ಭಾನುವಾರ, ಜನವರಿ 19, 2020
28 °C

ಹಿತ್ತಿಲ ವಿವೇಕದಲ್ಲಿ ಉತ್ತರ ಹುಡುಕಬೇಕು

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ತ್ಮಹತ್ಯೆ ಒಂದು ಅಪರಾಧ. ಆತ್ಮಹತ್ಯೆಗೆ ಯತ್ನಿಸುವುದೂ ಅಪರಾಧ. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಎರಡೂ ಅಪರಾಧಗಳಿಗೆ ದಂಡನೆ ಇದೆ. ಆತ್ಮಹತ್ಯೆಗೆ ಯತ್ನಿಸಿದವರ ಅಥವಾ ಮಾಡಿಕೊಂಡವರ ವಿರುದ್ಧ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲು ಆಗುತ್ತದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕಾನೂನು ಏನೂ ಮಾಡಲು ಸಾಧ್ಯವಿಲ್ಲ.

ಏಕೆಂದರೆ ಅವರು ಸತ್ತು ಬಿಟ್ಟಿರುತ್ತಾರೆ. ಆದರೆ,  ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದವರು ಖಟ್ಲೆ ಎದುರಿಸಬೇಕಾಗುತ್ತದೆ. ಈ ಕಾನೂನಿನಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಆದರೆ, ವಿಚಿತ್ರ ನೋಡಿ. ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಆತ್ಮಹತ್ಯೆ ಮಾಡಿಕೊಂಡ ಕಂಕಣವಾಡಿಯ ರೈತ ವಿಠಲ ಅರಭಾವಿ ಹುತಾತ್ಮ ಎನಿಸಿಕೊಂಡ. ಅವರಿಗೆ ಸರ್ಕಾರ ಮತ್ತು ವಿರೋಧ ಪಕ್ಷಗಳು ಪೈಪೋಟಿಗೆ ಬಿದ್ದು ಪರಿಹಾರ ಘೋಷಿಸಿದುವು.

ಅವರ ಪಾರ್ಥಿವ ಶರೀರದ ಮೇಲೆ ಮಾಲೆ ಹಾಕಿ ಅಂತಿಮ ಗೌರವ ಸಲ್ಲಿಸಲು ಎಲ್ಲ ಪಕ್ಷಗಳ ನಾಯಕರು ಮುಗಿಬಿದ್ದರು. ವಿಠಲ ಅರಭಾವಿ ಏಕೆ ಆತ್ಮಹತ್ಯೆ ಮಾಡಿಕೊಂಡರು, ಅದರ ಹಿನ್ನೆಲೆ ಮುನ್ನೆಲೆ ಏನು, ಅವರಿಗೆ ಯಾರಾದರೂ ಚಿತಾವಣೆ  ಮಾಡಿದರೇ  ಇತ್ಯಾದಿ ಕುರಿತು ದಂಡಾಧಿಕಾರಿಗಳಿಂದ ತನಿಖೆ ನಡೆಯಲಿದೆ. ನಾನು ಸಂಗ್ರಹಿಸಿರುವ ಸಂಗತಿಗಳನ್ನು ಇಲ್ಲಿ ಬರೆಯುತ್ತಿಲ್ಲ.ವಿಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡುದು ತಪ್ಪು. ಯಾರಾದರೂ ಬದುಕಿ ಹೋರಾಟ ಮಾಡಬೇಕು. ಸತ್ತು ಹೋರಾಟ ಮಾಡಲು ಸಾಧ್ಯವಿಲ್ಲ. ಸಮಸ್ಯೆ ಏನು ಎಂದರೆ  ಹೋರಾಟಗಾರರು ಸಾಯುವವರೆಗೆ ಅಥವಾ  ಹಿಂಸಾಚಾರಕ್ಕೆ ಇಳಿಯುವವರೆಗೆ ಸರ್ಕಾರ ಕಣ್ಣು ತೆರೆಯುವುದಿಲ್ಲ. ಮತ್ತು ಇಂಥ ಸಾವನ್ನು ಅಥವಾ ಹಿಂಸಾಚಾರವನ್ನು ಸದಾ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ವಿರೋಧ  ಪಕ್ಷಗಳು ಕಾಯುತ್ತ ಇರುತ್ತವೆ. ವಿಠಲ ಅರಭಾವಿ ಸಾವಿನಲ್ಲಿಯೂ ಇದೇ ಆಯಿತು.

ಅವರು  ಸತ್ತ ಕೂಡಲೇ ಸರ್ಕಾರ ಒತ್ತಡದಲ್ಲಿ ಸಿಲುಕಿತು. ಅವರ ಸಾವು ಒಂದು ಅಪರಾಧವಾಗಿದ್ದರೂ ಎಲ್ಲರೂ ಆ ಮುಖದ ಕಡೆಗೆ ಕುರುಡರಾದರು. ಭಾವನೆಗಳಲ್ಲಿ ಇಡೀ ಸದನ ತೇಲಿ ಹೋಯಿತು. ಸರ್ಕಾರ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತು. ಎರಡು ವಿರೋಧ ಪಕ್ಷಗಳು ಸೇರಿಕೊಂಡು ಅಷ್ಟೇ ಮೊತ್ತದ ಪರಿಹಾರ ಕೊಡುವ ಮಾತು ಆಡಿದುವು.

ಅಂದರೆ, ಅಧಿವೇಶನ ನಡೆಯುವಾಗ ಯಾರಾದರೂ ಬಂದು ತಮ್ಮ ಕಷ್ಟಗಳ ಸಲುವಾಗಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಂಡರೆ ಆ ಸಾವಿಗೆ ಹೆಚ್ಚು ಮಹತ್ವ ಬರುತ್ತದೆಯೇ? ದೂರದ ತನ್ನ ಊರಿನಲ್ಲಿ ಇದೇ ಸಾಲದ ಉರುಳಿಗೆ ಕೊರಳು ಕೊಡುವ ರೈತನ ಜೀವಕ್ಕೆ ಬೆಲೆ ಇಲ್ಲವೇ? ಎಲ್ಲ ಜೀವ ಒಂದೇ ಅಲ್ಲವೇ? ಇದೇನು ನಿನ್ನೆ ಮೊನ್ನೆ ಶುರುವಾದ ವಿದ್ಯಮಾನವಲ್ಲ.

1997ರಲ್ಲಿ ಬೀದರ್‌ ಜಿಲ್ಲೆಯಲ್ಲಿ ತೊಗರಿ ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಈ ಮರಣಪರ್ವ ಶುರುವಾಯಿತು. ಆಗಿನಿಂದ ಈಗಿನವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಲೆಕ್ಕವನ್ನು ಇಟ್ಟವರು ಇಲ್ಲ. ದೇಶದಲ್ಲಿ ಅರ್ಧಗಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬ ಲೆಕ್ಕ ಮಾತ್ರ ಸಿಕ್ಕಿದೆ! ರೈತರ ಆತ್ಮಹತ್ಯೆಯ ಕಾರಣಗಳು ಮತ್ತು ಅದಕ್ಕೆ ಪರಿಹಾರ ಹುಡುಕಲು ಸರ್ಕಾರ ಆಗಿನಿಂದಲೇ ಪ್ರಯತ್ನಗಳನ್ನೂ ಮಾಡಿದೆ.

ಶಾಸಕ ಜಿ.ಬಿ.ಶಿವಕುಮಾರ್‌ ನೇತೃತ್ವದ ಜಂಟಿ ಸದನ ಸಮಿತಿ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ  ಡಾ.ಜಿ.ಕೆ.ವೀರೇಶ್‌ ನೇತೃತ್ವದ ತಜ್ಞರ ಸಮಿತಿ ವರದಿಗಳ ಕುರಿತು ವಿಧಾನಮಂಡಲದಲ್ಲಿ ವಿಸ್ತೃತ ಚರ್ಚೆಯೂ ನಡೆದಿದೆ. ಅಚ್ಚರಿ ಎನ್ನುವಂತೆ ಎರಡೂ ಸಮಿತಿಗಳು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಕೊಡಬಾರದು ಎಂದು ಶಿಫಾರಸು ಮಾಡಿವೆ!ವೀರೇಶ್‌ ಸಮಿತಿ ವರದಿ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ಕೊಡುತ್ತ ಆಗಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಎಲ್ಲ ರೈತರ ಆತ್ಮಹತ್ಯೆ ಪ್ರಕರಣಗಳನ್ನು ದಂಡಾಧಿಕಾರಿಗಳಿಂದ ತನಿಖೆ ಮಾಡಿಸಲು ಆದೇಶಿಸಿದ್ದರು. ಮತ್ತು ಸತ್ತ ರೈತರ ಕುಟುಂಬಗಳಿಗೆ ಪರಿಹಾರ ಕೊಡುವುದು ಆತ್ಮಹತ್ಯೆಯನ್ನು ಉತ್ತೇಜಿಸಿದಂತೆ, ಹಾಗಾಗಿ ತಮ್ಮ ಸರ್ಕಾರ ಪರಿಹಾರ ಕೊಡುವುದಿಲ್ಲ ಎಂದು ಹೇಳಿದ್ದರು. ತಮ್ಮ ನಿರ್ಧಾರಕ್ಕೆ ಅವರು ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನಲಾದ ಪಂಜಾಬ್‌ ರಾಜ್ಯದ ಸರ್ಕಾರ ತೆಗೆದುಕೊಂಡ ಇಂಥದೇ ನಿರ್ಣಯದ ಉದಾಹರಣೆ ಕೊಟ್ಟಿದ್ದರು. ಇದು ನಡೆದುದು 2002ರಲ್ಲಿ.ವೀರೇಶ್‌ ಸಮಿತಿ ತನ್ನ ವರದಿ ಕೊಡುವಾಗ ಅದುವರೆಗಿನ 135 ರೈತರ ಆತ್ಮಹತ್ಯೆಗಳನ್ನು ತನ್ನ ಅಧ್ಯಯನಕ್ಕೆ ಒಳಪಡಿಸಿತ್ತು. ಇಷ್ಟೇ ಪ್ರಮಾಣದ ‘ಕಂಟ್ರೋಲ್ ಕೇಸ್‌’ಗಳನ್ನೂ, ಅಂದರೆ ಆತ್ಮಹತ್ಯೆ ಮಾಡಿಕೊಂಡ ರೈತರಂಥ ಸಂಕಷ್ಟಗಳನ್ನು ಎದುರಿಸಿಯೂ ಆತ್ಮಹತ್ಯೆ ಮಾಡಿಕೊಳ್ಳದ ರೈತರ ಪ್ರಕರಣಗಳನ್ನು ಅದು ಅಧ್ಯಯನಕ್ಕೆ ಬಳಸಿತ್ತು. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಅವರು ಮಾಡಿದ ಸಾಲಕ್ಕಿಂತ ಕುಡಿತ ಮುಖ್ಯ ಕಾರಣ ಎಂದು ಅದು ಅಭಿಪ್ರಾಯ ಪಟ್ಟಿತ್ತು.

ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬಗಳಿಗೆ ಪರಿಹಾರ ಕೊಡುವುದನ್ನು ರೈತ ನಾಯಕ ದಿವಂಗತ ಎಂ.ಡಿ.ನಂಜುಂಡಸ್ವಾಮಿ ಅವರೂ ಒಪ್ಪುತ್ತಿರಲಿಲ್ಲ. ಆದರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳದಂಥ ಒಂದು ಸ್ಥಿತಿಯನ್ನು ನಿರ್ಮಿಸಬೇಕು ಎಂಬುದು ಅವರ ಆಶಯವಾಗಿತ್ತು. ಅಂಥ ಸ್ಥಿತಿಯನ್ನು, ವಾತಾವರಣವನ್ನು ಸೃಷ್ಟಿ ಮಾಡುವುದು ಮುಖ್ಯವಾಗಿ ಸರ್ಕಾರದ ಕೆಲಸ. ರೈತ ಬೆಳೆದ ಬೆಳೆಗೆ ನ್ಯಾಯಯುತವಾದ ಬೆಲೆ ಸಿಕ್ಕರೆ ಆತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆದರೆ,  ಬೆಲೆ ನಿಗದಿ ಮಾಡುವ ಅಧಿಕಾರವೇ ಅವನಿಗೆ ಇಲ್ಲ.

ಅದನ್ನು ಮಾರುಕಟ್ಟೆ ನಿರ್ಧರಿಸುತ್ತದೆ. ಆತ ಬೆಳೆದ ಬೆಳೆ ಮಾರುಕಟ್ಟೆಗೆ  ಬರುವ ವೇಳೆಗೆ ಜಾದೂ ಮಾಡಿದಂತೆ ಬೆಲೆ ಬಿದ್ದು ಹೋಗಿರುತ್ತದೆ. ಆದರೆ, ಇದು ಬರೀ  ಸರ್ಕಾರದ ಹೊಣೆಯೇ? ರೈತರ ಹೊಣೆ ಏನೂ ಇಲ್ಲವೇ? ಅವರು ಬರೀ ವಾಣಿಜ್ಯ ಬೆಳೆಯ ಬೆನ್ನು ಬಿದ್ದಿಲ್ಲವೇ? ಕಬ್ಬು ಬೆಳೆಯ ವಿಸ್ತೀರ್ಣ ದಿನದಿಂದ ದಿನಕ್ಕೆ ಅಗಾಧವಾಗಿ ಹೆಚ್ಚುತ್ತಿಲ್ಲವೇ? ಭತ್ತದ ಬೆಳೆಯ ವಿಸ್ತೀರ್ಣವೂ ಹೀಗೆಯೇ ಹೆಚ್ಚುತ್ತಿದೆ.

ಹಾಗಾದರೆ ನೀರಾವರಿ ಇರುವ ಪ್ರದೇಶದಲ್ಲಿ ಬರೀ ವಾಣಿಜ್ಯ ಬೆಳೆ ಮಾತ್ರ ಬೆಳೆಯಬೇಕೇ? ಬೆಳೆ ವೈವಿಧ್ಯ ಮತ್ತು ಮಿಶ್ರ ಬೆಳೆ ಎಂಬುದು ನಮ್ಮ ಕೃಷಿಯ ಹಳೆಯ ವಿವೇಕವಾಗಿತ್ತು. ನಮ್ಮ ಹಿರಿಯರು ತಮ್ಮ ಹೊಲದಲ್ಲಿ ತಮ್ಮ ಕುಟುಂಬಕ್ಕೆ  ಬೇಕಾದುದು ಎಲ್ಲವನ್ನೂ ಬೆಳೆಯುತ್ತಿದ್ದರು. ಕೃಷಿ ಎಂಬುದು ಸ್ವಾವಲಂಬಿ ಬದುಕಿಗೆ ಒಂದು ಮಾದರಿ ಎನ್ನುವಂತೆ ಇತ್ತು. ಈಗ ಬರೀ ಕಬ್ಬು ಅಥವಾ ಭತ್ತ  ಬೆಳೆದರೆ ಹೊಟ್ಟೆಗೆ ಏನು ತಿನ್ನುವುದು?ಆಶ್ಚರ್ಯ ಎಂದರೆ ರೈತ ಸಂಘಟನೆ ಮತ್ತು ಅದರ ನಾಯಕತ್ವ ಇರುವುದು ಕೇವಲ ಕಬ್ಬು ಹಾಗೂ ಭತ್ತ ಬೆಳೆಯುವ ಪ್ರದೇಶದಲ್ಲಿ. ಈಚೆಗೆ ರೈತ ಸಂಘದ ನಾಯಕರು ಕಬ್ಬು ಬೆಳೆಗೆ ಮಾತ್ರ ಬೆಂಬಲ ಕೇಳಿ ಹೋರಾಟ ಮಾಡಿದ್ದಾರೆ. ಭತ್ತದ ಬೆಳೆಗೂ ಅವರು ಬೆಂಬಲ ಬೆಲೆ ಕೇಳಿಲ್ಲ. ಹಾಗಾದರೆ ಉಳಿದ ಎಲ್ಲ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆಯೇ ಎಂದರೆ ಉತ್ತರ ಇಲ್ಲ. ಉತ್ತರ ಕರ್ನಾಟಕದಲ್ಲಿ ಜೋಳ ಬೆಳೆದ ರೈತರ ಜತೆಗೆ ಈಗ ಯಾರು ಇದ್ದಾರೆ? ಮೂವತ್ತು ವರ್ಷಗಳ ಹಿಂದೆ ರೈತ ಸಂಘಟನೆ ಹುಟ್ಟಿಕೊಂಡಾಗಿನಿಂದಲೂ ರೈತ ಸಂಘದ ವಿರುದ್ಧ ಇದ್ದ ಆರೋಪ ಇದು.

ಅದು ಬರೀ ದೊಡ್ಡ  ರೈತರ ಪರವಾಗಿ ಇದೆ ಎಂಬುದು ಆ ಆರೋಪ. ಈ ಸಂಘಟನೆ ಹುಟ್ಟಿಕೊಂಡ ಆರಂಭದಲ್ಲಿ ಅದು ರೈತರಲ್ಲಿ ಹುಟ್ಟುಹಾಕಿದ ಜಾಗೃತಿ, ಅಭಿಮಾನ ಅನನ್ಯವಾದುದು. ಕಾಲಾನಂತರದಲ್ಲಿ ರೈತ ನಾಯಕರಲ್ಲಿ ಅಭಿಮಾನ ಹೋಗಿ ಅಹಂಕಾರ ತಲೆ ಎತ್ತಿತು. ಈ ಅಹಂಕಾರ ಮೊಳಕೆಯಲ್ಲಿಯೇ ಇತ್ತು ಎಂಬುದು ಬೇರೆ ಮಾತು! ಆ ಅಹಂಕಾರದ ಕಾರಣವಾಗಿ ರೈತ ಸಂಘ ಒಡೆದು ನುಚ್ಚು ನೂರಾಯಿತು. ಈಗ ಯಾವುದು ಅಧಿಕೃತ ಸಂಘ, ಯಾವುದು ಅನಧಿಕೃತ ಎಂದು ಹೇಳುವುದು ಕೂಡ ಕಷ್ಟ.

ಹೆಗಲ ಮೇಲೆ ಹಸಿರು ಟವೆಲ್‌ ಹಾಕಿಕೊಳ್ಳುವುದು ಆಗ ಗೌರವದ  ಸಂಕೇತ ಎನಿಸಿದ್ದರೆ ಈಗ ಆತ ಕೆಲಸವಿಲ್ಲದವನು ಎಂದು ಹೊಲದಲ್ಲಿ ನಡುಬಗ್ಗಿಸಿ ದುಡಿಯುವ ರೈತರೇ ಅಣಕಿಸುತ್ತಾರೆ. ರೈತ ಸಂಘದ ನಾಯಕರು ಬೆಂಬಲ  ಬೆಲೆಗೆ  ಹೋರಾಟ ಮಾಡುತ್ತಾರೆ. ಆದರೆ,  ಎಲ್ಲ ರೈತರು ವಾಣಿಜ್ಯ ಬೆಳೆಯ ಬೆನ್ನು ಹತ್ತಿ ನಾಶವಾದೀರಿ ಎಂದು ಎಚ್ಚರಿಸುವುದಿಲ್ಲ. ರಾಸಾಯನಿಕಗಳು ಮತ್ತು ಕೀಟ ನಾಶಕಗಳಿಂದ ಆಗುತ್ತಿರುವ ಅನಾಹುತದ ಬಗೆಗೂ ಎಚ್ಚರಿಸುವುದಿಲ್ಲ.

ಹಾಗಾದರೆ, ಅವರಿಗೂ ರಾಜಕಾರಣಿಗಳಿಗೂ ಏನು ವ್ಯತ್ಯಾಸ? ನಮ್ಮ ಪಕ್ಕದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ರಾಸಾಯನಿಕ ಮತ್ತು ಕೀಟನಾಶಕ ಹೊರತಾದ ಕೃಷಿಗೆ ದೊಡ್ಡ ಪ್ರಮಾಣದಲ್ಲಿ ಪರ್ಯಾಯಗಳನ್ನು ಹುಡುಕುವ ಯತ್ನ ನಡೆದಿದೆ. ಕರ್ನಾಟಕದಲ್ಲಿ ಅನೇಕ ರೈತರು ವೈಯಕ್ತಿಕವಾಗಿ ಈ ಪ್ರಯತ್ನ ಮಾಡಿದ್ದಾರೆ ಮತ್ತು ಅವರು ಯಶಸ್ಸನ್ನೂ ಕಂಡಿದ್ದಾರೆ. ಆದರೆ, ಅದನ್ನು ಸಾಮೂಹಿಕಗೊಳಿಸುವ ಯತ್ನಗಳು ನಡೆದಿಲ್ಲ. ಅದಕ್ಕೆ ಏನು ಕಾರಣ ಎಂದು ಗೊತ್ತಿಲ್ಲ.ರಾಜಸ್ತಾನ ಬಿಟ್ಟರೆ ಇಡೀ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಬಂಜರು ಭೂಮಿ ಇರುವ ರಾಜ್ಯ. ಇಲ್ಲಿ ಒಂದು ಕಡೆ ಸಮೃದ್ಧ ನೀರಾವರಿ ಅನುಕೂಲ ಇದೆ. ಇನ್ನೊಂದು ಕಡೆ ಹನಿ ನೀರಿಗೂ ಪರಿತಪಿಸಬೇಕಾಗಿದೆ. ನೀರಾವರಿ ಪ್ರದೇಶದ ರೈತರಿಗೆ ಇದರ ಅರಿವು ಇದೆಯೇ ಎಂದರೆ ಉತ್ತರ ಹೇಳುವುದು ಕಷ್ಟ. ನಾವು ನಮ್ಮ ಮನೆಯಲ್ಲಿ ಬಕೆಟ್‌ನಲ್ಲಿ ನೀರು ಹಿಡಿಯಲು ನಲ್ಲಿ ಚಾಲೂ ಮಾಡಿ ಬಿಟ್ಟು ಬಿಡುವುದಿಲ್ಲ. ಬಕೆಟ್‌ ತುಂಬಿದ ಕೂಡಲೇ ನಲ್ಲಿಯನ್ನು ಬಂದ್‌ ಮಾಡುತ್ತೇವೆ.

ಆದರೆ, ರೈತರು ಹೊಲಕ್ಕೆ ನೀರನ್ನು ಹೇಗೆ ಹರಿಸುತ್ತಾರೆ?  ರಾತ್ರಿ ವೇಳೆಯಲ್ಲಿಅವರು ಪಂಪ್‌ಸೆಟ್‌ ಚಾಲೂ ಮಾಡಿ ಮನೆಯಲ್ಲಿ ಬಂದು ಮಲಗಿ ಬಿಡುವುದಿಲ್ಲವೇ? ಹಗಲು ವೇಳೆಯಲ್ಲಿ ಸರ್ಕಾರ ಕರೆಂಟ್‌ ಕೊಡುವುದಿಲ್ಲ ಎಂಬುದು ಅದಕ್ಕೆ ಕಾರಣ ಆಗಿರಬಹುದು. ಜತೆಗೆ ಕರೆಂಟು ಮತ್ತು ನೀರಿಗೆ ರೈತರು ಹಣ ಕೊಡುವುದಿಲ್ಲ ಎಂಬುದೂ ಕಾರಣ ಆಗಿರಬಹುದಲ್ಲ? ಕರೆಂಟು ಮತ್ತು ನೀರು ಅವರದಲ್ಲದಿರಬಹುದು.

ಆದರೆ, ಭೂಮಿ ಅವರದೇ ಹೌದಲ್ಲ? ಕಬ್ಬು ಮತ್ತು ಭತ್ತ ಬೆಳೆಯುವ ರೈತರ ಹೊಲಗಳು ಈಗ ಕಾಂಕ್ರೀಟ್‌ ರಸ್ತೆಗಳಿಗಿಂತ ಬಿರುಸಾಗಿವೆ. ಅಲ್ಲಿ ಇನ್ನು ಎಷ್ಟು ದಿನ ಬೆಳೆ ಬೆಳೆಯಲು ಸಾಧ್ಯವಾಗುತ್ತದೆಯೋ ಗೊತ್ತಿಲ್ಲ. ಭೂಮಿ ಬಸುರಾಗುವ ಶಕ್ತಿಯನ್ನೇ ಕಳೆದುಕೊಂಡು ಬಿಟ್ಟಿದೆ. ಅದರಲ್ಲಿ ಮೃದುತ್ವವೇ ಇಲ್ಲ. ಮೃದುತ್ವ ಇಲ್ಲದ ಕಡೆಯಲ್ಲಿ ಅರಳುವಿಕೆಯೂ ಇರುವುದಿಲ್ಲ. ಸುಮ್ಮನೇ ನಾವು ಚೀಲಗಟ್ಟಲೆ ಗೊಬ್ಬರ ಹಾಕಿ ಬಲವಂತದಿಂದ ಭೂಮಿಯನ್ನು ಅಗಲಿಸಿ, ಬೀಜ ಬಿತ್ತಿ ಗರ್ಭಧಾರಣೆ ಮಾಡಿಸುತ್ತಿದ್ದೇವೆ.  ಇನ್ನೂ ಹೀಗೆಯೇ ಎಷ್ಟು ದಿನ? ಕೃಷಿ ಎನ್ನುವುದು ಒಂದು ಕಾಳು ಬಿತ್ತಿ ಸಾವಿರ ಕಾಳು ಬೆಳೆಯುವ ಒಂದು ಕಾಯಕ.

ಅದು ಬರೀ ಬೀಜ ಹಾಕಿ ಬೆಳೆ ಬೆಳೆಯುವುದು ಅಷ್ಟೇ ಅಲ್ಲ. ಅಲ್ಲಿ ಪ್ರಾಣಿಗಳು ಇದ್ದುವು, ಹುಳ ಹುಪ್ಪಟೆಗಳು ಇದ್ದುವು, ಪಕ್ಷಿಗಳು ಇದ್ದುವು. ಎಲ್ಲರೂ ಕೂಡಿ ಬಾಳುತ್ತಿದ್ದರು. ಹುಳ ಹುಪ್ಪಟೆಗಳನ್ನು, ಪಕ್ಷಿಗಳನ್ನು ರಾಸಾಯನಿಕ ಗೊಬ್ಬರಗಳು, ಕ್ರಿಮಿ ನಾಶಕಗಳು ಸಾಯಿಸಿಬಿಟ್ಟಿವೆ. ಪ್ರಾಣಿಗಳನ್ನು ಟ್ರ್ಯಾಕ್ಟರ್‌ಗಳು, ಟಿಲ್ಲರ್‌ಗಳು ಓಡಿಸಿವೆ.  ರೈತರನ್ನು ಮೋಟಾರ್‌ ಸೈಕಲ್‌ಗಳು ಹೊಲ ಗದ್ದೆಗಳಿಂದ ದೂರ ಕರೆದುಕೊಂಡು ಹೋಗಿವೆ. ನಗರದಲ್ಲಿ ಇರುವವರು ದುಡ್ಡಿನಿಂದ ಏನಾದರೂ ಕೊಂಡು ಕೊಂಡೇವು ಎಂಬ ಅಹಂಕಾರದಲ್ಲಿ ಇದ್ದಾರೆ.

ಸರ್ಕಾರದಲ್ಲಿ ಇದ್ದವರು ಸಬ್ಸಿಡಿ ಕೊಡುವುದು ಮಾತ್ರ ತಮ್ಮ ಕೆಲಸ ಎಂದುಕೊಂಡಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದವರು ಧರಣಿ ಮಾಡಿದರೆ ಸಾಕು ಎಂದು ಭಾವಿಸಿದ್ದಾರೆ. ರೈತ ಸಂಘದವರು ಹೋರಾಟ ಮಾಡುವುದು ಅಷ್ಟೆ ತಮ್ಮ ಕೆಲಸ ಎಂದು ಅಂದುಕೊಂಡಿದ್ದಾರೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಇರುವವರಿಗೂ ಹೊಲಗಳಿಗೂ ಸಂಬಂಧವೇ ಇಲ್ಲ. ಹಾಗಾದರೆ ಇದಕ್ಕೆ ಉತ್ತರ ಎಲ್ಲಿ ಇದೆ? ವಿಠಲ ಅರಭಾವಿ ಅವರ ಆತ್ಮಹತ್ಯೆಯಲ್ಲಿ ಖಂಡಿತ ಇಲ್ಲ. ನಮ್ಮ ಹಿತ್ತಿಲ ವಿವೇಕದಲ್ಲಿ ಇದೆ. ಮರಳಿ ಹೋಗಿ ಹುಡುಕುವ ವ್ಯವಧಾನ ಬೇಕು ಅಷ್ಟೇ.

ಪ್ರತಿಕ್ರಿಯಿಸಿ (+)