ಶನಿವಾರ, ಮೇ 8, 2021
17 °C

‘ಸುಖ’ ಎಂಬ ಮಾಯಾಜಿಂಕೆ!

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

‘ಸುಖ’ ಎಂಬ ಮಾಯಾಜಿಂಕೆ!

ಕಳೆದ ವಾರ ಬಿಡುಗಡೆಯಾದ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 158 ದೇಶಗಳನ್ನು ಸಮೀಕ್ಷೆ ಮಾಡಿ ಸುಖೀ ದೇಶಗಳ ಪಟ್ಟಿಯೊಂದನ್ನು ಕೊಟ್ಟಿದೆ. ಈ ಪಟ್ಟಿಯ ಪ್ರಕಾರ, ಸ್ವಿಟ್ಜರ್ಲೆಂಡ್ ಮೊದಲ ಸುಖೀದೇಶ.  ಈಚಿನ ವರ್ಷಗಳಲ್ಲಿ ಇಂಡಿಯಾದ ಮಧ್ಯಮವರ್ಗ ಬೆನ್ನು ಹತ್ತಿರುವ ಅಮೆರಿಕ 15ನೇ ಸ್ಥಾನದಲ್ಲಿದೆ; ಇಂಗ್ಲೆಂಡಿನಿಂದ ವಸಾಹತೀಕರಣಕ್ಕೊಳಗಾಗಿದ್ದ ದೇಶಗಳಲ್ಲಿ ಕೆನಡಾ ಐದನೆಯ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಹತ್ತನೆಯ ಸ್ಥಾನದಲ್ಲಿದೆ.ಇಂಗ್ಲೆಂಡ್ 21ನೇ ಸ್ಥಾನದಲ್ಲಿದೆ. ರಾಜಕೀಯ ಅಸ್ಥಿರತೆಯಲ್ಲಿರುವ ಲಿಬಿಯಾ ದೇಶ 63ನೇ ಸ್ಥಾನದಲ್ಲಿದೆ. ಭ್ರಷ್ಟತೆಯ ಕೂಪದಿಂದ ಮೇಲೇಳಲು ಪ್ರಯತ್ನಿಸುತ್ತಿರುವ ನೈಜೀರಿಯಾ 78ನೇ ಸ್ಥಾನದಲ್ಲಿದೆ. ಪಾಕಿಸ್ತಾನ 81ನೇ ಸ್ಥಾನದಲ್ಲಿದೆ. ಚೀನಾ 84ನೇ ಸ್ಥಾನದಲ್ಲಿದೆ. ಇಪ್ಪತ್ತು ವರ್ಷಗಳ ಕೆಳಗೆ ಸ್ವಾತಂತ್ರ್ಯ ಪಡೆದ ದಕ್ಷಿಣ ಆಫ್ರಿಕಾ 113ನೇ ಸ್ಥಾನದಲ್ಲಿದೆ. ಇಂಡಿಯಾ 117ನೇ ಸ್ಥಾನದಲ್ಲಿದೆ. ಸುಖೀದೇಶಗಳನ್ನು ಗುರುತಿಸಲು ಈ ಸಮೀಕ್ಷೆಯಲ್ಲಿ ಬಳಸಿರುವ ಮಾನದಂಡಗಳು: ಆರ್ಥಿಕ ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯ, ಸಾಮಾಜಿಕ ಭದ್ರತೆ, ಆರೋಗ್ಯಕರ ಬದುಕಿನ ಸಾಧ್ಯತೆಗಳ ನಿರೀಕ್ಷೆ, ಉದಾರತೆ, ಜನರು ಜೀವನದ ಆಯ್ಕೆಗಳನ್ನು ಮಾಡಬಲ್ಲ ಸ್ವಾತಂತ್ರ್ಯ ಹಾಗೂ ಭ್ರಷ್ಟಾಚಾರದ ಪ್ರಮಾಣ. ಇಲ್ಲಿ ಬಳಸಲಾದ ಮಾನದಂಡಗಳನ್ನು ಕುರಿತ ವಿಶ್ಲೇಷಣೆಯನ್ನು ತಜ್ಞರು ಮಾಡುತ್ತಿದ್ದಾರೆ. ಆದರೆ ಅದರಾಚೆಗೆ ನಿಂತು ನೋಡಿದರೂ ಇಂಡಿಯಾದ ಜನರ ಒಟ್ಟಾರೆ ಅಸುಖಕ್ಕೆ ಕಾರಣಗಳು ಏನಿರಬಹುದು ಎಂಬ ಗಂಭೀರ ಪ್ರಶ್ನೆಗಳು ನಮ್ಮೆದುರಿಗಿವೆ.ಮೊನ್ನೆ ಈ ಸಮೀಕ್ಷೆ ಹೊರಬಿದ್ದ ಮೇಲೆ ಇಂಡಿಯಾದ ಆರಾಮಜೀವಿ ಮಧ್ಯಮವರ್ಗದ ಅನೇಕರ ಕೃತಕ ಚಿಂತೆಗೆ ಕಾರಣವಾಗಿರುವುದು ತಮ್ಮ ದೇಶ ಅಸುಖಿ ಎಂಬುದಲ್ಲ; ಬದಲಿಗೆ, 81ನೇ ಸ್ಥಾನದಲ್ಲಿರುವ ಪಾಕಿಸ್ತಾನ ಇಂಡಿಯಾಕ್ಕಿಂತ ಮುಂದಿದೆಯಲ್ಲ ಎಂಬುದು! ಈ ಟಿಪಿಕಲ್ ಪ್ರತಿಕ್ರಿಯೆಯನ್ನು ಗಮನಿಸಿದರೂ ಸಾಕು, ಇಂಡಿಯಾದ ಅಸುಖಕ್ಕೆ ಒಂದು ಕಾರಣ ತಕ್ಷಣ ಹೊಳೆಯುತ್ತದೆ. ಅದೇನೆಂದರೆ, ಇಲ್ಲಿ ಅನಗತ್ಯವಾಗಿ ಹಬ್ಬಿರುವ ಪಾಕಿಸ್ತಾನ ದ್ವೇಷವೂ ಇಲ್ಲಿನ ಒಂದು ಬಗೆಯ ಅಸುಖಿ ಮಾನಸಿಕ ವಾತಾವರಣಕ್ಕೆ ಕಾರಣವಾಗಿರಬಹುದು.ಪಾಕಿಸ್ತಾನವನ್ನು ದ್ವೇಷಿಸುವ ನೆವದಲ್ಲಿ ಭಾರತದ ಮುಸ್ಲಿಮರನ್ನು ಹೀನಾಯವಾಗಿ ಕಾಣುವ ಧೋರಣೆಯೂ ಇಲ್ಲಿನ ಅಸುಖಿ ವಾತಾವರಣವನ್ನು ಹೆಚ್ಚಿಸುತ್ತಿರಬಹುದು. ಸದಾ ಅನ್ಯದ್ವೇಷದಲ್ಲಿ ಮುಳುಗುವ ಮನಸ್ಸು ಅಸುಖಿಯಾಗಿರುತ್ತದೆ; ಇತರರನ್ನೂ ದುಃಖದಲ್ಲಿ ಅದ್ದುತ್ತದೆ. ‘ಅನ್ಯರಿಗೆ ಅಸಹ್ಯ ಪಡಬೇಡ’ ಎಂದ ಬಸವಣ್ಣನವರ ಸಂದೇಶದ ಹಿನ್ನೆಲೆಯಲ್ಲಿ ನೋಡಿದರೆ ಇಂಡಿಯಾದಲ್ಲಿ ಜಾತಿಪದ್ಧತಿ, ಮತೀಯವಾದಗಳು ಅನೇಕ ಬಗೆಯ ‘ಅನ್ಯತೆ’ಗಳನ್ನು, ದುಃಖಗಳನ್ನು ಸೃಷ್ಟಿಸಿರುವುದು ಕಾಣತೊಡಗುತ್ತದೆ. ‘ಇಂಡಿಯಾದ ಜನರು ಜಗತ್ತಿನಲ್ಲೇ ಅತ್ಯಂತ ದುಃಖಿಗಳು; ಜಾತಿಭೇದ, ಲಿಂಗಭೇದ ಮಾಡುವ ಅವರ ಮನಸ್ಥಿತಿಯೇ ಇದಕ್ಕೆ ಕಾರಣ’ ಎಂದು ಲೋಹಿಯಾ ಸುಮಾರು ಅರವತ್ತು ವರ್ಷಗಳ ಕೆಳಗೆ ಬರೆದದ್ದು ಇವತ್ತಿಗೂ ಅನ್ವಯಿಸುತ್ತದೆ.ಇಷ್ಟೆಲ್ಲ ಕಷ್ಟಗಳ ನಡುವೆಯೂ ಪ್ರಾಮಾಣಿಕವಾಗಿ ದುಡಿದು ಬದುಕುತ್ತಿರುವ ಕೋಟ್ಯಂತರ ಜನರಿರುವ ಇಂಡಿಯಾದ ಸಾರ್ವಜನಿಕ ಜೀವನದಲ್ಲಿ ಎದ್ದು ಕಾಣುತ್ತಿರುವ ಠೇಂಕಾರದ ಭಾಷೆ ಹಾಗೂ ರಾಜಕೀಯ ನಾಯಕರ ಮಾತುಗಳನ್ನು ಗಮನಿಸಿ: ಅವರಲ್ಲಿ ಬಹುತೇಕರು ಜನರನ್ನು ನೆಮ್ಮದಿಯಲ್ಲಿಡುವ ಭಾಷೆಯನ್ನೇ ಬಳಸುವುದಿಲ್ಲ; ಬದಲಿಗೆ ತಂತಮ್ಮ ಪಕ್ಷಗಳ ಪರವಾಗಿ ಸುಳ್ಳು ವಾದಗಳನ್ನು ಮಂಡಿಸುತ್ತಾ, ಇತರ ಪಕ್ಷಗಳ ಮೇಲೆ ದಾಳಿ ಮಾಡುತ್ತಾ ಸಾರ್ವಜನಿಕ ಭಾಷೆಯನ್ನೂ ಜನಜೀವನವನ್ನೂ ರಾಡಿಯೆಬ್ಬಿಸುತ್ತಿದ್ದಾರೆ. ಜನರನ್ನು ಒಟ್ಟಿಗೆ ಕರೆದೊಯ್ಯುವ ಭಾಷೆಗಿಂತ ಜನರನ್ನು ಒಡೆಯುವ ಭಾಷೆ ಹೆಚ್ಚು ವಿಜೃಂಭಿಸುತ್ತಿದೆ.ಪ್ರೀತಿಯ ಭಾಷೆಗಿಂತ ದ್ವೇಷದ ಭಾಷೆಗೆ ಪ್ರಚಾರ ಹೆಚ್ಚು ಸಿಗುತ್ತಿದೆ.  ಯಾವ ಬಿಕ್ಕಟ್ಟಿನ ಸನ್ನಿವೇಶವನ್ನು ಹೇಗೆ ತಿಳಿಗೊಳಿಸಬಹುದು ಎನ್ನುವುದಕ್ಕಿಂತ, ಯಾವುದನ್ನು ಎಷ್ಟು ಹದಗೆಡಿಸಿ ಲಾಭ ಮಾಡಿಕೊಳ್ಳಬಹುದು ಎಂಬ ಧೋರಣೆ ಹೆಚ್ಚು ಹಬ್ಬುತ್ತಿದೆ. ಮೆಲುದನಿಯ ಸತ್ಯಕ್ಕಿಂತ ಚೀರು ದನಿಯ ಸುಳ್ಳೇ ಹೆಚ್ಚು ಮಾನ್ಯವಾಗುತ್ತಿರುವಂತೆ ಕಾಣುತ್ತಿದೆ. ಜನರನ್ನು ಒಂದುಗೂಡಿಸಲು ಬಳಸಬೇಕಾದ ಧರ್ಮಗಳನ್ನು ಜನರ ನಡುವೆ ಜಗಳ ಹುಟ್ಟು ಹಾಕಲು ಬಳಸಲಾಗುತ್ತಿದೆ. ಅಲ್ಪಸಂಖ್ಯಾತರಲ್ಲಿ ಕೀಳರಿಮೆ ಹಾಗೂ ಭಯ ಹುಟ್ಟಿಸುವ ಮಾತುಗಳು, ವರ್ತನೆಗಳು, ಕಾರ್ಯಕ್ರಮಗಳು ಹೆಚ್ಚುತ್ತಿವೆ.ಒಂದು ದೇಶಕ್ಕೆ ಅನ್ನ ಕೊಡುವ ರೈತರು ಅಸಹಾಯಕರಾಗಿ ನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದಾರುಣ ಸ್ಥಿತಿಯನ್ನು ಹೊಸ ಆರ್ಥಿಕತೆ ಸೃಷ್ಟಿಸುತ್ತಿದೆ. ರೈತರ ಬಗ್ಗೆಯಂತೂ ಇಡೀ ದೇಶವೇ ನಿರ್ದಯ ಮೌನ ತಳೆದಿದೆ. ಹೀಗೆ ಈ ದೇಶದ ದುಃಖದ ಮೂಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮುಂದೊಮ್ಮೆ ಸುಖೀದೇಶಗಳ ಸಮೀಕ್ಷೆಯ ಮಾನದಂಡಗಳ ಪ್ರಕಾರ ಇಂಡಿಯಾ ಮೇಲೇರಲೂಬಹುದು. ಆದರೆ ಒಂದು ಸಮಾಜದ ಮಾನಸಿಕ ಆರೋಗ್ಯದ ಎಲ್ಲೆಗಳನ್ನು ವಿಸ್ತರಿಸದೆ ಯಾವ ದೇಶವೂ ಎತ್ತರಕ್ಕೆ ಏರುವುದು ಸಾಧ್ಯವಿಲ್ಲ. ಒಂದು ದೇಶದ ಜನರನ್ನು ಒಗ್ಗೂಡಿಸುವ ಆರೋಗ್ಯಕರ ಮಾರ್ಗಗಳೇ ಇಲ್ಲದ ಸಮಾಜ ಅಸುಖಿಯಾಗುತ್ತಲೇ ಇರುತ್ತದೆ.ಕೋಮುಗಲಭೆಗಳನ್ನು ಹುಟ್ಟು ಹಾಕಿ ಅಲ್ಪಸಂಖ್ಯಾತರ ಅಂಗಡಿಗಳನ್ನು ಸುಡುವ ಹಾಗೂ ದಲಿತರು ಎಷ್ಟೋ ಉದ್ಯಮಗಳಿಗೆ ಪ್ರವೇಶಿಸಲು ಕೂಡ ಸಾಧ್ಯವಾಗದ ಸನ್ನಿವೇಶವಿರುವ ಸಮಾಜ ಆರ್ಥಿಕ ಅಭಿವೃದ್ಧಿಯ ಮೂಲಕ ಸುಖೀದೇಶವಾಗುವುದು ಕಷ್ಟ. ಒಂದು ದೇಶದ ಅರ್ಧಭಾಗದಷ್ಟು ಜನರು ಹತಾಶೆಯಿಂದ ನರಳುವ ಈ ವಾತಾವರಣವನ್ನು ಬದಲಿಸಲು ಕೆಲವರಾದರೂ ಪ್ರಯತ್ನಿಸುತ್ತಿದ್ದರೆ, ಹಲವರು ಅದನ್ನು ಹಾಳು ಮಾಡುತ್ತಲೇ ಇದ್ದಾರೆ. ತಮ್ಮ ಹಕ್ಕುಗಳನ್ನು ಪಡೆಯಲು ಹೊರಟ ಮಹಿಳೆಯರಿಗಂತೂ ಸನಾತನ ಸಮಾಜ ಸಾವಿರಾರು ಅಡ್ಡಿಗಳನ್ನು ಒಡ್ಡುತ್ತಿದೆ. ಹ್ಯಾಪಿನೆಸ್ ರಿಪೋರ್ಟಿನಲ್ಲಿ ಒಂದು ದೇಶದ ಜನರಿಗಿರುವ ಮುಕ್ತ ಆಯ್ಕೆಯ ಸ್ವಾತಂತ್ರ್ಯಗಳು ಹಾಗೂ ಉದಾರತೆಯ ಅಂಶಗಳನ್ನು ಕೂಡ ಸುಖೀದೇಶಗಳನ್ನು ನಿರ್ಧರಿಸುವ ಮಾನದಂಡಗಳನ್ನಾಗಿ ಬಳಸಲಾಗಿದೆ. ಇವೆರಡೂ ಅಂಶಗಳಲ್ಲೂ ನಾವು ತೀರಾ ಹಿಂದಿದ್ದೇವೆ. ಇವೆಲ್ಲದರ ಜೊತೆಗೇ, ಬಹುಸಂಖ್ಯಾತರ ಭಯೋತ್ಪಾದನೆಗಳು ಹಾಗೂ ಅದಕ್ಕೆ ಪ್ರತಿಯಾಗಿ ಹುಟ್ಟುವ ಅಲ್ಪಸಂಖ್ಯಾತರ ಭಯೋತ್ಪಾದನೆಗಳು ಕೂಡ ದೇಶದ ಕಷ್ಟಗಳನ್ನು ಹೆಚ್ಚಿಸುತ್ತಿರುತ್ತವೆ. ಜನರಿಗೆ ಲೌಕಿಕ ಸುಖ ನಶ್ವರವೆಂದು ಬೋಧಿಸುತ್ತಾ, ತಾವು ಮಾತ್ರ ಧನಕನಕ ಸಂಪತ್ತುಗಳನ್ನು ಕೂಡಿಹಾಕಿಕೊಳ್ಳುತ್ತಲೇ ಇರುವ ಧಾರ್ಮಿಕ ನಾಯಕರ ಒಣಭಾಷಣಗಳಿಂದ ಜನ  ಸಿನಿಕರಾಗತೊಡಗುತ್ತಾರೆ.ಖಾಸಗೀಕರಣದ ಕಾಲದಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳು ಯಾವ ಗಳಿಗೆಯಲ್ಲಾದರೂ ಇಲ್ಲವಾಗಬಹುದು ಎಂಬ ಆತಂಕ ಕೂಡ ಇಂಡಿಯಾದ ತರುಣ, ತರುಣಿಯರನ್ನು ಮುತ್ತಿದೆ. ಸ್ವಾತಂತ್ರ್ಯ ಬಂದ ನಂತರದ ಐವತ್ತು ವರ್ಷಗಳಲ್ಲಿ ಈ ದೇಶ ಕಷ್ಟಪಟ್ಟು ಸಾಧಿಸಲೆತ್ನಿಸಿದ್ದ ಸಾಮಾಜಿಕ ನ್ಯಾಯದ ಹಾದಿ ದುರ್ಬಲಗೊಳ್ಳುತ್ತಿದೆ. ಎಲ್ಲ ಬಗೆಯ ಕೆಳವರ್ಗಗಳ ಜನರೂ ಭಾಗಿಯಾಗತೊಡಗಿದ್ದ ಸಾರ್ವಜನಿಕ ವಲಯವನ್ನು ಸರ್ಕಾರಗಳು ಒಂದೊಂದಾಗಿ ಇಲ್ಲವಾಗಿಸುತ್ತಿವೆ;  ಉಳ್ಳವರು ಹಾಗೂ ಬಡವರ ನಡುವೆ ಹೆಚ್ಚುತ್ತಿರುವ ಭೀಕರ ಅಂತರ ಕೂಡ ಒಂದು ದೇಶವನ್ನು ಬಿರುಕಿನೆಡೆಗೆ ಒಯ್ಯುತ್ತಿದೆ.ಇವೆಲ್ಲದರ ಜೊತೆಗೆ  ಭಯಾನಕ ಭ್ರಷ್ಟಾಚಾರ ಕೂಡ ಇಂಡಿಯಾ ಪಡೆದಿರುವ 117ನೇ ಸ್ಥಾನಕ್ಕೆ ಒಂದು ಮುಖ್ಯ ಕಾರಣ ಎಂಬುದು ಪುಟ್ಟ ಮಗುವಿಗೂ ಗೊತ್ತಿದೆ. ಇಂಥ ಕಟುಸತ್ಯಗಳನ್ನು ಎದುರಿಸದ ನಾಯಕರುಗಳು ತಾವಿರುವುದು ಪ್ರಜಾಪ್ರಭುತ್ವ ಎಂಬುದನ್ನೇ ಮರೆತು ಸರ್ವಾಧಿಕಾರಿಗಳಾಗುತ್ತಿದ್ದಾರೆ; ಈ ನಾಯಕರ ಮಾದರಿಯಲ್ಲೇ ಆಡಳಿತ ನಡೆಸುವ ಅಧಿಕಾರಿಗಳ ಅಹಂಕಾರ ಹಾಗೂ ಇತರರನ್ನು ಹಿಂಸಿಸಿ ಆನಂದಿಸುವ ಪ್ರವೃತ್ತಿಯಿಂದಾಗಿ ಕೂಡ ಅಲ್ಲಿ ಕೆಲಸ ಮಾಡುವವರ ನೆಮ್ಮದಿ ಹಾಳಾಗುತ್ತದೆ; ಸಂಸ್ಥೆಗಳ ಆರೋಗ್ಯ ಕುಸಿದು ಬೀಳುತ್ತದೆ; ಉತ್ಪಾದನೆ ಕಡಿಮೆಯಾಗುತ್ತದೆ.ಈ ಸ್ಥಿತಿ ಸರ್ಕಾರಿ ಹಾಗೂ ಖಾಸಗಿ ವಲಯಗಳೆರಡರಲ್ಲೂ ಹಬ್ಬಿದೆ. ಮನೋವಿಜ್ಞಾನಿಗಳು ಹೇಳುವಂತೆ ಮಾನಸಿಕ ಕಾಯಿಲೆಯ ವ್ಯಕ್ತಿಗಳು ರೋಗಗ್ರಸ್ತ ಸಮಾಜವನ್ನು ಸೃಷ್ಟಿಸುತ್ತಾರೆ; ಹಾಗೆಯೇ ರೋಗಗ್ರಸ್ತ ಸಮಾಜವೂ ರೋಗಗ್ರಸ್ತ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ. ತಮ್ಮ ಸ್ಥಿತಿಗಳನ್ನು ಬದಲಿಸಲಾಗದೆ ಅಷ್ಟಿಷ್ಟು ನೆಮ್ಮದಿಗಾಗಿ ಸಿಕ್ಕಸಿಕ್ಕ ಕಂಭಗಳನ್ನು ಸುತ್ತಿ ಕೈ ಮುಗಿವ ಜನರು ಹೆಚ್ಚು ಕಾಣುವ ಸಮಾಜದಲ್ಲಿ ಸುಖದ ಗಳಿಗೆಗಳು ಕಡಿಮೆ ಇರುತ್ತವೆ.  ಪಶ್ಚಿಮದ ಆರ್ಥಿಕ ಸಮೀಕ್ಷೆಗಳ ರಾಜಕಾರಣಗಳು ಹಲವಿರಬಹುದು. ಅನೇಕ ಸಲ ಆರ್ಥಿಕ ಅಭಿವೃದ್ಧಿಗಳ ಸೂಚ್ಯಂಕಗಳು ಕಟ್ಟುಕತೆಗಳಾಗಿರಬಹುದು.ಹೀಗಾಗಿ ಈ ಬಗೆಯ ಸಮೀಕ್ಷೆಗಳೇ ಹುಸಿಯೆಂದು  ನಮ್ಮ ಹುಸಿ ಅಧ್ಯಾತ್ಮವಾದಿಗಳು ಸುಖದ ಕಲ್ಪನೆಯನ್ನು ಬೇರೆ ರೀತಿಯಲ್ಲಿ ತೋರಿಸಲು ಯತ್ನಿಸಬಹುದು. ಆದರೆ ಅದರಿಂದ ಪ್ರಯೋಜನವಿಲ್ಲ. ಕರ್ನಾಟಕದಷ್ಟಿರುವ ಸ್ವಿಟ್ಜರ್ಲೆಂಡ್ ಜೊತೆಗೆ ಇಂಡಿಯಾವನ್ನು ಹೋಲಿಸಲಾಗದು, ನಿಜ. ಅದರ ಅಭಿವೃದ್ಧಿಯ ಗತಿ ಹಾಗೂ ಆದಾಯ ಮೂಲಗಳು ಇಂಡಿಯಾಕ್ಕಿಂತ ಭಿನ್ನ. ದೇಶವಿದೇಶಗಳನ್ನು ಸುತ್ತುವ ಕಿರಣ್ ಕುಮಾರ್ ಹೇಳುವಂತೆ ‘ಸ್ವಿಟ್ಜರ್ಲೆಂಡಿನ ಆರ್ಥಿಕತೆಯ  ಮುಖ್ಯ ಭಾಗ ಪ್ರವಾಸೋದ್ಯಮದಿಂದ ನಡೆಯುವಂಥದ್ದು; ಇಂಡಿಯಾದ ಪ್ರವಾಸೋದ್ಯಮಕ್ಕೆ ಕೂಡ ಬಹು ದೊಡ್ಡ ಆರ್ಥಿಕ ಆದಾಯದ ಮೂಲವನ್ನು ಸೃಷ್ಟಿಸುವ ಸಾಧ್ಯತೆ ಹೇರಳವಾಗಿದೆ.’ ಅವರ ಪ್ರಕಾರ, ‘ಇನ್ನಿತರ ಹಲವು ವಲಯಗಳಲ್ಲಿ ಆದಾಯ ಹೆಚ್ಚಿಸುವ ಸಾಧ್ಯತೆ ಈ ದೇಶಕ್ಕೆ ಇದ್ದೇ ಇದೆ.ಆದರೆ ನಮ್ಮ ನಾಯಕರು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾಗಿರುವುದು ಒಂದು ದೇಶದ ಜನರನ್ನು ಬೆಸೆಯುವ ನುಡಿ, ನಡೆ ಹಾಗೂ ಯೋಜನೆಗಳ ಬಗ್ಗೆ; ಭ್ರಷ್ಟಾಚಾರದ ವಿವಿಧ ಹಂತಗಳನ್ನು ನಿವಾರಿಸುವ ಬಗ್ಗೆ’. ಆದ್ದರಿಂದಲೇ ಈ ಹ್ಯಾಪಿನೆಸ್ ರಿಪೋರ್ಟ್ ಇಡೀ ಇಂಡಿಯಾಕ್ಕೆ ತಾನು ಈಗ ಹಿಡಿದಿರುವ ದಿಕ್ಕನ್ನು ಕುರಿತು ಆತ್ಮಪರೀಕ್ಷೆ ಮಾಡಿಕೊಳ್ಳುವ ಕಾಲ. ಆದರೆ ಈ ಬಗೆಯ ಆತ್ಮಪರೀಕ್ಷೆಗಳು ಕೇವಲ ಸಾರ್ವಜನಿಕ ಸ್ಟಂಟುಗಳ ಹಾಗೂ ಅಬ್ಬರದ ಭಾಷಣಗಳ ಪ್ರದರ್ಶನಗಳಾದರೆ ಮಾತ್ರ ನಾವು ಇದ್ದಲ್ಲೇ ಇರುತ್ತೇವೆ. ಕೊನೆ ಟಿಪ್ಪಣಿ: ಸಮೀಕ್ಷೆಗಳ ಆಚೆಗಿನ ಸುಖದ ಕಲ್ಪನೆ ಸುಖದ ಕಲ್ಪನೆಗಳನ್ನು ಕುರಿತ ದೊಡ್ಡ ಅಂತರರಾಷ್ಟ್ರೀಯ ಪ್ರಶ್ನೆಗಳ ಎದುರು ನಮ್ಮ ಸಣ್ಣ ಪುಟ್ಟ ಸುಖಗಳ ಕಲ್ಪನೆಯನ್ನು ನಾವು ಮರೆಯಬಾರದು. ಅನೇಕ ಸಲ ಇನ್ನೊಬ್ಬರಿಗೆ ಹೋಲಿಸಿಕೊಂಡು ತಮ್ಮ ಸುಖದ ಅಳತೆಗೋಲನ್ನು ಏರಿಸಿಕೊಳ್ಳಲು ಹೋಗಿ ದುಃಖಿಗಳಾಗುವವರನ್ನೂ ನಾವು ಕಂಡಿದ್ದೇವೆ!  ತಮ್ಮ ಎಷ್ಟೋ ತಾಪತ್ರಯಗಳ ನಡುವೆ, ತಂತಮ್ಮ ಕೆಲಸಗಳಲ್ಲಿ ಮುಳುಗಿ ಒಂದು ಹೊಸ ರೀತಿಯ ಕುರ್ಚಿ ಮಾಡಿದ್ದಕ್ಕೆ ಖುಷಿ ಪಡುವ ಬಡಗಿ; ಸಮರ್ಥವಾಗಿ ಬೈಕ್ ರಿಪೇರಿ ಮಾಡಿ ಕಣ್ಣಲ್ಲಿ ಹೆಮ್ಮೆ, ಆನಂದಗಳನ್ನು ಚಿಮ್ಮಿಸುವ ಮೆಕ್ಯಾನಿಕ್; ಹೂ ಗಿಡಗಳನ್ನು ಬೆಳೆಸುವ ಹುಡುಗಿ; ಧ್ಯಾನಸ್ಥನಾಗಿ ಬಟ್ಟೆ ಹೊಲೆಯುವ ಟೈಲರ್; ಕವಿತೆ ಬರೆಯುವ ಹುಡುಗಿ ಹಾಗೂ ಜನರಿಗೆ ನೆರವಾಗುವ ಕೆಲಸ ಮಾಡುವ ಎಲ್ಲರೂ ತಮ್ಮ ಕೆಲಸದಲ್ಲಿ ತಲ್ಲೀನವಾಗಿರುವುದೇ ನಿಜವಾದ ಸುಖ ಎಂಬ ಸತ್ಯವನ್ನು ಪ್ರತಿದಿನ ಕಾಣಿಸುತ್ತಿರುತ್ತಾರೆ. ಸಾಲದ ಭಾರವಿಲ್ಲದೆ, ಮಳೆಬೆಳೆ ಚೆನ್ನಾಗಿರುವಾಗ ಸಣ್ಣ ಆದಾಯದಲ್ಲೇ ನೆಮ್ಮದಿಯಾಗಿರುವ ಮಾದರಿಯನ್ನು ನಮ್ಮ ರೈತರು ನೂರಾರು ವರ್ಷಗಳಿಂದ ರೂಪಿಸಿಕೊಟ್ಟಿದ್ದಾರೆ. ನನ್ನಂಥವರಿಗಂತೂ ಪುಸ್ತಕಗಳು ಸದಾ ನೆಮ್ಮದಿ ಕೊಟ್ಟಿವೆ. ಅದರಲ್ಲೂ ನಾವು ಎಂಥ ಪುಸ್ತಕಗಳನ್ನು ಆರಿಸಿಕೊಳ್ಳುತ್ತೇವೆ ಎಂಬುದು ಅತ್ಯಂತ ಮುಖ್ಯ. ವಿಕೃತ ಮನಸ್ಸಿನ ಬರವಣಿಗೆಗಳು ಹಾಗೂ ದಾರಿ ತಪ್ಪಿಸುವ ವಾದಗಳನ್ನು ಓದಿದಾಗ ನಮ್ಮ ರೇಜಿಗೆಗಳು ಹೆಚ್ಚುತ್ತವೆ. ಉದಾರ ದರ್ಶನವಿಲ್ಲದ ಕಳಪೆ ಸಾಹಿತ್ಯ ಕೃತಿಗಳು ನಮ್ಮ ನರಕವನ್ನು ಹೆಚ್ಚಿಸುತ್ತವೆ. ನಾವು ಆರಿಸಿಕೊಳ್ಳುವ ಪುಸ್ತಕಗಳು ನಾವು ಇರುವ ಸ್ಥಿತಿಯನ್ನು, ನಮ್ಮನ್ನೂ ಅರಿಯಲು ನೆರವಾಗಬೇಕು; ಜೊತೆಗೆ ನಮ್ಮ ಜಡಸ್ಥಿತಿಯನ್ನು ಮೀರಲೂ ನೆರವಾಗಬೇಕು. ಕನ್ನಡದ ಹಾಗೂ ಜಗತ್ತಿನ ಅತ್ಯುತ್ತಮ ಬರಹಗಳ ಮೂಲಕ ಈ ಸುಂದರ ಅನುಭವ ನನಗೆ ಆಗಾಗ್ಗೆ ಆಗುತ್ತಿರುತ್ತದೆ. ಯಾವ ಅಧಿಕೃತ ಸಮೀಕ್ಷೆಗಳಿಗೂ ದಕ್ಕದ ಸುಖದ ಮೂಲಗಳನ್ನು ಹುಡುಕುವ ಈ ಬಗೆಯ ಪಯಣ ನಿಜಕ್ಕೂ ರೋಚಕವಾಗಿರಬಲ್ಲದು.

editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.