ತೀರ ಅಪರೂಪಕ್ಕೆ ಇಂಥ ಎರಡು ಘಟನೆಗಳು ಏಕಕಾಲಕ್ಕೆ ಸಂಭವಿಸುತ್ತವೆ: ಅರುಣಾ ಶಾನಭಾಗ್ ಅವರ ನಿರ್ವಾಣ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಜ್ಜಾಗುತ್ತಿರುವಾಗಲೇ ಅತ್ತ ಬೆಲ್ಜಿಯಮ್ ದೇಶದ ವಿಜ್ಞಾನಿಗಳು ಪ್ರಜ್ಞಾಶೂನ್ಯ ವ್ಯಕ್ತಿಗಳ ಕುರಿತ ಅತ್ಯಂತ ಮಹತ್ವದ ಸಂಶೋಧನೆಯೊಂದನ್ನು ಪ್ರಕಟಿಸಿದ್ದಾರೆ. ‘ಅಂಥವರ ಮಿದುಳು ಸದಾ ವ್ಯಥೆಯಿಂದ ಇರುತ್ತದೆಂದು ಭಾವಿಸಬೇಕಾಗಿಲ್ಲ; ಅದು ನೆಮ್ಮದಿಯಾಗಿ ಅಷ್ಟೇಕೆ, ಪ್ರಜ್ಞಾವಂತ ಮಿದುಳಿಗಿಂತ ಪ್ರಶಾಂತ ಸ್ಥಿತಿಯಲ್ಲಿ ಇರಲು ಸಾಧ್ಯ’ ಎಂದು ಬೆಲ್ಜಿಯಮ್ ವಿಜ್ಞಾನಿಗಳು ಹೇಳಿದ್ದಾರೆ. ಅರುಣಾ ಶಾನಭಾಗ್ ಅವರ ಜೀವಹರಣ ಆಗಕೂಡದೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು ಈ ಕಾರಣದಿಂದಲೂ ಶ್ಲಾಘನೀಯವಾಗಿದೆ.

ದೇಹದ ಯಾವ ಭಾಗಕ್ಕೂ ಚಾಲನೆ ಕೊಡಲಾಗದ ಸ್ಥಿತಿಯಲ್ಲಿ ಮಿದುಳು ಕೈದಿಯಂತೆ ಕೂತಿರುವಾಗ ಅದಕ್ಕೆ ‘ಲಾಕ್ಡ್-ಇನ್ ಸಿಂಡ್ರೋಮ್’ ಎನ್ನುತ್ತಾರೆ. ಅಂಥವರ ಕಣ್ಣುರೆಪ್ಪೆ ಮಾತ್ರ ಚಲಿಸುತ್ತಿರುತ್ತವೆ. ಇಂದು ವಿವಿಧ ದೇಶಗಳಲ್ಲಿ ನಾನಾ ಕಾರಣಗಳಿಂದ ಸಹಸ್ರಾರು ಮಾನವ ಮಿದುಳುಗಳು ಹೀಗೆ ನಿಶ್ಚಲ ದೇಹಗಳಲ್ಲಿ ಕೈದಿಗಳಾಗಿ ಕೂತಿವೆ. ಅವುಗಳ ಜತೆ ಸಂವಾದ ನಡೆಸಲು ಮನೋವೈದ್ಯರು ಏನೆಲ್ಲ ಹರಸಾಹಸ ನಡೆಸುತ್ತಾರೆ. ಕೈದಿಯಂತಿರುವ ಮಿದುಳಿಗೆ ತುಸುವಾದರೂ ಚಾಲನಶಕ್ತಿಯನ್ನು ನೀಡಲು ಸಾಧ್ಯವೇ ಎಂದು ಪರೀಕ್ಷಿಸುತ್ತಿದ್ದಾರೆ.

ನಾವು ಎಚ್ಚರಿದ್ದಷ್ಟು ಕಾಲವೂ ಮಿದುಳಿನ ವಿವಿಧ ಭಾಗಗಳಲ್ಲಿ ವಿದ್ಯುತ್ ತರಂಗಗಳ ರೂಪದಲ್ಲಿ ಆಲೋಚನೆಗಳು, ಆದೇಶಗಳು ಹೊಮ್ಮುತ್ತಿರುತ್ತವೆ.ಯಾವ ಕೆಲಸಕ್ಕೆ ಎಲ್ಲಿಂದ ಆಜ್ಞೆ ಹೊರಡುತ್ತದೆ ಎಂಬುದು ಈಗ ಸಾಕಷ್ಟು ಖಚಿತವಾಗಿ ಗೊತ್ತಾಗುತ್ತಿದೆ. ಎಚ್ಚರವಿದ್ದ ವ್ಯಕ್ತಿಯ ತಲೆಬುರುಡೆಯ ನಾನಾ ಭಾಗಗಳಿಗೆ ಇಲೆಕ್ಟ್ರೋಡ್ಗಳನ್ನು ಅಂಟಿಸಿ, ಇಡೀ ದೇಹವನ್ನು ಸುರಂಗದಂಥ ಎಮ್ಆರ್ಐ ಸ್ಕ್ಯಾನಿಂಗ್ ಯಂತ್ರದೊಳಗೆ ತೂರಿಸಿ, ಮನಸ್ಸು ಮತ್ತು ದೇಹಗಳ ನಡುವಣ ಸಂಭಾಷಣೆಯನ್ನು ಸಮರ್ಥ ಕಂಪ್ಯೂಟರ್ನ ನೆರವಿನಿಂದ ಅರಿಯಲು ಯತ್ನಿಸುತ್ತಾರೆ.

ಉದಾಹರಣೆಗೆ, ಕತ್ತನ್ನು ಎಡಕ್ಕೆ ತಿರುಗಿಸಬೇಕಿದ್ದರೆ ಮಿದುಳಿನ ಯಾವ ಭಾಗದಲ್ಲಿ ತರಂಗಗಳು ಹೊಮ್ಮುತ್ತವೆ; ಕಾಲನ್ನು ಬಲವಾಗಿ ನೆಲಕ್ಕೆ ಒತ್ತಲೆಂದು ಯಾವ ಭಾಗ ಮಿನುಗುತ್ತದೆ ಎಂದು ನೋಡುತ್ತಾರೆ.ಈ ಬಗೆಯ ಪ್ರಯೋಗ ಎಲ್ಲಿಯವರೆಗೆ ಹೋಗಿದೆ ಎಂದರೆ, ಜರ್ಮನಿಯ ಆಟೊಮೇಶನ್ ತಜ್ಞರು ಮಿದುಳಿನಿಂದ ಹೊಮ್ಮುವ ಇಂಥ ವಿದ್ಯುತ್ ತರಂಗಗಳನ್ನು ನೇರವಾಗಿ ಕಾರಿನ ಸ್ಟೀರಿಂಗ್ ಚಕ್ರಕ್ಕೆ ಮತ್ತು ಬ್ರೇಕ್ಗೆ ರವಾನಿಸಲು ಕಲಿತಿದ್ದಾರೆ. ಕಾರಿನಲ್ಲಿ ಬೆಪ್ಪನಂತೆ ಕೂತ ವ್ಯಕ್ತಿಯೊಬ್ಬ ಕೇವಲ ಮನೋಬಲದಿಂದಲೇ ಕಾರಿಗೆ ಚಾಲನೆ ಕೊಡಲು ಸಾಧ್ಯವೆಂದು ವರದಿ ಮಾಡಿದ್ದಾರೆ. ಅಂಥ ಕಾರೊಂದನ್ನು ಬರ್ಲಿನ್ನ ಫ್ರೀಯ್ ಯೂನಿವರ್ಸಿಟಿಯ ಉತ್ಸಾಹಿಗಳು ಇತ್ತೀಚೆಗಷ್ಟೆ ರೂಪಿಸಿದ್ದಾರೆ.

ಎಚ್ಚರದ ಸ್ಥಿತಿಯಲ್ಲಿರುವ ಮಿದುಳಿನಿಂದ ಇಂಥ ಕೆಲಸಗಳನ್ನೆಲ್ಲ ಮಾಡಿಸಬಹುದು.ಕೈ ತುಂಡಾದವರ ಭುಜಕ್ಕೆ ಯಾಂತ್ರಿಕ ತೋಳನ್ನು ಅಂಟಿಸಿ, ಅದೂ ಮಿದುಳಿನ ಆಜ್ಞೆಯನ್ನು ಪಾಲಿಸುವಂತೆ ಮಾಡುವುದು ಈಗ ಸಾಧ್ಯವಾಗಿದೆ.ಮುಂದೊಂದು ದಿನ ಕೈದಿ ಸ್ಥಿತಿಯಲ್ಲಿರುವ ಮಿದುಳಿಗೂ ಹೀಗೆ ತರಬೇತಿ ನೀಡಬಹುದು. ಅದರಿಂದ ಹೊಮ್ಮುವ ಆದೇಶಗಳು ಇಲೆಕ್ಟ್ರಾನಿಕ್ ಸಿಗ್ನಲ್ಗಳಾಗಿ ದೇಹದಾಚೆ ಹೊರಟು ಯಂತ್ರಗಳಿಗೆ ಚಾಲನೆ ಕೊಡುವಂತೆಯೂ ಮಾಡಬಹುದು.ತನ್ನ ಗಂಟಲಿಗೆ ನೀರು ಬೇಕೆಂದು ಮಿದುಳು ತನ್ನ ಬುರುಡೆಗೆ ಅಂಟಿಸಿದ ಅಂಟೆನಾ ಮೂಲಕ ಸಂಕೇತ ಕೊಡಬಹುದು.ಇಲ್ಲವೆ, ಸೂಕ್ತ ವ್ಯವಸ್ಥೆ ಮಾಡಿದರೆ ತನ್ನ ಗಂಟಲಿಗೆ ತೂರಿಸಿದ ಆಹಾರ ಕೊಳವೆಯನ್ನು ತಾನೇ ಕಿತ್ತೆಸೆದು ಇಚ್ಛಾಮರಣ ಸಾಧಿಸುವಂತೆಯೂ ಮಾಡಬಹುದು.

ಕೈದಿ ಸ್ಥಿತಿಯ ಮಿದುಳಿಗಿಂತ ‘ಬ್ರೇನ್ಡೆಡ್’ ಸ್ಥಿತಿ ಇನ್ನೂ ಕ್ಲಿಷ್ಟವಾದುದು. ಅಲ್ಲಿಂದ ಯಾವುದೇ ಬಗೆಯ ವಿದ್ಯುತ್ ತರಂಗಗಳಾಗಲೀ ಆದೇಶಗಳಾಗಲೀ ಹೊಮ್ಮುವುದಿಲ್ಲ. ಅಂಥ ಮಿದುಳಿನ ಎಮ್ಆರ್ಐ ಸ್ಕ್ಯಾನಿಂಗ್ ಚಿತ್ರಣದಲ್ಲೂ ಬರೀ ಕಗ್ಗತ್ತಲು ಬಿಂಬವೇ ಕಾಣುತ್ತದೆ (ಕೆಲವು ಟಿಬೆಟನ್ ಯೋಗಿಗಳು ತೀವ್ರ ಧ್ಯಾನಸ್ಥ ಸ್ಥಿತಿಗಿಳಿದು ತಮ್ಮ ನರಮಂಡಲವನ್ನು ಬೇಕಂತಲೇ ಅಂಥ ನಿಷ್ಕ್ರಿಯ ಸ್ಥಿತಿಗೆ ತರುತ್ತಾರೆಂಬ ಪ್ರತೀತಿ ಇದೆ). ಅವಘಡಕ್ಕೆ ಸಿಕ್ಕು ‘ನಿರಂತರ ತರಕಾರಿ ಸ್ಥಿತಿ’ಯಲ್ಲಿರುವ ವ್ಯಕ್ತಿಯ ಮಿದುಳಿನಲ್ಲಿ ಕತ್ತಲು ತುಂಬಿದ್ದರೆ ಅಲ್ಲಿನ ವಿದ್ಯಮಾನವನ್ನು ಹೇಗೆ ಪತ್ತೆ ಹಚ್ಚುವುದು?

ಮನುಷ್ಯನ ಪತ್ತೇದಾರಿ ಬುದ್ಧಿಗೆ ಎಣೆಯಿಲ್ಲ. ಆ ಕತ್ತಲಲ್ಲೂ ಮಿದುಳಿನ ಚಟುವಟಿಕೆಗಳನ್ನು ಪತ್ತೆ ಮಾಡಬಲ್ಲ ಎಫ್-ಎಮ್ಆರ್ಐ ಸ್ಕ್ಯಾನಿಂಗ್ ತಂತ್ರವನ್ನು ಬೆಲ್ ಲ್ಯಾಬ್ನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಮಿದುಳಿನಲ್ಲಿ ತೀರ ನಿಶ್ಚಲ ಸ್ಥಿತಿಯಲ್ಲಿರುವ, ವಿದ್ಯುತ್ ತರಂಗವನ್ನೇ ಹೊಮ್ಮಿಸದ ನರಕೋಶಗಳು ಕೂಡ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲೆಂದು ರಕ್ತದಲ್ಲಿರುವ ಗ್ಲೂಕೋಸ್ ಮತ್ತು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ.

ಬುರುಡೆಯ ಆ ಕಗ್ಗತ್ತಲಲ್ಲಿ ಎಷ್ಟೇ ಕ್ಷೀಣಮಟ್ಟದಲ್ಲಿ ಅವು ಗ್ಲೂಕೋಸ್ ಎತ್ತಿದರೂ, ಅಲ್ಲಿ ಚಲಿಸುವ ರಕ್ತದಲ್ಲಿನ ಅಯಸ್ಕಾಂತೀಯ ಗುಣಗಳು ಬದಲಾಗುತ್ತವೆ.ಅದು ಈ ವಿಶೇಷ ಸ್ಕ್ಯಾನಿಂಗ್ನಲ್ಲಿ ಪತ್ತೆಯಾದರೆ ಮಿದುಳಿನಲ್ಲಿ ತುಸುವಾದರೂ ಚಟುವಟಿಕೆ ಇದೆಯೆಂದು ಅರ್ಥ.ಆದರೆ ಇಂಥ ಸ್ಕ್ಯಾನಿಂಗ್ ತೀರಾ ತೀರಾ ಸೂಕ್ಷ್ಮಸಂವೇದಿ (ಅಷ್ಟೇ ದುಬಾರಿ ಕೂಡ). ವ್ಯಕ್ತಿಯ ಸುತ್ತ ಎಲ್ಲಿಯೂ ಕಬ್ಬಿಣದ ಲವಲೇಶವೂ ಇರಕೂಡದು.ಆತನಿಗೆ ಜೋಡಿಸಿದ ಕೃತಕ ಉಸಿರಾಟದಂಥ ಜೀವರಕ್ಷಕ ಸಾಧನಗಳನ್ನು ಕಳಚಿ ಇಟ್ಟೇ ಎಫ್-ಎಮ್ಆರ್ಐ ಸ್ಕ್ಯಾನಿಂಗ್ ಮಾಡಬೇಕು.ಅದು ಅಂತಿಂಥ ಪರೀಕ್ಷೆಯಲ್ಲ. ಅಲ್ಲಿ ತಜ್ಞರ ಮೇಳವೇ ನಡೆಯಬೇಕು. ವೈದ್ಯರ ಜತೆಗೆ ಫೀಸಿಕ್ಸ್, ನ್ಯೂರೊ ಅನಾಟಮಿ, ಸೈಕಾಲಜಿ, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರೊ ಫಿಸಿಯಾಲಜಿ ತಜ್ಞರೂ ಜತೆಗಿರಬೇಕು.

ನೋಡಿಯೇ ಬಿಡೋಣವೆಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ನರವಿಜ್ಞಾನ ವಿಭಾಗದ ಪರಿಣತರು ಅಂಥ ‘ತರಕಾರಿ ಸ್ಥಿತಿ’ಯಲ್ಲಿರುವ ಮಿದುಳನ್ನು ಪರೀಕ್ಷೆಗೆ ಒಡ್ಡಿದರು. ‘ಬ್ರೇನ್ ಡೆಡ್ ಪೇಶಂಟ್’ ಎಂದು ಘೋಷಿಸಲಾದ ವ್ಯಕ್ತಿಯ ಮಿದುಳಿನಲ್ಲೂ ತುಸುಮಟ್ಟಿಗೆ ಚಟುವಟಿಕೆ ಇರುತ್ತದೆಂದು ತೋರಿಸಿದರು. ಅಷ್ಟೇ ಅಲ್ಲ, ಅಲ್ಲಿನ ನರಕೋಶಗಳು ಬಾಹ್ಯಪ್ರೇರಣೆಗೆ ಸ್ಪಂದಿಸುತ್ತವೆ ಎಂತಲೂ ತೋರಿಸಿದರು.

ಅಂಥ ವ್ಯಕ್ತಿಗಳನ್ನು ‘ಮಾತಾಡಿಸಲು’ ಭಾರಿ ತಂತ್ರಗಾರಿಕೆ ಬೇಕಾಗುತ್ತದೆ. ನಮ್ಮ ಪ್ರಶ್ನೆಗಳು ಅವರಿಗೆ ಕೇಳಿಸುತ್ತವೆ.ಆದರೆ ಉತ್ತರ ಹೇಳುವ ತಂತುಗಳೇ ಅಲ್ಲಿ ಬತ್ತಿರುತ್ತವೆ. ಕಣ್ಣುರೆಪ್ಪೆ ಹೊಡೆದುಕೊಳ್ಳುತ್ತದೆ. ಆದರೆ ಕಂಡಿದ್ದೇನೆಂದು ಹೇಳಲು ಸಾಧ್ಯವಿಲ್ಲ.ಅಂಥ ವ್ಯಕ್ತಿಯ ಎದುರು ಹಸಿರು ಹಾಳೆ ಹಿಡಿದು, ‘ಇದು ಕೆಂಪು ಬಣ್ಣದ್ದು; ಹೌದೊ ಅಲ್ಲವೊ?’ ಎಂದು ಕೇಳಬೇಕು. ವ್ಯಕ್ತಿಯ ಮಿದುಳಿನ ನಿರ್ದಿಷ್ಟ ಭಾಗದಲ್ಲಿ ಸಂಚರಿಸುತ್ತಿರುವ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾದರೆ ‘ಅಲ್ಲ’ ಎಂಬ ಉತ್ತರ ಅಲ್ಲಿ ಮೂಡಿತೆಂದು ತರ್ಕಿಸಬೇಕು. ಒಂದಲ್ಲ, ಹತ್ತಾರು ಬಾರಿ ‘ಅಲ್ಲ’ ಎಂಬ ಉತ್ತರ ಹೊಮ್ಮಿಸಬಲ್ಲ ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿ ನೋಡಬೇಕು.

ಪ್ರತಿಬಾರಿಯೂ ಮಿದುಳಿನ ಆಳದಲ್ಲಿ ಒಂದೇ ಸ್ಥಳದಲ್ಲಿ, ಒಂದೇ ಮಾದರಿಯ ಸಿಗ್ನಲ್ ಬಂದರೆ ಅದರ ಅರ್ಥ ‘ಅಲ್ಲ’ ಎಂಬುದು ಖಚಿತವಾಗುತ್ತದೆ.ಆ ಮಿದುಳಿನ ನಿಘಂಟಿನಲ್ಲಿರುವ ಒಂದು ಪದ ನಮಗೆ ಗೊತ್ತಾಗಲು ಇಷ್ಟೊಂದು ಶ್ರಮಿಸಬೇಕು! ಅಷ್ಟೊತ್ತಿಗೆ ಬೇಸತ್ತ ಆ ಮಿದುಳು ನಿದ್ದೆ ಹೋದರೆ, ಎರಡನೆಯ ಪದಕ್ಕಾಗಿ ವಾರಗಟ್ಟಲೆ ಪರದಾಡಬೇಕು.ಹೀಗೆ ಹತ್ತಿಪ್ಪತ್ತು ಪದಗಳು ದೊರೆತ ಮೇಲೆ ಅದರೊಂದಿಗೆ ನಿಧಾನ ಸಂವಾದ ಸಾಧ್ಯವಾಗುತ್ತದೆ.

ಇವೆಲ್ಲ ಕೆಲಸಕ್ಕೆ ಬಾರದ ಬೌದ್ಧಿಕ ಕಸರತ್ತು ಎಂದು ನಮಗೆ ಅನ್ನಿಸಬಹುದು.ಅಂಥ ನಿಷ್ಕ್ರಿಯ ಮಿದುಳಿಗೆ ಚೈತನ್ಯ ನೀಡುವ ಬದಲು, ಆ ವ್ಯಕ್ತಿಗೆ ದಯಾಮರಣ ಕರುಣಿಸಿ ಜೀವಂತ ಅಂಗಾಂಗಗಳನ್ನು ದಾನ ಕೊಟ್ಟರೆ ಬೇರೆ ಎಷ್ಟೊಂದು ಜೀವಗಳಿಗೆ ವರದಾನವಾಗುತ್ತದೆ ಎಂತಲೂ ಅನ್ನಿಸಬಹುದು. ಆದರೆ ಹಾಗೆ ಮಾಡಿದರೆ ನೈತಿಕ ಪ್ರಶ್ನೆ ಏಳುತ್ತದೆ. ಅಷ್ಟೇ ಅಲ್ಲ, ಅದು ಕೊಲೆ ಎಂತಲೂ ವಕೀಲರು ಪ್ರತಿಪಾದಿಸಬಹುದು.ಅಂಥ ಮಿದುಳಿಗೆ ಚೈತನ್ಯ ತುಂಬಬೇಕೆ ಅಥವಾ ದಯಾಮರಣ ಒದಗಿಸಬೇಕೆ ಎಂಬ ಬಗ್ಗೆ ಅನೇಕ ಬಗೆಯ ಹೋರಾಟಗಳು ನಡೆದಿವೆ.1990ರಿಂದ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಅಮೆರಿಕದ ಟೆರ್ರಿ ಶಾಯ್ವೊ ಹೆಸರಿನ ಮಹಿಳೆಗೆ ಸುಖಮರಣ ಕೊಡಿರೆಂದು ಅವಳ ಗಂಡ ಕೋರಿದ್ದ.

‘ಬೇಡ’ ಎಂದು ಅವಳ ಅಪ್ಪ-ಅಮ್ಮ ವಾದಿಸಿದ್ದರು. ಕೊನೆಗೆ 2001ರಲ್ಲಿ ಗಂಡನೇ ಗೆದ್ದು, ವೈದ್ಯರ ಸಮ್ಮುಖದಲ್ಲಿ ಟೆರ್ರಿಯ ಆಹಾರ ಕೊಳವೆಯನ್ನು ಕಿತ್ತು ಹಾಕಿದ್ದಾಯಿತು. ತಕ್ಷಣ ಆಕೆ ಸಾಯಲಿಲ್ಲ. ಅವಳಪ್ಪ ತುರ್ತಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಮೇಲೆ ಮತ್ತೆ ಕೊಳವೆ ಜೋಡಿಸಲಾಯಿತು. ವಿವಾದ ರಾಷ್ಟ್ರಮಟ್ಟಕ್ಕೇರಿತು. ಕೊಳವೆಯನ್ನು ಕೀಳದಂತೆ ಮಾಡಲು ಸೆನೆಟ್ನಲ್ಲಿ ಕಾನೂನಿನ ತಿದ್ದುಪಡಿ ತರಲಾಯಿತು.ಅದೂ ಫಲಕಾರಿಯಾಗದೆ ಐದು ವರ್ಷಗಳ ನ್ಯಾಯ ಚರ್ಚೆಯ ನಂತರ 2005ರಲ್ಲಿ ಕೊನೆಗೂ ಟೆರ್ರಿ ಶಾಯ್ವೂನ ಊಟದ ಕೊಳವೆಯನ್ನು ಕಿತ್ತುಹಾಕಿ ಆಕೆಗೆ ಮರಣ ಬರುವಂತೆ ಮಾಡಲಾಯಿತು.

ಅಂಥ ಮಿದುಳಿಗೆ ತಾನು ಬದುಕಿರಬೇಕೆಂಬ ಇಚ್ಛೆ ಇದೆ ಎಂದುಕೊಳ್ಳಿ. ಅದರ ಸಿಗ್ನಲ್ ನಮಗೆ ಸಿಗದೇ ಇದ್ದ ಮಾತ್ರಕ್ಕೆ ಅಂಥ ವ್ಯಕ್ತಿಯನ್ನು ‘ಬ್ರೇನ್ ಡೆಡ್’ ಎಂದು ಘೋಷಿಸಿ ಆಹಾರ ಕೊಳವೆಯನ್ನು ಕಿತ್ತು ಹಾಕಿದರೆ ಅದು ದಯಾಮರಣ (ಯುಥೆನೇಸಿಯಾ) ಎನ್ನಿಸುವುದಿಲ್ಲ. ಅದು ದಯಾಹೀನ ಹತ್ಯೆ ಎನ್ನಿಸುತ್ತದೆ.

ಈ ಸಾಧ್ಯತೆಯನ್ನು ಪರಿಶೀಲಿಸಲೆಂದೇ ಬೆಲ್ಜಿಯಮ್ನ ಲೀಜ್ ವಿವಿಯ ವಿಜ್ಞಾನಿಗಳು ಕೈದಿಸ್ಥಿತಿಯಲ್ಲಿರುವ 91 ವ್ಯಕ್ತಿಗಳ ಮಿದುಳಿನ ಅಧ್ಯಯನ ಮಾಡಿ ಇದೀಗ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಅಧ್ಯಯನಕ್ಕೆ ಒಳಗಾದವರಲ್ಲಿ ಶೇಕಡಾ 72 ವ್ಯಕ್ತಿಗಳು ತಾವು ನೆಮ್ಮದಿಯಿಂದ ಇದ್ದೇವೆಂದೂ, ಏನೂ ಸಮಸ್ಯೆ ಇಲ್ಲವೆಂದೂ ಹೇಳಿದ್ದಾರೆ. ಇನ್ನುಳಿದವರು (ಅವರಲ್ಲಿ ಅನೇಕರು ಈಚೆಗಷ್ಟೆ ಈ ಸ್ಥಿತಿಗೆ ಬಂದಿರುವುದರಿಂದ) ಚಡಪಡಿಕೆ ವ್ಯಕ್ತಪಡಿಸಿದ್ದಾರೆ.

ಕೇವಲ ಆರು ಜನರು ಮಾತ್ರ ತಮಗೆ ಇಚ್ಛಾಮರಣ ಬೇಕೆಂದು ಬಯಸಿದ್ದಾರೆ. ‘ಕೈದಿಸ್ಥಿತಿಯಲ್ಲಿರುವ ಮಿದುಳು ಕ್ರಮೇಣ ತನ್ನ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡು ಅದರಲ್ಲೇ ನೆಮ್ಮದಿ ಕಾಣುತ್ತದೆ ವಿನಾ ತನ್ನ ಸಾವನ್ನು ಸ್ವಾಗತಿಸುವ ಸಂಭವ ತೀರಾ ಕಡಿಮೆ’ ಎಂದು ವಿಜ್ಞಾನಿ ಸ್ಟೀವನ್ ಲಾರೀಸ್ ಹೇಳಿದ್ದಾಗಿ ‘ನ್ಯೂ ಸೈಂಟಿಸ್ಟ್’ ಪತ್ರಿಕೆ ಪ್ರಕಟಿಸಿದೆ. ಅಂದಮೇಲೆ, ಯಾವ ಪ್ರತಿಕ್ರಿಯೆಯನ್ನೂ ನೀಡದ ‘ತರಕಾರಿ ಸ್ಥಿತಿ’ಯ ಮಿದುಳಿನ ಆಳಕ್ಕಿಳಿದು ನೋಡಿದ್ದೇ ಆದರೆ ಅದೂ ತನ್ನನ್ನು ಕೊಲ್ಲಬೇಡಿ ಎಂಬ ಆರ್ತನಾದವನ್ನೇ ಹೊಮ್ಮಿಸೀತು ತಾನೆ?

ಅರುಣಾ ಶಾನಭಾಗ್ ಅವರಿಗೆ ‘ಯುಥೆನೇಸಿಯಾ ಅಗತ್ಯವಿಲ್ಲ’ ಎಂದು ಮೊನ್ನೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು ಈ ದೃಷ್ಟಿಯಿಂದಲೂ ನ್ಯಾಯೋಚಿತ ಎನಿಸುತ್ತದೆ. ಅರುಣಾ ಅವರ ದೈಹಿಕ ಸ್ಥಿತಿ ನೋಡಿದರೆ ದಯೆ, ಅನುಕಂಪ ಉಂಟಾಗುವುದು ನಿಜವಾದರೂ ಅವರ ಮಿದುಳಿನ ಆಳಕ್ಕಿಳಿದು, ಅದರೊಂದಿಗೆ ಸಂಭಾಷಣೆ ನಡೆಸಲು ಸಾಧ್ಯವಾದರೆ ನಮಗೆ ಬೇರೆಯದೇ ಚಿತ್ರಣ ಸಿಕ್ಕೀತು. ಯಾರಿಗೆ ಗೊತ್ತು ಆ ಮಿದುಳು ನಿರ್ವಿಕಾರ, ನಿರಾಕಾರ ವಿಶ್ವಚೈತನ್ಯದಲ್ಲಿ ಒಂದಾಗಿ, ಯೋಗಿಗಳು ಹೇಳುವ ‘ಪರಮಾನಂದ’ ಸ್ಥಿತಿಯಲ್ಲಿ ಇದ್ದರೂ ಇರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.