ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಿದ ಕರ್ಮ

Last Updated 19 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೋಧಿಸತ್ವ ಒಂದು ಜನ್ಮದಲ್ಲಿ ವಾರಾಣಸಿಯ ರಾಜನ ಮಗನಾಗಿ ಹುಟ್ಟಿದ್ದ. ಒಂದು ಸಲ ಅವನಿನ್ನೂ ತುಂಬ ಚಿಕ್ಕವನಿರುವಾಗ, ಅರಮನೆಯ ಮನೆಯ ಜನರ ಮೋಸದಿಂದ, ತನ್ನ ರಾಜ್ಯದ ಮೇಲೆ ಶತ್ರುಸೈನ್ಯ ದಾಳಿ ಮಾಡಿದಾಗ, ಸೋತುಹೋದ. ಅವರ ಕೈಯಿಂದ ಪಾರಾಗಲು ತನ್ನ ಮಗ, ಹೆಂಡತಿ, ಪುರೋಹಿತ ಮತ್ತು ಒಬ್ಬ ಸೇವಕ ಪರಂತಪನನ್ನು ಜೊತೆಮಾಡಿಕೊಂಡು ಕಾಡಿಗೆ ಹೋಗಿ ಸೇರಿಕೊಂಡ. ಅಲ್ಲಿಯೇ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸತೊಡಗಿದ.

ನಿತ್ಯವೂ ರಾಜ ಮತ್ತು ಪುರೋಹಿತರಿಬ್ಬರೂ ಕಾಡಿನ ತುಂಬ ಒಳಕ್ಕೆ ಹೋಗಿ ಕಂದಮೂಲಗಳನ್ನು ತರುತ್ತಿದ್ದರು. ರಾಣಿ, ಪುಟ್ಟ ಮಗ ಮತ್ತು ಸೇವಕ ಪರಂತಪ ಮನೆಯಲ್ಲಿಯ ಕೆಲಸ ನೋಡಿಕೊಳ್ಳುತ್ತಿದ್ದರು. ನಿಧಾನವಾಗಿ ರಾಣಿಗೂ ಸೇವಕ ಪರಂತಪನಿಗೂ ಸಲುಗೆ ಬೆಳೆಯಿತು. ದಿನಗಳು ಕಳೆದವು. ಒಂದು ದಿನ ರಾಜ ಮತ್ತು ಪರಂತಪ ಸ್ನಾನಕ್ಕೆ ನದಿಗೆ ಹೋದರು. ಪುರೋಹಿತ ಸಂಶಯದಿಂದ ಅವರನ್ನು ಹಿಂಬಾಲಿಸಿ ಮರವನ್ನೇರಿ ಕುಳಿತುಕೊಂಡ. ಸ್ನಾನ ಮುಗಿಸಿ ಹೊರಗೆ ಬಂದ ರಾಜನಿಗೆ ವಸ್ತುಗಳನ್ನು ಕೊಡ ಹೋದ ಪರಂತಪ ಥಟ್ಟನೆ ತಲೆಯನ್ನು ಕತ್ತರಿಸಿಬಿಟ್ಟ. ನಂತರ ನೆಲವನ್ನು ಅಗೆದು ಅವನ ದೇಹವನ್ನು ಹೂಳಿಬಿಟ್ಟು ಅದರ ಮೇಲೆ ಮರದ ಕೊಂಬೆಗಳನ್ನು, ಬಳ್ಳಿಗಳನ್ನು ಹಾಕಿ ಮುಚ್ಚಿದ. ಮರದ ಮೇಲಿಂದ ಇದನ್ನು ನೋಡುತ್ತಿದ್ದ ಪುರೋಹಿತ ಹೌಹಾರಿ ಕೆಳಗೆ ಹಾರಿದ. ಪೊದೆಯ ಹಿಂದೆ ಆದ ಸದ್ದನ್ನು ಕೇಳಿ ಪರಂತಪ ಅತ್ತ ನೋಡಲು ಹೋಗುವುದರಲ್ಲಿ ಪುರೋಹಿತ ಬೇರೆಡೆಗೆ ಹೋಗಿಬಿಟ್ಟ. ಯಾರೋ ನೋಡಿದರು ಎಂಬ ಸಂಶಯ ಪರಂತಪನಿಗೆ ಬಂದಿತು.

ಪರಂತಪ ಗುಡಿಸಲಿಗೆ ಬಂದು ರಾಣಿಗೆ ನಡೆದದ್ದನ್ನು ಗುಟ್ಟಾಗಿ ಹೇಳಿದ. ಪುಟ್ಟ ಮಗುವಾದ ರಾಜಕುಮಾರನಿಗೆ ಇದು ತಿಳಿಯಲಿಲ್ಲ. ಪುರೋಹಿತ ಬರುವಷ್ಟರಲ್ಲಿ ಇವರಿಬ್ಬರೂ ಅಳುವ ನಾಟಕ ಮಾಡಿ ಮುಗಿಸಿದ್ದರು. ತಾನು ಕೊಲೆಯನ್ನು ನೋಡಿದ್ದೇನೆಂದು ಅವರಿಗೆ ಗೊತ್ತಾದರೆ ತನ್ನನ್ನು ಕೊಂದುಬಿಡುತ್ತಾನೆ, ನಂತರ ರಾಜಕುಮಾರನನ್ನು ಸಾಯಿಸುತ್ತಾನೆ ಎಂದುಕೊಂಡು ಪುರೋಹಿತ ಕಣ್ಣು ಕಾಣದವರಂತೆ ತಡಬಡಿಸುತ್ತ ಬಂದು ಪರಂತಪನನ್ನು ನೋಡುತ್ತ, ‘ರಾಜರೇ, ನನಗೆ ಕಣ್ಣೇ ಕಾಣುತ್ತಿಲ್ಲ. ಕಟ್ಟಿಗೆ ಆರಿಸಲು ಹೋದಾಗ ವಿಷಸರ್ಪವೊಂದು ನನ್ನ ಕಣ್ಣುಗಳನ್ನು ಕುಕ್ಕಿಬಿಟ್ಟಿತು. ನನ್ನ ದೃಷ್ಟಿ ಸಂಪೂರ್ಣವಾಗಿ ಹೋಗಿಬಿಟ್ಟಿತು’ ಎಂದು ಗೋಳಾಡಿದ. ತನ್ನನ್ನೇ ರಾಜ ಎಂದು ಮಾತನಾಡಿಸುತ್ತಾನೆ ಎಂದ ಮೇಲೆ ದೃಷ್ಟಿ ಪೂರ್ತಿ ಹೋಗಿರಬೇಕು ಎಂದ ಪರಂತಪ ನಂಬಿದ.

ಪರಂತಪನಿಗೆ ಈಗ ಇನ್ನೂ ನಿರಾಳವಾಯಿತು. ರಾಜಕುಮಾರನನ್ನು ಹೊರಗೆ ಕಳುಹಿಸಿದರಾಯಿತು, ಹೇಗಿದ್ದರೂ ಪುರೋಹಿತನಿಗೆ ಏನೂ ಕಾಣುವುದಿಲ್ಲ. ಅವನ ಮುಂದೆಯೇ ಪರಂತಪ ಹಾಗೂ ರಾಣಿಯ ಪ್ರೇಮಸಲ್ಲಾಪ ನಡೆಯತೊಡಗಿತು. ನೋಡಿಯೂ ನೋಡದಂತೆ ಪುರೋಹಿತ ಸುಮ್ಮನಿದ್ದ. ಅವನಿಗೆ ರಾಜಕುಮಾರನ ಕ್ಷೇಮ ಮುಖ್ಯವಾಗಿತ್ತು. ಈಗ ರಾಜಕುಮಾರನಿಗೆ ಹದಿನಾರು ತುಂಬಿತು. ಒಂದು ದಿನ ರಾಜಕುಮಾರನನ್ನು ಸ್ನಾನಕ್ಕೆ ನದಿಗೆ ಕರೆದುಕೊಂಡು ಹೋಗಿ, ಕೇಳಿದ, ‘ರಾಜಕುಮಾರ, ಪರಂತಪ ಯಾರೆಂದು ತಿಳಿದೆ?’ ‘ಅವರು ನನ್ನ ತಂದೆ’ ಎಂದ ರಾಜಕುಮಾರ. ಆಗ ಪುರೋಹಿತ ರಾಜನನ್ನು ಕೊಂದುಹಾಕಿದ್ದ ಸ್ಥಳಕ್ಕೆ ಅವನನ್ನು ಕರೆದೊಯ್ದು ತಾನು ಅಲ್ಲಿ ಕಲ್ಲನ್ನು ಕೂಡ್ರಿಸಿದ್ದನ್ನು ತೋರಿಸಿ, ‘ಇದು ನಿಮ್ಮ ತಂದೆಯ ಸಮಾಧಿ. ಅವರು ವಾರಾಣಸಿಯ ರಾಜನಾಗಿದ್ದವರು. ನೀನು ರಾಜಕುಮಾರ. ನಾನು ಕುರುಡನಲ್ಲ. ಪರಂತಪ ಅವರನ್ನು ಹೀಗೆ ಇಲ್ಲಿ ಕೊಂದುಹಾಕಿದ’ ಎಂದು ವರ್ಣಿಸಿದ. ಮರುದಿನ ರಾಜಕುಮಾರ ಪರಂತಪನನ್ನು ನದೀತೀರಕ್ಕೆ ಕರೆದೊಯ್ದು ತನ್ನ ತಂದೆಯನ್ನು ಕೊಂದಂತೆ ಅವನನ್ನು ಕೊಂದು ಹಾಕಿದ. ನಂತರ ಪುರೋಹಿತನ ಸಹಕಾರದೊಂದಿಗೆ ದೇಶದ ಜನರೊಡನೆ ಸಂಪರ್ಕಸಾಧಿಸಿ ಮತ್ತೆ ಜಯಗಳಿಸಿ ರಾಜನಾದ. ತಾಯಿಯನ್ನು ಕೊಲ್ಲಿಸದೆ ಸದಾ ಪಶ್ಚಾತ್ತಾಪಡುವಂತೆ ಜೈಲಿನಲ್ಲಿಟ್ಟ.

ನಾವು ಮಾಡಿದ ಕರ್ಮ ನಮ್ಮನ್ನು ಬೆನ್ನಟ್ಟಿ ಬರುತ್ತದೆ. ಯಾರಿಗೂ ತಿಳಿದಿಲ್ಲವೆಂದು ಮಾಡಿದ ಕೆಟ್ಟ ಕೆಲಸವೂ ನಮಗಾಗಿ ಮರೆಯಲ್ಲಿ ಕಾಯ್ದು ಸರಿಯಾದ ಸಮಯದಲ್ಲಿ ಪೆಟ್ಟು ಕೊಡುತ್ತದೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT