ಜೀವದುದಯ ರಹಸ್ಯ, ಜೀವವಿಲಯ ರಹಸ್ಯ |
ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ||
ಭಾವಿಸಲಿದೇ ತತ್ತ್ವ ಬ್ರಹ್ಮಮಾಯೆಯೆ ವಿಶ್ವ |
ಕೇವಲಾತ್ಮ ಬ್ರಹ್ಮ – ಮಂಕುತಿಮ್ಮ || 919 ||
ಪದ-ಅರ್ಥ: ಜೀವದುದಯ=ಜೀವದ+ಉದಯ, ಜೀವವಿಲಯ=ಜೀವ+ವಿಲಯ(ನಾಶ), ಮರುವಿನ=ಮರಳುಗಾಡಿನ, ಬಿಸಿಲ್ಗುದುರೆ=ಮರೀಚಿಕೆ, ಭಾವಿಸಲಿದೇ=ಭಾವಿಸಲು+ಇದೇ, ಕೇವಲಾತ್ಮ=ಕೇವಲ+ಆತ್ಮ.
ವಾಚ್ಯಾರ್ಥ: ಜೀವದ ಹುಟ್ಟು, ನಾಶ ಎರಡೂ ರಹಸ್ಯಗಳೇ, ಬದುಕಿನ ದೃಶ್ಯ ಮರಳುಗಾಡಿನ ಮರೀಚಿಕೆ. ನಿಜವಾಗಿ ತಿಳಿದರೆ ಇದೇ ತತ್ವ. ವಿಶ್ವವೆನ್ನುವುದು ಬ್ರಹ್ಮನ ಮಾಯೆ, ಕೇವಲ ಆತ್ಮವೇ ಬ್ರಹ್ಮ.
ವಿವರಣೆ: ಹುಟ್ಟು, ಸಾವುಗಳೆರಡೂ ಅದ್ಭುತ ರಹಸ್ಯಗಳು. ಒಂದು ಜೀವ ಯಾಕೆ ಭೂಮಿಗೆ ಬಂದಿತು? ಏನದರ ಬಾಳಿನ ಗುರಿ? ಅದಕ್ಕೆ ಹಿಂದೊಂದು ಜನ್ಮವಿತ್ತೇ? ಇವು ಯಾವವೂ ನಮಗೆ ತಿಳಿಯವು. ಜೀವ ಭೂಮಿಗೆ ಬಂದದ್ದು ಮಾತ್ರ ಸತ್ಯ. ಅಂತೆಯೇ ಸಾವು ಖಚಿತ, ಅನಿವಾರ್ಯ ಮತ್ತು ಅನಿಶ್ಚಿತ. ಸಾವು ಯಾವಾಗ, ಯಾವ ರೂಪದಿಂದ ಬಂದೀತೆಂಬುದು ತಿಳಿಯದು. ಅದೂ ರಹಸ್ಯವೇ. ಹಾಗಾದರೆ ಹುಟ್ಟು-ಸಾವುಗಳ ನಡುವಿನ ಬದುಕು ಏನು? ಪ್ರಾಚಿನಕಾಲದಿಂದಲೂ ಹುಟ್ಟು-ಸಾವುಗಳು ಸಾಮಾನ್ಯ ಮನುಷ್ಯರನ್ನು ಚಿಂತೆಗೀಡು ಮಾಡಿದಂತೆ, ಚಿಂತನಶೀಲರನ್ನಾಗಿಯೂ ಮಾಡಿವೆ. ಭಾರತೀಯ ಅಧ್ಯಾತ್ಮಇದಕ್ಕೊಂದು ಸಮಾಧಾನವನ್ನು ಕಂಡುಕೊಂಡಿದೆ.
ಜಗತ್ತು ಎನ್ನುವುದು ಬ್ರಹ್ಮಚೈತನ್ಯದ ವಿಕಾರ. ವಿಕಾರ ಮೂಲಚೈತನ್ಯವನ್ನು ಕೆಡಿಸಲಾರದು. ಮಣ್ಣು ಮೂಲವಸ್ತು, ಮಡಕೆ ಅದರ ವಿಕಾರ. ವಿಕಾರವು ಕ್ಷಣಿಕವಾದದ್ದು ಆದರೆ ಮೂಲದ್ರವ್ಯ ಶಾಶ್ವತ. ಆದ್ದರಿಂದ ಪ್ರಪಂಚದ ವ್ಯವಹಾರ, ನಮ್ಮ ಜೀವನದ ದೃಶ್ಯಗಳೆಲ್ಲ ಮರೀಚಿಕೆ ಇದ್ದಂತೆ ಎನ್ನುತ್ತದೆ. ಕಗ್ಗ. ದಾರಿಹೋಕನಿಗೆ ದೂರದಲ್ಲೆಲ್ಲೋ ನೀರು ಹರಿದಂತೆ ಭಾಸವಾಗುತ್ತದೆ. ಹತ್ತಿರ ಹೋದರೆ ಅಲ್ಲಿ ನೀರಿಲ್ಲ. ಮತ್ತೆ ಮುಂದೆಲ್ಲೋ ನೀರು ಚಲಿಸಿದಂತೆ ತೋರುತ್ತದೆ. ಇದೇ ಬಿಸಿಲ್ಗುದರೆ-ಮರೀಚಿಕೆ. ಅದು ಬರಿಯ ತೋರಿಕೆ ಮಾತ್ರ, ಅದು ನೀರಿನತೊರೆಯಲ್ಲ. ಈ ನೀರಿನ ತೋರಿಕೆಗೆ ಮೂರು ವಿಷಯಗಳು ಕಾರಣ. ಅವುಗಳ ಸಂಮೇಳದಿಂದ ಮರೀಚಿಕೆ. ಬಿಸಿಲು, ಮರಳುನೆಲ ಮತ್ತು ದೂರ, ಇವುಗಳಸಂಗತಪ್ರಭಾವದಿಂದ ನೀರಿನ ತೊರೆಯ ತೋರಿಕೆ. ಜಗತ್ತು ಹಾಗೆಯೇ ಒಂದು ವಿಚಿತ್ರವಾದ ತೋರಿಕೆ. ಈ ತೋರಿಕೆಗೆ ಮಾಯೆ ಕಾರಣ. ಮಾಯೆಯನ್ನು ಭಗವದ್ಗೀತೆ “ಮಾಯಯಾ ಅಪಹೃತಜ್ಞಾನಾ:” ಎನ್ನುತ್ತದೆ. ಹಾಗೆಂದರೆ ಮಾಯೆ ಜನರ ತತ್ವಜ್ಞಾನದ ಸಾಮರ್ಥ್ಯವನ್ನು ಮರೆಸಿಬಿಟ್ಟಿದೆ. ಇಲ್ಲದ್ದನ್ನು ಇದ್ದಂತೆ, ಇದ್ದದ್ದನ್ನು ಇಲ್ಲದಂತೆ ತೋರಿಸುವುದೇ ಮಾಯೆ. ಕಗ್ಗ ಹೇಳುತ್ತದೆ, ಈ ಮೆರಗು ತುಂಬಿದ ಪ್ರಪಂಚ ಮಾಯೆಯ ಕಾರ್ಯ, ಆದರೆ ಮೂಲವಸ್ತು ಮಾತ್ರ ಬ್ರಹ್ಮವೇ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.