ಶನಿವಾರ, ಜೂನ್ 6, 2020
27 °C
ಕೊನೆಯಾದ ಗುಲಾಮಗಿರಿಯ ಕೊರೊನಾ ಕಾಲದ ಅವತರಣಿಕೆ ಕಂಡಿರಾ?

ಅನುರಣನ | ‘ಅಂತರ’ ಕಾಲದ ನಕ್ಷತ್ರಿಕರು

ನಾರಾಯಣ ಎ. Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸಂಕಷ್ಟದ ನಡುವೆ ಇವನ್ನೆಲ್ಲಾ ನೋಡುತ್ತಿದ್ದರೆ, ಕೆಲವು ಪೌರಾಣಿಕ ಕಥಾಪಾತ್ರಗಳು ನೆನಪಾಗುತ್ತವೆ. ಇವನ್ನೆಲ್ಲಾ ಎಂದರೆ ಯಾವ್ಯಾವುವು? ಅದಕ್ಕೆ ಮೊದಲು ಪೌರಾಣಿಕ ಲೋಕಕ್ಕೆ ಹೋಗಿಬರೋಣ.

ಹರಿಶ್ಚಂದ್ರ ಕಾವ್ಯದ ನಕ್ಷತ್ರಿಕ. ರಾಜ ಹರಿಶ್ಚಂದ್ರನು ವಿಶ್ವಾಮಿತ್ರನಿಂದ ತಾನು ಪಡೆದಿರದ ಸಾಲ ತೀರಿಸಲು ರಾಜ್ಯವನ್ನು ಕಳೆದುಕೊಂಡು, ಪತ್ನಿ-ಪುತ್ರನನ್ನು ಮಾರಿ, ಕೊನೆಗೆ ತನ್ನನ್ನೇ ತಾನು ಮಾರಿಕೊಳ್ಳುವ ದುಃಸ್ಥಿತಿ ತಲುಪಿರುತ್ತಾನೆ. ದುಡ್ಡು ವಸೂಲಿಗೆಂದು ವಿಶ್ವಾಮಿತ್ರನಿಂದ ಕಳುಹಿಸಲ್ಪಟ್ಟ ಶಿಷ್ಯ ನಕ್ಷತ್ರಿಕ, ಉಟ್ಟ ತುಂಡು ಬಟ್ಟೆ ಹೊರತು ಇನ್ನೇನನ್ನೂ ಹೊಂದಿರದ ಹರಿಶ್ಚಂದ್ರನ ಬಳಿ ‘ನಿನ್ನ ಹಿಂದೆ ಸುತ್ತಾಡಿದ್ದಕ್ಕೆ ನನಗೆ ಶುಲ್ಕ ಕೊಡು’ ಎಂದು ಪೀಡಿಸುತ್ತಾನೆ.

ನಕ್ಷತ್ರಿಕನಿಗೆ ಸತ್ಯಪರೀಕ್ಷೆಯ ನೆಪವಾದರೂ ಇತ್ತು. ಇನ್ನೊಂದು ಪಾತ್ರದ ಕತೆಗೆ ಅದೂ ಇಲ್ಲ. ಮಹಾಭಾರತದ ಆದಿಪರ್ವದಲ್ಲಿ ಕಾಣಿಸಿಕೊಳ್ಳುವ ವೃದ್ಧ ಬ್ರಾಹ್ಮಣನ ಪಾತ್ರ ಅದು. ಭೀಷ್ಮ ಅಪಹರಿಸಿಕೊಂಡು ಬಂದ ಕಾಶೀ ದೇಶದ ರಾಜಕುಮಾರಿ ಅಂಬೆ, ತಾನು ಸೌಭದ ದೊರೆ ಸಾಲ್ವನನ್ನು ಪ್ರೇಮಿಸಿದ್ದೆ ಎಂದು ತಿಳಿಸುತ್ತಾಳೆ. ಆಗ ಭೀಷ್ಮ ಆಕೆಯನ್ನು ಈ ವೃದ್ಧನ ಜತೆ ಸಾಲ್ವನಲ್ಲಿಗೆ ಕಳುಹಿಸುತ್ತಾನೆ. ಸಾಲ್ವನು ಅಂಬೆಯನ್ನು ತಿರಸ್ಕರಿಸಿ ಹೊರಗಟ್ಟುತ್ತಾನೆ. ಅವಮಾನ, ಆಯಾಸ, ಅನಾಥಪ್ರಜ್ಞೆ ಮತ್ತು ಅಸಹಾಯಕತೆಯಿಂದ ದಿಕ್ಕುತೋಚದೆ ಆ ಒಂಟಿ ಹೆಣ್ಣು ಗೋಳಿಡುತ್ತಿದ್ದ ಸಂದರ್ಭದಲ್ಲಿ ವೃದ್ಧ ಬ್ರಾಹ್ಮಣ ‘ನಿನ್ನನ್ನು ಇಲ್ಲಿಗೆ ಕರೆತಂದದ್ದಕ್ಕೆ ನನಗೆ ಸೂಕ್ತ ಸಂಭಾವನೆ ನೀಡಿಯೇ ತೀರಬೇಕು’ ಎಂದು ಆಕೆಯನ್ನು ಕಾಡುತ್ತಾನೆ.

ನೊಂದವರನ್ನು ನೋಯಿಸುವ, ಅಸಹಾಯಕರನ್ನು ಪೀಡಿಸುವ ಹರಿಶ್ಚಂದ್ರ ಕಾವ್ಯದ ನಕ್ಷತ್ರಿಕ ಮತ್ತು ಮಹಾಭಾರತದ ವೃದ್ಧ ಬ್ರಾಹ್ಮಣ ಪಾತ್ರಗಳ ಅಮಾನವೀಯ ಸಂವೇದನಾಶೂನ್ಯತೆಯ ಇಪ್ಪತ್ತೊಂದನೆಯ ಶತಮಾನದ ಅವತರಣಿಕೆ ಹೇಗಿರುತ್ತದೆ ಮತ್ತು ಎಷ್ಟಿರುತ್ತದೆ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ವಲಸೆ ಕಾರ್ಮಿಕರ ವಿಚಾರದಲ್ಲಿ ತೋರುತ್ತಿರುವ ವರ್ತನೆಯಲ್ಲಿ ನಾವೀಗ ಕಾಣಬಹುದು. ಲಾಕ್‌ಡೌನ್ ಘೋಷಣೆಯಾದಂದಿನಿಂದ ಈ ಕ್ಷಣದವರೆಗೆ ಪ್ರಾಯಶಃ ಕೇರಳ ರಾಜ್ಯವೊಂದನ್ನುಳಿದು ಉಳಿದೆಡೆ ಈ ದೇಶ ಅಮಾಯಕ ಕಾರ್ಮಿಕರನ್ನು ನಡೆಸಿಕೊಂಡ ಬಗೆ ಇದೆಯಲ್ಲ, ಅದನ್ನು ಆಧುನಿಕ ಗುಲಾಮಗಿರಿ ಅಂತಲ್ಲದೆ ಇನ್ಯಾವ ಹೆಸರಲ್ಲಿ ಕರೆಯುವುದು? ಗುಲಾಮಗಿರಿ ಎಂದೂ ಸಾಯುವುದಿಲ್ಲ, ಕೇವಲ ಅದರ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ ಅಂತ ಯಾರೋ ಹೇಳಿದ್ದು ಎಷ್ಟೊಂದು ಸತ್ಯ!

ನಲವತ್ತು ದಿನ ನರಕಸದೃಶ ಕಷ್ಟ ಅನುಭವಿಸಿ, ಬರಿಗೈಯಲ್ಲಿ ಊರು ಸೇರಲು ಹೊರಟಿದ್ದ ವಲಸೆ ಕಾರ್ಮಿಕರ ಬಳಿ ರಾಜ್ಯ ಸರ್ಕಾರ ಮೂರುಪಟ್ಟು ಟಿಕೆಟ್ ದರ ನೀಡಬೇಕೆಂದು ಸತಾಯಿಸುತ್ತದೆ. ವಿಷಯ ರಾಜಕೀಯ ರಂಪವಾಗಿ, ವಿರೋಧ ಪಕ್ಷವೊಂದು ಆ ಬಡಜೀವಗಳ ಪ್ರಯಾಣ ವೆಚ್ಚ ಭರಿಸಲು ಮುಂದಾದಾಗ ಸರ್ಕಾರ ನಿರ್ಧಾರ ಬದಲಿಸುತ್ತದೆ. ಕೊನೆಯಲ್ಲಿ, ಹೇಗೋ ಉಚಿತ ವ್ಯವಸ್ಥೆ ಆಯಿತು ಎನ್ನುವ ಅಂಶ, ಆರಂಭದಲ್ಲಿ ಮೂರುಪಟ್ಟು ದರ ವಿಧಿಸಿದ್ದರ ಗಂಭೀರತೆಯನ್ನು ಮರೆಮಾಚಬಾರದು. ಅದು ಕೆಎಸ್‌ಆರ್‌ಟಿಸಿಯ ನಿರ್ಧಾರ, ನಮಗೇನೂ ಗೊತ್ತೇ ಇರಲಿಲ್ಲ ಅಂತ ಸರ್ಕಾರ ಅಧಿಕೃತವಾಗಿ ಸುಳ್ಳು ಹೇಳಿದೆ. ಅನಧಿಕೃತ ಮಾಹಿತಿಯ ಪ್ರಕಾರ, ಕೇಂದ್ರದ ನೆರವು ದೊರೆಯದೆ ಮೊದಲೇ ದಿವಾಳಿಯೆದ್ದಿದ್ದ ಕರ್ನಾಟಕದ ಸ್ಥಿತಿ ಕೊರೊನಾದಿಂದ ಇನ್ನಷ್ಟು ಬಿಗಡಾಯಿಸಿತ್ತು. ಜತೆಗೆ ಕೊರೊನಾ ಪ್ಯಾಕೇಜ್ ಘೋಷಿಸಲು ಸಿದ್ಧತೆ ಬೇರೆ ನಡೆಯುತ್ತಿತ್ತು. ಹಾಗಾಗಿ, ಕಾರ್ಮಿಕರನ್ನು ಒಯ್ಯಲು ಬೇಕಾಗಿದ್ದ ಒಂದೆರಡು ಕೋಟಿಯಷ್ಟು ಮೊತ್ತಕ್ಕೆ ಕೂಡಾ ಸರ್ಕಾರ ಹಿಂದೆಮುಂದೆ ನೋಡಬೇಕಾಗಿತ್ತಂತೆ!

ವಾಟ್ಸ್‌ಆ್ಯಪ್‌ ಸಂದೇಶವೊಂದು ಇಲ್ಲಿ ತುಂಬಾ ಮಾರ್ಮಿಕವಾಗಿ ಪ್ರಸ್ತುತವಾಗುತ್ತದೆ: ‘ಸರ್ಕಾರದ ಬಳಿ ಹಣ ಇಲ್ಲವೇ? ಹಾಗಾದರೆ ಖರೀದಿಸಿದ ಶಾಸಕರಲ್ಲಿ ಕೆಲವ ರನ್ನು ಯಾಕೆ ಮಾರಬಾರದು?’ ವಿಶ್ವಗುರು ಭಾರತದಲ್ಲಿ ಯಾವುದಕ್ಕೆಲ್ಲಾ ಹಣ ಯಥೇಚ್ಛವಾಗಿ ಲಭಿಸುತ್ತದೆ, ಯಾವುದಕ್ಕೆ ಹಣದ ಅಡಚಣೆ ಎದುರಾಗುತ್ತದೆ ಎನ್ನುವುದು ಅದರದ್ದೇ ಆದ ಕತೆ ಹೇಳುತ್ತದೆ.

ಇನ್ನು ಕೇಂದ್ರ ಸರ್ಕಾರದ ನಕ್ಷತ್ರಿಕ ಧೋರಣೆ ಇನ್ನೊಂದು ರೀತಿಯದ್ದು. ತನ್ನ ಅಧೀನದಲ್ಲಿ ಇರುವ ರೈಲ್ವೆ ಜಾಲ ಬಳಸಿ, ಊರಿಗೆ ಹೊರಟ ವಲಸಿಗರ ನೆರವಿಗೆ ಧಾವಿಸುವುದರ ಬದಲು, ವೆಚ್ಚದಲ್ಲಿ ಪಾಲು ನೀಡಿ ಅಂತ ರಾಜ್ಯಗಳನ್ನು ಸತಾಯಿಸುತ್ತಿದೆ. ಅಂದರೆ, ಒಂದೆಡೆ ಮೊದಲೇ ಕೇಂದ್ರದಿಂದ ಬರಬೇಕಿದ್ದ ನೆರವು ಬಾರದೆ ಚಡಪಡಿಸುತ್ತಿರುವ ರಾಜ್ಯಗಳಿಗೆ ಪೀಡನೆ. ಇನ್ನೊಂದೆಡೆ, ಈ ಹಗ್ಗಜಗ್ಗಾಟದಿಂದ ಪ್ರಯಾಣ ವ್ಯವಸ್ಥೆ ಇನ್ನೂ ತಡವಾಗಿ ಕಾರ್ಮಿಕರಿಗೂ ಕಿರುಕುಳ.

ಈ ಮಧ್ಯೆ, ಕಾರ್ಮಿಕರ ಪ್ರಯಾಣಕ್ಕೆಂದು ಗೊತ್ತು ಮಾಡಿದ್ದ ರೈಲುಗಳನ್ನು ಕರ್ನಾಟಕ ಇದ್ದಕ್ಕಿದ್ದ ಹಾಗೆ ರದ್ದುಗೊಳಿಸುತ್ತದೆ. ದಿಕ್ಕೇ ತೋರದಾದ ವಲಸೆ ಕಾರ್ಮಿಕರು ಮತ್ತೆ ಬೀದಿಯಲ್ಲಿ ಅಂಡಲೆಯುತ್ತಾರೆ. ರೈಲು ರದ್ದುಪಡಿಸಿದ್ದು ಕಟ್ಟಡ ಕಾಮಗಾರಿಗಳನ್ನು ಪುನರಾರಂಭಿಸಲು ಕಾರ್ಮಿಕರ ಅವಶ್ಯಕತೆ ಇದೆ ಎನ್ನುವ ಕಾರಣಕ್ಕಂತೆ. ಕಾಮಗಾರಿ ಪ್ರಾರಂಭವಾಗಬೇಕು ಎಂಬುದೇನೋ ಸರಿ. ಹಾಗಂತ ಕಾರ್ಮಿಕರನ್ನು ಕೂಡಿಹಾಕುವುದೇ?

ಮತ್ತೆ ಹರಿಶ್ಚಂದ್ರ ಕಾವ್ಯ ನೆನಪಾಗುತ್ತದೆ. ಕಾಶಿಯ ಧನಿಕನೊಬ್ಬನ ಮನೆಯಲ್ಲಿ ಜೀತ ಮಾಡುತ್ತಿದ್ದ ರಾಣಿ ಚಂದ್ರಮತಿಗೆ ಮಗ ರೋಹಿತಾಶ್ವ ಕಾಡಿನಲ್ಲಿ ಹಾವು ಕಚ್ಚಿ ಸತ್ತ ಸುದ್ದಿ ಬರುತ್ತದೆ. ಆ ಕ್ಷಣ ಮಗನತ್ತ ಧಾವಿಸಬೇಕೆಂದು ಹಾತೊರೆಯುತ್ತದೆ ತಾಯಿ ಹೃದಯ. ಆದರೆ ನಿರ್ದಯನಾದ ಧಣಿ ಹೇಳುತ್ತಾನೆ: ದಿನದ ಕೆಲಸ ಮುಗಿಸಿ ರಾತ್ರಿ ವಿರಾಮದ ವೇಳೆ ಬೇಕಾದರೆ ಹೋಗಬಹುದು ಅಂತ. ಚಂದ್ರಮತಿಯನ್ನಾದರೆ ಆ ಧನಿಕ ಖರೀದಿಸಿದ್ದ. ವಲಸೆ ಕಾರ್ಮಿಕರು ಕರ್ನಾಟಕ ಸರ್ಕಾರದ ಜೀತದಾಳುಗಳಲ್ಲ. ಸರ್ಕಾರ ಅವರನ್ನು ಜೀತದಾಳುಗಳಿಗಿಂತಲೂ ಕಡೆಯಾಗಿ ಪರಿಗಣಿಸುತ್ತಿದೆ. ಅಧಿಕಾರದ ಕಣ್ಣುಗಳು ಕಾರ್ಮಿಕವರ್ಗವನ್ನು ಕಾಣುವುದೇ ಹಾಗೆ. ಇದು ಕೇವಲ ಕ್ರೌರ್ಯವಲ್ಲ, ಇದು ಅಧಿಕಾರದ ಅಹಂಕಾರ ಮಾತ್ರವಲ್ಲ. ಇದೂ ಒಂದು ಅಂತರದ ಕತೆ: ‘ಇಂಡಿಯಾ’ ಮತ್ತು ‘ಭಾರತ’ದ ನಡುವಣ ಅಂತರದ ಕತೆ.

ಲಾಕ್‌ಡೌನ್ ಘೋಷಣೆಯಾದಾಗಿನಿಂದ ಬೆಚ್ಚಗೆ ಮನೆಯೊಳಗೇ ಉಳಿದು, ಮನೆಮಂದಿಯ ಜತೆಗೆ ತೆಗೆಸಿಕೊಂಡ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ, ಲೇಡಿ ಮ್ಯಾಕ್‌ಬೆತ್‌ನಂತೆ ಆಗಾಗ ಕೈತೊಳೆದುಕೊಳ್ಳುತ್ತಾ ಕಾಲಕಳೆದ ನಾವು ಇಂಡಿಯಾದವರು. ಆ ದಿನ ಬೆಳಗಾತ ಏನು ಎತ್ತ ಅಂತ ತಿಳಿಯದೆ, ಪ್ರವಾಹದೋಪಾದಿಯಲ್ಲಿ ನಗರಗಳ ಬೀದಿಗಳಲ್ಲಿ ಸೇರಿ, ಊರು ಸೇರಲಾರದೆ, ಇದ್ದಲ್ಲಿ ಇರಲಾರದೆ, ಪೊಲೀಸರಿಂದ ಬಡಿಸಿಕೊಂಡು, ಮೈಮೇಲೆ ರಾಸಾಯನಿಕ ದ್ರಾವಣ ಸಿಂಪಡಿಸಿದ್ದನ್ನು ಸಹಿಸಿಕೊಂಡು, ಯಾವುದೋ ಛತ್ರದಲ್ಲೋ ಟಿನ್-ಶೀಟ್‌ನ ಡಬ್ಬಗಳಲ್ಲೋ ಹಸಿವೆ ನೀಗದೆ, ನಿದ್ದೆ ಇಲ್ಲದೆ, ಸ್ನಾನ-ಶೌಚ ಸರಿಯಿಲ್ಲದೆ ದಿನ ದೂಡಬೇಕಾಗಿ ಬಂದ ಅವರು ಭಾರತದವರು. ಎಲ್ಲಿಂದಲೋ ಬಂದವರು.

ಇಂಡಿಯಾ ಯಾವತ್ತೂ ಭಾರತದತ್ತ ನೋಡುವುದಿಲ್ಲ. ಅಷ್ಟೊಂದು ಸಂಖ್ಯೆಯ ‘ಭಾರತದ ಆ ಮಂದಿ’ ನಮ್ಮ ನಡುವೆ ಇದ್ದಾರೆ ಅಂತ ನಮಗೆ ತಿಳಿದದ್ದೇ ಅವರೆಲ್ಲಾ ಬೀದಿಗೆ ಬಂದ ನಂತರ. ಏನಿಲ್ಲ ಎಂದರೂ ನಮ್ಮ ರಾಜಕೀಯ ನಾಯಕರಿಗೆ ಭಾರತ ಅರ್ಥವಾಗುತ್ತದೆ ಅಂತ ಇಷ್ಟು ದಿನ ಭಾವಿಸಿದ್ದೆವು. ರಾಜಕೀಯ ನಾಯಕತ್ವ ಅಂತ ಒಂದು ಬೇಕಾಗಿರುವುದೇ ಭಾರತ ಮತ್ತು ಇಂಡಿಯಾ ಒಂದನ್ನೊಂದು ಸದಾ ಅರಿತು- ಬೆರೆತು ಇರುವಂತೆ ನೋಡಿಕೊಳ್ಳಲು. ಕೊರೊನಾ ನಮ್ಮ ಮುಂದೆ ತೆರೆದಿರಿಸಿದ್ದು ನಮ್ಮ ರಾಜಕೀಯ ನಾಯಕತ್ವಕ್ಕೆ ಕೂಡಾ ಭಾರತ ಕಾಣಿಸುತ್ತಲೂ ಇಲ್ಲ, ಅರ್ಥವಾಗುತ್ತಲೂ ಇಲ್ಲ ಎನ್ನುವ ಸತ್ಯವನ್ನು. ಇದು ಕಾರ್ಮಿಕರ ಬವಣೆಯ ಕತೆಯಷ್ಟೇ ಅಲ್ಲ, ಇದು ಇಂಡಿಯಾ ಮತ್ತು ಭಾರತ ಅಂತ ವಿಭಜನೆಯಾಗಿ ಹೋಗಿರುವ ದೇಶವೊಂದರ ದುರಂತ ಕತೆ. ಇದು ಇಂಡಿಯಾದ ನಾಯಕರಿಗೆ ಭಾರತ ಅರ್ಥವಾಗದ ರಾಜಕೀಯ ದಾರಿದ್ರ್ಯದ ಕತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು