ಶನಿವಾರ, ಮೇ 8, 2021
24 °C

ಸಬಲೀಕರಣದ ಸವಾಲುಗಳು...

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಸಬಲೀಕರಣದ ಸವಾಲುಗಳು...

ಸರ್ವರ ಸಬಲೀಕರಣ ಇಂದಿನ ಜಗತ್ತಿನ ಬಹು ದೊಡ್ಡ ಹೊಣೆಗಾರಿಕೆ. ನಾವೆಲ್ಲರೂ ಹೆಚ್ಚು ಹಣವಂತ­ರಾಗಿ, ಹೆಚ್ಚು ಹೆಚ್ಚು ಸುಖ–-ಸಂತೋಷಗಳನ್ನು ಅನುಭವಿಸಬೇಕೆಂಬ ಸಾರ್ವ­ತ್ರಿಕ ಆಶಯ ಆಧುನಿಕ ಜಗತ್ತಿನ ಕೊಡುಗೆ. ‘ಸರ್ವರಿಗು ಸಮಬಾಳು, ಸರ್ವರಿಗು ಸಮ­ಪಾಲು’ ಎಂಬ ಮಹಾವಾಕ್ಯ ಮಾನವನ ಮನದಲ್ಲಿ ಮೂಡಿ, ಭಾಷೆಯಲ್ಲಿ ರೂಪುತಾ­ಳಿದ್ದು ಶತಶತಮಾನಗಳ ಅಸಂಖ್ಯ ಜೀವಕೋಟಿ­ಗಳ ಹಂತಹಂತವಾದ ಮಾನಸಿಕ ಮತ್ತು ಸಾಮಾಜಿಕ ವಿಕಾಸದ ಫಲವಾಗಿ.ಆಧುನಿಕಪೂರ್ವ ನಾಗರಿಕತೆಗಳಿಗೆ ಈ ಉದ್ದೇಶ­ವಿರಲಿಲ್ಲ. ಅವುಗಳ ಉದ್ದೇಶ ಕೆಲವರ ಸಬಲೀಕರಣ. ಹಲವರ ದುರ್ಬ­ಲೀಕ­ರಣ. ಈ ದುರ್ಬಲೀಕರಣವನ್ನು ಮರೆಸಲು ದಾನ-ಧರ್ಮಗಳನ್ನು ಆಶ್ರಯಿಸಲಾ­ಯಿತು. ಇಂಗ್ಗೆಂಡಿನ ಅನುಭಾವಿ ಕವಿ ವಿಲಿಯಂ ಬ್ಲೇಕ್ ಹೇಳಿದ:

ಇಷ್ಟು ಮಂದಿ ಬಡವರು ಇರದೆ ಹೋದರೆ ದಾನಧರ್ಮ ಇತ್ಯಾದಿ ಎಲ್ಲಿರುತ್ತವೆ?ಕೆಲವು ವಿಶೇಷ ವ್ಯಕ್ತಿಗಳ, ಗುಂಪುಗಳ, ವಂಶಗಳ, ಸಮುದಾಯಗಳ, ಧರ್ಮಗಳ ಏಳಿಗೆಯೇ ಅಂದಿನ ಪರಮೋದ್ದೇಶವಾಗಿತ್ತು. ಆ ಅಳಲಿನ ಯುಗಗಳ ಅನುಕೂಲಕ್ಕಾಗಿ ಧರ್ಮ­ಗಳು, ಸಿದ್ಧಾಂತಗಳು ಹುಟ್ಟಿಕೊಂಡವು. ಸುಖ-ದುಃಖಗಳ ಸಂಸಾರವೇ ಮಾಯೆಯೆಂದರು ಕೆಲವರು. ಇವೆಲ್ಲವೂ ಕೊಳಕೆಂದರು ಇನ್ನು ಕೆಲ­ವರು. ನೀವೆಲ್ಲಾ ಪಾಪಿಗಳೆಂದರು ಇನ್ನು ಕೆಲವರು. ಬಹುಸಂಖ್ಯಾತ ಜನತೆಗೆ ಸಮಾಜದ ಸ್ವಾರ್ಥಪರ ನಾಯಕರು ಸ್ವಾರ್ಥನಿರಾಕರಣೆ, ಸಂಯಮ ಮತ್ತು ಶರಣಾಗತಿಗಳ ಮದ್ದು ಹಾಕಿ ಸಾಮಾಜಿಕ ಶೋಷಣಾಯಂತ್ರವನ್ನು ಶತಶತ­ಮಾ­ನಗಳ ಕಾಲ ತಿರುಗಿಸುತ್ತಲೇ ಹೋದರು. ಜನತೆ ಇದನ್ನು ಬಹುಮಟ್ಟಿಗೆ ನಂಬಿ ಕೆಟ್ಟಿದ್ದು ನಿಜವಾದರೂ ಸುಖಾಪೇಕ್ಷೆ ಜೀವದ ಅಗತ್ಯವಾಗಿ­ರುವುದರಿಂದ ಎದೆಗಾರಿಕೆಯುಳ್ಳ ಕೆಲವರು ಅನಿವಾರ್ಯವಾಗಿ ಯಜಮಾನ ಮೌಲ್ಯಗಳ ವಿರುದ್ಧ ಪ್ರಶ್ನೆ ಎತ್ತಿದರು, ದಂಗೆಯೆದ್ದರು, ಪರ್ಯಾಯ ಕನಸುಗಳನ್ನು ಕಟ್ಟಿದರು. ಶೋಷ­ಣಾ ಯಂತ್ರ ಅವರನ್ನು ಬಲಿ ತೆಗೆದು­ಕೊಂಡ ಮೇಲೂ ಬಿಡುಗಡೆಯ ಅವರ ಕನಸು­ಗಳು ಉಳಿದುಕೊಂಡವು, ಬೆಳೆಯುತ್ತಾ ಹೋದವು.ಸುಖ-ಸಂತೋಷಗಳ ಆ ಆದಿಮ ಆಶಯಗಳನ್ನು ಸಾಕಾರಗೊಳಿಸಬಲ್ಲ ಭೌತಿಕ ಸನ್ನಿವೇಶಗಳನ್ನು, ತಂತ್ರಜ್ಞಾನಗಳನ್ನು  ಆಧುನಿಕ ನಾಗರಿಕತೆ ನಿರ್ಮಾಣ ಮಾಡಿದೆ. ಸಮಾಜ­ವಾದದ, ಪ್ರಜಾ­ಪ್ರಭುತ್ವದ ಸರ್ವರ ಸರ್ವಾಂ­ಗೀಣ ವಿಕಾಸದ ಮೂಲಮಂತ್ರ ಎಲ್ಲೆಡೆಯಲ್ಲೂ ಮೊರೆಯ­ತೊಡ­ಗಿದ್ದು ಈ ಸಂದರ್ಭದಲ್ಲೇ.ಸರ್ವರ ಸರ್ವಾಂಗೀಣ ಸಬಲೀಕರಣದ ಬುನಾ­ದಿಯ ನಿರ್ಮಾಣ ಆಧುನಿಕ ನಾಗರಿಕ­ತೆಯ ವಿಕ್ರಮವೆಂದು ಒಪ್ಪಿಕೊಳ್ಳೋಣ. ಆದರೆ ದೇಶ ದೇಶಗಳ, ವರ್ಗ ವರ್ಗಗಳ, ಪ್ರದೇಶ ಪ್ರದೇಶಗಳ ನಡುವೆ ಬೆಳವಣಿಗೆಯ ಮಟ್ಟ  ಅಸಮಾನವಾಗಿ ಉಳಿದಿರುವ ಸತ್ಯ ಇಂದಿಗೂ ಸೂರ್ಯ­ಸ್ಪಷ್ಟವಾಗಿದೆ. ಭೌತಿಕ ಅಭಿವೃದ್ಧಿ ತಂದ ಬೆಳವಣಿಗೆಯ ಸ್ವಾತಂತ್ರ್ಯದ ಬೀಜಗಳಲ್ಲಿ ಅಸಮಾ­ನತೆಯ ಬೀಜಗಳು ಹುದುಗಿದ್ದದ್ದು ಒಂದು ಕೌತುಕ.ಆಧುನಿಕ ನಾಗರಿಕತೆಯ ಭರವಸೆಗಳ ಪೂರ್ಣಫಲ ಲೋಕಕ್ಕೆ ದೊರಕಿಲ್ಲ. ಇದಕ್ಕೆ ಕಾರಣ ಹಲವಾದರೂ ಎರಡು ಕಾರಣಗಳು ಮುಖ್ಯವಾದುವು ಅನಿಸುತ್ತದೆ.ಮೊದಲನೆಯದು ಹೊರಗಿನದು. ಇದು ಸರ್ವವಿದಿತ. ಮಾನವೇತಿಹಾಸದ ಎಲ್ಲಾ ಘಟ್ಟಗಳಲ್ಲಿ ಆಳುವ ವರ್ಗಗಳು ತಮ್ಮ ಗೆಲುವು-–ನಲಿವುಗಳನ್ನೇ ಇಡೀ ಲೋಕದ್ದೆಂದು ನಂಬಿ, ನಂಬಿಸುತ್ತಾ ಬಂದಿವೆ. ಆದರೆ ಆ ಯುಗಗಳಲ್ಲಿ ಸಮಾನ ಅನುಕೂಲಗಳನ್ನು ಕಲ್ಪಿಸುವ ಭೌತಿಕ ಸಾಧನಗಳು ಇನ್ನೂ ಸೃಷ್ಟಿಯಾಗಿರಲಿಲ್ಲ. ‘ಭವತು ಸರ್ವ ಮಂಗಳಂ’ ಎಂಬ ಆಶಯವು ಅದು ಪ್ರಾಮಾಣಿಕವಾಗಿದ್ದಾಗಲೂ ಕೇವಲ ಹಾರೈಕೆ­ಯಾಗಿತ್ತು. ವಿಧಿ ಎಂಬುದು ನಮ್ಮ ಕೈಯೆಟುಕಿಗೆ ಸಿಲುಕದು, ಆದ್ದರಿಂದ ನಮ್ಮ ನಮ್ಮ ಹಿತದ ಜವಾಬುದಾರಿಯನ್ನು ವಿಧಿಯ ಸಂಕೇತ­ವಾಗಿರುವ ಅರಮನೆಗೋ ಗುರುಮನೆಗೋ ಧಾರ್ಮಿಕ ಅಧಿಕಾರ ಕೇಂದ್ರಕ್ಕೋ ಒಪ್ಪಿಸುವುದೇ ಕ್ಷೇಮವೆಂದು ಬಗೆಯಲಾಗಿತ್ತು. ಇದರ ಪೂರ್ಣ ಪ್ರಯೋಜನವನ್ನು ಅಂದಂದಿನ ಆಳುವ ವ್ಯಕ್ತಿಗಳು, ವರ್ಗಗಳು, ಶಕ್ತಿಗಳು ಉಂಡು ಕೊಬ್ಬಿ ಇತರರನ್ನು ಸೊರಗಿಸಿದವು.ವಿಪರ್ಯಾಸವೆಂದರೆ ಇಂದು, ಎಲ್ಲರಿಗೂ ಸಾಕಾಗುವಷ್ಟು ಸಂಪತ್ತು, ಆ ಸಂಪತ್ತನ್ನು ಎಲ್ಲ ಕಡೆ ವಿತರಿಸುವ ಸಮರ್ಥ ಸಂಪರ್ಕ ವ್ಯವಸ್ಥೆ, ಜ್ಞಾನವನ್ನು ಸಾರ್ವತ್ರಿಕಗೊಳಿಸಬಲ್ಲ ಸಂವಹನ ಮಾಧ್ಯಮಗಳು ಇದ್ದರೂ, ಸರ್ವರಿಗೂ ಸಮ­ಬಾಳಿನ ಆದರ್ಶ ಸಾಕಾರವಾಗದಿರುವುದು. ಬಹುತೇಕ ರೋಗಗಳಿಗೆ ಮದ್ದುಗಳಿವೆ. ಆ ಮದ್ದುಗಳು ಎಲ್ಲರಿಗೂ ದೊರಕುತ್ತಿಲ್ಲ. ಶ್ರೀಮಂತ ರಾಷ್ಟ್ರಗಳಲ್ಲೂ ಸ್ವಂತ ಮನೆ ಮಾಡಿಕೊಳ್ಳುವ ಆರ್ಥಿಕ ಸಾಮರ್ಥ್ಯ ಎಲ್ಲರಿಗೂ ಇಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಯಥೇಚ್ಛವಾಗಿವೆ. ಆದರೆ ಪ್ರವೇಶ ದುಬಾರಿ. ಸುಲಭ ಪ್ರವೇಶವಿರುವ ರಾಷ್ಟ್ರಗಳಲ್ಲೂ ಶಿಕ್ಷಣದ ಖಾಸಗೀಕರಣದ ಭೂತ ಸುಳಿಯತೊಡಗಿದ್ದು ಉನ್ನತ ಶಿಕ್ಷಣ ಆಕಾಶಕುಸುಮವಾಗುವ ದಿವಸಗಳು ದೂರ ಉಳಿದಿಲ್ಲ. ಆಧುನಿಕ ನಾಗರಿಕತೆಯ ಸೌಲಭ್ಯಗಳು ದೊರಕುವುದಿರಲಿ ಲಾಗಾಯ್ತಿನಿಂದ ಉಚಿತ­ವಾಗಿ ಎಲ್ಲರಿಗೂ ಸಿಗುತ್ತಿದ್ದ ನದಿಗಳ ನೀರು, ಕಾಡು­ಗಳ ಹಣ್ಣು ಹಂಪಲುಗಳು, ಸ್ವಚ್ಛ ವಾತಾವರಣ ಇವೆಲ್ಲಕ್ಕೂ ಬೆಲೆಕಟ್ಟಲಾಗುತ್ತಿದ್ದು ತುಟ್ಟಿಯಾಗುತ್ತಿವೆ.ವಸಾಹತುಪೂರ್ವ ಯುಗಗಳಲ್ಲಿ ಆಯಾ ನಾಡುಗಳ ಬಲಿಷ್ಠ ಗುಂಪುಗಳು, ಬಣಗಳು, ವರ್ಗಗಳು, ವಂಶಗಳು ದುರ್ಬಲರ ಸಾಧನ–-ಸಂಪತ್ತುಗಳನ್ನು ಕಬಳಿಸಿ  ಅಸಮಾನತೆಗೆ ಕಾರಣವಾದವು. ವಸಾಹತುಶಾಹಿ ಬಂಡವಾಳ ಯುಗದಲ್ಲಿ  ವಸಾಹತುಗಾರರು ಬಂಡವಾಳಿ­ಗರು ಪರಾಜಯಗೊಂಡ ಪರರನ್ನು ಹಿಂಸಿಸಿ, ಶೋಷಿಸಿ ಜಗದ್ವ್ಯಾಪಿಯಾದ ಅಸಮಾನತೆ­ಯನ್ನು ಅನಾವರಣಗೊಳಿಸಿದರು. ಉತ್ತರವ­ಸಾ­ಹತು ಯುಗದಲ್ಲಿ ಆರ್ಥಿಕ ಬಲಾಢ್ಯತೆಯ ಕೇಂದ್ರ­ಗಳು, ಶೋಷಣೆಯ ಪ್ರಕಾರಗಳು ಬದ­ಲಾ­ದವೇ ಹೊರತು ಸಮಬಾಳಿನ ಸಾಮ್ರಾಜ್ಯ ಉದಯಿಸಲೇ ಇಲ್ಲ.ಯಾಕೆ ಈ ನೆಲದಿಂದ ಸದಾ ಶೋಕವೇ ಬೆಳೆಯುವುದು?:  ಹೀಗೆಂದ ಟರ್ಕಿಯ ಮಹಾ­ಕವಿ ನಿಸ್ಸೀಂ ಹಿಕ್ಮತ್ತನ ಮಾತು ಮನುಕುಲದ ಲಲಾಟಲಿಖಿತದಂತೆ ಕಾಣತೊಡಗಿತು. ಈ ಅಸಮಾನತೆಯ ಕರಾಳ ಯುಗಗಳಲ್ಲಿ ಸಮಾ­ನತೆ ಮತ್ತು ಸ್ವಾತಂತ್ರ್ಯಪರವಾದ ಚಿಂತನ ಧಾರೆಗಳು, ಹೋರಾಟಗಳು, ಸಂಘಟನೆಗಳು, ಸಂಸ್ಕೃತಿಗಳು ಮುಂತಾದ ಮಾನವಮುಕ್ತಿ­ಯಜ್ಞದ ಪ್ರಯತ್ನಗಳು ಜೀವಂತವಾಗಿದ್ದು­ದೊಂದೇ ಸಮಾಧಾನ. ಅವಿಲ್ಲದಿದ್ದರೆ ನಮ್ಮ ನೈರಾಶ್ಯಗಳು ಇನ್ನೂ ಘೋರವಾಗುತ್ತಿದ್ದವು.ಬರಲಿರುವ ಸಾಮ್ಯವಾದಿ ಯುಗದಲ್ಲಿ ಪ್ರಭುತ್ವಗಳು ವಿಸರ್ಜಿತವಾಗುತ್ತವೆ ಎಂದಿದ್ದ  ಕಾರ್ಲ್‌ ­ಮಾರ್ಕ್ಸ್. ಆತ ನಿರೀಕ್ಷಿಸದ ವಿಧಗಳಲ್ಲಿ ಇಂದು ಪ್ರಭುತ್ವಗಳ  ವಿಸರ್ಜನೆಯಾಗುತ್ತಿದ್ದು ರಾಷ್ಟ್ರೀಯತೆಯ ಗಡಿಗಳನ್ನು ದಾಟಿದ ಬಹು­ರಾಷ್ಟ್ರೀಯ ಕಂಪೆನಿಗಳು  ಷಟ್ಖಂಡಗಳ, ಸಪ್ತ­ಸಾಗರ­ಗಳ ಧರಿತ್ರಿಯನ್ನು ಅನಿಯಂತ್ರಿತವಾಗಿ ಆಳ­ತೊಡಗಿ ಅಸಮಾನತೆಗೆ ಹೊಸ ಆಯಾಮ­ಗಳನ್ನು ನೀಡುತ್ತಿವೆ. ಏತನ್ಮಧ್ಯೆ ಸರ್ವವ್ಯಾಪಿ­ಯಾಗುತ್ತಿರುವ ಸಮಾನತೆಯ ಬುನಾದಿ­ಯಾಗ­ಬಹುದಾಗಿದ್ದ ಜ್ಞಾನಕೇಂದ್ರಗಳು, ಮಾಧ್ಯಮ­ಗಳು, ವಿದ್ಯುನ್ಮಾನ ತಂತ್ರಜ್ಞಾನಗಳು ಗೋಳೀಕರ­ಣದ ಸರದಾರರ ವಶವರ್ತಿಯಾಗಿ ಕೆಲಸ ಮಾಡುತ್ತಿವೆ. ಸಂಪತ್ತಿನ ಮಾಯೆ ಗ್ರಹಣದಲ್ಲಿ ಸಮಾನತಾವಾದಿ ಆಶಯಗಳೇ ಮರೆಯಾಗು­ತ್ತಿವೆಯೇನೋ ಎಂಬ ಆತಂಕ ಮೂಡತೊಡಗಿದೆ.ಮೊದಲನೆಯ ಕಾರಣದಷ್ಟೇ ಬಲಿಷ್ಠವಾ­ದುದು ಎರಡನೆಯ ಕಾರಣ. ಅದು ಹೊರಗಿನ­ದಲ್ಲ. ನಮ್ಮೊಳಗಿನದು.

ಇದರ ಬಗ್ಗೆ ಯೋಚಿಸುವಾಗೆಲ್ಲ ನನಗೆ ರಾಜ­ಸ್ತಾನದ ಪ್ರಸಿದ್ಧ ಬರಹಗಾರ ದಿವಂಗತ ವಿಜಯ ದಾನ್ ದೇತಾ ಅವರ ಒಂದು ಕತೆ ನೆನಪಾ­ಗುತ್ತದೆ. ಒಂದೂರಲ್ಲೊಬ್ಬ ಬಡ ಪೂಜಾರಿ ಇರುತ್ತಾನೆ. ದಿನವೂ ಅನನ್ಯ ಭಕ್ತಿಯಿಂದ ಊರಿನ ಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿ­ರುತ್ತಾನೆ.  ತನ್ನ ಪೂಜೆ–ನಿಷ್ಠೆಯಿಂದ ಎಲ್ಲರ ಮೆಚ್ಚು­ಗೆಗೆ ಪಾತ್ರನಾಗಿರುತ್ತಾನೆ. ಆದರೆ ಅವನ ಮನೆಯಲ್ಲಿ ಭಯಂಕರ ಬಡತನ.  ಉಪವಾಸದ ದಿನಗಳೇ ಹೆಚ್ಚು. ಎಷ್ಟು ಪ್ರಾರ್ಥಿಸಿದರೂ ಕಾಳಿಮಾತೆ ಅವನಿಗೆ ಸಂಪತ್ತನ್ನು ಅನುಗ್ರಹಿಸು­ವುದಿಲ್ಲ. ದಿನೇದಿನೇ ಅವನ ಅತೃಪ್ತಿ, ಸಿಟ್ಟು ಹೆಚ್ಚುತ್ತಾ ಹೋಗುತ್ತಿರುತ್ತದೆ. ಆ ಸಿಟ್ಟನ್ನು ಯಾರ ಮೇಲಾದರೂ ತೋರಿಸಿಕೊಳ್ಳಬೇಕಲ್ಲ. ದೇವ­ಸ್ಥಾನದಿಂದ ಮನೆಗೆ ಬಂದಕೂಡಲೇ ತನ್ನ ಬಡಪಾಯಿ ಹೆಂಡತಿಯನ್ನು ಹಿಗ್ಗಾಮುಗ್ಗಾ ಹೊಡೆ­­ಯುವುದರ ಮೂಲಕ ತನ್ನ ಸಿಟ್ಟಿಗೆ ಬಿಡುಗಡೆ ಕೊಡುತ್ತಿರುತ್ತಾನೆ. ಅದನ್ನು ಸಹಿಸಿ­ಕೊಳ್ಳದೆ ಬೇರೆ ನಿರ್ವಾಹವಿಲ್ಲ ಆ ಹೆಂಡ­ತಿಗೆ. ಆ ಹೊಡೆಯುವ ಕಾರ್ಯಕ್ರಮದ ನಂತರ ಇಬ್ಬರೂ ಊಟ ಮಾಡುವುದು ಪ್ರತಿದಿನದ ವಾಡಿಕೆಯಾ­ಗಿರುತ್ತದೆ.ಕೊನೆಗೊಂದು ದಿವಸ ಕಾಳಿಮಾತೆ ಅವನ ಭಕ್ತಿಗೆ ಮೆಚ್ಚಿ ಅವನ ಮುಂದೆ ಪ್ರತ್ಯಕ್ಷವಾಗಿ ಬೇಕಾದ ವರ ಕೇಳಲು ಹೇಳುತ್ತಾಳೆ,  ಅವನು ಅಪಾರ ಸಂಪತ್ತನ್ನು ಬೇಡುತ್ತಾನೆ. ಅವನು ಕೇಳಿದ ವರ ನೀಡಿ ದೇವಿ ಮರೆಯಾಗುತ್ತಾಳೆ. ಅವ­ನಿಗೆ ನಂಬಿಕೆಯೇ ಬಂದಿರುವುದಿಲ್ಲ. ಮನೆಗೆ ಹಿಂದಿರುಗುತ್ತಾನೆ. ಅವನ ಮುರುಕಲು ಮನೆ ಸಂಪದ್ಭರಿತ ಭವ್ಯ ರಾಜಮಂದಿರದಂತಾ­ಗಿ­ರುತ್ತದೆ. ಹೆಂಡತಿ ಮೈತುಂಬಾ ಚಿನ್ನದೊಡವೆ ಜರ­ತಾರಿ ಸೀರೆಗಳನ್ನು ತೊಟ್ಟು ಗಂಡನಿಗಾಗಿ ಕಾಯುತ್ತಿರುತ್ತಾಳೆ. ಅವರಿಬ್ಬರ ಆನಂದಕ್ಕೆ ಮಿತಿಯೇ ಇಲ್ಲ. ಪೂಜಾರಿ ಎಂದಿನಂತೆ ಹಸಿದಿರು­ತ್ತಾನೆ. ಉಣಬಡಿಸು ಎಂದು ಹೆಂಡತಿಗೆ ಹೇಳು­ತ್ತಾನೆ. ಆದರೆ ಅವಳು ಹೇಳುತ್ತಾಳೆ ಮೊದಲು ತನ್ನನ್ನು ಹೊಡಿ ಎಂದು. ಪೂಜಾರಿ ಅವಳ ಕ್ಷಮೆ ಕೋರಿ ಹಿಂದೆ ತನ್ನ ಅಸಹಾಯಕತೆಯಿಂದ ಸಿಟ್ಟನ್ನು ಅವಳ ಮೇಲೆ ಕಾರಿದುದಾಗಿಯೂ ಈಗ ಅದಕ್ಕೆ ಕಾರಣವಿಲ್ಲವೆಂದು ಎಷ್ಟು ಹೇಳಿದರೂ ಆಕೆಗೆ ಏಟು ತಿನ್ನುವವರೆಗೂ ಊಟ ಬಡಿಸಲು ಸಾಧ್ಯವಾಗುವುದೇ ಇಲ್ಲ. ಆದ್ದರಿಂದ ದಿನವೂ ಗಂಡನ ಕೈಯ ಏಟು ತಿನ್ನುವ ಕಾರ್ಯಕ್ರಮ ಅವಳಿಚ್ಛೆಯಂತೆ ಮುಂದುವರಿಯುತ್ತದೆ.ಗತದ ಅನನುಕೂಲತೆಗಳಿಗೆ, ಪರಿಸ್ಥಿತಿಗಳಿಗೆ, ಅಪಮಾನಗಳಿಗೆ, ಕ್ರೌರ್ಯಕ್ಕೆ ಜನ ಹೇಗೆ ಅಂಟಿಕೊಳ್ಳಬಲ್ಲರೆಂಬುದನ್ನು ಈ ಕಥೆ ಮಾರ್ಮಿ­ಕವಾಗಿ ಹೇಳುತ್ತದೆ. ಜನ ಸದಾ ಸುಖವನ್ನೇ ಬಯಸುತ್ತಾರೆಂಬುದು ಒಂದು ಆಶಾವಾದಿ ಭ್ರಮೆ. ದೀರ್ಘ ಅವಧಿಯ ರೋಗ, ದಾರಿದ್ರ್ಯ, ಬೇನೆ ಇತ್ಯಾದಿಗಳ ಬಗ್ಗೆಯೂ ಬಹಳ ಜನ ಅಂಟುನಂಟನ್ನು ಬೆಳೆಸಿಕೊಳ್ಳುತ್ತಾರೆ. ರೋಗ ಚಿಕಿತ್ಸೆಯ ಸಂದರ್ಭದಲ್ಲಿ  ಈ ದೌರ್ಬಲ್ಯ ವಿಶೇಷ­ವಾಗಿ ಗೋಚರವಾಗುತ್ತದೆ. ದೀರ್ಘ­ಕಾಲೀನ ರೋಗ­ಗಳಿಗೆ ಕೆಲವರು ಹೇಗೆ ಹೊಂದಿ­ಕೊಂಡು­ಬಿಡುತ್ತಾರೆಂದರೆ ಚಿಕಿತ್ಸೆ ಸಾಧ್ಯವೇ ಇಲ್ಲವೆಂದು ಅಂತರಾಳದಲ್ಲಿ ತೀರ್ಮಾ­ನಿ­ಸಿ­­ಬಿಡುತ್ತಾರೆ.ಆಡಳಿತ ಕಚೇರಿಗಳಲ್ಲಿ ಇದನ್ನು ಗಮನಿಸಬ­ಹುದು. ಕಾನೂನು, ಮೇಲಿನ ಮತ್ತು  ಕೆಳಗಿನ ಅಧಿಕಾರಿಗಳಿಗೆ ಸಮಾನ ಹಕ್ಕು ಬಾಧ್ಯತೆಗಳನ್ನು ನೀಡಿದ್ದರೂ ಸಹಿತ ಮೇಲಧಿಕಾರಿಗಳು ಸರ್ವಾಧಿ­ಕಾರಿಗಳಾಗಿ ಯಾಕೆ ಮಾರ್ಪಡು­ತ್ತಾರೆ? ದಬ್ಬಾ­ಳಿಕೆ ಮಾಡಿಸಿಕೊಳ್ಳು­ವುದೇ ತಮ್ಮ ವಿಧಿ­ಯೆಂದು ನಂಬಿದ ಕೆಳ ಅಧಿಕಾರಿಗಳು, ಮೇಲ­ಧಿಕಾರಿಯ ಧಾರ್ಷ್ಟ್ಯವನ್ನು ನುಂಗಿಕೊ­ಳ್ಳುತ್ತಿ­ರುತ್ತಾರೆ.ಆಧುನಿಕಪೂರ್ವ ಸಮಾಜಗಳಲ್ಲಿ ವಾಡಿಕೆಯ ಬಲದಿಂದ ಇಂಥ ಅಸಹಾಯಕತೆಯ ಭಾವನೆ­ಗಳು ಬೇರೂರುತ್ತಿದ್ದವು. ನಮ್ಮ ಕಾಲದಲ್ಲಿ ಕೆಲವು ಸಲ ಬಲಪ್ರಯೋಗದಿಂದ ಹಲವು ಸಲ ಪದೇಪದೇ ಮನವೊಲಿಕೆಯಿಂದ ಯಥಾಸ್ಥಿತಿ­ವಾದವನ್ನು ಜೀವಂತವಾಗಿಡಲಾಗು­ತ್ತದೆ. ಈ ಹೊರಗಿನ ಮಾಧ್ಯಮಗಳು ಯಥಾಸ್ಥಿತಿ­ವಾದಿತ್ವ­ವನ್ನು ಪೋಷಿಸುತ್ತವೆನ್ನು­ವುದು ನಿಜವಾ­ದರೂ ಅವುಗಳ ಸ್ವೀಕೃತಿಯ ಅವಕಾಶ ನಮ್ಮ ಮನಸಿನ­ಲ್ಲಿರುವುದರಿಂದಲೇ ಅವು ಯಶಸ್ವಿಯಾ­ಗುವುದು. ಹೊಸ ಪರಿಸ್ಥಿತಿಯ ಹೊಸ ಸಮಸ್ಯೆ­ಗಳಿಗೆ ಹಳೆಯ ಪರಿಹಾರಗಳ ಮೂಲಕ ಸಮಾ­ಧಾನ ಪಡೆಯತೊಡಗುವುದು ಇದೇ ಯಥಾಸ್ಥಿತಿ­ವಾದದ ಒಂದು ಮುಂದುವರಿಕೆ. ಇದು ನೆನ್ನೆಯ ಊಟವನ್ನು ಇಂದು ಮಾಡುವಂತೆ.ಹಳೆಯದರ ಅದಮ್ಯ ಸೆಳೆತ ಇನ್ನೊಂದು ಅಪಾಯಕಾರಿ ರೀತಿಯಲ್ಲಿ ಇಂದು ವ್ಯಕ್ತವಾಗು­ತ್ತಿದೆ. -ಇಂದು ಅಪ್ರಸ್ತುತವಾಗಿರುವ ಚಿಂತನಾ­ಮಾದರಿಗೆ ಅಂಟಿಕೊಳ್ಳುವುದರ ಮೂಲಕ. ಇಂದು ಆವಿರ್ಭವಿಸುತ್ತಿರುವ ಸಮಸ್ಯೆಗಳನ್ನು ಗತದ ಧರ್ಮ, ಸಿದ್ಧಾಂತ, ಚಿಂತನೆಗಳ ಮೂಲಕ ನಿವಾರಿಸಿಕೊಳ್ಳುವ ವ್ಯರ್ಥ ಪ್ರಯತ್ನ ಎಲ್ಲೆಲ್ಲೂ ತಾಂಡವವಾಡುತ್ತಿದೆ.ಪರಿಸ್ಥಿತಿ ಬದಲಾದರೆ ಮನಸ್ಥಿತಿ ಬದಲಾಗು­ವುದೆಂದು ಹೇಳುತ್ತವೆ ಭೌತಿಕ ಸಿದ್ಧಾಂತಗಳು. ಮನಸ್ಥಿತಿ ಬದಲಾದರೆ ಜಗತ್ತು ಆ ಪ್ರಕಾರವಾಗಿ ಬದಲಾಗುತ್ತದೆ ಅನ್ನುತ್ತವೆ ಆದರ್ಶವಾದಿ ಸಿದ್ಧಾಂತಗಳು. ಒಣ ತರ್ಕದ ಮೂಲಕ ಇವೆರಡೂ ನಿಲವುಗಳಿಗೆ ಸಮರ್ಥನೆ ಹುಡುಕಿ­ಕೊಳ್ಳ­ಬಹುದು. ಆದರೆ ಅನುಭವದಲ್ಲಿ ಹೊರಗು-ಒಳಗುಗಳು ಬಿಡಿಸಬಾರದಂತೆ ಒಂದ­ಕ್ಕೊಂದು ಅಂಟಿಕೊಂಡಿರುವ ಕಾರಣ ನಾವು ಮತ್ತು ಪರಿಸ್ಥಿತಿ ಎರಡೂ ಬದಲಾಗದಿದ್ದರೆ ನಮ್ಮೆಲ್ಲರ ವಾಂಛಿತಗಳು ನಮ್ಮಿಂದ ದೂರ ಸರಿಯುತ್ತಿರುತ್ತವೆ. ಆದ್ದರಿಂದಲೇ ಕ್ರಾಂತಿಗಳ ಬಳಿಕ ಪ್ರತಿಕ್ರಾಂತಿಗಳ, ರೋಗನಿವಾರಣೆಯ ಬಳಿಕ ಮತ್ತೊಂದು ರೋಗದ ಆವಾಹನೆ.ಕೆಲವು ವಿಷಮ ಪರಿಸ್ಥಿತಿಗಳಲ್ಲಿ ಆಯ್ಕೆಗೆ ಎಡೆಯೇ ಇಲ್ಲವೆಂದು ವಾದಿಸುತ್ತಾರೆ. ಉದಾಹ­ರ­ಣೆಗೆ ನಿಗದಿತವಾಗಿರುವ ಮೃತ್ಯುವನ್ನು ಕಾಯು­ತ್ತಿ­ರುವ ಕ್ಯಾನ್ಸರ್ ಪೀಡಿತರಿಗೆ ಆಯ್ಕೆಯ ಸ್ವಾತಂತ್ರ್ಯ­ವಿದೆಯೆ? ಅಥವಾ ವ್ಯಾಪಕ ಹಿಂಸ್ರ ಸಾಮಾ­ಜಿಕ ಪರಿಸ್ಥಿತಿಯಲ್ಲಿ ಪರಿಸ್ಥಿತಿಗೆ ಮಣಿ­ಯು­ವುದನ್ನು ಬಿಟ್ಟು ಬೇರೆ ನಿರ್ವಾಹವಿದೆಯೆ?ಇಂಥ ಪರಿಸ್ಥಿತಿಗಳಲ್ಲಿ ಆತ್ಯಂತಿಕ ಸ್ವಾತಂತ್ರ್ಯ­ವಿಲ್ಲದಿದ್ದರೂ ಕೆಲವಾದರೂ ಆಯ್ಕೆಗಳಿರುತ್ತವೆ. ನನಗೆ ಪರಿಚಿತರಾದ ಮರಾಠಿಯ ಆಧುನಿಕ ಕವಿ ಅರುಣ ಕೊಳಾಟ್ಕರ್ ಅವರು ಕ್ಯಾನ್ಸರ್ ಪೀಡಿತರಾಗಿದ್ದರು. ಅವರ ಸಾವು ನಿರ್ಣಯ­ವಾಗಿತ್ತು. ಅವರು ತಮ್ಮ ಆ ಕೊನೆಯ ದಿನ

ಗ­ಳನ್ನು ತಮ್ಮ ಬದುಕಿನ ಅತ್ಯಂತ ಶ್ರೇಷ್ಠ ಕವಿತಾರಚನೆಗೆ ಮುಡಿಪಾಗಿಟ್ಟರು. ಆ ಮಟ್ಟಿಗೆ ಪರಿಸ್ಥಿತಿಯ  ಮೇಲೆ ಹತೋಟಿ ಸಾಧಿಸಿದರು.

ಇನ್ನೊಂದು ಉದಾಹರಣೆ ಬೊರ್‍ಹೆಸ್‌ನ ಕತೆಯಲ್ಲಿ ಸಿಗುತ್ತದೆ. ಒಂದು ಅಂತ­ರ್ಯುದ್ಧದ ಸಂದರ್ಭದಲ್ಲಿ ಕ್ರಾಂತಿಕಾರಿಗಳ ಪಕ್ಷಪಾತಿಯಾದ ನಾಟಕಕಾರನೊಬ್ಬ ಮರಣ­ದಂಡ­ನೆಗೆ ಗುರಿಯಾ­ಗುತ್ತಾನೆ. ದಂಡನೆಯ ದಿವಸ ಹಂತಕರ ಬಂದೂಕದೆದುರು ನಿಂತಿರು­ವಾಗ ತಾನು ಪೂರ್ತಿ ಮಾಡದ ನಾಟಕವೊಂದರ ನೆನಪು ಅವನಿಗಾ­ಗುತ್ತದೆ. ಅದನ್ನು ಪೂರ್ಣಗೊಳಿ­ಸುವುದು ಅವನ ಜೀವನೋದ್ದೇಶ. ಆತ ತನ್ನ ಕೊನೆಯ ಗಳಿಗೆ­ಗಳನ್ನು ಅನಂತತೆಯಂತೆ ಅನು­ಭವಿ­ಸ­ತೊಡಗಿ ಕಾಲವನ್ನು ಮಾನಸಿಕವಾಗಿ ಹಿಗ್ಗಿಸಿ ತನ್ನ ನಾಟಕ­ವನ್ನು ತನ್ನ ಮನಸ್ಸಿನಲ್ಲಿ ಪೂರ್ಣ­ಗೊಳಿಸುತ್ತಾನೆ. ಇಷ್ಟು ಹೊತ್ತಿಗೆ ಅವನಿಗೆ ಗುಂಡೇಟು ಬೀಳುತ್ತದೆ. ಸಾಯುವ ಮೊದಲ ಗಳಿಗೆಗಳನ್ನು ಈ ರೀತಿ ಆತ ಸಾರ್ಥಕಗೊಳಿ­ಸಿಕೊಳ್ಳುತ್ತಾನೆ.ಹೊರಗಿನ ಮತ್ತು ಒಳಗಿನ ಬದಲಾವಣೆಗಳು ಪರಸ್ಪರ ಸಹಕರಿಸದಿದ್ದರೆ ನಮ್ಮ ಅನುಭವ ಪ್ರಪಂಚದ ಪರಿವರ್ತನೆ ಸಾಧ್ಯವಿಲ್ಲ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.