ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಾಲ್ಕು ವರಗಳು

Last Updated 13 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ |
ವಿರತಿಯೊಡವೆರೆದ ಲೋಕೋದ್ಯೋಗ ಯುಕ್ತಿ ||
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ |
ವರಗಳೀ ನಾಲ್ಕೆ ವರ – ಮಂಕುತಿಮ್ಮ || 714 ||

ಪದ-ಅರ್ಥ: ಪರಿಮಿತಿಯನರಿತಾಶೆ=ಪರಿಮಿತಿಯನು(ಮಿತಿಯನು)+ಅರಿತ+ಆಶೆ(ಆಸೆ),
ವರವಶತೆಯಳಿದ=ಪರವಶತೆ(ಮೈಮರೆಸುವ ಉತ್ಸಾಹ)+ಅಳಿದ+ಸುಖ,ವಿರತಿಯೊಡವೆರೆದ=ವಿರತಿ(ವಿರಕ್ತಿ)+ಒಡಂ+ಎರೆದ, ಪರಿಕಿಸುತ=ಪರೀಕ್ಷಿಸುತ, ಮತಿ=ಬುದ್ಧಿ.

ವಾಚ್ಯಾರ್ಥ: ಮಿತಿಯಾದ ಆಸೆ, ಮೈಮರವೆಯನ್ನು ತರದ ಸುಖ, ವಿರಕ್ತಿಯೊಂದಿಗೆ ಬೆರೆತ ಲೋಕೋದ್ಯೋಗ ಕಾರ್ಯ, ಜೀವನವನ್ನು ಗಮನಿಸುತ ಸತ್ಯವನ್ನೇ ಹಿಡಿಯುವ ಬುದ್ಧಿ. ಇವೇ ನಾಲ್ಕು ವರಗಳು.

ವಿವರಣೆ: ವರ ಎಂದರೆ ಶ್ರೇಷ್ಠವೆಂಬ ಅರ್ಥವೂ ಇದೆ. ನಾವು ಬದುಕಿನಲ್ಲಿ ಶ್ರೇಷ್ಠತೆಯನ್ನು ಅಪೇಕ್ಷಿಸಿದರೆ ಕೆಲವು ಗುರಿಗಳು ಬೇಕು. ಆ ನಾಲ್ಕು ಗುರಿಗಳನ್ನು ಕಗ್ಗ ನೀಡುತ್ತದೆ. ಆಸೆಗಳು ತಪ್ಪಲ್ಲ. ಆದರೆ ಮಿತಿಯನರಿಯದ ಆಸೆ ಅಪಾಯಕ್ಕೆ ಆಹ್ವಾನ. ಅದಕ್ಕೇ ಬುದ್ಧ, ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದ. ಮಿತಿಯಾದ ಆಸೆ ಸ್ಫೂರ್ತಿಯನ್ನುಕೊಡುತ್ತದೆ. ನಮಗೆ ಸುಖ ಬೇಕು. ಆದರೆ ಮೈಮರೆಸುವಂಥ
ಉನ್ಮಾದದ ಸುಖ ಹಾನಿಕರ. ಅದೊಂದು ಅಮಲು. ಅಹಂಕಾರವನ್ನು ತರುತ್ತದೆ. ತಮಗೆ ದಕ್ಕಿದ ಸುಖ
ಶಾಶ್ವತವೆಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಈ ಮೋಹ ಕಣ್ಣು ಕಟ್ಟಿಸುತ್ತದೆ, ಜೀವನದ ಉನ್ನತಿಗೆ
ಅಡ್ಡವಾಗುತ್ತದೆ. ಲೋಕ ಕಾರ್ಯದಲ್ಲಿ ನಾವುಭಾಗಿಯಾಗಲೇಬೇಕು.ಪ್ರಪಂಚದ ಹಿತಕ್ಕಾಗಿ ಮನಮುಟ್ಟಿ ದುಡಿಯಬೇಕು. ಅದರೊಂದಿಗೆ ವಿರಕ್ತಿಯೂ ಸೇರಿರಬೇಕು. ಅಂದರೆ ನಾನು, ನನ್ನದು ಎನ್ನುವ ಅತಿಯಾದ ಆಸಕ್ತಿ ನಮ್ಮನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತದೆ. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಪ್ರತಿಫಲವನ್ನು ಅಪೇಕ್ಷಿಸುತ್ತದೆ. ಆ ಪ್ರತಿಫಲ ಹಣ, ವಸ್ತುಗಳು, ಮರ್ಯಾದೆ, ಪದವಿ ಯಾವುದಾದರೂ ಆಗಬಹುದು. ವಿರಕ್ತಿಯೆಂದರೆ ನನ್ನ ಕೆಲಸ ಒಂದು ಪೂಜೆ ಇದ್ದಂತೆ, ಅಲ್ಲಿ ನನಗೆ ನ್ಯಾಯವಾಗಿ ದೊರಕುವುದು ಸಿಕ್ಕರೆ ಸಾಕು. ಮತ್ತೆ ವಿಶೇಷವಾದ ಯಾವುದೇ ಅಪೇಕ್ಷೆ ಇರದಿರುವುದು ಒಂದು ಮಟ್ಟದ ವಿರಕ್ತಿ. ವಿರಕ್ತಿ ಇರದೇ ಹೋದಾಗ ಸಮಾಜದ ಸಕಲ ಕಾರ್ಯವೂ ತಮ್ಮ ವೈಯಕ್ತಿಕ ಲಾಭವೆಂದೇ ಬಗೆಯುವ ಕೆಲವು ಕೆಲಸ ರಾಜಕಾರಣಿಗಳಂತಾಗುತ್ತಾರೆ. ಅವರು ಗಾಂಧೀಜಿ, ವಿನೋಬಾ, ಬಸವಣ್ಣನವರಂಥ ನಾಯಕರುಗಳಾಗುವುದಿಲ್ಲ. ಜೀವನದಲ್ಲಿ ಬದುಕಿ ಅಲ್ಲಿ ಬಂದು ಹೋಗುವ ಪ್ರತಿಯೊಂದು ಹಂತವನ್ನು ಗಮನಿಸಿ, ಯಾವುದು ಸತ್ಯವೋ ಅದನ್ನು ಮಾತ್ರ ಗುರುತಿಸಿ, ಒಪ್ಪುವ ಮನಸ್ಥಿತಿ. ಯಾವುದು ಸತ್ಯವೋ ಅದೇ ಶಾಶ್ವತವೆಂಬ ನಂಬಿಕೆ ಮುಖ್ಯ. ಕಗ್ಗದ ಈ ನಾಲ್ಕು ವರಗಳು ಮುಖ್ಯವಾದವು. ಆಸೆಯಮೇಲೆ ಹಿಡಿತ, ಕೈ ಮೀರಿ ಹೋಗದ ಸುಖಪ್ರಜ್ಞೆ, ಕರ್ತವ್ಯದಲ್ಲಿ ಸ್ವಾರ್ಥತೆಯನ್ನು ಕಾಣದ ಮನೋಧರ್ಮ ಮತ್ತು ಸದಾ, ಸರ್ವದಾ ಸತ್ಯವನ್ನೇ ಎತ್ತಿ ಹಿಡಿಯುವ ನಿರ್ಧಾರ ಇವುಗಳು ನಿಜವಾಗಿಯೂ ನಾವು ಬೇಡಬೇಕಾದ ವರಗಳು. ಈ ವರಗಳೇ ನಮ್ಮನ್ನು ಶ್ರೇಷ್ಠತೆಯೆಡೆಗೆಕರೆದೊಯ್ಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT