ಭಾನುವಾರ, ಆಗಸ್ಟ್ 14, 2022
25 °C

ಬೆರಗಿನ ಬೆಳಕು: ಗಡೀಪಾರಿನ ಹೆದರಿಕೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹೀಗೆ ದೇಶವಾಸಿಗಳೆಲ್ಲ ಎಚ್ಚರ ನೀಡಿದ ಮೇಲೆ ರಾಜ ಅವರನ್ನು ಬೇಡಿಕೊಂಡ, ‘ನನ್ನ ಮಗ ವೆಸ್ಸಂತರ ಸಾಮಾನ್ಯನಲ್ಲ. ಹುಟ್ಟಿದಾಕ್ಷಣವೇ ದಾನ ಮಾಡಿದವ. ಅವನು ದೇವತೆಯರ ಅಂಶವಂತೆ. ಅಂಥ ಮಗನನ್ನು ಹೇಗೆ ಶಿಕ್ಷಿಸಲಿ? ಅವನನ್ನು ಕೊಲ್ಲುವುದು ನನ್ನಿಂದ ಆಗದ ಮಾತು’. ಆಗ ನಾಗರಿಕರ ನಾಯಕರು, ‘ರಾಜಾ, ನಿನ್ನ ಕಷ್ಟ ನಮಗೆ ಅರ್ಥವಾಗುತ್ತದೆ. ಅವನಿಗೆ ಶಿಕ್ಷೆ ಕೊಡಲು, ಆಯುಧದಿಂದ ಕೊಲ್ಲಿಸಲು, ಸೆರೆಮನೆಯಲ್ಲಿ ಹಾಕಲು ಕಷ್ಟವೆನ್ನಿಸಿದರೆ ಅವನನ್ನು ದೇಶದಿಂದ ಹೊರಗೆ ಹಾಕಿಬಿಡು. ಆತ ಎಲ್ಲಿಯಾದರೂ ಪರ್ವತಗಳ ಕೊರಕುಗಳಲ್ಲಿ ಬದುಕಿಕೊಳ್ಳಲಿ. ಅವನು ದೇವಾಂಶನೇ ಆಗಿದ್ದರೆ ದೇವತೆಗಳು ಅವನನ್ನು ಕಾಪಾಡುತ್ತಾರೆ’ ಎಂದು ವಾದ ಮಾಡಿದರು. ಅಸಹಾಯಕನಾದ ರಾಜ ಹೇಳಿದ, ‘ಇದು ಸಿವಿ ರಾಜ್ಯದ ಎಲ್ಲ ಹಿರಿಯರ ಅಭಿಪ್ರಾಯವಾಗಿದ್ದರೆ ಹಾಗೆಯೇ ಆಗಲಿ. ಅವನನ್ನು ದೇಶಭ್ರಷ್ಟನನ್ನಾಗಿ ಮಾಡುತ್ತೇನೆ. ಆದರೆ ನನ್ನದು ಒಂದು ವಿನಂತಿ. ಇದೊಂದು ರಾತ್ರಿ ಅವನನ್ನು ನಿರಾಳವಾಗಿ ಬದುಕಲು ಬಿಡಿ. ಅವನು ರಾಜಕುಮಾರನಂತೆಯೇ ಸಂತೋಷವಾಗಿರಲಿ. ನಾಳೆ ಸೂರ್ಯೋದಯದ ನಂತರ ನೀವೆಲ್ಲ ಒಂದಾಗಿ ಅವನನ್ನು ಸಿವಿರಾಷ್ಟ್ರದಿಂದ ಹೊರಗೆ ಹಾಕಿಬಿಡಿ’. ಒಂದು ದಿನ ರಾತ್ರಿ ತಾನೇ? ಆಗಲಿ ಎಂದು ಜನ ಒಪ್ಪಿ ನಡೆದರು.

ಅವರು ಹೋದ ಮೇಲೆ ರಾಜ ವಿಶೇಷ ದೂತನನ್ನು ಕರೆದು ವೆಸ್ಸಂತರನಿಗೆ ಒಂದು ಸಂದೇಶವನ್ನು ಕಳುಹಿಸಿದ. ಆತ ವೆಸ್ಸಂತರನ ಅರಮನೆಗೆ ಬಂದ. ಆಗ ವೆಸ್ಸಂತರ ತಲೆಗೆ ಸ್ನಾನ ಮಾಡಿ, ಒಳ್ಳೆಯ ಬಟ್ಟೆ ಧರಿಸಿ, ಶ್ರೀಗಂಧವನ್ನು ಪೂಸಿಕೊಂಡಿದ್ದ. ಅವನ ಮೈಮೇಲೆ ಅನೇಕ ಆಭರಣಗಳು. ಅವನ ಸುತ್ತ ಮಂತ್ರಿಗಳು, ಸಲಹೆಗಾರರು ಕುಳಿತಿದ್ದನ್ನು ಕಂಡ ದೂತನಿಗೆ ಆತ ದೇವತೆಗಳಿಂದ ಸುತ್ತುವರೆದ ಇಂದ್ರನಂತೆ ಕಂಡ. ಸುತ್ತಲಿರುವವರನ್ನೆಲ್ಲ ಹೊರಗೆ ಕಳುಹಿಸಿದ ಮೇಲೆ ರಾಜ ಕಳುಹಿಸಿದ ಸಂದೇಶವನ್ನು ಹೇಳಿದ. ‘ರಾಜಕುಮಾರ, ನೀನು ಮಾಂಗಲೀಕ ಆನೆಯನ್ನು ದಾನ ಮಾಡಿದ್ದಕ್ಕೆ ಸಿವಿದೇಶದ ಪ್ರಜೆಗಳು ನಿನ್ನ ಮೇಲೆ ವಿಪರೀತ ಸಿಟ್ಟುಮಾಡಿಕೊಂಡಿದ್ದಾರೆ. ದೇಶದ ಎಲ್ಲ ಸ್ತರದ ಜನರೂ ಸೇರಿದ್ದಾರೆ. ಈ ರಾತ್ರಿ ಕಳೆದ ಮೇಲೆ, ಸೂರ್ಯೋದಯವಾಗುತ್ತಿದ್ದಂತೆಯೇ ಅವರೆಲ್ಲ ಅರಮನೆಗೆ ಬಂದು ನಿನ್ನನ್ನು ದೇಶದಿಂದ ಹೊರಗೆ ಹಾಕುತ್ತಾರೆ. ಇದು ತುಂಬ ದುಃಖದ ಸಂಗತಿ. ಆದರೆ ನಾನು ಏನೂ ಮಾಡಲಾರದವನಾಗಿದ್ದೇನೆ, ಎಚ್ಚರ’. ವೆಸ್ಸಂತರ ಕೇಳಿದ, ‘ಬರೀ ಆನೆಯನ್ನು ದಾನ ಮಾಡಿದ್ದಕ್ಕೆ ಇಷ್ಟು ಕೋಪ ಏಕೆ ಜನರಿಗೆ? ದೇಶದಿಂದ ಹೊರಗೆ ಹಾಕುವಂಥ ಅಪರಾದ ಇದಲ್ಲವಲ್ಲ? ಅದಲ್ಲದೆ ನಾನು ಬಾಲ್ಯದಲ್ಲಿಯೇ ಮಹಾಪ್ರತಿಜ್ಞೆ ಮಾಡಿಬಿಟ್ಟಿದ್ದೇನೆ. ಚಿನ್ನ, ಮುತ್ತು, ಮಾಣಿಕ್ಯ ಮುಂತಾದ ಬಾಹ್ಯವಸ್ತುಗಳು ಮಾತ್ರವಲ್ಲ ನನ್ನ ಹೃದಯ, ಕಣ್ಣು, ದೇಹವನ್ನೇ ದಾನವಾಗಿ ಕೊಡಬಲ್ಲೆ. ನಾನು ಅದಕ್ಕೆ ಹೆದರಲಾರೆ. ನನ್ನನ್ನು ಜನ ದೇಶದಿಂದ ಹೊರಗೆ ಹಾಕಲಿ ಅಥವಾ ದೇಹವನ್ನು ತುಂಡುತುಂಡು ಮಾಡಲಿ, ನಾನು ದಾನ ಮಾಡುವುದನ್ನು ಮಾತ್ರ ನಿಲ್ಲಿಸಲಾರೆ. ನಾಳೆ ಬೆಳಿಗ್ಗೆ ಜನ ಬರಲಿ. ಅವರಿಗೆ ಸರಿಯಾದ ಉತ್ತರವನ್ನು ನೀಡಿ, ದೇಶದಿಂದ ಹೊರಗೆ ನಡೆಯುತ್ತೇನೆ. ದಯವಿಟ್ಟು ರಾಜರು ಚಿಂತೆ ಮಾಡುವುದು ಬೇಡ’ ಹೀಗೆ ಹೇಳುವಾಗಲೂ ವೆಸ್ಸಂತರ ನಿರಾಳವಾಗಿಯೇ ಇದ್ದ.⇒v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.