ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮೋಸದ ಕೊನೆ

Last Updated 15 ಜೂನ್ 2020, 19:45 IST
ಅಕ್ಷರ ಗಾತ್ರ

ಸಾವತ್ರಿಯಲ್ಲಿ ಅನಾಥಪಿಂಡಕನ ಮನೆಯಲ್ಲಿ ನಿತ್ಯವೂ ಐದುನೂರು ಭಿಕ್ಷುಗಳಿಗೆ ಊಟದ ವ್ಯವಸ್ಥೆಯಾಗಿತ್ತು. ಅದರಂತೆಯೇ ವಿಶಾಖೆ ಮತ್ತು ಕೋಸಲ ರಾಜನ ಮನೆಯಲ್ಲಿಯೂ ಊಟ ನೀಡಲಾಗುತ್ತಿತ್ತು. ಕೋಸಲರಾಜನ ಅರಮನೆಯಲ್ಲಿ ಊಟ ಪಡೆದ ಭಿಕ್ಷುಗಳು ಅಲ್ಲಿಯೇ ಊಟ ಮಾಡದೆ ಅನಾಥಪಿಂಡಕನ ಮನೆಗೆ ಬಂದು ಊಟ ಮಾಡುತ್ತಿದ್ದರು. ಅದನ್ನು ಗಮನಿಸಿದ ಕೋಸಲ ರಾಜ ಯಾಕೆ ಹೀಗೆ ಎಂದು ಕಾರಣ ಕೇಳಿದ. ಅದಕ್ಕವರು, ‘ರಾಜಾ, ನಿನ್ನ ಅರಮನೆಯಲ್ಲಿ ವಿಶ್ವಾಸದವರು ಯಾರೂ ಇಲ್ಲ. ಹೀಗೆ ವಿಶ್ವಾಸವಿಲ್ಲದವರು ನೀಡಿದ ಆಹಾರ ನಮಗಿಷ್ಟವಾಗುವುದಿಲ್ಲ’ ಎಂದರು.

‘ಹಾಗಾದರೆ ಯಾರನ್ನು ತಂದರೆ ನಿಮಗೆ ವಿಶ್ವಾಸ ಬಂದೀತು?’ ಎಂದು ಕೇಳಿದ ರಾಜ. ‘ಮಹಾರಾಜಾ, ನಿಮ್ಮ ಸಂಬಂಧಿಗಳಲ್ಲಿ, ಶಾಕ್ಯಕುಲದವರು ಯಾರಾದರೂ ಈ ಕೆಲಸ ಮಾಡಿದರೆ ಸರಿಯಾಗುತ್ತದೆ’ ಎಂದರು ಭಿಕ್ಷುಗಳು.

ಆಗ ರಾಜ ತಾನೊಬ್ಬ ಶಾಕ್ಯ ಕನ್ಯೆಯನ್ನು ಮದುವೆಯಾಗುತ್ತೇನೆಂದು ತೀರ್ಮಾನಿಸಿ, ಶಾಕ್ಯರ ನಾಯಕರಿದ್ದ ಕಪಿಲವಸ್ತುವಿಗೆ ಪತ್ರ ಬರೆದು ಕನ್ಯೆಯನ್ನು ಸೂಚಿಸಬೇಕೆಂದು ಕೇಳಿದ. ಅವರಿಗೆ ತಮ್ಮ ಕನ್ಯೆಯನ್ನು ಕೋಸಲರಾಜನಿಗೆ ಕೊಡಲು ಮನಸ್ಸಿಲ್ಲ, ಇಲ್ಲವೆಂದು ಹೇಳಲು ಧೈರ್ಯವಿಲ್ಲ. ಆಗ ಅವರೊಂದು ಆಲೋಚನೆ ಮಾಡಿದರು. ಅವರ ಪರಿವಾರದಲ್ಲಿ ವಾಸಭಖತ್ತಿ ಎಂಬ ಒಬ್ಬ ದಾಸಿಪುತ್ರಿ ಇದ್ದಳು. ಆಕೆ ನೋಡಲು ಸುಂದರಿ ಮತ್ತು ಸುಗುಣಿ. ಈ ಹುಡುಗಿ ತಮ್ಮನ್ನು ಮದುವೆಯಾಗಲು ಸಿದ್ಧಳಿದ್ದಾಳೆ ಎಂದು ಸಂದೇಶ ಕಳುಹಿಸಿದರು. ರಾಜ ತನ್ನ ಮಂತ್ರಿಗಳನ್ನು ಕಳುಹಿಸಿ, ಆಕೆ ನಿಜವಾಗಿಯೂ ಶಾಕ್ಯ ಮನೆತನದ ಹಿರಿಯನ ಮಗಳು ಹೌದೋ, ಅಲ್ಲವೋ ಪರಿಶೀಲಿಸಿಕೊಂಡು ಬರಲು ತಿಳಿಸಿದ.

ಆ ಕನ್ಯೆ ಮತ್ತು ಆಕೆಯ ತಂದೆ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಮಾತ್ರ ಆಕೆ ನಿಜವಾಗಿಯೂ ಅವನ ಮಗಳು ಎಂದು ಒಪ್ಪುತ್ತೇವೆ ಎಂದರು ಮಂತ್ರಿಗಳು. ಅದಕ್ಕೂ ಒಂದು ಉಪಾಯ ಮಾಡಿದ ಶಾಕ್ಯರ ನಾಯಕ. ತನ್ನ ಜೊತೆಗಾರರಿಗೆ ಹೇಳಿದ, ‘ನಾನು ಊಟಕ್ಕೆ ಕೂಡ್ರುವಾಗ ವಾಸಭಖತ್ತಿಯನ್ನು ಅಲಂಕಾರ ಮಾಡಿ ಕರೆದುಕೊಂಡು ಬನ್ನಿ. ಒಂದು ತುತ್ತು ಅನ್ನವನ್ನು ನಾನು ತೆಗೆದುಕೊಂಡ ಕೂಡಲೆ ಆಕೆ ತಟ್ಟೆಯಿಂದ ಊಟ ಮಾಡಲಿ. ನಾನು ಮತ್ತೊಮ್ಮೆ ತಟ್ಟೆಗೆ ಕೈ ಹಾಕುವುದಿಲ್ಲ. ಆಗ ನೀವು ರಾಜನ ಸಂದೇಶ ಎಂದು ಒಂದು ಪತ್ರವನ್ನು ತಂದುಕೊಡಿ. ನಾನು ಆಕೆಯ ಊಟ ಮುಗಿಯುವವರೆಗೆ ಸಂದೇಶವನ್ನು ಓದುತ್ತೇನೆ’. ಕಾರ್ಯ ಹಾಗೆಯೇ ನಡೆಯಿತು. ಮಂತ್ರಿಗಳಿಗೆ ಹುಡುಗಿ ಯಜಮಾನನ ಮಗಳೇ ಎಂದು ನಂಬಿಕೆಯಾಯಿತು.

ಕೋಸಲರಾಜ ವಾಸಭಖತ್ತಿಯನ್ನು ಮದುವೆಯಾದ. ಅವನಿಗೊಬ್ಬ ಮಗ ಹುಟ್ಟಿದ. ಅವನ ಹೆಸರು ವಿಡ್ಡೂಬಾ. ಅವನಿಗೆ ಎಂಟು ವರ್ಷವಾದಾಗ ಉಳಿದ ಮಕ್ಕಳಂತೆ ತನ್ನ ತಾಯಿಯ ತಂದೆ-ತಾಯಿಯರ ಮನೆಗೆ ಹೋಗಬೇಕೆಂದು ಬಯಸಿದ. ತಾವು ಮುಚ್ಚಿಟ್ಟಿದ್ದ ಸಂಗತಿ ಗೊತ್ತಾಗದಂತೆ ಶಾಕ್ಯರು ನಟಿಸಿ ಅವನನ್ನು ಕೆಲದಿನಗಳ ಮಟ್ಟಿಗೆ ಇಟ್ಟುಕೊಂಡರು. ಅವನು ಹೊರಟು ನಿಂತಾಗ ಹಿರಿಯ, ‘ಈ ದರಿದ್ರ ದಾಸಿಯ ಮಗನಿಗೆ ನಾವು ರಾಜಕುಮಾರನಂತೆ ಸತ್ಕಾರ ಮಾಡಿದೆವು. ಅವನು ಕುಳಿತ ಸಿಂಹಾಸನ ಜಾಗೆ ಎಲ್ಲವನ್ನೂ ಹಾಲು, ನೀರಿನಿಂದ ತೊಳೆದು ಬಿಡಿ’ ಎಂದ.

ಆ ಮಾತನ್ನು ಕೇಳಿಸಿಕೊಂಡ ವಿಡ್ಡೂಭಾ, ‘ನನ್ನ ಜಾತಿ ಕೆಟ್ಟದೆಂದು ಸಿಂಹಾಸನವನ್ನು ಹಾಲಿನಿಂದ ತೊಳಿಸಿದಿರಲ್ಲ, ನಾನು ರಾಜನಾದ ಮೇಲೆ, ಈ ಸಿಂಹಾಸನವನ್ನು ನಿಮ್ಮೆಲ್ಲರ ರಕ್ತದಿಂದ ತೊಳೆಯುತ್ತೇನೆ’ ಎಂದು ಮನಸ್ಸಿನಲ್ಲಿ ನಿರ್ಧಾರ ಮಾಡಿದ. ಮುಂದೆ ರಾಜನಾದ ಮೇಲೆ ಮಾಡಿದ ಮೊದಲ ಕೆಲಸ ಅದೇ - ಶಾಕ್ಯರನ್ನು ಕೊಂದು ಸಿಂಹಾಸನವನ್ನು ರಕ್ತದಿಂದ ತೊಳೆದದ್ದು.

ಮೋಸ, ತಾರತಮ್ಯಗಳ ಯಾವುದೇ ವ್ಯವಹಾರ ಶಾಂತಿಯಿಂದ ಮುಗಿಯಲಾರದು. ಅದು ಹಿಂಸೆಯ ಬೆಂಕಿಯಲ್ಲಿಯೇ ಭಸ್ಮವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT