ಶನಿವಾರ, ಮಾರ್ಚ್ 6, 2021
27 °C

ರೋಬಾಟ್ ಆಳ್ವಿಕೆಯಲ್ಲಿ ನಾಳೆಗಳ ಸಮಾಧಿ

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ರೋಬಾಟ್ ಆಳ್ವಿಕೆಯಲ್ಲಿ ನಾಳೆಗಳ ಸಮಾಧಿ

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೊಸದೊಂದು ಮಾಯಾ ಲೋಕವನ್ನೇ ಸೃಷ್ಟಿಸಲು ಜಪಾನ್ ಸಿದ್ಧತೆ ನಡೆಸಿದೆ. ಚಾಲಕರಿಲ್ಲದ ಕಾರುಗಳು, ಜಲಜನಕ ಶಕ್ತಿಯಿಂದ ನಿಶ್ಶಬ್ದ ಚಲಿಸುವ ವಾಹನಗಳು, 5ಜಿ ಸಂಪರ್ಕ ವ್ಯವಸ್ಥೆ, ಗಂಟೆಗೆ 600 ಕಿ.ಮೀ ವೇಗದ ಸೂಪರ್ ಮ್ಯಾಗ್ಲೆವ್ ರೈಲುಬಂಡಿ, ಉಪಗ್ರಹದ ಮೂಲಕ ಉಲ್ಕಾವೃಷ್ಟಿ, ಈಗಿನ ಎಚ್‌ಡಿ ಟಿವಿಗಳಿಗಿಂತ 16 ಪಟ್ಟು ಹೆಚ್ಚು ಸ್ಪಷ್ಟವಾಗಿ ಚಿತ್ರಗಳನ್ನು ಬಿತ್ತರಿಸುವ 8ಕೆ ಟಿವಿ, ಜೊತೆಗೆ ಹೆಜ್ಜೆ ಹೆಜ್ಜೆಗೂ ರೋಬಾಟ್‌ಗಳು.

ಜಪಾನ್ ಎಂದರೆ ರೋಬಾಟ್‌ಗಳ ಜನ್ಮಸ್ಥಾನ ತಾನೆ? ಅಲ್ಲಿ ಎಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ.  ಹಿರಿಯ ನಾಗರಿಕರ ಸಂಖ್ಯೆ ದಿನದಿನವೂ ಹೆಚ್ಚುತ್ತಿದೆ. ಅವರ ಸೇವೆಗೆಂದು ತರಾವರಿ ರೋಬಾಟ್‌ಗಳು ಜನ್ಮ ತಾಳುತ್ತಿವೆ. ಸುದ್ದಿ ಓದುತ್ತ ಕತೆ ಹೇಳುತ್ತ, ಹಾಡುವ ಪುಟ್ಟ ಮುದ್ದಿನ ರೋಬಾಟ್‌ಗಳು; ಹಿರಿಯರನ್ನು ಮಂಚದಿಂದ ಎತ್ತಿ ಗಾಲಿಕುರ್ಚಿಯ ಮೇಲೆ ಕೂರಿಸುವ ಧಾಂಡಿಗ ರೋಬಾಟ್‌ಗಳು, ರಸ್ತೆಗಿಳಿದಾಗ ಮಾರ್ಗದರ್ಶಿ ರೋಬಾಟ್‌ಗಳು.

ಒಲಿಂಪಿಕ್ಸ್ ಕ್ರೀಡೆ ನಡೆಯುವ ಒಡಾಯಿಬಾ ಗ್ರಾಮದಲ್ಲಿ ರೋಬಾಟ್‌ಗಳದ್ದೇ ಪ್ರತ್ಯೇಕ ಗ್ರಾಮ ಇರುತ್ತದಂತೆ. ಅತಿಥಿಗಳ ಸಂಚಾರ ವ್ಯವಸ್ಥೆ, ಮನರಂಜನೆ, ಊಟೋಪಚಾರ ಮೇಲ್ವಿಚಾರಣೆ ಮತ್ತು 27 ಭಾಷೆಗಳಲ್ಲಿ ಮಾತಾಡಬಲ್ಲ ರೋಬಾಟ್‌ಗಳ ಸೈನ್ಯವೇ ಸಜ್ಜಾಗುತ್ತಿದೆ. ತಾನೇ ರೋಬಾಟಿಕ್ಸ್ ತಂತ್ರಜ್ಞಾನದ ಜಾಗತಿಕ ಮುಂದಾಳು ಎಂಬುದನ್ನು ತೋರಿಸಲು ಜಪಾನ್ ಹೊರಟಿದೆ. ಅದಕ್ಕೆಂದೇ ವಿಶ್ವವಿದ್ಯಾಲಯಗಳಿಗೆ, ವಿಜ್ಞಾನ ತಂತ್ರಜ್ಞಾನ ಸಂಘಟನೆಗಳಿಗೆ, ಹವ್ಯಾಸಿ ಎಂಜಿನಿಯರ್‌ಗಳಿಗೆ ಮತ್ತು ಸಾಫ್ಟ್‌ವೇರ್ ಟೆಕಿಗಳಿಗೆ ಹಣ ಚೆಲ್ಲುತ್ತ ಇಡೀ ಯಂತ್ರೋದ್ಯಮವನ್ನು ಒಲಿಂಪಿಕ್ಸ್‌ನಲ್ಲಿ ಲಾಂಗ್‌ಜಂಪ್ ಮಾಡಿಸುವ ಸನ್ನಾಹ ನಡೆದಿದೆ.

ಅದೇ ಜಪಾನೀ ರೋಬಾಟಿಕ್ ಕೌಶಲದ ಇನ್ನೊಂದು ಮುಖವನ್ನು ಈಗ ನೋಡೋಣ. ಫುಕುಶಿಮಾ ಪರಮಾಣು ದುರಂತ ಸಂಭವಿಸಿದ ತಾಣದಲ್ಲಿ ಎಂಜಿನಿಯರ್‌ಗಳು ತಲೆಗೆ ಕೈಕೊಟ್ಟು ಕೂತಿದ್ದಾರೆ. ಅಲ್ಲಿ ಒಂದರ ನಂತರ ಒಂದರಂತೆ ರೋಬಾಟ್‌ಗಳು ಸಾವಪ್ಪುತ್ತಿವೆ. ಇದುವರೆಗೆ ಅಲ್ಲಿ ಆರು ರೋಬಾಟ್‌ಗಳ ಸಮಾಧಿಯಾಗಿದ್ದು ಏಳನೆಯದೂ ಅದೇ ಹಾದಿ ಹಿಡಿದಿದೆ.

ಸುನಾಮಿಯ ದಾಳಿಯಿಂದ ಧ್ವಂಸಗೊಂಡು ತನ್ನದೇ ದಳ್ಳುರಿಯಲ್ಲಿ ಈಗಲೂ ಬೇಯುತ್ತಿರುವ ಫುಕುಶಿಮಾ-2 ರಿಯಾಕ್ಟರಿನ ತಳಭಾಗಕ್ಕೆ ಕಳಿಸಿದ ‘ಸ್ಕಾರ್ಪಿಯಾನ್’ (ಚೇಳು) ಹೆಸರಿನ ರೋಬಾಟ್‌ಗೆ ಇದೀಗ ವಿದಾಯ ಹೇಳಲಾಗಿದೆ. ಕುರುಕ್ಷೇತ್ರದಲ್ಲಿ ಭೀಷ್ಮ, ದ್ರೋಣ, ಕರ್ಣರಂಥ ವೀರಾಧಿವೀರರನ್ನು ಒಬ್ಬರನಂತರ ಒಬ್ಬರಂತೆ ಸಾಲಾಗಿ ಬಲಿಕೊಟ್ಟು ಕೂತ ದುರ್ಯೋಧನನ ಪರಿಸ್ಥಿತಿ ಅಲ್ಲಿನ ಎಂಜಿನಿಯರ್‌ಗಳಿಗೆ ಬಂದಿದೆ.

ಆರು ವರ್ಷಗಳ ಹಿಂದೆ ಅಲ್ಲಿಗೆ ದಾಳಿ ಮಾಡಿದ ಸುನಾಮಿ ಈಗಲೂ ದಂಡ ಕಕ್ಕಿಸುತ್ತಿದೆ. ಅಂದು ಹತ್ತಾಳೆತ್ತರದ ಅಲೆಗಳು ಅಪ್ಪಳಿಸಿದ್ದರಿಂದ ಇಡೀ ಪಟ್ಟಣವೇ ಜಲಸಮಾಧಿಯಾಗಿ ಸುಮಾರು 19 ಸಾವಿರ ಜನರು ಗತಿಸಿದರು. ಒಂದೂವರೆ ಲಕ್ಷ ಜನರನ್ನು ತುರ್ತಾಗಿ ಸ್ಥಳಾಂತರ ಮಾಡಬೇಕಾಯಿತು. ಸಮುದ್ರದ ಅಂಚಿಗೆ ಇದ್ದ ಐದು ಪರಮಾಣು ರಿಯಾಕ್ಟರ್‌ಗಳಲ್ಲಿ ಮೂರು ಸ್ಫೋಟಿಸಿದವು.

ಏಕೆಂದರೆ ಅವುಗಳ ಸುತ್ತ ತಣ್ಣೀರನ್ನು ಹರಿಸುತ್ತ ಸದಾ ತಂಪುಸ್ಥಿತಿಯಲ್ಲಿ ಇಡಬೇಕಿದ್ದ ವಿದ್ಯುತ್ ಪಂಪ್‌ಗಳು ಕೆಟ್ಟವು. ಡೀಸೆಲ್ ಪಂಪ್‌ಗಳಿಗೆ ನೀರು ನುಗ್ಗಿತು. ರಿಯಾಕ್ಟರಿನಲ್ಲಿದ್ದ ಪರಮಾಣು ಇಂಧನ ಸರಳುಗಳು ಕರಗಿ ಕುದಿದು ಸ್ಫೋಟಿಸಿ ಕುಸಿದವು. ತಳದಲ್ಲಿ ಯುರೇನಿಯಂ ಇಂಧನದ ಮುದ್ದೆಗಳು ಈಗಲೂ ಕೆಂಡದಂತೆ ಜ್ವಲಿಸುತ್ತಿವೆ. ಅಲ್ಲಿಗೆ ಅಂತರ್ಜಲ ಸೋರಿಕೆ ಆಗದಂತೆ ತಡೆಯಲೆಂದು ಸುತ್ತಲೂ ಬರ್ಫದ ಭೂಗತ ಗೋಡೆ ನಿರ್ಮಿಸಲಾಗಿದೆ. ಆದರೂ ತಳದಿಂದ ನೀರು ಜಿನುಗುತ್ತಿದೆ.

ಕುದಿಯುತ್ತಿರುವ ಕೆಂಡತುಂಡುಗಳನ್ನು ಹೇಗಾದರೂ ಈಚೆ ತೆಗೆಯಲು ಸಾಧ್ಯವೆ ನೋಡಬೇಕು. ಮನುಷ್ಯರನ್ನು ಇಳಿಸಿದರೆ ಒಂದೇ ನಿಮಿಷದಲ್ಲಿ ಪಡ್ಚ ಆಗುತ್ತಾರೆ. ಅದಕ್ಕೆಂದೇ ಒಂದಕ್ಕಿಂತ ಒಂದು ಚಾಣಾಕ್ಷ, ಒಂದಕ್ಕಿಂತ ಒಂದು ಬಲಿಷ್ಠ, ಒಂದಕ್ಕಿಂತ ಒಂದು ದುಬಾರಿ  ರೋಬಾಟ್‌ಗಳನ್ನು ಇಳಿಸಲು ಹೋದರೆ ಒಂದಕ್ಕಿಂತ ಒಂದು ಶೀಘ್ರವಾಗಿ ಕೆಟ್ಟು ಕೂರುತ್ತಿವೆ. ಒಡಾಯಿಬಾ ಒಲಿಂಪಿಕ್ಸ್‌ನಲ್ಲಿ ಗಳಿಸಬೇಕಿದ್ದ ಪ್ರತಿಷ್ಠೆಯನ್ನು ಅವು ಫುಕುಶಿಮಾದ ಒಡಲಲ್ಲಿ ಅಡ್ವಾನ್ಸಾಗಿ ಹೂಳುತ್ತಿವೆ.

ಇದೇ ವೇಳೆ ಇತ್ತ ಚೆರ್ನೊಬಿಲ್‌ನಲ್ಲಿ ಅರ್ಧ ಡಝನ್ ಆತ್ಮಹತ್ಯಾ ರೋಬಾಟ್‌ಗಳು ಮೆಲ್ಲಗೆ ಅಲ್ಲಿನ ಕುಸಿದ ಗೋಪುರದ ಒಂದೊಂದೇ ಇಟ್ಟಿಗೆಯನ್ನು ಕುಟ್ಟಿ ಕಳಚುತ್ತಿವೆ. ಪಾಳಿ ಮುಗಿದ ಮೇಲೆ ಅವೂ ಅಲ್ಲೇ ಸಮಾಧಿ ಸ್ಥಿತಿಯಲ್ಲಿ ಸಾವಿರಾರು  ವರ್ಷ ಅಥವಾ ಆಚಂದ್ರಾರ್ಕ ನಿಲ್ಲಬೇಕಿದೆ. ಅಲ್ಲಿನ ಎಂಜಿನಿಯರಿಂಗ್ ಸಾಹಸ ಫುಕುಶಿಮಾಕ್ಕಿಂತ ರೋಚಕವಾಗಿದೆ. 1986ರಲ್ಲಿ ಚೆರ್ನೊಬಿಲ್ ಸ್ಥಾವರ ಸ್ಫೋಟಗೊಂಡು ಜ್ವಾಲಾಮುಖಿಯಂತೆ ವಿಕಿರಣ ಮೇಘವನ್ನು ಕಕ್ಕುತ್ತಿದ್ದಾಗ ಮಿಲಿಟರಿ ವಿಮಾನಗಳು ಅದರ ಮೇಲೆ ಉಪ್ಪು, ಮರಳು, ಸಿಮೆಂಟು, ಕಾಂಕ್ರೀಟು ಸುರಿದವು. ನೆಲಮಟ್ಟದಲ್ಲಿ ರೋಬಾಟ್‌ಗಳು ಮಣ್ಣೆರಚಿದವು. ಹನ್ನೆರಡು ದಿನಗಳ ನಂತರ ಹೇಗೋ ಜ್ವಾಲೆಯನ್ನು ಅಡಗಿಸಿದರು.

ಅದರಲ್ಲಿ ಭಾಗಿಯಾಗಿದ್ದ ಪೈಲಟ್‌ಗಳಲ್ಲಿ ಅನೇಕರು ರೋಗರುಜಿನೆಗಳಿಂದ ನರಳಿ ಸತ್ತೂ ಹೋದರು. ಜ್ವಾಲೆಯನ್ನು ನಂದಿಸಲು ಹೆಣಗಿದ ನೂರಾರು ಮಿಲಿಟರಿ ಟ್ಯಾಂಕ್, ಟ್ರಕ್, ಜೆಸಿಬಿ, ಡೋಝರ್ ಮತ್ತು ಹೆಲಿಕಾಪ್ಟರ್‌ಗಳನ್ನೂ ಅಲ್ಲೇ ಸುತ್ತ ಸಮಾಧಿ ಮಾಡಲಾಯಿತು. ಇಡೀ ಪ್ರೀಪ್ಯಾತ್ ನಗರ, ಸುತ್ತಲಿನ ನೂರಾರು ಹಳ್ಳಿಗಳಿಗೆ ಜನರು ಎಂದೂ ಹಿಂದಿರುಗದಂತೆ ಶಾಶ್ವತ ನಿರ್ಬಂಧ ಹೇರಲಾಯಿತು. ಕುಸಿದ ರಿಯಾಕ್ಟರ್ ಮೇಲೆ ನಂತರ ಮತ್ತಷ್ಟು ಸಿಮೆಂಟು, ಡಾಂಬರು, ಕಾಂಕ್ರೀಟನ್ನು ವಿಮಾನಗಳ ಮೂಲಕ ಸುರಿದು ತಾತ್ಕಾಲಿಕ ಒರಟು ಗುಡ್ಡ ತಲೆಯೆತ್ತಿತು. ಗಾಳಿ-ಮಳೆಯೇ ಮೇಸ್ತ್ರಿ. 

ಯಜ್ಞ ಮುಗಿದರೂ ಪರಮಾಣು ಕುಲುಮೆ ತಂಪಾಗಲಿಲ್ಲ. ಅದರ ಮೇಲಿನ ಕಚ್ಚಾ ಸಮಾಧಿ ಬಿರುಕು ಬಿಡತೊಡಗಿತ್ತು. ಪ್ರತಿ ವರ್ಷವೂ ಆಕಾಶದಿಂದ ಕಾಂಕ್ರೀಟ್ ಸುರಿಯಬೇಕಾದ ಪ್ರಸಂಗ. ಸುಭದ್ರ ಸಮಾಧಿಯನ್ನು ಕಟ್ಟೋಣವೆಂದರೆ ಸಮೀಪ ಯಾರೂ ಹೋಗುವಂತಿಲ್ಲ. 2005ರಲ್ಲಿ ನಾಲ್ವತ್ತು ದೇಶಗಳ ತಂತ್ರಕುಶಲಿಗಳು ಸೇರಿಸಿ ಹೊಸ ಉಪಾಯ ಹೆಣೆದರು.

ಮೂರು ಕಿ.ಮೀ ದೂರದಲ್ಲಿ, ಎಂಟು ವರ್ಷಗಳ ಶ್ರಮ ಹಾಕಿ 257 ಮೀಟರ್ ಅಗಲ, 108 ಮೀಟರ್ ಎತ್ತರದ ಮಹಾ ಗೋಪುರವನ್ನು ನಿರ್ಮಿಸಿದರು. ಹಳಿಗಳ ಮೇಲೆ ಅದನ್ನು ಜಾರಿಸಿ ತಂದು ಚೆರ್ನೊಬಿಲ್ ಸಮಾಧಿಯ ಮೇಲೆ ಈ ವರ್ಷಾರಂಭದಲ್ಲಿ ಕೂರಿಸಿದರು. ಅದು ಮನುಷ್ಯ ಚರಿತ್ರೆಯಲ್ಲೇ ಅತಿ ದೊಡ್ಡ ಚಲನಶೀಲ ಯಂತ್ರಾಗಾರವೆನಿಸಿತು. ಅದರೊಳಕ್ಕೆ ರಿಮೋಟ್ ಕಂಟ್ರೋಲ್ ರೋಬಾಟ್‌ಗಳನ್ನು ಮೊದಲೇ ಕೂರಿಸಿದ್ದು ಅವೆಲ್ಲ ಗೂಡೊಳಗಿನ ಹಳೇ ಸಮಾಧಿಯನ್ನು ಕಿತ್ತು ಜೋಡಿಸುತ್ತ ಸಮಾಧಿಯಾಗಲಿವೆ. ಇನ್ನು ನೂರು ವರ್ಷಗಳ ನಂತರ ಮತ್ತೊಂದು ಮಹಾಗೋಪುರ, ಅದಾಗಿ ನೂರು ವರ್ಷದ ಮಗದೊಂದು, ಹೀಗೆ ಕಡೇಪಕ್ಷ ಹತ್ತಾರು ಸಾವಿರ ವರ್ಷ ಪರ್ಯಂತ ಹೊಸ ಹೊಸ ಕವಚ ನಿರ್ಮಿಸುತ್ತ ಹೋಗಬೇಕು. 

ಅದರ ಕತೆ ಹಾಗಿರುವಾಗ, ಇತ್ತ ಅಮೆರಿಕದ ಹ್ಯಾನ್‌ಫೋರ್ಡ್ ಪರಮಾಣು ಸಮಾಧಿಯಲ್ಲಿ ಕಳೆದ ತಿಂಗಳು ಮೇ 9ರಂದು ಸುರಂಗವೊಂದು ಕುಸಿದು ಆತಂಕ ಸೃಷ್ಟಿಯಾಯಿತು. ಅಲ್ಲಿ ಹಿರೊಶಿಮಾ ಬಾಂಬ್ ತಯಾರಿಕೆಯಿಂದ ಹಿಡಿದು ನಂತರದ 25 ವರ್ಷಗಳವರೆಗಿನ ಪರಮಾಣು ಪ್ರಯೋಗಗಳ ಘನ, ದ್ರವ ಕಚಡಾಗಳನ್ನೆಲ್ಲ ಹೂತಿಡಲಾಗಿದೆ. 520 ಚದರ ಕಿ.ಮೀ ವಿಸ್ತೀರ್ಣದ ಆ ಮಹಾ ರುದ್ರಭೂಮಿಯ ಸುರಂಗಗಳಲ್ಲಿ 36 ರಿಮೋಟ್ ಕಂಟ್ರೋಲ್ ರೈಲುಕಾರುಗಳೂ ಗುಜರಿ ಸ್ಥಿತಿಯಲ್ಲಿ ನಿಂತಿವೆ. ಅಲ್ಲಿಂದ ವಿಕಿರಣ ಆಚೀಚೆ ಹರಡದಂತೆ ನೋಡಲೆಂದು ಪ್ರತಿವರ್ಷ ₹ 14 ಸಾವಿರ ಕೋಟಿಗಳಷ್ಟನ್ನು ವ್ಯಯಿಸಲಾಗುತ್ತಿದೆ. ಅಲ್ಲಿನ ಅಸಂಖ್ಯ ಸುರಂಗಗಳಲ್ಲಿ ಒಂದು ಭಾಗ ಕುಸಿದಿದ್ದೇ ತಡ, ರೋಬಾಟ್‌ಗಳಂತೆ ವೇಷ ಧರಿಸಿದ ಕ್ಲೀನಾಳುಗಳು ಹೆಲಿಕಾಪ್ಟರ್‌ಗಳಲ್ಲಿ ಧಾವಿಸಿ ಆಕಾಶ ಪಾತಾಳ ಒಂದು ಮಾಡಿದರು.

ಸುರಂಗಗಳಷ್ಟೇ ಅಲ್ಲ, ಪರಮಾಣು ಆರ್ಥಿಕತೆಯ ನೆಲೆಗಟ್ಟೇ ಎಲ್ಲೆಡೆ ಕುಸಿಯುತ್ತಿದೆ. ಜಗತ್ತಿನ ಅತ್ಯಂತ ಬಲಾಢ್ಯ ಪರಮಾಣು ತಂತ್ರಜ್ಞಾನದ ದೊರೆ ಎಂದೆನಿಸಿದ್ದ ವೆಸ್ಟಿಂಗ್‌ಹೌಸ್ ಕಂಪನಿ ಎರಡು ತಿಂಗಳ ಹಿಂದೆ ದಿವಾಳಿ ಘೋಷಿಸಿಕೊಂಡಿದೆ. ಕಳೆದ ವಾರ ದಕ್ಷಿಣ ಕೊರಿಯಾದ ‘ಕೊರಿ-1’ ಹೆಸರಿನ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ (ಅದನ್ನು ಇನ್ನೂ 20 ವರ್ಷ ದುಡಿಸಿಕೊಳ್ಳಲು ಸಾಧ್ಯವಿತ್ತು).

ಜರ್ಮನಿ, ಆಸ್ಟ್ರಿಯಾ, ಬೆಲ್ಜಿಯಂ, ಇಟಲಿ ಮತ್ತು ಸ್ವೀಡನ್ ಇನ್ನು 15 ವರ್ಷಗಳಲ್ಲಿ ತಮ್ಮ ಎಲ್ಲ ರಿಯಾಕ್ಟರುಗಳನ್ನೂ ಬಂದ್ ಮಾಡಲು ನಿರ್ಧರಿಸಿವೆ. ಅವುಗಳ ಸಮಾಧಿಗೆ ನಿರ್ಮಾಣ ವೆಚ್ಚಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆಂದು ಐರೋಪ್ಯ ಸಂಘ ಲೆಕ್ಕಾಚಾರ ಹಾಕಿ ಹೇಳಿದೆ. ಕಳೆದ ಮೇ 21ರಂದು ಸ್ವಿತ್ಸರ್ಲೆಂಡ್‌ನಲ್ಲಿ ನಡೆಸಿದ ರಾಷ್ಟ್ರವ್ಯಾಪಿ ಜನಮತ ಸಂಗ್ರಹದಲ್ಲಿ ಪರಮಾಣು ಯುಗಕ್ಕೆ ಅಂತ್ಯ ಹಾಡಬೇಕೆಂಬ ತೀರ್ಮಾನ ಪ್ರಕಟವಾಗಿದೆ. ಅದಕ್ಕೆ ಮೂರು ದಿನ ಮೊದಲು ನಮ್ಮ ಭಾರತ ಸರ್ಕಾರ ಇನ್ನೂ 10 ಹೊಸ ರಿಯಾಕ್ಟರುಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.

ಅಪಾಯ, ಅಪಾರ ವೆಚ್ಚ, ಅಸಂಖ್ಯ ತಾಂತ್ರಿಕ ತೊಡಕುಗಳು ಮತ್ತು ನಿಧಾನ ಗತಿಯ ನಿರ್ಮಾಣ ಇವೆಲ್ಲವೂ ಸುಧಾರಿತ ದೇಶಗಳನ್ನೇ ಹೈರಾಣುಗೊಳಿಸಿವೆ. ನಮ್ಮಲ್ಲೂ ಅವೆಲ್ಲ ಸಮಸ್ಯೆಗಳಿವೆ; ಜೊತೆಗೆ ಇನ್ನಷ್ಟು ವಿಶೇಷ ಸವಾಲುಗಳಿವೆ. ಭಾರತದಲ್ಲಿ ಯುರೇನಿಯಂ ಸಾಕಷ್ಟಿಲ್ಲ. ಥೋರಿಯಂ ಹೇರಳ ಇದೆಯಾದರೂ ಅದಿನ್ನೂ ನಮ್ಮ ಕೈಗೆ ಹತ್ತಿಲ್ಲ. ದಾಳಿಗೆ ಸಜ್ಜಾಗಿರುವ ವೈರಿಗಳು ಆಚೀಚೆ ಇದ್ದಾರೆ. ಯುದ್ಧಕ್ಕಾಗಿ ಹೂಂಕರಿಸುವವರ ಸಂಖ್ಯೆಯೂ ನಮ್ಮಲ್ಲಿ ಹೆಚ್ಚುತ್ತಿದೆ. ಅವರಲ್ಲಿ ಕಿಚ್ಚೆಬ್ಬಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳೂ ಹಪಹಪಿಸುತ್ತಿವೆ.

ಬಾಂಬ್‌ದಾಳಿ, ನೈಸರ್ಗಿಕ ವಿಕೋಪ ಅಥವಾ ತಾಂತ್ರಿಕ ವೈಫಲ್ಯದಿಂದ ನಮ್ಮ ರಿಯಾಕ್ಟರು ಸಿಡಿದರೆ ಸುತ್ತಲಿನ ಜನ ವಸತಿಯನ್ನು ತೆರವು ಮಾಡಲು ಬೇಕಾದ ತುರ್ತು ಸೌಕರ್ಯಗಳೂ ಅಷ್ಟಕ್ಕಷ್ಟೆ. ಅಂಬುಲೆನ್ಸ್ ಹಾಗಿರಲಿ, ತಳ್ಳುಗಾಡಿಗೂ ಗತಿಯಿಲ್ಲದ ಸರ್ಕಾರಿ ಆಸ್ಪತ್ರೆಗಳ ಕತೆ ನಮಗೆ ಗೊತ್ತಿದೆ. ಸ್ಥಾವರಗಳ ಸುತ್ತಲ ಸುರಕ್ಷತೆಗೆ ಬೇಕಿದ್ದ ಎಲ್ಲ ಸೌಕರ್ಯಗಳೂ ಇರುವಂಥ ದೇಶಗಳೇ ಪರಮಾಣು ಸಹವಾಸದಿಂದ ಕಂಗೆಟ್ಟು ಬದಲೀ ತಂತ್ರಜ್ಞಾನದತ್ತ ಹೊರಳುತ್ತಿವೆ.

ಈ ನಡುವೆ ಸೌರಶಕ್ತಿ ತಂತ್ರಜ್ಞಾನದ ದಕ್ಷತೆ ಹೆಚ್ಚುತ್ತಿದೆ; ಕಲ್ಲಿದ್ದಲಿಗಿಂತ ಸೌರಶಕ್ತಿಯೇ ಅಗ್ಗವಾಗುತ್ತಿದೆ. ಅದನ್ನು ಶೇಖರಿಸಿಡಬಲ್ಲ ಬ್ಯಾಟರಿಗಳಲ್ಲೂ ಕ್ರಾಂತಿಕಾರಿ ಸುಧಾರಣೆಗಳಾಗುತ್ತಿವೆ. ಆದರೂ ಪರಮಾಣು ಆಲಿಂಗನಕ್ಕೆ ರಾಜಕಾರಣಿಗಳ ತುಡಿತ ಏಕಿರಬಹುದು? ವಿದೇಶೀ ಒತ್ತಡವೆ, ಉದ್ಯಮಿಗಳ ಒತ್ತಡವೆ ಅಥವಾ ಅದಕ್ಕೆ ವೆಚ್ಚಾಗಲಿರುವ ಅದೆಷ್ಟೊ ಲಕ್ಷ ಕೋಟಿ ಧನಲಕ್ಷ್ಮಿಯ ಆಕರ್ಷಣೆಯೆ? ಅವನ್ನೆಲ್ಲ ಪ್ರಶ್ನಿಸಲೆಂದು ಜೂನ್ 25ರಂದು ಕೈಗಾ ಸಮೀಪ ಯಲ್ಲಾಪುರದಲ್ಲಿ ಸ್ವರ್ಣವಲ್ಲಿಯ ‘ಹಸುರು ಸಂತ’ ಗಂಗಾಧರೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಕೂಡಂಕುಲಂ, ಜೈತಾಪುರ, ಕಕ್ರಪಾರಾ, ಕೊವ್ವಾಡಾ, ಮೀಠಿ ವಿರ್ಡಿಗಳಲ್ಲಿ ಪರಮಾಣು ಯೋಜನೆಗಳ ವಿರುದ್ಧ ಜನಸಂಘಟನೆ ಮಾಡಿದ ಚಿಂತಕರು ಅಲ್ಲಿಗೆ ಆಗಮಿಸಲಿದ್ದಾರೆಂದು ಪರಿಸರವಾದಿ ಅನಂತ ಅಶೀಸರ ಹೇಳಿದ್ದಾರೆ.

ಪರಮಾಣು ಬಾಂಬ್‌ಗಳ ದಾಳಿಯನ್ನು ಅನುಭವಿಸಿ, ಪರಮಾಣು ಸ್ಥಾವರದ ಅತಿ ಘೋರ ದುರಂತವನ್ನೂ ಕಂಡ ಜಪಾನ್, ಭವಿಷ್ಯದ ಊರುಗೋಲೆನಿಸಿದ ರೋಬಾಟ್‌ಗಳನ್ನು ಪ್ರದರ್ಶನಕ್ಕೆ ಇಡುತ್ತಿದೆ. ಮೊದಲನೆಯ ದರ್ಜೆಯ ದೇಶದ ಜನರೆಲ್ಲ ರೋಬಾಟ್ ಆಳ್ವಿಕೆಯಲ್ಲಿ ಎರಡನೆಯ ದರ್ಜೆಯ ನಾಗರಿಕರಾಗಲು ಹೊರಟಂತೆ ಕಾಣುತ್ತಿದೆ. ಈ ಮಧ್ಯೆ ನಮ್ಮ ಹೊಸ ರಿಯಾಕ್ಟರುಗಳಿಂದಾಗಿ 33 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ದೇಶದ ಶಕ್ತಿ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಅದರಿಂದ ಮುಂದೆ ಇನ್ನೆಷ್ಟು ಸಾವಿರ ರೋಬಾಟ್‌ಗಳಿಗೆ ಉದ್ಯೋಗ ಭಾಗ್ಯ ಸಿಕ್ಕೀತೊ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.