಯಕ್ತಿಯ ಅಂತಿಮ ಸರಹದ್ದು­ಗ­ಳೆಂದು ನಂಬಿರುವ ಬುದ್ಧಿಜೀವಿಗಳಷ್ಟೇ ಅಪಾಯಕಾರಿ.ಮಾಟಮಂತ್ರಗಳನ್ನು ಕುರಿತ ಮಾನವರ ದೌರ್ಬಲ್ಯ ಮಾನವ ಸಹಜಪ್ರತಿಭೆಯ ಒಂದು ವಿಕೃತ, ಸಂಕುಚಿತ ರೂಪವಾಗಿರುವುದರಿಂದ ಹೊರಗಿನ ಕಾನೂನಿನ ಬಲವೊಂದರಿಂದಲೇ ಅದನ್ನು ನಿಯಂತ್ರಿಸಲಾಗದೆಂದು ನಾನಿಲ್ಲಿ ಹೇಳು­ತ್ತಿ­ರುವುದು. ಅವುಗಳನ್ನು ಇಲ್ಲವಾಗಿಸಬೇಕಾದರೆ ಮಾನವರ ಇಚ್ಛಾ-ಜ್ಞಾನ-ಕ್ರಿಯಾ ಶಕ್ತಿಗಳ ಪೂರ್ಣ ವಿಕಾಸವಾಗಬೇಕು. ಆಗ ಇಂಥವುಗಳ ಅಗತ್ಯವೇ ಇರುವುದಿಲ್ಲ.ಅಂತರಂಗದ ಸಂಪೂರ್ಣವಿಕಾಸಕ್ಕೆ ಅಪರಿ­ಪೂರ್ಣ ಮಾನವರು ನಿರ್ಮಿಸಿದ ಸಾಮಾಜಿಕ ಮಿತಿಗಳೂ ಅಡ್ಡ ಬರುತ್ತವೆ. ಕೆಲವು ಗುಂಪುಗಳ ಸಾಮೂಹಿಕ ಸ್ವಾರ್ಥಕ್ಕಾಗಿ ನಿರ್ಮಿಸಿದ ಗತದ ಸಮಾಜದ ಕಟ್ಟುಗಳನ್ನು ದಾಟಿದ ಮೇಲೆಯೇ ಹಿಂದಿನ ಜ್ಞಾನಿಗಳು ಇಂಥಾ ಅವಸ್ಥೆಯನ್ನು ಸಾಧಿ­ಸಿ­ದರು. ತಮ್ಮ ಸಾಮಾಜಿಕ ವಾತಾ­ವರಣವನ್ನು  ಈ ಕಾರಣದಿಂದಲೇ ಸಂತ ಜ್ಞಾನ­ದೇವ­ರಂಥ­ವರು ಎದುರುಹಾಕಿಕೊಳ್ಳಬೇಕಾಗಿ­ಬಂತು.ಇಂದಿನ ಸಮಾಜ ಮೇಲುನೋಟಕ್ಕೆ ವ್ಯಕ್ತಿ­ಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದಂತೆ ಕಂಡರೂ ಹೊಸ ರೀತಿಯ ಪಾರತಂತ್ರ್ಯಗಳನ್ನೂ ಸೃಷ್ಟಿಸಿದೆ. ಉದಾಹರಣೆಗೆ ಹೊಸಯುಗದ ಸ್ಟಾರುಗಳು ಇಂದಿನ ದೇವತೆಗಳಾಗಿದ್ದಾರೆ. ಅವರೂ ನಮ್ಮ ಪರಕೀಯಗೊಳಿಸಿದ ಆತ್ಮಸತ್ವದ ಪ್ರತೀಕಗಳು. ನಮ್ಮನ್ನು ತಿಂದು ಅವು ಬದುಕು­ತ್ತಿವೆ. ಗೋಳೀ­ಕರಣದ ಜಗತ್ತಿನ ಆರ್ಥಿಕ­ಸಂಸ್ಥೆ­ಗಳು, ಉದ್ದಿಮೆ­ಗಳು ತಮ್ಮ ಇಚ್ಛಾಶಕ್ತಿಗಳನ್ನು ತಾವೇ ಆವಾಹಿಸಿ­ಕೊಂಡು ನಮ್ಮ ಬೇಕುಬೇಡ­ಗಳನ್ನು ನಮ್ಮ ಒಪ್ಪಿಗೆಗೆ ಕಾಯದೆ ತೀರ್ಮಾನಿ­ಸುತ್ತಿವೆ.ನಮ್ಮ ಸ್ವಾತಂತ್ರ್ಯಶಕ್ತಿಯ ವಿಡಂಬನೆಗಳಾದ ಮಾಟಮಂತ್ರ, ಲಾಭಕೋರ ಉದ್ದಿಮೆಗಳು, ನರಭಕ್ಷಕ ಸ್ಟಾರುಗಳು ಇವೆಲ್ಲವೂ ಒಂದ­ನ್ನೊಂದು ಪೋಷಿಸುತ್ತಿರುವ ವಿಷವ್ಯೂಹದಿಂದ ಹೊರಬರಲು ಸ್ವಸ್ಥ ಅಂತರಂಗ-ಬಹಿರಂಗಗಳ ಪೂರ್ಣವಿಕಾಸವೇ ರಾಮಬಾಣ.

ಕಾನೂನುಕ್ರಮ ಆ ದಿಸೆಯಲ್ಲಿ ಒಂದು ಪುಟ್ಟ ಹೆಜ್ಜೆ ಮಾತ್ರ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.