ಸೋಮವಾರ, ಜೂನ್ 1, 2020
27 °C

ಬೆರಗಿನ ಬೆಳಕು | ಧೀರ ಪ್ರಯತ್ನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸುಂದರವನೆಸಗು ಜೀವನದ ಸಾಹಸದಿಂದೆ |
ಕುಂದಿಲ್ಲವದಕೆ ಸಾಹಸಭಂಗದಿಂದೆ ||
ಮುಂದಕದು ಸಾಗುವುದು ಮರಳಿ ಸಾಹಸದಿಂದೆ |
ಚೆಂದ ಧೀರೋದ್ಯಮವೆ – ಮಂಕುತಿಮ್ಮ || 269 ||

ಪದ-ಅರ್ಥ: ಸುಂದರವನೆಸಗು=ಸುಂದರವನು+ಎಸಗು(ಮಾಡು), ಧೀರೋದ್ಯಮವೆ=ಧೈರ್ಯದಿಂದ ಮಾಡುವ ಕೆಲಸ.

ವಾಚ್ಯಾರ್ಥ: ಜೀವನದಲ್ಲಿ ಸಾಹಸದಿಂದ ಸೌಂದರ್ಯವನ್ನು ಸೃಷ್ಟಿಸು. ಸಾಹಸದಲ್ಲಿ ಸೋಲಾದರೆ ಅದು ಕೊರತೆಯಲ್ಲ. ಮತ್ತೆ ಮರಳಿ ಸಾಹಸದಿಂದ ಅದನ್ನು ಸಾಧಿಸಬಹುದು. ಹೀಗೆ ಸಾಹಸದ ಕೆಲಸವೇ ಬದುಕಿನ ಚೆಂದ.

ವಿವರಣೆ: ಇದು ಪ್ರಪಂಚದಲ್ಲಿ ಕಾಣುವ ಸುಂದರತೆಯೆಲ್ಲ ಯಾವುದೋ ಸಾಹಸದಿಂದಲೇ ಬಂದದ್ದು. ಚಂದ್ರನ ಮೇಲ್ಮೈಯಿಂದ ಭೂಮಿಯ ಮೇಲೆ ಕಟ್ಟಿದ ಒಂದೇ ಕಟ್ಟಡ ಕಣ್ಣಿಗೆ ಕಾಣುತ್ತದಂತೆ. ಅದು ಚೀನಾ ಗೋಡೆ. ಅಷ್ಟು ಉದ್ದದ, ಬಲಿಷ್ಠವಾದ ಕೋಟೆಯನ್ನು ಕಟ್ಟಿದ್ದು ಸಣ್ಣ ಸಾಹಸವೇ? ಇಂದು ಅದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಉಳಿದ ಅದ್ಭುತಗಳೂ ಸಾಹಸದ ಕಥೆಗಳೇ.

ನ್ಯೂಜಿಲೆಂಡ್‌ನ ಪರ್ವತಾರೋಹಿ ಎಡ್ಮಂಡ್ ಹಿಲರಿ ಒಂದೇ ಸಲಕ್ಕೆ ಯಶಸ್ಸು ಪಡೆಯಲಿಲ್ಲ. 1951 ರಲ್ಲಿ ಬ್ರಿಟಿಷ್ ತಂಡದವರೊಂದಿಗೆ ಪರ್ವತ ಶಿಖರವನ್ನು ಹತ್ತಲು ಪ್ರಯತ್ನಿಸಿ ವಿಫಲರಾಗಿದ್ದರು. ಆ ಸಮಯದಲ್ಲಾದ ಘಟನೆಯೊಂದನ್ನು ಜನ ಸ್ಮರಿಸುತ್ತಾರೆ. ಹಿಲರಿ ಇಂಗ್ಲೆಂಡಿನಲ್ಲಿ ಒಂದು ಪರ್ವತಾರೋಹಿಗಳ ಗುಂಪಿಗೆ ಉಪನ್ಯಾಸ ನೀಡಲು ಹೋಗಿದ್ದರು. ಅವರು ಮಾತನಾಡಲು ಎದ್ದು ನಿಂತು ಸಭಿಕರ ಕಡೆಗೆ ನೋಡುವಾಗ, ಆ ಸಭಾಂಗಣದ ಹಿಂದಿನ ಗೋಡೆಯ ತುಂಬ ಮೌಂಟ್ ಎವರೆಸ್ಟ್‌ ಚಿತ್ರ ಅಂಟಿಸಲಾಗಿದ್ದನ್ನು ಕಂಡರು. ಅದನ್ನೇ ದಿಟ್ಟಿಸಿ ನೋಡುತ್ತ, ಹುಬ್ಬುಗಂಟಿಕ್ಕಿಕೊಂಡು, ‘ಏ, ಮೌಂಟ್‌ ಎವರೆಸ್ಟ್‌, ಈ ಬಾರಿ ನಾನು ಸೋತಿರಬಹುದು, ಮುಂದೆ ನಿನ್ನನ್ನು ಗೆದ್ದೇ ತೀರುತ್ತೇನೆ. ಯಾಕೆಂದರೆ ನೀನು ಬೆಳೆಯುವುದಿಲ್ಲ, ಆದರೆ ನಾನು ಬೆಳೆಯುತ್ತಿದ್ದೇನೆ’ ಎಂದು ಗುಡುಗಿದರಂತೆ. ಜನ ಅವರ ಪರ್ವತಾರೋಹಣದ ತನ್ಮಯತೆಯನ್ನು ಕಂಡು ಬೆರಗಾದರಂತೆ. ಮುಂದೆ ಆದದ್ದು ಇತಿಹಾಸ. ಭಾರತೀಯ ಶೆರ್ಪಾ ತೇನ್‌ಸಿಂಗ್ ನಾರ್ಕೆ ಜೊತೆಗೂಡಿ 29ನೇ ಮೇ 1953 ರಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ಮೌಂಟ್‌ ಎವರೆಸ್ಟ್ ಅನ್ನು ಏರಿದ ಮೊದಲ ಮನುಷ್ಯರಾದರು.

ಮನುಷ್ಯ ಚಂದ್ರನ ಮೇಲೆ ಕಾಲಿಟ್ಟು ನಡೆಯುವ ಕಲ್ಪನೆಯೇ ರೋಮಾಂಚಕ. ಅನೇಕ ಸಫಲ, ವಿಫಲ ಪ್ರಯೋಗಗಳ ನಂತರ ನೀಲ್ ಆರ್ಮಸ್ಟ್ರಾಂಗ್‌ ಚಂದ್ರನ ಮೇಲೆ ತಮ್ಮ ಕಾಲಿನ ಹೆಜ್ಜೆಗಳ ಗುರುತು ಮೂಡಿಸಿದ ಮೊದಲ ಮಾನವರಾದರು. ಹೀಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ವಿಫಲತೆಯನ್ನು ಕಾಣದೆ ಸಫಲತೆಯನ್ನು ಕಂಡವರಿಲ್ಲ. ಆದರೆ ಒಂದು ವಿಫಲತೆಯಿಂದ ಕುಗ್ಗಿ, ಆತ್ಮವಿಶ್ವಾಸ ಕಳೆದುಕೊಂಡು ಮುಂದೆ ಪ್ರಯತ್ನವನ್ನೇ ಮಾಡದಿರುವರಿಂದ ಯಾವ ಸಾಧನೆಯೂ ಆಗಿಲ್ಲ. ಅದನ್ನು ಕಗ್ಗ ಒತ್ತಿ ಹೇಳುತ್ತದೆ.

ಸಾಹಸ ಭಂಗದಿಂದ ಕುಂದಿಲ್ಲ. ನಮ್ಮ ಒಂದು ಪ್ರಯತ್ನ ಸೋಲಬಹುದು ಆದರೆ ನಾವು ಸೋಲುವುದಿಲ್ಲ. ಅಬ್ರಹಾಂ ಲಿಂಕನ್‌ರ ಜೀವನ ಸೋಲಿನ ಸರಮಾಲೆ. ಪ್ರಯತ್ನ ನಿಲ್ಲಲಿಲ್ಲ. ಕೊನೆಗೆ ಅವರನ್ನು ಅಮೆರಿಕ ಅಧ್ಯಕ್ಷ ಪದವಿಗೇರಿಸಿತು. ನಮ್ಮವರೇ ಅದ ತೆಂಡೂಲ್ಕರ್, ಪಿ.ವಿ. ಸಿಂಧು, ಲತಾ ಮಂಗೇಶ್ಕರ್‌, ಅಮಿತಾಬ್ ಬಚ್ಚನ್, ಮಹಾತ್ಮಗಾಂಧಿ ಇವರೆಲ್ಲರೂ ವಿಫಲತೆಗಳನ್ನು ಕಂಡರೂ, ಧೈರ್ಯದಿಂದ ಮುನ್ನುಗ್ಗಿ ಯಶಸ್ಸಿನ ಕತ್ತಿನಪಟ್ಟಿಯನ್ನು ಹಿಡಿದೆಳೆದು ಸಾಧನೆಯ ಶಿಖರಕ್ಕೇರಿದವರು. ಸೋಲೇ ಗೆಲುವಿನ ಮೆಟ್ಟಿಲಾಯಿತು. ಈ ಧೀರತೆಯ ಪ್ರಯತ್ನವೇ ಚೆಂದ, ಅದೊಂದು ಮಾದರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.