ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬದುಕು ತಿದ್ದಿಕೊಳ್ಳುವ ಅವಕಾಶಗಳು

Last Updated 20 ಅಕ್ಟೋಬರ್ 2020, 15:14 IST
ಅಕ್ಷರ ಗಾತ್ರ

ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು| ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು || ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು |ಬದುಕೆಂಬುದಿದು ತಾನೆ ? –

ಮಂಕುತಿಮ್ಮ || 345 ||

ಪದ-ಅರ್ಥ: ತಡವಿಕೊಂಡೇಳುವುದು=ತಡವಿಕೊಂಡು+ಏಳುವುದು, ಮತಿದಪ್ಪುವುದು=ಮತಿ(ಬುದ್ಧಿ)+ತಪ್ಪುವುದು, ತಪ್ಪನೊಪ್ಪೆನ್ನುವುದು=ತಪ್ಪನು+ಒಪ್ಪು+ಎನ್ನುವುದು. ಬದುಕೆಂಬುದಿದು=ಬದುಕು+ಎಂಬುದಿದು.

ವಾಚ್ಯರ್ಥ: ಕಾಲು ಜಾರಿ ಬೀಳುವುದು, ಸಾವರಿಸಿಕೊಂಡು ಏಳುವುದು, ಅತಿಯಾಗಿ ಕಡುಬ ತಿನ್ನುವುದು, ನಂತರ ಕಹಿ ಔಷಧಿ ಕುಡಿಯುವುದು, ಕೋಪಮಾಡಿ ತಾಳ್ಮೆ ಕಳೆದುಕೊಳ್ಳುವುದು, ತಪ್ಪನ್ನು ಸರಿಯೆಂದು ಸಾಧಿಸುವುದು, ಇದೇ ತಾನೇ ಬದುಕು?

ವಿವರಣೆ: ಬದುಕೊಂದು ಹಾವು - ಏಣಿಯಾಟವಿದ್ದಂತೆ. ಅದು ನಮ್ಮನ್ನು ಯಾವಾಗ ಮೇಲಕ್ಕೆ ಏರಿಸುತ್ತದೆ, ಯಾವಾಗ ಕೆಳಗೆ ತಳ್ಳುತ್ತದೆ ಎಂಬುದನ್ನು ಹೇಳುವುದು ಕಷ್ಟ. ಆದರೆ ಈ ಮೇಲು-ಕೆಳಗಿನ ಓಡಾಟಕ್ಕೆ ನಾವೇ ಕಾರಣರು ಎಂಬುದನ್ನು ಮರೆಯುತ್ತೇವೆ.

ಒಂದೊಂದು ಬಾರಿ ತಿಳಿದೋ, ತಿಳಿಯದೆಯೋ ತಪ್ಪು ಮಾಡಿ ಜಾರಿ ಬೀಳುತ್ತೇವೆ. ಕೆಲವರು ಬುದ್ಧಿವಂತರು ತಮ್ಮ ತಪ್ಪನ್ನು ಸರಿಪಡಿಸಿಕೊಂಡು, ತಿಳಿವಿನಿಂದ ಮೇಲಕ್ಕೇರುತ್ತಾರೆ. ಮತ್ತೆ ಕೆಲವರು ಅತಿಯಾಸೆಯಿಂದ, ತಮ್ಮ ಶಕ್ತಿಯ ಅಳತೆಯನ್ನು ತಿಳಿಯದೆ ಕೈಗೆ ನಿಲುಕದ್ದಕ್ಕೆ ಹಾತೊರೆಯುತ್ತಾರೆ. ಅದು ದೊರೆಯದಾಗ ದು:ಖವೆಂಬ ಕಹಿ ಮದ್ದನ್ನು ಕುಡಿಯುತ್ತಾರೆ. ಒಂದು ಕ್ಷಣದ ಕೋಪಕ್ಕೆ ಮನತೆತ್ತು ತಪ್ಪು ಮಾಡಿ ಬದುಕೆಲ್ಲ ನರಳಿದವರನ್ನು ಕಂಡಿದ್ದೇವೆ. ಇದರೊಂದಿಗೆ ತಾವು ಮಾಡಿದ ತಪ್ಪುಗಳನ್ನು ಸರಿಯೆಂದು ವಾದ ಮಾಡುತ್ತ, ಉಳಿದವರು ಮಾಡಿದ ಸರಿಯನ್ನು ತಪ್ಪೆಂದು ವಾದವಾಡುವ ರಾಜಕೀಯದ ವ್ಯಕ್ತಿಗಳನ್ನು ಕಂಡಿದ್ದೇವೆ. ತಾವು ಮಾಡಿದ ತಪ್ಪುಗಳೆಲ್ಲ ಸರಿಯೇ, ಅವು ಸಮಾಜದ ಒಳಿತಿಗಾಗಿಯೇ ಎಂದು ಹೇಳುತ್ತ, ಅದೇ ತಪ್ಪನ್ನು ಎದುರಾಳಿಗಳು ಮಾಡಿದಾಗ ಅಪರಾಧವೆಂದು ಬಿಂಬಿಸುವ ಬಾಯಿಬಡಾಯಿತನ ನಮಗೆ ಹೊಸದಲ್ಲ. ಹಾಗಾದರೆ ಬದುಕು ಎಂದರೆ ಇದೇನೇ? ಇಷ್ಟೇನೇ?

ಈ ಕಗ್ಗ ಬದುಕು ಇಷ್ಟೇ ಎಂದು ವ್ಯಾಖ್ಯಾನ ಮಾಡುತ್ತಿಲ್ಲ, ಬದಲಾಗಿ ನಮ್ಮನ್ನು ಕೆಣಕಿ ಪ್ರಶ್ನೆ ಕೇಳುತ್ತಿದೆ! ನಾವು ಕೆಲವೊಮ್ಮೆ ತಪ್ಪು ಮಾಡಿ ಜಾರುತ್ತೇವೆ, ಅತಿಯಾಸೆ ತೋರಿ ತೊಂದರೆ ಪಡುತ್ತೇವೆ, ದುಡುಕುತ್ತೇವೆ, ಅದಕ್ಕೆ ಕಷ್ಟವನ್ನೂ ಅನುಭವಿಸುತ್ತೇವೆ, ತಪ್ಪುಗಳನ್ನು ಸಾಧಿಸಹೊರಡುತ್ತೇವೆ. ಆದರೆ ಇವೆಲ್ಲ ಘಟನೆಗಳು ಮಾತ್ರ.

ಒಂದು ಪ್ರಸಂಗದಲ್ಲಿ, ಪ್ರಯತ್ನದಲ್ಲಿ ನಮ್ಮಿಂದ ತಪ್ಪಾಗಬಹುದು. ಅದೇನೂ ಸೋಲಲ್ಲ. ಅದು
ಪ್ರಯತ್ನದಲ್ಲಿ ಸೋಲು, ಜೀವನದಲ್ಲಲ್ಲ. ಬದುಕಿನಲ್ಲಿ ಲಕ್ಷಾಂತರ ಘಟನೆಗಳು ಜರಗುತ್ತವೆ. ಅವುಗಳಲ್ಲಿ ಕೆಲವು ಸಂದರ್ಭದಲ್ಲಿ ನಮ್ಮ ತೂಕ ತಪ್ಪಿರಬಹುದು. ಅದನ್ನು ಸರಿಯಾದ ಸಮಯದಲ್ಲಿ ತಿದ್ದಿಕೊಂಡು ಬದುಕಿನ ದಾರಿಯನ್ನು ಸರಿಮಾಡಿಕೊಂಡರೆ ಅದು ಯಶೋಗಾಥೆÉಯಾಗುತ್ತದೆ.

ಅಬ್ರಾಹಂ ಲಿಂಕನ್ ಜೀವನ ಸೋಲಿನ ಸರಮಾಲೆ. ಆದರೆ ತಿದ್ದಿಕೊಳ್ಳುತ್ತ ಹೋದಂತೆ ಒಬ್ಬ ಅತ್ಯಂತ ಸಮರ್ಥ, ಜನಪ್ರಿಯ ಅಧ್ಯಕ್ಷರ ಅನಾವರಣ
ವಾಯಿತು.

ವಿಶ್ವಾಮಿತ್ರ ಆಗಾಗ ಸೋತರೂ ಕೊನೆಗೆ ಬ್ರಹ್ಮರ್ಷಿಯಾಗಿಯೇ ಮೆರೆದರು, ಧರ್ಮರಾಯ ಕೂಡ ಸ್ಥಿಮಿತ ಕಳೆದು ಜೂಜಾಡಿದ, ಆದರೆ ಅದರಲ್ಲೇ
ಕಳೆದುಹೋಗಲಿಲ್ಲ. ಇಂದ್ರನಿಂದಲೂ ತಪ್ಪುಗಳಾದವು. ಶ್ರೀರಾಮ ಕೂಡ ಕೆಲವೊಮ್ಮೆ ಮನದ ಸ್ಥಿರತೆಯನ್ನು ಕಳೆದುಕೊಂಡು ತಾಯಿ ಕೈಕೇಯಿಯನ್ನು ತೆಗಳಿದ. ಆದರೆ ಅದೇ ಸ್ಥಾಯೀಭಾವವಾಗಲಿಲ್ಲ.

ಬದುಕು ತುಂಬ ವಿಶಾಲವಾದದ್ದು. ಅಲ್ಲಿ ತಪ್ಪುಗಳಾದರೂ ತಿದ್ದಿಕೊಳ್ಳಲು ಅನೇಕ ಅವಕಾಶಗಳನ್ನು ಕೊಡುತ್ತದೆ. ತಿದ್ದಿಕೊಂಡವರು ಬದುಕನ್ನು ಶ್ರೀಮಂತಗೊಳಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT