ಈಚೆಗೆ ದಲಿತ ಸಮಸ್ಯೆಯ ಬಗ್ಗೆ ಪ್ರಜಾವಾಣಿ ಹೊರತಂದ ವಿಶೇಷಾಂಕ ಒಂದು ಅತ್ಯಂತ ಸ್ತುತ್ಯ ಪ್ರಯತ್ನ. ಈ ಕಾರ್ಯವನ್ನು ಕೇವಲ ಔಪಚಾರಿಕವಾಗಿ ಮಾಡದೆ ಅರ್ಥಪೂರ್ಣವಾಗಿ, ವಿಶ್ಲೇಷಣಾತ್ಮಕವಾಗಿ ಮಾಡಿದ್ದು ಈ ವಿಶೇಷಾಂಕದ ಇನ್ನೊಂದು ಮುಖ್ಯ ಗುಣ. ಅಲ್ಲಿ ಪ್ರಕಟವಾದ ಎಲ್ಲ ಲೇಖನಗಳನ್ನು ಸೂತ್ರ ರೂಪದಲ್ಲಿ ಒಟ್ಟಿಗೆ ಹಿಡಿದಿಟ್ಟಿತ್ತು.

ದೇವನೂರು ಮಹಾದೇವ ಅವರ ಮುಖ್ಯ ಲೇಖನ, ಉಳಿದ ಲೇಖನಗಳು ಅದಕ್ಕೆ ಪೂರಕವಾಗಿ ದಲಿತ ಸಮುದಾಯದ ಇಂದಿನ ಸಮಸ್ಯೆಗಳ ಹಲವು ಮಗ್ಗುಲುಗಳ ಮೇಲೆ ಬೆಳಕು ಚೆಲ್ಲುವಂತಿದ್ದವು. ಮಹಾದೇವ ಅವರು ಎಲ್ಲ ಆಂದೋಲನಗಳ ಮೂಲಗುರಿ ಸಮಾನತೆಯ ಸಾಧನೆ ಎಂಬ ಸರಳ ಸತ್ಯವನ್ನು ನಮಗೆ ನೆನಪು ಮಾಡಿಕೊಟ್ಟರು.

ಸಮಸ್ಯೆಗಳು ಜಟಿಲವಾದಾಗ, ಪರಿಸ್ಥಿತಿಗಳು ಸಂದಿಗ್ಧವಾದಾಗ ಸೂರ್ಯ ಸ್ಪಷ್ಟವಾಗಿರುವ ಸರಳ ಸತ್ಯಗಳನ್ನು ನಾವು ಮರೆತು ಬಿಡುತ್ತೇವೆ. ಆ ಕಾರಣದಿಂದ ಗೊಡವೆಗಳು ಇನ್ನಷ್ಟು ಅಪರಿಹಾರ್ಯವಾಗುತ್ತವೆ. ಆದ್ದರಿಂದ ಸಾಮಾನ್ಯವಾಗಿ ಅಷ್ಟು ರೋಚಕವಲ್ಲದ ಸರಳ ಸತ್ಯಗಳನ್ನು ಕಾಲಕಾಲಕ್ಕೆ ನೆನಪು ಮಾಡಿಕೊಳ್ಳುವುದು ನಮ್ಮ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಒಳಿತು.

ಇಂದಿನ ಸಮಸ್ಯೆಗಳನ್ನು ಎದಿರುಗೊಳ್ಳುವಲ್ಲಿ ಸಂಚಿಕೆಯ ಎಲ್ಲ ಲೇಖನಗಳು ದಿಟ್ಟತನ ಮತ್ತು ಸ್ಪಷ್ಟತೆಯಿಂದ ಚಿಂತಿಸುವಂತಿದ್ದವು. ದಲಿತ ಸಮಾಜದ ಒಳ ಅಸಮಾನತೆಯ ಬುನಾದಿಗಳನ್ನು ಬದಲಾಯಿಸಬೇಕೆಂದು ವಾದಿಸಿದ ಗೆಳೆಯ ಎಲ್ ಹನುಮಂತಯ್ಯನವರ ಲೇಖನ, ಹಾಗೇ ದಲಿತ ಕಾವ್ಯದ ಗುಣದೋಷಗಳನ್ನು ವಸ್ತುನಿಷ್ಠತೆಯ ನಿಕಷದಲ್ಲಿ ಪರೀಕ್ಷೆಗೊಡ್ಡಿದ ನಟರಾಜ ಹುಳಿಯಾರರ ಲೇಖನ, ಖಾಸಗಿ ವಲಯದಲ್ಲಿ ದಲಿತರ ಮೀಸಲಾತಿಯನ್ನು ಚರ್ಚಿಸಿದ ಜಾಫೆಟ್ ಅವರ ಲೇಖನ ಮೌಲಿಕವಾಗಿದ್ದವು.

ಇಂದಿನ ಸಮಾಜದ ನಿರ್ಣಾಯಕ ವರ್ಗವಾಗಿರುವ ದಲಿತ ಸಮಾಜ ಮತ್ತದರ ಚಿಂತಕರು ಇಂದಿನ ಸಾಮಾಜಿಕ ಗೊಂದಲಗಳ ನಡುವೆಯೂ ನಿಖರವಾಗಿ, ಪ್ರಾಮಾಣಿಕವಾಗಿ, ಪ್ರಬುದ್ಧವಾಗಿ ಆಲೋಚನೆ ಮಾಡುತ್ತಿದ್ದಾರೆ ಎಂಬುದನ್ನು ಸಮಸ್ತ ಕನ್ನಡಿಗರಿಗೆ ಈ ವಿಶೇಷಾಂಕದ ಮೂಲಕ ತಿಳಿಯಪಡಿಸಿದ ಕಾರಣ ಪ್ರಜಾವಾಣಿ ಅಭಿನಂದನಾರ್ಹ.

ಒಟ್ಟಿನಲ್ಲಿ ದಲಿತ ಅಂದೋಲನ ಶುರುವಾದ ಸಂದರ್ಭದಲ್ಲಿ ಯಾವ ಹೊರಳು ದಾರಿಯಲ್ಲಿತ್ತೋ ಅದಕ್ಕಿಂತ ಬೇರೆಯದೇ ಆದ ಹೊರಳು ದಾರಿಯಲ್ಲಿ ಇಂದಿದೆ. ಯಾಕೆಂದರೆ ಕಳೆದ ಮೂರು ದಶಕಗಳಲ್ಲಿ ಜಗತ್ತಿನ ನಕಾಶೆ ಬುಡಹತ್ತ ಬದಲಾಗಿ ಹೋಗಿದೆ. ಅದರ ಪರಿಣಾಮ ದಲಿತ ಸಮುದಾಯದ ಮೇಲೆ ಆಗಿರುವಂತೆ ಎಲ್ಲ ಸಮುದಾಯಗಳ ಮೇಲೂ ಆಗಿದೆ.

ದಲಿತರು ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಿರುವುದು ಸಂತಸದ ಸಂಗತಿ. ಆದರೆ ದಲಿತೇತರ ಸಮಾಜಗಳು ಮೇಲುಜಾತಿಯ ಸಂಘಟನೆಗಳು- ಇದೇ ರೀತಿಯಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುತ್ತವೆಯೆ? ಇದು ಮುಂದಿನ ಪ್ರಶ್ನೆ.

ಒಂದು ಅರ್ಥದಲ್ಲಿ ಜಾತಿಮೂಲವಾದ ಶೋಷಣಾ ವ್ಯವಸ್ಥೆಗೂ ವಸಾಹತುವಾದಿ ಶೋಷಣಾ ವ್ಯವಸ್ಥೆಗೂ ಹಲವು ಹೋಲಿಕೆಗಳಿವೆ. ಆಲ್ಬೆರ್ಟ ಮೆಮಿ ಎಂಬ ಫ್ರೆಂಚ್ ಚಿಂತಕ ವಸಾಹತುವಾದದ ಟೀಕೆಯಾದ ತನ್ನ ಪ್ರಸಿದ್ಧ ಗ್ರಂಥದಲ್ಲಿ ಒಂದು ಮುಖ್ಯವಾದ ವಾದವನ್ನು ಮುಂದಿಡುತ್ತಾನೆ. ಅವನ ಪ್ರಕಾರ ವಸಾಹತುಶಾಹಿ ಸಂಬಂಧದಲ್ಲಿ ಶೋಷಕ-ಶೋಷಿತರ ಅಂಟು-ನಂಟುಗಳು ತುಂಬಾ ಜಟಿಲ.

ಶೋಷಿತರು ಮಾತ್ರವಲ್ಲ, ಶೋಷಕರೂ ಒಂದು ವಿಷ ವರ್ತುಲದಲ್ಲಿ ಸಿಕ್ಕಿಬಿದ್ದಿರುತ್ತಾರೆ. ಇವರಲ್ಲಿ ಎರಡೂ ಗುಂಪಿನವರೂ ಮುಕ್ತರಾಗದ ಹೊರತು ಯಾರೊಬ್ಬರೂ ಮುಕ್ತರಾಗುವ ಹಾಗಿಲ್ಲ. ಜಾತಿಯ ವಿಷಯದಲ್ಲೂ ಇದು ನಿಜ. ಜಾತಿ ಭಾವನೆಯಿಂದ ಬಿಡುಗಡೆ ಹೊಂದುವುದು ಕೇವಲ ದಲಿತರ ತಲೆನೋವು, ನಾವು ಹೇಗಿದ್ದರೂ ನೆಮ್ಮದಿಯಿಂದ ಇದ್ದೀವಲ್ಲ, ನಮಗೇಕೆ ಇದರ ಗೊಡವೆ ಎಂದು ದಲಿತೇತರ ಸಮಾಜದ ಬಹಳ ಮಂದಿ ತಿಳಿದಂತಿದೆ.

ದಲಿತರು ಶೋಷಿತ ಭಾವದಿಂದ ಬಿಡುಗಡೆ ಹೊಂದುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ದಲಿತೇತರರು ಶೋಷಕ ಭಾವನೆಯಿಂದ ಬಿಡುಗಡೆ ಪಡೆಯುವುದು. ಅಂದರೆ ಶೋಷಣಾ ವ್ಯವಸ್ಥೆಯಿಂದ ಪಡೆಯುತ್ತಿದ್ದ ಸವಲತ್ತುಗಳನ್ನು ಬಿಟ್ಟು ಕೊಡುವುದು.

ಶೋಷಣಾ ವ್ಯವಸ್ಥೆಯ ಬೇರುಗಳು ನಮ್ಮ ವೈಚಾರಿಕ ವ್ಯಕ್ತಿತ್ವಗಳಿಗಿಂತ ಎಷ್ಟೋ ಆಳವಾಗಿರುವ ಕಾರಣ ಈ ಬಿಡುಗಡೆಯ ಹಾದಿ ದೀರ್ಘವೂ ಕಷ್ಟಕರವೂ ಆಗಿದೆ. ಆದರೂ ಅನಿವಾರ್ಯವಾಗಿದೆ.

ಆದ್ದರಿಂದ ನಾವೆಲ್ಲರೂ ನಮ್ಮ ಸಮಸ್ಯೆಗಳಿಗೆ ಇನ್ನೊಬ್ಬ ವ್ಯಕ್ತಿಯೋ, ಜಾತಿಯೋ ಕಾರಣವೆಂದು ಬೈದುಕೊಳ್ಳುವ ಬದಲು ಈ ವಿಷಮ ಸಮಸ್ಯೆಗೆ ನಾವೂ ಅದೆಷ್ಟು ಕಾರಣವಾಗಿದ್ದೇವೆಂದು ಗುರುತು ಹಿಡಿದು ಸರಿಪಡಿಸಿಕೊಳ್ಳಬೇಕಾಗುತ್ತದೆ.

ಕೋಸಂಬಿಯವರು ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಬರೆದ ಒಂದು ಬರಹದಲ್ಲಿ ನಗರಗಳು ಬೆಳೆಯುತ್ತಿದ್ದಂತೆ ಕೈಗಾರಿಕೀಕರಣ ಹೆಚ್ಚಿದಂತೆ ಜನರ ಮನದಲ್ಲಿ ವಿಚಾರ ಸೂರ್ಯನ ಉದಯವಾಗಿ ಜಾತಿ ಭಾವನೆ ಸಂಪೂರ್ಣವಾಗಿ ಅಳಿಸಿಹೋಗುತ್ತದೆಂದು ಭವಿಷ್ಯವಾಣಿ ನುಡಿದಿದ್ದರು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ.

ವಿಚಾರ ಸೂರ್ಯನು ಜಾತಿ, ಧರ್ಮ ಮತ್ತು ಅಂಧಶ್ರದ್ಧೆಗಳನ್ನು ತೊಡೆದುಹಾಕುವನೆಂಬ ಅತ್ಯುನ್ನತ ಆಶಾವಾದಿತ್ವ ನಿಜವಾಗಿದ್ದರೆ ಜಗತ್ತು ಬಹಳ ಸುಂದರವಾಗಿರುತ್ತಿತ್ತೇನೋ. ಮಾನವ ಮನೋಲೋಕದಲ್ಲಿ ತರ್ಕ ಮತ್ತು ವಿಚಾರಗಳಿಗಿಂತ ಗತದಿಂದ ಬಂದು ತಳಮನಸ್ಸಿನಲ್ಲಿ ಕದ್ದುಕೂತ ನಮ್ಮ ತರ್ಕವನ್ನೂ ನಿಯಂತ್ರಿಸುವ ಸಂಸ್ಕಾರಗಳು.

ಅವುಗಳಿಂದ ಬಿಡುಗಡೆ ಪಡೆಯಬೇಕಾದದ್ದು ಯೋಗಿಗಳಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಉಂಟು. ಅದಕ್ಕಾಗಿ ನಾವೆಲ್ಲರೂ ಯೋಗಿಗಳೇನೂ ಆಗಬೇಕಾಗಿಲ್ಲ.
ನಮ್ಮ ಗುರುಗಳಾದ ಲಂಕೇಶ್ ಅವರು ಒಂದು ಸಲ ನನಗೆ ಕ್ಲಾಸಿನ ಹೊರಗೆ ಒಂದು ದೊಡ್ಡ ಪಾಠ ಹೇಳಿಕೊಟ್ಟರು: `ನೋಡಯ್ಯೊ, ಈ ಮೇಲ್ಜಾತಿಯವರು ಮೇಲರಿಮೆಯಿಂದ, ಶೋಷಿತ ಜಾತಿಯವರು ಕೀಳರಿಮೆಯಿಂದ ಬಿಡಿಸಿಕೊಳ್ಳದಿದ್ದರೆ ಸಮಾಜ ಗಬ್ಬೆದ್ದು ಹೋಗುತ್ತೆ~ ಎಂದು ಹೇಳಿದ್ದರು. ಇಂದಿನ ವಿದ್ಯಮಾನಗಳನ್ನು ಪರೀಕ್ಷಿಸಿದರೆ ಲಂಕೇಶರ ಮಾತು ಎಷ್ಟು ತಲಸ್ಪರ್ಶಿಯಾದದ್ದೆಂದು ನನಗೆ ಈಗ ಅರ್ಥವಾಗುತ್ತಿದೆ.

ಹಾಗೆ ನೋಡಿದರೆ ಮಾರ್ಕ್ಸ್ವಾದಿಗಳು ಹೇಳಿದ್ದೂ ಪೂರ್ಣ ಸತ್ಯವಲ್ಲದಿದ್ದರೂ ಪೂರ್ತಿ ಸುಳ್ಳೂ ಅಲ್ಲ. ಒಂದುಕಡೆ ಭೌತಿಕ ಪ್ರಪಂಚದಲ್ಲಿ ಜಾತಿಯ ಬುಡ ಅಲುಗಿಸುವ ಬೆಳವಣಿಗೆಗಳಾಗುತ್ತಿವೆ. ಜಾತಿವಾರು ಕೇರಿಗಳ ವ್ಯವಸ್ಥೆಗೆ ನಗರಗಳಲ್ಲಿ ಎಡೆ ದೊರಕಲಿಲ್ಲ. ಕಾರ್ಖಾನೆಗಳ, ಆಧುನಿಕ ಉದ್ದಿಮೆಗಳ, ವಾಣಿಜ್ಯೀಕೃತ ಉದ್ಯೋಗಗಳ ವಾತಾವರಣ ಎಲ್ಲ ಜಾತಿಯವರೂ ಒಟ್ಟಿಗೆ ಕೆಲಸ ಮಾಡುವ ಅನಿವಾರ್ಯ ಅವಕಾಶವನ್ನು ಕಲ್ಪಿಸುತ್ತವೆ. ಹೊಸ ಶಿಕ್ಷಣ ಪದ್ಧತಿ ಕೂಡಾ ಜಾತಿ ವ್ಯವಸ್ಥೆಯನ್ನು ಪೊರೆಯುವಂಥದ್ದಲ್ಲ.

ನಾಗರಿಕ ಮನರಂಜನಾ ಸ್ಥಳಗಳಲ್ಲಿ -ಉದಾಹರಣೆಗೆ ಸಿನಿಮಾ ಟಾಕೀಸಿನಲ್ಲಿ ನಮ್ಮ ಪಕ್ಕದ ಕುರ್ಚಿಯಲ್ಲಿ ಯಾವ ಜಾತಿಯವನು ಕೂತಿದ್ದಾನೆ ಎನ್ನು ಯೋಚನೆ ನಮ್ಮನ್ನು ಕಾಡುವುದಿಲ್ಲ. ಹೀಗೆ ಆರ್ಥಿಕವಲ್ಲದಿದ್ದರೂ ಸಾಮಾಜಿಕ ಸಮಾನತೆಯನ್ನು ಬಳಸುವ ಸನ್ನಿವೇಶಗಳು ಶೋಷಿತ ವರ್ಗಗಳಿಗೆ ಬಿಡುಗಡೆಯಾಗಿ ಕಂಡರೆ, ಕಾಲನ ಕಟ್ಟಳೆಯನ್ನು ಅರ್ಥಮಾಡಿಕೊಳ್ಳದ ಶೋಷಕ ಜಾತಿಯವರಿಗೆ ಒಂದು ಭಯಾನಕ ದುಃಸ್ವಪ್ನದ ಹಾಗೆ ತೋರುತ್ತದೆ.

ಈ ಸಂದರ್ಭದಲ್ಲಿ ಉಂಟಾಗುವ ಅತಾರ್ಕಿಕ, ಅವಾಸ್ತವ ಭಾವನೆಯಲ್ಲೇ ತಾಳ್ಮೆಗೆಟ್ಟ ಮತೀಯವಾದದ ಬೀಜವಿರುವುದು. ಗಂಡಾಳಿಕೆಯ, ಜನಾಂಗವಾದಿತ್ವದ ಮತ್ತು ಎಲ್ಲ ಬಲಪಂಥೀಯ ಪ್ರವೃತ್ತಿಗಳಿಗೂ ಹೆಚ್ಚೂ ಕಡಿಮೆ ಇದೇ ರೀತಿಯ ಮನೋವೈಜ್ಞಾನಿಕ ಹಿನ್ನೆಲೆ ಇರಬಹುದು.

ಶ್ರೇಣೀಕೃತ ಜಾತಿವಾದದ ಹೆಣ ಭಾರವನ್ನು ಗತಾನುಗತಿಕವಾಗಿ ಹೊತ್ತವರಿಗೆ ಹಲವು ಮಟ್ಟಗಳಲ್ಲಿ ವಿಮೋಚನೆ ನೀಡುವ ಸನ್ನಿವೇಶದಲ್ಲಿ ಹಿಂದಿನ ದುಃಸ್ವಪ್ನಗಳು ಮರುಕಳಿಸಬಾರದೆಂಬ ಕಾಳಜಿಯಿಂದ ತಮ್ಮ ಆತ್ಮರಕ್ಷಣೆಗಾಗಿ ಆತ್ಮಬಲ ಸಂವರ್ಧನೆಗಾಗಿ ಶೋಷಿತ ಜಾತಿಗಳವರು ಸಂಘಟನೆ ಕಟ್ಟಿಕೊಳ್ಳುವುದು ಸಹಜ.

ಆದರೆ ಇಂಥ ಸಂಘಟನೆಗಳು ಸಮಾನತೆಯ ಮೂಲೋದ್ದೇಶ ಮರೆತಾಗ ಕ್ರಮೇಣ ಅವೂ ಶೋಷಕ ಜಾತಿಗಳ ಸಂಘಟನೆಗಳಂತೆ ಕೇವಲ ಸ್ವಯಂರಕ್ಷಣಾ ಪಡೆಗಳಾಗಿ ಬಿಡುವ ಅಪಾಯ ತಪ್ಪಿದ್ದಲ್ಲ.

ಅಸಮಾನತೆಯ ವಿರುದ್ಧ ಸೆಟೆದು ನಿಂತು ಹಿಂದೆ ಸಮಾಜದಲ್ಲಿ ಪ್ರಗತಿಪರ ಪಾತ್ರ ನಿರ್ವಹಿಸಿದ ಹಿಂದುಳಿದ ಜಾತಿ ಸಂಘಟನೆಗಳ ಸೈದ್ಧಾಂತಿಕ ಮತ್ತು ಮೌಲ್ಯಾತ್ಮಕ ಬುನಾದಿಗಳು ದುರ್ಬಲವಾಗುತ್ತಿರುವುದು ಇಂಥ ಅಪಾಯಗಳ ಮುನ್ಸೂಚನೆಯಾಗಿದ್ದು ಅದರ ದುರದೃಷ್ಟಕರ ಪರಿಣಾಮಗಳನ್ನು ಇಂದು ದುರ್ಬಲ ಸಮುದಾಯದ ಬಹುತೇಕ ಜನ ಈಗಾಗಲೇ ಅನುಭವಿಸ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ಮೇಲು ಜಾತಿಯ ಸಂಘಟನೆಗಳು ಚೆರಿತ್ರೆಯ ಪ್ರವಾಹಕ್ಕೆ ಎದುರಾಗದೆ ಇಂದಿನ ಯುಗ ಧರ್ಮವಾಗಿರುವ ಸರ್ವಸಮಾನತೆಯನ್ನು ತಮ್ಮ ಗುರಿಯಾಗಿಸಿಕೊಳ್ಳಬಲ್ಲವೆ?

ಹೊರಗೆಲ್ಲ ಥಳುಕಾಗಿ ಒಳಗೆಲ್ಲ ಹುಳುಕಾಗಿರುವ ಗೋಳೀಕರಣದ ಶಕ್ತಿಗಳು ಆ ಕಡೆಯ ಇನ್ನೊಂದು ತೀರವಿರದ ಕೋಟಲೆಗಳ ಕಡಲದಂಡೆಗೆ ಈ ಭೂ ಮಂಡಲವನ್ನು ಕರೆದೊಯ್ಯುತ್ತಿರುವ ಆತಂಕದಲ್ಲಿ ಮಾನವ ಸಮಾಜಗಳೂ, ಜಡ-ಜೀವಗಳೂ ಇಂದು ಹಾದುಹೋಗುತ್ತಿವೆ.

ಆಕಸ್ಮಿಕವಾದ ಹುಟ್ಟಿನ ಅಹಂಕಾರದ ಮೇಲೆ ನಿಂತ ಜಾತಿವಾದಿ ಸಂಘಟನೆಗಳು ಮತ್ತು ಮೂಲ ಗುರಿಯನ್ನು ಮರೆತ ಪ್ರಗತಿಪರ ಸಂಘಟನೆಗಳು ಇಂದಿನ ದಂದುಗಳನ್ನು ಇನ್ನೂ ಅಕರಾಳ ವಿಕರಾಳಗೊಳಿಸುತ್ತವೆ.

ನೈಜೀರಿಯಾದ ದಾರ್ಶನಿಕ ನಾಟಕಕಾರ ವೊಲೆ ಶೊಯಿಂಕಾನ ಎಚ್ಚರಿಕೆಯ ಮಾತೊಂದು ನೆನಪಾಗುತ್ತಿದೆ: ನೈತಿಕ ಪರಮಾದರ್ಶಗಳಿಲ್ಲದ ಎಲ್ಲ ಸಮುದಾಯಗಳು, ಸಮಾಜಗಳು ಅರಾಜಕತಾ ವ್ಯವಸ್ಥೆಗಳಾಗಿ ಅಥವಾ ಸರ್ವಾಧಿಕಾರಗಳಾಗಿ ಪರಿವರ್ತನೆಯಾಗುತ್ತವೆ.
ಪರಮಾದರ್ಶಗಳು ಗತದಿಂದಲೇ ಬರಬೇಕೆಂಬ ನಿಯಮವಿಲ್ಲ.

ಗತದಿಂದ ತನ್ನ ಕೂಡುಬಾಳಿಗೆ ಅಗತ್ಯವಾದ ಮೌಲ್ಯಗಳನ್ನು ಮಾತ್ರ ಸ್ವೀಕರಿಸಿ ಮಿಕ್ಕವನ್ನು ತನ್ನ ಅನುಭವಾಧಾರಿತ ಸಾಮೂಹಿಕ ಅರಿವಿನ ಅಡಿಗಟ್ಟಿನ ಮೇಲೆ ಅಂತಹ ಪರಮಾದರ್ಶಗಳನ್ನು ನಿರ್ಮಿಸಿಕೊಳ್ಳಬೇಕಾಗಿದೆ.

ಇದನ್ನು ಎ್ಲ್ಲಲಿಂದ ಶುರು ಮಾಡೋಣ?

ಪ್ರಜಾವಾಣಿಯ ದಲಿತ ಸಮಸ್ಯೆ ಕುರಿತ ಸಂಚಿಕೆ ಈ ದಿಸೆಯತ್ತ ಮುಖ್ಯವಾದ ಮೊದಲ ದಿಟ್ಟ ಹೆಜ್ಜೆಯಾಗಿದೆ. ಈ ಬಗೆಯ ವಿಶೇಷ ಸಂಚಿಕೆಗಳ ಮುಖೇನ ದಲಿತೇತರ ಜಾತಿಗಳವರನ್ನೂ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ಎಲ್ಲ ಸಮುದಾಯಗಳ ಬಗ್ಗೆ, ಒಟ್ಟು ಸಮಾಜದ ಬಗ್ಗೆ ಸಾರ್ವಜನಿಕ ಮರು ಚಿಂತನೆಯನ್ನು ಪ್ರೇರೇಪಿಸಲೆಂದು ಹಾರೈಸುತ್ತೇನೆ.

ಇಂದು ಎಲ್ಲ ಸಮುದಾಯಗಳು ತಾವು ಒಪ್ಪಲಿ ಬಿಡಲಿ, ತೀವ್ರ ಬದಲಾವಣೆಯ ಸುಳಿಯಲ್ಲಿ ಸಿಕ್ಕಿಕೊಂಡಿವೆ. ಈ ಬದಲಾವಣೆಗಳನ್ನು ಸ್ವಾರ್ಥ ಕಲ್ಯಾಣದ ಗುರಿಯಿಂದ ಲೋಕ ಕಲ್ಯಾಣದ ಗುರಿಯತ್ತ ಕರೆದೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.