ಬುಧವಾರ, ಜೂನ್ 16, 2021
23 °C

ಸಿಂಗಪುರದ ನಾಲ್ಕು ನಲ್ಲಿ, ಅದೇ ಪುರಾಣ ಸಾಕು ನಿಲ್ಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿನ್ನೆ (ಮಾರ್ಚ್ 21)`ವಿಶ್ವ ಅರಣ್ಯ ದಿನ~. ಇಂದು `ವಿಶ್ವ ಜಲ ದಿನ~. ನಾಳೆ (ಮಾರ್ಚ್ 23) `ವಿಶ್ವ ಹವಾಮಾನ ದಿನ~. ಭೂಮಿಯ ಮೇಲಿನ ಜೀವಕೋಟಿಗೆ ತೀರ ಅಗತ್ಯವಾದ ಗಿಡ-ನೀರು-ಗಾಳಿ ಈ ಮೂರನ್ನೂ ನೆನಪಿಸಿಕೊಳ್ಳುವ ಮೂರು ದಿನಗಳು ಸಾಲಾಗಿ ನಮ್ಮ ಕ್ಯಾಲೆಂಡರ್ ಮೇಲೆ ಬಂದು ಕೂತಿವೆ. ಅನುಕೂಲಸ್ಥರ ಅಂದಾದುಂದಿ ಬಳಕೆಯಿಂದಾಗಿ ಈ ಮೂರೂ ಧ್ವಂಸವಾಗುತ್ತಿವೆ.ಅವನ್ನು ಹೇಗೆ ರಕ್ಷಿಸಿಕೊಳ್ಳಬೇಕು, ಹೇಗೆ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೆನಪಿಸಲೆಂದು ವಿಶ್ವಸಂಸ್ಥೆಯ ಆದೇಶದ ಮೇರೆಗೆ ಎಲ್ಲ ರಾಷ್ಟ್ರಗಳೂ ಈ ಮೂರು ದಿನ ಈ ಮೂರು ವಿಷಯಗಳನ್ನು ವಿಶೇಷವಾಗಿ ಚರ್ಚಿಸಬೇಕು. ವಿಧಾನ ಮಂಡಲದಲ್ಲಿ ಇವೇನಾದರೂ ಚರ್ಚೆಗೆ ಬಂದುವೆ?ನೀರಿನ ಭೀಕರ ಸಮಸ್ಯೆಗೆ ಯಾರೋ ಪರಿಹಾರ ಹುಡುಕುತ್ತಾರೆ ಬಿಡಿ ಎಂಬ ಧೋರಣೆ ನಮ್ಮದಾಗಿದೆ. ಸತ್ಯ ಏನೆಂದರೆ ಒಂದು ಚಮಚೆ ನೀರನ್ನು ಹೊಸದಾಗಿ ಸೃಷ್ಟಿಸಲು ಇದುವರೆಗೆ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಗಾಳಿಯ ವಿಷಯವೂ ಅಷ್ಟೆ: ಹೊಸ ಗಾಳಿ ಹಾಗಿರಲಿ, ಹಳೇ ಗಾಳಿಯಲ್ಲಿನ ವಿಷವನ್ನು ಬೇರ್ಪಡಿಸಲೂ ನಾವು ಗಿಡಮರಗಳನ್ನೇ ಅವಲಂಬಿಸಬೇಕಾಗಿದೆ.

 

ಹಾಗಿದ್ದರೆ ಗಿಡಮರಗಳನ್ನಾದರೂ ನಾವು ಸೃಷ್ಟಿಸಬಲ್ಲೆವೆ? ಎಲ್ಲಿ ಸ್ವಾಮೀ! ಹೆಜ್ಜೆಯಿಟ್ಟಲ್ಲಿ ಮೂಢನಂಬಿಕೆಗಳ ಬೀಜವನ್ನೇ ಬಿತ್ತುತ್ತ ಹೋಗುವ ವಾಸ್ತುತಜ್ಞರಿಂದ ನಗರದ ಒಂದೊಂದು ಮರವನ್ನು ಬಚಾವು ಮಾಡಿದ್ದರೂ ಬೇಕಷ್ಟಾಗುತ್ತಿತ್ತು. ಈ ವೈಜ್ಞಾನಿಕ ಯುಗದಲ್ಲಿ ಅದೂ ಆಗುತ್ತಿಲ್ಲ.ನೀರನ್ನು ನಿರ್ಮಿಸಲು ಸಾಧ್ಯವಿಲ್ಲ ನಿಜ. ಆದರೆ, ನಾವು ಬಳಸಿ ಬಿಸಾಕುವ ನೀರನ್ನೇ ಮತ್ತೆ ಬಳಕೆಗೆ ತರುವಂತೆ ಮಾಡಿದ್ದಿದ್ದರೂ ಸಾಕಾಗಿತ್ತು. ಹಾಗೆ ಮಾಡುವಲ್ಲಿ ಸಿಂಗಪೂರ್ ನಗರ ಇಡೀ ಜಗತ್ತಿಗೇ ಮಾದರಿಯಾಗಿದೆ. ಸುತ್ತೆಲ್ಲ ಸಮುದ್ರವಿರುವ ಆ ಪುಟ್ಟ ದೇಶದಲ್ಲಿ ಕೊಳವೆ ಬಾವಿಯಲ್ಲೂ ಉಪ್ಪುನೀರು.

 

ಇದ್ದಬದ್ದ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲೆಂದು ಅದು `ನಾಲ್ಕು ನಲ್ಲಿ ನೀತಿ~ಯನ್ನು ಜಾರಿಗೆ ತಂದಿದೆ. ದೇಶಕ್ಕೆ ಬೇಕಾಗುವ ಶೇಕಡಾ 40ರಷ್ಟು ನೀರು ಪಕ್ಕದ ಮಲೇಶ್ಯದಿಂದ ಬರುತ್ತದೆ. ಮಳೆನೀರನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿ ಶೇಕಡಾ 20ರಷ್ಟು ನೀರನ್ನು ಬಳಸಿಕೊಳ್ಳುತ್ತದೆ.ಮೂರನೆಯದಾಗಿ, ಸಮುದ್ರದ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸಿ ಶೇ. 10ರಷ್ಟು ಅಗತ್ಯಗಳನ್ನು ಪೂರೈಸಿಕೊಳ್ಳುತ್ತದೆ. ನಾಲ್ಕನೆಯದಾಗಿ `ನ್ಯೂವಾಟರ್~ ಅಂದರೆ ಚರಂಡಿ ನೀರನ್ನೇ ಶುದ್ಧೀಕರಿಸಿ `ನವ ಜಲ~ವನ್ನಾಗಿ ಪರಿವರ್ತಿಸಿ ನಗರದ ಶೇಕಡಾ 30ರಷ್ಟು ಬೇಡಿಕೆಯನ್ನು ತಣಿಸುತ್ತದೆ.ಚರಂಡಿ ನೀರನ್ನು ಚೊಕ್ಕಟಗೊಳಿಸಿ ಕುಡಿಯಲು ಯೋಗ್ಯವಾಗುವಂತೆ ಮಾಡುವ ತಂತ್ರವಿದ್ಯೆ ಈಗಿನದಲ್ಲ; ಐವತ್ತು ವರ್ಷಗಳಷ್ಟು ಹಿಂದಿನದು. ಬಾಹ್ಯಾಕಾಶದ ಕಕ್ಷೆಯಲ್ಲಿ ಆರಾರು ತಿಂಗಳು ಕಾಲ ವಾಸಿಸುವವರಿಗೆ ನೀರಿನ ಟ್ಯಾಂಕರ್‌ಗಳೇನೂ ಹೋಗಿ ಬಂದು ಮಾಡುವುದಿಲ್ಲ. ಒಂದು ಬಾರಿ ಒಯ್ದ ನೀರನ್ನೇ ಮತ್ತೆ ಮತ್ತೆ ಬಳಸುತ್ತಿರಬೇಕು.

 

ಹಾಗೆ ನೋಡಿದರೆ, ಬಾಹ್ಯಾಕಾಶ ತಂತ್ರಜ್ಞಾನದ ಅದ್ವಿತೀಯ ಜನೋಪಯೋಗಿ ತಂತ್ರವೆಂದರೆ ನೀರಿನ ಮರುಬಳಕೆಯೇ ಹೊರತೂ ಇತರೆಲ್ಲ ತಂತ್ರಗಳೂ ದ್ವಿತೀಯ ದರ್ಜೆಗೆ ಸೇರಬೇಕು.

 

ಚಂದ್ರನಲ್ಲಿ ನೀರಿನ ಪಸೆ ಇದೆಯೇ ನೋಡಲೆಂದು ನಮ್ಮ `ಇಸ್ರೊ~ ಸಂಸ್ಥೆ ಹೊರಟಿದೆ. ಬೆಂಗಳೂರಿನ ಅವರ ಮ್ಯೂಸಿಯಮ್ಮಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ನೂರಾರು ಮಾಡೆಲ್‌ಗಳಿವೆ. ನಾನಾ ಶಾಲೆ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡುತ್ತಾರೆ.

 

ಆದರೆ ಬಚ್ಚಲು ನೀರನ್ನು ಸಂಸ್ಕರಿಸಿ ಮತ್ತೆ ಕುಡಿಯುವಂತೆ ಮಾಡಬಲ್ಲ ಒಂದಾದರೂ ಪ್ರಾತ್ಯಕ್ಷಿಕೆ ಇಲ್ಲ. ಇದ್ದಿದ್ದರೆ ಹೊಸ ಪೀಳಿಗೆಗೆ ಬಾಹ್ಯಾಕಾಶ ತಂತ್ರಜ್ಞಾನದ ರುಚಿ ತೋರಿಸಬಹುದಿತ್ತು.ಬಚ್ಚಲು ನೀರಿನ ಶುದ್ಧೀಕರಣ ಎಂದರೆ ಅದು `ರಾಕೆಟ್ ಸೈನ್ಸ್~ ಏನಲ್ಲ. ಅಂಥ ಘನಂದಾರಿ ತಂತ್ರಜ್ಞಾನ ಅದಕ್ಕೆ ಬೇಕಾಗಿಲ್ಲ. ಬಾಹ್ಯಾಕಾಶಕ್ಕೆ ಒಂದೂ ರಾಕೆಟ್ ಹಾರಿಸದ ಸಿಂಗಪೂರ್‌ನಲ್ಲಿ ಶುದ್ಧೀಕರಿಸಿದ ಚರಂಡಿ ನೀರು ಉದ್ಯಮಗಳಲ್ಲಿ ಬಳಕೆಯಾಗುತ್ತಿದೆ.ಅದನ್ನು ಬಾಟಲಿಯಲ್ಲಿ ತುಂಬಿ `ನವಜಲ~ ಎಂಬ ಲೇಬಲ್ ಹಚ್ಚಿ ಏಳು ವರ್ಷಗಳ ಹಿಂದೆಯೇ ಅಲ್ಲಿನ ರಾಷ್ಟ್ರೋತ್ಸವದ ಪ್ರಭಾತ ಫೇರಿಯಲ್ಲಿ ಭಾಗವಹಿಸಿದವರಿಗೆ ನೀಡಲಾಗಿತ್ತು. ಈಗ ಹೊಸದೊಂದು ಯೋಜನೆ ಅಲ್ಲಿ ಆರಂಭವಾಗಿದೆ. ಇಡೀ ನಗರದುದ್ದಕ್ಕೂ ಒಂದು ಭೂಗರ್ಭ ಕೊಳೆನದಿಯನ್ನು ನಿರ್ಮಿಸಲಾಗುತ್ತಿದೆ.

 

ಅಂದರೆ ನಗರದ ಒಂದು ಕಡೆ 25 ಮೀಟರ್ ಆಳದಲ್ಲಿ ಆರಂಭವಾದ ಬೃಹತ್ ಒಳಚರಂಡಿ ಆಳವಾಗುತ್ತ ಇಳಿಜಾರು ನಿರ್ಮಿಸುತ್ತ ಚಾಂಗಿ ವಿಮಾನ ನಿಲ್ದಾಣದ ಕೆಳಗೆ 50 ಮೀಟರ್ ಆಳದಲ್ಲಿ ನಿಲ್ಲುತ್ತದೆ.ನಗರದ ಎಲ್ಲ ಚರಂಡಿಗಳ ನೀರು ಇಳಿಜಾರಿನಲ್ಲಿ ತಾನಾಗಿ ಹರಿದು ಬಂದು ಅಲ್ಲಿ ಒಂದೇ ಕಡೆ ನಿಂತು ಸಂಸ್ಕರಣೆಯಾಗಿ ಪಂಪ್ ಮೂಲಕ ಮೇಲಕ್ಕೆ ಬರಲಿದೆ. ಎಂಥವರನ್ನೂ ಬೆರಗುಗೊಳಿಸಬಲ್ಲ ಎಂಜಿನಿಯರಿಂಗ್ ಕೌಶಲ ಅದು.ಸಿಂಗಪುರದ ಮಾದರಿಯಲ್ಲಿ ಬೆಳೆಯಬೇಕಿದ್ದ ಬೆಂಗಳೂರಿನ ಕತೆ ಏನು ಗೊತ್ತೆ? ಚರಂಡಿ ನೀರಿನ ಸಂಸ್ಕರಣೆಗೆಂದು ಏಳು ಘಟಕಗಳನ್ನು ಸ್ಥಾಪಿಸಲಾಗಿದೆ ನಿಜ. ಆದರೆ ಸಂಸ್ಕರಿಸಿದ ನೀರಿನ ಬಹುಭಾಗವನ್ನು ಬಳಸುವವರೇ ಇಲ್ಲ! ಘಟಕ ಇರುವುದು ಒಂದು ಕಡೆ, ಸಂಸ್ಕರಿತ ನೀರನ್ನು ಬಳಸಬೇಕಿದ್ದ ಉದ್ಯಮಗಳಿರುವುದು ಇನ್ನೊಂದು ಕಡೆ.

 

ಪೈಪ್ ಮೂಲಕ ಒಯ್ಯುವಂತಿಲ್ಲ; ಟ್ಯಾಂಕರಿನಲ್ಲಿ ತುಂಬಿಸಿ ಒಯ್ದರೆ ದುಬಾರಿಯಾಗುತ್ತದೆ. ಹಾಗಾಗಿ ಅರೆಬರೆ ಶುದ್ಧೀಕರಿಸಿದ ನೀರನ್ನು ಮತ್ತೆ ಹಳ್ಳಕ್ಕೇ ಹರಿಯ ಬಿಡಲಾಗುತ್ತಿದೆ.ಗಿರಾಕಿಗಳೇ ಇಲ್ಲದಿರುವಾಗ ಅಂಥ ನೀರಿನ ಗುಣಮಟ್ಟ ತಪಾಸಣೆ ಮಾಡುವ ಆಸಕ್ತಿ ಯಾರಿಗಿದ್ದೀತು?  ಅದಕ್ಕೇ ಇರಬೇಕು, ವೃಷಭಾವತಿ ನದಿಗುಂಟ ಎರಡೆರಡು ಶುದ್ಧೀಕರಣ ಘಟಕಗಳಿದ್ದರೂ ಮೈಸೂರು ರಸ್ತೆಯ ಪಯಣಿಗರು ಮೂಗು ಮುಚ್ಚಿಕೊಂಡು ಸಾಗುವುದು ತಪ್ಪಿಲ್ಲ. ನಮ್ಮ ಇತರ ಪಟ್ಟಣಗಳಿಗೆ ಇದೇ ಮಾದರಿ!ಮತ್ತೆ ಸಿಂಗಪುರಕ್ಕೆ ಹೋಗೋಣ. ಸಮುದ್ರದ ಉಪ್ಪುನೀರನ್ನೇ ಅಲ್ಲಿ ಸಿಹಿನೀರನ್ನಾಗಿ ಪರಿವರ್ತಿಸಿ ಕುಡಿಯುವ ನೀರಿಗೆ ಸೇರಿಸಲಾಗುತ್ತದೆ. ಇದೂ ಅಂಥ ಮಹಾನ್ ಪರಮಾಣು ತಂತ್ರಜ್ಞಾನವೇನೂ ಅಲ್ಲ. ಹಡಗುಗಳಲ್ಲಿ, ಜಲಾಂತರ್ಗಾಮಿ ನೌಕೆಗಳಲ್ಲಿ ಈ ವ್ಯವಸ್ಥೆ ಅಜ್ಜನ ಕಾಲದಿಂದಲೂ ಬಳಕೆಯಲ್ಲಿದೆ.ನೀರನ್ನು ಕುದಿಸಿ ಬಟ್ಟಿ ಇಳಿಸಬೇಕು; ಕುದಿಸಲು ನೂರು ಡಿಗ್ರಿ ಸೆಲ್ಸಿಯಸ್ ಆಗಬೇಕೆಂದೇನೂ ಇಲ್ಲ. ಹಿಮಾಲಯದ ತುದಿಯಲ್ಲಿ 60 ಡಿಗ್ರಿಗೇ ನೀರು ಕುದಿಸಿ ಚಹಾ ಮಾಡಬಹುದು ಗೊತ್ತಲ್ಲ? ಸಮುದ್ರಮಟ್ಟದಲ್ಲಿ ಕೂಡ ನೀರಿನ ಪಾತ್ರೆಯಲ್ಲಿನ ವಾಯುವಿನ ಒತ್ತಡ ಕಡಿಮೆ ಮಾಡಿದರೆ, ನೀರು 60 ಡಿಗ್ರಿಗೂ ಆವಿಯಾಗುತ್ತದೆ.

 

ಪ್ರತಿದಿನ ಒಂದೂವರೆ ಲಕ್ಷ ಘನ ಮೀಟರ್‌ನಷ್ಟು ಸಿಹಿನೀರನ್ನು ಉತ್ಪಾದಿಸಬಲ್ಲ ಜಗತ್ತಿನ ಅತಿದೊಡ್ಡ ಘಟಕ ಸಿಂಗಪುರದಲ್ಲಿದೆ. ಅಂಥ ಇನ್ನೂ ಐದು ಘಟಕಗಳನ್ನು ಸ್ಥಾಪಿಸಿ, ಪಕ್ಕದ ಮಲೇಶ್ಯದ ಮೇಲಿನ ಅವಲಂಬನೆಯನ್ನು ಪೂರ್ತಿ ತಪ್ಪಿಸಿಕೊಳ್ಳುವ ಯೋಜನೆ ಅದರದ್ದು.ನಮ್ಮ ದೇಶದಲ್ಲಿ ಈ ಸರಳ ತಂತ್ರಜ್ಞಾನವೂ ಪರಮಾಣು ಇಲಾಖೆಯ ಸುಪರ್ದಿಯಲ್ಲಿದೆ. ದೇಶದ ನಾಲ್ಕಾರು ಕಡೆ ಉಪ್ಪುನೀರಿನ ಬಟ್ಟಿ ಇಳಿಸುವ ಘಟಕಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಅದರದ್ದು. ಆದರೆ ಚೆನ್ನೈ ಬಳಿಯ ಕಲ್ಪಾಕ್ಕಮ್ ಪರಮಾಣು ಸ್ಥಾವರದ ಬಳಿಯ ಇಂಥದೊಂದು ಘಟಕ ಅಲ್ಲಿನ ವಿಜ್ಞಾನಿಗಳಿಗೆ ಏನೆಲ್ಲ ತಲೆನೋವು ತಂದಿಟ್ಟಿದೆ.ಸಮುದ್ರವಾಸಿ ಜೆಲ್ಲಿ ಮೀನುಗಳ ಪುಟ್ಟಪುಟ್ಟ ಮೊಟ್ಟೆಗಳು ಜರಡಿಯಲ್ಲಿ ಹಾದು ಒಳಕ್ಕೆ ನುಗ್ಗಿ ಕೊಳವೆಗಳಲ್ಲಿ ಸಂತಾನವೃದ್ಧಿ ಮಾಡಿ ನೀರಿನ ಒಳಹರಿವಿಗೇ ಅಡ್ಡಿಯುಂಟು ಮಾಡುತ್ತವೆ. ಭಯೋತ್ಪಾದಕರ ವಿರುದ್ಧ, ಪರಿಸರವಾದಿಗಳ ವಿರುದ್ಧ ಗನ್ ತಿರುಗಿಸಬಲ್ಲ ರಕ್ಷಾಭಟರು ಇಂಥ ಕ್ಷುದ್ರಜೀವಿಗಳ ಬಗ್ಗೆ ಏನೂ ಮಾಡುವಂತಿಲ್ಲ.ಈಗ ಹೊಸ ಕೂಡಂಕುಲಂ ಸ್ಥಾವರಕ್ಕೆ ಇಸ್ರೇಲೀ ತಂತ್ರಜ್ಞಾನವನ್ನು ಬಳಸಿ 115 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಘಟಕಗಳನ್ನು ಹೂಡಲಾಗಿದೆ. ಇಲ್ಲೇನಾದರೂ ತುರ್ತು ಸಮಸ್ಯೆ ಬಂದರೆ ಇಸ್ರೇಲೀ ಎಂಜಿನಿಯರ್‌ಗಳೇ ಧಾವಿಸಿ ಬರಬೇಕು ರಿಪೇರಿಗೆ. ಸೌರಶಕ್ತಿಯ ಬಳಕೆ ಇದೆಯೇ? ಅದೂ ಇಲ್ಲ.ಕರ್ನಾಟಕದ ಬಯಲುಸೀಮೆಯ ಬಹಳಷ್ಟು ಊರುಗಳಲ್ಲಿ ನೀರಿನ ಭೀಕರ ಸಮಸ್ಯೆ ಇದೆ. ನೀರಿದ್ದರೂ ಬಳಸಲಾಗದಷ್ಟು ಲವಣಾಂಶವಿದೆ. ಜತೆಗೆ ಫ್ಲೋರೈಡ್ ಮತ್ತು ಆರ್ಸೆನಿಕ್ ವಿಷದ್ರವ್ಯಗಳಿವೆ.ಬಿಸಿಲಿನ ಶಕ್ತಿಯಿಂದಲೇ ಅವನ್ನು ನಿವಾರಿಸಬಲ್ಲ ಸರಳ ತಂತ್ರಗಳನ್ನು ಶೋಧಿಸಿದ್ದರೆ ಕೋಟ್ಯಂತರ ಜನರಿಗೆ ಸಹಾಯವಾಗಬಹುದಿತ್ತು. ಈಗೇನೋ ಅನುಕೂಲಸ್ಥರು ಬೋರ್‌ವೆಲ್ ನೀರಿನ ಲವಣದ ಅಂಶವನ್ನು ತೆಗೆದು ಹಾಕಲು ಭಾರೀ ದುಬಾರಿಯ `ರಿವರ್ಸ್ ಆಸ್ಮೊಸಿಸ್~ ಎಂಬ ಸೋಸು ಸಾಧನವನ್ನು ಹಾಕಿಸಿಕೊಳ್ಳುತ್ತಾರೆ.

 

ಅದರಿಂದ ಹಾಯ್ದು ಬರುವ ಶೇ 30ರಷ್ಟು ನೀರು ಮಾತ್ರ ಬಳಕೆಗೆ ಸಿಗುತ್ತದೆ. ಇನ್ನುಳಿದ ಬಹುಪಾಲು ನೀರು ಒಳಚರಂಡಿ ಹೊಕ್ಕು ನಗರದಾಚೆ ಹೊರಟು ಹೋಗುತ್ತದೆ; ಅಂದರೆ ನಗರದ ಅಂತರ್ಜಲ ನಿರರ್ಥಕ ಖಾಲಿಯಾಗುತ್ತದೆ.ಜನರ ಅಗತ್ಯಗಳಿಗೆ ನೆರವಾಗಬಲ್ಲ, ಮುಂದಿನ ಪೀಳಿಗೆಗೂ ನೆಮ್ಮದಿ ನೀಡಬಲ್ಲ ಸುಸ್ಥಿರ ತಂತ್ರಜ್ಞಾನಕ್ಕೆ ಯಾಕೆ ಸರ್ಕಾರ ಆದ್ಯತೆ ನೀಡುತ್ತಿಲ್ಲ? ಇಂದು ಖಾಸಗಿ ಕಂಪೆನಿಗಳು ಪುಟ್ಟ ಪುಟ್ಟ ಕ್ರಾಂತಿಕಾರಿ ಸಾಧನಗಳನ್ನು ಬಳಕೆಗೆ ತರುತ್ತಿವೆ.

 

ಗಾಳಿಯಲ್ಲಿನ ತೇವಾಂಶವನ್ನೇ ಸಂಗ್ರಹಿಸಿ ಲೋಟ ತುಂಬ ಶುದ್ಧ ನೀರನ್ನು ನೀಡಬಲ್ಲ ಫ್ರಿಜ್ ಮಾದರಿಯ ಸಾಧನ ಬೇಕೆ? ಮನೆಯ ಟಾಯ್ಲೆಟ್ ನೀರನ್ನೇ ಶುದ್ಧೀಕರಿಸಿ ಶೌಚಕ್ಕೆ, ಕೈದೋಟದ ಬಳಕೆಗೆ ಒದಗಿಸಬಲ್ಲ ಆಳೆತ್ತರ ಸಾಧನ ಬೇಕೆ? ಕೊಳವೆಬಾವಿಯ ಒರಟು ನೀರನ್ನು ಸೌರಶಕ್ತಿಯಿಂದಲೇ ಸಿಹಿನೀರನ್ನಾಗಿ ಬದಲಿಸಬಲ್ಲ ಘಟಕ ಬೇಕೆ? ಎಲ್ಲವೂ ಸಾಧ್ಯವಿದೆ. ಬೆಂಗಳೂರಿನ ಇಕೊ ಬಿಸಿಐಎಲ್ ಕಂಪೆನಿ ಇವುಗಳನ್ನು ಆಗಲೇ ನಿರ್ಮಿಸಿದೆ.ಸರ್ಕಾರ ಯಾಕೆ ಇಂಥ ಸಂಶೋಧನೆಗೆ ಆದ್ಯತೆ ನೀಡುತ್ತಿಲ್ಲ? ಯಾಕೆ ಕೊಳೆನೀರ ಸಂಸ್ಕರಣೆ ಕುರಿತು ನಿನ್ನೆಯ ಮುಂಗಡಪತ್ರದಲ್ಲಿ ಒಂದು ಸೊಲ್ಲೂ ಇಲ್ಲ? ನೀರನ್ನು ಸೋಸಲಿಕ್ಕೂ ಫ್ರಾನ್ಸ್‌ನಿಂದಲೋ ಹಾಲಂಡ್‌ನಿಂದಲೋ ಎಂಜಿನಿಯರ್‌ಗಳನ್ನು ಕರೆಸಿ ನೂರಾರು ಕೋಟಿ ವ್ಯಯಿಸುವ ಜಲಮಂಡಲಿಗಳು ಒಂದರ್ಧ ಕೋಟಿ ವ್ಯಯಿಸಿ ನಮ್ಮ ಯುವ ವಿಜ್ಞಾನಿಗಳಿಗೇ ಫೆಲೊಶಿಪ್ ನೀಡಿ ಜಲ ತಂತ್ರಜ್ಞಾನ ಸಂಶೋಧನೆಗೆ ಯಾಕೆ ಪ್ರೋತ್ಸಾಹ ನೀಡುತ್ತಿಲ್ಲ?ಪ್ರತಿ ಬೇಸಿಗೆ ಬರುತ್ತಿದ್ದಂತೆ ಯಾಕೆ ಟ್ಯಾಂಕರ್‌ಗಳ ಮೂಲಕ ಊರೂರಿಗೆ ನೀರನ್ನು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶ ಹೋಗುತ್ತದೆ? ರಾಜಕಾರಣಿಗಳು ಮಾತೆತ್ತಿದರೆ ದೂರದ ನದಿಗಳಿಗೆ ಡ್ಯಾಮ್ ಕಟ್ಟುವ, ಕಾಲುವೆ ಹರಿಸುವ ಬೃಹತ್‌ಯೋಜನೆಗಳನ್ನೇ ಯಾಕೆ ಬಿಚ್ಚುತ್ತಾರೆ?

 

ಯಾಕೆ ನದಿಗಳನ್ನು ತಿರುಗಿಸುವ, ಜೋಡಿಸುವ ಘಾತುಕ ಯೋಜನೆಗಳೇ ಇವರ ತಲೆಯಲ್ಲಿ ಗಿಂವನ್ನುತ್ತವೆ? ಒಂದರ್ಧ ವರ್ಷದಲ್ಲೇ ಪೂರ್ತಿಯಾಗಬಲ್ಲ, ಸ್ಥಳೀಯರಿಗೆ ಉದ್ಯೋಗ ನೀಡಬಲ್ಲ, ಸ್ಥಳೀಯ ಪ್ರತಿಭೆಗಳಿಗೇ ನೀರೆರೆಯಬಲ್ಲ, ಸ್ಥಳೀಯ ನೀರನ್ನೇ ಸಂಸ್ಕರಿಸಿ ಬಳಸುವ ತಂತ್ರಜ್ಞಾನಕ್ಕೆ ಯಾಕೆ ಆದ್ಯತೆ ಸಿಗುತ್ತಿಲ್ಲ?ಯಾಕೆಂದರೆ ಚಿಕ್ಕಪುಟ್ಟ, ಜನೋಪಯೋಗಿ ಯೋಜನೆಗಳಲ್ಲಿ ದೊಡ್ಡ ಪ್ರಮಾಣದ ಹಣದ ವಹಿವಾಟು ಇರುವುದಿಲ್ಲ. ದೊಡ್ಡ ಯೋಜನೆಗೆ ದೊಡ್ಡ ಮೊತ್ತದ ವಿದೇಶೀ ಹಣ ಬಂದು ಗ್ರಾನೈಟ್ ಗಣಿ, ಸಿಮೆಂಟ್-ಉಕ್ಕು ಸ್ಥಾವರ, ಜೆಸಿಬಿ ತುಕಡಿ ಖರೀದಿ, ಭೂ ಸ್ವಾಹಾ ಅವಕಾಶಗಳಿಗೆಲ್ಲ ಸಾವಿರ ಕೋಟಿಗಟ್ಟಲೆ ಧಾರಾಕಾರಸುರಿಯುತ್ತದೆ. ಆಯಾತ ನಿರ್ಯಾತ ವಹಿವಾಟು ಹೆಚ್ಚುತ್ತದೆ.ಗೊತ್ತಾಯಿತೆ, ಆಯಾತ ನಿರ್ಯಾತ ಎಂದರೆ? ನಿರ್ಯಾತ ಎಂದರೆ ಇಲ್ಲಿಂದ ವಿದೇಶಗಳಿಗೆ ಹೋಗುವ ಕಪ್ಪುಹಣ; ಆಯಾತವೆಂದರೆ ವಿದೇಶೀ ಸಂಸ್ಥೆಗಳಿಂದ ಹರಿದು ಬಂದು ನಮ್ಮ ತಲೆಯ ಮೇಲೆ ಧುಮುಕುವ ಸಾಲದ ಹಣ.(ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.