ಮಂಗಳವಾರ, ಸೆಪ್ಟೆಂಬರ್ 21, 2021
21 °C
ರಾಜಕೀಯದಲ್ಲಿ ದಿನೇದಿನೇ ಅಪ್ರಸ್ತುತವಾಗುತ್ತಿರುವ ಮತದಾರ

ಅನುಸಂಧಾನ: ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ?!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಮೊದಲು ಈ ಮೂರು ವಿದ್ಯಮಾನಗಳನ್ನು ಗಮನಿಸೋಣ. ಮೊದಲನೆಯದು, ‘ಹೈಕಮಾಂಡ್ ಸೂಚನೆ ಬಂದ ತಕ್ಷಣ ರಾಜೀನಾಮೆ ನೀಡುತ್ತೇನೆ’ ಎಂದು ಹೇಳುತ್ತಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಹೈಕಮಾಂಡ್ ಅನ್ನು ಹೊಗಳುತ್ತಲೇ ತಮಗೆ ಆದ ಅನ್ಯಾಯಗಳನ್ನೂ ಅವರು ಹೇಳಿಕೊಂಡಿದ್ದಾರೆ. ಅಸಮಾಧಾನವನ್ನೂ ಹೊರಕ್ಕೆ ಹಾಕಿದ್ದಾರೆ. ಬಹಿರಂಗದ ಹೊಗಳಿಕೆ ಅಂತರಂಗದ ಗೊಣಗಾಟ. ಅವರು ಪ್ರಜಾಪ್ರಭುತ್ವದ ರೀತಿಯಲ್ಲಿ ಮುಖ್ಯಮಂತ್ರಿ ಗಾದಿಗೆ ಏರಿರಲಿಲ್ಲ. ಈಗ ಪ್ರಜಾ
ಪ್ರಭುತ್ವದ ರೀತಿಯಲ್ಲಿ ಅಧಿಕಾರದಿಂದ ಇಳಿಯಲೂ ಇಲ್ಲ. ‘ಹೈಕಮಾಂಡ್ ಸೂಚಿಸಿದವರೇ ಮುಂದಿನ ಮುಖ್ಯ
ಮಂತ್ರಿಯಾಗುತ್ತಾರೆ’ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದರು. ಅದು ನಿಜವಾಗಿದೆ.

ಎರಡನೆಯದು, ಆಡಳಿತ ಬಿಜೆಪಿ ಪಕ್ಷದ್ದು ಈ ಕತೆ ಯಾದರೆ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಕತೆ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಒಂದಿಷ್ಟು ಮಂದಿ, ಇಲ್ಲ ಡಿ.ಕೆ.ಶಿವಕುಮಾರ್ ಎಂದು ಇನ್ನೊಂದಿಷ್ಟು ಮಂದಿ, ಜಿ.ಪರಮೇಶ್ವರ ಎಂದು ಮತ್ತೊಂದಿಷ್ಟು ಮಂದಿ ಜೈಕಾರ ಹಾಕುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ, ಸಂದಿಯಲ್ಲಿ ತಮಗೂ ಅವಕಾಶ ಸಿಕ್ಕೀತು ಎಂದು ಕಾಯುತ್ತಿದ್ದಾರೆ. ಇದರ ನಡುವೆ ‘ನಮ್ಮದು ರಾಷ್ಟ್ರೀಯ ಪಕ್ಷ. ಯಾರು ಮುಂದಿನ ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಜಾಣತನದಿಂದ ಜಾರಿಕೊಳ್ಳುತ್ತಿದ್ದಾರೆ.

ಮೂರನೆಯದ್ದು ಮತ್ತು ಅತ್ಯಂತ ಮಹತ್ವದ್ದು, ‘ರಾಜ್ಯದ ಮಠಾಧೀಶರು ಚರ್ಚಿಸಿ ನಿರ್ಧಾರಕ್ಕೆ ಬಂದಿ ದ್ದೇವೆ. ಯಡಿಯೂರಪ್ಪ ಅವರ ಕಣ್ಣೀರನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಅದು ಯಡಿಯೂರಪ್ಪ ಕಣ್ಣೀರಲ್ಲ. ಇಡೀ ಕರುನಾಡಿನ ಕಣ್ಣೀರು. ಮುಂದಿನ ದಿನಗಳಲ್ಲಿ ನಾವು ಬಿಜೆಪಿಗೆ ಕಣ್ಣೀರು ಹಾಕಿಸುತ್ತೇವೆ’ ಎಂದು ಸ್ವಾಮೀಜಿ ಒಬ್ಬರು ಹೇಳುತ್ತಾರೆ. ಜೊತೆಗೆ ಯಡಿಯೂರಪ್ಪ ಅವರ ಪರವಾಗಿ ಮಠಾಧೀಶರು ಶಕ್ತಿ ಪ್ರದರ್ಶನವನ್ನೂ ಮಾಡುತ್ತಾರೆ. ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದನ್ನೂ ಮಠಾಧೀಶರು ಹೇಳುತ್ತಾರೆ. ಮುಖ್ಯಮಂತ್ರಿಗೆ ಬೆದರಿಕೆಯನ್ನೂ ಹಾಕುತ್ತಾರೆ. ಮಠಾಧೀಶರೊಬ್ಬರನ್ನೇ ಯಾಕೆ ಮುಖ್ಯಮಂತ್ರಿ ಮಾಡಬಾರದು ಎಂದು ಕೇಳುವ ಸ್ವಾಮೀಜಿಗಳೂ ಇದ್ದಾರೆ.

ಇದೆಲ್ಲ ಏನನ್ನು ಸೂಚಿಸುತ್ತದೆ? ಸ್ಪಷ್ಟವಾಗಿ ಹೇಳುವು ದಾದರೆ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಈಗ ಉಳಿದಿರುವುದು ಪ್ರಜಾಪ್ರಭುತ್ವದ ಕಳೇಬರ ಮಾತ್ರ. ಆ ಕಳೇಬರದ ಮೇಲೆಯೇ ರಾಜಕಾರಣಿಗಳ ದರ್ಬಾರು ನಡೆಯುತ್ತಿದೆ. ರಾಜಕೀಯದ ಯಾವುದೇ ಪ್ರಕ್ರಿಯೆಯಲ್ಲಿ ಜನರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ. ಮತದಾರರನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಯಾರು ಕೂಡ ಹೇಳುತ್ತಿಲ್ಲ. ಇಡೀ ರಾಜಕೀಯದಲ್ಲಿ ಮತದಾರರು ಅಪ್ರಸ್ತುತರಾಗಿಬಿಟ್ಟಿದ್ದಾರೆ. ಮಾತು ಮಾತಿಗೂ ದೆಹಲಿಗೆ ಹೋಗುತ್ತೇವೆ, ದೆಹಲಿಗೆ ಹೋಗುತ್ತೇವೆ, ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎನ್ನುತ್ತಾರೆ. ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ?

ನಿಜ, ನಮ್ಮ ಜಾತಿಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾದರೆ ನಮಗೆ ಹೆಮ್ಮೆ ಎನಿಸುವುದು ಸಹಜ. ಮಠಾಧೀಶರೂ ಸಂಭ್ರಮ ಪಡಬಹುದು. ಅದರಲ್ಲಿ ತಪ್ಪಿಲ್ಲ. ಆದರೆ ಅದೇ ವ್ಯಕ್ತಿ ಜೈಲಿಗೆ ಹೋದರೆ ನಮಗೆ ನಾಚಿಕೆಯೂ ಆಗಬೇಕಲ್ಲ. ನಾಚಿಕೆಯಾಗುವುದಿಲ್ಲ ಎಂದರೆ ನಾವು ಎಲ್ಲ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇವೆ ಎಂದೇ ಅರ್ಥ. ಜನನಾಯಕನೊಬ್ಬ ತಪ್ಪು ಮಾಡಿ ಜೈಲಿಗೆ ಹೋದಾಗ ನಾಚಿಕೆಯಾಗುವುದು ಬಿಡಿ, ಜೈಲಿಗೇ ಹೋಗಿ ಧೈರ್ಯ ತುಂಬುವ ಸ್ಥಿತಿ ಮಠಾಧೀಶರಿಗೆ ಬರಬಾರದು. ಹಾಗಾದರೆ ಅದು ಮಠಮಾನ್ಯಗಳ ದುರಂತವೂ ಹೌದು, ರಾಜಕಾರಣದ ದುರಂತವೂ ಹೌದು.

ಈಗ ಸದ್ಯದ ಕರ್ನಾಟಕದ ರಾಜಕೀಯದಲ್ಲಿ ಆಗಿರುವುದೂ ಅದೇ. ಯಾರಿಗೂ ಯಾವುದಕ್ಕೂ ನಾಚಿಕೆಯಾಗುತ್ತಿಲ್ಲ. ಎಲ್ಲರೂ ಬೆತ್ತಲಾಗಿದ್ದಾರೆ. ಇದನ್ನೆಲ್ಲಾ ನೋಡಿ ಈಗ ನಿಜವಾಗಿ ನಾಚಿಕೆಯಾಗಬೇಕಾಗಿದ್ದು ಮತದಾರರಿಗೆ. ಇಂತಹ ನಾಯಕರನ್ನು ನಾವು ಗೆಲ್ಲಿಸಿದ್ದೇವಲ್ಲ ಎಂದು ಅವರು ಕೈಕೈ ಹಿಸುಕಿಕೊಳ್ಳಬೇಕು ಅಷ್ಟೆ. ಬೇರೆ ಏನನ್ನೂ ಮಾಡಲು ಸಾಧ್ಯವಾಗದ ಅಸಹಾಯಕತೆಯಲ್ಲಿ ಅವರಿದ್ದಾರೆ. ಇದಕ್ಕೆ ಔಷಧಿಯನ್ನೂ ಅವರೇ ಕಂಡುಹಿಡಿಯಬೇಕು. ಈ ರೋಗಕ್ಕೆ ವ್ಯಾಕ್ಸಿನ್ ಸಿದ್ಧಪಡಿಸುವುದು ಅಷ್ಟು ಸುಲಭದ ಮಾತಲ್ಲ.

ಯಡಿಯೂರಪ್ಪ ಈ ಬಾರಿ ಹೇಗೆ ಮುಖ್ಯಮಂತ್ರಿಯಾದರು ಎನ್ನುವುದನ್ನು ಒಮ್ಮೆ ಆಲೋಚಿಸಿ. 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದಿದ್ದಾಗ ರಾಜಕೀಯ ಎದುರಾಳಿಗಳು ಸೇರಿಕೊಂಡು ಒಂದು ಚೌಚೌ ಸರ್ಕಾರ ಮಾಡಿದರು. ಅಲ್ಲಿ ನಿರ್ದಿಷ್ಟ ಕಾರ್ಯಸೂಚಿಯೂ ಇರಲಿಲ್ಲ, ರಾಜಕೀಯ ಪ್ರೌಢತೆಯೂ ಇರಲಿಲ್ಲ, ಸ್ಪಷ್ಟತೆಯೂ ಇರಲಿಲ್ಲ. ಹುಟ್ಟುವಾಗಲೇ ಅತಂತ್ರವನ್ನು ಕಟ್ಟಿಕೊಂಡ ಸರ್ಕಾರ ಆಗಿತ್ತು. ನಂತರ ಯಡಿಯೂರಪ್ಪ ‘ಆಪರೇಷನ್ ಕಮಲ’ ಮಾಡಿ ಮುಖ್ಯಮಂತ್ರಿಯಾದರು. ಆಗಲೂ ಸ್ಥಿರತೆಯ ಬಗ್ಗೆ ಅನುಮಾನಗಳಿದ್ದವು. ಅದು ಈಗ ನಿಜವಾಗಿದೆ.

2018ರ ಚುನಾವಣೆ ಫಲಿತಾಂಶದ ಪ್ರಕಾರ, ಯಾರಿಗೂ ಮುಖ್ಯಮಂತ್ರಿಯಾಗುವ ಅರ್ಹತೆಯನ್ನು ಮತದಾರರು ಕೊಟ್ಟಿರಲಿಲ್ಲ. ಮತದಾರರಿಂದ ತಿರಸ್ಕೃತ ರಾದವರೇ ಮುಖ್ಯಮಂತ್ರಿ ಗಾದಿಯ ಮೇಲೆ ಕುಳಿತರು. ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಆ ಮಟ್ಟಿಗೆ ಅದೊಂದು ದಾಖಲೆ. ಕರ್ನಾಟಕದಲ್ಲಿ ಮತ್ತ್ಯಾರೂ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿಲ್ಲ. ಆದರೆ ಒಂದು ಬಾರಿಯೂ ಸಂಪೂರ್ಣ ಬಹುಮತದಿಂದ ಅವರು ಮುಖ್ಯಮಂತ್ರಿಯಾಗಲಿಲ್ಲ ಎನ್ನುವುದೂ ಸತ್ಯ. ಒಂದು ಬಾರಿಯೂ ಪೂರ್ಣ ಪ್ರಮಾಣದ ಅವಧಿಯನ್ನು ಮುಗಿಸಲಿಲ್ಲ ಎನ್ನುವುದೂ ಸತ್ಯ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು ಹೇಗೆ ಸಾಧನೆಯೋ ಹಾಗೆಯೇ ಬಹುಮತ ಇಲ್ಲದೆ ಮುಖ್ಯಮಂತ್ರಿಯಾಗಿದ್ದೂ ಒಂದು ದಾಖಲೆ. ಇದೇ ಮಾತು ಕುಮಾರಸ್ವಾಮಿ ಅವರ ವಿಷಯದಲ್ಲಿಯೂ ನಿಜ.

ಈಗ ಮತ್ತೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಅವರಿಗೆ ಹೈಕಮಾಂಡ್‌ನ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಇರಲಿದೆ. ಅವರು ಕೂಡ ಮಾತು ಮಾತಿಗೆ ‘ದೆಹಲಿಗೆ ಹೋಗುತ್ತೇನೆ, ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ’ ಎನ್ನುವವರೇ ಆಗಿರುತ್ತಾರೆ. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಬಾರದಿದ್ದರೂ ಜನರಿಗೆ ಅನುಕೂಲ ಮಾಡಿಕೊಡುವ ಮುಖ್ಯಮಂತ್ರಿ ಬರುತ್ತಾನೋ ಎಂದು ಆಲೋಚಿಸಿದರೆ, ಅಂತಹ ವ್ಯಕ್ತಿಯೊಬ್ಬ ಬಂದೇಬರುತ್ತಾನೆ ಎಂಬ ವಿಶ್ವಾಸವೂ ಜನರಿಗೆ ಇಲ್ಲ.

ರಾಜಕಾರಣಿಗಳ ಬಗ್ಗೆಯೇ ಜನರಿಗೆ ಭ್ರಮನಿರಸನವಾಗಿದೆ. ಭರವಸೆಯ ನಾಯಕನೊಬ್ಬ ಈಗ ಹುಟ್ಟಿ ಬರಬೇಕಿದೆ. ಅದಕ್ಕೆ ಅಖಾಡ ಸಿದ್ಧವಾಗಿದೆ. ಆದರೆ ಆಶಾಕಿರಣ ಗೋಚರಿಸುತ್ತಿಲ್ಲ. ನೆಲ ಹದವಾಗಿದೆ. ಬೀಜ ಬಿತ್ತುವವರಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಬಾಗಿಲಿಗೆ ಬಂದಾಗಲೆಲ್ಲಾ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಅನಿಶ್ಚಯ ಇರಲಿಲ್ಲ. ಸಹಜವಾಗಿಯೇ  ಯಡಿಯೂರಪ್ಪ ಅವರು ಆಯ್ಕೆಯಾಗುತ್ತಿದ್ದರು. ಆದರೆ ಈಗ ಅವರ ಪರ್ವ ಮುಗಿದಿದೆ. ಅಲ್ಲಿ ಮತ್ತೊಬ್ಬ ಅಂತಹ ನಾಯಕ ಸದ್ಯಕ್ಕೆ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳು ಬೇಕಾದಷ್ಟು ಮಂದಿ ಇದ್ದಾರೆ. ನಾಯಕರ ಭಾರದಿಂದಲೇ ಆ ಪಕ್ಷ ನಲುಗುತ್ತಿದೆ. ಜಾತ್ಯತೀತ ಜನತಾದಳದಲ್ಲಿ ಮಾತ್ರ ಈ ಬಗ್ಗೆ ಗೊಂದಲವಿಲ್ಲ.

ಜಾತಿಯನ್ನೇ ನಂಬಿಕೊಂಡು ರಾಜಕಾರಣ ಮಾಡಿದರೆ ಉಳಿಗಾಲವಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದ್ದರೂ ನಮ್ಮ ರಾಜಕಾರಣಿಗಳು ಅದನ್ನು ಬಿಡಲು ಯತ್ನಿಸುತ್ತಿಲ್ಲ. ನಮಗೆ ಈಗ ಬೇಕಿರುವುದು ಬಿಜೆಪಿ ನಾಯಕನೋ ಕಾಂಗ್ರೆಸ್ ನಾಯಕನೋ ಜೆಡಿಎಸ್ ನಾಯಕನೋ ಅಲ್ಲ. ನಮಗೆ ಬೇಕಿರುವುದು ಜನನಾಯಕ. ಪಕ್ಷ ಯಾವುದಾದರೂ ಇರಲಿ. ಸರ್ವ ಜನಾಂಗದ ನಾಯಕನೊಬ್ಬ ಹುಟ್ಟಿ ಬರಲಿ. ಜನರ ನಡುವೆಯಿಂದಲೇ ಅಂತಹವನೊಬ್ಬ ಜನ್ಮ ತಾಳಲಿ.

ಕನ್ನಡದ ಖ್ಯಾತ ಕವಿ ಪ್ರೊ. ಚಂದ್ರಶೇಖರ ಪಾಟೀಲ ಅವರು ಒಮ್ಮೆ ಬರೆದಿದ್ದರು. ‘ರಾಜನರ್ತಕಿಯರಿಗೆ ರಾಜ ಮುಖ್ಯನೇ ಹೊರತು ವ್ಯಕ್ತಿಯಲ್ಲ’ ಎಂದು. ಈ ಮಾತನ್ನು ಅರ್ಥ ಮಾಡಿಕೊಳ್ಳುವ ರಾಜಕಾರಣಿಗಳನ್ನು ಎಲ್ಲಿ ಎಂದು ಹುಡುಕುವುದು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು