ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯಲ್ಲಿ ಮೋಹದ ತಡೆ

Last Updated 10 ಜುಲೈ 2019, 20:00 IST
ಅಕ್ಷರ ಗಾತ್ರ

ವಾರಾಣಸಿಯ ರಾಜ ಬ್ರಹ್ಮದತ್ತನಿಗೆ ಎಷ್ಟೋ ವರ್ಷಗಳ ಕಾಲ ಮಕ್ಕಳಿರಲಿಲ್ಲ. ರಾಜರಾಣಿಯರಿಬ್ಬರೂ ಒಂದೇ ಸಮನೆ ಪ್ರಾರ್ಥಿಸಿದಾಗ ಬ್ರಹ್ಮಲೋಕದಿಂದ ಬೋಧಿಸತ್ವ ಕೆಳಗಿಳಿದು ಮಗನಾಗಿ ಹುಟ್ಟಿದ. ಮಗುವಿಗೆ ಸ್ನಾನ ಮಾಡಿಸಿ ಮೊಲೆಯುಣಿಸಲು ರಾಣಿಗೆ ಕೊಟ್ಟರು. ಮಗು ಒಂದೇ ಸಮನೆ ಅಳುತ್ತಲೇ ಇತ್ತು. ಸಮಾಧಾನಪಡಿಸಲು ಒಬ್ಬ ದಾದಿಯ ಕಡೆಗೆ ಕೊಟ್ಟರು. ಅದರೂ ಅಳು ನಿಲ್ಲಲಿಲ್ಲ. ಯಾವ ದಾಸಿ ಎತ್ತಿಕೊಂಡರೂ ಅಳುತ್ತಲೇ ಇದ್ದ ಮಗು ಒಬ್ಬ ಸೇವಕ ಎತ್ತಿಕೊಂಡಾಗ ಸುಮ್ಮನಾಯಿತು. ಆಮೇಲೆ ಪುರುಷ ಸೇವಕರೇ ಮಗುವನ್ನು ನೋಡಿಕೊಳ್ಳುತ್ತಿದ್ದರು.

ಮಗು ಬೆಳೆದು ತರುಣನಾದರೂ ಸ್ತ್ರೀಯರ ಕಡೆಗೆ ಹೋಗುತ್ತಿರಲಿಲ್ಲ, ಅವರೊಂದಿಗೆ ಮಾತನಾಡುತ್ತಿರಲಿಲ್ಲ. ರಾಜನಿಗೆ ಚಿಂತೆಯಾಯಿತು. ಇದ್ದೊಬ್ಬ ಮಗ ಹೀಗೆ ಸನ್ಯಾಸಿಯಂತೆ ವ್ಯವಹರಿಸಿದರೆ, ತನ್ನ ವಂಶ ಬೆಳೆಯುವುದೆಂತು? ಯಾವುದಾದರೂ ಹುಡುಗಿ ಅವನಲ್ಲಿ ಆಸಕ್ತಿ ಹುಟ್ಟಿಸಿಯಾಳೇ? ಎಂದು ಚಿಂತಿಸಿದ. ಇದನ್ನು ತಿಳಿದ ಒಬ್ಬ ತರುಣಿ ಮುಂದೆ ಬಂದಳು. ಆಕೆ ಸಂಗೀತ, ನೃತ್ಯ ಹಾಗೂ ಪುರುಷರನ್ನು ವಶಪಡಿಸಿಕೊಳ್ಳುವುದರಲ್ಲಿ ನಿಪುಣಳಾದವಳು. ಆಕೆ ರಾಜನ ಹತ್ತಿರ ಬಂದು, ‘ಪ್ರಭೂ, ನೀವು ಅನುಮತಿ ನೀಡಿದರೆ ನಾನು ಯುವರಾಜರ ಮನಸ್ಸನ್ನು ಗೆದ್ದು ಅವರಲ್ಲಿ ಕಾಮಪ್ರಚೋದನೆ ಮಾಡುತ್ತೇನೆ’ ಎಂದಳು. ‘ಇದುವರೆಗೂ ಸ್ತ್ರೀಯರ ಹತ್ತಿರವೂ ಹೋಗಲು ಇಷ್ಟಪಡದ ನಮ್ಮ ಮಗನನ್ನು ನೀನು ಆಕರ್ಷಿಸುವುದಾದರೆ ನಿನ್ನನ್ನೇ ಅವನ ಪಟ್ಟಮಹಿಷಿಯನ್ನಾಗಿ ಮಾಡಿಬಿಡುತ್ತೇನೆ’ ಎಂದು ಮಾತುಕೊಟ್ಟ ರಾಜ.

ಮರುದಿನ ಬೆಳಿಗ್ಗೆ ಆ ತರುಣಿ ರಾಜಕುಮಾರನ ಮನೆಯ ಮುಂದೆ ಕುಳಿತು ಅತ್ಯಂತ ಮಧುರ ಸ್ವರದಲ್ಲಿ ಹಾಡ ತೊಡಗಿದಳು. ರಾಜಕುಮಾರ ಧ್ವನಿ ಕೇಳಿದ ಆದರೆ ಯಾವ ಆಸಕ್ತಿಯನ್ನು ತೋರಲಿಲ್ಲ. ಆದರೆ ಆಕೆ ಧೃತಿಗೆಡದೆ ದಿನವೂ ಬೆಳಗಾಗುವ ಹೊತ್ತಿಗೆ ಬಂದು ಹಾಡಿದಳು. ನಿಧಾನವಾಗಿ ರಾಜಕುಮಾರನಿಗೆ ಈ ಹಾಡಿನ ಬಗ್ಗೆ ಒಲವು ಬಂದು ಆಕೆಯನ್ನು ತನ್ನ ಕೋಣೆಯಲ್ಲಿ ಕರೆದು ಹಾಡಲು ಹೇಳಿದ. ನಂತರ ಅವಳ ಪಕ್ಕದಲ್ಲೇ ಕುಳಿತ.

ಒಂದೆರಡು ದಿನಗಳ ನಂತರ ಆಕೆಯ ಕೈ ಹಿಡಿದುಕೊಂಡ. ಆಕೆ ನೃತ್ಯ ಮಾಡಿದಾಗ ಅವಳಿಗೆ ಶರಣಾಗಿ ಬಿಟ್ಟ. ಆಕೆಯಲ್ಲಿ ಮೋಹ ಉತ್ಪನ್ನವಾಗಿ ಒಂದು ಕ್ಷಣವೂ ಆಕೆಯನ್ನು ಬಿಟ್ಟು ಇರದಂತಾದ. ಒಂದು ವಾರದಲ್ಲಿ ಆಕೆಯಲ್ಲಿ ಕಾಮ ಯಾವ ಮಟ್ಟದ್ದಾಯಿತೆಂದರೆ ಯಾರಾದರೊಬ್ಬ ಪುರುಷ ಅವಳೊಂದಿಗೆ ಮಾತನಾಡುವುದು ಹೋಗಲಿ, ಅವಳ ಕಡೆಗೆ ನೋಡಿದರೂ ಖಡ್ಗ ಹಿಡಿದುಕೊಂಡು ಕೊಲ್ಲಲು ಹೋಗುತ್ತಿದ್ದ. ಇದನ್ನು ಕಂಡು ರಾಜ ಗಂಗಾನದಿ ಸಮುದ್ರವನ್ನು ಕೂಡುವ ಪ್ರದೇಶದಲ್ಲಿ ಒಂದು ಸುಂದರವಾದ ಆಶ್ರಮವನ್ನು ಕಟ್ಟಿ ಕೊಟ್ಟು ಅವರಿಬ್ಬರೇ ಅಲ್ಲಿ ಇರುವಂತೆ ವ್ಯವಸ್ಥೆ ಮಾಡಿದ. ಅಲ್ಲಿಗೆ ಯಾವ ವ್ಯಕ್ತಿಯೂ ಹೋಗುವುದು ಸಾಧ್ಯವಿರಲಿಲ್ಲ. ರಾಜಕುಮಾರ ಹಾಗೂ ಆ ತರುಣಿ ಒಂದು ವಾರ ತುಂಬ ಸುಖವಾಗಿದ್ದರು.

ರಾಜಕುಮಾರ ಹತ್ತಿರದ ಅರಣ್ಯದಿಂದ ಕಂದಮೂಲಗಳನ್ನು ತರಲು ಹೋದಾಗ ತಪಸ್ವಿಯೊಬ್ಬ ಆಕಾಶಮಾರ್ಗದಿಂದ ಬರುವಾಗ ಈ ಪರ್ಣಕುಟಿಯನ್ನು ಕಂಡು ಕೆಳಗೆ ಇಳಿದ. ತರುಣಿ ಅವನನ್ನು ಸ್ವಾಗತಿಸಿ, ‘ದಯವಿಟ್ಟು ಕುಳಿತುಕೊಳ್ಳಿ, ನಮ್ಮ ಯಜಮಾನರು ಇನ್ನೇನು ಬರುತ್ತಾರೆ’ ಎಂದಳು. ಆಕೆಯನ್ನು ನೋಡಿ ಅವನ ಮನಸ್ಸು ಚಂಚಲವಾಯಿತು. ರಾಜಕುಮಾರ ಬಂದಾಗ ಈ ತಪಸ್ವಿಯನ್ನು ನೋಡಿ ಕೋಪದಿಂದ ಖಡ್ಗವನ್ನು ಹಿಡಿದು ಅವನ ಬೆನ್ನಟ್ಟಿದ. ತಪಸ್ವಿ ಗಾಬರಿಯಾಗಿ ಮೇಲೆ ಹಾರಿದ. ಆದರೆ ಮುಂದೆ ಸಮುದ್ರದಲ್ಲಿ ಬಿದ್ದ. ‘ಛೇ ಒಂದು ನಿಮಿಷದ ಮೋಹದಿಂದ ನನ್ನ ಧ್ಯಾನ ನಷ್ಟವಾಗಿ, ಶಕ್ತಿ ಕುಂದಿ ಹಾರದೆ ಬಿದ್ದೆ’ ಎಂದ. ಅದನ್ನು ಕೇಳಿದಾಕ್ಷಣ ಬೋಧಿಸತ್ವನಿಗೆ ತಾನು ಬ್ರಹ್ಮಲೋಕದಿಂದ ಇಳಿದು ಬಂದದ್ದು ನೆನಪಾಗಿ, ತರುಣಿಯ ಮೋಹದಲ್ಲಿ ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡೆನಲ್ಲ ಎಂದು ಆಕೆ
ಯನ್ನು ವಾರಾಣಸಿಗೆ ಕಳುಹಿಸಿ, ಮತ್ತೆ ತಪಸ್ಸು ಮಾಡಿ ಸಿದ್ಧಿ ಪಡೆದು ಬ್ರಹ್ಮಲೋಕ ಸೇರಿದ. ಸಾಧನೆಯ ಮಾರ್ಗದಲ್ಲಿ ದಾರಿ ತಪ್ಪಿಸುವ ಅವಕಾಶಗಳು ಅನೇಕ. ಅವುಗಳಲ್ಲಿ ಕಳೆದು ಹೋಗದವರು ಮಾತ್ರ ಗುರಿ ತಲುಪುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT