ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುರಣನ | ಭ್ರಷ್ಟಾಚಾರ ಸಮರವೂ ಜಾತಿ‘ವಾರು’ ಕಾಣಾ...

ಭ್ರಷ್ಟಾಚಾರ ತನಿಖೆಯ ವಿಚಾರದಲ್ಲಿ ಪಕ್ಷಪಾತಿ ಧೋರಣೆಯು ಭ್ರಷ್ಟಾಚಾರದಷ್ಟೇ ಅಪಾಯಕಾರಿ
Published : 21 ಆಗಸ್ಟ್ 2024, 0:22 IST
Last Updated : 21 ಆಗಸ್ಟ್ 2024, 0:22 IST
ಫಾಲೋ ಮಾಡಿ
Comments

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಕಳೆದುಕೊಂಡ ತಮ್ಮ ಭೂಮಿಗೆ ಪರಿಹಾರವಾಗಿ ನಿವೇಶನಗಳನ್ನು ಪಡೆಯುವಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ- ಜೆಡಿಎಸ್‌ನವರು ಮಾಡಿರುವ ಆರೋಪದ ಸುತ್ತ ಹುಟ್ಟಿಕೊಂಡಿರುವ ವಿವಾದದ ಸುತ್ತ ಪ್ರಶ್ನೆಯೊಂದು ಎದ್ದಿದೆ. ಇದು, ವಿವಾದದ ಸಾಮಾಜಿಕ ಆಯಾಮಕ್ಕೆ ಸಂಬಂಧಿಸಿದ ಪ್ರಶ್ನೆ.

ಕರ್ನಾಟಕದಲ್ಲಿ ನಡೆಯುತ್ತಿರುವುದು ನಿಜಕ್ಕೂ ಭ್ರಷ್ಟಾಚಾರ ವಿರೋಧಿ ಹೋರಾಟವೇ ಅಥವಾ ಇದೊಂದು ಜಾತಿ ಸಂಘರ್ಷವೇ? ಇದು ಪ್ರಶ್ನೆ. ಇಲ್ಲಿರುವುದು ಜಾತಿಯ ವಿಷಯ ಎನ್ನುವವರು ವಾದಿಸುವ ಪ್ರಕಾರ, ಸಿದ್ದರಾಮಯ್ಯ ಅವರು ಹಿಂದುಳಿದ ಜಾತಿಗೆ ಸೇರಿದವರಾದ ಕಾರಣ, ಅವರು ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದ ಬಲಾಢ್ಯ ಜಾತಿಯವರು ಇಲ್ಲಸಲ್ಲದ ಭ್ರಷ್ಟಾಚಾರದ ಆರೋಪ ಹೊರಿಸಿ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಈ ಅಭಿಪ್ರಾಯವನ್ನು ಕೇಳಿಸಿಕೊಂಡ ಯಾರಿಗಾದರೂ ಗಂಭೀರ ಆರೋಪಗಳು ಬಂದಾಗಲೆಲ್ಲ ಜಾತಿಯ ಅಸ್ತ್ರವನ್ನು ಬಳಸಿಕೊಂಡು ಪಾರಾಗಲು ಪ್ರಯತ್ನಿಸುವ ಭಾರತದ ರಾಜಕಾರಣಿಗಳ ಮಾಮೂಲಿ ಪ್ರಹಸನ ಕರ್ನಾಟಕದಲ್ಲೂ ನಡೆಯುತ್ತಿದೆ ಎಂದು ಅನ್ನಿಸಿ, ಇಡೀ ಪ್ರಶ್ನೆಯೇ ಕ್ಷುಲ್ಲಕ ಅನ್ನಿಸಬಹುದು.

ಈ ಕಾಲಕ್ಕೆ ಯಾವ ಪ್ರಶ್ನೆಯೂ ಕ್ಷುಲ್ಲಕವಲ್ಲ. ಹಾಗೆಂದು ಯಾವ ಉತ್ತರವೂ ಪರಿಪೂರ್ಣ ಅಲ್ಲ. ಮಾತ್ರವಲ್ಲ, ಇಂತಹ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಬರುವುದು ಮತ್ತಷ್ಟು ಪ್ರಶ್ನೆಗಳೇ ಆಗಿರುತ್ತವೆ. ಇಷ್ಟನ್ನು ಒಪ್ಪಿಕೊಂಡು ಮೇಲಿನ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳೋಣ.

ಮೊದಲಿಗೆ, ಕರ್ನಾಟಕದಲ್ಲಿ ನಡೆಯುತ್ತಿರುವುದು ನಿಜಕ್ಕೂ ಒಂದು ಭ್ರಷ್ಟಾಚಾರ ವಿರೋಧಿ ಹೋರಾಟವೇ ಎನ್ನುವ ಪ್ರಶ್ನೆ. ಭಾರತದ ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ಅಸಲಿಗೆ ಭ್ರಷ್ಟಾಚಾರದ ಬಗ್ಗೆ ಇರುವ ಧೋರಣೆಯೇ ಅಸಂಗತ. ಇಂದಿನ ರಾಜಕೀಯದಲ್ಲಿ ಚುನಾವಣೆ ಗೆಲ್ಲಲು ಎಲ್ಲಾ ಪಕ್ಷಗಳೂ (ಎಲ್ಲಾ ಪಕ್ಷಗಳು ಎಂದರೆ ಎಲ್ಲಾ ಪಕ್ಷಗಳೂ) ವಿಪರೀತ ದುಡ್ಡು ಖರ್ಚು ಮಾಡುತ್ತವೆ ಅಂತ ಎಲ್ಲರಿಗೂ ಗೊತ್ತು. ಈ ವಿಪರೀತ ಖರ್ಚಿಗೆ ಬೇಕಾದ ದುಡ್ಡನ್ನು ಎಲ್ಲಾ ಪಕ್ಷಗಳೂ ಭ್ರಷ್ಟಾಚಾರದ ಮೂಲಕವೇ ಸಂಪಾದಿಸುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಿರುವಾಗ ಒಂದು ರಾಜಕೀಯ ಪಕ್ಷವು ಇನ್ನೊಂದು ರಾಜಕೀಯ ಪಕ್ಷದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದು ಎಂದರೆ ಏನರ್ಥ? ಅರ್ಥವನ್ನು ಈ ಕೆಳಗಿನಂತೆ ವಿವರಿಸಬಹುದು:

  1. ಭ್ರಷ್ಟಾಚಾರ ವಿರೋಧಿ ಹೋರಾಟ ಎಂದರೆ, ಹಿಂದೆ ಭ್ರಷ್ಟಾಚಾರ ಮಾಡಿಯೂ ಸಿಕ್ಕಿಹಾಕಿಕೊಳ್ಳದವರು ಈಗ ಭ್ರಷ್ಟಾಚಾರ ಮಾಡಿ ಸಿಕ್ಕಿ ಬಿದ್ದವರ ವಿರುದ್ಧ ನಡೆಸುವ ಹೋರಾಟ.

  2. ಭ್ರಷ್ಟಾಚಾರ ವಿರೋಧಿ ಹೋರಾಟ ಎಂದರೆ, ಹಿಂದೆ ಅಧಿಕಾರದಲ್ಲಿದ್ದಾಗ ವಿಪರೀತ ಭ್ರಷ್ಟಾಚಾರ ಮಾಡಿದವರು, ಈಗ ಅಧಿಕಾರದಲ್ಲಿರುವವರು ತಮಗಿಂತ ಭ್ರಷ್ಟಾಚಾರದಲ್ಲಿ ಏನೇನೂ ಕಡಿಮೆ ಇಲ್ಲ ಎಂದು ಜನರನ್ನು ನಂಬಿಸಲು ಬೇಕಾಬಿಟ್ಟಿಯಾಗಿ ಆರೋಪಗಳನ್ನು ಮಾಡುವ ಹೋರಾಟ.

ಕರ್ನಾಟಕದಲ್ಲಿ ಈಗ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ನಡೆಸುತ್ತಿರುವ ಹೋರಾಟವು ಒಂದೆಡೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿದೆ ಎನ್ನಲಾದ ಎಲ್ಲಾ ರೀತಿಯ ಭ್ರಷ್ಟಾಚಾರಗಳಿಗೆ ಸಂಬಂಧಿಸಿದ್ದು. ಮೇಲೆ ವಿವರಿಸಿದಂತೆ ಬಿಜೆಪಿಯು ಇದನ್ನು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನ್ನ ಕರಾಳ ಚರಿತ್ರೆಯ ಹೊರತಾಗಿಯೂ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿಗೆ ತಗಲಿರುವ ಭ್ರಷ್ಟಾಚಾರದ ಕಳಂಕವು ಗಂಗಾ ನದಿಯ ಅಷ್ಟೂ ನೀರನ್ನು ತಂದು ಸುರಿದುಕೊಂಡರೂ ತೊಳೆದುಹೋಗಲಾರದಷ್ಟಿದೆ. ಇದರಿಂದ ಪಾರಾಗಲು ಇರುವ ಏಕೈಕ ಮಾರ್ಗ ಎಂದರೆ, ಕಾಂಗ್ರೆಸ್ ತನಗಿಂತ ಹೆಚ್ಚು ಭ್ರಷ್ಟ ಪಕ್ಷ ಅಂತ ಚಿತ್ರಿಸುವುದು. ಬಿಜೆಪಿ ಇದನ್ನು ಮಾಡುತ್ತಿದೆ. ರಾಜಕೀಯ ಇರುವುದೇ ಹಾಗೆ. ಇದನ್ನು ಆಕ್ಷೇಪಿಸಲಾಗದು. ತನ್ನ ಹದಿನೈದು ತಿಂಗಳ ಆಡಳಿತದಲ್ಲಿ ಬಿಜೆಪಿಗೆ ಇದನ್ನು ಮಾಡಲು ಅವಕಾಶ ಮಾಡಿಕೊಟ್ಟಿರುವ ಕಾಂಗ್ರೆಸ್ ಎದೆ ಮುಟ್ಟಿಕೊಂಡು ನೋಡಬೇಕು.

ಸಿದ್ದರಾಮಯ್ಯ ಅವರ ಕುಟುಂಬವು ಪರಿಹಾರವಾಗಿ ನಿವೇಶನಗಳನ್ನು ಪಡೆದ ಪ್ರಕರಣವನ್ನು ಕೇಂದ್ರೀಕರಿಸಿಕೊಂಡು ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಈಗ ನಡೆಸುತ್ತಿರುವ ಹೋರಾಟವನ್ನು ಮೇಲಿನಂತೆ ಸರಳವಾಗಿ ಅರ್ಥೈಸಲು ಸಾಧ್ಯವಿಲ್ಲ. ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟವಷ್ಟೇ ಅಲ್ಲ. ಇದರ ವ್ಯಾಪ್ತಿ, ಉದ್ದೇಶ ಬೇರೆಯೇ ಇದ್ದಂತಿದೆ. ಇದರ ಸೂತ್ರಧಾರಿಗಳು, ಪಾತ್ರಧಾರಿಗಳು ಬೇರೆಲ್ಲೋ ಇರುವಂತಿದೆ. ಇದು ನ್ಯಾಯಾನ್ಯಾಯಗಳನ್ನು ಪ್ರತ್ಯೇಕಿಸಬೇಕಿರುವ ಪ್ರಕರಣಕ್ಕಿಂತ ಹೆಚ್ಚಾಗಿ ನ್ಯಾಯಾನ್ಯಾಯಗಳ ಪ್ರಶ್ನೆಯನ್ನು ರಾಜಕೀಯದಿಂದ ಪ್ರತ್ಯೇಕಿಸಿ ನೋಡಬೇಕಿರುವ ಪ್ರಶ್ನೆಯಾಗಿ ಕಾಡುತ್ತದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಳೆದುಕೊಂಡ ಭೂಮಿಗೆ ಮುಖ್ಯಮಂತ್ರಿಯವರ ಕುಟುಂಬ ಪರಿಹಾರ ರೂಪದಲ್ಲಿ ಸೈಟುಗಳನ್ನು ಪಡೆದದ್ದು ಅಕ್ರಮವಲ್ಲ; ಆದರೆ ಪಡೆದುಕೊಂಡ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎನ್ನಲಾಗುತ್ತಿದೆ. ಅಕ್ರಮ ಎಂದರೆ ಲೋಪವೋ, ಉಲ್ಲಂಘನೆಯೋ, ಅಧಿಕಾರ ದುರುಪಯೋಗವೋ, ಭ್ರಷ್ಟಾಚಾರವೋ, ಅಕ್ರಮ ಎಸಗಿದವರು ಯಾರು, ಸಂತ್ರಸ್ತರು ಯಾರು... ಎಲ್ಲವೂ ಗೋಜಲುಗೋಜಲಾಗಿವೆ. ಈ ಹೋರಾಟದ ಗುರಿ ಭ್ರಷ್ಟಾಚಾರ ತಡೆಯುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು ಎನ್ನುವ ಹಾದಿಯಲ್ಲಿ ಬಿಜೆಪಿಯ ಪ್ರತಿರೋಧ ಸಾಗಿರುವುದರಿಂದ, ಕರ್ನಾಟಕದಲ್ಲಿ ನಿಜಕ್ಕೂ ನಡೆಯುತ್ತಿರುವುದು ಭ್ರಷ್ಟಾಚಾರ ವಿರೋಧಿ ಹೋರಾಟವೇ ಎನ್ನುವ ಪ್ರಶ್ನೆ ಪ್ರಸ್ತುತವಾಗಿದೆ.

ಈಗ ಎರಡನೆಯ ಪ್ರಶ್ನೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಹೆಸರಲ್ಲಿ ದುರ್ಬಲ ಜಾತಿಗಳ ನಾಯಕರನ್ನು ರಾಜಕೀಯವಾಗಿ ತುಳಿಯಲಾಗುತ್ತಿದೆಯೇ?

ಭ್ರಷ್ಟಾಚಾರಕ್ಕೆ ಜಾತಿ ಇಲ್ಲ. ಒಪ್ಪಿಕೊಳ್ಳೋಣ. ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಜಾತಿ ಅಡ್ಡಿಬರಬಾರದು. ಒಪ್ಪಿಕೊಳ್ಳೋಣ. ಇಷ್ಟನ್ನು ಒಪ್ಪಿಕೊಂಡು, ಭ್ರಷ್ಟಾಚಾರ ವಿರೋಧಿ ಹೋರಾಟದ ಹೆಸರಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ವಿರೋಧಿ ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುವ ಸೂಕ್ಷ್ಮ ಸತ್ಯಗಳನ್ನು ನೋಡೋಣ.

ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ದೂರೊಂದನ್ನು ಪಡೆದು, ತರಾತುರಿಯಲ್ಲಿ ಪರಿಶೀಲಿಸಿ ಶರವೇಗದಲ್ಲಿ ತನಿಖೆಗೆ ಅನುಮತಿ ನೀಡಿದ ಅದೇ ರಾಜ್ಯಪಾಲರು ರಾಜ್ಯದ ಇತರ ನಾಲ್ವರು ನಾಯಕರ (ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಮತ್ತು ಮಂತ್ರಿಗಳಾಗಿದ್ದ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ) ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಅನುಮತಿಯನ್ನು ಈ ತನಕ ನೀಡಿಲ್ಲ ಎನ್ನುವುದು ಸತ್ಯ ತಾನೇ?

ಎಂದರೆ, ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳು (ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಖಾಸಗಿ ವ್ಯಕ್ತಿ ಎಂಬ ವ್ಯಾಖ್ಯಾನ ಇದೆ) ದೂರು ನೀಡಿದರೂ ಸಾಕು, ರಾಜ್ಯಪಾಲರು ತತ್‌ಕ್ಷಣ ಎಚ್ಚೆತ್ತುಕೊಂಡು ಮಿಂಚಿನ ಕಾರ್ಯಾಚರಣೆ ನಡೆಸಿ ತನಿಖೆಗೆ ಅನುಮತಿ ನೀಡುತ್ತಾರೆ. ಅದೇವೇಳೆ ಉಳಿದ ನಾಲ್ವರು ನಾಯಕರ ಪ್ರಕರಣಗಳಲ್ಲಿ ಈ ರಾಜ್ಯದ ಅಧಿಕೃತ ಮತ್ತು ವಿಶ್ವಾಸಾರ್ಹ ತನಿಖಾ ಸಂಸ್ಥೆಯಾದ ಲೋಕಾಯುಕ್ತವೇ ಮನವಿ ಮಾಡಿಕೊಂಡರೂ ಸುಮ್ಮನಿದ್ದಾರೆ ಎನ್ನುವುದು ಸತ್ಯ ತಾನೇ?

ರಾಜ್ಯಪಾಲರು ಅನುಮತಿ ನೀಡಿದ ಪ್ರಕರಣದಲ್ಲಿ, ಆಪಾದನೆ ಎದುರಿಸುತ್ತಿರುವ ನಾಯಕ ಹಿಂದುಳಿದ ಜಾತಿಗೆ ಸೇರಿದವರು. ಅನುಮತಿ ನೀಡದೇ ಉಳಿಸಿಕೊಂಡ ಪ್ರಕರಣಗಳಲ್ಲಿ ಆಪಾದಿತರು ಬಲಾಢ್ಯ ಜಾತಿಗಳಿಗೆ ಸೇರಿದವರು ಎನ್ನುವುದು ಸತ್ಯ ತಾನೇ?

ಈಗ ಮುಖ್ಯ ಪ್ರಶ್ನೆ. ಒಂದು ವೇಳೆ, ರಾಜ್ಯಪಾಲರು ಅನುಮತಿ ನೀಡದೇ ಇರುವ ನಾಲ್ಕು ಪ್ರಕರಣಗಳಲ್ಲಿ ಆಪಾದಿತರಾಗಿದ್ದವರು ಹಿಂದುಳಿದ ಜಾತಿಗಳಿಗೆ ಸೇರಿದ್ದು, ರಾಜ್ಯಪಾಲರು ತರಾತುರಿಯಿಂದ ಖಾಸಗಿ ಅರ್ಜಿಯ ಮೇಲೆ ಅನುಮತಿ ನೀಡಿದ ಪ್ರಕರಣದಲ್ಲಿ ಅಪಾದಿತರಾಗಿದ್ದವರೇನಾದರೂ ಪ್ರಬಲ ಜಾತಿಗೆ ಸೇರಿದ ನಾಯಕನಾಗಿದ್ದಿದ್ದರೆ ಆಗ ಪರಿಸ್ಥಿತಿ ಹೇಗಿರುತ್ತಿತ್ತು? ಹೇಗಿರುತ್ತಿತ್ತು ಎಂದರೆ, ಆಗ ರಾಜಭವನದ ಗೇಟು ಕಾಯಲು ಮಿಲಿಟರಿಯವರೇ ಬರಬೇಕಾಗುತ್ತಿತ್ತು.

ಭ್ರಷ್ಟಾಚಾರ ಎಷ್ಟು ಅಪಾಯಕಾರಿಯೋ ಭ್ರಷ್ಟಾಚಾರದ ತನಿಖೆಯ ವಿಚಾರದಲ್ಲಿ ಪಕ್ಷಪಾತಿ ಧೋರಣೆಯೂ ಅಷ್ಟೇ ಅಪಾಯಕಾರಿ. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂದಾಗ ಅದರಲ್ಲಿ ನ್ಯಾಯ ಇದೆ. ಆದರೆ, ಬಲಾಢ್ಯ ಜಾತಿಗಳಿಗೆ ಸೇರಿದವರಾದರೆ ಎಲ್ಲರ ಕಣ್ಣೆದುರಿಗೆ ಆನೆ ಕದ್ದರೂ ಅದನ್ನು ಪರಾಂಬರಿಸಿ ನಿರ್ಣಯ ಮಾಡಬೇಕು, ದುರ್ಬಲ ವರ್ಗಗಳಿಗೆ ಸೇರಿದವರು ಅಡಿಕೆ ಕದ್ದಿರಬಹುದು ಅಂತ ಯಾರೋ ಅನುಮಾನ ವ್ಯಕ್ತಪಡಿಸಿದರೂ ಸಾಕು, ಹಿಂದೆ ಮುಂದೆ ನೋಡದೆ ನಿರ್ಣಯಗಳಾಗುತ್ತವೆ ಎಂದಾದರೆ ಜಾತಿಯ ಪ್ರಶ್ನೆ ಮುನ್ನೆಲೆಗೆ ಬಂದೇ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT