ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆತ್ತಲಾಗುತ್ತಲೇ ಇದೆ ಮನುಷ್ಯತ್ವ

ಬಡ್ಡಿ ಹಣಕ್ಕೆ ಹೆಣ್ಣುಮಕ್ಕಳನ್ನು ಒತ್ತೆ ಇಟ್ಟುಕೊಳ್ಳುವ ರಾಕ್ಷಸೀ ಪ್ರವೃತ್ತಿಗೆ ಕೊನೆ ಎಂದು?
Last Updated 24 ಜೂನ್ 2019, 19:45 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈ ತಿಂಗಳಲ್ಲಿ ನಡೆದ ಎರಡು ಘಟನೆಗಳು, ನಾವು ಮನುಷ್ಯರೇ ಅಲ್ಲ ಎನ್ನುವುದನ್ನು ಮತ್ತೆ ನಿರೂಪಿಸಿವೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಲೇ ಇದ್ದರೆ ನಮ್ಮ ಆಲೋಚನೆಗಳಿಗೆ, ನಮ್ಮ ಸಂವೇದನೆಗಳಿಗೆ ಮಂಕು ಕವಿದುಬಿಡುತ್ತದೆ. ಮಾಧ್ಯಮಗಳಲ್ಲಿ ಇಂತಹ ಘಟನೆಗಳನ್ನು ನೋಡಿದಾಗ ನಮ್ಮಷ್ಟಕ್ಕೆ ನಾವೇ ಮೈ ಚಿವುಟಿಕೊಂಡು, ನಾವು ಮನುಷ್ಯರು ಹೌದೋ ಅಲ್ಲವೋ ಎಂದು ನೋಡಿಕೊಳ್ಳಬೇಕಾಗುತ್ತದೆ. ಅಂತಹ ಸ್ಥಿತಿಯಲ್ಲಿ ಈಗ ನಾವಿದ್ದೇವೆ.

ಒಂದು ಘಟನೆ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದರೆ, ಇನ್ನೊಂದು ಘಟನೆ ಅದರ ಪಕ್ಕದ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದಲ್ಲಿ ದೇವಸ್ಥಾನವನ್ನು ಅಪವಿತ್ರ
ಗೊಳಿಸಿದ ಎನ್ನುವ ಕಾರಣಕ್ಕೆ ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿರುವ ವಿದ್ಯಮಾನವು ಮನುಷ್ಯತ್ವದ ಸೆಲೆ ಇರುವ ಎಲ್ಲರನ್ನೂ ಸಂತೆಯಲ್ಲಿ ಬೆತ್ತಲೆ ನಿಲ್ಲಿಸಿದೆ. ಆತ ದಲಿತ ಎನ್ನುವುದಕ್ಕಿಂತ ಅವನೊಬ್ಬ ಮನುಷ್ಯ ಎಂದು ಗ್ರಹಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದರೆ, ನಮ್ಮ ಹೃದಯ ಎಷ್ಟೊಂದು ಬತ್ತಿ ಹೋಗಿರಬಹುದು. ಅದು ಜೀವಜಲವೇ ಇಲ್ಲದ ಮರಳುಗಾಡಾಗಿರಬಹುದು.

‘ಆತ ಮಾನಸಿಕ ಅಸ್ವಸ್ಥನಾಗಿದ್ದ. ಆತ ದಲಿತ ಎನ್ನುವುದು ಗೊತ್ತಿರಲಿಲ್ಲ. ದೇವಾಲಯಕ್ಕೆ ಬರುವುದಕ್ಕೆ ಮೊದಲೇ ಆತ ಬೆತ್ತಲಾಗಿದ್ದ’ ಎಂಬೆಲ್ಲಾ ಸಮಜಾಯಿಷಿಗಳು ಹೊರಬರುತ್ತಿವೆ. ಆತ ಮಾನಸಿಕ ಅಸ್ವಸ್ಥನಾಗಿದ್ದರೆ ನಾವು ಇನ್ನಷ್ಟು ಮಾನವೀಯತೆಯಿಂದ ನೋಡಿಕೊಳ್ಳಬೇಕಿತ್ತು. ಬೆತ್ತಲೆ ಕುಳಿತವನಿಗೆ ಬಟ್ಟೆಯ ಹೊದಿಕೆ ಕೊಡುವುದು ಮಾನವೀಯತೆ. ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಾ ಸಾಗಿದ ಹಾಗೆಲ್ಲ ನಾವು ಬೆತ್ತಲಾಗುತ್ತಲೇ ಇರುತ್ತೇವೆ. ನಾಗರಿಕತೆ ಬೆಳೆದ ಹಾಗೆ, ಸಾಕ್ಷರತೆ ವೃದ್ಧಿಸಿದ ಹಾಗೆ ನಾವು ಮನುಷ್ಯರಾಗುತ್ತಾ ಸಾಗಬೇಕಿತ್ತು. ಆದರೆ ನಾವು ಇನ್ನೂ ರಾಕ್ಷಸರಾಗುತ್ತಲೇ ಸಾಗುತ್ತಿದ್ದೇವೆ. ಎಲ್ಲ ರೋಗಗಳಿಗೂ ಔಷಧ ಕಂಡುಹಿಡಿಯುವ ಪುಣ್ಯಾತ್ಮರು ಜಾತಿ ಎಂಬ ಈ ಮನೋರೋಗಕ್ಕೆ ಮಾತ್ರ ಇನ್ನೂ ಔಷಧ ಕಂಡುಹಿಡಿದಿಲ್ಲ ಅಥವಾ ಔಷಧ ಗೊತ್ತಿದ್ದರೂ ನಾವು ಅದನ್ನು ಬಳಸುತ್ತಿಲ್ಲ.

ಮಹಾರಾಜರ ಊರು ಮೈಸೂರಿನಲ್ಲಿ ನಡೆದ ಘಟನೆಯಂತೂ ಇನ್ನೂ ಭೀಕರ. ನೀಡಿದ ಬಡ್ಡಿ ಸಾಲದ ವಸೂಲಾತಿಗಾಗಿ ಮನೆ ಜಪ್ತಿ ಮಾಡುವುದನ್ನು ಕೇಳಿದ್ದೇವೆ. ಆಸ್ತಿ ಜಪ್ತಿಯಾದ ಉದಾಹರಣೆಗಳಿವೆ. ಮನೆಯಲ್ಲಿ ಇರುವ ಸಾಮಾನುಗಳನ್ನು ಜಪ್ತಿ ಮಾಡುವುದೂ ಮಾಮೂಲು. ಆದರೆ ಸಾಲ ಮತ್ತು ಬಡ್ಡಿ ವಸೂಲಾತಿಗಾಗಿ ಮನೆಯ ಮಗಳನ್ನೇ ಒತ್ತೆ ಇಟ್ಟುಕೊಳ್ಳುವುದು ರಾಕ್ಷಸೀ ಪ್ರವೃತ್ತಿ. ಬಡ್ಡಿ ಹಣಕ್ಕಾಗಿ ಬಲವಂತವಾಗಿ ಮನೆಗೆ ನುಗ್ಗಿ ಮಗಳನ್ನು ಕರೆದುಕೊಂಡು ಹೋಗಿದ್ದಲ್ಲದೆ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದು ಮತ್ತು ದಂಧೆಗೆ ಬಳಸಿಕೊಂಡಿದ್ದು ಇನ್ನೂ ಪೈಶಾಚಿಕ ಕೃತ್ಯ. ಈ ಮನಃಸ್ಥಿತಿಗೆ ಏನೆನ್ನಬೇಕು? ನಮ್ಮ ಮನಸ್ಸುಗಳು ಅಷ್ಟೊಂದು ಕೊಳಕಾಗಿ ಹೋಗಿವೆಯೇ?

ನಾವು ಜೀವಂತ ಇರುವ ಸಮಾಜದಲ್ಲಿಯೇ ಇಂತಹ ಘಟನೆ ನಡೆದಿದೆ. ಆದರೆ ಅದಕ್ಕೆ ಎಷ್ಟು ಸ್ಪಂದನೆ ನೀಡಬೇಕಿತ್ತೋ ಅಷ್ಟು ಸ್ಪಂದನೆ ನಮ್ಮ ಸಮಾಜದಿಂದ ವ್ಯಕ್ತವಾಗಿಲ್ಲ. ಆ ಪುಟ್ಟ ಕಂದನ ಆಕ್ರಂದನ ನಮ್ಮ ಮನಸ್ಸಿನಲ್ಲಿ ಪಶ್ಚಾತ್ತಾಪದ ಒರತೆಯನ್ನು ಹುಟ್ಟಿಸಲಿಲ್ಲ, ನಮ್ಮ ಕಣ್ಣಲ್ಲಿ ಒಂದು ಹನಿ ನೀರನ್ನೂ ತರಿಸಲಿಲ್ಲ ಎಂದರೆ, ಈ ಸಮಾಜ ಬದುಕಿದೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ನಿಜವಾಗಿಯೂ ಸಮಾಜ ಎನ್ನುವುದು ಸತ್ತು ಹೋಗಿದೆ. ಈಗ ಇರುವುದು ಅದರ ಅಸ್ಥಿಪಂಜರ ಮಾತ್ರ.

ಇಂತಹ ಕೃತ್ಯವನ್ನು ಮಾಡಿದ್ದು ಒಬ್ಬ ಪೊಲೀಸ್ ಕಾನ್‌ಸ್ಟೆಬಲ್‌ ಎನ್ನುವುದು ಕೂಡ ಅತ್ಯಂತ ಗಂಭೀರವಾದ ವಿಚಾರ. ಅನ್ಯಾಯಕ್ಕೆ ಒಳಗಾದ ಬಾಲಕಿಗೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾದ ಪೊಲೀಸ್ ವ್ಯವಸ್ಥೆ ಈಗಲೂ ದುಷ್ಟಕೂಟದ ಪರವಾಗಿ ನಿಂತಿದೆಯೇನೋ ಎನ್ನುವ ರೀತಿಯಲ್ಲಿ ನಡೆದು
ಕೊಳ್ಳುತ್ತಿರುವುದು ಇನ್ನೂ ಹೇಸಿಗೆಯ ವಿಚಾರ. ಮೀಟರ್ ಬಡ್ಡಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಪದೇಪದೇ ಭರವಸೆ ನೀಡುವ ಮುಖ್ಯಮಂತ್ರಿ ಈ ಘಟನೆಯನ್ನು ಅವಲೋಕಿಸಬೇಕು. ಗೃಹ ಸಚಿವರೂ ಇತ್ತ ಗಮನ ನೀಡಿ ದುಷ್ಟರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

ಅದೊಂದು ಮಧ್ಯಮ ವರ್ಗದ ಕುಟುಂಬ. ತಾತ ಸರ್ಕಾರಿ ವೃತ್ತಿಯಲ್ಲಿದ್ದು ನಿವೃತ್ತರಾದವರು. ಮಗಳು ಪದವೀಧರೆ. ಅಳಿಯ ಅಡುಗೆ ಗುತ್ತಿಗೆದಾರ. ಇದೀಗ ಎಂಟನೇ ತರಗತಿ ಮುಗಿಸಿರುವ ಮೊಮ್ಮಗಳು ಆ ಕುಟುಂಬದ ಏಕೈಕ ಭರವಸೆ. ಆರಕ್ಕೇರದ, ಮೂರಕ್ಕಿಳಿಯದ ಬದುಕು. ಯಾರಿಗೂ ತಲೆ ಬಾಗದ, ಕೈಯೊಡ್ಡದ ದುಡಿದು ತಿನ್ನುವ ಕುಟುಂಬ. ಆದರೆ ಕಾಲ ಅತ್ಯಂತ ಕ್ರೂರಿ. ಆ ಬಾಲಕಿಯ ಅಜ್ಜಿಯ ಮಿದುಳಿನಲ್ಲಿ ಹುಣ್ಣಾಯಿತು. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಅದಕ್ಕೆ ಸಾಕಷ್ಟು ಹಣ ಬೇಕಿತ್ತು. ಸಾಲ ಮಾಡುವುದು ಅನಿವಾರ್ಯವಾಗಿತ್ತು. ಅಜ್ಜಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಾಲ ಮಾಡಲು ಆ ಕುಟುಂಬ ಮುಂದಾಯಿತು. ಆದರೆ ಆ ಸಾಲವೇ ಶೂಲವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ.

ಇವರ ಮನೆಯ ಈ ಪರಿಸ್ಥಿತಿಯನ್ನು ಅರಿತ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್‌, ಅಗತ್ಯವಾದ ಹಣವನ್ನು ತಾನು ಕೊಡಿಸುವುದಾಗಿ ನಂಬಿಸಿದ. ವಾರಕ್ಕೆ ಶೇ 20ರಂತೆ ಬಡ್ಡಿ ದರದಲ್ಲಿ ಸಾಲವನ್ನೂ ಕೊಡಿಸಿದ. ಆ ಹಣದಲ್ಲಿ ಅಜ್ಜಿಗೆ ಶಸ್ತ್ರಕ್ರಿಯೆ ಆಯಿತು. ಆದರೆ ಈ ಕುಟುಂಬಕ್ಕೆ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಆಗ ಈ ಆಪತ್ಬಾಂಧವನ ನಿಜ ಬಣ್ಣ ಬಯಲಾಗತೊಡಗಿತು. ಹಣಕ್ಕಾಗಿ ಆತ ಪೀಡಿಸಲು ಶುರುಮಾಡಿದ. ಕುಟುಂಬಕ್ಕೆ ಬೆದರಿಕೆ ಹಾಕಿದ. ಕೆಲವೇ ದಿನಗಳಲ್ಲಿ ಮನೆಗೆ ನುಗ್ಗಿ, ಮೊಗ್ಗಿನಂತಿದ್ದ ಮೊಮ್ಮಗಳನ್ನು ಹೊತ್ತೊಯ್ದ. ಮೀಟರ್ ಬಡ್ಡಿಯ ವಸೂಲಾತಿಗೆ ಮಗುವಿನ ದೇಹವನ್ನು ಬಳಸಿಕೊಂಡ. ಒತ್ತೆ ಇಟ್ಟುಕೊಂಡ ವ್ಯಕ್ತಿಗಳಿಂದ ಮಗಳ ಮೇಲಾಗುತ್ತಿದ್ದ ದೌರ್ಜನ್ಯವನ್ನು ನೋಡಲಾಗದೆ ಅಪ್ಪ ವಿಷ ಕುಡಿದು ಆಸ್ಪತ್ರೆ ಸೇರಿದ. 76 ವರ್ಷದ ಅಜ್ಜನಿಗೆ ಮೂಕರೋದನ ಬಿಟ್ಟರೆ ಬೇರೆ ಮಾರ್ಗವೇ ಇರಲಿಲ್ಲ.

ಅಂತೂ ಅಜ್ಜ ಈ ಸಂಕಷ್ಟದ ಕತೆಯನ್ನು ‘ಒಡನಾಡಿ’ ಸೇವಾ ಸಂಸ್ಥೆಗೆ ತಿಳಿಸಿದ. ಸಂಸ್ಥೆಯವರು ಪೊಲೀಸರಿಗೆ ದೂರು ಸಲ್ಲಿಸಿ ಬಾಲಕಿಯನ್ನು ಬಿಡಿಸಿದ್ದಾರೆ. ಬಾಲಕಿಯನ್ನು ಒತ್ತೆ ಇಟ್ಟುಕೊಂಡಿದ್ದ ಕಾನ್‌ಸ್ಟೆಬಲ್‌ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸುವುದು ಬಾಕಿ ಇದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರಂತೆ. ಆದರೆ ಆ ಬಲೆಯಲ್ಲಿ ಅವರು ಯಾಕೋ ಇನ್ನೂ ಬೀಳುತ್ತಲೇ ಇಲ್ಲ. ಇನ್ನೂ ಅಚ್ಚರಿಯ ಅಂಶ ಎಂದರೆ, ಪೊಲೀಸರು ಹುಡುಕುತ್ತಿರುವ ವ್ಯಕ್ತಿಗಳಲ್ಲಿ ಒಬ್ಬ ಉಪನ್ಯಾಸಕನೂ ಇದ್ದಾನಂತೆ. ರಕ್ಷಣೆ ಕೊಡುವ ಪೊಲೀಸ್ ಕಾನ್‌ಸ್ಟೆಬಲ್‌ನ ರಾಕ್ಷಸ ಕೃತ್ಯಕ್ಕೆ ಒಬ್ಬ ವಿದ್ಯಾಗುರುವೂ ನೀರು ಎರೆದಿದ್ದಾನೆ.

ಕಾನೂನು ತನ್ನ ಕೆಲಸವನ್ನು ಮಾಡಲಿ. ಆದರೆ ಇಂತಹ ಸಂಕಷ್ಟಕ್ಕೆ ಈಡಾದ ಕುಟುಂಬದ ಕಣ್ಣೀರು ಒರೆಸಲು ಸಮಾಜ ಮುಂದಾಗದಿದ್ದರೆ ಹೇಗೆ? ಬದುಕು ಏನೆಂಬುದನ್ನು ಇನ್ನೂ ಅರಿಯುವ ಮೊದಲೇ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ, ಬದುಕು ಕಟ್ಟಿಕೊಳ್ಳಲು ಭರವಸೆಯ ಮೆಟ್ಟಿಲು ಜೋಡಿಸುವವರು ಯಾರು? ಬೀದಿಗೆ ಬಿದ್ದ ಆ ಕುಟುಂಬಕ್ಕೆ ಬದುಕುವ ಆಸೆಯನ್ನು ಹುಟ್ಟಿಸುವ ಪರಿ ಹೇಗೆ?

ಸಮಾಜ ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಆಲೋಚನೆ ಮಾಡದಿದ್ದರೆ ಅವು ಇದ್ದೂ ಸತ್ತಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT