ಶನಿವಾರ, ಮೇ 8, 2021
19 °C

ಹಾಕದ ಬೀಗ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಹೌದಿನಿ ಒಬ್ಬ ಅಸಾಮಾನ್ಯ ಕಲೆಗಾರ. ಅವನನ್ನು ಜನ ಸಾಮಾನ್ಯವಾಗಿ ಗುರುತಿಸುವುದು ಬಂಧಿಸಲಾಗದ ಕಲೆಗಾರ ಎಂದೇ. ಕೆಲವರು ಅವನನ್ನು ಮಾಂತ್ರಿಕ ಎಂದು ಭಾವಿಸಿದರೆ ಬಹಳಷ್ಟು ಜನ ಹೌದಿನಿಯನ್ನು ಬೀಗ ಮುರಿಯುವ ಚತುರ ಎಂದು ಗುರುತಿಸುತ್ತಾರೆ. ಎಂಥ ಭಧ್ರವಾದ ಬೀಗವನ್ನಾದರೂ ಲೀಲಾಜಾಲವಾಗಿ ತೆರೆದು ಬಿಡುವುದು ಹೌದಿನಿಗೆ ಕರತಲಾಮಲಕವಾಗಿತ್ತು.ಆತ ಪ್ರಪಂಚದ ಅನೇಕ ಭಾಗಗಳಲ್ಲಿ  ತನ್ನ ಚತುರತೆಯ ಪ್ರದರ್ಶನ ಮಾಡುತ್ತಿದ್ದ, ಜನರನ್ನು ಬೆರಗುಪಡಿಸುತ್ತಿದ್ದ. ಬೀಗದ ಮೇಲೆ ಬೀಗ ಹಾಕಿ ಅದು ಎಂಥದೇ ಭದ್ರವಾದ ಕೊಠಡಿಯಲ್ಲಿ ಕೂಡಿಹಾಕಿದ್ದರೂ ಐದೇ ನಿಮಿಷಗಳಲ್ಲಿ ಅವನ್ನೆಲ್ಲ ತೆರೆದುಬಿಟ್ಟು ಹೊರಗೆ ಬರುತ್ತಿದ್ದ. ಅವನು ಏನು ಮಾಡುತ್ತಿದ್ದ ಹೇಗೆ ಹೊರಗೆ ಬರುತ್ತಿದ್ದ ಎಂಬುದು ಯಾರಿಗೂ ತಿಳಿಯುತ್ತಿದ್ದಿಲ್ಲ. ಅದನ್ನು ಎಲ್ಲರೂ ಪವಾಡವೆಂದೇ ಭಾವಿಸುತ್ತಿದ್ದರು. ಅವನು ಈ ಪ್ರದರ್ಶನ ಮಾಡುವಾಗ ಎರಡು ಕರಾರುಗಳನ್ನು ಹಾಕುತ್ತಿದ್ದ. ಮೊದಲನೆಯದು, ಅವನನ್ನು ಅವನು ಹಾಕಿಕೊಂಡ ಬಟ್ಟೆಯಲ್ಲೇ ಒಳಗೆ ಹೋಗಲು ಬಿಡಬೇಕು ಮತ್ತು ಎರಡನೆಯದಾಗಿ ಅವನು ಬೀಗ ತೆರೆಯುತ್ತಿರುವಾಗ ನೇರವಾಗಿ ಅಥವಾ ಕ್ಯಾಮರಾ ಮೂಲಕ ಅದನ್ನು ನೋಡಬಾರದು. ವರ್ಷ ವರ್ಷಕ್ಕೂ ಅವನ ಖ್ಯಾತಿ ಹರಡುತ್ತಿತ್ತು.

ಒಂದು ಬಾರಿ ಇಂಗ್ಲೆಂಡಿನ ದ್ವೀಪವೊಂದರಲ್ಲಿ ಅವನ ಪ್ರದರ್ಶನವನ್ನೇರ್ಪಡಿಸಿದರು.ಅವರು ಒಂದು ಕೊಠಡಿಯನ್ನು ನಿರ್ಮಿಸಿ ಅದರ ಬಾಗಿಲಿಗೆ ಎಂದೂ ತೆರೆಯಲಾರದ ಬೀಗವನ್ನು ಹಾಕಿದ್ದಾರೆಂದು ಸುದ್ದಿ ಹಬ್ಬಿತು. ಆ ಬೀಗದ ಮೂಲ ಬೀಗದಕೈ ಹೊರತಾಗಿ ಇನ್ನಾವುದರಿಂದಲೂ ಅದನ್ನು ತೆರೆಯುವುದು ಸಾಧ್ಯವಿರಲಿಲ್ಲ. ಪ್ರಪಂಚದ ಬೇರೆಬೇರೆ ಭಾಗಗಳಿಂದ ಬಂದ ವಿಶೇಷ ತಜ್ಞರು ನಿರ್ಮಿಸಿದಂತಹ ಪ್ರಚಂಡ ಬೀಗ ಅದು. ಆ ಬೀಗದ ಕೀರ್ತಿಯ ಬಗ್ಗೆ ಪತ್ರಿಕೆಗಳು ಲೇಖನ ಬರೆದವು, ಸಂದರ್ಶನಗಳು ನಡೆದವು. ವಿಡಿಯೋ ಚಿತ್ರೀಕರಣ ನಡೆಯಿತು. ಪ್ರಪಂಚದ ಎಲ್ಲರ ಗಮನ ಇಂಥ ಬೀಗವನ್ನು ಹೌದಿನಿ ಹೇಗೆ ಮುರಿಯಬಹುದು ಎಂಬುದರ ಕಡೆಗೆ ಕೇಂದ್ರೀಕೃತವಾಗಿತ್ತು.ಪ್ರದರ್ಶನದ ದಿನ ಬಂತು. ಅದನ್ನು ನೋಡಲು ಭಾರೀ ಹಣ ತೆತ್ತು ಟಿಕೆಟ್ ಪಡೆದು ಜನ ಬಂದು ಜಮಾಯಿಸಿದ್ದರು. ತನ್ನ ಸಾಮಾನ್ಯ ಉಡುಪಿನಲ್ಲಿ ಹೌದಿನಿ ಬಂದ.ಅವನನ್ನು ಕೋಣೆಯೊಳಗೆ ಹಾಕಿ ಹೊರಗಿನಿಂದ ಬಾಗಿಲು ಭದ್ರಪಡಿಸಿ ಬೀಗ ಹಾಕಲಾಯಿತು. ಅವನಿಗೆ ಪಾರಾಗಿ ಬರುವುದಕ್ಕೆ ಒಂದು ಗಂಟೆ ಸಮಯ ಗೊತ್ತು ಮಾಡಲಾಗಿತ್ತು. ಹೌದಿನಿ ತನ್ನ ಸೊಂಟಕ್ಕೆ ಸುತ್ತಿಕೊಂಡಿದ್ದ ಒಂದು ಬಳುಕುವ ಕಬ್ಬಿಣದ ಸರಳನ್ನು ಹೊರತೆಗೆದ. ಅದರಿಂದಲೇ ಅವನು ಎಲ್ಲ ಬೀಗಗಳನ್ನು ತೆರೆಯುತ್ತಿದ್ದುದು. ಅದನ್ನು ಬೀಗದ ಕಿಂಡಿಯಲ್ಲಿ  ತೂರಿಸಿದ, ತಿರುವಿದ. ಊಹೂಂ. ಬೀಗ ತೆರೆಯಲಿಲ್ಲ.ಸರಳನ್ನು ಬೇರೊಂದು ರೀತಿಯಲ್ಲಿ ಬೀಗದಲ್ಲಿ  ತೂರಿ ಅದಕ್ಕೆ ಕಿವಿಹಚ್ಚಿ ಸದ್ದು ಕೇಳುತ್ತ ನಿಧಾನವಾಗಿ ತನಗೆ ತಿಳಿದ ಎಲ್ಲ ಪ್ರಯತ್ನಗಳನ್ನು ಮಾಡಿದ. ನಲವತ್ತೈದು ನಿಮಿಷಗಳಾದವು. ಹೌದಿನಿ ಬೆವೆತುಬಿಟ್ಟ. ಇದುವರೆಗೂ ಇಂಥ ಕಷ್ಟದ ಬೀಗವನ್ನು ಎದುರಿಸುವ ಪ್ರಸಂಗ ಬಂದಿರಲಿಲ್ಲ. ಒಂದು ತಾಸಾಯಿತು, ಎರಡು ತಾಸಾಯಿತು.ಕೊನೆಗೆ ತಾನು ಸೋತೆ ಎಂದುಕೊಂಡು ಶಕ್ತಿಹಾಕಿ ಬಾಗಿಲು ತಳ್ಳಿದ. ಅದು ತೆರೆದೇ ಹೋಯಿತು! ಅವನಿಗೆ ಆಶ್ಚರ್ಯ! ಅವರು ಬಾಗಿಲಿಗೆ ಬೀಗ ಹಾಕಿರಲೇ ಇಲ್ಲ, ಕೇವಲ ಗಟ್ಟಿಯಾಗಿ ಒತ್ತಿ ಕೂಡ್ರಿಸಿದ್ದರು. ಈ ಪ್ರಸಿದ್ಧ ಬೀಗ ಮುರಿಯುವ ಕಲೆಗಾರನನ್ನು ಸೋಲಿಸಲು ಅವರು ಬೀಗವನ್ನೇ ಹಾಕಿರಲಿಲ್ಲ. ಆದರೆ ನಿಜವಾಗಿಯೂ ಬೀಗ ಹಾಕಿತ್ತು. ಅದು ಬಾಗಿಲಿಗೆ ಅಲ್ಲ, ಹೌದಿನಿಯ ಮನಸ್ಸಿಗೆ. ಅಲ್ಲಿ   ಒಂದೇ ಕಡೆಗೆ ಬೀಗ ಭದ್ರವಾಗಿದ್ದುದು. ಬೀಗದ ಬಗ್ಗೆ ಅಷ್ಟು ಪ್ರಚಾರವನ್ನು ಕೇಳಿದ್ದ ಹೌದಿನಿ ಅದನ್ನು ಮುರಿಯುವ ಪ್ರಯತ್ನ ಮಾಡಿದನೇ ವಿನಃ ಅದನ್ನು ಹಾಕಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೋಗಲಿಲ್ಲ. ಈ ಚಿಂತನೆಯೇ ಅವನ ಮನಸ್ಸಿನ ಬೀಗವಾಗಿತ್ತು.

ನಮ್ಮ ಬದುಕಿನಲ್ಲೂ ಎಷ್ಟೋ ಬಾರಿ ಇದು ಒಂದು ಆಗುವುದಿಲ್ಲ, ಇದು ಅಸಾಧ್ಯ, ಇದು ನನ್ನನ್ನು ಮೀರಿದ್ದು ಎಂಬ ವಿಚಾರ ಬಂದಾಗ ಅದು ಕೂಡ ಮನಸ್ಸಿನ ಬೀಗವೇ. ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಆ ಬೀಗ ಸುಲಭವಾಗಿ ತೆರೆಯುತ್ತದೆ, ಅಸಾಧ್ಯವೆನ್ನುವುದು ಇಲ್ಲ ಎಂಬ ಅರಿವಾಗುತ್ತದೆ. ಅದಕ್ಕೇ ಮನಸ್ಸು ಯಾವಾಗಲೂ ಧನಾತ್ಮಕವಾಗಿರಬೇಕು.

* ಸೆ.21ರ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾದ ಈ ಅಂಕಣದ ದಿನಸಂಖ್ಯೆ 754ಕ್ಕೆ ಬದಲು 574 ಎಂದು ತಪ್ಪಾಗಿ ಪ್ರಕಟವಾಗಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ. - ಸಂ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.