ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವು ಬಿತ್ತಿ ಮಾವು ಬೆಳೆಯಲಾಗದು!

ಬದಲಾವಣೆಗೆ ಜನರೂ ಸಿದ್ಧರಿಲ್ಲ, ಪಕ್ಷಗಳೂ ಸಿದ್ಧವಿಲ್ಲ, ರಾಜಕೀಯ ಶುದ್ಧಿ ಹೇಗೆ?
Last Updated 24 ಜುಲೈ 2019, 19:45 IST
ಅಕ್ಷರ ಗಾತ್ರ

ಖ್ಯಾತ ಸಾಹಿತಿ ಎ.ಕೆ.ರಾಮಾನುಜನ್ ಅವರು ಸಂಪಾದಿಸಿದ ಜಾನಪದ ಕತೆಗಳ ಸಂಗ್ರಹದಲ್ಲಿ ಒಂದು ಕತೆ ಇದೆ. ಒಬ್ಬ ಹಾಡುಗಾರ ಹಾಡಿನ ಜೊತೆಗೆ ಉಪನ್ಯಾಸವನ್ನೂ ನೀಡುತ್ತಿದ್ದ. ಒಮ್ಮೆ ಹೀಗೆ ಉಪನ್ಯಾಸ ನೀಡುವಾಗ ‘ಯಾರೂ ವ್ಯಭಿಚಾರ ಮಾಡಬಾರದು. ವ್ಯಭಿಚಾರ ಮಾಡಿದರೆ ಏನಾಗುತ್ತದೆ ಗೊತ್ತೆ? ನರಕದಲ್ಲಿ ಒಂದು ಗಾಜಿನ ಕಂಬ ಇದೆ. ಆ ಕಂಬವನ್ನು ಬಿಸಿ ಮಾಡುತ್ತಾರೆ. ಕಂಬದ ಮೇಲೆ ಸಣ್ಣ ತೂತು ಕೊರೆಯುತ್ತಾರೆ. ಅದು ಎಷ್ಟು ಸಣ್ಣ ತೂತು ಎಂದರೆ ಸೂಜಿಯ ತೂತಿನಷ್ಟು ಸಣ್ಣದು. ವ್ಯಭಿಚಾರ ಮಾಡಿ ಪಾಪ ಮಾಡಿದವರನ್ನು ಅದರೊಳಕ್ಕೆ ತಳ್ಳುತ್ತಾರೆ. ಹಾಗಾಗಿ, ಯಾರೂ ವ್ಯಭಿಚಾರ ಮಾಡಬೇಡಿ. ಎಚ್ಚರಿಕೆಯಿಂದ ಇರಿ’ ಎಂದ.

ಆ ಉಪನ್ಯಾಸ ಕಾರ್ಯಕ್ರಮದಲ್ಲಿ ಆ ಹಾಡುಗಾರನ ಪ್ರೀತಿಯ ವೇಶ್ಯೆ ಕೂಡ ಹಾಜರಿದ್ದಳಂತೆ. ಆ ದಿನ ರಾತ್ರಿ ಆ ಹಾಡುಗಾರ ವೇಶ್ಯೆಯ ಮನೆಗೆ ಹೋಗಿ ಬಾಗಿಲು ಬಡಿದನಂತೆ. ಆಗ ಆಕೆ ‘ಅಯ್ಯೋ ಸ್ವಾಮಿ ನೀವ್ಯಾಕೆ ಬಂದಿರಿ. ನರಕದಲ್ಲಿ ಸೂಜಿಯ ತೂತಿನ ಒಳಗೆ ನುಸುಳಲು ನನಗೆ ಇಷ್ಟ ಇಲ್ಲ’ ಎಂದಳಂತೆ. ಅದಕ್ಕೆ ಆ ಹಾಡುಗಾರ ‘ಮಂಕೆ, ಆ ತೂತಿನಲ್ಲಿ ಈಗಾಗಲೇ ಸಾವಿರಾರು ಜನರು ಹೋಗಿ ಬಂದಿದ್ದಾರೆ. ಜನರು ಒಳಕ್ಕೆ ಹೋಗಿ ಹೋಗಿ ಅದು ಈಗ ಎಷ್ಟು ದೊಡ್ಡದಾಗಿದೆ ಎಂದರೆ ಅದರೊಳಗೆ ಆನೆಗಳೂ, ಒಂಟೆಗಳೂ ಯಾವುದೇ ತೊಂದರೆ ಇಲ್ಲದೆ ಹೋಗಿ ಬರಬಹುದು. ಭಯ ಬೇಡ ಬಾಗಿಲು ತೆಗೆ’ ಎಂದನಂತೆ.

ಸದ್ಯಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯ ಸ್ಥಿತಿ ಕೂಡ ಆ ಗಾಜಿನ ಕಂಬದ ತೂತಿನಂತೆಯೇ ಆಗಿದೆ. ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದ ಈ ಕಾಯ್ದೆಯ ಲೋಪಗಳು ಜಗಜ್ಜಾಹೀರಾಗಿವೆ. ಯಾರು ಬೇಕಾದರೂ ಬೇಕಾದ ಸಮಯದಲ್ಲಿ ಬೇಕಾದ ಪಕ್ಷಕ್ಕೆ ಹಾರಿ ಹೋಗಲು ದಾರಿಗಳು ತೆರೆದುಕೊಂಡಿವೆ. ‘ಆಯಾರಾಮ್ ಗಯಾರಾಮ್’ ತಡೆಯಲು ತಂದ ಕಾಯ್ದೆ ಈಗ ಸಾಮೂಹಿಕ ಆಯಾರಾಮ್ ಗಯಾರಾಮ್‌ಗೆ ಅವಕಾಶ ಮಾಡಿಕೊಟ್ಟಿದೆ. 1967ರಲ್ಲಿ ಹರಿಯಾಣದ ಗಯಾಲಾಲ್ ಎಂಬುವರು ಒಂದೇ ದಿನ ಮೂರು ರಾಜಕೀಯ ಪಕ್ಷಗಳನ್ನು ಬದಲಾಯಿಸಿದ್ದರಿಂದ 1968ರಲ್ಲಿ ಪಕ್ಷಾಂತರ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಕೇಳಿಬಂತು. ವೈ.ಬಿ.ಚವಾಣ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಆದರೆ ನಂತರದ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಬೆಳವಣಿಗೆಗಳು ಆಗಲಿಲ್ಲ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ಅಂದರೆ 1985ರ ಜನವರಿ 30ರಂದು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂತು. ನಂತರ ಹಲವಾರು ಬಾರಿ ಅದಕ್ಕೆ ತಿದ್ದುಪಡಿಯನ್ನೂ ಮಾಡಲಾಯಿತು. ಆದರೂ ಅದು ಪರಿಣಾಮಕಾರಿ ಅಲ್ಲ ಎನ್ನುವುದನ್ನು ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಾಬೀತು ಮಾಡಿವೆ. ಗೋವಾ, ಪಶ್ಚಿಮ ಬಂಗಾಳದಲ್ಲಿಯೂ ಇಂತಹದ್ದೇ ವಾತಾವರಣ ಇದೆ. ಮಧ್ಯಪ್ರದೇಶದಲ್ಲಿ ಕೂಡ ಪಕ್ಷಾಂತರದ ಭಯ ಕಾಡುತ್ತಿದೆ.

ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಬಗ್ಗೆ ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜಕಾರಣಿಗಳಿಗೆ ಬಾಯಿಗೆ ಬಂದ ಹಾಗೆ ಬೈಯ್ಯುತ್ತಿದ್ದಾರೆ. ಆದರೆ ನಿಜವಾದ ಅರ್ಥದಲ್ಲಿ ಇದಕ್ಕೆಲ್ಲಾ ಮುಖ್ಯ ಕಾರಣರೇ ಮತದಾರರು. ಪಕ್ಷಾಂತರ ನಿಷೇಧವನ್ನು ಮಾಡಬೇಕಾದವರೂ ಅವರೇ. ಅಧಿಕಾರ, ಹಣ ಅಥವಾ ಇನ್ಯಾವುದೇ ಕಾರಣಕ್ಕೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೆ ಮತದಾರರೇ ಬುದ್ಧಿ ಕಲಿಸಬೇಕು. ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಶಾಸಕರಿಗೆ ಉಪಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಿದ್ದಿದ್ದರೆ ರಾಜಕಾರಣಿಗಳ ಅಟಾಟೋಪ ಹೀಗಿರುತ್ತಿರಲಿಲ್ಲ. ಈಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಹೊರಕ್ಕೆ ಜಿಗಿದವರಿಗೆ ಇರುವ ಒಂದೇ ಒಂದು ಧೈರ್ಯ ಎಂದರೆ ತಾವು ಮತ್ತೆ ಚುನಾಯಿತರಾಗುತ್ತೇವೆ ಎನ್ನುವುದು. ಹಣ ಹಂಚಿ ಮತಗಳನ್ನು ಖರೀದಿ ಮಾಡಬಹುದು ಎಂಬ ವಿಶ್ವಾಸವೇ ಅವರಿಗೆ ಇನ್ನೊಂದು ಪಕ್ಷಕ್ಕೆ ನೆಗೆಯುವ ಉತ್ಸಾಹವನ್ನು ತುಂಬಿದೆ. ಪಕ್ಷಾಂತರವನ್ನು ಕಾಯ್ದೆಯ ಮೂಲಕ ಸಂಪೂರ್ಣವಾಗಿ ತಡೆಯುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ಇದಕ್ಕೆ ಮುಖ್ಯ ಕಾರಣ, ನಮಗೆ ಕಾಯ್ದೆಯನ್ನು ಪಾಲಿಸುವುದಕ್ಕಿಂತ ಮುರಿಯುವುದರಲ್ಲಿಯೇ ಹೆಚ್ಚಿನ ಖುಷಿ ಇದೆ.

ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ‘ಗೆಲ್ಲುವ ವ್ಯಕ್ತಿ’ಗಳಿಗೇ ಟಿಕೆಟ್ ನೀಡುವುದಾಗಿ ಹೇಳುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಗೆಲ್ಲುವ ಅಭ್ಯರ್ಥಿಗಳು ಎಂದರೆ ಯಾರು ಎನ್ನುವುದು ಗುಟ್ಟಲ್ಲ. ರಾಜಕೀಯ ಎನ್ನುವುದು ಹಣವನ್ನು ಬಿತ್ತಿ ಹಣವನ್ನು ಬೆಳೆಯುವ ರಾಸಾಯನಿಕ ಕೃಷಿಯಾಗಿರುವುದರಿಂದಲೇ ಎಲ್ಲ ಕಡೆಯೂ ಇಷ್ಟೊಂದು ರಾದ್ಧಾಂತವಾಗುತ್ತಿದೆ. ಯಾವ ರಾಜಕೀಯ ಪಕ್ಷದ ಮುಖಂಡರೂ ಪ್ರಾಮಾಣಿಕ ವ್ಯಕ್ತಿಯೊಬ್ಬನಿಗೆ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂಬ ಮಾತನ್ನೇ ಆಡುವುದಿಲ್ಲ. ಅದು ಕಾಂಗ್ರೆಸ್ ಪಕ್ಷವಾಗಲೀ, ಬಿಜೆಪಿಯಾಗಲೀ ಅಥವಾ ಜೆಡಿಎಸ್ ಆಗಲೀ ಟಿಕೆಟ್ ನೀಡುವುದಕ್ಕೆ ಇರುವ ಮಾನದಂಡ ಈಗ ಒಂದೇ ಆಗಿದೆ. ರಾಜಕೀಯದಲ್ಲಿ ಹಣವೇ ಮುಖ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದ್ದರಿಂದಲೇ ನೆಗೆತವೀರರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಪಕ್ಷಾಂತರಿಗಳನ್ನು ಜನ ದೂರ ಇರಿಸಿದ್ದರೆ ಈ ಚಾಳಿಗೆ ಕೊಂಚ ಕಡಿವಾಣ ಬೀಳುತ್ತಿತ್ತು. ಆದರೆ ಜನರು ಹಣಕ್ಕೋ, ಜಾತಿ ಮುಲಾಜಿಗೋ ಅಥವಾ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಮತ ಚಲಾಯಿಸಿ ಪಕ್ಷಾಂತರಿಗಳನ್ನೇ ಗೆಲ್ಲಿಸುವುದರಿಂದ ರಾಜಕಾರಣಿಗಳ ಆಟಕ್ಕೆ ತಡೆಯೇ ಇಲ್ಲದಂತಾಗಿದೆ. ಆಮಿಷಕ್ಕೆ ಒಳಗಾಗಿ ಮತ ಹಾಕಿ ಈಗ ‘ರಾಜಕಾರಣ ಕೆಟ್ಟು ಹೋಗಿದೆ’ ಎಂದು ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ನಿಜವಾಗಿ ನಮ್ಮನ್ನೇ ನಾವು ದೂಷಿಸಿಕೊಳ್ಳಬೇಕು ಅಷ್ಟೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚಿಸಿದ ನಂತರ ನಡೆದ ಚರ್ಚೆಯಲ್ಲಿ ಸಾಕಷ್ಟು ಬಾರಿ ದೇವರಾಜ ಅರಸು ಅವರ ವಿಚಾರ ಪ್ರಸ್ತಾಪವಾಯಿತು. ‘ನಾವು ಅವರ ಗರಡಿಯಲ್ಲಿ ಪಳಗಿದವರು’ ಎಂದು ಎದೆ ಮುಟ್ಟಿಕೊಂಡು ಸಾಕಷ್ಟು ಮಂದಿ ಹೇಳಿದರು. ಅರಸು ಅವರು ವಿಳಾಸವೇ ಇಲ್ಲದ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತಿದ್ದರು. ಈಗ ಯಾರು ಹಾಗೆ ಮಾಡುವ ಧೈರ್ಯ ತೋರುತ್ತಾರೆ? ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಅಂತಹ ಕೆಲಸವನ್ನು ಮಾಡಿತ್ತು. ಈಗ ಅಲ್ಲಿಯೂ ಹಣವಂತರಿಗಷ್ಟೇ ಮಣೆ ಎನ್ನುವಂತಾಗಿದೆ. ದೇಶದ ಎಲ್ಲ ಕಡೆ ಈಗ ಮೋದಿ ಹವಾ ಇದೆ ಎನ್ನಲಾಗುತ್ತಿದೆ. ಹಾಗಿದ್ದ ಮೇಲೆ ಬಿಜೆಪಿಯು ಹೊಸ ಮುಖಗಳಿಗೆ ಮಣೆ ಹಾಕುವ ಕೆಲಸವನ್ನು ಮಾಡಬೇಕಿತ್ತಲ್ಲವೇ? ಈಗಾಗಲೇ ಸವಕಳಿಯಾದ ಮುಖಗಳನ್ನು ಕಸದ ಬುಟ್ಟಿಗೆ ಹಾಕಿ ಯೋಗ್ಯರನ್ನೇ ಚುನಾವಣೆ ಕಣಕ್ಕೆ ಇಳಿಸಬೇಕಿತ್ತಲ್ಲವೇ? ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇದೆ. ಅಲ್ಲಿ ಆ ಪಕ್ಷದಿಂದ ಯಾರು ನಿಂತರೂ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಹಾಗಿದ್ದ ಮೇಲೆ ಕುಟುಂಬವನ್ನು ಬಿಟ್ಟು, ಯೋಗ್ಯರಾದ ಹೊಸ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಹಸಕ್ಕೆ ಕೈಹಾಕಬಹುದಿತ್ತಲ್ಲವೇ? ಇವೆಲ್ಲ ಈಗ ಆದರ್ಶದ ಕನವರಿಕೆಗಳಾಗಿವೆ ಅಷ್ಟೆ. ಬದಲಾವಣೆಗೆ ಜನರೂ ಸಿದ್ಧರಿಲ್ಲ. ಪಕ್ಷಗಳೂ ಸಿದ್ಧವಿಲ್ಲ. ಜನರು ಸಿದ್ಧರಾಗದೆ ಪಕ್ಷಗಳು ಸಿದ್ಧವಾಗುವುದಿಲ್ಲ. ಬೇವು ಬಿತ್ತಿ ಮಾವು ಬೆಳೆಯಲು ಬಯಸಿದರೆ, ನಿರಾಸೆ ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT