ಗುರುವಾರ , ಮಾರ್ಚ್ 4, 2021
30 °C

ಅಪೇಕ್ಷಿಸದ ಭಾಗ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನಾಗಿ ಹುಟ್ಟಿ ಸಕಲ ವಿದ್ಯೆಗಳನ್ನು ಕಲಿತು ಸನ್ಯಾಸಿಯಾಗಿ ಮರಳಿ ಬಂದು ವಾರಾಣಸಿಯ ಉದ್ಯಾನದಲ್ಲಿ ನೆಲೆಸಿದ್ದ. ಒಂದು ದಿನ ಭಿಕ್ಷೆಗೆ ಹೋದಾಗ ಆನೆಗಳನ್ನು ನೋಡಿಕೊಳ್ಳುವ ಮುಖ್ಯಸ್ಥ ಗಜಾಚಾರ್ಯನ ಮನೆಗೆ ಹೋದ. ಅವನ ನಿಷ್ಠೆ, ಚಾತುರ್ಯಗಳನ್ನು ಮೆಚ್ಚಿಕೊಂಡ.

ಇದೇ ಸಮಯದಲ್ಲಿ ಒಬ್ಬ ಮರ ಕಡಿಯುವವನು ಕಾಡಿನಲ್ಲಿ ಮರಗಳ ಹೊರೆಯನ್ನು ಹೊತ್ತುಕೊಂಡು ಬರುವಾಗ ತಡವಾಯಿತು. ಕೋಟೆಯ ಬಾಗಿಲು ಹಾಕಿದ್ದರಿಂದ ಹೊರಗಿದ್ದ ದೇವಾಲಯದಲ್ಲಿ ಮಲಗಿಕೊಂಡ. ಸ್ವಲ್ಪ ದೂರದಲ್ಲೇ ಇದ್ದ ಪುಟ್ಟ ಮರಗಳ ಮೇಲೆ ದೇವಾಲಯದ ಹುಂಜಗಳು ಮಲಗಿದ್ದವು. ಬೆಳಿಗ್ಗೆ ಮೇಲಿನ ಕೊಂಬೆಯಲ್ಲಿ ಮಲಗಿದ್ದ ಹುಂಜ ಕೆಳಗಿದ್ದ ಹುಂಜದ ಮೇಲೆ ಹಿಕ್ಕೆ ಹಾಕಿತು. ಕೆಳಗಿನ ಹುಂಜ ಕೋಪದಿಂದ ಜಗಳಕ್ಕೆ ಬಂದಿತು. ಜಗಳ ತಾರಕಕ್ಕೇರಿತು. ಎರಡೂ ತಮ್ಮ ತಮ್ಮ ಶಕ್ತಿಗಳನ್ನು ಹೇಳಿಕೊಂಡವು. ಕೆಳಗಿದ್ದ ಹುಂಜ ಹೇಳಿತು, ‘ನನ್ನನ್ನು ಏನೆಂದುಕೊಂಡಿದ್ದೀ? ಯಾವನು ನನ್ನ ಮಾಂಸವನ್ನು ಬೇಯಿಸಿ ತಿನ್ನುತ್ತಾನೋ ಅವನಿಗೆ ಸಾವಿರ ಕಾರ್ಷಾಪಣಗಳು ತಕ್ಷಣವೇ ದೊರೆಯುತ್ತವೆ’. ಮೇಲಿನ ಹುಂಜ, ‘ಬಾಯಿಮುಚ್ಚು, ಯಾರು ನನ್ನ ದೇಹದ ಮೃದುವಾದ ಮಾಂಸವನ್ನು ತಿನ್ನುತ್ತಾನೋ ಅವನು ಈ ದೇಶದ ರಾಜನಾಗುತ್ತಾನೆ, ಹೊರಭಾಗದ ಮಾಂಸವನ್ನು ಗಂಡಸು ತಿಂದರೆ ಸೇನಾಪತಿಯಾಗುತ್ತಾನೆ, ಹೆಂಗಸು ತಿಂದರೆ ಪಟ್ಟಮಹಿಷಿಯಾಗುತ್ತಾಳೆ. ನನ್ನ ಎಲುಬಿಗೆ ಹತ್ತಿದ ಮಾಂಸವನ್ನು ಗಂಡಸು ತಿಂದರೆ ಖಜಾಂಚಿಯಾಗುತ್ತಾನೆ, ಸನ್ಯಾಸಿ ತಿಂದರೆ ರಾಜಗುರುವಾಗುತ್ತಾನೆ‘ ಎಂದಿತು.

ಮರಕಡಿಯುವವ ಈ ಮಾತುಗಳನ್ನು ಕೇಳಿಸಿಕೊಂಡು, ಇಂದಿಗೆ ನನ್ನ ಕಷ್ಟಗಳು ಮುಗಿದವು, ತಾನೇ ರಾಜನಾಗಿಬಿಡಬೇಕು ಎಂದು ನಿಧಾನವಾಗಿ ಹೋಗಿ ಮೇಲಿದ್ದ ಹುಂಜವನ್ನು ಹಿಡಿದು, ಕೊಂದು ಮನೆಗೆ ತಂದ. ಹೆಂಡತಿಗೆ ಹೇಳಿ ಅದನ್ನು ಬೇಯಿಸಿ ಆಕೆಗೆ ಹೇಳಿದ, ‘ಇದು ಅತ್ಯಂತ ಪ್ರಭಾವಶಾಲಿಯಾದ ಮಾಂಸ. ಇದನ್ನು ತಿಂದರೆ ನಾನು ರಾಜನಾಗುತ್ತೇನೆ, ನೀನು ರಾಣಿಯಾಗುತ್ತೀ. ಅದಕ್ಕೆ ಇದನ್ನು ತೆಗೆದುಕೊಂಡು ಗಂಗಾತೀರಕ್ಕೆ ಹೋಗಿ ಸ್ನಾನ ಮಾಡಿ ತಿಂದುಬಿಡೋಣ‘ ಇಬ್ಬರೂ ಗಂಗಾತೀರಕ್ಕೆ ಹೋಗಿ ನದಿಯ ಬದಿಯಲ್ಲೇ ಮಾಂಸದ ಪಾತ್ರೆಯನ್ನಿಟ್ಟು ಸ್ನಾನಕ್ಕೆ ಇಳಿದರು. ಆಗ ಜೋರಾದ ಗಾಳಿಬೀಸಿ ನದಿಯ ತೆರೆ ನುಗ್ಗಿ ಬಂದು ಪಾತ್ರೆಯನ್ನು ಕೊಚ್ಚಿಕೊಂಡು ಹೋಯಿತು. ದಂಪತಿ ಬಾಯಿ, ಮೂಗಿನಲ್ಲಿ ನೀರು, ಮರಳು ತುಂಬಿಕೊಂಡು ಓಡಿಹೋದರು. ಈ ಪಾತ್ರೆ ತೇಲುತ್ತ ಮುಂದೆ ಅರಮನೆಯ ಆನೆಗಳನ್ನು ತೊಳೆಯುವ ಸ್ಥಳಕ್ಕೆ ಹೋಯಿತು. ಗಜಾಚಾರ್ಯ ಅದನ್ನು ಕಂಡು, ತೆರೆದು ನೋಡಿ, ಸೇವಕರೊಂದಿಗೆ ಮನೆಗೆ ಕಳುಹಿಸಿದ.

ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದ ಬೋಧಿಸತ್ವ ಗಜಾಚಾರ್ಯ ಮನೆಗೆ ಬರುವುದಕ್ಕಿಂತ ಮೊದಲೇ ಅವನ ಮನೆಗೆ ಬಂದು ಕುಳಿತ. ಗಜಾಚಾರ್ಯ ಬಂದೊಡನೆ ಅವನಿಗೆ ಹೇಳಿದ, ‘ನೀನು ಮತ್ತು ನಿನ್ನ ಹೆಂಡತಿ ಊಟಕ್ಕೆ ಕುಳಿತುಕೊಳ್ಳಿ. ನದಿಯಲ್ಲಿ ತೇಲಿಬಂದ ಪಾತ್ರೆಯಲ್ಲಿಯ ಮಾಂಸವನ್ನು ನಾನೇ ಬಡಿಸುತ್ತೇನೆ. ತಿಂದ ಮೂರು ದಿನಕ್ಕೆ ನೀನು ರಾಜನಾಗುತ್ತೀ, ನಿನ್ನ ಹೆಂಡತಿ ರಾಣಿಯಾಗುತ್ತಾಳೆ. ಆದರೆ ಅಹಂಕಾರವಿಲ್ಲದೆ, ದರ್ಪವಿಲ್ಲದೆ ಜನಾನುರಾಗಿಯಾಗಿ ಕಾರ್ಯಮಾಡು’. ಮೃದುವಾದ ಮಾಂಸವನ್ನು ಗಜಾಚಾರ್ಯನಿಗೆ, ಹೊರಗಿನ ಮಾಂಸವನ್ನು ಹೆಂಡತಿಗೆ ಬಡಿಸಿ ಎಲುಬಿಗೆ ಹತ್ತಿದ್ದ ಮಾಂಸವನ್ನು ತಾನೇ ತಿಂದ. ಮಾರನೆಯ ದಿನ ಒಬ್ಬ ಸಾಮಂತ ರಾಜ ವಾರಾಣಸಿಯ ಮೇಲೆ ದಾಳಿ ಮಾಡಿದ. ರಾಜ ಗಜಾಚಾರ್ಯನಿಗೆ ರಾಜಪೋಷಾಕು ಹಾಕಿಸಿ ಯುದ್ಧಕ್ಕೆ ಮುಂದೆ ಕಳುಹಿಸಿ ತಾನು ವೇಷ ಮರೆಸಿಕೊಂಡು ಯುದ್ಧದ ಯೋಜನೆ ಮಾಡುತ್ತಿದ್ದ. ಆದರೆ ಆಕಸ್ಮಿಕವಾಗಿ ಬಾಣವೊಂದು ತಗುಲಿ ಆತ ಸತ್ತುಹೋದ. ಗಜಾಚಾರ್ಯ ಹುಮ್ಮಸ್ಸಿನಿಂದ ಹೋರಾಡಿ ಯುದ್ಧ ಗೆದ್ದ, ಜನರೆಲ್ಲ ಅವನನ್ನೇ ರಾಜನನ್ನಾಗಿ ಆರಿಸಿ ಅವನ ಹೆಂಡತಿಯನ್ನು ಪಟ್ಟದ ರಾಣಿಯನ್ನಾಗಿ ಮಾಡಿದರು. ಬೋಧಿಸತ್ವ ರಾಜಗುರುವಾದ.

ಭಾಗ್ಯರಹಿತರು ಏನೆಲ್ಲ ಮಾಡಿದರೂ, ಕೈಯಲ್ಲಿ ಸಾಮ್ರಾಜ್ಯವಿದ್ದರೂ ದಕ್ಕುವುದಿಲ್ಲ. ಭಾಗ್ಯವಂತರು ಏನೂ ಮಾಡದಿದ್ದರೂ ಅವರನ್ನು ಕೈ ಹಿಡಿದು ವಿಧಿ ಎತ್ತರದಲ್ಲಿ ನಿಲ್ಲಿಸುತ್ತದೆ. ಪುಣ್ಯವಂತರ ಕೈಗೆ ದೊರಕಿದ ಕಲ್ಲೂ ಪರುಷಮಣಿಯಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು