‘ಪ್ರಿಯ ಇಂದು, ಬಿಹಾರ ಸರ್ಕಾರವನ್ನು ವಜಾಗೊಳಿಸಿ, ಚುನಾವಣೆಗೆ ಅನುವು ಮಾಡಿಕೊಟ್ಟರೆ ಜನ ಶಾಂತರಾಗುತ್ತಾರೆ’.
1974ರ ನವೆಂಬರ್ 1ರಂದು ಇಂದಿರಾ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಮಾತಿಗೆ ಕುಳಿತಾಗ ಜೊತೆಯಲ್ಲಿ ಜಗಜೀವನ್ ರಾಮ್, ವೈ.ಬಿ. ಚವ್ಹಾಣ್ ಕೂಡ ಉಪಸ್ಥಿತರಿದ್ದರು. ಆದರೆ ಜೆ.ಪಿಯವರ ಸಲಹೆಯನ್ನು ಇಂದಿರಾ ಒಪ್ಪಲು ಸಿದ್ಧರಿರಲಿಲ್ಲ. ಚುನಾವಣೆಗೆ ಹೋದರೆ ಜನರ ಆಕ್ರೋಶ ಮತದಾನದಲ್ಲಿ ಪ್ರಕಟವಾಗಿ, ತಮಗೆ ಸೋಲು ನಿಶ್ಚಿತ ಎಂಬುದು ಅವರಿಗೆ ಮನವರಿಕೆಯಾಗಿತ್ತು.

ಈ ಮಾತುಕತೆಗೆ ಪೂರ್ವಭಾವಿಯಾಗಿ ಕೆಲವು ಘಟನೆಗಳು ನಡೆದಿದ್ದವು. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಚ್ಚಾಟ, ಅಶಿಸ್ತು ಜಾಹೀರಾಗಿತ್ತು. ಆಡಳಿತ ನಿಷ್ಕ್ರಿಯಗೊಂಡು, ಅಧಿಕಾರಿಗಳ ದರ್ಪ ಮಿತಿಮೀರಿತ್ತು. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಜಿಗಿದಿದ್ದವು. ತಮಗೆ ನಿಷ್ಠರಾದವರನ್ನು ಅಧಿಕಾರದಲ್ಲಿ ಕೂರಿಸಿ, ಪ್ರಾಮಾಣಿಕರನ್ನು ಇಂದಿರಾ ಗಾಂಧಿ ಮೂಲೆಗಟ್ಟುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಮುಖ್ಯ ನ್ಯಾಯಮೂರ್ತಿಗಳ ಆಯ್ಕೆಯಲ್ಲೂ ಅನುಭವ, ಅರ್ಹತೆಗಳಿಗಿಂತ ಭಟ್ಟಂಗಿತನಕ್ಕೇ ಪ್ರಾಶಸ್ತ್ಯ ಸಿಗುತ್ತಿದೆ ಎಂದು ಬೆನ್ನುಗಟ್ಟಿಯಿದ್ದ ಪತ್ರಕರ್ತರು ಬರೆದರು. ಇದೇ ವೇಳೆಗೆ ಅಹಮದಾಬಾದ್ನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಸ್ಟೆಲ್ ಶುಲ್ಕ ಹೆಚ್ಚಿಸಿದ್ದರ ವಿರುದ್ಧ ಪ್ರತಿಭಟನೆಗೆ ಇಳಿದರು. ಪ್ರತಿಭಟನೆ ಹಿಂಸಾರೂಪ ತಾಳಿತು. ಬೆಲೆ ಏರಿಕೆಯ ಬಿಸಿ ಕಾರ್ಮಿಕರು, ಮಧ್ಯಮ ವರ್ಗದ ಜನರನ್ನೂ ಪ್ರತಿಭಟನೆಗೆ ಧುಮುಕುವಂತೆ ಮಾಡಿತು. ಆಗ ಹುಟ್ಟಿಕೊಂಡದ್ದು ನವ ನಿರ್ಮಾಣ ಯುವಕ ಸಮಿತಿ.

ಹೀಗೆ ಆರಂಭಗೊಂಡ ಸಣ್ಣ ಪ್ರತಿಭಟನೆಯೊಂದು ತಿಂಗಳೊಪ್ಪತ್ತಿನಲ್ಲಿ ನವನಿರ್ಮಾಣ ಆಂದೋಲನವಾಗಿ, ಗುಜರಾತಿನಾದ್ಯಂತ ಹಬ್ಬಿತು. ಇಂದಿರಾ ಗಾಂಧಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಚಿಮನ್ ಭಾಯ್ ಪಟೇಲ್ ರಾಜೀನಾಮೆ ಪಡೆದರು. ರಾಷ್ಟ್ರಪತಿ ಆಡಳಿತ ಹೇರಲಾಯಿತು. 167 ಶಾಸಕರಲ್ಲಿ 95 ಶಾಸಕರು ರಾಜೀನಾಮೆ ಇತ್ತರು. ಮೊರಾರ್ಜಿ ದೇಸಾಯಿ ವಿಧಾನಸಭೆ ವಿಸರ್ಜನೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕುಳಿತರು. ಗುಜರಾತ್ ವಿಧಾನಸಭೆ ವಿಸರ್ಜನೆಗೊಂಡು, ಚುನಾವಣೆಯ ದಿನಾಂಕ ಘೋಷಣೆಯಾಯಿತು.

ಗುಜರಾತ್ ವಿದ್ಯಾರ್ಥಿ ಚಳವಳಿಯಿಂದ ಸ್ಫೂರ್ತಿ ಪಡೆದ ವಿದ್ಯಾರ್ಥಿ ಸಂಘಟನೆಗಳು ಬಿಹಾರದಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ರೂಪಿಸಿದವು. ಚಳವಳಿಗೆ ಜಯಪ್ರಕಾಶ್ ನಾರಾಯಣ್ ಬೆಂಬಲ ವ್ಯಕ್ತಪಡಿಸಿದಾಗ, ಆಂದೋಲನದ ಶಕ್ತಿ ವೃದ್ಧಿಯಾಯಿತು. 1974ರ ಏಪ್ರಿಲ್ನಲ್ಲಿ ಪಟ್ನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜೆ.ಪಿ ‘ಸಂಪೂರ್ಣ ಕ್ರಾಂತಿ’ಗೆ ಕರೆಕೊಟ್ಟರು. ‘ವ್ಯವಸ್ಥೆಯ ಶುದ್ಧೀಕರಣ ಮತ್ತು ಸಮಾಜ ಸುಧಾರಣೆಗೆ ಒಗ್ಗಟ್ಟಿನಿಂದ, ಪ್ರಜಾಪ್ರಭುತ್ವದ ಪರಿಧಿಯೊಳಗೆ, ಅಹಿಂಸಾತ್ಮಕವಾಗಿ ಆಗ್ರಹಿಸಬೇಕಿದೆ’ ಎಂದರು. ಬಿಹಾರ ಸರ್ಕಾರವನ್ನು ವಜಾಗೊಳಿಸಬೇಕು ಎಂಬ ಒತ್ತಾಯ ಅವರ ಮಾತಿನಲ್ಲಿತ್ತು. ಆದರೆ ಇಂದಿರಾ ಸರ್ಕಾರ, ಜೆ.ಪಿ ಮಾತಿಗೆ ಸೊಪ್ಪುಹಾಕಲಿಲ್ಲ. ರಾಜ್ಯದಿಂದ ರಾಜ್ಯಕ್ಕೆ ವಿಸ್ತರಿಸುತ್ತಿದ್ದ ಚಳವಳಿಯನ್ನು ಉಪೇಕ್ಷಿಸುವಂತೆಯೂ ಇರಲಿಲ್ಲ. ಆಗಲೇ ಇಂದಿರಾ ಗಾಂಧಿ, ಜೆ.ಪಿ ಅವರೊಂದಿಗೆ ಮಾತುಕತೆಗೆ ಕುಳಿತದ್ದು.

ತಮ್ಮ ಸಲಹೆಯನ್ನು ತಿರಸ್ಕರಿಸಿದ್ದರಿಂದ ಜೆ.ಪಿ ಸಿಟ್ಟಾದರು. ಆ ನಂತರ ಇಂದಿರಾ ಮತ್ತು ಜೆ.ಪಿಯವರ ನಡುವೆ ಮೊದಲಿನ ಬಾಂಧವ್ಯ ಉಳಿಯಲಿಲ್ಲ. ಅದುವರೆಗೂ ಪ್ರೀತಿ ಆದರಗಳಿಂದ ನಡೆಯುತ್ತಿದ್ದ ಉಭಯ ಕುಶಲೋಪರಿ, ಬಹಿರಂಗ ಸಭೆಗಳಲ್ಲಿನ ಆರೋಪ, ಪ್ರತ್ಯಾರೋಪಗಳಾಗಿ ಮಾರ್ಪಟ್ಟವು. ‘ಶ್ರೀಮಂತರ, ಭ್ರಷ್ಟರ ಸಖ್ಯ ಬೆಳೆಸಿದವರೇ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಇಂದಿರಾ ಕುಟುಕಿದರು. ಮತ್ತೊಂದೆಡೆ ರೈಲ್ವೆ ಕಾರ್ಮಿಕರು ಮುಷ್ಕರ ಹೂಡಿದ್ದರೂ, ಸರ್ಕಾರ ಕಾರ್ಮಿಕರ ಮಾತುಗಳಿಗೆ ಕಿವಿಗೊಡುವ ಸೌಜನ್ಯವನ್ನೂ ತೋರದೆ, ಸಾವಿರಾರು ಕಾರ್ಮಿಕರನ್ನು ಬಂಧಿಸಿತು. ಕಾರ್ಮಿಕ ಚಳವಳಿ ನೇತೃತ್ವವನ್ನು, ಮತ್ತೊಬ್ಬ ಮೇರು ನಾಯಕ ಜಾರ್ಜ್ ಫರ್ನಾಂಡಿಸ್ ವಹಿಸಿದ್ದರು. ಜೆ.ಪಿ ಆಂದೋಲನದ ಜೊತೆಗೆ ಇಂದಿರಾ ಸರ್ಕಾರಕ್ಕೆ, ಜಾರ್ಜ್ ತಲೆನೋವಾಗಿ ಪರಿಣಮಿಸಿದರು.

ಹೀಗೆ ಹಲವು ಕಾರಣಗಳಿಂದ ಕೇಂದ್ರ ಸರ್ಕಾರದ ವಿರುದ್ಧ, ದೇಶವ್ಯಾಪಿ ಭುಗಿಲೆದ್ದ ಜನರ ಸಿಟ್ಟನ್ನು ನಿಭಾಯಿಸಲು ಹೆಣಗಾಡುತ್ತಿದ್ದ ಇಂದಿರಾ ಗಾಂಧಿ ಅವರಿಗೆ, ಇರಿಸುಮುರಿಸು ಉಂಟುಮಾಡುವ ಮತ್ತೊಂದು ಸಂಗತಿಯೂ ಘಟಿಸಿತು. 1971ರ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾ ವಿರುದ್ಧ, ಜನತಾ ಪಾರ್ಟಿ ಲೋಕಬಂಧು ರಾಜ್ ನಾರಾಯಣ್ ಅವರನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಇಂದಿರಾ ಗಾಂಧಿ ಗೆದ್ದಿದ್ದರು. ‘ಇಂದಿರಾ ಗಾಂಧಿ, ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು, ಅಕ್ರಮದಿಂದ ಜಯ ಸಾಧಿಸಿದ್ದಾರೆ’ ಎಂದು ರಾಜ್ನಾರಾಯಣ್ ನ್ಯಾಯಾಲಯದ ಮೊರೆ ಹೋದರು. ಜಗಮೋಹನ್ ಲಾಲ್ ಸಿನ್ಹಾ ನ್ಯಾಯಪೀಠದಲ್ಲಿದ್ದರು. ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಕಟಕಟೆಯಲ್ಲಿ ನಿಲ್ಲಬೇಕಾದ ಪ್ರಸಂಗ ಎದುರಾಯಿತು!

ಅಲಹಾಬಾದ್ ಉಚ್ಚನ್ಯಾಯಾಲಯ, 1975ರ ಜೂನ್ 12ರಂದು ತೀರ್ಪಿತ್ತು, ಇಂದಿರಾ ಗಾಂಧಿ ಚುನಾವಣೆಯ ವೇಳೆ ಸ್ಥಳೀಯ ಆಡಳಿತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಯಶಪಾಲ್ ಕಪೂರ್ ಎಂಬ ಅಧಿಕಾರಿಯನ್ನು ಬಳಸಿಕೊಂಡಿದ್ದೂ ಅಲ್ಲದೇ, ಪ್ರಚಾರ ಸಭೆಗಳಿಗೆ ಉಚಿತವಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾದ್ದರಿಂದ, ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ, ಆರು ವರ್ಷಗಳ ಕಾಲ ಚುನಾವಣಾ ಸ್ಪರ್ಧೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿತು.

ಇಂದಿರಾ ನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತವನ್ನು ಪ್ರತಿಭಟಿಸುತ್ತಿದ್ದ ವಿರೋಧ ಪಕ್ಷಗಳಿಗೆ, ಇಂದಿರಾರನ್ನು ಅಧಿಕಾರದಿಂದ ಅಲ್ಲಾಡಿಸುವ ಭ್ರಮೆಗಳಿದ್ದವು. ಆದರೆ ವಾಸ್ತವದಲ್ಲಿ ಅದು ಸುಲಭವಲ್ಲ ಎಂಬುದು ತಿಳಿದಿತ್ತು. ವಿರೋಧ ಪಕ್ಷದಲ್ಲೇ ಒಬ್ಬರ ಮೇಲೆ ಮತ್ತೊಬ್ಬರನ್ನು ಛೂಬಿಟ್ಟು, ಚಳವಳಿಯನ್ನು ಹಾದಿತಪ್ಪಿಸುವ ಚಾಣಾಕ್ಷತನ ಇಂದಿರಾ ಅವರಿಗಿದೆ ಎಂಬುದರ ಅರಿವಿತ್ತು. ಹೀಗಾಗಿ ರಾಜ್ ನಾರಾಯಣ್ ಪ್ರಕರಣದ ನ್ಯಾಯಾಲಯದ ತೀರ್ಪು ವಿರೋಧ ಪಕ್ಷಗಳಿಗೆ ವರವಾಗಿ ಪರಿಣಮಿಸಿತು. ಅಷ್ಟೂ ದಿನದ ಆರೋಪಗಳು, ಘೋಷಣೆಗಳು ಮೂಲೆಗೆ ಸರಿದು ತೀರ್ಪಿಗೆ ತಲೆಬಾಗಿ ಹುದ್ದೆ ತ್ಯಜಿಸಬೇಕು ಎಂಬ ಬೇಡಿಕೆ ಒಕ್ಕೊರಲಿನಿಂದ ಬಂತು. ಮೆರವಣಿಗೆಗಳಲ್ಲಿ ಹೊಸ ಘೋಷಣೆಗಳು ಮೊಳಗಿದವು.

ಇಂದಿರಾ, ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ಅಧಿಕಾರತ್ಯಾಗದ ಹೊರತು ದಾರಿಕಾಣದೆ ಕುಳಿತಾಗ, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವಕಾಂತ್ ಬರೂಹ ‘ಮೊಕದ್ದಮೆ ಇತ್ಯರ್ಥವಾಗುವವರೆಗೆ ನೀವು ಪಕ್ಷದ ಅಧ್ಯಕ್ಷರಾಗಿರಿ, ನೀವು ಒಪ್ಪುವುದಾದರೆ ನಾನು ಪ್ರಧಾನಿ ಪಟ್ಟ ನಿರ್ವಹಿಸಬಲ್ಲೆ’ ಎಂದು ಅಂಜುತ್ತಲೇ ಹೇಳಿದರು! ಬರೂಹ ಒಬ್ಬರೇ ಅಲ್ಲ, ಜಗಜೀವನ್ ರಾಮ್, ಯಂಗ್ ಟರ್ಕ್ ಚಂದ್ರಶೇಖರ್ ತರಹದ ಅನೇಕರೂ ಪ್ರಧಾನಿ ಪಟ್ಟದ ಕನಸು ಕಾಣುತ್ತಾ ಕುಳಿತಿದ್ದರು. ಆಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡದ್ದು ಸಂಜಯ್ ಗಾಂಧಿ!

‘ನನ್ನ ತಾಯಿ ಒಂದು ದಿನದ ಮಟ್ಟಿಗೂ ಅಧಿಕಾರದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ’ ಎನ್ನುವ ಮೂಲಕ, ಸಂಜಯ್ ಗಾಂಧಿ ಒಂದೇ ಮಾತಿನಲ್ಲಿ ಹಲವು ಕಾಂಗ್ರೆಸ್ ನಾಯಕರ ಕನಸುಗಳನ್ನು ಪುಡಿ ಮಾಡಿದ್ದರು. ತಮ್ಮ ಆತುರದ ಮತ್ತು ಅವಿವೇಕದ ನಡೆಗಳಿಂದ ಅದಾಗಲೇ ಸಮಸ್ಯೆಗೆ ಸಿಲುಕಿದ್ದ ಸಂಜಯ್ ಗಾಂಧಿಯವರಿಗೆ, ತಮ್ಮ ರಕ್ಷಣೆಗೆ, ತಾಯಿ ಪ್ರಧಾನಿ ಪಟ್ಟದಲ್ಲಿ ಇರಲೇಬೇಕಾದ ಅವಶ್ಯಕತೆಯಿತ್ತು. ಇಂದಿರಾರ ಆಪ್ತರಾಗಿದ್ದ ಸಿದ್ಧಾರ್ಥಶಂಕರ್ ರೇ, ತುರ್ತುಪರಿಸ್ಥಿತಿಯ ಘೋಷಣೆ ಹಲವು ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಎಂದು ಬೆರಳು ತೋರಿದರು. 1975, ಜೂನ್ 25ರ ರಾತ್ರಿ ಇಂದಿರಾರ ಕೈಗೊಂಬೆ ಎನಿಸಿಕೊಂಡಿದ್ದ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ತುರ್ತುಪರಿಸ್ಥಿತಿಯ ಆದೇಶಕ್ಕೆ ನಿದ್ದೆಗಣ್ಣಿನಲ್ಲೇ ಅಂಕಿತ ಹಾಕಿದರು. ಅಂದಿನಿಂದ ಮುಂದಿನ 21 ತಿಂಗಳ ಕಾಲ ದೇಶ ಆಳಿದವರು ಸಂಜಯ್ ಗಾಂಧಿ!
ಆ ವೇಳೆಯಲ್ಲಿ ಅವರು ಜಾರಿಗೆ ತಂದ ಯೋಜನೆಗಳು ದೇಶದಾದ್ಯಂತ ಸಂಚಲನ ಉಂಟುಮಾಡಿದವು.

ತುರ್ತುಪರಿಸ್ಥಿತಿ ಎಂಬ ಆಯುಧವನ್ನು ಕೇವಲ ಇಂದಿರಾ ಮತ್ತು ಸಂಜಯ್ ಗಾಂಧಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಂಡದ್ದಲ್ಲ. ಹಲವು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ತಮ್ಮ ವೈರಿಗಳನ್ನು ಹಣಿಯಲು ಆ ಸಮಯವನ್ನು ಬಳಸಿಕೊಂಡರು. ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಬನ್ಸಿಲಾಲ್, ಜೆ.ಪಿ ಅವರಿದ್ದ ಜೈಲಿನ ಅಧಿಕಾರಿಗೆ ಕರೆಮಾಡಿ ‘ಜೆ.ಪಿ ತಮ್ಮನ್ನು ಒಬ್ಬ ಹೀರೊ ಎಂದು ಭಾವಿಸಿದ್ದಾರೆ. ತಕ್ಕ ಶಾಸ್ತಿ ಮಾಡಿ. ಬೆಳಗಿನಿಂದ ಸಂಜೆಯವರೆಗೆ ಜೈಲಿನ ಉದ್ಯಾನವನದಲ್ಲೂ ಅವರು ಓಡಾಡಬಾರದು. ಇತರರ ಭೇಟಿ, ದೂರವಾಣಿ ಸಂಪರ್ಕ ಯಾವುದೂ ಸಾಧ್ಯವಾಗಬಾರದು. ಅವರಿಗೆ ನಾವೇನೆಂಬುದು ತಿಳಿಯಲಿ’ ಎಂಬ ಮೌಖಿಕ ಆದೇಶವಿತ್ತಿದ್ದರಂತೆ!

ಹೀಗೆ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಗಾಳಿಗೆ ತೂರಿದ ತುರ್ತುಪರಿಸ್ಥಿತಿಯನ್ನು ಬಹುಪಾಲು ಮಂದಿ ವಿರೋಧಿಸಿದರೂ, ವ್ಯವಸ್ಥೆಯನ್ನು ಸರಿದಾರಿಗೆ ತರಲು ತುರ್ತುಪರಿಸ್ಥಿತಿಯ ಅಗತ್ಯವಿತ್ತು ಎಂದು ಪ್ರತಿಪಾದಿಸಿದವರೂ ಇದ್ದರು. ಅದುವರೆಗೂ ತೂಕಡಿಸುತ್ತಿದ್ದ ವ್ಯವಸ್ಥೆ, ದಿಗ್ಗನೆ ಎದ್ದು ಕುಳಿತುಕೊಂಡಿತು, ಬಸ್ಸುಗಳು, ರೈಲುಗಳು ನಿಗದಿತ ಸಮಯದಲ್ಲಿ ಸಂಚರಿಸುತ್ತಿದ್ದವು. ಸರ್ಕಾರಿ ನೌಕರರು ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ನಿರಂತರವಾಗಿ ನಡೆಯುತ್ತಿದ್ದ ಹರತಾಳ, ಪ್ರತಿಭಟನೆಗಳು ಒಮ್ಮೆಲೇ ಸ್ಥಗಿತವಾದವು.

ದೇಶದ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಿತು. ಆಲಸ್ಯ, ಉಡಾಫೆ ಮೈಗೂಡಿದ್ದ ದೇಶಕ್ಕೆ, ಕೆಲಕಾಲವಾದರೂ ಬಲವಂತದ ಶಿಸ್ತು ಅಗತ್ಯ ಎನಿಸಿತ್ತು, ತುರ್ತುಪರಿಸ್ಥಿತಿ ಅದನ್ನು ಸಾಧ್ಯವಾಗಿಸಿತು ಎಂಬ ಅಭಿಪ್ರಾಯವೂ ಹಲವರಲ್ಲಿತ್ತು. ಹಾಗಾಗಿಯೇ ‘ಇದು ಅನುಶಾಸನ ಪರ್ವ’ ಎಂದು ಗಾಂಧೀವಾದಿ ವಿನೋಬಾ ಭಾವೆ ಇಂದಿರಾರ ನಡೆಯನ್ನು ಸಮರ್ಥಿಸಿದ್ದರು. ಹಲವು ಉದ್ಯಮಿಗಳಂತೆ ಜೆ.ಆರ್.ಡಿ ಟಾಟಾ ಕೂಡ ತುರ್ತುಪರಿಸ್ಥಿತಿಯನ್ನು ಅನುಮೋದಿಸಿದ್ದರು.

ಅದೇನೇ ಇರಲಿ, ತುರ್ತುಪರಿಸ್ಥಿತಿ ಜನಮಾನಸದಲ್ಲಿ ಅಚ್ಚೊತ್ತಿದ್ದಂತೂ ಸತ್ಯ. ಹಾಗಾಗಿಯೇ ಪ್ರತಿವರ್ಷ ಜೂನ್ ಕೊನೆ ವಾರ ಎದುರಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಅಸ್ಮಿತೆಯನ್ನೇ ಅಲುಗಾಡಿಸಿದ ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯದ ಜೊತೆಗೆ, ಬಿಸಿರಕ್ತದ, ದುಡುಕು ಬುದ್ಧಿಯ, ವಿಕ್ಷಿಪ್ತ ವ್ಯಕ್ತಿತ್ವದ ಸಂಜಯ್ ಗಾಂಧಿ ಕೂಡ ಸ್ಮೃತಿಗೆ ಬರುತ್ತಾರೆ. ಈ ಜೂನ್ 25ಕ್ಕೆ ತುರ್ತುಪರಿಸ್ಥಿತಿ ಎಂಬ ಭಾರತ ಇತಿಹಾಸದ ವಿಲಕ್ಷಣ ಅಧ್ಯಾಯಕ್ಕೆ 40 ತುಂಬಿದರೆ, ಜೂನ್ 23ಕ್ಕೆ ಸಂಜಯ್ ಗಾಂಧಿ ತೀರಿಕೊಂಡು 34 ವರ್ಷಗಳಾಗುತ್ತವೆ.

ಈ 40 ವರ್ಷಗಳ ನಂತರವೂ, ತಾವು ಕಂಡ ತುರ್ತುಪರಿಸ್ಥಿತಿಯ ವಿವರಗಳನ್ನು, ಅದರ ಒಳಿತು ಕೆಡಕುಗಳನ್ನು, ಆ ಸಂದರ್ಭದಲ್ಲಿ ಹುಟ್ಟಿಕೊಂಡ ಜೋಕು, ಸಂಜಯ ಗಾಂಧಿಯವರ ಟೀಕು ಟಾಕು, ಧಿಮಾಕು, ಇಂದಿರಾರ ಅಳುಕು, ಅಸಹಾಯಕತೆ, ಪುತ್ರ ವ್ಯಾಮೋಹ, ಅಧಿಕಾರಿಗಳ ದೌರ್ಜನ್ಯ ಇತ್ಯಾದಿ ವಿವರಗಳನ್ನು, ತಾಜಾ ಎಂಬಂತೆ ಮೆಲುಕು ಹಾಕುವವರು ಅನೇಕ ಮಂದಿ ಇದ್ದಾರೆ. ಆ ದಿನಗಳಲ್ಲಿ ತಮ್ಮ ನಾಯಕತ್ವ ಗುಣಕ್ಕೆ ಸಾಣೆ ಹಿಡಿದವರು, ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಾಯಕರೆನಿಸಿಕೊಂಡಿದ್ದಾರೆ.

ಭೂಗತರಾಗಿದ್ದುಕೊಂಡು ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಬರೆದವರು, ಮಾರುವೇಷದಲ್ಲಿ ಪತ್ರಿಕೆ, ಕರಪತ್ರಗಳನ್ನು ಮನೆಮನೆಗೆ ಹಂಚಿದವರು, ಇಂದಿಗೂ ತಮ್ಮ ನೆನಪಿನ ಬುತ್ತಿ ಬರಿದುಮಾಡಿಕೊಂಡಿಲ್ಲ. ಮೊನ್ನೆ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ‘ತುರ್ತುಪರಿಸ್ಥಿತಿ ಸಮಯದಲ್ಲಿ ಕೃಷ್ಣನ ಜನ್ಮಸ್ಥಾನದಲ್ಲೇ, ಭಾಗವತಾದಿ ಪ್ರವಚನಗಳನ್ನು ಆರಂಭಿಸಿದೆ’ ಎಂದು ನೆನಪು ಮಾಡಿಕೊಳ್ಳುತ್ತಿದ್ದರು.

ಒಟ್ಟಿನಲ್ಲಿ, ಜೆ.ಪಿಯವರ ಸಂಪೂರ್ಣ ಕ್ರಾಂತಿಗೆ ಸರ್ವಾಧಿಕಾರವೇ ಉತ್ತರ ಎಂದರು ಇಂದಿರಾ. ಆದರೆ ತತ್ತರಿಸಿದ್ದು ಮಾತ್ರ ಇಡೀ ದೇಶ. ಇತ್ತ ಸಂಪೂರ್ಣ ಕ್ರಾಂತಿಯೂ ಯಶ ಕಾಣಲಿಲ್ಲ, ಸರ್ವಾಧಿಕಾರಿ ಧೋರಣೆಯೂ ಮಾನ್ಯವಾಗಲಿಲ್ಲ. ಆಂತರಿಕ ಪ್ರಜಾಪ್ರಭುತ್ವವನ್ನು ಬಿಟ್ಟುಕೊಟ್ಟ ಪಕ್ಷ, ವ್ಯಕ್ತಿ ಕೇಂದ್ರಿತವಾಗುವ ಆಡಳಿತ, ಶಿಸ್ತು, ಸಂಯಮ, ಆಶಯ ಮರೆತ ಆಂದೋಲನ, ಅನಾಹುತಗಳಿಗೆ, ಗದ್ದಲಕ್ಕೆ, ಅರಾಜಕತೆಗೆ ಕಾರಣವಾಗಬಲ್ಲದು, ಸಮಾಜವನ್ನು ಕತ್ತಲೆಗೆ ದೂಡಬಲ್ಲದು ಎಂಬುದು ವೇದ್ಯವಾಯಿತು. ತುರ್ತುಪರಿಸ್ಥಿತಿ ಎಂಬ ಇತಿಹಾಸದ ಕರಾಳ ಅಧ್ಯಾಯ ನಿನ್ನೆಗಷ್ಟೇ ಅಲ್ಲ, ಇಂದಿಗೂ ಮತ್ತು ನಾಳೆಗೂ ಪಾಠ.
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.