ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ‘ಪೇ ಪೀಪಲ್’ ಎನಬಾರದೇ?

ಮತದಾರನ ಭಾವನೆಗೆ ಚಿಕ್ಕಾಸಿನ ಬೆಲೆಯನ್ನೂ ಕೊಡದ ರಾಜಕಾರಣಿಗಳು
Last Updated 27 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈಗ ಪೇಸಿಎಂ ಗುಲ್ಲು. ಇಂತಹದ್ದೊಂದು ಅಭಿಯಾನಕ್ಕೆ ಮುಖ್ಯಮಂತ್ರಿ ಹೆಸರು ಬಳಸಿಕೊಂಡಿದ್ದು ತಪ್ಪು ಎಂದು ಆಡಳಿತಾರೂಢ ಬಿಜೆಪಿ ವಾದಿಸಿದರೆ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಅದನ್ನು ಸಂಕೇತಿಸುವಂತೆ ಈ ಅಭಿಯಾನವನ್ನು ಆರಂಭಿಸಲಾಗಿದೆ ಎನ್ನುತ್ತಿದೆ ವಿರೋಧ ಪಕ್ಷ ಕಾಂಗ್ರೆಸ್. ‘ನಮ್ಮ ಗುರಿ ಭ್ರಷ್ಟ ವ್ಯವಸ್ಥೆಯೇ ವಿನಾ ವೈಯಕ್ತಿಕ ನಿಂದನೆಯೂ ಅಲ್ಲ, ಮುಖ್ಯಮಂತ್ರಿ ಕುರ್ಚಿಯೂ ಅಲ್ಲ’ ಎಂದು ಕೂಡ ಹೇಳುತ್ತಿದೆ ಕಾಂಗ್ರೆಸ್.

ಕಾಂಗ್ರೆಸ್ ಬಿಟ್ಟ ಈ ಬ್ರಹ್ಮಾಸ್ತ್ರಕ್ಕೆ ಬಿಜೆಪಿ ಕಕ್ಕಾಬಿಕ್ಕಿಯಾಗಿರುವುದಂತೂ ನಿಜ. ಜನರು ಇದನ್ನು ಬೆಂಬಲಿಸುತ್ತಾರೆ, ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ. ಆದರೆ ಪೇಸಿಎಂ ಅಭಿಯಾನವನ್ನು ಸಾಮಾನ್ಯ ಜನರು ಮೊನಚಿನ ಸೊಗಸಿನ ಟೀಕೆ ಎಂಬಂತೆ ಆಸ್ವಾದಿಸುತ್ತಿದ್ದಾರೆ. ನಮ್ಮ ಆರೋಗ್ಯ ಸಚಿವರು ಈ ವಿಷಯಕ್ಕೆ ಜಾತಿಯ ಲೇಪವನ್ನೂ ಹಚ್ಚಿದ್ದಾರೆ. ‘ಕಾಂಗ್ರೆಸ್ ಪಕ್ಷ ಲಿಂಗಾಯತ ಮತ್ತು ಬ್ರಾಹ್ಮಣ ವಿರೋಧಿ’ ಎಂದು ಹೇಳುವ ಮೂಲಕ ಹೊಸ ತಿರುವು ನೀಡುವುದಕ್ಕೆ ಪ್ರಯತ್ನಪಟ್ಟಿದ್ದಾರೆ. ಆದರೆ ಅವರಿಗಾಗಲೀ ಇವರಿಗಾಗಲೀ ಮತದಾರರ ಬಗ್ಗೆ ಗೌರವ ಇದ್ದ ಹಾಗೆ ಕಾಣುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ನಿಜವಾಗಿ ಬೇಕಿರುವುದು ಪೇಸಿಎಂ ಅಲ್ಲ, ಬೇಕಾಗಿರುವುದು ‘ಪೇ ಪೀಪಲ್’. ಅಂದರೆ ಹಣವನ್ನು ಜನರಿಗಾಗಿ ವೆಚ್ಚ ಮಾಡಬೇಕು. ಜನರ ಕಲ್ಯಾಣಕ್ಕೆ ಸರ್ಕಾರದ ಹಣ ಸಂಪೂರ್ಣವಾಗಿ ವಿನಿಯೋಗವಾಗುವ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ಅದು ಜನರೇ ಕೊಟ್ಟ ಹಣ. ಅವರಿಗಾಗಿಯೇ ವ್ಯಯವಾಗಬೇಕು.

ಈಗ ವ್ಯವಸ್ಥೆ ಹೇಗಾಗಿದೆ ಎಂದರೆ, ಚುನಾವಣೆ ಬಂದಾಗ ಎಲ್ಲ ರಾಜಕಾರಣಿಗಳೂ ‘ಪೇ ಪೀಪಲ್‌’ ಮಾಡುತ್ತಾರೆ. ಗೆದ್ದು ಬಂದ ನಂತರ ‘ಪೀಪಲ್ ವಿಲ್ ಪೇ’ ಎನ್ನುವ ಹಾಗೆ ಆಗಿದೆ. ಹಣ ಪಡೆದು ಮತ ಮಾರಿಕೊಂಡವರಿಗೆ ಮಾತನಾಡಲು ಅಧಿಕಾರವಿಲ್ಲ. ‘ಕೊಟ್ಟವ ಕೋಡಂಗಿ ಇಸಕೊಂಡವ ಈರಭದ್ರ’ ಎನ್ನುವ ಗಾದೆ ಇಲ್ಲಿ ಉಲ್ಟಾ ಆಗಿದೆ. ರಾಜಕಾರಣದ ಚದುರಂಗದಾಟದಲ್ಲಿ ‘ಕೊಟ್ಟವನೇ ಈರಭದ್ರ. ಇಸಗೊಂಡವನೇ ಕೋಡಂಗಿ’.

ಪೇಸಿಎಂ ಅಭಿಯಾನದಿಂದ ಲಿಂಗಾಯತರ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಗ್ಯ ಸಚಿವರ ಮಾತಿಗೆ ಬರೋಣ. ಲಿಂಗಾಯತರ ಭಾವನೆಗೆ ಧಕ್ಕೆಯಾಗಿದೆ, ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ, ಮುಸ್ಲಿಮರ ಭಾವನೆಗೆ ಧಕ್ಕೆಯಾಗಿದೆ ಎನ್ನುವಂತಹದು ನಮ್ಮ ದೇಶದಲ್ಲಿ ಆಗಾಗ ಕೇಳಿಬರುವ ಮಾತು. ಅದರ ಹೆಸರಲ್ಲಿ ಅಥವಾ ಅದರಿಂದಾಗಿ ಸಂಘರ್ಷವೂ ಆಗುತ್ತದೆ, ಹಿಂಸಾಚಾರವೂ ನಡೆಯುತ್ತದೆ, ಹತ್ಯೆಗಳೂ ಆಗಿವೆ. ಆದರೆ ಯಾರೂ ಮತದಾರರ ಭಾವನೆಗೆ ಧಕ್ಕೆಯಾಗಿರುವ ಬಗ್ಗೆ ಯೋಚಿಸುವುದೇ ಇಲ್ಲ. ಅದಕ್ಕಾಗಿ ಅಭಿಯಾನವೂ ನಡೆಯುವುದಿಲ್ಲ.

ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ‘ಕಾಳಿ’ ಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವಿ ಕೈಯಲ್ಲಿ ಸಿಗರೇಟ್ ಹಿಡಿಸಿದ್ದಾರೆ, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಹೇಳಲಾಯಿತು. ಅದೇ ರೀತಿ ತ್ರಿಷಾ, ಹೃತಿಕ್ ರೋಷನ್, ಪ್ರಕಾಶ್ ರಾಜ್‌ ಮುಂತಾದವರೂ ಬೇರೆ ಬೇರೆ ಸಂದರ್ಭಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾದರು. ಇದೇ ಕಾರಣಕ್ಕಾಗಿಯೇ ಸಾಹಿತಿಗಳಾದ ಕೆ.ಎಸ್.ಭಗವಾನ್, ಕುಂವೀ, ಬಿ.ಎಲ್.ವೇಣು ಮುಂತಾದವರಿಗೆ ಜೀವ ಬೆದರಿಕೆಯೂ ಇದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದರು ಎಂಬ ಕಾರಣಕ್ಕೆ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಯೂ ಆಗಿದೆ. ಅದೇ ರೀತಿ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರೂ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಆದರೆ ಈ ದೇಶದಲ್ಲಿ ಮತದಾರರ ಭಾವನೆಗೆ ಧಕ್ಕೆ ತಂದ ಕಾರಣಕ್ಕೆ ಯಾರೂ ಜೀವ ಬೆದರಿಕೆಯನ್ನೂ ಎದರಿಸುತ್ತಿಲ್ಲ, ಸಂಕಷ್ಟಕ್ಕೂ ಸಿಲುಕಿಲ್ಲ, ಅವರ ಅಟಾಟೋಪಗಳಿಗೆ ಬ್ರೇಕ್ ಕೂಡ ಬಿದ್ದಿಲ್ಲ. ಏನಿದರ ಮ್ಯಾಜಿಕ್?

ಹೌದು, ಹಿಂದೂಗಳ ದೇವರ ಬಗ್ಗೆಯಾಗಲೀ ಮುಸ್ಲಿಮರ ದೇವರ ಬಗ್ಗೆಯಾಗಲೀ ಅಥವಾ ಯಾವುದೇ ಧರ್ಮದ ದೇವರು, ಸಂಸ್ಕೃತಿಯ ಬಗ್ಗೆಯಾಗಲೀ ಅವಹೇಳನ ಮಾಡಿದರೆ ಆಯಾ ಧರ್ಮದವರಿಗೆ ಬೇಸರವಾಗುತ್ತದೆ ನಿಜ. ಆ ರೀತಿ ಯಾರೂ ಮಾಡಬಾರದು. ಒಂದೊಮ್ಮೆ ಯಾರಾದರೂ ಹಾಗೆ ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆಯಾಗಬೇಕು. ಅದನ್ನು ಕಾನೂನುಬದ್ಧವಾಗಿ ಬಗೆಹರಿಸಿಕೊಳ್ಳಬೇಕು. ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು. ಆದರೆ ಸಂವಿಧಾನಬದ್ಧವಾಗಿ ಅಧಿಕಾರ ಸ್ವೀಕರಿಸಿದವರು, ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿದವರು ಭ್ರಷ್ಟಾಚಾರದಲ್ಲಿ ತೊಡಗಿದರೆ, ಸ್ವಜನ
ಪಕ್ಷಪಾತ ಮಾಡಿದರೆ ಯಾರ ಭಾವನೆಗೂ ಧಕ್ಕೆಯಾಗುವುದಿಲ್ಲವೇ? ರಾಜ್ಯದ ಎಲ್ಲ ಜಾತಿ– ಧರ್ಮದ ಜನರನ್ನೂ ಸಂರಕ್ಷಿಸುವ ಹೊಣೆ ಹೊತ್ತ ಮುಖ್ಯಮಂತ್ರಿಯನ್ನು ಲಿಂಗಾಯತ ಸಮುದಾಯಕ್ಕೆ ಸೀಮಿತಗೊಳಿಸಿದರೆ ಇತರರ ಭಾವನೆಗೆ ಧಕ್ಕೆಯಾಗುವುದಿಲ್ಲವೇ?

ಇನ್ನೊಂದು ದಿಕ್ಕಿನಿಂದ ಆಲೋಚಿಸೋಣ. ಬಿಬಿಎಂಪಿ ಚುನಾವಣೆ ಕಳೆದ ವರ್ಷವೇ ನಡೆಯಬೇಕಿತ್ತು. ಕುಂಟು ನೆಪಗಳಿಂದ ಅದನ್ನು ಮುಂದಕ್ಕೆ ಹಾಕಲಾಗಿದೆ. ಚುನಾವಣೆ ನಡೆಸುವಂತೆ ನ್ಯಾಯಾಲಯಗಳು ಹೇಳಿದ್ದರೂ ಅದನ್ನು ನಡೆಸದೇ ಕಾಲ ದೂಡುವುದು ಹೇಗೆ ಎಂಬ ಬಗ್ಗೆಯೇ ನಮ್ಮ ರಾಜಕಾರಣಿಗಳು ಚಿಂತನೆ ನಡೆಸಿದ್ದಾರೆ. ಅದೇ ರೀತಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನೂ ನಡೆಸಬೇಕಿತ್ತು. ಅವುಗಳನ್ನೂ ನಡೆಸದೇ ಇರುವುದಕ್ಕೆ ರಾಜಕಾರಣಿಗಳ ಬಳಿ ಕಾರಣಗಳಿವೆ. ಇವೆಲ್ಲಾ ಪ್ರಜಾಪ್ರಭುತ್ವದ ಅವಹೇಳನ ಅಲ್ಲವೇ?

ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದ 8 ಶಾಸಕರು ಏಕಾಏಕಿ ಬಿಜೆಪಿ ಸೇರಿರುವುದಾಗಿ ಘೋಷಿಸಿಕೊಂಡ ಘಟನೆ ಗೋವಾದಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿಯೂ ಇಂತಹದೇ ಪ್ರಹಸನ ನಡೆದಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಒಂದು ಪಕ್ಷದಿಂದ ಗೆದ್ದ ಶಾಸಕರು ಇನ್ನೊಂದು ಪಕ್ಷಕ್ಕೆ ಹಾರುವುದು ನಿಂತಿಲ್ಲ. ಪಕ್ಷಾಂತರ ನಿಷೇಧ ಕಾನೂನು ಎನ್ನುವುದು ಹಾಸ್ಯಾಸ್ಪದವಾಗಿ ಪರಿಣಮಿಸಿದೆ. ಪ್ರತಿದಿನ, ಪ್ರತಿಕ್ಷಣ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ, ಸಂವಿಧಾನದ ಕೊಲೆಯಾಗುತ್ತಿದ್ದರೂ ನಾವು ರಾಮ ರಹೀಮರಿಗೆ ಮಾತ್ರ ಅವಮಾನವಾಯಿತು ಎಂದು ಒಬ್ಬರನ್ನು ಒಬ್ಬರು ಕೊಲ್ಲುವ ಮಟ್ಟಕ್ಕೆ ಸೆಟೆದು ನಿಂತಿದ್ದೇವೆ. ಗುಲ್ಲು ಎಬ್ಬಿಸುತ್ತೇವೆ. ಹಿಂಸಾಚಾರಕ್ಕೆ ಇಳಿಯುತ್ತೇವೆ.

ಹಿಂದೂ ದೇವರುಗಳನ್ನು ಅವಹೇಳನ ಮಾಡಿದರೆ ಹಿಂದೂಗಳ ಭಾವನೆಗೆ ಧಕ್ಕೆ ಬರುವುದಾದರೆ ಹಿಂದೂ ಮಠಾಧಿಪತಿಗಳು ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಿಲುಕಿದರೆ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವುದಿಲ್ಲವೇ? ಹಿಂದೂ ದೇವರುಗಳ ಪೂಜಾ ಕೈಂಕರ್ಯಕ್ಕೆ ಬಳಸುವ ವಸ್ತುಗಳ ಬೆಲೆ ಏರಿಕೆಯಾದರೆ ಹಿಂದೂಗಳಿಗೆ ಏನೂ ಅನ್ನಿಸುವುದಿಲ್ಲವೇ? ಸುಮ್ಮನೆ ಹೀಗೊಂದು ಲೆಕ್ಕಾಚಾರ ಮಾಡೋಣ.

ರವೀಂದ್ರ ಭಟ್ಟ
ರವೀಂದ್ರ ಭಟ್ಟ

ನಮ್ಮ ಕುಟುಂಬದ ಜೊತೆ ಅಂದರೆ ಗಂಡ, ಹೆಂಡತಿ, ಇಬ್ಬರು ಮಕ್ಕಳು ಈಗ ಹತ್ತು ವರ್ಷದ ಹಿಂದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಖರ್ಚಿಗೂ ಈಗ ಹೋಗಿ ಬರುವ ಖರ್ಚಿಗೂ ವ್ಯತ್ಯಾಸ ಇಲ್ಲವೇ? ಬೆಲೆ ಏರಿಕೆಯಿಂದ ಈಗ ತಿರುಪತಿ ಯಾತ್ರೆ ಕೂಡಾ ದುಬಾರಿಯಾಗಿದೆ. ಕಾಶಿಯಾತ್ರೆಗೆ ವಿಶೇಷ ರೈಲು ಒದಗಿಸುತ್ತೇವೆ ಎಂದು ಹೇಳಿ ಈಗ ಅದನ್ನು ರದ್ದು ಮಾಡಿದರೆ ಯಾರ ಭಾವನೆಗೆ ಧಕ್ಕೆಯಾಗುತ್ತದೆ? ಸಾಮಾನ್ಯ ಜನರು ಬಳಸುವ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದರೆ ಯಾರ ಮನಸ್ಸಿಗೂ ನೋವು ಆಗುವುದಿಲ್ಲವೇ? ದುಡಿಯುವ ಕೈಗಳಿಗೆ ಕೆಲಸ ಸಿಗದೇ ಇದ್ದಾಗ, ಇರುವ ಕೆಲಸ ಕೈಬಿಟ್ಟು ಹೋದಾಗ, ಸರ್ಕಾರದ ಎಲ್ಲ ನೇಮಕಾತಿಗಳಲ್ಲಿಯೂ ಅಧಿಕಾರಸ್ಥರು ಲಕ್ಷ ಲಕ್ಷ ರೂಪಾಯಿ ಲಂಚ ಕೇಳಿದಾಗ, ಸರ್ಕಾರಿ ಕಾಮಗಾರಿಗಳಲ್ಲಿ ಹತ್ತೋ ಇಪ್ಪತ್ತೋ ಅಥವಾ ನಲವತ್ತೋ ಪರ್ಸೆಂಟೇಜ್ ಪಡೆದಾಗ ಯಾರ ಹೃದಯಕ್ಕೂ ಚೂರಿಯಿಂದ ಇರಿದಂತೆ ಆಗುವುದಿಲ್ಲವೇ?

ಆಗ ಏನೂ ಆಗುವುದಿಲ್ಲ ಎಂದರೆ ನಾವು ಬದುಕಿಲ್ಲ ಎಂದೇ ಅರ್ಥ. ಪ್ರಜಾಸತ್ತೆ ನಿಜವಾದ ಅರ್ಥದಲ್ಲಿ ಸತ್ತಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT