ಗುರುವಾರ , ಜೂನ್ 17, 2021
22 °C

ಹಗಲುಗನಸು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಕಿಟ್ಟಣ್ಣ ಮತ್ತು ಕಪಿಲಾ ಬಡ ದಂಪತಿ. ಬಡತನ ಅವರ ದಾಂಪತ್ಯದ ಸೊಗಡನ್ನು ಹಾಳು ಮಾಡಿರಲಿಲ್ಲ. ಇಬ್ಬರೂ ಸದಾ­ಕಾಲ ಜೊತೆಯಾ­ಗಿಯೇ ನಗುನಗುತ್ತಾ ಇರುತ್ತಿದ್ದರು. ಆಗಾಗ ಜಗಳ ಬರುತ್ತಿರ­ಲಿಲ್ಲವೆಂದಲ್ಲ. ಬರುತ್ತಿತ್ತು, ಆದರೆ ಅದೊಂದು ವಿಶೇಷ ಕಾರಣಕ್ಕೆ ಬರುತ್ತಿತ್ತು. ಇಬ್ಬರೂ ಹಗಲು­ಗನಸು ಕಾಣು­ವವರು. ಆ ಕನಸಿಗಾಗಿ ಜಗಳ ಬರು­­ತ್ತಿತ್ತು. ಸುತ್ತಮುತ್ತಲಿ­ನವರಿಗೆ ಇದೊಂದು ತಮಾಷೆಯ ವಿಷಯ­ವಾಗಿತ್ತು. ಆದರೆ, ಕೆಲವೊಮ್ಮೆ ಜಗಳದ ಅತಿರೇಕ­ದಿಂದ ಬಹಳ ಕಿರಿಕಿರಿಯೂ ಆಗುತ್ತಿತ್ತು.ಒಂದು ದಿನ ಮನೆಗೆ ಬಂದವನೇ ಕಪಿಲಾ­ಳನ್ನು ಕರೆದು ಹೇಳಿದ, ‘ಕಪಿಲಾ, ನಮಗೆ ಬಹಳ ಒಳ್ಳೆಯ ದಿನಗಳು ಬರಲಿವೆ. ಮುಂದಿನ ವಾರ ನಮ್ಮ ಜಮೀನುದಾರ ನನಗೆ ಒಂದು ಲಕ್ಷ ರೂಪಾಯಿ ಕೊಡುತ್ತಾನೆ’. ‘ಹೌದೇ, ಅಷ್ಟು ಹಣ ನಮಗೇಕೆ ಕೊಡುತ್ತಾನೆ?’ ಕೇಳಿದಳು ಕಪಿಲಾ, ‘ದಡ್ಡೀ, ಜಮೀನುದಾರರ ಹೊಲದ ಮಾರಾಟದಲ್ಲಿ ಒಂದು ಸಮಸ್ಯೆ ಇದೆ. ಅದಕ್ಕೆ ಪರಿಹಾರವನ್ನು ನಾನು ಕೊಡು­ತ್ತೇನೆ. ಅದಕ್ಕಾಗಿ ಒಂದು ಲಕ್ಷ ಬಹುಮಾನ ಕೊಡುತ್ತಾರೆ. ನಾನು ಹಣದಿಂದ ಹತ್ತು ಹಸು ಕೊಳ್ಳಬೇಕೆಂದು ತೀರ್ಮಾನ ಮಾಡಿದ್ದೇನೆ’ ಎಂದ ಕಿಟ್ಟಣ್ಣ.ತಕ್ಷಣ ಕಪಿಲಾಳ ಕಣ್ಣುಗಳು ಅರಳಿ­ದವು, ‘ಹಾಗಾದ್ರೆ ನಮಗೆ ಬಹಳಷ್ಟು ಹಾಲು ದೊರೆಯುತ್ತದೆ. ಆ ಹಾಲಿನಲ್ಲಿ ಒಂದಷ್ಟನ್ನು ಮಾರೋಣ ಹಣ ಬರು­ತ್ತದೆ. ಉಳಿದ ಹಾಲಿನಿಂದ ಅನೇಕ ಸಿಹಿ­ಪದಾರ್ಥಗಳನ್ನು ಮಾಡಿ ಮಾರೋಣ. ಮತ್ತಷ್ಟು ಜಾಸ್ತಿ ದುಡ್ಡು ಸೇರುತ್ತದೆ.  ಇನ್ನೊಂದು ಕೆಲಸ ಮಾಡು­ತ್ತೇನೆ. ನಮಗೆ ಸಾಕಾದಷ್ಟು ಹಾಲು ಇಟ್ಟುಕೊಂಡು ದಿನಾಲು ಐದು ಸೇರು ಹಾಲನ್ನು ಪಕ್ಕದ ಹಳ್ಳಿಯಲ್ಲಿಯೇ ಇರುವ ನನ್ನ ತಂಗಿ ಗೀತಾಳಿಗೆ ಕೊಟ್ಟು ಕಳುಹಿಸುತ್ತೇನೆ. ಪಾಪ! ಆಕೆಗೆ ಮೂರು ಜನ ಪುಟ್ಟ ಮಕ್ಕಳಿವೆ’ ಎಂದಳು.ಕಿಟ್ಟಣ್ಣನಿಗೆ ಸಿಟ್ಟು ನುಗ್ಗಿ ಬಂತು. ‘ಏನು ಹಾಲು ಬಿಟ್ಟಿ ಬಿದ್ದಿದೆಯಾ? ನಿನ್ನ ತಂಗಿ ಗೀತಾ ದುಡ್ಡು ಕೊಡುತ್ತಾಳೆಯೇ? ಆಕೆಗೆ ಒಂದು ಹನಿ ಹಾಲು ಕೊಟ್ಟರೂ ನಿನ್ನನ್ನು ಕೊಂದೇ ಬಿಡುತ್ತೇನೆ’ ಎಂದು ಅಬ್ಬರಿಸಿದ. ಆಕೆ ಬಿಟ್ಟಾ­ಳೆಯೇ? ‘ಕೊಟ್ಟೇ ತೀರುತ್ತೇನೆ. ನೀನು ಏನು ಮಾಡುತ್ತೀ?’ ಎಂದು ಸವಾಲು ಹಾಕಿದಳು.ಮಾತಿಗೆ ಮಾತು ಬೆಳೆಯಿತು. ಕಿಟ್ಟಣ್ಣ ಕಪಿಲಾಳಿಗೆ ಹೊಡೆದೇಬಿಟ್ಟ. ಆಕೆ ಪ್ರಳಯವಾದಂತೆ ಹೊರಳಾಡಿ ಅಳತೊಡಗಿದಳು. ಇಡೀ ವಾತಾವರಣ ಕೋಲಾಹಲ­ಮಯವಾ­ಯಿತು.ನೂರಾರು ಜನ ಸೇರಿದರು. ಅಲ್ಲಿಗೆ ಗುಂಡಣ್ಣ  ಬಂದ. ಬಂದವನೇ ಕೈಯಲ್ಲಿ ಕೋಲು ಹಿಡಿದವನಂತೆ ಅದನ್ನು ಜೋರಾಗಿ ಬೀಸುತ್ತ, ‘ಹೇ, ಹೇ ಎಲ್ಲಿಂದ ಬಂದವು ಈ ತುಡುಗು ಹಸು­ಗಳು?’ ಎಂದು ಕೂಗತೊಡಗಿದ.

ಮತ್ತೆ ಕೈಯನ್ನು ಸರಸರನೇ ತಿರುವುತ್ತ, ‘ಛೇ ಈ ಹಸುಗಳು ನನ್ನ ತೋಟದ ತರಕಾರಿಗಳನ್ನೆಲ್ಲ ತಿಂದು ಬಿಟ್ಟವು’ ಎಂದ.ಇದನ್ನು ಕೇಳಿ ಕಿಟ್ಟಣ್ಣ ಆಶ್ಚ­ರ್ಯದಿಂದ, ‘ಗುಂಡಣ್ಣ, ನಿನಗೆಲ್ಲಿ ತೋಟವಿದೆಯೋ? ತರಕಾರಿ ಎಲ್ಲಿ ಬೆಳೆದೆ ನೀನು? ಇಲ್ಲಿ ಎಲ್ಲಿ ತುಡುಗು ಹಸುಗಳಿವೆ ಹೊಡೆದು ಓಡಿಸಲು?’ ಎಂದು ಕೇಳಿದ.ಕೈ ತಿರುವುದನ್ನು ಬಿಡದೇ ಗುಂಡಣ್ಣ ಕೂಗಿದ, ‘ಅವೇ ನಿನ್ನ ಹಸುಗಳು ನನ್ನ ತೋಟಕ್ಕೆ ನುಗ್ಗಿವೆ. ನನಗೆ ತೋಟವೇ ಇರದಿದ್ದರೆ ನಿನಗೆ ಹಸುಗಳು ಎಲ್ಲಿಂದ ಬಂದವು?’ ಸುತ್ತಮುತ್ತಲಿನ ಜನವೆಲ್ಲ ನಕ್ಕರು. ಕಿಟ್ಟಣ್ಣ, ಕಪಿಲಾ ನಾಚಿಕೆಯಿಂದ ಮುಖ ತಗ್ಗಿಸಿದರು. ಅಂದಿನಿಂದ ಅವರ ಹಗಲುಗನಸುಗಳು ಕಡಿಮೆ­ಯಾದವು.ಕನಸು ಕಾಣಬೇಕು, ದೊಡ್ಡ ಕನಸು ಕಾಣಬೇಕು. ಆದರೆ, ಅವುಗಳನ್ನು ಸಾಕಾರಗೊಳಿಸಲು ಅನವ­ರತ ಪ್ರಯತ್ನಪಡಬೇಕು. ಪ್ರಯತ್ನ­ವಿಲ್ಲದೇ ಯಾವ ಕನಸೂ ನನಸಾಗದು. ಪ್ರಯತ್ನವಿಲ್ಲದೇ ಕುಳಿತಲ್ಲಿಯೇ ಕಾಣುವ ಕನಸು ಹಗಲುಗನಸಾಗುತ್ತದೆ, ಮನಸ್ಸಿಗೆ ನಾಚಿಕೆ ಉಂಟುಮಾಡುತ್ತದೆ, ಎಚ್ಚರ­ವಾದ ಮೇಲೆ ನಿರಾಸೆಯನ್ನೂ ಹುಟ್ಟಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.