ಭಾನುವಾರ, ಮಾರ್ಚ್ 7, 2021
21 °C

‘ಶಾಂತಿಯ ತೋಟ’ದಲ್ಲಿ ಹೆಚ್ಚುತ್ತಿರುವ ಅಸಹನೆ

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

‘ಶಾಂತಿಯ ತೋಟ’ದಲ್ಲಿ ಹೆಚ್ಚುತ್ತಿರುವ ಅಸಹನೆ

‘ಆ ಮ್‌ ಆದ್ಮಿ ಪಕ್ಷ’ದ ಮುಖಂಡರು ಮತ್ತವರ ಬೆಂಬಲಿಗರು ಕಳೆದ ತಿಂಗಳು ರಾಜಧಾನಿಯ ಮಾಳವೀಯ ನಗರ­ದಲ್ಲಿ ಉಗಾಂಡದ ಯುವತಿಯರ ಮೇಲೆ ದೌರ್ಜನ್ಯ ಎಸಗಿದರು. ಈ ಕಹಿ ಘಟನೆ ಮರೆ­ಯುವ ಮುನ್ನವೇ ಲಾಜಪತ್‌ ನಗರದಲ್ಲಿ ಅರುಣಾ­ಚಲ ಪ್ರದೇಶದ ಯುವಕ­ನನ್ನು ಕೊಲೆ ಮಾಡ­ಲಾಗಿದೆ. ನಿಡೊ ಎಂಬಾತನ ಜೀವಕ್ಕೆ ಸಂಚು ತಂದಿದ್ದು ಆತನ ಕೂದಲಿನ ಬಣ್ಣ. ನಮ್ಮವರನ್ನೇ  ಬಣ್ಣ ಮತ್ತು ಸೌಂದರ್ಯದ ಹೆಸರಿನಲ್ಲಿ ಅವ­ಮಾನಿ­ಸುವ ಬಹಳಷ್ಟು ಪ್ರಸಂಗಗಳು ನಡೆಯುತ್ತಿವೆ.ಗಾಂಧಿ, ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಹುಟ್ಟಿದ ನೆಲದಲ್ಲಿ ಜಾತಿ, ಧರ್ಮ, ಬಣ್ಣದ ಹೆಸರಿನಲ್ಲಿ ರಕ್ತಪಾತಗಳಾಗುತ್ತಿವೆ. ಭಾಷೆ, ಗಡಿ– ದಿಕ್ಕುಗಳ ಹೆಸರಿನಲ್ಲೂ ಜೀವಗಳು ಉರು­ಳು­ತ್ತಿವೆ. ‘ಇವನ್ಯಾರವ, ಇವನ್ಯಾರವ, ಇವ­ನ್ಯಾ­ರವ ಎಂದೆಣಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಎಂದೆಣಿಸಯ್ಯಾ’ ಎಂದು ಬಸವಣ್ಣ ಬೋಧಿ­ಸಿದರು. ಆದರೆ, ನಾವು ಇವ­ನ್ಯಾರು, ಇವನ್ಯಾರು ಎಂದು ಪತ್ತೆ ಹಚ್ಚಿ ಹುಡುಕಿ ಹೊಡೆಯುತ್ತಿದ್ದೇವೆ. ಬಡಿಯುತ್ತಿದ್ದೇವೆ...ರವೀಂದ್ರನಾಥ ಟ್ಯಾಗೋರ್  ರಾಷ್ಟ್ರಗೀತೆ­ಯಲ್ಲಿ ‘ವಿಂಧ್ಯಾ, ಹಿಮಾಚಲ, ಯಮುನಾ, ಗಂಗಾ’ ಅಂದರು. ಅವರು ಮಾತನಾಡಿದ್ದು ನಿರ್ಜೀವ ಮಣ್ಣಿನ ಬಗೆಗಲ್ಲ. ಸರ್ವ ಜನಾಂಗ ಕುರಿತು. ಅಷ್ಟೇ ಏಕೆ, ರಾಷ್ಟ್ರಕವಿ ಕುವೆಂಪು ತಮ್ಮ ಕಾವ್ಯ­ದಲ್ಲಿ ‘ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಜೈನರುದ್ಯಾನ’ ಎಂದು ಭಾರತವನ್ನು  ಕೊಂಡಾ­­ಡಿ­­ದರು. ಇಂಥ ಅನನ್ಯ ಸಂಸ್ಕೃತಿ, ಪರಂ­ಪರೆ– ಇತಿಹಾಸ ಹೊಂದಿರುವ ನಾಡಿನಲ್ಲಿ ಏನೆಲ್ಲ ಅನಾ­ಹುತಗಳು ನಡೆಯುತ್ತಿವೆ.ಉಗಾಂಡದ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಎಲ್ಲೋ ಒಂದು ಅಪರೂಪದ ಘಟನೆ ಎಂದು ತಳ್ಳಿ ಹಾಕುವವರಿದ್ದಾರೆ. ನಿಜಕ್ಕೂ ಅದು ಅಕ್ಷಮ್ಯ. ಆಫ್ರಿಕಾ ಜನರನ್ನು ನಡೆಸಿಕೊಂಡ  ಆ ಬಗೆ ಅಮಾನವೀಯವಾದದ್ದು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತವರ ಕಾನೂನು ಸಚಿ­­ವರು ಅದಕ್ಕಾಗಿ ಕ್ಷಮೆ ಕೇಳಬೇಕಿತ್ತು. ಹಾಗೆ ಮಾಡದೆ ತಾವು ಮಾಡಿದ್ದೇ ಸರಿ ಎಂದು ಇನ್ನೂ  ಪ್ರತಿ­­­ಪಾ­ದಿ­­ಸುತ್ತಿದ್ದಾರೆ. ದೆಹಲಿಯ ಜನ ಬೇರೆಯ­ವ­ರನ್ನು ಹಿಂಸಿಸುವ ಮೂಲಕ ನಾಯಕರನ್ನು ಹಿಂಬಾಲಿಸುತ್ತಿದ್ದಾರೆ.ಆಫ್ರಿಕನ್ನರನ್ನು ಬಿಡಿ, ದೆಹಲಿಯವರು ದಕ್ಷಿಣ ಭಾರತ­­ದವರನ್ನು ‘ಮದ್ರಾಸಿಗಳು’ ಎಂದು ಕರೆ­ಯು­ತ್ತಾರೆ. ಹೀಗೆ ಕರೆಯುವುದರ ಹಿಂದೆ ಅವ­ಮಾನ­­ಗಳು ಅಡಗಿವೆ. ದಕ್ಷಿಣದ ಜನರ ಮೈ ಬಣ್ಣವೂ ಕಪ್ಪೆಂಬ ದನಿಯೂ ಅವರ ಮಾತಿನ ಹಿಂದಿದೆ. ದಕ್ಷಿಣ ಭಾರತ ಕರ್ನಾಟಕ, ಕೇರಳ, ಆಂಧ್ರ­ಗಳನ್ನೂ ಒಳಗೊಂಡಿದೆ. ಪ್ರತಿಯೊಂದು ರಾಜ್ಯ­ದವರಿಗೂ ಒಂದೊಂದು ಭಾಷೆ, ಅಸ್ತಿತ್ವ­ವಿದೆ ಎಂಬ ಸಾಮಾನ್ಯ ತಿಳಿವಳಿಕೆ ಇವರಿಗಿ­ದ್ದಂ­ತಿಲ್ಲ. ಇದು ಉತ್ಪ್ರೇಕ್ಷೆಯ ಮಾತಲ್ಲ. ರಾಜಧಾನಿ­ಯ­ಲ್ಲಿರುವ ದಕ್ಷಿಣದ ಜನರಿಗೆ ಇಂಥ ಬೇಕಾದಷ್ಟು ಅನುಭವಗಳಾಗಿವೆ.ಈ ಮನೋಭಾವಕ್ಕೂ ಅರುಣಾಚಲ ಯುವಕನ ಕೊಲೆಗೂ ಸೂಕ್ಷ್ಮವಾದ ಸಂಬಂಧ­ವಿದೆ. ದೆಹಲಿಯಲ್ಲಿ ನಿಡೊ ಕೊಂದಂತೆ ಅಸ್ಸಾಂ, ನಾಗ­ಲ್ಯಾಂಡ್‌ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಮಾತಾಡುವ ಜನರನ್ನು ಹುಡುಕಿಕೊಂಡು ಹೋಗಿ ಹತ್ಯೆ ಮಾಡಲಾಗುತ್ತಿದೆ. ಇದುವರೆಗೆ ಲೆಕ್ಕವಿಲ್ಲ­ದಷ್ಟು ಹಿಂದಿ ಭಾಷಿಗರು ಈಶಾನ್ಯದ ರಕ್ತ­ದಾಹಿ ಹಂತಕರ ಗುಂಡಿಗೆ ಬಲಿಯಾಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವುದು ಸಂಘಟಿತ­ವಾದ ದಾಳಿ. ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ.ಜಾತಿ, ಧರ್ಮ ಮತ್ತು ಜನಾಂಗ ದ್ವೇಷ ಯಾವುದೋ ಒಂದು ರಾಜ್ಯ ಅಥವಾ ಭಾಗಕ್ಕೆ ಸೀಮಿತವಾಗಿದೆ ಎಂದು ನಿರ್ಲಕ್ಷಿಸುವಂತಿಲ್ಲ. ಎಲ್ಲ ಕಾಲಕ್ಕೂ ಎಲ್ಲ ಭಾಗ, ರಾಜ್ಯಗಳಲ್ಲೂ ಇದು ಆಚ­ರಣೆ­ಯಲ್ಲಿದೆ. ಮಹಾರಾಷ್ಟ್ರದಿಂದ ಬಿಹಾರಿ­ಗಳನ್ನು ಓಡಿಸಲಾಗಿದೆ. ಹೋದ ವರ್ಷ ಈಶಾನ್ಯ ರಾಜ್ಯ­ಗಳ ಜನರು ಭಯಬಿದ್ದು ಬೆಂಗಳೂರು ಬಿಡಲಿಲ್ಲವೆ? ಅನಂತರ ಅವರನ್ನು ವಾಪಸ್‌ ಕರೆ­ತರಲು ಸರ್ಕಾರ ಕಸರತ್ತು ನಡೆಸಲಿಲ್ಲವೆ?ಪ್ರತಿಯೊಂದು ಘಟನೆ ನಡೆದಾಗ ಸಂಸತ್ತಿ­ನೊಳಗೆ ದೊಡ್ಡ ದೊಡ್ಡ ಚರ್ಚೆಗಳಾಗುತ್ತವೆ. ಕೊನೆಗೆ  ಈಶಾನ್ಯ ರಾಜ್ಯಗಳು ಭಾರತದ ಅವಿ­ಭಾಜ್ಯ ಅಂಗವೆಂದು ಸಾರಿ ಸಾರಿ ಹೇಳ­ಲಾಗುತ್ತದೆ. ಘಟನೆ ಖಂಡಿಸುವ ನಿರ್ಣಯ ಮಾಡಿ ಕೈತೊಳೆದುಕೊಳ್ಳಲಾಗುತ್ತದೆ. ಕಾಲ­ಕ್ರಮೇಣ­­ದಲ್ಲಿ ಅದು ಮರೆತೇ ಹೋಗುತ್ತದೆ. ಅದು ಪುನಃ ನೆನಪಿಗೆ ಬರುವುದು ಮತ್ತೊಂದು ಘಟನೆ ನಡೆದಾಗ.ಸಮೀಕ್ಷೆಯೊಂದರ ಪ್ರಕಾರ ವರ್ಣಭೇದ ನೀತಿ ಅನುಸರಿಸುವ ವಿಶ್ವದ ಐದು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು. 80ದೇಶಗಳ ಜನರ ಸಾಮಾಜಿಕ ಧೋರಣೆ ಕುರಿತು ‘ವರ್ಲ್ಡ್ ವ್ಯಾಲ್ಯೂ’ ಸಂಸ್ಥೆ ನಡೆಸಿರುವ ಈ ಸಮೀಕ್ಷೆ ಪ್ರಕಾರ ಮತ್ತೊಂದು ಜನಾಂಗ ಕುರಿತು ಅತ್ಯಂತ ಅಸಹನೆ ತೋರಿದ ಪ್ರದೇಶ ಹಾಂಕಾಂಗ್. ಗೋವಾದ ಸಂಸ್ಕೃತಿ ಸಚಿವ ಇತ್ತೀಚೆಗೆ ನೈಜೀರಿಯಾ ಜನರನ್ನು ಅವ­ಮಾನಿಸುವ ಮಾತುಗಳನ್ನು ಆಡಿದ್ದಾರೆ.ಈಶಾನ್ಯ ರಾಜ್ಯಗಳ ಬಹುಭಾಗ ಭಾರತ­ದೊಂದಿಗೆ ಭೌತಿಕವಾಗಿ ಮಿಳಿತವಾಗಿದೆ ವಿನಾ ಸಾಂಸ್ಕೃತಿಕ­ವಾಗಿ ದೂರವೇ ಉಳಿದಿದೆ. ಇತ್ತೀಚಿನ ವರ್ಷ­ಗಳಲ್ಲಿ ಈಶಾನ್ಯದ ರಾಜ್ಯಗಳಲ್ಲಿ ನಡೆದಿರುವ ಜನಾಂಗೀಯ ಗಲಭೆಗಳು, ಸ್ವಾಯ­ತ್ತತೆ­ಗಾಗಿ ನಡೆದಿರುವ ಬಂಡಾಯಗಳು ನಿರಂತರ ಅಶಾಂತಿಯನ್ನು ಸೃಷ್ಟಿಸಿವೆ.ಉತ್ತಮ ಶಿಕ್ಷಣ ಮತ್ತು ಉದ್ಯೋಗ ಹುಡುಕಿ­ಕೊಂಡು ದೆಹಲಿ, ಬೆಂಗಳೂರು ಮತ್ತಿತರ ನಗರ­ಗಳಿಗೆ ಆ ಪ್ರದೇಶಗಳ ಯುವಕರು ಹೆಚ್ಚಿನ ಸಂಖ್ಯೆ­ಯಲ್ಲಿ ಬರುತ್ತಿದ್ದಾರೆ. ಈ  ರೀತಿ ಬರುವ ಎಲ್ಲರ ಮೇಲೆ ಹಲ್ಲೆ, ಅತ್ಯಾಚಾರಗಳು ನಡೆಯುವುದಿಲ್ಲ ಎನ್ನು­ವುದು ನಿಜ. ಆದರೆ ಅವರ ಕಣ್ಣುಗಳನ್ನು ‘ಚಿಂಕಿ ’ಎಂದೂ, ಅವರ ಚಹರೆಗೆ ನೇಪಾಳಿ ಗೂರ್ಖ­ರನ್ನು ಕರೆಯುವಂತೆ ‘ಬಹಾದೂರ್’ ಎಂದು ಕೂಗಿ ಕರೆದು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ.ಉತ್ತರದ ಜನ, ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳವರನ್ನು ನಡೆಸಿಕೊಂಡಂತೆ; ಈಶಾನ್ಯದ ಜನ ಹಿಂದಿ ಭಾಷಿಕರನ್ನು ನಡೆಸಿ­ಕೊಂಡಂತೆ; ಆಫ್ರಿಕಾದ ಬಿಳಿಯರು ಅಲ್ಲಿನ ಮೂಲ ನಿವಾಸಿಗಳನ್ನು ಅನಾಗರಿಕವಾಗಿ ನಡೆಸಿ­ಕೊಳ್ಳು­ತ್ತಿರುವುದು, ರಾಜಕೀಯವಾಗಿ, ಧಾರ್ಮಿ­ಕ­­ವಾಗಿ ಅವರನ್ನು ಶೋಷಿಸು­ತ್ತಿ­ರು­ವುದು, ಕಪ್ಪು ಜನರ ಮಕ್ಕಳಿಗೆ ಶಿಕ್ಷಣ– ಸಂಸ್ಕೃತಿ ಕಲಿಸುವ ಹೆಸ­ರಿ­ನಲ್ಲಿ ಅವರದಲ್ಲದ ಕಥೆಗಳನ್ನು, ಇತಿ­ಹಾಸ– ಸಂಸ್ಕೃತಿ­ಯನ್ನು ಹೇಳಿ­ಕೊಡು­­ತ್ತಿ­ರುವುದು ನಡೆ­ಯುತ್ತಿದೆ. ಇದು ಅತ್ಯಂತ ಅಪಾಯಕಾರಿ.ಬುಡಕಟ್ಟು ಪರಂಪರೆ, ಆಚರಣೆಗಳನ್ನು ಅಣ­ಕಿಸು­ವಂತೆ ಯುವ ಪೀಳಿಗೆಯನ್ನು ಬೆಳೆಸುತ್ತಿರುವ ಬಗೆಗೆ ಚಿನುವಾ ಅಚಿಬೆ ತಮ್ಮ  ಕೃತಿಗಳಲ್ಲಿ ಪ್ರಸ್ತಾ­ಪಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕಪ್ಪು ಜನರ ಆಶಾ­ಕಿರಣ ನೆಲ್ಸನ್‌ ಮಂಡೇಲಾ ರಾಜಕೀಯ ಹಕ್ಕುಗಳಿಗಾಗಿ ದನಿ ಎತ್ತಿದ ಕಾರಣಕ್ಕಾಗಿಯೇ ಜೈಲು ಸೇರಿದ್ದು. ಬಹುಶಃ ಮಂಡೇಲಾ, ಗಾಂಧಿ ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರಂಥ ಹೋರಾ­ಟ­­ಗಾರರು ಹುಟ್ಟದಿದ್ದರೆ ಪರಿಸ್ಥಿತಿ ಹೇಗಿ­ರುತಿತ್ತು ಎನ್ನುವುದು ಊಹೆಗೂ ನಿಲುಕದ್ದು.ಜಾತಿಯ ಕಾರಣಕ್ಕೆ ಅಸ್ಪೃಶ್ಯರನ್ನು,  ಧರ್ಮದ ಕಾರಣಕ್ಕೆ ಅಲ್ಪಸಂಖ್ಯಾತ ಮುಸ್ಲಿಮ­ರನ್ನು, ಚಹರೆ ಮತ್ತು ಬಣ್ಣದ ಕಾರಣಕ್ಕೆ ಈಶಾನ್ಯ ಮತ್ತು ಆಫ್ರಿಕಾ ಜನರನ್ನು ನಡೆಸಿ­ಕೊ­ಳ್ಳುವ ಮನ­ಸ್ಥಿತಿಗಳೆಲ್ಲವೂ ಒಂದೇ. ದಲಿತರು, ಮುಸ್ಲಿ­ಮ­­ರಿಗೆ ಬಾಡಿಗೆ ಮನೆ ಸಿಗುವುದು ಎಷ್ಟು ಕಷ್ಟವೋ, ಈಶಾನ್ಯದವರಿಗೂ ಅಷ್ಟೇ ಕಷ್ಟ. ಹೀಗಾಗಿ ಅವರೆಲ್ಲರೂ ಒಂದೇ ಕಡೆಗಳಲ್ಲಿ ಗುಂಪು, ಗುಂಪಾಗಿ ನೆಲೆಸುವುದು. ದೆಹಲಿಯಲ್ಲಿ ಒಂದೊಂದು ಬಡಾವಣೆಯೂ ಒಂದೊಂದು ಸಮು­ದಾಯ ಇಲ್ಲವೆ ಜನಾಂಗಕ್ಕೆ ಸೀಮಿತವಾಗಿದೆ.ಈಚೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಜನರ ಸಮಸ್ಯೆ­ಯನ್ನು ಗಮನದಲ್ಲಿ ಇಟ್ಟುಕೊಂಡು ಡಿಜಿಟಲ್‌ ಉದ್ಯಮದ ಕೆಲಸಗಳನ್ನು ಹೊರಗುತ್ತಿಗೆಗೆ ಕೊಡ­ಬೇಕೆಂದು ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನ ಮತ್ತು ಇಂಗ್ಲಿಷ್‌ ಭಾಷೆ ಬಲ್ಲ ಈಶಾನ್ಯದ ಜನರಿಗೆ ಮನೆ ಮುಂದೆ ಉದ್ಯೋಗ ಸಿಗುತ್ತದೆಂಬ ಭಾವ­ನೆಯೂ ಇದರ ಹಿಂದೆ ಇದ್ದಿರಬಹುದು. ವಿಭಿನ್ನ ಭಾಷೆ, ಸಂಸ್ಕೃತಿ, ಜಾತಿ, ಧರ್ಮ ಮತ್ತು ಬಣ್ಣಗಳ ಜನರಿರುವ ಭಾರತದಂಥ ದೇಶದಲ್ಲಿ ಇಂಥ ನಿಲುವುಗಳನ್ನು ಒಪ್ಪಲಾಗದು. ಏಕೆಂದರೆ ಇದರ ಅನನ್ಯತೆ ಇರುವುದೇ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ.ಜಾತಿ– ಬಣ್ಣ ಮತ್ತು ಧರ್ಮದ ಕಾರಣಕ್ಕೆ ಅವ­­ಮಾನಕ್ಕೆ ಒಳಗಾಗುವ ಪ್ರಕರಣಗಳು ಶತಮಾನಗಳಿಂದಲೂ ನಡೆದು ಬಂದಿದೆ. ಅಮೆ­ರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತಿತರ ದೇಶ­ಗಳಲ್ಲಿ ಜನಾಂಗ ನಿಂದನೆಗೆ ಒಳಗಾದ ತಕ್ಷಣ ಬೊಬ್ಬೆ ಹಾಕುವ ಭಾರತೀಯರು, ನಾವು ಬೇರೆ­ಯ­ವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎನ್ನುವ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳ­ಬೇಕಾ­ಗಿದೆ.ಬೇರೆಯವರನ್ನು ಸಹಿಸದೆ ಅವಮಾನಿಸು­ತ್ತಿರು­ವಾಗ, ಬೇರೆಯವರು ನಮ್ಮನ್ನು ಹೀಯಾಳಿ­ಸಿ­ದರು– ಛೇಡಿಸಿದರು ಎಂದು ಆರೋಪಿಸುವ ನೈತಿಕ ಶಕ್ತಿ ಇರುವುದಿಲ್ಲ.ಜನಾಂಗ ದ್ವೇಷ ಮತ್ತು ನಿಂದನೆ ಒಂದು ಮಾನಸಿಕ ಸ್ಥಿತಿ. ಇದರ ನಿವಾರಣೆ ಕಾನೂನು­ಗ­ಳಿಂದ ಮಾತ್ರ ಸಾಧ್ಯವಿಲ್ಲ. ಜನರ ಮಾನಸಿಕ ಸ್ಥಿತಿ­ಗತಿ ಬದಲಾಗಬೇಕು. ಸೂಕ್ತ ಶಿಕ್ಷಣ– ತಿಳಿವಳಿಕೆ, ಜಾಗೃತಿಯೂ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತಿಸಬೇಕು. ಸಂಸತ್ತಿನೊಳಗೆ ಕೂರುವ ಜನ ಪ್ರತಿನಿಧಿಗಳು ಇಂಥ ಗಂಭೀರ ವಿಷಯಗಳ ಬಗೆಗೆ ಸೂಕ್ಷ್ಮ ಮತಿಗಳಾಗಿರಬೇಕಾದ್ದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಇಂಥ ಮನಸ್ಥಿತಿ ಇನ್ನು ನೂರಾರು ವರ್ಷಗಳು ಮುಂದುವರಿಯಬಹುದು.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.