ಗುರುವಾರ , ಮೇ 13, 2021
39 °C

ಸಾಧಿಸಿದ ವೈರಾಗ್ಯ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಬುದ್ಧ ನಡೆದ ದಾರಿಯಲ್ಲೇ ನಡೆದ ಅನೇಕ ಮಹಾನ್ ಬೌದ್ಧ ಸಂತರ ವ್ಯಕ್ತಿತ್ವದ ಬಗ್ಗೆ ಅಷ್ಟೊಂದು ವಿಶಾಲವಾದ ಪ್ರಚಾರ ದೊರೆತಿಲ್ಲ. ಬುದ್ಧ ಒಂದು ಮಹಾನ್ ಪ್ರಕಾಶಶಾಲಿ ಪ್ರದೀಪ. ಆ ವ್ಯಕ್ತಿತ್ವದ ಪ್ರಭೆಯಲ್ಲಿ ಉಳಿದ ಹಣತೆಗಳ ಮಿನುಗು ಕಣ್ಣಿಗೆ ಬೀಳುವುದು ಅಪರೂಪ.ಬುದ್ಧನ ದಾರಿಯಲ್ಲಿ ನಡೆದವರು ಅನೇಕರು. ಹಲವು ಪ್ರತಿಬುದ್ಧರು, ಅರ್ಹತರು ನಡೆದ ದಾರಿ ಅದು. ಇಂಥ ಸಂತರ ಕಥೆಗಳು ವಿಶುದ್ಧಿ ಮಗ್ಗ, ನಿಕಾಯಟ್ಠ ಕಥೆಗಳು, ಸಹಸ್ಸತ್ಥ ಪ್ರಕರಣ, ರಸವಾಹಿನಿ ಮುಂತಾದ ಪಾಲೀ ಗ್ರಂಥಗಳಲ್ಲಿ ದೊರೆಯುತ್ತವೆ.  ವಿಶುದ್ಧಿಮಾರ್ಗದಲ್ಲಿ ಒಂದು ಸುಂದರವಾದ ಕಥೆ ಇದೆ.ಕೊರಂಡಕ ಎಂಬ ಗ್ರಾಮದಲ್ಲಿ ಒಬ್ಬ ಹುಡುಗ ತೀರ ಚಿಕ್ಕ ವಯಸ್ಸಿಗೇ ಭಿಕ್ಷುವಾಗಿ ತನ್ನ ಸೋದರಮಾವನನ್ನೇ ಸೇರಿಕೊಂಡ. ಅವನ ಅಧ್ಯಯನ ರೋಹಣ ದೇಶದಲ್ಲಿ ನಡೆಯಿತು. ಅವನ ಗುರುವಾದ ಸೋದರಮಾವ ಕೊರಂಡಕದಲ್ಲೇ ಉಳಿದ. ಹುಡುಗನ ತಾಯಿಯ ಕರುಳು ತಡೆದೀತೇ? ತನ್ನ ತಮ್ಮನಾದ ಭಿಕ್ಷುವನ್ನು ಮಗನ ಯೋಗಕ್ಷೇಮದ ಬಗ್ಗೆ ಆಗಾಗ ವಿಚಾರಿಸುತ್ತಿದ್ದಳು. ಅಕ್ಕನ ಮನಸ್ಸನ್ನು ತೃಪ್ತಿ ಮಾಡಲು ಭಿಕ್ಷು ತಾನೇ ಹೋಗಿ ಅವಳ ಮಗನನ್ನು ಕರೆದುಕೊಂಡು ಬರಬೇಕೆಂದು ಕೊರಂಡಕದಿಂದ ರೋಹಣದ ಕಡೆಗೆ ಹೊರಟ.ಆಕಸ್ಮಿಕವೆಂಬಂತೆ ಆ ತರುಣ ಭಿಕ್ಷು ಕೂಡ ಅದೇ ಸಮಯಕ್ಕೆ ತನ್ನ ಗುರುವನ್ನು ನೋಡಿ ಬಹಳ ದಿನವಾಯಿತು ಎಂದು ರೋಹಣದಿಂದ ಕೊರಂಡಕಕ್ಕೆ ನಡೆದ.  ಇಬ್ಬರೂ ಮಹಾವ್ಯಾಳಿ ಗಂಗಾನದಿಯ ದಡದಲ್ಲಿ ಸಂಧಿಸಿದರು. ತಮ್ಮ ಪ್ರವಾಸದ ಉದ್ದೇಶಗಳನ್ನು ವಿನಿಮಯ ಮಾಡಿಕೊಂಡ ಮೇಲೆ ಸೋದರಮಾವನಾದ ಗುರು ತರುಣ ಭಿಕ್ಷುವಿಗೆ ಹೇಳಿದ,  `ನನ್ನನ್ನು ನೋಡಿಯಾಯಿತಲ್ಲ? ನೀನೀಗ ಮರಳಿ ಹೋಗಬೇಡ. ಇಲ್ಲಿಯವರೆಗೂ ಬಂದಿದ್ದೀಯಾ, ನೀನು ಊರಿಗೆ ಹೋಗಿ ನಿನ್ನ ತಂದೆ ತಾಯಿಯರನ್ನು ಕಂಡು ಬಾ. ನಾನು ಈ ಜಾಗದಲ್ಲೇ ಇದ್ದು ಚಾತುರ್ಮಾಸ್ಯ ಕಳೆಯುತ್ತೇನೆ. ನಂತರ ಊರಿಗೆ ನಾನೂ ಬರುತ್ತೇನೆ' ಎಂದ.ಹುಡುಗ ಕೊರಂಡಕಕ್ಕೆ ಹೋಗಿ ಚಾತುರ್ಮಾಸ್ಯ ಪ್ರಾರಂಭವಾಗುವ ಮೊದಲೇ ಅಲ್ಲಿನ ವಿಹಾರದಲ್ಲಿ ಬೀಡುಬಿಟ್ಟ, ಅಲ್ಲಿಗೆ ಬಂದ ಅವನ ತಂದೆ ಅವನನ್ನು ಕಂಡು  `ಈ ಮೂರು ತಿಂಗಳು ನನ್ನ ಮನೆಯಲ್ಲೇ ದಾನ  ಸ್ವೀಕರಿಸಬೇಕು'  ಎಂದು ಬೇಡಿಕೊಂಡ. ತಂದೆಗೆ ಮಗನ ಗುರುತು ಸಿಕ್ಕಲಿಲ್ಲ. ತೀರ ಪುಟ್ಟ ಮಗುವಾಗಿದ್ದಾಗಲೇ ಈತ ಮನೆ ತೊರೆದಿದ್ದನಲ್ಲ! ಈತನೂ ಹೇಳಲಿಲ್ಲ! ಮೂರು ತಿಂಗಳೂ ತಂದೆ-ತಾಯಿಯರ ಆತಿಥ್ಯ  ಸ್ವೀಕರಿಸಿದ. ಅವರಿಗೆ ಇವನ ಗುರುತು ಹತ್ತಲಿಲ್ಲ. ಈತನಿಗೂ ಹೇಳಬೇಕೆನಿಸಲಿಲ್ಲ.ಮೂರು ತಿಂಗಳು ಮುಗಿದ ಮೇಲೆ ಭಿಕ್ಷು ಹೊರಟು ನಿಂತಾಗ ಅವರು ಅವನಿಗೆ ಒಂದು ಕೊಳವೆಯಲ್ಲಿ ಎಣ್ಣೆಯನ್ನೂ, ಒಂದು ಹೊಸಬಟ್ಟೆಯನ್ನು ಒಂದು ಸಕ್ಕರೆಯ ತುಂಡನ್ನೂ ಸಂಪ್ರದಾಯದಂತೆ ನೀಡಿದರು. ಭಿಕ್ಷು ರೋಹಣದ ಕಡೆಗೆ ಹೋಗುವಾಗ ದಾರಿಯಲ್ಲಿ ಗುರುವನ್ನು ಕಂಡ. ಈತ ತಂದೆ-ತಾಯಿಯರ ಆತಿಥ್ಯವನ್ನು ಪಡೆದು ಬಂದದ್ದನ್ನು ಕೇಳಿ ಮಾವನಿಗೆ ಸಂತೋಷವಾಯಿತು. ನಂತರ ಸೋದರಮಾವ ಭಿಕ್ಷು ಕೊರಂಡಕಕ್ಕೆ ಮರಳಿ ಬಂದಾಗ ಅವನೊಡನೆ ತನ್ನ ಮಗನಿಲ್ಲದುದನ್ನು ಕಂಡು ತಾಯಿಗೆ ದುಃಖವಾಯಿತು.ತಮ್ಮ, ತನ್ನ ಮಗನನ್ನು ಕರೆದುಕೊಂಡು ಬರುತ್ತೇನೆಂದು ಹೋದವನು ಹಾಗೆಯೇ ಬಂದಾಗ ಮಗ ತೀರಿಹೋಗಿರಬಹುದೆಂಬ ಭಯವಾಯಿತು. ಆಕೆಗೆ ಆತ ಸಮಾಧಾನ ಮಾಡಿ ಮೂರು ತಿಂಗಳು ಅವರ ಮನೆಯಲ್ಲಿ ಆತಿಥ್ಯ ಪಡೆದವನು ಅವರ ಮಗನೇ ಎಂದು ತಿಳಿಸಿ ಅವರೇ ಅವನಿಗೆ ಕೊಟ್ಟ ಮತ್ತು ಅದನ್ನು ಶಿಷ್ಯನಾಗಿ ತನಗೆ ಸಮರ್ಪಿಸಿದ ಹೊಸಬಟ್ಟೆಯನ್ನು ತೋರಿಸಿದ. ತಾಯಿ-ತಂದೆಯರಿಗೆ ತಮ್ಮ ಮಗನ ವೈರಾಗ್ಯದ ಆಳದ ಅರಿವಾಯಿತು.ಶಿಷ್ಯನಿಗೆ ಸಾಧಿಸಿದ ವೈರಾಗ್ಯ, ತನಗೆ ಸಾಧಿಸಲಿಲ್ಲವಲ್ಲ ಎಂದು ಗುರುವಾದ ಸೋದರಮಾವ ಕೊರಗಿದ. ವೈರಾಗ್ಯಕ್ಕೆ ವಯಸ್ಸಿನ ಹಂಗಿಲ್ಲ. ಅದು ಮನೋದೃಢತೆ ಅಪೇಕ್ಷಿಸುತ್ತದೆ. ಕೆಲವರು ಮೂಗು ಕಟ್ಟಿ ಹಿಮಾಲಯದ ಗುಹೆಗಳಲ್ಲಿ ಹತ್ತಾರು ವರ್ಷ ಪ್ರಯತ್ನಿಸಿ ಸಾಧ್ಯವಾಗದ ವೈರಾಗ್ಯ ಕೆಲವರಿಗೆ ಕೆಲಸದ ಮಧ್ಯದಲ್ಲೇ, ಸಂಸಾರದ ಜಂಜಡದಲ್ಲೇ ಸಿಗುತ್ತದೆ. ಅದಕ್ಕೆ ಮನಸ್ಸಿನ ಹದ ಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.