ಬುಧವಾರ, ಏಪ್ರಿಲ್ 21, 2021
33 °C

ವೈರಾಗ್ಯ ಸುಲಭವಲ್ಲ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ತುಂಬ ದು:ಖವಾದಾಗ, ತೊಂದರೆಯಾದಾಗ ಎಲ್ಲರೂ? ಸಾಕಪ್ಪಾ ಜೀವನ, ಭಗವಂತಾ ಈ ಜಂಜಾಟದಿಂದ ಪಾರುಮಾಡು? ಎಂದು ಕೇಳುತ್ತೇವೆ. ಮರುಕ್ಷಣವೇ ಅದನ್ನು ಮರೆತು ಮತ್ತೆ ಜೀವನದ ಬೆದಕಾಟದಲ್ಲಿ ಹಾರಿಬಿಡುತ್ತೇವೆ. ಜೀವನದ ಭ್ರಮೆಯೇ ಅಂತಹದು. ಸಂಕಟಗಳಲ್ಲೇ ಸಂತೋಷವನ್ನು ಪಡುವುದು ನಮಗೆ ಅನಿವಾರ್ಯವಾದ ಕರ್ಮ.



ಮಹಾಭಾರತದ ಒಂದು ಪ್ರಸಂಗ ಇದನ್ನು ತುಂಬ ಸುಂದರವಾಗಿ ಚಿತ್ರಿಸುತ್ತದೆ. ಕುರುಕ್ಷೇತ್ರ ಯುದ್ಧ ಮುಗಿದಿದೆ.



ವೈಶಾಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ ದುರ್ಯೋಧನನನ್ನು ಹೊರಗೆಳೆದು, ತೊಡೆ ಮುರಿದು ಕೊಂದು ಇಡೀ ಕೌರವ ವಂಶವನ್ನು ನಿರ್ವಂಶಮಾಡಿಯಾಗಿದೆ. ಮುದುಕ, ಕುರುಡ ಧೃತರಾಷ್ಟ್ರ ಗಾಂಧಾರಿಯೊಡನೆ ಪಾಂಡವರೊಂದಿಗೇ ಬದುಕುವ ಪರಿಸ್ಥಿತಿ. ಯಾರು ತನ್ನ ವಂಶವನ್ನೇ ಸವರಿಬಿಟ್ಟರೋ ಅವರಿಂದಲೇ ಜೀವನ ಪೋಷಣೆ ಮಾಡಿಕೊಳ್ಳುವ ದಯನೀಯ ಸ್ಥಿತಿ. ಉಳಿದವರೆಲ್ಲರೂ ಧೃತರಾಷ್ಟ್ರನನ್ನು ಕರುಣೆಯಿಂದ ನೋಡಿಕೊಂಡರೂ ಭೀಮನಿಗೆ ಮಾತ್ರ ಹೊಟ್ಟೆಯಲ್ಲಿನ ಬೆಂಕಿ ಶಾಂತವಾಗಿಲ್ಲ. ಚುಚ್ಚಿ, ಚುಚ್ಚಿ ಮಾತನಾಡುತ್ತಾನೆ. ಹೀಗೆಯೇ ದೀನತೆಯಲ್ಲಿ ಹದಿನೈದು ವರ್ಷಗಳು ಕಳೆದು ಹೋಗುತ್ತವೆ.



ಒಂದು ಬಾರಿ ಮಕ್ಕಳ ಶ್ರಾದ್ಧಮಾಡಲು ಧೃತರಾಷ್ಟ್ರನ ಬಳಿ ಹಣವಿಲ್ಲ. ಧರ್ಮರಾಜನಲ್ಲಿ ಕೇಳಲು ಸಂಕೋಚ. ವಿದುರನಿಂದ ಹೇಳಿಸುತ್ತಾನೆ. ಆಗ ಭೀಮ ಘರ್ಜಿಸುತ್ತಾನೆ. ‘ದ್ರೌಪದಿಯನ್ನು ಜೂಜಿನಲ್ಲಿ ಒಡ್ಡಿದಾಗ ನನ್ನ ಮಗ ದುರ್ಯೋಧನ ಜೂಜು ಗೆದ್ದನೇ?’ ಎಂದು ತವಕಿಸಿ, ಗೆದ್ದಾಗ ಸಂತೋಷಪಟ್ಟ ಈ ಮುದುಕನಿಗೆ ಸಹಾಯ ಮಾಡುವುದೇ? ಅವನ ಮಕ್ಕಳು ಸ್ವರ್ಗಕ್ಕೆಲ್ಲಿ ಹೋಗುತ್ತಾರೆ? ಎಂದು ಬಿರುಮಾತು ನುಡಿಯುತ್ತಾನೆ. ಯುಧಿಷ್ಠಿರ ಅವನನ್ನು ಸಂತೈಸಿ ಧೃತರಾಷ್ಟ್ರನಿಗೆ ಸಾಕಷ್ಟು ಹಣ ಕೊಡುತ್ತಾನೆ.



ಇಷ್ಟು ವಯಸ್ಸಾದರೂ, ನೋವು ಉಂಡಿದ್ದರೂ ಧೃತರಾಷ್ಟ್ರನ ದೇಹ ಕರಗಲಿಲ್ಲ, ಮನದಲಲ್ಲಿ ವೈರಾಗ್ಯ ಮೂಡಲಿಲ್ಲ. ದಿನವೂ ಭೀಮಸೇನ ಇವನ ಕಿವಿಗೆ ಬೀಳುವಂತೆ ಕೊಂಕುಮಾತುಗಳನ್ನು ಆಡುತ್ತಲೇ ಇದ್ದ. ದಿನಾಲು ದೇಹಕ್ಕೆ ಮಾಲೀಸು ಮಾಡಿಸಿಕೊಳ್ಳುವಾಗ, ‘ಆ ನೂರು ಮಂದಿ ನೀಚ ಕೌರವರನ್ನು ಕೊಂದ ತೋಳುಗಳು ಯಾವುವು?’ ಎಂದು ಜೋರಾಗಿ ಕೇಳುವನು. ಆಗ ಸೇವಕರು, ‘ಅವು ನಿಮ್ಮವೇ ಸ್ವಾಮೀ’ ಎನ್ನುವರು. ಎಲ್ಲರೂ ಗಹಗಹಿಸಿ ನಗುವರು. ಇದು ಧೃತರಾಷ್ಟ್ರನ ಕಿವಿಗೆ ತಲುಪುವುದು. ಅವನಿಗೆ ದು:ಖವಾದರೂ ವೈರಾಗ್ಯ ಬರಲಿಲ್ಲ. ಕೊನೆಗೆ ಭೀಮ ತಾನೇ ಧೃತರಾಷ್ಟ್ರನಿಗೆ ಊಟ ಬಡಿಸಲು ಪ್ರಾರಂಭಿಸಿದ. ಅದೂ ಹೇಗೆ? ಅನ್ನವನ್ನು ಕೈಯಲ್ಲಿ ಉಂಡೆಮಾಡಿ ತನ್ನ ಬಲಗೈ  ಹೆಬ್ಬೆರಳಿನ ಮೇಲೆ ಉರುಳಿಸಿ ಶ್ರಾದ್ಧದಲ್ಲಿ ಸತ್ತವರಿಗೆ ಪಿಂಡ ಹಾಕುವವರಂತೆ ಹಾಕುತ್ತಿದ್ದ. ಕುರುಡನಿಗೆ ಹಾಕುವ ಕ್ರಿಯೆ ಕಾಣದಿದ್ದರೂ ಸುತ್ತಮುತ್ತಲಿನ ಜನ ನಕ್ಕಾಗ ಅರ್ಥವಾಗುತ್ತಿತ್ತು. ಇದನ್ನು ಕಂಡ ವಿದುರ ಅಣ್ಣನಿಗೆ ಹೇಳುತ್ತಾನೆ, ‘ಅಣ್ಣಾ ನಿನಗೆ ಇನ್ನೆಷ್ಟು ದಿನ ಬದುಕುವ ಆಸೆ? ವೈರಾಗ್ಯ ಬರಲಿಲ್ಲವಲ್ಲ. ಜೀವನದ ಆಸೆ ಎಷ್ಟು ದೊಡ್ಡದು? ಮನೆಗೆಲಸದವನಂತೆ, ಭೀಮ ಹಾಕಿದ ಪಿಂಡವನ್ನು ನಾಯಿಯಂತೆ ತಿನ್ನುತ್ತಿರುವೆಯಲ್ಲ’. ಯಾರ ಮನೆಗೆ ಬೆಂಕಿ ಹಾಕಿಸಿದೆಯೋ, ಯಾರ ಮನೆಯ ಸೊಸೆಯ ಸೀರೆ ಎಳೆಸಿದೆಯೋ ಅವರ ಆ ಮನೆಯ ತುತ್ತಿಗೆ ಕೈಚಾಚಿ ಕುಳಿತಿದ್ದೀಯಲ್ಲ. ಸಾಕು ಮಾಡು ಈ ಆಸೆ. ವೈರಾಗ್ಯಕ್ಕೆ ಮನಸ್ಸು ಮಾಡು’ ಆದರೆ ಧೃತರಾಷ್ಟ್ರನಿಗೆ ಅದು ಸುಲಭ ಸಾಧ್ಯವಲ್ಲ. ಅವನು ಜೀವನವನ್ನು (ರಾಷ್ಟ್ರವನ್ನು) ಬಿಗಿಯಾಗಿ ಹಿಡಿದವನು (ದೃತ).



ಕೊನೆಗೊಮ್ಮೆ ವೈರಾಗ್ಯ ಬಂತು. ತನ್ನ ತಪ್ಪಿನಿಂದಲೇ ಸರ್ವಾಪರಾಧವಾಯಿತೆಂದು ಧರ್ಮರಾಜನಲ್ಲಿ ಕ್ಷಮೆ ಕೇಳುತ್ತಾನೆ. ಕುಂತಿ, ಗಾಂಧಾರಿಯೊಂದಿಗೆ ವಾನಪ್ರಸ್ಥಕ್ಕೆ ಹೊರಟು ನಿಂತಾಗ ಹಸ್ತಿನಾವತಿಯ ಪ್ರಜೆಗಳಲ್ಲಿ ಕ್ಷಮೆಯಾಚಿಸುತ್ತಾನೆ.



ಕಾಡಿಗೆ ಹೋದ ಧೃತರಾಷ್ಟ್ರ ಒಂದು ದಿನ ಕಾಳ್ಗಿಚ್ಚಿಗೆ ಸಿಕ್ಕಿ ಅನಾಥ ಪಶುವಿನಂತೆ ಸಾಯುತ್ತಾನೆ. ಅವನಿಗೆ ಸಂಸ್ಕಾರ ಮಾಡಲು ಒಬ್ಬ ಮಗನೂ ಬದುಕಿಲ್ಲ. ಚಕ್ರವರ್ತಿಯಾಗಿ, ನೂರು ಮಕ್ಕಳ ತಂದೆಯಾಗಿ ಪ್ರಚಂಡನಾಗಿದ್ದರೂ ಹೊರಗಣ್ಣಿನೊಡನೆ ಒಳಗಣ್ಣನ್ನೂ ಕಳೆದುಕೊಂಡು, ಮೌಲ್ಯಗಳಿಂದ ವಿಮುಖನಾದದ್ದರಿಂದ ತನ್ನ ಜೀವನವನ್ನು ದುರಂತವಾಗಿಸಿಕೊಂಡು ಬಿಟ್ಟ.



ವೈರಾಗ್ಯ ಸುಲಭವಲ್ಲ. ಅಂಥ ನೋವುಗಳ ಬೆಂಕಿಯಲ್ಲಿ ಹಾಯ್ದು ಬಂದ ಧೃತರಾಷ್ಟ್ರನಿಗೇ ಅಷ್ಟು ಕಷ್ಟವಾಯಿತು ವೈ ರಾಗ್ಯ. ಮೋಹ ಹೆಚ್ಚಾದಷ್ಟೂ ವೈರಾಗ್ಯ ದೂರ ಹೋಗುತ್ತದೆ. ಪ್ರಪಂಚದಲ್ಲಿ ಹೆಚ್ಚು ವಯಸ್ಸಾದಂತೆ ಮೋಹಕ್ಕೆ ಅಂಟಿಕೊಳ್ಳುವುದು ಕಡಿಮೆಯಾದಷ್ಟೂ ನಮಗೇ ವಾಸಿ. ಆ ವಯಸ್ಸಿನಲ್ಲಿ ಸಾಮಾನ್ಯವಾಗಿ ಬರಬಹುದಾದ ನೋವುಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡುವುದು ವೈರಾಗ್ಯ. ಮನಸ್ಸು ಆ ಕಡೆಗೆ ನಡೆಯಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.