ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ದೈವಿಕವೇ

Last Updated 1 ಜುಲೈ 2019, 20:15 IST
ಅಕ್ಷರ ಗಾತ್ರ

ಪುಣ್ಯಪಾಪ ಋಣಾನುಬಂಧ ವಾಸನೆಗಳಿವು |
ಜನ್ಮಾಂತರದ ಕರ್ಮಶೇಷದಂಶಗಳು ||
ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು |
ಸನ್ನಿಹಿತ ದೈವಿಕದೆ – ಮಂಕುತಿಮ್ಮ || 152 ||

ಪದ-ಅರ್ಥ: ಕರ್ಮಶೇಷದಂಶಗಳು= ಕರ್ಮ+ಶೇಷದ+ಅಂಶಗಳು, ಎಣ್ಣಿಕೆಗೆ=ಎಣಿಕೆಗೆ, ಸಿಲುಕದಾಕಸ್ಮಿಕ=ಸಿಲುಕದ+ಆಕಸ್ಮಿಕ, ಯದೃಚ್ಛೆ=ಅನಿರೀಕ್ಷಿತವಾಗಿ ದೊರೆತದ್ದು, ಸನ್ನಿಹಿತ=ಹತ್ತಿರ ಬಂದದ್ದು
ವಾಚ್ಯಾರ್ಥ: ನಮ್ಮ ಪುಣ್ಯಪಾಪಗಳು ಋಣಾನುಬಂಧದ ವಾಸನೆಗಳು, ಜನ್ಮ ಜನ್ಮಾಂತರದ ಕರ್ಮದ ಅವಶೇಷಗಳು, ಲೆಕ್ಕಕ್ಕೆ ಸಿಗದ ಅನೇಕ ಆಕಸ್ಮಿಕಗಳು, ಅನಿರೀಕ್ಷಿತಗಳು. ಇವೆಲ್ಲ ನಮಗೆ ದೊರಕುವುದು ದೈವಬಲದಿಂದ.

ವಿವರಣೆ: ಈ ದೇಹದಲ್ಲಿ ಬದುಕಿರುವ ತನಕ ಕಾರ್ಯಮಾಡಲೇಬೇಕು. ಕಾರ್ಯವಿಲ್ಲದೆ ಒಂದು ಕ್ಷಣ ಕೂಡ ಬದುಕುವುದು ಸಾಧ್ಯವಿಲ್ಲ. ಹೀಗೆ ಕಾರ್ಯಮಾಡುವಾಗ ನಾಲ್ಕು ತರಹದ ಕೆಲಸಗಳಾಗುತ್ತವೆ. ಮೊದಲನೆಯದು ಸ್ವಾರ್ಥಕಾರ್ಯ. ಕೆಲಸವನ್ನು ನನಗೆ ಅಥವಾ ನನಗೆ ಬೇಕಾದವರಿಗೆ ಅನುಕೂಲವಾಗಲಿ ಎಂದು ಮಾಡುವುದು. ಈ ಸಂದರ್ಭದಲ್ಲಿ ಬೇರೆಯವರಿಗೆ ತೊಂದರೆಯಾದರೂ ಅಡ್ಡಿಯಿಲ್ಲ ಎಂದು ಭಾವಿಸುವುದು. ಎರಡನೆಯದು, ನನಗೂ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವುದು. ಇದು ಸ್ವಾರ್ಥ-ಪರಾರ್ಥ ಕ್ರಿಯೆ. ಮೂರನೆಯದು, ನನಗಾಗಿ ಏನೂ ಬೇಡ, ಇಡೀ ಜಗತ್ತಿಗೆ ಒಳ್ಳೆಯದಾಗಲಿ ಎಂದು ಮಾಡುವ ಕಾರ್ಯ. ತನಗೆ ಎಷ್ಟು ಅನ್ಯಾಯವಾದರೂ ಸರಿ, ಪರರಿಗೆ ತೊದರೆಯಾಗಬಾರದು ಎಂಬ ಧೋರಣೆ. ಇದು ಸ್ವಾರ್ಥನಾಶ-ಪರಾರ್ಥಹಿತ ಕಾರ್ಯ. ನಾಲ್ಕನೆಯದು, ನನಗೆ ಒಳ್ಳೆಯಾಗದಿದ್ದರೆ ಯಾರಿಗೂ ಒಳ್ಳೆಯದಾಗುವುದು ಬೇಡ ಎಂದು ಎಲ್ಲವನ್ನೂ ನಾಶ ಮಾಡುವ ಪ್ರವೃತ್ತಿ. ಇದು ಸರ್ವನಾಶ ಕಾರ್ಯ. ಹೀಗೆ ಕೆಲಸ ಮಾಡುವಾಗ ನಮಗೆ ಅರಿವಿಲ್ಲದಂತೆ ಪಾಪ, ಪುಣ್ಯಗಳ ಶೇಖರಣೆಯಾಗುತ್ತದೆ. ಒಳ್ಳೆಯ ಕಾರ್ಯ ಪುಣ್ಯ ತಂದರೆ, ಕೆಟ್ಟ ಕಾರ್ಯ ಪಾಪವನ್ನು ತಂದೊಡ್ಡುತ್ತದೆ. ಈ ಕರ್ಮಗಳು ತರುವ ಪಾಪ ಪುಣ್ಯಗಳು ಈ ಜನ್ಮಕ್ಕೇ ನಿಲ್ಲುವುದಿಲ್ಲ. ಅವು ಜನ್ಮ ಜನ್ಮಾಂತರದಲ್ಲಿ ನಮ್ಮನ್ನು ಬೆನ್ನಟ್ಟಿ ಬರುತ್ತವೆ ಎಂಬ ನಂಬಿಕೆ. ಅದಕ್ಕೇ ಅವುಗಳನ್ನು ಜನ್ಮಾಂತರದ ಕರ್ಮದ ಉಳಿದ ಅಂಶಗಳು ಎನ್ನುತ್ತದೆ ಕಗ್ಗ.

ನಾವು ಮಾಡಿದ ಕರ್ಮಫಲಗಳಾದ ಪಾಪ-ಪುಣ್ಯಗಳಲ್ಲದೇ ಬದುಕಿನಲ್ಲಿ ನಾವು ಯೋಚಿಸದೇ ಇದ್ದ, ಕಲ್ಪನೆಗೂ ಮೀರಿದ ಅನೇಕ ಆಕಸ್ಮಿಕಗಳಾಗುತ್ತವೆ. ಆಕಸ್ಮಿಕದ ಧನಲಾಭ, ಸ್ಥಾನ, ಗೌರವಗಳು ಸಂತೋಷವನ್ನು ಉಕ್ಕಿಸಿದರೆ, ಹಾಗೆಯೇ ಆಕಸ್ಮಿಕವಾಗಿ ಬಂದೆರಗಿದ ಅಪಘಾತಗಳು, ಹಣನಾಶ, ಗೌರವಕ್ಕೆ ಧಕ್ಕೆ, ಸಾವುಗಳು ದು:ಖಕ್ಕೆ ಈಡುಮಾಡುತ್ತವೆ. ಇವುಗಳನ್ನು ಎದುರಿಸುವುದು ಹೇಗೆ ಎನ್ನುವುದಕ್ಕೆ ಈ ಕಗ್ಗ ಒಂದು ಅತ್ಯಂತ ಸಮರ್ಥವಾದ ಸಮಾಧಾನವನ್ನು ಕೊಡುತ್ತದೆ.

ಈ ಎಲ್ಲ ಋಣಾನುಬಂಧಗಳು, ಕರ್ಮದ ಋಣಶೇಷಗಳು ಹಾಗೂ ಆಕಸ್ಮಿಕ, ಅನಿರೀಕ್ಷಿತಗಳು ನಮಗೆ ಸನ್ನಿಹಿತವಾಗುವುದು, ಹತ್ತಿರಕ್ಕೆ ಬರುವುದು, ದೈವಕೃಪೆಯಿಂದ. ಒಳ್ಳೆಯದೇನಾದರೂ ಆದರೆ ಅದು ದೈವಕೃಪೆಯೆಂದು ವಿನಯದಲ್ಲಿರುವುದು ಎಷ್ಟು ಕ್ಷೇಮವೋ ಹಾಗೆಯೇ ಕೆಟ್ಟದ್ದೇನಾದರೂ ಸಂಭವಿಸಿದರೆ ಅದೂ ಕೂಡ ದೈವದಿಚ್ಛೆಯೇ ಎಂದು ಸಾಂತ್ವನ ಮಾಡಿಕೊಳ್ಳುವುದು, ಬದುಕನ್ನು ಹಗುರಮಾಡಿಕೊಳ್ಳುವ ಏಕಮಾತ್ರ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT