ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಭಟ್ಟ ಅಂಕಣ - ಅನುಸಂಧಾನ| ‘ಗುರು’ ಲಘುವಾದರೆ ಹೇಗೆ ಸ್ವಾಮಿ?

ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ದುರ್ವರ್ತನೆಗಳನ್ನು ಜೋಳಿಗೆಗೆ ಹಾಕಿ ಎಂದು ಮಠಾಧೀಶರು ಕೇಳಬೇಕು
Last Updated 29 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಂದಿನ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಮಗುವೊಂದು ‘ಭ್ರಷ್ಟಾಚಾರವನ್ನು ನಿಗ್ರಹಿಸುವುದು ಹೇಗೆ?’ ಎಂದು ಪ್ರಶ್ನೆ ಮಾಡಿತು. ಅದಕ್ಕೆ ಕಲಾಂ ಅವರು, ‘ಮಕ್ಕಳಿಂದಲೇ ಭ್ರಷ್ಟಾಚಾರವನ್ನು ನಿಗ್ರಹಿಸಲು ಸಾಧ್ಯ. ಭ್ರಷ್ಟಾಚಾರದಿಂದ ಸಂಗ್ರಹಿಸಿದ ಹಣದಿಂದ ತಂದ ಯಾವುದೇ ವಸ್ತು, ಉಡುಗೊರೆಯನ್ನು ಸ್ವೀಕರಿಸುವುದಿಲ್ಲಎಂದು ನಮ್ಮ ದೇಶದ ಎಲ್ಲ ಮಕ್ಕಳೂ ಪ್ರತಿಜ್ಞೆ ಮಾಡಬೇಕು. ತಂದೆ ತಾಯಿಗೆ ಇದನ್ನೇ ಹೇಳಬೇಕು. ಲಂಚದ ಹಣದಿಂದ ತರುವ ವಸ್ತುಗಳಿಗೆ ಕಿಮ್ಮತ್ತು ಇಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು’ ಎಂದು ಉತ್ತರಿಸಿದ್ದರು.

ರವೀಂದ್ರ ಭಟ್ಟ
ರವೀಂದ್ರ ಭಟ್ಟ

ಅದೇ ರೀತಿ ನಮ್ಮ ಮಠಾಧೀಶರೂ ‘ಯಾವುದೇ ಭ್ರಷ್ಟ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ, ಭ್ರಷ್ಟ ಅಧಿಕಾರಿಯೇ ಆಗಲಿ, ಭ್ರಷ್ಟ ರಾಜಕಾರಣಿಯೇ ಆಗಲಿ ಅವರಿಗೆ ಮಠದೊಳಕ್ಕೆ ಪ್ರವೇಶ ನೀಡುವುದಿಲ್ಲ, ಭ್ರಷ್ಟರನ್ನು ಗೆಲ್ಲಿಸುವಂತೆ ಮಠದ ಅನುಯಾಯಿಗಳಿಗೆ ಕರೆ ಕೊಡುವುದಿಲ್ಲ.’ ಎಂದು ಪ್ರತಿಜ್ಞೆ ಮಾಡಿದರೆ ಒಂದಿಷ್ಟು ಸುಧಾರಣೆಯಾಗಬಹುದೇನೋ? ಮಠಾಧೀಶರ ಇತ್ತೀಚಿನ ನಡವಳಿಕೆ ನೋಡಿದರೆ ನನ್ನದು ತಿರುಕನ ಕನಸು ಎನ್ನುವುದು ಸ್ಪಷ್ಟ.

ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು, ಗೆದ್ದ ಮೇಲೆ ಯಾರು ಮುಖ್ಯಮಂತ್ರಿಯಾಗಬೇಕು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಠಾಧೀಶರು ನಿರ್ದೇಶಿಸುವುದು ನಮ್ಮಲ್ಲಿ ಹೊಸತೇನೂ ಅಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿಯೂ ಆಯಕಟ್ಟಿನ ಸ್ಥಾನಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ನಿಯೋಜಿಸುವಲ್ಲಿಯೂ ಮಠಾಧೀಶರ ಪಾತ್ರ ಇದೆ ಎನ್ನುವುದು ಬಹಿರಂಗ ಗುಟ್ಟು. ಈಗ ಕೆಲವು ಮಠಾಧೀಶರು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಭ್ರಷ್ಟಾಚಾರ ನಡೆದಿದೆ, ಭಾರಿ ಹಗರಣವಾಗಿದೆ ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡ ಪ್ರಕರಣ
ದಲ್ಲಿ ಅಕ್ರಮವನ್ನು ಸಕ್ರಮ ಮಾಡುವವರ ಪರವಾಗಿ ಸ್ವಾಮೀಜಿಗಳು ವಕಾಲತ್ತು ಆರಂಭಿಸಿದ್ದಾರೆ. ಅಕ್ರಮ ಮಾಡಿದವರು ಬೇಡಿಕೆ ಸಲ್ಲಿಸುವುದು ಅವರ ಮನೋಧರ್ಮಕ್ಕೆ ಸರಿ. ಆದರೆ ಅದನ್ನು ಮನ್ನಿಸುವುದು?

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಸಿಐಡಿ ತನಿಖೆ ಸಾಬೀತುಪಡಿಸಿದೆ. ಯಾವ ಯಾವ ರೀತಿಯಲ್ಲಿ ಅಕ್ರಮಗಳು ನಡೆದಿವೆ ಎನ್ನುವುದನ್ನು ವಿವರವಾಗಿ ಬಹಿರಂಗ ಮಾಡಿದೆ. ಸಿಐಡಿ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಆ ಸಾಲಿನ ನೇಮಕಾತಿಯನ್ನು 2018ರ ಮಾರ್ಚ್ 9ರಂದು ಹೈಕೋರ್ಟ್ ರದ್ದುಪಡಿಸಿದೆ. ಸುಪ್ರೀಂ ಕೋರ್ಟ್ ಕೂಡ ಅದನ್ನು ಎತ್ತಿ ಹಿಡಿದಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಕೂಡ ನೇಮಕಾತಿ ಪಟ್ಟಿಯನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದೇ ಅಲ್ಲದೆ ನೇಮಕಾತಿ ಅಧಿಸೂಚನೆಯನ್ನೂ ರದ್ದು ಮಾಡಿದೆ. ಇಷ್ಟೆಲ್ಲ ಆದಮೇಲೂ ಸ್ವಾಮೀಜಿಗಳು ಇದರ ಪರ ವಕಾಲತ್ತು ವಹಿಸುವುದು ತರವಲ್ಲ.

ನೇಮಕಾತಿ ರದ್ದಾಗಿರುವುದರಿಂದ ಅಭ್ಯರ್ಥಿಗಳಿಗೆನಿರಾಸೆಯಾಗಿದೆ ನಿಜ. ಕೆಲವು ಅಭ್ಯರ್ಥಿಗಳಿಗೆ ಅನ್ಯಾಯವೂ ಆಗಿದೆ. ಆದರೆ ಅಕ್ರಮ ನಡೆದಿದ್ದು ಸಾಬೀತಾದ ಮೇಲೆ ಕೇವಲ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಬೇಕು ಎಂದು ವಾದಿಸುವುದು ಸರಿಯಲ್ಲ. ಅಕ್ರಮ ಎಸಗಿದವರು ಪ್ರಾಮಾಣಿಕರ ಹೆಸರಿನಲ್ಲಿ ಹುದ್ದೆ ಪಡೆದುಕೊಳ್ಳುವುದು ಆರೋಗ್ಯಪೂರ್ಣ ಸಮಾಜಕ್ಕೆ ಉತ್ತಮ ಸಂದೇಶವನ್ನೂ ರವಾನಿಸುವುದಿಲ್ಲ.

ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. ಅದಕ್ಕೆ ಅವರು ಎಲ್ಲ ರೀತಿಯ ಒತ್ತಡವನ್ನೂ ಹೇರುತ್ತಾರೆ. ಅದು ಸಹಜ. ರಾಜಕಾರಣಿಗಳ ಮೇಲೂ ಒತ್ತಡ ಹಾಕುತ್ತಾರೆ, ಸ್ವಾಮೀಜಿಗಳ ಕಾಲಿಗೂ ಬೀಳುತ್ತಾರೆ. ರಾಜಕಾರಣಿಗಳು ಮತ, ಜಾತಿ ಮುಂತಾದ ಕಾರಣಗಳಿಗಾಗಿ ಅಭ್ಯರ್ಥಿಗಳ ಪರವಾಗಿ ನಿಲ್ಲಬಹುದು. ನಿಂತಿದ್ದಾರೆ ಕೂಡ. ನೇಮಕಾತಿ ಅಧಿಸೂಚನೆಯನ್ನು ರದ್ದು ಮಾಡಿದ, ಈ ಹಗರಣದ ಬಗ್ಗೆ ತನಿಖೆಗೆ ಆದೇಶ ನೀಡಿದ ರಾಜಕಾರಣಿಗಳೇ ಈಗ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಎಂದೂ ಒತ್ತಾಯಿಸಿದ್ದಾರೆ. ವಿಧಾನ ಮಂಡಲದ ಅಧಿವೇಶನದಲ್ಲಿಯೂ ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಒಕ್ಕೊರಲಿನಿಂದ ಅಭ್ಯರ್ಥಿಗಳ ಪರ ಮಾತನಾಡಿದ್ದಾರೆ.

ರಾಜಕಾರಣಿಗಳೂ ಹೀಗೆ ಮಾಡಬಾರದು. ಸಾಂವಿಧಾನಿಕ ಅಧಿಕಾರವನ್ನು ಹೊಂದಿದ ಶಾಸಕರಾಗಲೀ ಸಚಿವರಾಗಲೀ ಅಕ್ರಮದ ಪರವಾಗಿ ನಿಲ್ಲುವುದು ಜವಾಬ್ದಾರಿಯುತ ನಡೆಯಲ್ಲ. ಅದು ಹೋಗಲಿ ಮಠಾಧೀಶರೂ ಹೀಗೆ ನೇರಾನೇರ ಅಕ್ರಮವನ್ನು ಸಮರ್ಥಿಸುವುದು ಹಾಗೂ ಅದಕ್ಕೆ ಬೆಂಬಲವಾಗಿ ನಿಲ್ಲುವುದು ಸಾಮಾಜಿಕವಾಗಿಯೂ ಮುಜುಗರದ ವಿಷಯ. ಉತ್ತರಪ್ರದೇಶ ಮತ್ತು ಕೆಲವು ರಾಜ್ಯಗಳಲ್ಲಿ ಸ್ವಾಮೀಜಿಗಳು ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿ ಸಾಂವಿಧಾನಿಕ ಅಧಿಕಾರವನ್ನು ಪಡೆದು ಕೊಂಡಿದ್ದಾರೆ. ಅದು ಪ್ರಜಾಪ್ರಭುತ್ವದ ದಾರಿ ಎನ್ನಬಹುದು. ಸಾಂವಿಧಾನಿಕ ಅಧಿಕಾರವೇ ಇಲ್ಲದೆ ಸವಾರಿ ಮಾಡುವುದನ್ನು ಏನನ್ನಬೇಕು? ಎಲ್ಲವನ್ನೂ ಬಿಟ್ಟ ಸನ್ಯಾಸಿಗಳಿಗೆ ಈ ಎರಡೂ ಮಾರ್ಗಗಳು ವರ್ಜ್ಯವಾಗಬೇಕು.

ಯಾರನ್ನು ಮಂತ್ರಿ ಮಾಡಬೇಕು, ಯಾವ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು, ಯಾವ ಅಧಿಕಾರಿ ಯಾವ ಸ್ಥಾನದಲ್ಲಿ ಇರಬೇಕು ಎಂದು ನಿರ್ದೇಶಿಸುವುದೂ ತಪ್ಪು. ಆದರೆ ಅದಕ್ಕಿಂತ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಇನ್ನೂ ಘನಘೋರ. ಯಾಕೆಂದರೆ ಆಯೋಗದ ನೇಮಕಾತಿಯಿಂದ ಹುದ್ದೆ ಪಡೆಯುವ ಅಧಿಕಾರಿಗಳು ಮೂವತ್ತಕ್ಕೂ ಹೆಚ್ಚು ವರ್ಷ ಅಧಿಕಾರದಲ್ಲಿ ಇರುತ್ತಾರೆ. ಅಷ್ಟು ದಿನವೂ ಅವರು ಋಣ ಸಂದಾಯಕ್ಕೆ ನಿಂತುಬಿಟ್ಟರೆ ಸಾಮಾಜಿಕ ಏರುಪೇರುಗಳಾಗುತ್ತವೆ. ಅಲ್ಲದೆ ಭ್ರಷ್ಟಾಚಾರದ ಮೂಲಕವೇ ನೇಮಕವಾದವರಿಂದ ಪ್ರಾಮಾಣಿಕ ಸೇವೆಯನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಇದಕ್ಕೆ ಯಾರನ್ನು ಹೊಣೆ ಮಾಡುವುದು? ಹೀಗೆ ಕರ್ನಾಟಕ ಲೋಕಸೇವಾ ಆಯೋಗದ ಮೇಲೆ ಹಿಡಿತ ಸಾಧಿಸಿ ಅದರಿಂದ ಉಪಯೋಗ ಪಡೆದ ರಾಜಕೀಯ ಕುಟುಂಬವೊಂದು ಇರುವುದು ಎಲ್ಲರಿಗೂ ಗೊತ್ತು. ಅದರಿಂದ ಏನೆಲ್ಲಾ ಅನುಕೂಲ, ಅನನುಕೂಲ ಆಗಿದೆ ಎನ್ನುವುದೂ ಗೊತ್ತು. ಅದೇ ಕೆಲಸವನ್ನು ಮಠಾಧೀಶರು ಮಾಡಲು ಹೊರಟರೆ ದೂರುವುದು ಯಾರನ್ನು?

ಅಕ್ರಮಗಳಲ್ಲಿ ಭಾಗಿಯಾದ ಆಯೋಗದ ಸದಸ್ಯರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ. ಎಲ್ಲರಿಗೂ ಕ್ಲೀನ್‌ಚಿಟ್ ನೀಡಿದೆ. ಆ ಮೂಲಕ ಅಕ್ರಮವನ್ನು ಸಕ್ರಮ ಮಾಡಲು ಮುಂದಾಗಿದೆ. ಈಗ ಮಸೂದೆ ಮಂಡಿಸಿಯೋ ಅಥವಾ ಸುಗ್ರೀವಾಜ್ಞೆ ಜಾರಿ ಮಾಡಿಯೋ ಎಲ್ಲರಿಗೂ ನೇಮಕಾತಿ ಪತ್ರ ನೀಡುವುದಕ್ಕೂ ಹೊರಟಿದೆ. 362 ಅಭ್ಯರ್ಥಿಗಳಿಗೆ ನೆರವು ನೀಡುವುದಕ್ಕೆ ಲಕ್ಷಾಂತರ ಅಭ್ಯರ್ಥಿಗಳ ಕನಸು ಕಸಿಯುವುದು ಸರಿಯಾದ ಕ್ರಮವಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ ಇರುವ ಎಲ್ಲ ಕೆಟ್ಟ ಭಾವನೆಗಳನ್ನು ಸರಿಪಡಿಸುವುದು ಆದ್ಯತೆಯಾಗಬೇಕೇ ವಿನಾ ಅದನ್ನು ಮುಂದುವರಿಸುವುದು ಸರ್ಕಾರದ ಕ್ರಮವಾಗಬಾರದು.

‘ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ ಇದೆ ನಿಜ. ಹಿಂದೆಯೂ ಇತ್ತು. ಈಗಲೂ ಇದೆ. ಹಿಂದಿನ ನೇಮಕಾತಿ ಗಳಲ್ಲಿ ಅಕ್ರಮ ಎಸಗಿದವರು ನೇಮಕಾತಿ ಹೊಂದಿ ಹುದ್ದೆಯಲ್ಲಿದ್ದಾರೆ. 2011ರ ನಂತರ ನಡೆದ ನೇಮಕಾತಿಗಳಲ್ಲಿಯೂ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ. ಆದರೆ ಆ ಸಾಲಿನ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರೆಲ್ಲರೂ ಕೆಲಸಕ್ಕೆ ಹಾಜರಾಗಿದ್ದಾರೆ. 2011ನೇ ಸಾಲಿನ ಅಭ್ಯರ್ಥಿಗಳನ್ನು ಮಾತ್ರ ಬಲಿಪಶು ಮಾಡುವುದು ಸರಿಯಲ್ಲ’ ಎಂಬ ವಾದವನ್ನೂ ಮಂಡಿಸಲಾಗುತ್ತಿದೆ. ಇದನ್ನು ಕೇಳಿ ಅಳಬೇಕೋ ನಗಬೇಕೋ?

ಇಳಕಲ್ ಸ್ವಾಮೀಜಿ ಮತ್ತು ಇತರ ಕೆಲವು ಮಠಾಧೀಶರು ಒಂದು ಕಾಲದಲ್ಲಿ ಜೋಳಿಗೆ ಹಾಕಿಕೊಂಡು ಭಕ್ತರ ಕೆಟ್ಟ ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕುವಂತೆ ಆಂದೋಲನ ನಡೆಸಿದ್ದರು. ಈಗ ಮಠಾಧೀಶರು ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮನೆ ಮನೆ ಬಾಗಿಲಿಗೆ ಹೋಗಿ, ‘ಭ್ರಷ್ಟಾಚಾರ ವನ್ನೂ ಲಂಚಗುಳಿತನವನ್ನೂ ಸ್ವಜನಪಕ್ಷಪಾತವನ್ನೂ ಜೋಳಿಗೆಗೆ ಹಾಕಿ’ ಎಂದು ಕೇಳುವ ಕಾಲ ಬಂದಿದೆ. ಅದಕ್ಕೆ ಮಠಾಧೀಶರು ಮುಂದಾದರೆ ದೇಶಕ್ಕೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT