ಗುರುವಾರ , ನವೆಂಬರ್ 14, 2019
27 °C

ಎಷ್ಟೊಂದು ಬೇಕೆಂಬುದರ ಅರಿವು

ಗುರುರಾಜ ಕರಜಗಿ
Published:
Updated:

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುವಾಗ ಬೋಧಿಸತ್ವ ವರ್ತಕರ ಮನೆತನದಲ್ಲಿ ಹುಟ್ಟಿದ್ದ. ಅವನು ಬೆಳೆದು ದೊಡ್ಡವನಾಗಿ ವರ್ತಕರ ಮುಖಂಡನಾದ. ಅವನು ಆಗಾಗ ವರ್ತಕರನ್ನು ಜೊತೆಗೂಡಿಸಿಕೊಂಡು ವ್ಯಾಪಾರಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ.

ಒಂದು ಬಾರಿ ವಾರಾಣಸಿಯಿಂದ ಐನೂರು ವರ್ತಕರ ಜತೆಗೆ ಬಂಡಿಗಳಲ್ಲಿ ವಸ್ತುಗಳನ್ನು ತುಂಬಿಕೊಂಡು ಮಾರಲು ಹೊರಟ. ದಾರಿಯಲ್ಲೊಂದು ದಟ್ಟವಾದ ಕಾಡು ಬಂತು. ದಾಹವಾಗಿ ಕುಡಿಯಲು ನೀರನ್ನು ಹುಡುಕುತ್ತಿರುವಾಗ ಅಲ್ಲೊಂದು ಹಳೆಯ ಬಾವಿ ಕಣ್ಣಿಗೆ ಬಿತ್ತು. ತಳದಲ್ಲಿ ಸ್ವಲ್ಪ ಹಸಿ ಇತ್ತೇ ವಿನಃ ನೀರಿರಲಿಲ್ಲ. ಸ್ವಲ್ಪ ಅಗೆದರೆ ನೀರು ಬರಬಹುದೆಂದು ವರ್ತಕರೆಲ್ಲ ಸೇರಿ ಅಗೆಯತೊಡಗಿದರು. ಆಶ್ಚರ್ಯವೆಂದರೆ ಅಗೆದಂತೆ ಕಬ್ಬಿಣ, ಸತುವು, ಸೀಸ, ಮುತ್ತು, ರತ್ನ, ಚಿನ್ನಗಳು ಬರತೊಡಗಿದವು. ಆಮೇಲೆ ನೀರು ಜಿನುಗಿತು. ವ್ಯಾಪಾರಸ್ಥರು ನೀರು ಕುಡಿದು ಬಂದ ಬೆಲೆಬಾಳುವ ಪದಾರ್ಥಗಳನ್ನೆಲ್ಲ ಬಂಡಿಯಲ್ಲಿ ತುಂಬಿಕೊಂಡು, ಮಾರಿ ಅಪಾರ ಧನ ಗಳಿಸಿದರು.

ಕೆಲವರ್ಷಗಳು ಕಳೆದ ಮೇಲೆ ಬೋಧಿಸತ್ವ ಮತ್ತೆ ಐದು ನೂರು ಜನ ಬೇರೆ ವರ್ತಕರನ್ನು ಕರೆದುಕೊಂಡು ಅದೇ ಮಾರ್ಗವಾಗಿ ಹೊರಟ. ಮತ್ತೆ ಮಧ್ಯದಲ್ಲಿ ಅದೇ ಕಾಡು ಬಂತು. ಮತ್ತೆ ನೀರಿನ ಬವಣೆಯಾಗಿ ಅದೇ ಹಾಳು ಬಾವಿಯ ಹತ್ತಿರ ಬಂದರು. ಬಾವಿಯಲ್ಲಿ ನೀರಿಲ್ಲದ್ದರಿಂದ ಅದನ್ನು ಅಗೆಯಲು ಪ್ರಾರಂಭಿಸಿದರು. ಹಿಂದೆ ಆದಂತೆ ಮತ್ತೆ ಬೆಲೆಬಾಳುವ ವಸ್ತುಗಳು ಹೊರಬರತೊಡಗಿದವು. ವರ್ತಕರಿಗೆ ಸಂಭ್ರಮ! ಉತ್ಸಾಹದಿಂದ ಮುಗಿಬಿದ್ದು ಅಗೆಯತೊಡಗಿದರು. ಬೇಕಾದಷ್ಟು ಕಬ್ಬಿಣ, ಸತುವು, ಸೀಸ, ಮುತ್ತು, ರತ್ನ, ಚಿನ್ನ ಹೊರಗೆ ಬಂತು. ಅವನ್ನೆಲ್ಲ ಬಂಡಿಗಳಲ್ಲಿ ತುಂಬಿಸಿಕೊಂಡರು. ಮತ್ತಷ್ಟು ಅಗೆಯಲು ಬಾವಿಗೆ ಇಳಿದರು. ಆಗ ಬೋಧಿಸತ್ವ ಅವರಿಗೆ ತಿಳಿಹೇಳಿದ. ‘ನಿಮ್ಮ ಅಪೇಕ್ಷೆ, ನಿರೀಕ್ಷೆ ಇಲ್ಲದೆ ಇಷ್ಟೊಂದು ವಸ್ತುಗಳು ನಿಮಗೆ ದೊರೆತಿವೆ. ಇನ್ನೂ ದುರಾಸೆ ಬೇಡ. ನಾವಿನ್ನು ಹೊರಡೋಣ’ ಎಂದ. ಸುಲಭವಾಗಿ ದೊರೆಯುವ ಸಂಪತ್ತನ್ನು ಬಿಡುವುದು ಹೇಗೆ? ಅವರೆಲ್ಲ ಬೋಧಿಸತ್ವನ ಮಾತನ್ನು ತಳ್ಳಿಹಾಕಿ ಮತ್ತೆ ಅಗೆಯತೊಡಗಿದರು. ತಳ ಆಳಕ್ಕೆ ಹೋಯಿತು. ಅದೊಂದು ನಾಗರಾಜನ ವಾಸಸ್ಥಾನ. ಇವರು ಅಗೆದಂತೆ ಕೆಳಭಾಗದಲ್ಲಿ ಇದ್ದ ನಾಗರಾಜನ ಮನೆ ಕುಸಿಯತೊಡಗಿತು. ಅದರ ಗೋಡೆಗಳೆಲ್ಲ ಬಿರುಕುಬಿಟ್ಟವು. ನಾಗರಾಜನ ಪರಿವಾರದವರೆಲ್ಲ ಕಂಗೆಟ್ಟರು. ನಾಗರಾಜ ಕೋಪದಿಂದ ಬುಸುಗುಟ್ಟುತ್ತ ಮೇಲೆದ್ದು ತನ್ನ ಮನೆಯಿಂದ ಹೊರಬಂದ. ತಮ್ಮ ನಡುವೆಯೇ ಎದ್ದು ನಿಂತ ಭಯಂಕರ ಸರ್ಪವನ್ನು ನೋಡಿ ವರ್ತಕರು ಎದೆ ಒಡೆದುಕೊಂಡರು. ಕೋಪದಿಂದ ನಾಗರಾಜ ಫೂತ್ಕರಿಸಿದಾಗ ಬಂದ ವಿಷದ ಗಾಳಿ ಅವರನ್ನೆಲ್ಲ ಕೊಂದು ಹಾಕಿತು. ಹೊರಗಿದ್ದ ಬೋಧಿಸತ್ವ ಮಾತ್ರ ಉಳಿದುಕೊಂಡ. ನಾಗರಾಜ, ಬೋಧಿಸತ್ವನ ತಿಳಿವಳಿಕೆಯನ್ನು ಮೆಚ್ಚಿ, ತನ್ನಲ್ಲಿದ್ದ ಮತ್ತಷ್ಟು ಬೆಲೆಬಾಳುವ ವಸ್ತುಗಳನ್ನು ನೂರಾರು ಬಂಡಿಗಳಲ್ಲಿ ತುಂಬಿಸಿ ತನ್ನ ನಾಗದೂತರಿಂದ ಎಳೆಸಿ ವಾರಾಣಸಿಗೆ ಕಳುಹಿಸಿಕೊಟ್ಟ.

ಆದರೆ ಬೋಧಿಸತ್ವ ಅಕಾರಣವಾಗಿ ದೊರೆತ ಈ ಸಂಪತ್ತನ್ನು ತನ್ನದಾಗಿ ಸ್ವೀಕರಿಸಲಿಲ್ಲ. ಹೊಸದಾಗಿ ಬಂದ ಸಂಪತ್ತಿನೊಡನೆ, ತನ್ನ ಸಂಪತ್ತನ್ನೂ ಸಂಪೂರ್ಣವಾಗಿ ದಾನಮಾಡಿ, ಶೀಲಗ್ರಹಣಮಾಡಿ, ಸನ್ಯಾಸಿಯಾಗಿ ಹಿಮಾಲಯಕ್ಕೆ ನಡೆದುಹೋದ. ಅಲ್ಲಿ ತನ್ನ ಶಿಷ್ಯರೆಗೆ ಬೋಧಿಸಿದ, ‘ಬದುಕಲು ಹಣ, ಸಂಪತ್ತು ಬೇಕು. ಆದರೆ ಎಷ್ಟು ಬೇಕು ಎನ್ನುವುದರ ಅರಿವಿರಬೇಕು. ಈ ಅರಿವು ಮರೆತ ದಿನವೇ ಆಪತ್ತು ಕಾದಿದೆ’

ಇಂದಿಗೂ ಆ ಮಾತು ಮಾರ್ಗದರ್ಶಿ.

ಪ್ರತಿಕ್ರಿಯಿಸಿ (+)