ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾವಾದಿಗಳಾದರೆ ಪರಿಹಾರ ಸುಲಭ

Last Updated 18 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಯಾವುದಾದರೂ ಗಂಭೀರ ಸಮಸ್ಯೆ ಎದುರಾದಾಗ, ವ್ಯವಸ್ಥೆಯನ್ನು ದೂರುತ್ತ, ಹಣೆಬರಹವನ್ನು ಹಳಿಯುತ್ತ, ಸಮಯವನ್ನು ಶಪಿಸುತ್ತ ಕೂರುವ ಬದಲು, ಸಮಸ್ಯೆಯ ಪರಿಹಾರಕ್ಕೆ ಇರುವ ಎಲ್ಲ ಸಾಧ್ಯತೆಗಳ ಬಗ್ಗೆ ಚಿಂತಿಸಿ, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಇದು ಅಂಥದ್ದೇ ಒಂದು ಕತೆ.

ಶಿವರಾಜ ಎಂಬ ಯುವಕ ನನ್ನನ್ನು ಕಾಣಲು ಬಂದಿದ್ದ. 25 ವರ್ಷದ ಆಸುಪಾಸಿರಬೇಕು. ಉತ್ತರ ಕರ್ನಾಟಕದವನೆಂದು ಪರಿಚಯಿಸಿಕೊಂಡ. ಬಡವರ ಮನೆಯ ಯುವಕ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ. ಕೆಲಸ ಮಾಡುತ್ತಲೇ ಓದುವುದು ಅವನಿಗೆ ಅನಿವಾರ್ಯವಾಗಿತ್ತು. ಇಂಥ ಮಕ್ಕಳಿಗೆಲ್ಲ ಮುಕ್ತ ವಿಶ್ವವಿದ್ಯಾಲಯ ವರದಾನವೇ ಸರಿ. ಆ ಹುಡುಗನೂ ಅಷ್ಟೇ, ಕೆಲಸ ಮಾಡುತ್ತಲೇ ಪದವಿ ಪಡೆದಿದ್ದ. ಕರ್ನಾಟಕ ಲೋಕಸೇವಾ ಆಯೋಗದಿಂದ ಸಾಂಖ್ಯಿಕ ಇಲಾಖೆಯ ಅಧಿಕಾರಿ ಹುದ್ದೆಯ ಪರೀಕ್ಷೆಯನ್ನೂ ಬರೆದಿದ್ದ.

ಪ್ರತಿಭಾವಂತ ಹುಡುಗ. ಅವನ ಪರಿಶ್ರಮಕ್ಕೆ ತಕ್ಕಂತೆ ಒಳ್ಳೆಯ ಅಂಕಗಳನ್ನೂ ಗಳಿಸಿದ್ದ. ಆದರೆ ತಾತ್ಕಾಲಿಕ ಪಟ್ಟಿಯಲ್ಲಿ ಅವನ ಹೆಸರೇ ಇರಲಿಲ್ಲ. ಕಾರಣ, 2012ರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನೀಡಿದ್ದ ಎಲ್ಲ ಪದವಿಗಳ ಮಾನ್ಯತೆಯನ್ನೂ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ರದ್ದುಪಡಿಸಿತ್ತು.

ಶಿವರಾಜ ತನ್ನದಲ್ಲದ ತಪ್ಪಿಗಾಗಿ ಶಿಕ್ಷೆ ಪಡೆದಂತಾಗಿತ್ತು. ಕೈಗೆ ಬಂದ ಅವಕಾಶದಿಂದ ವಂಚಿತನಾಗುವಂತಾಯಿತು.

ಈ ವಿಷಯ ಶಿವರಾಜ ನನ್ನ ಗಮನಕ್ಕೆ ತಂದ. ಇದಾದ ನಂತರ ನೂರಾರು ಯುವಕರು ಈ ಕ್ರಮದಿಂದ ತಮಗಾಗಿರುವ ಅನ್ಯಾಯದ ಬಗ್ಗೆ ಟ್ವೀಟ್‌ ಮಾಡಲಾರಂಭಿಸಿದರು.

ಅವರಲ್ಲಿ ಕೆಲವರು ಲೋಕಸೇವಾ ಆಯೋಗದ ಪರೀಕ್ಷೆ ಬರೆದಿದ್ದರು. ಇನ್ನೂ ಕೆಲವರು ತಮ್ಮ ಹಾಲಿ ಕೆಲಸದಲ್ಲಿ ಮುಂಬಡ್ತಿ ಪಡೆಯುವ ಉದ್ದೇಶದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಕಾರಣಾಂತರಗಳಿಂದ ಅರ್ಧಕ್ಕೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಅನೇಕರು ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು. ಇಂಥವರೆಲ್ಲರ ಬದುಕು ಯುಜಿಸಿಯ ಈ ಕ್ರಮದಿಂದಾಗಿ ಅತಂತ್ರವಾಗಿತ್ತು. ಇದರಲ್ಲಿ ಬಹುತೇಕ ಜನರು ಸಮಾಜವಿಜ್ಞಾನ ವಿಷಯಗಳನ್ನು ಓದಿದವರೇ ಆಗಿದ್ದರು.

‘ಯುಜಿಸಿಯು 2012ರಿಂದಲೇ ಮಾನ್ಯತೆಯನ್ನು ರದ್ದು ಮಾಡಿದೆ’ ಎಂಬ ವಿಚಾರವನ್ನು ನಾನು ಸರ್ಕಾರದ ಗಮನಕ್ಕೆ ತಂದೆ. ಸರ್ಕಾರವೂ ಈ ವಿಷಯದಲ್ಲಿ ವಿದ್ಯಾರ್ಥಿಗಳ ಪರನಿಂತಿತು. ಈ ಸಮಸ್ಯೆಯನ್ನು ಪರಿಶೀಲಿಸಲು ಸಮಿತಿ ರಚಿಸಲಾಯಿತು. ಸಾವಿರಾರು ಜನರ ಭವಿಷ್ಯ ಡೋಲಾಯಮಾನವಾಗಿತ್ತು. ಉದ್ಯೋಗಾವಕಾಶ ಮತ್ತು ಅರ್ಹತೆ ಇದ್ದರೂ ಎರಡರಿಂದಲೂ ವಂಚಿತರಾದ ಅಸಹಾಯಕತೆ ಆ ಯುವಜನರನ್ನು ಕಾಡುತ್ತಿತ್ತು. ಶಿವರಾಜ ಪದೇಪದೆ ಬಂದು ನನ್ನನ್ನು ಭೇಟಿಯಾಗುತ್ತಿದ್ದ. ಈ ಬಗ್ಗೆ ಚರ್ಚಿಸುತ್ತಿದ್ದ.

ಈ ಇಡೀ ಪ್ರಕರಣವನ್ನು ಪರಿಶೀಲಿಸಿದಾಗ ಸ್ಪಷ್ಟವಾದ ಅಂಶವೆಂದರೆ; ಮುಕ್ತ ವಿಶ್ವವಿದ್ಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ, ತಾಂತ್ರಿಕ ಪದವಿಗಳನ್ನು ನೀಡುತ್ತಿತ್ತು. ಯುಜಿಸಿಯು ಮುಕ್ತ ವಿಶ್ವವಿದ್ಯಾಲಯದ ಈ ಕ್ರಮವನ್ನು ಪ್ರಶ್ನಿಸಿತ್ತು. ತಾಂತ್ರಿಕ ಪದವಿಗಳನ್ನು ನೀಡಿರುವುದು ಆಕ್ಷೇಪಾರ್ಹ ಎಂದು ಕಂಡು ಬಂದಿರುವುದರಿಂದ ಅದು ಮುಕ್ತ ವಿಶ್ವವಿದ್ಯಾಲಯ ನೀಡಿರುವ ಎಲ್ಲ ಪದವಿಗಳ ಮಾನ್ಯತೆಯನ್ನೂ ರದ್ದುಗೊಳಿದೆ ಎಂಬುದು.

ಶಿಸ್ತಿನ ಕ್ರಮ ಕೈಗೊಳ್ಳುವ ಭರದಲ್ಲಿ ವಿದ್ಯಾರ್ಥಿ ಸಮುದಾಯದ ಹಿತಾಸಕ್ತಿಯನ್ನೇ ಯುಜಿಸಿಯು ಕಡೆಗಣಿಸಿತ್ತು. ಯುಜಿಸಿಯ ಕಾರ್ಯವ್ಯಾಪ್ತಿ ಕೇವಲ ತಾಂತ್ರಿಕ ವಿಷಯಗಳಿಗೆ ಸೀಮಿತವಾಗಿತ್ತು. ಹಾಗಿರುವಾಗ ಇತಿಹಾಸ, ಸಾಹಿತ್ಯ, ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳಂಥ ಸಾಮಾಜಿಕ ವಿಜ್ಞಾನ ವಿಷಯಗಳ ಮಾನ್ಯತೆಯನ್ನೂ ರದ್ದು ಪಡಿಸಿದ್ದು ಸಮಂಜಸ ಕ್ರಮವಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಈ ಬಗ್ಗೆ ಸವಿವರ ವರದಿ ದಾಖಲಿಸಲಾಯಿತು. ಈ ದಾಖಲೆ ಹಾಗೂ ವರದಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳ ಹಿತ ಕಾಯುವಂಥ ಆದೇಶ ಹೊರಡಿಸಲು ಸರ್ಕಾರಕ್ಕೆ ಕೋರಲಾಯಿತು. ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿತು. ರಾಜ್ಯದ ಹೈ ಕೋರ್ಟ್‌ ಸಹ ನಮ್ಮ ವಾದವನ್ನು ಎತ್ತಿ ಹಿಡಿಯಿತು. ಮುಕ್ತ ವಿಶ್ವವಿದ್ಯಾಲಯವು ತಾಂತ್ರಿಕೇತರ ವಿಷಯದಲ್ಲಿ ನೀಡಿರುವ ಪದವಿಗಳ ಮಾನ್ಯತೆ ರದ್ದಾಗಿಲ್ಲವೆಂಬ ಆದೇಶ ನೀಡಿತು.

ಅತಂತ್ರವಾಗಿದ್ದ ಸಾವಿರಾರು ಜನರ ಬದುಕು ನಿರಾಳವಾಯಿತು. ಆದರೆ ಶಿವರಾಜನಿಗೆ ಮಾತ್ರ ಲಾಭವಾಗಲಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ ಕರ್ನಾಟಕ ಲೋಕಸೇವಾ ಆಯೋಗವು ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಿ ಆಗಿತ್ತು. ಶಿವರಾಜನಿಗೆ ಉದ್ಯೋಗಾವಕಾಶ ದೊರೆಯಲಿಲ್ಲ.

ಇಂತಹದ್ದೆ ಇನ್ನೊಂದು ಪ್ರಕರಣ ಮಲ್ಲಿಕಾ ಎಂಬ ಯುವತಿಯದ್ದು. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್‌ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ತಾತ್ಕಾಲಿಕ ಪಟ್ಟಿಯಲ್ಲಿ ಅವಳ ಹೆಸರಿತ್ತು. ಅಂಕಪಟ್ಟಿ ಪರಿಶೀಲನೆಯ ಸಂದರ್ಭದಲ್ಲಿ ಮಲ್ಲಿಕಾ ಓದಿರುವ ಉಪವಿಭಾಗವು ಹುದ್ದೆಗೆ ಸೂಕ್ತವಾಗಿಲ್ಲವೆಂದು ತಿರಸ್ಕರಿಸಲಾಗಿತ್ತು. ಅಧಿಸೂಚನೆ ಹೊರಡಿಸಿದಾಗಲೋಕಸೇವಾ ಆಯೋಗವು ಕೇವಲ ಸಿವಿಲ್‌ ಎಂಜಿನಿಯರಿಂಗ್‌ ಬಗೆಗೆ ಉಲ್ಲೇಖಿಸಿತ್ತು. ಉಪವಿಭಾಗಗಳ ಬಗ್ಗೆ ಏನೂ ಬರೆದಿರಲಿಲ್ಲ.

ನಂತರ ಮಲ್ಲಿಕಾ ಅನರ್ಹಳೆಂದು ತಿಳಿಸಿತ್ತು. ಕಂಗೆಡದ ಮಲ್ಲಿಕಾ, ಹೋರಾಟಕ್ಕೆ ಮುಂದಾದಳು. ಈ ಹಿಂದೆಯೂ ಅದೇ ಹುದ್ದೆಗೆ, ತನ್ನದೇ ಉಪವಿಭಾಗದಲ್ಲಿ ಓದಿರುವ ಅಭ್ಯರ್ಥಿಗಳ ನೇಮಕಾತಿ ಆಗಿರುವ ಉದಾಹರಣೆಗಳನ್ನು ಆಯೋಗದ ಗಮನಕ್ಕೆ ತಂದಳು. ಈ ಇಡೀ ವಿಷಯಕ್ಕೆಸಂಬಂಧಿಸಿದಂತೆ ಇಲಾಖೆಯಿಂದ ಸ್ಪಷ್ಟೀಕರಣ ಪಡೆಯಲಾಯಿತು. ಆದರೆ ಮಲ್ಲಿಕಾಗೆ ಈಗಲೂ ಉದ್ಯೋಗ ದೊರೆತಿಲ್ಲ.

ಶಿವರಾಜ ಮತ್ತು ಮಲ್ಲಿಕಾ ಎಂಬುವರ ಈ ಎರಡು ಉದಾಹರಣೆಗಳನ್ನು ನೀಡಲು ಕಾರಣ, ಅವರು ಹತಾಶರಾಗಲಿಲ್ಲ. ವ್ಯವಸ್ಥೆಯನ್ನು ದೂರುತ್ತ ಕೂರದೆ, ಅದರ ಪುನರ್‌ವಿಮರ್ಶೆಗೆ ಒಳಪಡಿಸಲು ಕಾರಣರಾದರು. ತಮ್ಮ ಸಮಸ್ಯೆಗೆ ಪರಿಹಾರ ಹುಡುಕಲು ಅಗತ್ಯವಿರುವ ಎಲ್ಲ ಕಚೇರಿಗಳಿಗೂ ಹೋಗಿಬರುತ್ತಿದ್ದರು. ದಾಖಲೆಗಳನ್ನು ಕಲೆ ಹಾಕುತ್ತಿದ್ದರು. ಅವನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದರು. ಶಿವರಾಜನಿಂದಾಗಿ ಹಲವಾರು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ನಿಮ್ಮಲ್ಲಿ ಅರ್ಹತೆ ಇದ್ದರೆ, ನೀವು ಸರಿಯಾಗಿದ್ದೀರಿ ಎಂದು ನಿಮ್ಮ ಆತ್ಮಸಾಕ್ಷಿ ಹೇಳುತ್ತಿದ್ದರೆ, ಹೋರಾಟ ಮಾಡಿ. ಎಲ್ಲದಕ್ಕೂ ಅವರಿವರನ್ನು ದೂರಬೇಡಿ. ಹತಾಶರಾಗಿ, ನಿರಾಶಾವಾದಿಗಳಾಗಿ ಸುಮ್ಮನುಳಿಯಬೇಡಿ. ನಿಮ್ಮ ಮೌನ ನಿಮಗಷ್ಟೇ ಅಲ್ಲ, ನಿಮ್ಮ ಸಮಕಾಲೀನರಾದ ಹಲವರ ಅನ್ಯಾಯಕ್ಕೆ ಕಾರಣವಾಗಬಹುದು. ನಿಮ್ಮ ಜಾಗೃತಿಯ ಒಂದು ಹೆಜ್ಜೆ, ವ್ಯವಸ್ಥೆಯನ್ನು ವಿಮರ್ಶಿಸಲು ಪ್ರೇರಣೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT