ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕವಾಗುವ ಬೆರಗು

Last Updated 8 ಜನವರಿ 2020, 19:16 IST
ಅಕ್ಷರ ಗಾತ್ರ

ಕಣ್ಣೆರಡದೇಕೆರಡುವೊಂದೆ ಪಕ್ಕದೊಳೇಕೆ ? |
ಬೆನ್ನೊಳೊಂದೆದೆಯಳೊಂದಿರಲು ಸುಕರವಲ ? ||
ಅನ್ಯಾಯ ವಿಕಟಂಗಳೆನಿತೊ ಸೃಷ್ಟಿಕ್ರಮದಿ !
ಸೊನ್ನೆ ಜನವಾಕ್ಕಲ್ಲಿ – ಮಂಕುತಿಮ್ಮ || 234 ||

ಪದ-ಅರ್ಥ: ಕಣ್ಣೆರಡ ದೇಕೆರೆಡು ವೊಂದೆ=ಕಣ್ಣು+ಎರಡು+ಅದೇಕೆ+ಎರಡು+ಒಂದೆ, ಬೆನ್ನೊಳೊಂದೆ ದೆಯಳೊಂದಿರಲು=ಬೆನ್ನೊಳು+ಒಂದು+ಎದೆಯೊಳು+ಒಂದು+ಇರಲು, ಸುಕರ=ಸುಲಭ, ಅನುಕೂಲ, ವಿಕಟ=ವಿಚಿತ್ರ

ವಾಚ್ಯಾರ್ಥ: ಎರಡು ಕಣ್ಣುಗಳೇಕೆ? ಎರಡೂ ಒಂದೇ ಬದಿಯಲ್ಲಿರುವುದೇಕೆ? ಒಂದು ಬೆನ್ನಿನಲ್ಲಿ ಮತ್ತೊಂದು ಎದೆಯಲ್ಲಿ ಇದ್ದರೆ ಅನುಕೂಲವಿತ್ತಲ್ಲ? ಇಂಥ ಅನ್ಯಾಯವೆನ್ನಿಸುವ, ವಿಚಿತ್ರವೆನ್ನಿಸುವ ಎಷ್ಟೋ ವಿಷಯಗಳು ಸೃಷ್ಟಿಯಲ್ಲಿವೆ. ಆದರೆ ಜನರ ಅಭಿಮತಕ್ಕೆ ಅಲ್ಲಿ ಯಾವ ಅವಕಾಶವೂ ಇಲ್ಲ.

ವಿವರಣೆ: ಒಂದು ಬುದ್ಧಿವಂತರ ಗುಂಪು ಸೇರಿತ್ತು. ಅವರಲ್ಲಿ ಒಂದು ಜಿಜ್ಞಾಸೆ. ವಿಜ್ಞಾನದ ಚಿಂತನೆಯಂತೆ ಜೀವರಾಶಿಗಳಲ್ಲಿ ಸದಾಕಾಲದ ವಿಕಾಸವಾಗುತ್ತಲೇ ಇದೆ. ಕೋಟ್ಯಂತರ ವರ್ಷಗಳ ಹಿಂದೆ ಅಮೀಬಾ ಎಂಬ ಏಕಾಣು ಜೀವಿಯಾಗಿದ್ದುದು ಮುಂದೆ ನಿಧಾನವಾಗಿ ಬದಲಾಗುತ್ತ ಉನ್ನತ ಮಟ್ಟದ ಶರೀರಿಯಾಗುತ್ತ ಬಂದಿತು. ನೀರಿನಲ್ಲಿದ್ದದ್ದು, ನೆಲಕ್ಕೆ ಬಂದಿತು. ತೆವಳುತ್ತಿದ್ದದ್ದು ನಾಲ್ಕು ಕಾಲುಗಳ ಮೇಲೆ ನಿಂತು ನಡೆಯಿತು. ಮುಂದೆ ಎರಡೇ ಕಾಲುಗಳ ಮೇಲೆ ನಡೆಯತೊಡಗಿತು. ಕೋತಿಯಂತಾದದ್ದು ಮತ್ತೆ ಬದಲಾಗುತ್ತ ಇಂದಿನ ಮನುಷ್ಯ ರೂಪವನ್ನು ಪಡೆಯಿತು. ಹಾಗಾದರೆ ಇದೇ ಕೊನೆಯ ಹಂತವೇ? ಮುಂದೆ ಬದಲಾವಣೆ ಸಾಧ್ಯವಿಲ್ಲವೇ? ಇಲ್ಲ ಎನ್ನುವುದಾದರೆ ವಿಕಾಸ ನಿಂತೇ ಹೋಯಿತಲ್ಲ, ಅಥವಾ ವಿಕಾಸ ಮುಂದೆಯೂ ನಡೆಯುತ್ತಲೇ ಇರುತ್ತದೆಂದರೆ ಲಕ್ಷಾಂತರ ವರ್ಷಗಳ ನಂತರ ಮನುಷ್ಯನ ಶರೀರ ಹೇಗಿರಬಹುದು? ಇಂದಿನ ದೇಹದ ಕೊರೆಗಳನ್ನು, ಅಪೂರ್ಣತೆಯನ್ನು ಸರಿಪಡಿಸಿದಾಗ ಅಂದು ದೇಹ ಹೇಗಿರಬಹುದು? ಹಾಗಾದರೆ ಇವತ್ತಿನ ದೇಹದ ಕೊರತೆಗಳಾವವು? ಒಬ್ಬರು ಹೇಳಿದರು, “ನಮ್ಮ ಎರಡೂ ಕಣ್ಣುಗಳು ಮುಖದ ಮೇಲೆ ಪಕ್ಕಪಕ್ಕದಲ್ಲೇ ಇರುವುದು ಸರಿಯಲ್ಲ. ಒಂದು ತಲೆಯ ಹಿಂದಿದ್ದರೆ ವಾಸಿ, ಆಗ ಹಿಂದೆ ನಡೆಯುವುದನ್ನು ಗಮನಿಸಬಹುದಿತ್ತು” ಮತ್ತೊಬ್ಬರು ಖಂಡಿಸಿದರು, “ಸಾಧ್ಯವೇ ಇಲ್ಲ. ಹಿಂದಿನ ಚಿತ್ರ, ಮುಂದಿನ ಚಿತ್ರ ಎರಡೆರಡು ಏಕಕಾಲಕ್ಕೆ ಬಂದರೆ ಯಾವುದನ್ನು ಗ್ರಹಿಸುವುದು ಎಂಬುದು ಗೋಜಲಾಗುತ್ತದೆ. ಅದಲ್ಲದೆ ಮಲಗುವುದು ಹೇಗೆ? ಯಾವಾಗಲೂ ಮಗ್ಗುಲಾಗಿಯೇ ಮಲಗುವುದು ಸಾಧ್ಯವೇ?” ಇನ್ನೊಬ್ಬರು ಧ್ವನಿ ಸೇರಿಸಿದರು, “ಹಿಂದೆ, ಮುಂದೆ ಕಣ್ಣುಗಳಿದ್ದರೆ ಅವು ಅಶಕ್ತವಾದಾಗ ಕನ್ನಡಕ ಧರಿಸುವುದು ಹೇಗೆ? ಹಿಂದೊಂದು, ಮುಂದೊಂದು ಕನ್ನಡಕ ಹಾಕಲು ಸಾಧ್ಯವೇ?” ತರ್ಕ ಬೆಳೆಯಿತು, ವಿತರ್ಕವಾಯಿತು. ಕೊನೆಗೊಂದು ತೀರ್ಮಾನಕ್ಕೆ ಬಂದರು, “ಈಗ ಇರುವುದೇ ಸರಿಯಾದದ್ದು. ಭಗವಂತ ತುಂಬ ಯೋಜನೆ ಮಾಡಿಯೇ ಸೃಷ್ಟಿಸಿದ್ದಾನೆ”.

ಕಗ್ಗ ಹೇಳುವುದು ಅದನ್ನೇ. ದೇಹರಚನೆ ಮಾತ್ರವಲ್ಲ, ಇಡೀ ಸೃಷ್ಟಿಯ ಬಗ್ಗೆ ಚರ್ಚೆ ಮಾಡುತ್ತೇವೆ, ಇದು ಸರಿ, ಅದು ಸರಿಯಲ್ಲ ಎಂದು ವಾದ ಮಾಡುತ್ತೇವೆ. ವಸ್ತುಗಳು ಹೊರಗಿವೆ ಆದರೆ ವಸ್ತುಗಳನ್ನು ಅನುಭವಿಸುವ ಮನಸ್ಸು ಒಳಗಿದೆ. ವಸ್ತು ಒಂದೇ ಆದರೂ ಅದನ್ನು ನೋಡುವ ಭಾವಗಳು ನೂರಾರು. ಆದ್ದರಿಂದಲೇ ಒಂದೇ ವಸ್ತುವನ್ನು ಹತ್ತು ಜನ ಹತ್ತು ರೀತಿಯಲ್ಲಿ ನೋಡುತ್ತಾರೆ. ಒಬ್ಬರಿಗೆ ಸರಿ ಎನ್ನಿಸಿದ್ದು ಮತ್ತೊಬ್ಬರಿಗೆ ಅನ್ಯಾಯ, ಇನ್ನೊಬ್ಬರಿಗೆ ವಿಚಿತ್ರ. ಆದರೆ ಪ್ರೇಮಭಾವದಿಂದ ನೋಡಿದಾಗ ಈ ಜಗತ್ತಿನ ವೈವಿಧ್ಯತೆಗಳು, ತೋರಿಕೆಯ ಅವ್ಯವಸ್ಥೆಗಳು ಸುಂದರವಾಗಿ, ಭಗವನ್ಮಯವಾಗಿ, ಆನಂದಮಯವಾಗಿ ತೋರುತ್ತವೆ. ಆಗ ಮಾತು ಮೂಕವಾಗುತ್ತದೆ. ಅದನ್ನೇ ಕಗ್ಗ ‘ಸೊನ್ನೆ ಜನವಾಕ್ಕಲ್ಲಿ” ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT