ಗುರುವಾರ , ಫೆಬ್ರವರಿ 25, 2021
19 °C

ಸಾರ್ಥಕ ಕೃತ್ಯದ ಪ್ರತಿಫಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಜಮೀನುದಾರನ ಮಗನಾಗಿ ಹುಟ್ಟಿ, ಬೆಳೆದಂತೆ ವ್ಯಾಪಾರವನ್ನು ಬೆಳೆಸಿ ಶ್ರೀಮಂತನಾದ. ಅವನಿಗೊಬ್ಬ ತಮ್ಮನಿದ್ದ. ಅವನು ವ್ಯಾಪಾರದಲ್ಲಿ ಹೆಚ್ಚು ತೊಡಗದೆ ವಿಲಾಸಿಯಾಗಿದ್ದ. ತಂದೆ ತೀರಿದ ಮೇಲೆ ಪೂರ್ತಿ ಜವಾಬ್ದಾರಿ ಬೋಧಿಸತ್ವನದಾಯಿತು.

ಒಂದು ಬಾರಿ ಕೊಟ್ಟಿದ್ದ ಸಾಲವನ್ನು ಮರಳಿಪಡೆಯಲು ಅಣ್ಣ-ತಮ್ಮಂದಿರಿಬ್ಬರೂ ಹೋದರು. ಸಾವಿರ ಕಾರ್ಷಾಪಣ ಹಣವನ್ನು ಒಂದು ಎಲೆಯ ಪೊಟ್ಟಣದಲ್ಲಿ ಕಟ್ಟಿಕೊಂಡು ಮರಳಿ ಬರುತ್ತಿದ್ದರು. ದಾರಿಯಲ್ಲಿ ನದಿಯನ್ನು ದಾಟಬೇಕಿತ್ತು. ನಾವೆಗೆ ಕಾಯುತ್ತ ಕುಳಿತ ಸಹೋದರರು ಊಟ ಮಾಡಿದರು. ಬೋಧಿಸತ್ವ ಸ್ವಲ್ಪ ಊಟ ಮಾಡಿ ಉಳಿದ ಅನ್ನವನ್ನು ನದಿಯಲ್ಲಿಯ ಮೀನುಗಳಿಗೆ ಆಹಾರವಾಗಿ ನೀಡಿದ. ನದೀದೇವತೆ ತೃಪ್ತಿಯಾದಳು. ತಮ್ಮ ದಾನ ಮಾಡಲಿಲ್ಲ. ಅಣ್ಣ ಮರಳಿನ ಮೇಲೆ ಮಲಗಿದಾಗ ಅವನಿಗೊಂದು ದುರಾಲೋಚನೆ ಬಂದಿತು. ಮತ್ತೊಂದು ಎಲೆಯನ್ನು ತಂದು ಅದರಲ್ಲಿ ಸಣ್ಣ, ಸಣ್ಣ ಕಲ್ಲುಗಳನ್ನು ಹಾಕಿ ಹಣದ ಪೊಟ್ಟಣದಂತೆಯೇ ಕಟ್ಟಿದ. ಅಣ್ಣ ಏಳುವುದರೊಳಗೆ ಒಂದು ಪೊಟ್ಟಣವನ್ನು ತನ್ನ ಜೇಬಿಗೆ ಇಳಿಸಿಕೊಂಡು ಮತ್ತೊಂದನ್ನು ಅಣ್ಣನಿಗೆ ಕಾಣುವಂತೆ ಹಿಡಿದುಕೊಂಡು ನಾವೆಯಲ್ಲಿ ಹೊರಟಾಗ ನದೀ ಮಧ್ಯದಲ್ಲಿ ಆ ಪೊಟ್ಟಣವನ್ನು ಬೀಳಿಸಿಬಿಟ್ಟ. ‘ಅಣ್ಣಾ, ಹಣದ ಪೊಟ್ಟಣ ನೀರಿನಲ್ಲಿ ಬಿತ್ತು‘ ಎಂದ. ಬೋಧಿಸತ್ವ, ‘ಆಯಿತು ಬಿಡಪ್ಪಾ, ನೀರಿನಲ್ಲಿ ಬಿದ್ದಮೇಲೆ ಏನು ಮಾಡುವುದು? ಅದು ನಮ್ಮ ಅದೃಷ್ಟದಲ್ಲಿ ಇಲ್ಲ‘ ಎಂದ. ಮನೆ ಸೇರಿದ ಮೇಲೆ ತಮ್ಮ ಜೇಬಿನಲ್ಲಿದ್ದ ಪೊಟ್ಟಣವನ್ನು ಬಿಚ್ಚಿದಾಗ ಗಾಬರಿಯಾದ. ಅವನು ಗಡಿಬಿಡಿಯಲ್ಲಿ ಹಣದ ಪೊಟ್ಟಣವನ್ನು ನೀರಿಗೆ ಬೀಳಿಸಿ, ಕಲ್ಲಿನ ಪೊಟ್ಟಣವನ್ನೇ ಉಳಿಸಿಕೊಂಡಿದ್ದ.

ನದೀದೇವತೆ ಬೋಧಿಸತ್ವನ ಹಣವನ್ನು ರಕ್ಷಣೆ ಮಾಡುವಂತೆ ಒಂದು ಮೀನಿಗೆ ಸೂಚನೆ ನೀಡಿತು. ದೇವತೆಯ ಆದೇಶದಂತೆ ಒಂದು ಮೀನು ಹಣದ ಪೊಟ್ಟಣವನ್ನು ನುಂಗಿತು. ಬೆಸ್ತರು ಅದನ್ನು ಬಲೆಯಲ್ಲಿ ಹಾಕಿ ಹಿಡಿದರು. ನದೀದೇವತೆ ಬೆಸ್ತರಿಗೆ ಹೇಳಿದಳು, ‘ನಗರದಲ್ಲಿ ಹೋಗಿ ಈ ಮೀನನ್ನು ಯಾರಾದರೂ ಕೇಳಿದರೆ ಅದರ ಬೆಲೆ ಸಾವಿರ ಕಾರ್ಷಾಪಣ ಮತ್ತು ಅದರ ಮೇಲೆ ಏಳು ಮಾಸಕಗಳು ಎಂದು ಹೇಳಿ. ಯಾರೂ ಅದನ್ನು ಕೊಳ್ಳುವುದಿಲ್ಲ. ಅಕಸ್ಮಾತ್ ಕೊಂಡರೆ ಏಳು ಮಾಪಕಗಳನ್ನು ನೀವು ಇಟ್ಟುಕೊಂಡು ಸಾವಿರ ಕಾರ್ಷಾಪಣಗಳನ್ನು ಬೋಧಿಸತ್ವನಿಗೆ ಕೊಡಿ. ಯಾರೂ ಮೀನನ್ನು ತೆಗೆದುಕೊಳ್ಳದಿದ್ದರೆ ಈ ಮೀನನ್ನು ಬೋಧಿಸತ್ವನಿಗೆ ಏಳು ಮಾಸಕಗಳಿಗೇ ಮಾರಿ ಬಿಡಿ‘.

ಅದರಂತೆಯೇ ಅವರು ಮಾರುವಾಗ ಜನ ನಕ್ಕರು. ಒಂದು ಮೀನಿಗೆ ಸಾವಿರ ಕಾರ್ಷಾಪಣವೇ? ಎಂದು ಆಶ್ಚರ್ಯಪಟ್ಟರು. ಆದರೆ ಬೋಧಿಸತ್ವ ಕೇಳಿದಾಗ ಕೇವಲ ಏಳು ಮಾಸಕಗಳಿಗೇ ಅದನ್ನು ಮಾರಿಬಿಟ್ಟರು. ಬೋಧಿಸತ್ವನ ಹೆಂಡತಿ ಮೀನನ್ನು ಕತ್ತರಿಸಿದಾಗ ಹಣದ ಪೊಟ್ಟಣ ಸಿಕ್ಕಿತು. ಅದು ತನ್ನದೇ ಎಂಬುದು ಬೋಧಿಸತ್ವನಿಗೆ ಅರಿವಾಯಿತು. ನೀರಿನಲ್ಲಿ ಕಳೆದ ಪೊಟ್ಟಣವನ್ನು ನುಂಗಿದ ಮೀನು ತನಗೇ ದೊರಕಬೇಕೆಂದರೆ ಇದೊಂದು ದೈವದ ಆಟ. ಇದು ಹೇಗಾಯಿತು ಎಂದು ಚಿಂತಿಸಿದಾಗ ನದೀ ದೇವತೆ ಅವನ ಮುಂದೆ ಬಂದು, ‘ನೀನು ನದಿಗೆ ಅಹಾರವನ್ನು ಸಮರ್ಪಿಸಿದ್ದಕ್ಕೆ ಪ್ರತಿಯಾಗಿ ನನ್ನ ಕಾಣಿಕೆಯೆಂದು ಮರಳಿಸಿದೆ. ನಿನ್ನ ತಮ್ಮ ಮೋಸದ ಕಾರ್ಯ ಮಾಡಿದ್ದ. ಅವನಿಗೆ ಏನೂ ಕೊಡಬೇಡ‘ ಎಂದಳು. ಬೋಧಿಸತ್ವ ಆಕೆಗೆ ಕೃತಜ್ಞತೆ ಸಲ್ಲಿಸಿದ. ಆದರೆ ತಮ್ಮನಿಗೆ ನ್ಯಾಯವಾಗಿ ದೊರಕಬೇಕಾದ ಐದುನೂರು ಕಾರ್ಷಾಪಣಗಳನ್ನು ಕೊಟ್ಟು ಮತ್ತೊಮ್ಮೆ ಇಂಥ ಮೋಸ ಮಾಡದಿರಲು ಎಚ್ಚರಿಕೆ ನೀಡಿದ.

ನಾವು ಆಕಸ್ಮಾತ್ತಾಗಿಯೋ, ಪ್ರಜ್ಞಾಪೂರ್ವಕವಾಗಿಯೋ ಮಾಡಿದ ಒಳ್ಳೆಯ ಕಾರ್ಯ ನಮಗರಿವಿಲ್ಲದೆಯೇ ಒಳ್ಳೆಯ ಫಲವನ್ನು ನೀಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.