ಮಂಗಳವಾರ, ಮೇ 17, 2022
26 °C

ರೂಪಾಂತರ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಪರ್ವತದ ಶಿಖರಗಳ ಮೇಲೆ ಮಳೆಯ ಧಾರೆ ಸುರಿಯುತ್ತಿತ್ತು. ಗುಡುಗು ಸಿಡಿಲುಗಳ ಅಬ್ಬರದೊಂದಿಗೆ ಪರ್ವತಕ್ಕೆ ಅಭಿಷೇಕವಾಗುವಂತೆ ತೋರುತ್ತಿತ್ತು. ಹನಿಹನಿಯಾಗಿ ಬಿದ್ದ ಮಳೆ ಸಣ್ಣ ಝರಿಗಳಾಗಿ ಕೆಳಗಿಳಿಯುತ್ತ ಮತ್ತಷ್ಟು ಝರಿಗಳೊಂದಿಗೆ ಸೇರಿ ತೊರೆಯಾಗಿ ಧಡಧಡನೇ ನೆಲದೆಡೆಗೆ ಹರಿಯತೊಡಗಿತು. ಮತ್ತಷ್ಟು ತೊರೆಗಳು ಬೆರೆತು ಹಳ್ಳವಾಗಿ, ಹಳ್ಳ ನದಿಯಾಗಿ ಭೋರ್ಗರೆದು ಹರಿಯುತ್ತಿತ್ತು. ಏನದರ ರಭಸ! ಏನದರ ಉತ್ಸಾಹ! ನದಿ  ನೀರಿನ ಪ್ರತಿಯೊಂದು ಹನಿಯ ಉದ್ದೆೀಶ ಒಂದೇ.

 

ತಾನು ಆದಷ್ಟು ಬೇಗ ಹರಿದು ಸಮುದ್ರವನ್ನು ಸೇರಬೇಕು.  ದಾರಿಯಲ್ಲಿ ಅಡ್ಡವಾದ ಕಲ್ಲುಗಳನ್ನು ಸುತ್ತುವರೆದು, ಮಣ್ಣರಾಶಿಯನ್ನು ಕೊರೆದು ಪ್ರವಾಹ ಮುಂದುವರೆಯುತ್ತಿತ್ತು. ಮುಂದೆ ತಪ್ಪಲು ಪ್ರದೇಶಕ್ಕೆ ಬಂದಾಗ ಸ್ವಲ್ಪ ಹಾಯೆನೆಸಿತು ನೀರಿಗೆ. ಈಗ ಅಷ್ಟು ಬೆಟ್ಟಗಳನ್ನು ದಾಟುವ, ಮಣ್ಣನ್ನು ಕೊರೆಯುವ ಕಾರಣವಿಲ್ಲ. ಅದಕ್ಕಿಂತ ಹೆಚ್ಚಾಗಿ ತನಗೆ ಹರಿದು ಹೋಗಲು ಅನುಕೂಲವಾಗುವಂತೆ ಮರಳ ಹಾಸಿಗೆ ಇದೆ. ತನ್ನ ಎರಡು ಬದಿಗೂ ಹಾಸಿಕೊಂಡಿರುವ ಮರಳು ಕಟ್ಟೆಯಂತೆ ನಿಂತು ನೀರು ಹರಿಯಲು ಸಹಕಾರಿಯಾಗಿದೆ.

 

ಈ ಮರಳಿಗೆ ಕೃತಜ್ಞತೆ ಸಲಿಸುತ್ತ ನೀರು ಮುಂದುವರೆಯಿತು. ಮುಂದೆ ಅದು ಮರುಭೂಮಿಯನ್ನೂ ಪ್ರವೇಶಿಸಿತು. ರಾಶಿ ರಾಶಿಯಾಗಿದ್ದ ಮರಳು ನೀರನ್ನು ಮುಂದೆ ಹೋಗಲು ಬಿಡಲಿಲ್ಲ.

 

ಯಾವ ಮರಳು ತನ್ನ ಚಲನೆಗೆ ಸಹಕಾರಿಯಾಗಿತ್ತೋ ಅದೇ ತಡೆಗೋಡೆಯಾಗಿ ನಿಂತಿದೆ. ಎಷ್ಟೇ ರಭಸದಿಂದ ಹರಿದರೂ ಮರಳರಾಶಿಯಲ್ಲಿ ಕರಗಿ ಹೋಗುತ್ತಿತ್ತು. ದಾಟುವುದು ಅಸಾಧ್ಯವಾಯಿತು. ಸಮುದ್ರವನ್ನು ಅದಷ್ಟು ಬೇಗ ಸೇರಬೇಕೆನ್ನುವ ತುಡಿತ. ಮರಳಿನ ತಡೆ ನದಿಯ ನೀರಿಗೆ ಕಳವಳವನ್ನುಂಟುಮಾಡಿತು. ಮರಳಿನ ಮೇಲೆ ಅಗಾಧವಾದ ಸಿಟ್ಟು ಬಂತು. ಆಗ ಮರಳರಾಶಿಯ ಅಡಿಯಿಂದ ಗಂಭೀರವಾದ ಧ್ವನಿಯೊಂದು ಕೇಳಿಸಿತು. ಗೆಳತಿ, ನಿನ್ನ ರಭಸದ ಶಕ್ತಿಯ ಮೇಲೆ ಅಷ್ಟೊಂದು ನಂಬಿಕೆ ಬೇಡ, ನೀನು ಈ ರೂಪದಿಂದ ನನ್ನನ್ನು ದಾಟಲಾರೆ. ಗಾಳಿಯ ಸಹಾಯಪಡೆ. ಆತ ನಿನ್ನನ್ನು ಗುರಿಯ ಕಡೆಗೆ ಕರೆದುಕೊಂಡು ಹೋಗುತ್ತಾನೆ.ನದಿಯ ನೀರು ಸಿಟ್ಟಿನಲ್ಲೇ ಕೇಳಿತು.  ನೀನು ನನ್ನ ಗೆಳತಿ ಎಂದು ಭಾವಿಸಿದ್ದೆ. ಇಷ್ಟು ದಿನ ನನಗೆ ಸಹಕಾರಿಯಾಗಿದ್ದ ನೀನು ನನಗೇಕೆ ತಡೆಯಾಗಿ ನಿಂತಿದ್ದೀ  ನನಗೆ ದಾರಿ ಬಿಡಬಾರದೇ  ಗೆಳತಿ. ನಾನು ನಿನ್ನ ವೈರಿಯಲ್ಲ. ಇದು ಪ್ರಕೃತಿ ನಿಯಮ.

 

ಯಾವಾಗಲೂ ನಾವು ನಮ್ಮ ಸಾಮರ್ಥ್ಯದ ಮೇಲೆಯೇ ಬದುಕಲಾರೆವು. ಬೇರೆಬೇರೆ ಹಂತಗಳಲ್ಲಿ ನಮಗೆ ಬೇರೆಯವರ ಸಹಾಯಬೇಕು. ನೀನು ಎಷ್ಟು ಪ್ರಯತ್ನಿಸಿದರೂ ನನ್ನನ್ನು ದಾಟಲಾರೆ.ಬಹಳವೆಂದರೆ ಅಲ್ಲಲ್ಲಿ ಸ್ವಲ್ಪಸ್ವಲ್ಪವಾಗಿ ನಿಂತು ಅಲ್ಲೊಂದಿಷ್ಟು ಹಸಿರನ್ನು ಬೆಳೆಸಬಲ್ಲೆ. ಆದರೆ, ಪ್ರವಾಹವಾಗಿ ಹರಿಯಲಾರೆ. ನಾನು ಇದುವರೆಗೂ ನನ್ನ ಶಕ್ತಿಯಿಂದಲೇ ಹರಿದಿದ್ದೆೀನೆ, ಬಂಡೆಗಳನ್ನು ಕೊರೆದಿದ್ದೆೀನೆ, ಬೆಟ್ಟಗಳನ್ನು ಕರಗಿಸಿದ್ದೆೀನೆ. ನನ್ನ ಸ್ವಂತಿಕೆ ಮರೆತು ಮತ್ತೊಬ್ಬರನ್ನು ಏಕೆ ಅವಲಂಬಿಸಬೇಕು   ಆತಂಕದಿಂದ ಕೇಳಿತು ನದಿಯ ನೀರು. ಗೆಳತಿ ಅಹಂಕಾರ ಬಿಡು. ನೀನು ನಿನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ. ಕೇವಲ ರೂಪಾಂತರ ಹೊಂದುತ್ತೀ. ಇದೂ ಪ್ರಕೃತಿಯ ನಿಯಮ. ದಯವಿಟ್ಟು ಗಾಳಿಯನ್ನೂ ಅವಲಂಬಿಸು ಎಂದು ಸಲಹೆ ನೀಡಿತು ಮರಳರಾಶಿ.ನದಿಯ ನೀರು ಚಿಂತೆಯಲ್ಲಿ ತೊಳಲಾಡಿತು. ಕೊನೆಗೊಂದು ತೀರ್ಮಾನಕ್ಕೆ ಬಂದಿತು. ನನ್ನ ಗೆಳತಿ ಸುಳ್ಳು ಹೇಳಿರಲಾರಳು. ಅದೂ ಪರೀಕ್ಷೆಯಾಗಲಿ ಎಂದು ನಿಧಾನಕ್ಕೆ ಮರಳಿನ ಮೇಲೆ ತೇಲಿಬಂತು. ಬೀಸಿ ಬಂದ ಗಾಳಿ ಮರಳಿನ ಮೇಲೆ ಕಾಲೆತ್ತಿ ನಿಂತ ನೀರಿನ ಆವಿಯನ್ನು ಹೂವಿನಂತೆ ಎತ್ತಿಕೊಂಡು ಸಾಗಿತು. ನೀರು ಕಲ್ಪನೆ ಕೂಡ ಮಾಡದಿದ್ದ ವೇಗದಲ್ಲಿ ಅದನ್ನು ತೆಗೆದುಕೊಂಡು ಮುಂದಿನ ಪರ್ವತ ಶ್ರೇಣಿಗಳ ಎತ್ತರಕ್ಕೆ ಕರೆತಂದಿತು.ಆ ಶಿಖರಗಳು ಹೊಸದಾಗಿ ಬಂದ ಈ ನೀರನ್ನು ಅಪ್ಪಿ ಮುದ್ದಾಡಿ ನೆಲಕ್ಕಿಳಿಸಿದವು. ಮತ್ತೆ ಪ್ರಾರಂಭವಾಯಿತು ಸಮುದ್ರದೆಡೆಗೆ ನೀರಿನ ಪಯಣ. ಮತ್ತೆ ಅದಕ್ಕೆ ಮರಳಿನ ಸಾಂಗತ್ಯ ದೊರಕಿತು. ಆಗ ನದಿಯ ನೀರು ಮರಳಿಗೆ ಹೇಳಿತು,  ಗೆಳತಿ, ನನಗೀಗ ಸ್ವಂತಿಕೆ ಎಂದರೆ ಬದಲಾಗದೇ ಉಳಿದುಬಿಡುವುದಲ್ಲ.

 

ಜೀವನದ ಹಲವು ಘಟ್ಟಗಳಲ್ಲಿ ಬರುವ ಸಂದರ್ಭಗಳಿಗೆ ಅನುಸಾರವಾಗಿ ನಮ್ಮ ಚಿಂತನೆಗಳನ್ನು ಬದಲಿಸುತ್ತ ರೂಪಾಂತರಗೊಳ್ಳುವುದು. ಆದರೆ, ನಮ್ಮ ಮೂಲಸತ್ವ ಮರೆಯಕೂಡದು. ನೋಡು, ನಾನು ಮೊದಲೂ ನೀರೇ ಆಗಿದ್ದೆ, ಈಗಲೂ ನೀರೇ ಆಗಿದ್ದೆೀನೆ. ನಡುವೆ ಪಡೆದ ರೂಪಾಂತರ ನನ್ನ ನಡೆಗೆ ಸಹಕಾರಿಯೇ ಆಯಿತು.

 

ನಮ್ಮ ಜೀವನ ಪ್ರವಾಹದಲ್ಲೂ ಹಂತಹಂತಗಳಲ್ಲಿ ಈ ರೂಪಾಂತರದ ಅವಶ್ಯಕತೆ ಇದೆ. ದೇಹ ಬೇಡವೆಂದರೂ ರೂಪಾಂತರ ಹೊಂದುತ್ತದೆ. ಆದರೆ, ಮನಸ್ಸು, ಚಿಂತನೆ ಮಾತ್ರ ಹಾಗೆಯೇ ಬದಲಾಗದೇ ಗಡಸಾಗಿ, ಬಾಗದೇ, ಬಲಿಯದೇ ಇದ್ದರೆ ಬದುಕು ಮರಳುಗಾಡಾಗಿ ಚೈತನ್ಯ ಬಸಿದುಹೋಗುತ್ತದೆ, ಚಲನಶೀಲವಾಗುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.