ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ; ಹಳೆಯ ಜಗಳ ಐಎಎಸ್‌ ಹೊಸ ದಾಳ

ಒಕ್ಕೂಟ ವ್ಯವಸ್ಥೆಯ ಮೇಲೆ ಮತ್ತೊಂದು ಪ್ರಹಾರಕ್ಕೆ ಸಿದ್ಧತೆ
Last Updated 26 ಜನವರಿ 2022, 19:30 IST
ಅಕ್ಷರ ಗಾತ್ರ

ಕೆಲವೊಂದು ಪ್ರಾಥಮಿಕ ವಿಷಯಗಳನ್ನು ಅರ್ಥ ಮಾಡಿ ಕೊಳ್ಳುವ ಮೂಲಕ ಪ್ರಾರಂಭಿಸೋಣ. ಸ್ಥೂಲವಾಗಿ ಈ ದೇಶದಲ್ಲಿ ಮೂರು ರೀತಿಯ ಸರ್ಕಾರಿ ನೌಕರಿಗಳಿವೆ: ಕೇಂದ್ರ ಸರ್ಕಾರದ ನೌಕರಿ, ರಾಜ್ಯ ಸರ್ಕಾರಗಳ ನೌಕರಿ ಮತ್ತು ಅಖಿಲ ಭಾರತ ಮಟ್ಟದ ನೌಕರಿ.

ಇವುಗಳಲ್ಲಿ ಅಖಿಲ ಭಾರತ ಮಟ್ಟದ ನೌಕರಿಯ (All India Services) ವ್ಯವಸ್ಥೆ ಇದೆಯಲ್ಲ ಅದೊಂದು ವಿಶೇಷವಾಗಿರುವ ಸಾಂವಿಧಾನಿಕ ಸೃಷ್ಟಿ. ಅದು ಯಾರ ಅಧೀನದಲ್ಲಿದೆ ಅಂತ ಕೇಳಿದರೆ, ಅದು ಕೇಂದ್ರ ಸರ್ಕಾರದ ಸಂಪೂರ್ಣ ಅಧೀನದಲ್ಲಿಲ್ಲ. ಅದು ರಾಜ್ಯ ಸರ್ಕಾರಗಳ ಅಧೀನದಲ್ಲೂ ಇಲ್ಲ. ಸಾಂವಿಧಾನಿಕವಾಗಿ ಹೇಳುವುದಾದರೆ, ಅದು ಈ ದೇಶದ ಒಕ್ಕೂಟ ವ್ಯವಸ್ಥೆಯ ಅಧೀನದಲ್ಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಹೈಕಮಾಂಡ್ ಅಲ್ಲ. ಈ ಸಾಂವಿಧಾನಿಕ ಸೂಕ್ಷ್ಮತೆಯ ಬಗ್ಗೆ ದಿವ್ಯ ಅವಜ್ಞೆಯನ್ನು ಹೊಂದಿರುವ ಈಗಿನ ಕೇಂದ್ರ ಸರ್ಕಾರವು ಅಖಿಲ ಭಾರತ ನೌಕರರ ಯಾಜಮಾನ್ಯ ಏನಿದ್ದರೂ ತನಗೆ ಸೇರಿದ್ದು ಎನ್ನುವ ಧಿಮಾಕಿನಲ್ಲಿ ರಾಜ್ಯಗಳಿಗೆ ಬರೆದ ಪತ್ರ ಕೇಂದ್ರ- ರಾಜ್ಯಗಳ ನಡುವೆ ಹೊಸತೊಂದು ಸಂಘರ್ಷವನ್ನು ಹುಟ್ಟುಹಾಕುವಂತೆ ತೋರುತ್ತದೆ.

ದಿಟ್ಟ ಪ್ರಾದೇಶಿಕ ನಾಯಕತ್ವ ಆಡಳಿತ ನಡೆಸುತ್ತಿರುವ ರಾಜ್ಯಗಳೆಲ್ಲಾ ಕೇಂದ್ರ ಸರ್ಕಾರದ ಈ ‘ದೊಡ್ಡಣ್ಣ-ಧೋರಣೆ’ಯ ವಿರುದ್ಧ ಪ್ರತಿಭಟಿಸುತ್ತಿವೆ. ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ಸಾಮಂತ ಮುಖ್ಯಮಂತ್ರಿಗಳೆಲ್ಲಾ ತಮ್ಮ ರಾಜ್ಯದ ಅಸ್ಮಿತೆಯನ್ನು ಮತ್ತು ಆತ್ಮ
ಗೌರವವನ್ನು ಪಣಕ್ಕಿಟ್ಟು ‘ಯಸ್ ಸಾರ್’ ಎನ್ನುತ್ತಿದ್ದಾರೆ.

ಮುಂದುವರಿಯುವುದಕ್ಕೆ ಮುನ್ನ ಇನ್ನೂ ಒಂದಷ್ಟು ಮೂಲ ಮಾಹಿತಿಗಳು: ಅಖಿಲ ಭಾರತ ಮಟ್ಟದ ನೌಕರಿಯಲ್ಲಿ ಮೂರು ರೀತಿಯ ನೌಕರಿಗಳಿವೆ: ಭಾರತೀಯ ಆಡಳಿತ ನೌಕರಿ (ಐಎಎಸ್), ಭಾರತೀಯ ಪೊಲೀಸ್ ನೌಕರಿ (ಐಪಿಎಸ್) ಮತ್ತು ಭಾರತೀಯ ಅರಣ್ಯ ನೌಕರಿ (ಐಎಫ್ಎಸ್‌). ಈ ಮೂರು ರೀತಿಯ ನೌಕರಿ ಮಾಡುವವರನ್ನು ನೇಮಿಸಿಕೊಳ್ಳುವುದು ಕೇಂದ್ರ ಸರ್ಕಾರ. ಆದರೆ ಅವರ ಕಾರ್ಯಕ್ಷೇತ್ರ ರಾಜ್ಯಗಳು. ಅವರಿಗೆ ಹುದ್ದೆಗಳನ್ನು ನೀಡುವುದು ರಾಜ್ಯ ಸರ್ಕಾರಗಳು. ಕೇಂದ್ರ ತನ್ನ ಕೆಲಸಕ್ಕೆಂದು ಯಾರನ್ನೂ ಉಳಿಸಿಕೊಳ್ಳುವುದಿಲ್ಲ. ಅದರ ಕೆಲಸಕ್ಕೆ ಬೇಕಾದಾಗ, ಬೇಕಾದಷ್ಟು ಮಂದಿ ಯನ್ನು ವಿವಿಧ ರಾಜ್ಯಗಳಿಂದ ನಿಯೋಜನೆಯ ಮೇಲೆ ತರಿಸಿಕೊಳ್ಳುತ್ತದೆ.

ಈ ತನಕ ಹೀಗೆ ಮಾಡಲು ರಾಜ್ಯ ಸರ್ಕಾರಗಳ ಅನುಮತಿ, ಸಂಬಂಧಪಟ್ಟ ನೌಕರರ ಸಮ್ಮತಿ ಬೇಕಾಗಿತ್ತು. ಇನ್ನು ಮುಂದೆ ಇವೆಲ್ಲಾ ಇಲ್ಲ. ‘ದೊರೆ’ಯಿಂದ ಕರೆ ಬಂದಾಗ ಸಾಮಂತ ತನ್ನ ಅಧೀನದಲ್ಲಿ ಇರುವ ಸೈನಿಕ ರನ್ನು ಮರುಮಾತಿಲ್ಲದೆ ಕಳುಹಿಸಿಕೊಡುವ ಹಳೆಯ ಪದ್ಧತಿ ಇತ್ತಲ್ಲ ಹಾಗೆ. ಕೇಂದ್ರ ಕೇಳಿದ ತತ್‌ಕ್ಷಣ ಐಎಎಸ್‌ ಸಿಬ್ಬಂದಿಯನ್ನು ರಾಜ್ಯ ಸರ್ಕಾರಗಳು ‘ಜೀ ಹುಜೂರ್’ ಅಂತ ಕಳುಹಿಸಿಕೊಡಬೇಕು- ಸಿಬ್ಬಂದಿ ಗಂಟುಮೂಟೆ ಕಟ್ಟಿ ಹೊರಡಬೇಕು.

ರಾಜ್ಯ ಸರ್ಕಾರಗಳಲ್ಲಿ ದುಡಿಯುವವರೂ ಜನರ ಕೆಲಸವನ್ನೇ ಮಾಡುವುದು, ಕೇಂದ್ರ ಸರ್ಕಾರದಲ್ಲಿ ದುಡಿಯುವವರೂ ಅದನ್ನೇ ಮಾಡುವುದಲ್ಲವೇ? ಮತ್ತೇ ನೀಗ ಸಮಸ್ಯೆ ಎನ್ನುವ ಪ್ರಶ್ನೆ ಬರಬಹುದು. ಕೇಂದ್ರ ಸರ್ಕಾರದಲ್ಲಿ ದುಡಿಯಲು ಅಗತ್ಯವಿರುವಷ್ಟು ಐಎಎಸ್‌ ಸಿಬ್ಬಂದಿ ರಾಜ್ಯಗಳಿಂದ ಬರುತ್ತಿಲ್ಲವಾಗಿ ಈ ಬದಲಾವಣೆ ಅಂತ ಕೇಂದ್ರ ಸಮಾಜಾಯಿಷಿ ಬೇರೆ ನೀಡುತ್ತಿದೆ. ಆದರೆ ಇವೆಲ್ಲಾ ಅಷ್ಟೊಂದು ಸರಳವಾದ ವ್ಯವಹಾರಗಳಲ್ಲ. ಇದರ ಹಿಂದೆ ಒಕ್ಕೂಟ ವ್ಯವಸ್ಥೆಯ ಅಳಿವು- ಉಳಿವಿನ ಪ್ರಶ್ನೆಗಳಿವೆ. ಅಧಿಕಾರ ರಾಜಕೀಯದ ಕಪಟ ಲೆಕ್ಕಾಚಾರ ಗಳಿವೆ. ಹೇಗೆ ಅಂತ ತಿಳಿದುಕೊಳ್ಳಬೇಕಾದರೆ, ಅಖಿಲ ಭಾರತ ನೌಕರಿ ವ್ಯವಸ್ಥೆಯ ಇನ್ನೊಂದು ಸೂಕ್ಷ್ಮವಾದ ಮಗ್ಗುಲನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕು.

ಅಖಿಲ ಭಾರತೀಯ ನೌಕರಿ ವ್ಯವಸ್ಥೆ ಎನ್ನುವುದು ಕೇವಲ ಒಂದು ಆಡಳಿತಾತ್ಮಕ ರಚನೆ ಅಷ್ಟೇ ಅಲ್ಲ. ಅದು ದೇಶದ ಒಕ್ಕೂಟ ವ್ಯವಸ್ಥೆಯ ಅರ್ಥಾತ್ ಸಾರ್ವಭೌಮ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳುವ ವ್ಯವಸ್ಥೆಯ ಆಧಾರಸ್ತಂಭಗಳಲ್ಲಿ ಒಂದು. ಅದನ್ನು ನಮ್ಮ ವ್ಯವಸ್ಥೆಯ ನಿರ್ಮಾತೃಗಳು ಮತ್ತು ಸಂವಿಧಾನ ರಚನಾಕಾರರು ಅದೆಷ್ಟು ನಾಜೂಕಿನಿಂದ ಮತ್ತು ದೂರದೃಷ್ಟಿಯಿಂದ ರೂಪಿಸಿದ್ದಾರೆ ಎಂದರೆ, ಇಡೀ ಒಕ್ಕೂಟ ವ್ಯವಸ್ಥೆಯ ಹಿತ ಕಾಯಲು ಬೇಕಾದ ಆಡಳಿತಾತ್ಮಕ ಸಮತೋಲನವೊಂದನ್ನು ಈ ನೌಕರಿ
ವ್ಯವಸ್ಥೆಯೊಳಗೆ ಅಳವಡಿಸಿಬಿಟ್ಟಿದ್ದಾರೆ. ಅದು ಹೇಗೆಂದರೆ, ಪ್ರತಿಯೊಂದು ರಾಜ್ಯದಲ್ಲಿ ಇರುವ ಐಎಎಸ್‌, ಐಪಿಎಸ್‌, ಐಎಫ್ಎಸ್‌ ಸಿಬ್ಬಂದಿ ವರ್ಗದಲ್ಲಿ ವಿವಿಧ ರಾಜ್ಯಗಳಿಂದ ಬಂದವರು ಇರುತ್ತಾರೆ. ಹಾಗೆಂದು ಯಾವುದೇ ರಾಜ್ಯದಲ್ಲಿ ಹೊರಗಿನಿಂದ ಬಂದವರದ್ದೇ ಮೇಲುಗೈ ಆಗಬಾರದಲ್ಲ. ಅದಕ್ಕಾಗಿ ಆಯಾ ರಾಜ್ಯಗಳಿಂದ ಐಎಎಸ್, ಐಪಿಎಸ್‌ಗೆ ನೇರವಾಗಿ ಆಯ್ಕೆಯಾದವರು ಮತ್ತು ಪದೋನ್ನತಿ ಹೊಂದಿದವರು ಇತರ ರಾಜ್ಯಗಳಿಂದ ಬಂದವರ ಸಂಖ್ಯೆಗಿಂತ ಹೆಚ್ಚಿಗೆ ಇರುತ್ತಾರೆ. ಅಂದರೆ, ಪ್ರತಿಯೊಂದು ರಾಜ್ಯದ ಆಡಳಿತದಲ್ಲಿ ಇಡೀ ದೇಶವೇ ಇದ್ದ ಹಾಗೂ ಆಯಿತು, ಕೇಂದ್ರದಿಂದ ನೇಮಕಗೊಂಡವರು ಇದ್ದ ಹಾಗೂ ಆಯಿತು, ಅದೇ ವೇಳೆ ಆಯಾ ರಾಜ್ಯದ ಹಿತಾಸಕ್ತಿಯ ರಕ್ಷಣೆಯೂ ಆಯಿತು.

ಕೇಂದ್ರದಲ್ಲೂ ಅಷ್ಟೇ. ಅಲ್ಲಿ ಎಲ್ಲಾ ರಾಜ್ಯಗಳ ಮೂಲದಿಂದ ಮತ್ತು ವೃಂದಗಳಿಂದ ಬಂದವರೇ ಉನ್ನತ ಹುದ್ದೆಗಳಲ್ಲಿ ಇರುವ ಕಾರಣ ಯಾವುದೇ ಒಂದು ರಾಜ್ಯದ ಅಥವಾ ಕೆಲವೇ ರಾಜ್ಯಗಳ ಹಿತಾಸಕ್ತಿ ಮೇಲುಗೈ ಪಡೆಯದಂತೆಯೂ ಆಯಿತು. ಹೀಗೆ ಕೇಂದ್ರ ಮತ್ತು ರಾಜ್ಯಗಳೆರಡರ ಹಿತಾಸಕ್ತಿಗಳಿಗೆ ಮತ್ತು ದೇಶದ ಎಲ್ಲಾ ರಾಜ್ಯಗಳ ಹಿತಾಸಕ್ತಿಗಳಿಗೆ ಪೂರಕವಾಗುವಂತೆ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ರಾಜ್ಯದ ಆಡಳಿತ ವ್ಯವಸ್ಥೆಯಲ್ಲೂ ಇಡೀ ಭಾರತ ಇರಬೇಕು, ಭಾರತ ಸರ್ಕಾರದಲ್ಲಿ ಪ್ರತಿಯೊಂದು ರಾಜ್ಯವೂ ಇರಬೇಕು ಎಂಬಂತೆ ಈ ವ್ಯವಸ್ಥೆಯ ಒಂದೊಂದು ಪದರವನ್ನೂ ಅತ್ಯಂತ ಜಾಣ್ಮೆಯಿಂದ ಹದಗೊಳಿಸ
ಲಾಗಿದೆ. ಭಾರತದ ಸಂವಿಧಾನದ ಅಪ್ರತಿಮ ಆವಿಷ್ಕಾರಗಳಲ್ಲಿ ಇದೂ ಒಂದು.

ಕೇಂದ್ರ ಸರ್ಕಾರ ಈ ಸಾಂವಿಧಾನಿಕ ಸಮತೋಲನ ವನ್ನು ಕೆಡಿಸಲು ಹೊರಟಿದೆ. ಅಖಿಲ ಭಾರತ ಮಟ್ಟದ ನೌಕರಿಗಳ ಪೈಕಿ ಅತ್ಯಂತ ಪ್ರಮುಖ ಎನ್ನಬಹುದಾದ ಐಎಎಸ್‌ ನೌಕರಿಯನ್ನು ಕೇಂದ್ರ ಸರ್ಕಾರದ ನೌಕರಿ ಯನ್ನಾಗಿ ಪರಿವರ್ತಿಸುವ ಹುನ್ನಾರವನ್ನು ಈಗ ಕೇಂದ್ರ ಮುಂದಿಟ್ಟಿದೆ. ಇದೇನಾದರೂ ಜಾರಿಗೆ ಬಂದರೆ ಐಎಎಸ್ ಸಿಬ್ಬಂದಿ ಮೇಲೆ ರಾಜ್ಯ ಸರ್ಕಾರಗಳ ನಿಯಂತ್ರಣ ತಪ್ಪುತ್ತದೆ. ಐಎಎಸ್‌ ಸಿಬ್ಬಂದಿ ಕೇಂದ್ರ ಸರ್ಕಾರಕ್ಕೆ ತಗ್ಗಿಬಗ್ಗಿ ಇರಬೇಕಾಗುತ್ತದೆ.

ಒಂದು ಕಾಲದಲ್ಲಿ ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿಯ ಹುದ್ದೆ ಪಡೆಯುವುದು ಐಎಎಸ್‌ ಸಿಬ್ಬಂದಿಗೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿತ್ತು. ಈಗ ಹಾಗಿಲ್ಲವಂತೆ. ಕಳೆದ ಐದಾರು ವರ್ಷಗಳಿಂದ ಬಹು ಪಾಲು ಐಎಎಸ್ ಮಂದಿ ‘ನಮಗೆ ಕೇಂದ್ರದಲ್ಲಿ ಕೆಲಸ ಮಾಡುವ ಉಸಾಬರಿಯೇ ಬೇಡ’ ಅಂತ ಇದ್ದಾರೆ. ಹಾಗಾಗಿ ಕೇಂದ್ರದಲ್ಲಿ ಐಎಎಸ್‌ ಸಿಬ್ಬಂದಿಯ ಕೊರತೆ ಕಾಣಿಸಿರುವುದು. ಯಾಕೆ ಹೀಗಾಗಿದೆ ಅಂತ ಎಲ್ಲರಿಗೂ ಗೊತ್ತು. ಆದರೆ ಇದನ್ನೇ ನೆಪವಾಗಿಟ್ಟುಕೊಂಡ ಕೇಂದ್ರ ಸರ್ಕಾರವು ಎಪ್ಪತ್ತು ವರ್ಷಗಳಲ್ಲಿ ರೂಪುಗೊಂಡ ಅದ್ಭುತ ವಾದ ವ್ಯವಸ್ಥೆಯನ್ನೇ ದುರ್ಬಲಗೊಳಿಸಲು ಹೊರಟಿದೆ.

ಇಲ್ಲಿ ಇನ್ನೊಂದು ರಾಜಕೀಯ ಆಯಾಮವನ್ನೂ ಗಮನಿಸಬೇಕಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುವ ಬಿಜೆಪಿ ಇಡೀ ದೇಶದಲ್ಲೇ ಅತ್ಯಂತ ಜನಪ್ರಿಯ ನಾಯಕ ರೊಬ್ಬರನ್ನು ಹೊಂದಿದೆ. ಆದರೆ ಆ ಜನಪ್ರಿಯತೆ ಹಲವಾರು ರಾಜ್ಯಗಳಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲ. ವಿರೋಧ ಪಕ್ಷಗಳ ಬಲಿಷ್ಠ ನಾಯಕರು ಮುಖ್ಯಮಂತ್ರಿ ಗಳಾಗಿರುವ ರಾಜ್ಯಗಳನ್ನು ಏನೇ ಮಾಡಿದರೂ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗುತ್ತಿಲ್ಲ. ಹಿಂದಿನಂತೆ ಈಗ ರಾಷ್ಟ್ರಪತಿ ಆಡಳಿತ ಹೇರುವ ಹಾಗಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ರಾಜಕಾರಣಕ್ಕೆ ಕೂಡಾ ಹಿನ್ನಡೆಯಾಗುತ್ತಿದೆ.

ಪ್ರಬಲ ಮುಖ್ಯಮಂತ್ರಿಗಳೆಲ್ಲಾ ಇದಕ್ಕೆ ಪ್ರತಿಯಾಗಿ ರಾಜ್ಯಮಟ್ಟದ ತನಿಖಾ ಸಂಸ್ಥೆಗಳನ್ನು ಆಯಾ ರಾಜ್ಯಗಳ ಬಿಜೆಪಿ ನಾಯಕರ ವಿರುದ್ಧ ಬಳಸಿಕೊಳ್ಳಲು ಆರಂಭಿ ಸಿದ್ದಾರೆ. ಏಟಿಗೆ ಎದುರೇಟು ಬೀಳತೊಡಗಿದೆ. ಹಾಗಾಗಿ ರಾಜ್ಯಗಳನ್ನು ಹತೋಟಿಗೆ ತರಲು ಇನ್ನುಳಿದ ಅಸ್ತ್ರ ಎಂದರೆ ಒಕ್ಕೂಟ ವ್ಯವಸ್ಥೆಯನ್ನು ಪರೋಕ್ಷವಾಗಿ ಇನ್ನಷ್ಟು ದುರ್ಬಲ ಗೊಳಿಸುವುದು. ಈ ತಂತ್ರದ ಅಂಗವಾಗಿ ಈಗ ಕೇಂದ್ರದ ಕಣ್ಣು ರಾಜ್ಯಗಳ ಸಚಿವಾಲಯದ (secretariat) ಮೇಲೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT