ಭಾನುವಾರ, ಮೇ 9, 2021
18 °C

ಹೆಬ್ಬಾವು ಮನುಷ್ಯನನ್ನು ನುಂಗಿದ ಪ್ರಸಂಗ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಹೆಬ್ಬಾವು ಮನುಷ್ಯನನ್ನು ನುಂಗಿದ ಪ್ರಸಂಗ

ತ್ತೀಚೆಗೆ ಕೇರಳದ ಅಟ್ಟಪ್ಪಾಡಿಯಲ್ಲಿ ಗಡದ್ದಾಗಿ ಕುಡಿದ ಅಮಾಯಕ ವ್ಯಕ್ತಿ ಯೊಬ್ಬ ಅಮಲಾನಂದದಲ್ಲಿ ಗಡಂಗಿನ ಜಗು­ಲಿ ಮೇಲೆ ಗಾಢ ನಿದ್ದೆಯಲ್ಲಿ ಮುಳುಗಿದ್ದಾಗ ಹೆಬ್ಬಾವೊಂದು ಅಲ್ಲಿ ಸಕಾಲದಲ್ಲಿ ಪ್ರವೇಶಿಸಿ ಆತನನ್ನು ಆಪಾದಮಸ್ತಕ ನುಂಗಿದ ಘಟನೆ­ಯೊಂದು ಮಾಧ್ಯಮಗಳಲ್ಲಿ ಪ್ರಚಾರ ವಾಯಿತು.

ಸದರಿ ವ್ಯಕ್ತಿಯನ್ನು ನುಂಗಿ ಆನಂದ ವಾಗಿ ಮಲಗಿರುವ, ತನ್ನ ಸೈಜಿಗಿಂತ ಹತ್ತುಪಟ್ಟು ಹೊಟ್ಟೆ ಉಬ್ಬಿರುವ ಹೆಬ್ಬಾವಿನ ಚಿತ್ರವನ್ನು ಗಣನೀಯ ಸಂಖ್ಯೆಯಲ್ಲಿ ಫೇಸ್‌ಬುಕ್‌ವೀರರು ಒಂದು ಕಡೆ ಪ್ರಚುರಪಡಿಸಿದರೆ, ಈ ಬಗೆಗೆ ಕೆಲವು ಕಿರು ಸುದ್ದಿಚಿತ್ರಗಳು ಯೂಟ್ಯೂಬಿನಲ್ಲಿ ಸೇರ್ಪಡೆ ಯಾದವು. ಅಮೆರಿಕನ್ ಮೂಲದ ಒಂದು ಕಿರು ಚಿತ್ರ ಹೀಗೆ ಶಿಫಾರಸು ಮಾಡಿತು: ಇನ್ನು ಮುಂದೆ ಅಟ್ಟಪ್ಪಾಡಿಗೆ ಹೋದವರು ಅಮಲೇರುವಂತೆ ಗುಂಡು ಹಾಕಲಿಚ್ಛಿಸಿದರೆ ತಾವು ತಂಗುವ ಹೋಟೆಲು­ಗಳ ಸುಭದ್ರ ಗೋಡೆಗಳ ನಡುವೆ ಹಾಕುವುದು ವಾಸಿ.ಈ ತೆರನ ಘಟನೆಗಳು ಜಗತ್ತಿನಾದ್ಯಂತ ನಡೆದಿರುವ ವರದಿಗಳು ಪತ್ರಿಕೆಗಳಲ್ಲಿ ಬಂದವು. ಅಂತರ್ಜಾಲ ಮಾಧ್ಯಮಗಳಲ್ಲಿ ತತ್ಸಂಬಂಧ ವಾಗಿ ಪ್ರಕಟವಾದ ಚಿತ್ರಗಳ ಅಧಿಕೃತತೆಯ ಚರ್ಚೆಗಳೂ ನಡೆದವು. ಇಂತಹ ಘಟನೆಗಳು ಬೇರೆಬೇರೆ ಕಡೆ ನಡೆದದ್ದು ವರದಿಯಾದರೂ ಒಂದೇ ಹೆಬ್ಬಾವಿನ ಚಿತ್ರ ಎಲ್ಲ ಕಡೆ ರಾರಾಜಿಸು ತ್ತಿದೆಯೆಂದು ಆರೋಪಿಸಲಾಗಿದೆ. ಒಟ್ಟಾರೆ ಯಾಗಿ ಆ ಚಿತ್ರ ಎಷ್ಟರಮಟ್ಟಿಗೆ ನೈಜವೆಂಬು ದನ್ನು ಕೆಲವರು ಅನುಮಾನಿಸಿದ್ದಾರೆ.

ಈ ನಡುವೆ ಅಮೆರಿಕದ ಫ್ಲಾರಿಡಾದಲ್ಲೋ ಎಲ್ಲೋ ಹೆಬ್ಬಾ ವುಗಳನ್ನು ಸಾಕುಪ್ರಾಣಿಗಳನ್ನಾಗಿ ಸಲುಹಿದ್ದ ಕೆಲವರು ಕೊನೆಗೆ ಅವುಗಳಿಂದ ರೋಸಿ ಅವನ್ನು ಕಾಡೊಳಗೆ ಬಿಟ್ಟ ತರುವಾಯ ಯಾವ ತರಹ ಆ ಹೆಬ್ಬಾವುಗಳು ತಮ್ಮ ಬಿಡುಗಡೆಯ ಹಬ್ಬವನ್ನು ತಮಗೆ ಸಿಕ್ಕ ನರಮನುಷ್ಯರ ಭೂರಿಭೋಜನದ ದ್ವಾರಾ ಆಚರಿಸಿದವೆಂದು ವರ್ಣಿಸಲಾಗಿದೆ. ಅದರಲ್ಲೊಬ್ಬ ವೀರಾಧಿವೀರ, ತನ್ನಲ್ಲಿದ್ದ ಚಾಕುವಿನ ಬಲದಿಂದ ಹೆಬ್ಬಾವಿನ ಬಾಯಿಸೀಳಿ ಹೊರಬಂದ ವೀರಗಾಥೆಯೂ ವರದಿಯಾಗಿದೆ.ನನಗೆ ಸಿಕ್ಕ ಎಲ್ಲ ಮೂಲಗಳಲ್ಲಿ ಹೆಬ್ಬಾವಿನ ಬಾಯಿಗೆ ಬಲಿಯಾದ ಅಮಾಯಕ ಯಾರು ಎತ್ತ ಎಂಬ ವಿವರಗಳು ನಾಪತ್ತೆ. ಬಹುತೇಕ ಮೂಲಗಳಲ್ಲಿ ಅವನನ್ನು ಕೂಲಿಗಾರನೆಂದೋ ಕೆಲಸಗಾರನೆಂದೋ ಅಸ್ಪಷ್ಟವಾಗಿ ಗುರುತಿಸ ಲಾಗಿದೆ. ಹೆಬ್ಬಾವಿನ ಆದಿಮ ಹೊಟ್ಟೆಬಾಕತನಕ್ಕೆ ಹಂದಿ, ದನ, ಆನೆ ಇತ್ಯಾದಿ ಜಂತುವಿಶೇಷಗಳು ಶಿಕಾರಿಯಾಗಿರುವುದನ್ನು ಹೆಬ್ಬಾವಿನ ನರಭಕ್ಷಕ ವಿಲಾಸದ ಕಥನಗಳಲ್ಲಿ ಹೆಣೆಯಲಾಗುತ್ತಿದೆ.

ಒಟ್ಟಿ­ನಲ್ಲಿ ಒಂದು ಮಿಥಿಕದ ಸ್ವರೂಪ ಪಡೆಯು­ತ್ತಿರುವ ಹೆಬ್ಬಾವುಗಳ ಪ್ರಾಣಿಭಕ್ಷಕ ಪರಿಣತಿಯ ವಿವರಣ-ಕಥನಗಳು ಎದುರಾದಾಗ ನಾನು ಹಾಡ­ಹಗಲಲ್ಲಿ, ತುಂಬಿದ ನಗರದಲ್ಲಿ ಪ್ರತ್ಯಕ್ಷ ಕಂಡ ಘಟನೆಯೊಂದು ನೆನಪಾಗುತ್ತಿದೆ. ಏ.೧೧, ೨೦೧೦; ನವದೆಹಲಿ: ದಕ್ಷಿಣ ನವ ದೆಹಲಿಯ ಬಾಬಾ ಗಂಗನಾಥ ಮಾರ್ಗ­ದಿಂದ ಮುನೀರಕಾ ಗ್ರಾಮವನ್ನು ಪ್ರವೇಶಿಸುವ ಒಂದು ಸಣ್ಣ ರಸ್ತೆಯಲ್ಲಿ ಅತ್ಯಂತ ಸುಂದರವಾದ  ಹಿತ ಬಿಸಿಲಿನ ನಡುಹಗಲು ಹಾದು ಹೋಗು­ತ್ತಿದ್ದಾಗ ಒಂದಷ್ಟು ಬಾಲಕರು ರಸ್ತೆಬದಿಯಲ್ಲಿ ನಿಂತು ಬೆರಗಿನ ಕಣ್ಣುಗಳಿಂದ ಚರಂಡಿಯಲ್ಲಿ ಜರುಗು ತ್ತಿದ್ದ ಘಟನಾವಿಶೇಷವನ್ನು ವೀಕ್ಷಿಸುತ್ತಿ­ದ್ದು­ದನ್ನು ಕಂಡು ನನ್ನ ಚಾಲಕ ಕಾರನ್ನು ನಿಲ್ಲಿಸಿದ್ದ.ಅದೇನೆಂದು ನೋಡಲಾಗಿ ಅಲ್ಲೊಂದು ಮರಿಹೆಬ್ಬಾವು ತನಗಿಂತ ಐದುಪಟ್ಟು ದೊಡ್ಡ ಸೈಜಿನ ಅಳಿಲಿನ ಬಾಲವನ್ನು ಕಚ್ಚಿಕೊಂಡಿದ್ದು ಕಂಡುಬಂತು. ಸುರಕ್ಷಿತ ದೂರದಲ್ಲಿ ನಿಂತಿದ್ದ ಆ ಬಾಲಕರು ಅಳಿಲನ್ನು ರಕ್ಷಿಸಲೆಂದು ಹೆಬ್ಬಾವನ್ನು ಹೆದರಿಸುವ ಸದ್ದುಗಳನ್ನು ಮಾಡತೊಡಗಿದರು. ಸಣ್ಣಪುಟ್ಟ ಕಲ್ಲುಗಳನ್ನು ತೂರಿ ಮರಿಹೆಬ್ಬಾವನ್ನು ಓಡಿಸಲು ಭೂತದಯೆಯಿಂದ ಪ್ರಯತ್ನಿಸಿದರು. ಆದರೆ ಒಂದೆರಡು ನಿಮಿಷಗಳಲ್ಲಿ ಅಳಿಲಿನ ಅರ್ಧಭಾಗ, ಮರಿ ಹೆಬ್ಬಾವಿನ ಅಗಲವಾಗುತ್ತಿದ್ದ ಹೊಟ್ಟೆಯಲ್ಲಿ ಸೇರಿ ಹೋಗಿತ್ತು.

ಆ ಕ್ಷಣದಲ್ಲಿ ಎಲ್ಲರೂ ಸ್ತಂಭೀಭೂತರಾದರು. ಇನ್ನೊಂದು ನಿಮಿಷದಲ್ಲಿ ಮರಿಹೆಬ್ಬಾವಿನ ಹೊಟ್ಟೆಯಲ್ಲಿ ಇಡೀ ಅಳಿಲು ಅಡಗಿ ಹೋಯಿತು. ಭೂರಿ­ಭೋಜನದ ಭಾರದಿಂದ ಬಳಲಿದಂತೆ ಕಾಣಿಸಿದ ಮರಿ­ಹೆಬ್ಬಾವು ಮೆಲ್ಲಗೆ ಕಲ್ಲುಗೋಡೆಯ ಸಂದಿ­ಯೊಳಗೆ ಪ್ರವೇಶಿಸಿ ಅಂತರ್ಧಾನವಾಯಿತು. ಕೆಲವು ಗಂಟೆಗಳ ಕಾಲ ಈ ಘಟನೆಯ ಪ್ರತ್ಯಕ್ಷ ವೀಕ್ಷಣೆ ನನ್ನನ್ನು ಅಲುಗಿಸಿತಾದರೂ ಅದರ ಪ್ರಭಾವ ಬಹಳ ಕಾಲ ಮನಸ್ಸಿನಲ್ಲಿ ನಿಲ್ಲಲಿಲ್ಲ. ಈ ಪ್ರತ್ಯಕ್ಷ ಅನುಭವ ಮಾಧ್ಯಮಗಳಲ್ಲಿ ಪ್ರಚುರ­ಗೊಳ್ಳುತ್ತಿರುವ ಹೆಬ್ಬಾವಿನ ನರಭಕ್ಷಕತನದ ಚಿತ್ರಗಳ ಅನುಭವಕ್ಕಿಂತ ಮೂಲಭೂತವಾಗಿ ಭಿನ್ನ.

ಯಾಕೆಂದರೆ ಮಾಧ್ಯಮದ ಚಿತ್ರಗಳು ನನ್ನ ಚಿತ್ತಭಿತ್ತಿಯಿಂದ ಇನ್ನೂ ಅಳಿಸಿಹೋಗುತ್ತಿಲ್ಲ. ಮತ್ತೆ ಮತ್ತೆ ಮೂಡುತ್ತಿರುತ್ತವೆ. ಸ್ಪಷ್ಟವಾದ ನಿಜಘಟನೆಗಳಿಗಿಂತಲೂ ಹೆಚ್ಚಾಗಿ ಮಾಧ್ಯಮ­ಗಳಲ್ಲಿ ಮರುಕಳಿಸುವ ಅಸ್ಪಷ್ಟ ಚಿತ್ರಗಳು ನಮ್ಮ ಮನಸ್ಸನ್ನು ಗಾಢವಾಗಿ ಯಾಕೆ ತಟ್ಟುತ್ತವೆ ಎಂಬುದು ಆಲೋಚಿಸತಕ್ಕ ವಿಷಯ. ಹೆಬ್ಬಾವು ಮನಷ್ಯನನ್ನು ನುಂಗಿದರ ವರದಿ­ಗಳಲ್ಲಿ ಸ್ಪಷ್ಟ ವಿವರಗಳು (ಉದಾ: ವ್ಯಕ್ತಿಯ ಹೆಸರು, ಹಿನ್ನೆಲೆ, ಘಟನೆಯ ಕಾಲದೇಶ ವಿವರ­ಗಳು) ಹಿನ್ನೆಲೆಗೆ ಸರಿದು ಅದರ ಮಿಥಿಕ ಮಗ್ಗುಲು­ಗಳು ಮುನ್ನೆಲೆಗೆ ಬರುತ್ತಿರುವುದು ಸ್ಪಷ್ಟ.

ಘಟನೆಯ ಕಾಲ-ದೇಶ-ವ್ಯಕ್ತಿ ವಿವರಗಳು ಅಸ್ಪಷ್ಟ­ವಾದಷ್ಟೂ ಅದೊಂದು ದಂತಕತೆಯ ರೂಪ­ವನ್ನು ತಾಳಿ ಘಟನೆಯ ನೈಜತೆಗಿಂತ ಅದರ ಸಾಂಕೇತಿಕತೆ ಮುಖ್ಯವಾಗುತ್ತದೆ. ಹೆಬ್ಬಾವು ಮನುಷ್ಯನನ್ನು ನುಂಗುವ ಘಟನೆ ಸಾಮೂಹಿಕ ಚೇತನದ ಉಪಮೆ-ಸಂಕೇತ­ವೊಂದಾ­ಗಿರ­ಬಹುದೆ? ಮನುಷ್ಯ ಮತ್ತು ಹೆಬ್ಬಾ­ವು­ಗಳ ಪರಸ್ಪರ ಹಿಂಸೆಯ ಇತಿಹಾಸಪೂರ್ವ ಬೀಭತ್ಸ ಬರ್ಬರತೆಯ ಮರುಕಳಿಕೆ­ಯಾಗಿರಬಹುದೆ?

ಅಥವಾ ಮನೋವಿಜ್ಞಾನಿ ಯೂಂಗ್‌ನ ಪರಿಭಾಷೆಯಲ್ಲಿ ಹೆಬ್ಬಾವು ಒಂದು ಆರ್ಕಿಟೈಪ್ ಆಗಿ ನಮ್ಮನ್ನು ಕಾಡುತ್ತಿರಬಹುದೇ? ಯೂಂಗ್‌ನ ಪ್ರಕಾರ ಆರ್ಕಿಟೈಪುಗಳು ಸಾಮೂ ಹಿಕ ಚೇತನದಲ್ಲಿ ಹುದುಗಿರುವ ಅಮೂರ್ತ ಚೌಕ­ಟ್ಟು­ಗಳು.

ಅದನ್ನು ಹೀಗೆ ವಿವರಿಸಬಹು ದೇನೊ. ಉದಾಹರಣೆಗೆ ಹೆದರಿಕೆ ನಮ್ಮೆಲ್ಲರಿಗೂ ಆಗು­ತ್ತದೆ. ಇದರ ಮೂಲವನ್ನು ನಾವು ಸದಾ ಹೊರಗೆ ಮಾತ್ರ ಹುಡುಕುತ್ತೇವೆ. ಅವನೋ ಅವಳೋ ಅದೋ ನಮ್ಮನ್ನು ಹೆದರಿಸುತ್ತಿದೆ. ಆದರೆ ನಮ್ಮ ಹೆದರಿಕೆಯ ಭಾವನೆಯು ಎಲ್ಲ ಸಂದರ್ಭಗಳಲ್ಲೂ ವಸ್ತುನಿಷ್ಠ ಅನ್ನಲು ಬರುವು­ದಿಲ್ಲ. ಅದೋ ಅವನೋ ಅವಳೋ ಒಂದು ನಿಮಿತ್ತವಾಗಿ ಸಾಮೂಹಿಕ ತಳಮನಸ್ಸಿನಲ್ಲಡ­ಗಿರುವ ಇತಿಹಾಸಪೂರ್ವ ಭೀತಿಯನ್ನು ಬಡಿದೆಬ್ಬಿ ಸಿಬಿಡುತ್ತವೆ.

ಆಗ ನಾವು ಆ ಆದಿಮ ಭೀತಿಯ ಕೈಗೊಂಬೆಗಳಾಗುತ್ತೇವೆ. ಎಲ್ಲ ವಿಚಾರ ಶಕ್ತಿ ಗಳನ್ನೂ ಕಳೆದುಕೊಳ್ಳುತ್ತೇವೆ. ಇಂಥ ಆದಿಮ­ಭೀತಿಗಳು ಒಂದು ಇಡೀ ಜನಾಂಗದಲ್ಲಿ ಏಕಕಾಲ­ದಲ್ಲಿ ಜಾಗೃತವಾದಾಗ ಆ ಮಾನವ ಚೇತನ­ಗಳು, ಸಮಾಜಗಳು ಫ್ಯಾಸಿಸಂನಂಥ ವಿನಾಶಕ ಮನೋವಿಕಾರಗಳಿಗೆ ಪ್ರೇರಣೆಯಾಗುತ್ತವೆ. ಇಂಥ ಸಂದರ್ಭಗಳಲ್ಲಿ ನಮ್ಮ ಭೀತಿ ಮತ್ತು ಅದರ ಪ್ರೇರಣೆಗಳ ನಡುವೆ ಕಾರ್ಯಕಾರಣ ಸಂಬಂಧವಿರುವುದಿಲ್ಲ.ಹೆಬ್ಬಾವು ಒಂದು ಹಿಂಸ್ರ ಜಂತುವಾಗಿ­ರುವುದರ ಜೊತೆಗೆ ಅನಿರೀಕ್ಷಿತ ಹಿಂಸೆಯ ಭೀತಿಯ ಒಂದು ನಿಶಾನೆಯಾಗಿಯೂ ಇದೆ.ಆದ್ದರಿಂದಲೇ ಕಾವ್ಯ ಪುರಾಣಗಳಲ್ಲಿ ಮತ್ತೆ ಮತ್ತೆ ಬರುತ್ತಿರುತ್ತದೆ. ದೇವರ ದಾಸಿಮಯ್ಯನ ವಚನದಲ್ಲಿ ‘ಹಸಿವೆಯೆಂಬ ಹೆಬ್ಬಾವು ಬಂದು ನುಂಗಿದೊಡೆ ಆಪಾದಮಸ್ತಕ ವಿಷವೇರಿತ್ತಲ್ಲಾ’ ಎಂದಿದೆ. ಬಸವಣ್ಣನ ವಚನದಲ್ಲಿ ‘ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಲ್ಲಾ’ ಎಂಬ ಮಾತಿದೆ. ಇವೆರಡೂ ನೈಜ ಹೆಬ್ಬಾವಿನ ವರ್ಣನೆ­ಗಳಲ್ಲ.

ಹೆಬ್ಬಾವು ನುಂಗಿದಾಗ ಶರೀರ ವಿಷವೇರು­ವುದಿಲ್ಲ. ಶರೀರವೇ ಗಾಯಬ್ಬು. ಬಸವಣ್ಣನ ಸಾಲಿ­ನಲ್ಲಿ ಸಂಸಾರವನ್ನು ರಾಹುವಿಗೆ ಮತ್ತು ಹೆಬ್ಬಾವಿಗೆ ಸಮೀಕರಿಸಲಾಗಿದೆ. ಆದಿಮ ಅಂಧ­ಕಾರದ ಶಕ್ತಿಯೊಂದು ನಮ್ಮನ್ನು ನುಂಗಿಹಾಕಿದ ಭಯಾನಕ ಅನುಭವ ಇಂಥ ಕಡೆಗಳಲ್ಲಿ ಧ್ವನಿತ­ವಾಗಿದೆ. ಹಾವು ಮತ್ತು ಹೆಬ್ಬಾವುಗಳ ಭಿನ್ನತೆ ಕಾವ್ಯ ಮತ್ತು ದಂತ ಕತೆಗಳಲ್ಲಿ ಅಳಿಸಿಹೋಗು­ತ್ತಿರುತ್ತದೆ. ಎರಡೂ ಅನಿರೀಕ್ಷಿತ ಅಪಾಯಗಳ ಸಂಕೇತಗಳು. ಹಾವುಗಳ ಹಗೆಯ ಕತೆಗಳು ಹಲವಾರು. ಮಹಾಭಾರತದಲ್ಲಿ ಬರುವ ತಕ್ಷಕನ ಕತೆಯನ್ನು ಗಮನಿಸಿ. ಅದೂ ಖಾಂಡವ ದಹನದ ದೂರದ ಪರಿಣಾಮ. ನಾವು ಕೊಂದ ಹಾವು ನಮ್ಮನ್ನು ಕೊಲ್ಲಬಹುದೆಂಬ ಭೀತಿಯ ಉಪಮೆ.  ‘ಕೊಂದವನುಳಿದನೆ ಕೂಡಲಸಂಗಮದೇವ’ ಎಂಬ ಮಾತಿನ ನಿದರ್ಶನ.ಗ್ರೀಕರ ಒರೆಸ್ತಸ್ ಪುರಾಣಕತೆಗಳಲ್ಲಿ ತನ್ನ ತಂದೆ ಅಗೆಮಮ್ನಾನ್‌ನನ್ನು ಕೊಂದ ತಾಯಿ ಕ್ಲೈಟೆಮನೆಸ್ತ್ರಾಳನ್ನು ಮಗ ಒರೆಸ್ತಸ್ ಪ್ರತೀಕಾರ ತೀರಿಸಿಕೊಳ್ಳಲು ಕೊಂದಾಗ ಆಕೆಯ ರಕ್ತಾಂತ­ರ್ಗತವಾದ ಘೋರ ಶಕ್ತಿಗಳು ಅವನನ್ನು ಕೊಲ್ಲಲು ಅಟ್ಟಿಸಿಕೊಂಡು ಬರುತ್ತವೆ. ಎಲ್ಲಿ ಹೋದರೂ ಹಿಂಬಾಲಿಸುತ್ತವೆ. ಕೊನೆಗವನು ನ್ಯಾಯದೇವತೆ ಅಥೀನಾಳಲ್ಲಿ ಮೊರೆ ಹೊಕ್ಕಾಗ ಆಕೆ ಪಂಚಾಯಿತಿ ಮಾಡಿ ಹಿಂಸೆ-ಪ್ರತಿಹಿಂಸೆಗಳ ಪರಂಪರೆಗೆ ತಿಲಾಂಜಲಿ ನೀಡಲು ಆ ಘೋರ ಶಕ್ತಿಗಳು ನೆಲದಡಿಯಲ್ಲಿ ಅಡಗಿಕೊಳ್ಳ ಬೇಕೆಂದೂ, ಅವುಗಳಿಂದ ಮುಕ್ತನಾದ ಒರೆಸ್ತಸ್ ಪ್ರತಿಯಾಗಿ ಆ ಘೋರ ಶಕ್ತಿಗಳನ್ನು ನಾಗ ದೇವತೆಗಳ ರೂಪ­ದಲ್ಲಿ ಆರಾಧಿಸಿ ಅವನ್ನು ತಣಿಸತಕ್ಕ­ದ್ದೆಂದೂ ಆದೇಶಿಸುತ್ತಾಳೆ. ಈಸ್ಕಿಲಸ್ಸನ ‘ಯೂಮನೈದಿಸ್’ ನಾಟಕದಲ್ಲಿ ಈ ಘಟನೆ ಚಿತ್ರಿತವಾಗಿದೆ.ಕಲೆ, ಕಥನ, ದಂತಕತೆ, ಪುರಾಣ ಮತ್ತು ಇಂದಿನ ಮಾಧ್ಯಮಗಳಲ್ಲಿ ನಮ್ಮ ಅನಾಗರಿಕ ಗತದ ಸಂಕೇತಗಳು ನಮ್ಮ ಬಳಿಗೆ ಮರಳು­ತ್ತಿರುತ್ತವೆ. ಮನುಷ್ಯ ಹಾವುಗಳನ್ನು ಕೊಂದ, ಹಾವು ಮನುಷ್ಯನನ್ನು ಕೊಂದ ಆದಿಮ ಘಟನೆ­ಗಳನ್ನು ಕಲೆಯ ಪ್ರತಿಮೆಗಳಲ್ಲಿ ಹಿಡಿದಿಡುವ ಮೂಲಕ ನಾವು ಅವುಗಳ ಭೀತಿಯಿಂದ ತಾತ್ಕಾಲಿಕವಾಗಿ ಬಿಡುಗಡೆ ಹೊಂದುತ್ತೇವೆ. ಆ ಭೀತಿಯಿಂದ ಹೊರಬರಲು ಆ ಹಿಂಸೆಯ ಸಂಕೇತ­ಗಳನ್ನು ಮಾನವೀಕರಿಸಲೂ ಪ್ರಯತ್ನಿಸುತ್ತೇವೆ. ಆದ್ದರಿಂದಲೇ ಪ್ರಾಣಿಗಳು ಮಾತಾಡುವ ಅವೈಜ್ಞಾನಿಕ ಕತೆಗಳು ಜನರಿಗೆ ವಿಶೇಷವಾಗಿ ಮಕ್ಕಳಿಗೆ ಹಿಡಿಸುತ್ತವೆ.ಪ್ರಾಣಿಗಳು ನಮಗೆ ಮಾಡಿದ ಹಾನಿಗಿಂತ ಅವುಗಳಿಗೆ ನಾವು ಮಾಡಿದ ಹಾನಿ ಕಡಿಮೆಯೆ? ನಾಗರಿಕ ಜಗತ್ತಿನಲ್ಲಿ ಮಾಂಸಾಹಾರಿಗಳ ರುಚಿ­ಗಾಗಿ ಅದೆಷ್ಟು ಪಶು-ಪಕ್ಷಿ-ಜಲಚರಗಳ ವಧೆ­ಯಾಗುತ್ತದೆ ಯೋಚಿಸಿ ನೋಡಿ. ಮನುಷ್ಯನನ್ನು ನುಂಗಿದ ಆ ಹೆಬ್ಬಾವಿನ ಚಿತ್ರಗಳಿಗೆ ನಾವು ನೀಡುತ್ತಿರುವ ಪ್ರತಿಕ್ರಿಯೆಗಳೂ ನಮ್ಮ ನಾಗರಿಕ ಮನಸ್ಸುಗಳ ಹಿಂದೆ ಅಡಗಿರುವ ಆದಿಮ ಹಿಂಸ್ರ ಅನುಭವಗಳ ಜೊತೆ ನಾವು ಮಾಡಿಕೊಳ್ಳುತ್ತಿರುವ ರಾಜಿ-ಕಬೂಲಿಗಳ ಒಂದು ಭಾಗವಿರಬಹುದೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.