ಬುಧವಾರ, ಆಗಸ್ಟ್ 12, 2020
27 °C
ದೇಶ ಉಳಿಯಲು ಬಿಜೆಪಿ ಮಾದರಿಯೂ ಸಾಯಬೇಕು, ಕಾಂಗ್ರೆಸ್ ಮಾದರಿಯೂ ಸಾಯಬೇಕು

ಚುನಾವಣೆಯ ಕಾಲದ ರಾಜಕೀಯ ನಿರ್ವಾತ

ನಾರಾಯಣ ಎ. Updated:

ಅಕ್ಷರ ಗಾತ್ರ : | |

ತಮ್ಮ ದೈನಂದಿನ ಜೀವನದಲ್ಲಿ ದೊಡ್ಡ ಮಟ್ಟಿನ ಅಸ್ತವ್ಯಸ್ತತೆ ಇಲ್ಲದೆ ಹೋದರೆ ಮತದಾರರ ಲೆಕ್ಕಾಚಾರ ಸರಳವಾಗಿರುತ್ತದೆ. ಸರಿಯಾಗಿ ರಾಜಕೀಯ ಮಾಡಲಾಗದ ಒಂದು ಪಕ್ಷಕ್ಕೆ, ಸರಿಯಾದ ಕಾರ್ಯತಂತ್ರಗಳನ್ನು ಹಾಕಿಕೊಂಡು ಚುನಾವಣೆ ಎದುರಿಸಲಾಗದ ಒಂದು ಪಕ್ಷಕ್ಕೆ, ಸರಿಯಾಗಿ ಆಡಳಿತ ನಡೆಸುವುದಕ್ಕೂ ಸಾಧ್ಯವಾಗಲಾರದು ಎಂದು ಮತದಾರರು ಸಹಜವಾಗಿಯೇ ಯೋಚಿಸುತ್ತಾರೆ.

ಮತದಾರರ ಈ ಯೋಚನೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯು ಎರಡು ರಾಜಕೀಯ ಪಕ್ಷಗಳು ಮಾತ್ರವಲ್ಲ. ಅವು ಎರಡು ರಾಜಕೀಯ ಮಾದರಿಗಳು. ಉಳಿದ ಬಹುತೇಕ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಈ ಎರಡರಲ್ಲಿ ಒಂದಲ್ಲ ಒಂದು ಮಾದರಿಯನ್ನು ಅನುಸರಿಸುತ್ತವೆ. ಚುನಾವಣೆಯನ್ನು ಅಚಾನಕ್ ಆಗಿ ಗೆಲ್ಲುವುದು ಕಾಂಗ್ರೆಸ್ ಮಾದರಿಯ ವೈಶಿಷ್ಟ್ಯ. ಅದು ಗೆಲುವಿಗಾಗಿ ವಿಪರೀತ ದುಡಿಯುವುದಿಲ್ಲ. ದುಡಿದರೂ ಆದರೆ ದುಡಿಮೆಯ ಕಾರ್ಯತಂತ್ರ ಭರವಸೆ ಹುಟ್ಟಿಸುವುದಿಲ್ಲ. ಅದಕ್ಕೆ ತನ್ನ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸಬಲ್ಲ ಕಾರ್ಯಕರ್ತರಿಲ್ಲ. ಇರುವ ಕಾರ್ಯಕರ್ತರು ಸ್ವಾರ್ಥಕ್ಕಾಗಿ ದುಡಿಯುವವರು. ಹೆಜ್ಜೆಹೆಜ್ಜೆಗೆ ಲಾಭ–ನಷ್ಟಗಳ ಲೆಕ್ಕ ಹಾಕುವವರು. ಆದರೂ ಕಾಂಗ್ರೆಸ್ ಮಾದರಿ ಕೆಲವೊಮ್ಮೆ ಗೆಲ್ಲುತ್ತದೆ. ಗೆದ್ದಾಗ ಅದು ಎದುರಾಳಿಯ ಸೋಲಿನಿಂದಾಗಿ ಗೆಲ್ಲುತ್ತದೆ. ಅದು ಗೆದ್ದದ್ದಕ್ಕೆ ಎದುರಾಳಿ ಸೋತಿರುವುದಿಲ್ಲ.

ಬಿಜೆಪಿಯ ಮಾದರಿ ಹಾಗಲ್ಲ. ಅದು ಚುನಾವಣೆಗಳನ್ನು ಚಾಕಚಕ್ಯತೆಯಿಂದ ಗೆಲ್ಲುವ ಮಾದರಿಯನ್ನು ಪ್ರತಿನಿಧಿಸುತ್ತದೆ. ಬಿಜೆಪಿಯು ಗೆಲುವಿಗಾಗಿ ವಿಪರೀತ ದುಡಿಯುತ್ತದೆ. ಇನ್ನಿಲ್ಲದಂತೆ ಕಾರ್ಯತಂತ್ರಗಳನ್ನು ಹಾಕಿಕೊಳ್ಳುತ್ತದೆ. ಅದಕ್ಕೆ ಆ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸಬಲ್ಲ ನಿಸ್ವಾರ್ಥ ಕಾರ್ಯಕರ್ತರ ಪಡೆ ಇದೆ. ಈ ಪಡೆಯನ್ನು ಅದು ದಿನದಿಂದ ದಿನಕ್ಕೆ ಬೆಳೆಸಿಕೊಳ್ಳುತ್ತಿದೆ. ಬಿಜೆಪಿಯ ರಾಜಕೀಯ ಮಾದರಿಯಲ್ಲಿ ಮತದಾರರಿಗೆ ದಕ್ಷತೆ, ನಿಸ್ವಾರ್ಥತೆ ಕಾಣಿಸುತ್ತದೆ. ಕಾಂಗ್ರೆಸ್ಸಿನ ರಾಜಕೀಯ ಮಾದರಿಯಲ್ಲಿ ಅವರಿಗೆ ಅಧ್ಯಕ್ಷತೆ, ಸ್ವಾರ್ಥ ಕಾಣಿಸುತ್ತದೆ.

ಹೇಳಿ ಕೇಳಿ ಭಾರತೀಯ ಮಧ್ಯಮ ವರ್ಗವು ದಕ್ಷತೆಯ ಬಗ್ಗೆ ವಿಪರೀತ ಮರುಳಾಗಿರುವ ನವಉದಾರೀಕರಣ ಕಾಲದ ರಾಜಕೀಯ. ಆದುದರಿಂದ ಈ ವರ್ಗದ ಮಂದಿ, ಆಡಳಿತಾರೂಢ ಬಿಜೆಪಿಯವರು ಮತ್ತು ಅದರ ಮಾದರಿ ಅನುಸರಿಸುವ ಇತರ ಪಕ್ಷಗಳು ಹೇಳುವ ಸುಳ್ಳುಗಳನ್ನು ಮತ್ತು ಅರ್ಧಸತ್ಯಗಳನ್ನು ನಂಬುವಷ್ಟು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಹೇಳುವ ಸತ್ಯಗಳನ್ನು ನಂಬುತ್ತಿಲ್ಲ. ಸುಳ್ಳುಗಳನ್ನು ಜನರು ನಂಬುವ ಕಾರಣಕ್ಕೆ ಸಹಜವಾಗಿಯೇ ಚುನಾವಣಾ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಸುಳ್ಳುಗಳ ಬಳಕೆಯಾಗುತ್ತದೆ. ಸತ್ಯಗಳನ್ನು ಜನರು ಸಂಶಯಿಸುವ ಕಾರಣಕ್ಕೆ ಅವುಗಳು ಚುನಾವಣಾ ಮಾರುಕಟ್ಟೆಯಲ್ಲಿ ಅನಾಥವಾಗುತ್ತಿವೆ.

ಬಿಜೆಪಿ ತನ್ನ ರಾಜಕೀಯ ಕಾರ್ಯತಂತ್ರದಲ್ಲಿ ತೋರಿಸುತ್ತಿರುವ ದಕ್ಷತೆಯನ್ನು ಅದು ಆಡಳಿತದಲ್ಲೂ ತೋರಬಲ್ಲದು ಮತ್ತು ತೋರಬೇಕು ಎನ್ನುವ ನಂಬಿಕೆ ಮತ್ತು ಅಪೇಕ್ಷೆ ತೀರಾ ಅಪಾಯಕಾರಿಯಾದದ್ದು. ಒಳ್ಳೆಯದನ್ನು ಇನ್ನೂ ಹೆಚ್ಚು ಒಳ್ಳೆಯ ರೀತಿಯಲ್ಲಿ ಮಾಡುವುದು ದಕ್ಷತೆ ಹೇಗೋ ಹಾಗೆಯೇ ಕೆಟ್ಟದನ್ನು ಇನ್ನೂ ಹೆಚ್ಚು ಕೆಟ್ಟದ್ದಾಗಿ ಮಾಡುವುದು ಕೂಡಾ ದಕ್ಷತೆಯಾಗಿಯೇ ಕಾಣಿಸುತ್ತದೆ. ಐದು ವರ್ಷಗಳ ಬಿಜೆಪಿಯ ಆಡಳಿತವನ್ನು ದಕ್ಷತೆಯ ಕಾರಣಕ್ಕೆ ಮೆಚ್ಚುವವರು ಈ ಎರಡರಲ್ಲಿ ಯಾವ ಕಾರಣಕ್ಕೆ ಅದು ಹೆಚ್ಚು ದಕ್ಷವಾಗಿ ಕಾಣಿಸುವುದು ಎನ್ನುವ ಪ್ರಶ್ನೆ ಕೇಳುವುದಿಲ್ಲ. ಅದು ಕೇಳದಂತೆ ಮಾಡುವ ಸನ್ನಿವೇಶವನ್ನು ನಿರ್ಮಿಸಿದ್ದು ಕೂಡಾ ಬಿಜೆಪಿಯ ರಾಜಕೀಯ ಮತ್ತು ಆಡಳಿತ ದಕ್ಷತೆಗೆ ಒಂದು ಪುರಾವೆ. ಸುಪ್ರೀಂ ಕೋರ್ಟ್ ಸೇರಿದಂತೆ ಆಡಳಿತದ ಎಲ್ಲಾ ಸಾಂಸ್ಥಿಕ ಪರಿಕರಗಳನ್ನು ನಿಸ್ತೇಜಗೊಳಿಸಿದ ನಂತರವೂ ಏನೂ ಆಗಿಲ್ಲ, ಆಗಿದ್ದೆಲ್ಲಾ ಒಳ್ಳೆಯದಕ್ಕೆ ಎನ್ನುವಂತೆ ಜನರನ್ನು ನಂಬಿಸಿದ್ದು ಕೂಡಾ ಇದೇ ದಕ್ಷತೆ. ತಾತ್ವಿಕ ಸಮಾನತೆಯಿದೆ ಎನ್ನುವ ಕಾರಣಕ್ಕೆ ಯಾರೋ ನಕಲಿ ಅರ್ಥಶಾಸ್ತ್ರಜ್ಞರ ಸಲಹೆ ಪಡೆದು ನೋಟು ರದ್ದತಿಯಂತಹ ದುರಂತವನ್ನು ದೇಶದ ಮೇಲೆ ಹೇರಿ ಅದನ್ನು ಚಾರಿತ್ರಿಕ ದೃಢ ಅರ್ಥನೀತಿ ಅಂತ ನಂಬಿಸಿದ್ದು ಇದೇ ದಕ್ಷತೆ. ಐದು ವರ್ಷಗಳ ಕಾಲ ಕಾಶ್ಮೀರದಲ್ಲಿ ಬಿದ್ದ ಹೆಣಗಳ ದೊಡ್ಡ ಸಂಖ್ಯೆಯನ್ನು ಪಕ್ಕಕ್ಕೆ ಸರಿಸಿ ಪುಲ್ವಾಮಾ ದುರಂತದ ನಂತರದ ಸಂಕತನವನ್ನು ಮಾತ್ರ ಚುನಾವಣಾ ಕಣದಲ್ಲಿ ಪ್ರಮುಖವಾಗುವಂತೆ ಮಾಡಿದ್ದು ಇದೇ ದಕ್ಷತೆ. ದೇಶದ ಆಡಳಿತಕ್ಕೆ ಬಿಜೆಪಿಯ ರಾಜಕೀಯ ಕೊಡಮಾಡುವ ಈ ಅಪಾಯಕಾರಿ, ಯಾಂತ್ರಿಕ ದಕ್ಷತೆಯಿಂದ ಬಿಡುಗಡೆ ಬೇಕಿದೆ. ಅದೇ ವೇಳೆ ಕಾಂಗ್ರೆಸ್ ಪ್ರತಿನಿಧಿಸುವ ಔದಾಸೀನ್ಯ ಮತ್ತು ಎಡಬಿಡಂಗಿತನದಿಂದ ಬಿಡುಗಡೆ ಬೇಕಿದೆ. ಸೆಕ್ಯುಲರಿಸಂನಂತಹ ಸಾಂವಿಧಾನಿಕ ಮೌಲ್ಯವೊಂದನ್ನು ಹೊಸ ತಲೆಮಾರಿನ ಪಾಲಿಗೆ ನಗೆಪಾಟಲಿನ ವಸ್ತುವನ್ನಾಗಿಸಿದ್ದು ಕಾಂಗ್ರೆಸ್ಸಿನ ಈ ಎಡಬಿಡಂಗಿತನ ಎನ್ನುವುದನ್ನು ಮರೆಯುವುದು ಹೇಗೆ.

ಅಂತಹದ್ದೊಂದು ಬಿಡುಗಡೆಗೆ ಬೇಕಾದ ಆಯ್ಕೆಗಳನ್ನು ಹಿಂದಿನ ಚುನಾವಣೆಗಳು ಒದಗಿಸಿಲ್ಲ, ಈ ಚುನಾವಣೆ ಒದಗಿಸುತ್ತಿಲ್ಲ ಎನ್ನುವುದು ಒಂದು ರಾಜಕೀಯ ನಿರ್ವಾತ ಸ್ಥಿತಿ. ಈ ಐದು ವರ್ಷಗಳಲ್ಲಿ ಭಾರತ ಒಂದು ರಾಜಕೀಯ ನಿರ್ವಾತ ಸ್ಥಿತಿಯಿಂದ ಇನ್ನೊಂದು ರಾಜಕೀಯ ನಿರ್ವಾತ ಸ್ಥಿತಿಯನ್ನು ತಲುಪಿದೆ. ಅದನ್ನೇ ಕೆಲವರು ಹೊಸ ಮನ್ವಂತರವೊಂದರ ಆರಂಭ ಅಂತ ಭ್ರಮಿಸಿ ಸಂಭ್ರಮಿಸುತ್ತಿದ್ದಾರೆ. ಸಂಭ್ರಮಿಸುತ್ತಿರುವುದು ದೇಶದ ವಿದ್ಯಾವಂತ, ಮಧ್ಯಮವರ್ಗದ ಜನ ಎನ್ನುವುದು ವಿರೋಧಾಭಾಸದೊಳಗಣ ವಿರೋಧಾಭಾಸ. ಈ ವರ್ಗದ ಮಂದಿ 2014ರ ಮೇ ತಿಂಗಳಲ್ಲೇ ಭಾರತದಲ್ಲಿ ಮೊಟ್ಟಮೊದಲಿಗೆ ಸೂರ್ಯ ಉದಯಿಸಿದ್ದು, ಅದಕ್ಕಿಂತ ಮೊದಲು ಭಾರತ ಕತ್ತಲೆಯ ಉಪಖಂಡವಾಗಿತ್ತು ಎನ್ನುವ ಬಿಜೆಪಿಯ ಉಪಾಖ್ಯಾನವನ್ನು ಸಂಪೂರ್ಣ ನಂಬಿಬಿಟ್ಟಿದ್ದಾರೆ ಮಾತ್ರವಲ್ಲ ಅದನ್ನು ಪ್ರಚಾರ ಮಾಡುವ ಸ್ವಯಂಸೇವಕರೂ ಆಗಿದ್ದಾರೆ.

ಭಾರತೀಯ ಮತದಾರರ ರಾಜಕೀಯ ಆಸಕ್ತಿ, ರಾಜಕೀಯ ನಾಯಕರ ಕುರಿತ ಅವರ ಅಂಧಮೋಹ ಆರಂಭದಿಂದಲೂ ಯಾರೂ ಊಹಿಸದಷ್ಟು ಅಧಿಕವಾಗಿತ್ತು ಎನ್ನುವುದು ಚಾರಿತ್ರಿಕ ಸತ್ಯ. ಬಹುತೇಕ ಭಾರತೀಯರಿಗೆ ಹೊಟ್ಟೆಗಿಲ್ಲ, ಬಟ್ಟೆಗಿಲ್ಲ, ಅಕ್ಷರವಿಲ್ಲ ಎಂಬ ಸ್ಥಿತಿಯಲ್ಲಿ ಮೊದಲ ಚುನಾವಣೆ 1952ರಲ್ಲಿ ನಡೆದಾಗ ಶೇಕಡ 45ರಷ್ಟು ಜನ ಮತದಾನ ಮಾಡಿದ ದೇಶವಿದು. ಎಂ.ಜಿ. ರಾಮಚಂದ್ರನ್ ಎಂಬ ನಟ-ರಾಜಕಾರಣಿ ಸತ್ತಾಗ ಬರೋಬ್ಬರಿ 31 ಜನ ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡಿನಂತಹ ರಾಜ್ಯವನ್ನು ಉಡಿಯಲ್ಲಿ ಕಟ್ಟಿಕೊಂಡಿರುವ ದೇಶವಿದು. ಇವೆಲ್ಲವೂ ನಡೆಯುತ್ತಿದ್ದಾಗ ರಾಜಕೀಯದ ಬಗ್ಗೆ ಅತೀವ ಅಸಡ್ಡೆಯನ್ನೂ, ಅಪ್ಪಟ ಸಿನಿಕತನವನ್ನೂ ಹೊಂದಿದ್ದ ಮಧ್ಯಮವರ್ಗ ಕಳೆದ ಐದು ವರ್ಷಗಳಲ್ಲಿ ಮೈಗೂಡಿಸಿಕೊಂಡಿರುವ ರಾಜಕೀಯ ಆಸಕ್ತಿ ಮತ್ತು ವ್ಯಕ್ತಿಪೂಜೆಯ ಸಂಸ್ಕೃತಿ ಮತ್ತು ಅದಕ್ಕೆ ನೀಡುತ್ತಿರುವ ವಿವೇಕಹೀನ ಸಮರ್ಥನೆ 2019ರ ಚುನಾವಣೆಯ ಪರಿಸರವನ್ನು ವಿಪರೀತ ಕಲುಷಿತಗೊಳಿಸಿಬಿಟ್ಟಿದೆ. ಮದುವೆಯ ಕರೆಯೋಲೆಯಲ್ಲಿ, ಗೃಹಪ್ರವೇಶದ ಆಮಂತ್ರಣದಲ್ಲಿ ಇಂತಹವರಿಗೇ ವೋಟು ಹಾಕಿ ಎಂದು ಮುದ್ರಿಸುವ ಮಟ್ಟಿಗೆ ರಾಜಕೀಯವು ಮಧ್ಯಮವರ್ಗದ ವೈಯ್ಯಕ್ತಿಕ ಅಂಗಳಕ್ಕೆ ಕಾಲಿರಿಸಿರುವುದು ಇದೇ ಮೊದಲಿರಬೇಕು. ಯಾವ ವರ್ಗ ಇಂದು ದೇಶದ ಮುಂದೆ ಆರೋಗ್ಯಕರ ರಾಜಕೀಯ ಆಯ್ಕೆಗೆ ಅವಕಾಶವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿ ಹೋಗಿರುವ ಕುರಿತು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕಿತ್ತೋ, ಆ ವರ್ಗ ಕಿಂದರಿಜೋಗಿಯನ್ನು ಹಿಂಬಾಲಿಸುವ ಮೂಷಕವರ್ಗದಂತೆ ಕಾಣಿಸುತ್ತಿದೆ.

ಸಂವಿಧಾನ ಬದಲಿಸಬೇಕು ಎಂಬ ಬೇಡಿಕೆಯನ್ನು ಆಗಾಗ ಮುಂದಿರಿಸುತ್ತಿರುವ ಈ ಮಂದಿ ಚುನಾವಣೆಯಲ್ಲಿ ಎಲ್ಲವೂ ಅವರಂದುಕೊಂಡಂತೆಯೇ ಆದರೆ ಮೊಂದೊಂದು ದಿನ ಸಾಕ್ಷಾತ್ ಭಗವದ್ಗೀತೆಯಲ್ಲಿ ಕೂಡಾ ತಿದ್ದುಪಡಿ ಬೇಕು ಎಂದು ಕೇಳಬಹುದೇನೋ. ಯಾಕೆಂದರೆ ಅವರ ದೃಷ್ಟಿಯಲ್ಲಿ ಯೋಚಿಸಿದಾಗ ಇನ್ನು ಮುಂದೆ ‘ಧರ್ಮಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ’ ಎನ್ನುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ‘ಧರ್ಮಸಂಸ್ಥಾಪನೆ’ ಆಗಿಹೋಗಿದೆ. ರಾಮರಾಜ್ಯ ನಿರ್ಮಾಣವಾಗಿಬಿಟ್ಟಿದೆ. ಇನ್ನೇನಿದ್ದರೂ ಅದನ್ನು ಉಳಿಸಿಕೊಂಡರೆ ಸಾಕು. ಇನ್ನು ಮುಂದೆ ಚುನಾವಣೆಗಳೇ ಬೇಕಿಲ್ಲ ಅಂತ ‘ಭಕ್ತಿಪಂಥ’ದ ಸಂಸದರೊಬ್ಬರು ಅಪ್ಪಣೆ ಕೊಡಿಸಿಬಿಟ್ಟಿದ್ದಾರೆ. ಇವರೆಲ್ಲರ ಯೋಚನೆಯಲ್ಲಿ, ಅಮೆರಿಕನ್ ರಾಜಕೀಯ ವಿಶ್ಲೇಷಕ ಪ್ರಾನ್ಸಿಸ್ ಫ್ಯೂಕುಯಾಮ ಒಂದೊಮ್ಮೆ ಬರೆದಿದ್ದಂತೆ ನಾವೀಗ ಚರಿತ್ರೆಯ ಅಂತ್ಯ (End of History) ತಲುಪಿದ್ದೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.