ಗುರುವಾರ , ಮಾರ್ಚ್ 4, 2021
19 °C

ಸೇತುವೆ ನಿರ್ಮಾಣ ಸರ್ಕಾರದ ಆದ್ಯತೆ ಆಗಲಿ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಸೇತುವೆ ನಿರ್ಮಾಣ ಸರ್ಕಾರದ ಆದ್ಯತೆ ಆಗಲಿ

ಎರಡು ಊರುಗಳನ್ನು ಕೂಡಿಸುವ ಸೇತುವೆಗೆ,  ಆ ಊರ ಜನರ ಮನವನ್ನು ಬೆಸೆಯುವ ಶಕ್ತಿಯೂ ಇದೆ. ಆ ಸೇತುವೆ ಅವರ ನಡುವಿನ ಬಾಂಧವ್ಯಕ್ಕೆ ದಾರಿಯಾಗಬಲ್ಲದು. ಅಂಥದೊಂದು ಸೇತುವೆ ತಮಗೆ ಬೇಕು ಎಂದು ಉತ್ತರ ಕರ್ನಾಟಕದ ವಿವಿಧೆಡೆ ನಾಗರಿಕರು ಹೋರಾಟ ನಡೆಸುತ್ತಿದ್ದಾರೆ.ಎರಡು ತಾಲ್ಲೂಕುಗಳು ಅಥವಾ ಎರಡು ಜಿಲ್ಲೆ­ಗಳನ್ನು ಬೇರ್ಪಡಿಸಿರುವ ನದಿಗಳ ಮಧ್ಯೆ, ಅತಿ ಅಗತ್ಯವಾಗಿರುವ ಕಡೆಗಳಲ್ಲಿ ಸೇತುವೆ ನಿರ್ಮಿಸಿ ಬಾಂಧವ್ಯ ಬೆಸೆಯುವ ಕಾರ್ಯ ಮಾಡ­ಬೇಕು ಎಂಬುದು ಅವರ ಒತ್ತಾಯ. ಈ ಕಾರಣ­ಕ್ಕಾಗಿ ಸರ್ಕಾರದ ಗಮನ ಸೆಳೆಯಲು ಅವರು ಹೋರಾಟದ ಹಾದಿ ಹಿಡಿದಿದ್ದಾರೆ. ವಿಶೇಷವಾಗಿ ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಇಂತಹ ಹೋರಾಟಗಳನ್ನು ಕಾಣಬಹುದಾಗಿದೆ.ನದಿಗಳ ಆಚೆ–ಈಚೆ ಕಡೆಯ ಜನರ ಓಡಾಟಕ್ಕೆ, ವ್ಯಾಪಾರ– ವ್ಯವಹಾರಕ್ಕೆ ಸೇತುವೆ ಅನಿವಾರ್ಯ. ಆದರೂ ಸರ್ಕಾರ ಏಕೋ ಜನರ ಹೋರಾಟಕ್ಕೆ ಸ್ಪಂದಿಸದೇ ತಾತ್ಸಾರ ತೋರುತ್ತಿದೆ. ಹಿಂದೆ, ನದಿಗಳಲ್ಲಿ ನೀರು ನಿಲ್ಲಿಸಲು ಅಲ್ಲಲ್ಲಿ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿತ್ತು. ಅದೇ ಬ್ಯಾರೇಜ್ ಮೇಲೆ ಜನರಿಗೆ ಸಂಚರಿಸಲು ಅವಕಾಶ­ವನ್ನೂ ಮಾಡಿಕೊಡಲಾಗಿತ್ತು. ಇವು ಜನಜೀವನದ ಬೆಸುಗೆಗೆ ಕೊಂಡಿಯಾಗಿದ್ದವು.ದಿನಗಳು ಕಳೆದಂತೆ ಜನಸಂಖ್ಯೆ ವಿಪರೀತವಾಗಿ ಏರುತ್ತಿದ್ದು, ನೀರು ಪೂರೈಕೆ ಎಂಬುದು ಸರ್ಕಾರಕ್ಕೆ ಸವಾಲಾಗಿದೆ.  ನದಿಗಳಲ್ಲಿ ಹಲವೆಡೆ ಹೊಸದಾಗಿ ಎತ್ತರದ ಬ್ಯಾರೇಜ್‌ಗಳನ್ನು ನಿರ್ಮಿಸುವ ಮೂಲಕ ಹೆಚ್ಚು ನೀರನ್ನು ಸಂಗ್ರಹಿಸಿ, ಜನರಿಗೆ ಒದಗಿಸುತ್ತಿದೆ; ಇದು ಅಗತ್ಯವೂ ಆಗಿತ್ತು. ಜನರಿಗೆ ಕುಡಿಯುವ ನೀರು ಪೂರೈಕೆ ಸರ್ಕಾರದ ಆದ್ಯ ಕರ್ತವ್ಯ ಕೂಡ. ಆದರೆ ಹೊಸ ಬ್ಯಾರೇಜ್‌ಗಳ ನಿರ್ಮಾಣದಿಂದ ಹಳೆಯ ಬ್ಯಾರೇಜ್‌ ಕಮ್‌ ಬ್ರಿಜ್‌ಗಳು ಹಿನ್ನೀರಿನಲ್ಲಿ ಮುಳುಗಿ ಹೋದವು! ಇದರಿಂದಾಗಿ ಜನರಿಗೆ ತೀವ್ರತರದ ತೊಂದರೆ­ಗಳಾಗಿವೆ. ಅನುಗಾಲವೂ ಈ ಸಮಸ್ಯೆ ಇರುತ್ತದೆ.ಹಳೆಯ ಬ್ಯಾರೇಜ್‌ ಕಮ್‌ ಬ್ರಿಜ್‌ಗಳಿಂದಾಗಿ ಸಮೀಪವಾಗಿದ್ದ ಊರುಗಳನ್ನು ಸೇರಲು ಈಗ ಸುತ್ತಿ, ಬಳಸಿ ಹೋಗಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಉದಾಹರಣೆ ಎಂದರೆ ಗುಲ್ಬರ್ಗ ಜಿಲ್ಲೆಯ ದೇವಣಗಾಂವ್‌ ಬಳಿ ಭೀಮಾ ನದಿಗೆ ಹೊಸದಾಗಿ ನಿರ್ಮಿಸಿರುವ ಎತ್ತರಿಸಿದ ಬ್ಯಾರೇಜ್‌ ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿ­ನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಪ್ಪರಗಿ ಬ್ಯಾರೇಜ್‌ಗಳು.ದೇವಣಗಾಂವ್‌ ಬಳಿಯ ಬ್ಯಾರೇಜ್‌ ನಿರ್ಮಾಣ­ದಿಂದ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಬಳಿ ಇದ್ದ ಬ್ಯಾರೇಜ್‌ ಕಮ್‌ ಬ್ರಿಜ್‌ ನೀರಿನಲ್ಲಿ ಮುಳುಗಿದೆ. ಅದೇ ರೀತಿ ಜಮಖಂಡಿ ತಾಲ್ಲೂಕಿನ ರಬಕವಿ–ಮಹಿಷವಾಡಗಿ ಬ್ಯಾರೇಜ್‌ ಕಮ್‌ ಬ್ರಿಜ್‌ ಸಹ ವರ್ಷದ 10 ತಿಂಗಳು ಮುಳುಗಿರುತ್ತದೆ. ಕಡಣಿ ಗ್ರಾಮದ ಸುತ್ತಮುತ್ತಲಿನ ಜನರು ಹಳೆಯ ಸೇತುವೆ ಬಳಕೆಯಲ್ಲಿದ್ದಾಗ ತಮ್ಮ ವಿವಿಧ ಚಟುವಟಿಕೆಗಳಿಗೆ ಮಹಾರಾಷ್ಟ್ರದ ಅಕ್ಕಲಕೋಟೆ, ಸೊಲ್ಲಾಪುರಗಳಿಗೆ ಸುಲಭವಾಗಿ ಹೋಗಿ ಬಂದು ಮಾಡುತ್ತಿದ್ದರು.ಜತೆಗೆ ಗುಲ್ಬರ್ಗ ಜಿಲ್ಲೆಯ ಅಫ್ಜಲ್‌ಪುರ ಕೂಡ ಸಮೀಪವಾಗಿತ್ತು. ಜಮಖಂಡಿ ತಾಲ್ಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆ­ಗಳಿಗೆ ಅಫ್ಜಲ್‌ಪುರ ತಾಲ್ಲೂಕಿನ ರೈತರು ಬೆಳೆದ ಕಬ್ಬು ಪೂರೈಕೆಗೂ ಅನುಕೂಲ­ವಾಗಿತ್ತು. ಹಳೆ ಬ್ಯಾರೇಜ್‌ ಮುಳುಗುವವರೆಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು.ಆದರೆ ಈಗ ಅಫ್ಜಲ್‌ಪುರದಿಂದ ಕಬ್ಬು ಹೊತ್ತ ಲಾರಿಗಳು ಜಮಖಂಡಿಗೆ ಬರಬೇಕೆಂದರೆ ಸುಮಾರು 150 ಕಿ.ಮೀ ಕ್ರಮಿಸಬೇಕು. ಈ ಪಡಿ­ಪಾಟಲನ್ನು ತಪ್ಪಿಸಬೇಕು, ಗಡಿ ಭಾಗದ ಜನರ ನಡುವಿನ ಬಾಂಧವ್ಯ ಮರುಸ್ಥಾಪನೆಯಾಗಬೇಕು, ಅದಕ್ಕಾಗಿ ಜನ–ವಾಹನಗಳ ಸಂಚಾರಕ್ಕಾಗಿ ಎತ್ತರಿಸಿದ ಸುಸಜ್ಜಿತ ಸೇತುವೆ ನಿರ್ಮಾಣ­ವಾಗಬೇಕು ಎಂದು ಕಡಣಿ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ.ಇದೇ ರೀತಿ ರಬಕವಿ–ಮಹಿಷವಾಡಗಿ ನಡು­ವೆಯೂ ಕೃಷ್ಣಾ ನದಿಗೆ ಎತ್ತರಿಸಿದ ಹೊಸ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಲು ಸಾರ್ವಜ­ನಿಕರು ಸೇತುವೆ ನಿರ್ಮಾಣ ಹೋರಾಟ ಸಮಿತಿ­ಯನ್ನು ರಚಿಸಿಕೊಂಡು ಹೋರಾಟ ನಡೆಸು­ತ್ತಿದ್ದಾರೆ. ಸಮಿತಿ ಹಲವೆಡೆ ಸಭೆಗಳನ್ನು ನಡೆಸಿ, ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದೆ.ನೇಕಾರಿಕೆಯನ್ನೇ ಅವಲಂಬಿಸಿರುವ ರಬಕವಿ–ಬನಹಟ್ಟಿಗಳಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಯಾವುದೇ ಸೌಲಭ್ಯವಿಲ್ಲದ ಈ ಅವಳಿ ನಗರಕ್ಕಿದ್ದ ಏಕೈಕ ಸೌಲಭ್ಯವೂ ಹಿಪ್ಪರಗಿ ಬ್ಯಾರೇಜ್‌ನಿಂದ ಬಂದ್‌ ಆಗಿದೆ.ಹೊಸ ಸೇತುವೆ ನಿರ್ಮಾಣವಾದರೆ, ರಬಕವಿ­ಯಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣಕ್ಕೆ ಕೇವಲ 20 ಕಿ.ಮೀ ಆಗುತ್ತದೆ. ಅಲ್ಲಿಂದ ಮಹಾರಾಷ್ಟ್ರವೂ ಹತ್ತಿರ. ಆದರೆ ಈಗ ಸುತ್ತುಬಳಸಿ ಜಮಖಂಡಿ ಮೂಲಕ ಅಥಣಿಗೆ ಹೋಗಬೇಕು. ಈ ಎರಡು ಕಡೆ ಎತ್ತರಿಸಿದ ಸೇತುವೆ­ಗಳ ನಿರ್ಮಾಣದಿಂದ ಸಾವಿರಾರು ಜನ­ರಿಗೆ ಅನುಕೂಲವಾಗುತ್ತದೆ. ಇಂಧನ, ಸಮಯ ಬಹಳಷ್ಟು ಉಳಿತಾಯವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ವ್ಯಾಪಾರ –ವಹಿವಾಟು ಹೆಚ್ಚಳ­ವಾಗು­ತ್ತದೆ. ಇದರಿಂದ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ವರಮಾನವೂ ಬರುತ್ತದೆ. ಆದರೂ ಸರ್ಕಾರವೇಕೋ ಇತ್ತ ಗಮನ ಕೊಡುತ್ತಿಲ್ಲ. ಬಹಳ ವರ್ಷದಿಂದಲೂ ದಿವ್ಯ ಮೌನ ವಹಿಸಿದೆ. ಬ್ಯಾರೇಜ್‌ಗಳಲ್ಲಿ ಸದಾಕಾಲ ನೀರು ನಿಲ್ಲು­ವುದ­ರಿಂದ ಎರಡೂ ಬದಿಯ ಜನರಿಗೂ ದೋಣಿ ಪಯಣ ಅನಿವಾರ್ಯವಾಗಿದೆ. ಮಳೆಗಾಲ­ದಲ್ಲಿ ನದಿಗಳು ಉಕ್ಕಿ ಹರಿಯುತ್ತವೆ. ಅಂತಹ ಸಂದರ್ಭ­ದಲ್ಲಿ ಶಾಲಾ–ಕಾಲೇಜುಗಳಿಗೆ ಹೋಗುವ ಮಕ್ಕಳೂ ಸೇರಿದಂತೆ ಎಲ್ಲರೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ದೋಣಿ ಮೂಲಕ ಆಚೆ ಬದಿಯ ದಡ ಸೇರಬೇಕು.ಕಡಣಿ ಸುತ್ತ­ಮುತ್ತಲಿನ ಗ್ರಾಮಸ್ಥರು ಮೊದಲು ಆಸ್ಪತ್ರೆಗೆ ಹೋಗಬೇಕೆಂದರೂ ಸಮೀಪದ ಸೊಲ್ಲಾಪುರಕ್ಕೇ ಹೋಗುತ್ತಿದ್ದರು. ಈಗ ಗರ್ಭಿಣಿಯರನ್ನು ದೋಣಿ­ಯಲ್ಲಿ ಭೀಮಾ ನದಿ ದಾಟಿಸಲು ಅಂಜು­ವಂತಾಗಿದೆ. ಜನರ ಈ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕಿತ್ತು. ವಿಪರ್ಯಾಸವೆಂದರೆ ಈ ಭಾಗದ ಅಧಿಕಾರಿಗಳಿಗೂ ಜನರ ಕಷ್ಟದ ಅರಿವಾಗುತ್ತಿಲ್ಲ. ಅವರೂ ನಿರ್ಲಕ್ಷ್ಯ ತಾಳಿದ್ದಾರೆ.ಸೇತುವೆಗಾಗಿ ಸಾರ್ವಜನಿಕರೇನು ನಿನ್ನೆ ಮೊನ್ನೆ ಹೋರಾಟ ಆರಂಭಿಸಿಲ್ಲ. ಹಲವು ವರ್ಷಗಳಿಂದ ಈ ಹಾದಿ ಹಿಡಿದಿದ್ದಾರೆ. ಚುನಾಯಿತ ಪ್ರತಿನಿಧಿ­ಗಳ ಗಮನ ಸೆಳೆದಿದ್ದಾರೆ. ಮನವಿ ಅರ್ಪಿಸಿದ್ದಾರೆ. ಆದರೆ ಪರಿಣಾಮ ಮಾತ್ರ ಶೂನ್ಯ. ಇದು ಸೇತುವೆಗಾಗಿ ಹೋರಾಟ ನಡೆಸುತ್ತಿರುವವರ ಕಥೆ. ಆದರೆ ಹೋರಾಟ ಮಾಡಲೂ ಆಗದ ಗ್ರಾಮಸ್ಥರು ಇನ್ನೂ ಹೆಚ್ಚು ಇರಬಹುದು.ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳ್ಳ, ನದಿಗಳು, ಉಪ ನದಿಗಳ ಸಂಖ್ಯೆ ಹೆಚ್ಚು. ಅಲ್ಲಿ ಸಮಸ್ಯೆಯೂ ಹೆಚ್ಚಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ತಕ್ಷಣ ತಿಳಿದುಕೊಂಡು ಪರಿಹರಿಸುವ ನಿರ್ಧಾರ ಕೈಗೊ­ಳ್ಳು­ವಂತಹ ಜಿಲ್ಲಾ ಯೋಜನಾ ಸಮಿತಿಗಳನ್ನು ಸರ್ಕಾರ ಸಕ್ರಿಯಗೊಳಿಸಬೇಕು. ಪಂಚಾಯತ್‌­ರಾಜ್‌ ಕಾಯ್ದೆ ಅನ್ವಯ ಜಿಲ್ಲಾ ಮಟ್ಟದಲ್ಲಿ ಈ ಸಮಿತಿಗಳ ರಚಿಸುವತ್ತ ಗಮನಹರಿಸಬೇಕು. ಜತೆಗೆ ಹಣವನ್ನೂ ಒದಗಿಸಬೇಕು.ಅಚ್ಚರಿಯ ಸಂಗತಿ ಎಂದರೆ, ಮಾತು ಮಾತಿಗೂ ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇಲ್ಲ ಎಂದು  ಆಡಳಿತದ ಚುಕ್ಕಾಣಿ ಹಿಡಿದವರು ಹೇಳುತ್ತಲೇ ಇರುತ್ತಾರೆ. ಆದರೆ ಸಹಸ್ರಾರು ಜನರಿಗೆ ಉಪಯೋಗವಾಗುವ ಸೇತುವೆಗಳ ನಿರ್ಮಾಣವನ್ನು ಕೈಗೆತ್ತಿಕೊಂಡೇ ಇಲ್ಲ. ಬಹುಶಃ ಈ ಕೆಲಸಗಳನ್ನು ಅಭಿವೃದ್ಧಿ ಕಾರ್ಯ ಎಂದು ಪರಿಗಣಿಸಿಲ್ಲವೋ ಏನೋ? ಸರ್ಕಾರದ ನಿರ್ಲಿಪ್ತ ಭಾವನೆಯನ್ನು ನೋಡಿದರೆ ಯಾರಿಗಾದರೂ ಈ ಭಾವನೆ ಮೂಡುತ್ತದೆ. ಇಂತಹ ಕೆಲಸಗಳೂ ಸರ್ಕಾರದ ಆದ್ಯತಾ ಪಟ್ಟಿಯಲ್ಲಿ ಸೇರಿಲ್ಲ ಎಂದರೆ ಏನು ಹೇಳುವುದು?ಅವುಗಳ ಅನುಷ್ಠಾನಕ್ಕೆ ರೊಕ್ಕ ಇಲ್ಲ ಎಂದರೆ ಏನರ್ಥ? ಅದೇ ಸಚಿವರ ವಿಧಾನ­ಸೌಧದ ಕಚೇರಿಗಳು, ಅವರು ವಾಸಿಸುವ ಸರ್ಕಾರಿ ಬಂಗ್ಲೆಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಸುರಿಯಲು ಮಾತ್ರ ಹಣಕ್ಕೆ ಕೊರತೆ ಆಗುವುದೇ ಇಲ್ಲ. ಇಂತಹ ಅನಗತ್ಯ ಕೆಲಸವನ್ನು ಬಿಟ್ಟು, ಆ ಹಣವನ್ನು ಅಗತ್ಯವಿರುವ ಕಡೆ ಸೇತುವೆ ನಿರ್ಮಾಣಕ್ಕೆ ಬಳಸುವುದು ಒಳಿತು. ಜನರೂ ಸರ್ಕಾರದ ಕೆಲಸವನ್ನು ಮೆಚ್ಚುತ್ತಾರೆ. ಆ ಮನಸ್ಸು, ಉದಾರತೆ ಸರ್ಕಾರಕ್ಕಿರಬೇಕು ಅಷ್ಟೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.