ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸಮಸ್ಯೆಗೆ ಗೋಡೆ ಉತ್ತರವೇ?

ಬಿಕ್ಕಟ್ಟು ಇತ್ಯರ್ಥಕ್ಕೆ ಪರಿಹಾರವು ಮಾತುಕತೆಯೋ, ತುರ್ತುಪರಿಸ್ಥಿತಿಯೋ?
Last Updated 19 ಜನವರಿ 2019, 4:27 IST
ಅಕ್ಷರ ಗಾತ್ರ

ಅಮೆರಿಕ ಇಂತಹ ಪರಿಸ್ಥಿತಿಯನ್ನು ಹಿಂದೆಯೂ ಎದುರಿಸಿದೆ. ಕೆಲವೊಮ್ಮೆ ಸರ್ಕಾರ ಭಾಗಶಃ ಸ್ಥಗಿತವಾಗಿ ಕೆಲವು ಸೇವೆಗಳಷ್ಟೇ ವ್ಯತ್ಯಯವಾಗಿದ್ದರೆ, ಬೆರಳೆಣಿಕೆಯಷ್ಟು ಬಾರಿ ಪೂರ್ತಿಯಾಗಿ ಸ್ಥಗಿತಗೊಂಡು ಆ ಬಿಸಿ ಜನರಿಗೆ ತಟ್ಟುವಷ್ಟು ವಿಕೋಪಕ್ಕೆ ಹೋಗಿದ್ದೂ ಉಂಟು. ಈ ಬಾರಿ ಡಿಸೆಂಬರ್ 22ರ ಮಧ್ಯರಾತ್ರಿಯಿಂದ ಸರ್ಕಾರದ ಹಲವು ಇಲಾಖೆಗಳು ಕಾರ್ಯಚಟುವಟಿಕೆಯನ್ನು ಮಂದಗೊಳಿಸಿದವು. ನೌಕರರನ್ನು ಕಡ್ಡಾಯ ರಜೆಗೆ ಕಳುಹಿಸಿದವು. ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವವರು, ಜೈಲಿನ ನಿರ್ವಾಹಕರು, ಎಫ್‌ಬಿಐ ನೌಕರರು ಹೀಗೆ ಹಲವು ಫೆಡರಲ್ ಸಂಸ್ಥೆ ನೌಕರರು ರಜೆಯ ಮೇಲೆ ಹೋಗಬೇಕಾದ ಅನಿವಾರ್ಯ ಎದುರಾಯಿತು.

35 ಸಾವಿರ ತಾತ್ಕಾಲಿಕ ನೌಕರರನ್ನು ಕೆಲಸದಿಂದ ವಜಾ ಮಾಡಲಾಯಿತು. ನೌಕರರ ಅಭಾವದಿಂದ ಮಯಾಮಿ ವಿಮಾನ ನಿಲ್ದಾಣದ ಒಂದು ಟರ್ಮಿನಲ್ ಮುಚ್ಚಲಾಯಿತು. ಇನ್ನಿತರ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗೆ ಸಿಬ್ಬಂದಿ ಒದಗಿಸಲಾಗದೇ, ತಪಾಸಣೆಯ ಅವಧಿ ಹೆಚ್ಚಿತು. ಜನ ಸರತಿ ಸಾಲಿನಲ್ಲಿ ನಿಂತು ಕಾಯುವಂತಾಯಿತು. ಈ ಅವ್ಯವಸ್ಥೆಗೆ ಕಾರಣ, 2019ರ ಆಯವ್ಯಯ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟು.

ಅಮೆರಿಕದ ಸಂವಿಧಾನದ ಪ್ರಕಾರ, ಸರ್ಕಾರದ ಯೋಜನೆಗಳಿಗೆ ಹಣ ಬಿಡುಗಡೆಯಾಗಬೇಕಾದರೆ ಆರ್ಥಿಕ ವರ್ಷದ ಆಯವ್ಯಯ ಅಮೆರಿಕದ ಜನಪ್ರತಿನಿಧಿ ಸಭೆಯಲ್ಲಿ (ಕಾಂಗ್ರೆಸ್) ಬಹುಮತದಿಂದ ಅಂಗೀಕಾರವಾಗಬೇಕು. ನಂತರ ಅದಕ್ಕೆ ಅಧ್ಯಕ್ಷರ ಸಹಿ ಮತ್ತು ಮೊಹರು ಬೀಳಬೇಕು. ಅಮೆರಿಕ ಕಾಂಗ್ರೆಸ್ 435 ಪ್ರತಿನಿಧಿಗಳನ್ನು ಹೊಂದಿರುವ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಮತ್ತು 100 ಸದಸ್ಯರ ‘ಸೆನೆಟ್’ ಒಳಗೊಂಡಿರುವ ಒಂದು ವ್ಯವಸ್ಥೆ. ಅಕ್ಟೋಬರ್‌ನಿಂದ ಒಂದು ವರ್ಷ ಕಾಲ ಜಾರಿಯಲ್ಲಿರುವ ಅಮೆರಿಕದ ಆಯವ್ಯಯವನ್ನು ಸೆಪ್ಟೆಂಬರ್ 30ರ ಒಳಗೆ ಅಮೆರಿಕದ ಕಾಂಗ್ರೆಸ್ ಅನುಮೋದಿಸಿದರೆ, ಸರ್ಕಾರ ಯಾವ ಅಡೆತಡೆಯೂ ಇಲ್ಲದೆ ನಡೆದುಕೊಂಡು ಹೋಗುತ್ತದೆ. ಇಲ್ಲವಾದರೆ ಹಣದ ಕೊರತೆಯಾಗಿ ಕಾರ್ಯಚಟುವಟಿಕೆ ಸ್ಥಗಿತಗೊಳ್ಳುತ್ತದೆ.

ಈ ಹಿಂದೆ ಜಿಮ್ಮಿಕಾರ್ಟರ್ ಅವಧಿಯಲ್ಲಿ ಗರ್ಭಪಾತ ಸಂಬಂಧಿ ಅನುದಾನದ ವಿಷಯವಾಗಿ ಸತತವಾಗಿ ನಾಲ್ಕು ವರ್ಷ, ಆಯವ್ಯಯ ಅನುಮೋದನೆಯಾಗದೇ ಸರ್ಕಾರ ಭಾಗಶಃ ಸ್ಥಗಿತಗೊಂಡಿತ್ತು. ರೇಗನ್ ಅವಧಿಯಲ್ಲಿ ಎಂಟು ಬಾರಿ ಸರ್ಕಾರ ನಿಸ್ತೇಜವಾಗಿತ್ತಾದರೂ, ನಾಲ್ಕು ದಿನಗಳಲ್ಲಿ ಬಿಕ್ಕಟ್ಟು ಬಗೆಹರಿದು ಆಯವ್ಯಯ ಅನುಮೋದನೆಗೊಂಡಿತ್ತು. 1995-96ರ ಕ್ಲಿಂಟನ್ ಅವಧಿಯಲ್ಲಿ ಹೆಚ್ಚೆಂದರೆ ಸರ್ಕಾರ 21 ದಿನಗಳವರೆಗೆ ಸ್ಥಗಿತಗೊಂಡಿತ್ತು. ಈ ಬಾರಿ ಆ ದಾಖಲೆ ಮುರಿದು ಬಿಕ್ಕಟ್ಟು ಮುಂದುವರಿದಿದೆ ಮತ್ತು ಜನರಲ್ಲಿ ಆತಂಕ ಉಂಟು ಮಾಡಿದೆ.

ನಿಮಗೆ ಗೊತ್ತಿರುವ ಹಾಗೆ, ಚುನಾವಣೆಯ ಸಮಯದಲ್ಲಿ ಟ್ರಂಪ್ ಬಹುಮುಖ್ಯವಾಗಿ ಪ್ರಸ್ತಾಪಿಸಿದ ಸಂಗತಿ ಎಂದರೆ ಅದು ವಲಸೆ ವಿಷಯ. ವಲಸಿಗರು ಅಮೆರಿಕನ್ನರ ನೌಕರಿಯನ್ನು ಕಬಳಿಸುತ್ತಿದ್ದಾರೆ, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಾರಣವಾಗಿದ್ದಾರೆ. ಅದರಲ್ಲೂ ಮೆಕ್ಸಿಕೊ ಬದಿಯಿಂದ ಬರುತ್ತಿರುವ ನುಸುಳುಕೋರರು ಮಾದಕ ವಸ್ತುಗಳನ್ನು ಗಡಿಯೊಳಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳನ್ನು ಟ್ರಂಪ್ ಮಾಡಿದ್ದರು ಮತ್ತು ತಾವು ಅಧಿಕಾರಕ್ಕೆ ಬಂದರೆ ಕಠಿಣ ವಲಸೆ ನೀತಿ ಜಾರಿಗೆ ತರುವುದಾಗಿ ಹೇಳಿದ್ದರು. ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂಬುದು ಟ್ರಂಪ್ ಪುನರುಕ್ತಿಯಾಗಿತ್ತು. ಟ್ರಂಪ್ ಈ ಕುರಿತು ಮಾತನಾಡಿದ್ದನ್ನು ಕೇಳಿದವರಿಗೆ ಅಮೆರಿಕದ ಸಕಲ ಸಮಸ್ಯೆಗಳಿಗೂ ಮೆಕ್ಸಿಕೊ ಗಡಿಯ ತಡೆಗೋಡೆಯೇ ಪರಿಹಾರ ಎನಿಸಿದ್ದರೆ ಅಚ್ಚರಿಯಿಲ್ಲ.

ಟ್ರಂಪ್ ಅಧಿಕಾರಕ್ಕೆ ಬಂದ ತರುವಾಯ ವಿವಿಧ ವಾಣಿಜ್ಯ ಒಪ್ಪಂದಗಳ ಕುರಿತಾಗಿ ತಾವು ಪ್ರತಿಪಾದಿಸಿದ್ದ ನಿಲುವನ್ನು ಜಾರಿಗೆ ತಂದರು. ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದರು. 11 ರಾಷ್ಟ್ರಗಳ ಜೊತೆಗಿನ ವಾಣಿಜ್ಯ ಒಪ್ಪಂದ ಟಿ.ಪಿ.ಪಿ ನಿಯಮಗಳನ್ನು ಮರು ಚರ್ಚೆಗೆ ಒಳಪಡಿಸಿದರು. ಚೀನಾದ ಸರಕುಗಳಿಗೆ ಸುಂಕ ಹೆಚ್ಚಿಸಿ ವಾಣಿಜ್ಯ ಕದನಕ್ಕೆ ದಾರಿ ಮಾಡಿದರು. ನೆರೆ ರಾಷ್ಟ್ರಗಳೊಂದಿಗಿನ ಮುಕ್ತ ವಾಣಿಜ್ಯ ಒಪ್ಪಂದಕ್ಕೆ (NAFTA) ತಿದ್ದುಪಡಿ ತಂದರು. ಕಳೆದ ವರ್ಷ ನವೆಂಬರಿನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ನೂತನ ಒಪ್ಪಂದವೊಂದಕ್ಕೆ ಕೆನಡಾ-ಮೆಕ್ಸಿಕೊ-ಅಮೆರಿಕ ಸಹಿ ಹಾಕಿದವು. ಆ ಮೂಲಕ ಕೆನಡಾ ಮಾರುಕಟ್ಟೆಯ ಮೇಲೆ ಅಮೆರಿಕ ಹೆಚ್ಚಿನ ಹಿಡಿತ ಸಾಧಿಸಿದಂತಾಯಿತು. ಆದರೆ, ಮೆಕ್ಸಿಕೊ ತಡೆಗೋಡೆ ಯೋಜನೆ ಕುರಿತು ಅವರು ಹೆಚ್ಚೇನೂ ಮಾಡಲಾಗಿಲ್ಲ.

ಅಮೆರಿಕ– ಮೆಕ್ಸಿಕೊ ಗಡಿ 1954 ಮೈಲುಗಳಷ್ಟು ಉದ್ದವಿದೆ. ಆ ಪೈಕಿ ಕ್ಯಾಲಿಫೋರ್ನಿಯಾ, ಆರಿಜೋನ, ನ್ಯೂಮೆಕ್ಸಿಕೊ ಮತ್ತು ಟೆಕ್ಸಾಸ್ ಭಾಗದ 650 ಮೈಲು ಉದ್ದಕ್ಕೆ ಇದಾಗಲೇ ತಾತ್ಕಾಲಿಕ ಬೇಲಿ ಇದೆ. ಹಾಗಾಗಿ 864 ಮೈಲು ಉದ್ದದ ನೂತನ ತಡೆಗೋಡೆಗೆ ಮತ್ತು 1163 ಮೈಲು ವಿಸ್ತಾರದ ಬದಲಿ ಗೋಡೆಗೆ ಅಂದಾಜು 3,300 ಕೋಟಿ ಡಾಲರ್ (₹2.31 ಲಕ್ಷ ಕೋಟಿ) ಹಣ ಬೇಕಾಗಲಿದೆ ಎಂಬುದನ್ನು ಟ್ರಂಪ್ ಆಡಳಿತ ಹೇಳುತ್ತಿದೆ. ಆ ಪೈಕಿ 570 ಕೋಟಿ ಡಾಲರ್‌ (₹39,900 ಕೋಟಿ) ಹಣವನ್ನು ಈ ವರ್ಷದ ಆಯವ್ಯಯದಲ್ಲಿ ಕೋರಿದೆ. ಬಜೆಟ್ ಅನುಮೋದನೆಗೆ ಇದೇ ತೊಡಕಾಗಿ ನಿಂತಿದೆ.

ಸಾಮಾನ್ಯವಾಗಿ, ಇಡಿಯಾಗಿ ಆಯವ್ಯಯವನ್ನು ಅನುಮೋದಿಸಲು ಸಾಧ್ಯವಾಗದಾಗ, ಅದನ್ನು ವಿಭಾಗಗಳಾಗಿ ಪ್ರತ್ಯೇಕಿಸಿ, ಸಾಧಕ ಬಾಧಕ ಚರ್ಚಿಸಿ ಹಂತಹಂತವಾಗಿ ಕಾಂಗ್ರೆಸ್ ಒಪ್ಪಿಗೆ ಸೂಚಿಸುತ್ತದೆ. 2019ರ ಆರ್ಥಿಕ ವರ್ಷದ ಆಯವ್ಯಯವನ್ನು ಅನುಮೋದಿಸಲು ಅಮೆರಿಕ ಕಾಂಗ್ರೆಸ್ ಈ ಕ್ರಮವನ್ನು ಅನುಸರಿಸಿದೆ. ಆದರೆ ಮೆಕ್ಸಿಕೊ ತಡೆಗೋಡೆಗೆ ಸಂಬಂಧಿಸಿದ ವಿಷಯ ಡಿಸೆಂಬರ್‌ವರೆಗೂ ಬಗೆಹರಿಯಲಿಲ್ಲ. ಎರಡೂ ಬಣಗಳು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಬಿಕ್ಕಟ್ಟು ಉಲ್ಬಣಗೊಂಡಿತು.

ಇತ್ತ ‘ಮೆಕ್ಸಿಕೊ ತಡೆಗೋಡೆ’ ವಿಷಯವನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿರುವ ಟ್ರಂಪ್ ಅವರಲ್ಲಿ, ತಡೆಗೋಡೆ ನಿರ್ಮಾಣದ ವೆಚ್ಚ ಭರಿಸುವವರು ಯಾರು ಎಂಬ ಪ್ರಶ್ನೆಗೆ ನಿಖರ ಉತ್ತರವಿಲ್ಲ. ಮೊದಮೊದಲು ‘ತಡೆಗೋಡೆಯ ಪೂರ್ಣ ವೆಚ್ಚವನ್ನು ಮೆಕ್ಸಿಕೊ ನೀಡುತ್ತದೆ’ ಎಂದು ಕಾಲರ್ ಏರಿಸಿಕೊಂಡು ಹೇಳುತ್ತಿದ್ದ ಟ್ರಂಪ್, ನಂತರ ‘ಅಕ್ರಮ ವಲಸೆಯಿಂದಾಗಿ ಅಮೆರಿಕಕ್ಕೆ ಪ್ರತಿವರ್ಷ 25,000 ಕೋಟಿ ಡಾಲರ್ (₹17.50 ಲಕ್ಷ ಕೋಟಿ) ನಷ್ಟವಾಗುತ್ತಿದೆ. ಗೋಡೆ ನಿರ್ಮಿಸಿದರೆ ತಗಲುವ ವೆಚ್ಚ ಕೇವಲ ಎರಡು ತಿಂಗಳ ಅಮೆರಿಕದ ನಷ್ಟದ ಬಾಬ್ತು’ ಎಂದು ಹೇಳುತ್ತಾ ಬಂದರು. ಈ ಬಗ್ಗೆ ಟೀಕೆ ಕೇಳಿಬಂದಾಗ ‘ಅಮೆರಿಕ-ಮೆಕ್ಸಿಕೊ-ಕೆನಡಾ’ ನಡುವಿನ ನೂತನ ವಾಣಿಜ್ಯ ಕರಾರಿನ ಭಾಗವಾಗಿ ಗೋಡೆ ನಿರ್ಮಾಣದ ವೆಚ್ಚ ಬರುತ್ತದೆ ಎಂದು ಹೇಳಿದರು. ಹಾಗಾಗಿ ವೆಚ್ಚ ಕುರಿತಾದ ದ್ವಂದ್ವ ಮುಂದುವರಿದಿದೆ.

ಒಟ್ಟಿನಲ್ಲಿ, 1988ರ ಚುನಾವಣೆಯಲ್ಲಿ ಸೀನಿಯರ್ ಬುಷ್ ಹೇಗೆ ತೆರಿಗೆ ಕಡಿತವನ್ನು ಆದ್ಯತೆಯಾಗಿಸಿಕೊಂಡು ‘ರೀಡ್ ಮೈ ಲಿಪ್ಸ್- ನೋ ನ್ಯೂ ಟ್ಯಾಕ್ಸ್’ ಎಂಬ ಘೋಷಣೆ ಬಳಸಿದ್ದರೋ, ಹಾಗೆ ಟ್ರಂಪ್ ಮೆಕ್ಸಿಕೊ ತಡೆಗೋಡೆಯ ವಿಷಯ ಬಳಸಿದರು. ಚುನಾವಣೆಯ ಸಾರ್ವಜನಿಕ ಸಭೆಗಳಲ್ಲಿ ‘ಮೆಕ್ಸಿಕೊ ತಡೆಗೋಡೆಗೆ ಹಣ ಯಾರು ನೀಡುತ್ತಾರೆ?’ ಎಂದು ಟ್ರಂಪ್ ಕೇಳಿದರೆ, ಅದಕ್ಕೆ ಅವರ ಅನುಯಾಯಿಗಳು ‘ಮೆಕ್ಸಿಕೊ’ ಎಂದು ಉನ್ಮಾದದಲ್ಲಿ ಉತ್ತರಿಸುತ್ತಿದ್ದರು. ಒಂದು ವೇಳೆ ಅವರು ತಡೆಗೋಡೆ ನಿರ್ಮಿಸಲು ಸೋತರೆ 2020ರ ಚುನಾವಣೆ ಕಠಿಣವಾಗಬಹುದು. ‘ರೀಡ್ ಮೈ ಲಿಪ್ಸ್’ ಘೋಷಣೆ ಸೀನಿಯರ್ ಬುಷ್ ವಿರುದ್ಧ ಕೆಲಸ ಮಾಡಿದಂತೆ, ಮೆಕ್ಸಿಕೊ ತಡೆಗೋಡೆ ಟ್ರಂಪ್ ಇನ್ನೊಂದು ಅವಧಿಯ ಕನಸಿಗೆ ಅಡ್ಡಿಯಾಗಬಹುದು. ಹಾಗಾಗಿಯೇ ಈ ಒತ್ತಡದ ಮೂಲಕ ಟ್ರಂಪ್ 2020ರ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಪ್ರಸ್ತುತ ಬಿಕ್ಕಟ್ಟಿಗೆ ಮಾತುಕತೆ ಉಪಶಮನವಾಗುತ್ತದೋ, ತುರ್ತುಪರಿಸ್ಥಿತಿಯೆಂಬ ಕೊಡಲಿ ಏಟು ಅನಿವಾರ್ಯವಾಗುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT