ಶನಿವಾರ, ಆಗಸ್ಟ್ 20, 2022
21 °C

ಬೆರಗಿನ ಬೆಳಕು: ವಿಧಿಯೆಂಬ ಬಿರುಗಾಳಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |
ತೇಲುತ್ತೆ ಭಯವ ಕಾಣದೆ ಸಾಗುತಿರಲು ||
ಗಾಳಿಯಾವಗವೊ ಬಂದೆತ್ತಣಿನೊ ಬೀಸುತ್ತ |
ಮೇಲಕೀಳಾಗಿಪುದು – ಮಂಕುತಿಮ್ಮ | 362 ||

ಪದ-ಅರ್ಥ: ಗಾಳಿಯಾವಗವೊ=
ಗಾಳಿ+ಯಾವಗವೊ(ಯಾವಾಗಲೋ)+
ಬಂದೆತ್ತಣಿನೊ=ಬಂದು+ಎತ್ತಣಿನೊ
(ಎಲ್ಲಿಂದಲೋ)

ವಾಚ್ಯಾರ್ಥ: ಕಾಲನೆಂಬ ನದಿಯಲ್ಲಿ ನಮ್ಮ ಬದುಕಿನ ದೋಣಿಯು ಯಾವ ಚಿಂತೆಯಿಲ್ಲದೆ ತೇಲುತ್ತ ಸಾಗುತ್ತಿರುವಾಗ, ಯಾವಾಗಲೋ, ಎತ್ತಲಿಂದಲೋ ಗಾಳಿ ಬೀಸಿ ಎಲ್ಲವನ್ನು ಬದಲಾಯಿಸಿಬಿಡುತ್ತದೆ.

ವಿವರಣೆ: ಆಕೆಯನ್ನು ಮೊದಲು ಭೇಟಿಯಾದಾಗ ನನಗೆ ಅವಳ ವ್ಯಕ್ತಿತ್ವ ತುಂಬ ಇಷ್ಟವಾಗಿತ್ತು. ಆಕೆ ಇಂಗ್ಲೀಷಿನಲ್ಲಿ ಎಂ.ಎ ಮಾಡಿಕೊಂಡಿದ್ದಳು. ಆಕೆ ಅಪರೂಪದ ಸುಂದರಿ. ಅವಳ ಸೌಂದರ್ಯಕ್ಕೆ ಮರುಳಾಗಿಯೇ ಆತ ಆಕೆಯನ್ನು ಮದುವೆಯಾಗಿದ್ದ. ಆತನೂ ತುಂಬ ಬುದ್ಧಿವಂತ. ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಿಂದ ಎಂ.ಬಿ.ಎ ಮಾಡಿ ಬಹುರಾಷ್ಟ್ರೀಯ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ. ಸಮಾಜದಲ್ಲಿ ಗೌರವ, ಕೈತುಂಬ ಸಂಬಳ, ಅನುರೂಪಳಾದ ಪತ್ನಿ, ಮತ್ತೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು? ಗಂಡ ಕೆಲಸದ ಮೇಲೆ ಇಂಗ್ಲೆಂಡಿಗೆ ಹೋದಾಗ ಆಕೆಯೂ ಅವನೊಂದಿಗೆ ಹೋಗಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಿಂದ ವಿಶೇಷ ತರಬೇತಿಯನ್ನು ಪಡೆದಿದ್ದಳು. ನಾನು ಆಕೆಯನ್ನು ಕೇಳಿದ್ದೆ, ‘ನೀವು ಅಷ್ಟು ಕಲಿತಿದ್ದೀರಿ, ಯಾವುದೋ ಶಾಲೆಯಲ್ಲೋ, ಕಾಲೇಜಿನಲ್ಲೋ ಶಿಕ್ಷಕಿಯಾಗಿ ಕೆಲಸ ಮಾಡಬಾರದೆ?’ ಆಕೆ ನಕ್ಕು ಹೇಳಿದಳು, ‘ನನಗೆ ಕೆಲಸವೇಕೆ ಬೇಕು? ನನ್ನ ಗಂಡನ ಸಂಬಳವೇ ಸಾಕಷ್ಟಿದೆ. ಪಾಪ! ಯಾರಿಗೆ ಅವಶ್ಯವಿದೆಯೋ ಅವರಿಗೆ ದೊರಕಲಿ’. ಆಕೆಯ ಧ್ವನಿಯಲ್ಲಿ ಅತೀವ ಆತ್ಮವಿಶ್ವಾಸ. ಒಂದು ವರ್ಷ ಕಳೆಯಿತು. ಒಂದು ದಿನ ಆಕೆ ನನ್ನ ಬಳಿಗೆ ಬಂದರು. ಗುರುತೇ ಹತ್ತದಂತಾಗಿದ್ದಾರೆ. ಮುಖದ ಮೇಲೆ ಕಳೆಯೇ ಇಲ್ಲ. ಕಣ್ಣುಗಳಲ್ಲಿ ದುಃಖ ಮಡುಗಟ್ಟಿದೆ. ‘ಹೇಗಿದ್ದೀರಿ?’ ಎಂದು ಕೇಳಿದಾಗ ಆಕೆ ಬಿಕ್ಕಿದಳು. ಎಲ್ಲವೂ ಸೊಗಸಾಗಿದ್ದ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಆರೋಗ್ಯವಾಗಿದ್ದ ಗಂಡ ಹಠಾತ್ತನೆ ಹೃದಯಾಘಾತವಾಗಿ ತೀರಿದ್ದ. ಅವರದು ಅಂತರ್ಜಾತೀಯ ವಿವಾಹವಾದ್ದರಿಂದ ಎರಡು ಪರಿವಾರದವರೂ ಅವರನ್ನು ಹತ್ತಿರಕ್ಕೆ ಸೇರಿಸಿಲ್ಲ. ಈಗ ಆಕೆ ಒಬ್ಬಳೇ ಬದುಕು ಸಾಗಿಸಬೇಕು. ಆಕೆ ನನ್ನನ್ನು ಮೆತ್ತಗೆ ಕೇಳಿದಳು, ‘ಸರ್, ನನಗೆ ಯಾವುದಾದರೂ ಶಿಕ್ಷಕಿಯ ಕೆಲಸ ಸಿಗಬಹುದೆ? ಹಿಂದೆ ನನಗದರ ಅವಶ್ಯಕತೆ ಕಂಡಿರಲಿಲ್ಲ. ಇಂದು ಅದೇ ನನ್ನ ಬದುಕಿಗೆ ಆಧಾರ’. ಒಮ್ಮೆ ಅನಾವಶ್ಯಕವಾಗಿದ್ದು ಈಗ ಅನಿವಾರ್ಯವಾಗಿದೆ. ಆಕೆಗೆ ಕೆಲಸ ದೊರಕಿತು.

ಒಂದು ವರ್ಷದ ಹಿಂದೆ ಅತ್ಯಂತ ಸಂಭ್ರಮ, ಸಂತೋಷಗಳಿಂದ ನಡೆಯುತ್ತಿದ್ದ ಸಂಸಾರಕ್ಕೆ ಹೀಗೊಂದು ಸುನಾಮಿ ಬಂದೀತೆಂಬ ಸುಳಿವೂ ಇರಲಿಲ್ಲ. ಇದು ಆಕೆಯೊಬ್ಬಳ ಕಥೆಯಲ್ಲ. ಸಾವಿರಾರು ಪರಿವಾರಗಳ ಕಥೆ. ಕಗ್ಗ ಅದನ್ನೇ ತಿಳಿಸಿ ಹೇಳುತ್ತದೆ. ಯಾವ ಭಯವೂ ಇಲ್ಲವೆಂದು ಬದುಕಿನಲ್ಲಿ, ಸಂತೋಷವಾಗಿ ಸಾಗುವ ಬದುಕಿಗೆ ಮುಂಬರುವ ಬಿರುಗಾಳಿಯ ಆಗಮನದ ಸುಳಿವೇ ಇರುವುದಿಲ್ಲ. ಆದರೆ ಆ ಬಿರುಗಾಳಿ ಎಲ್ಲಿಂದ ಬಂದೀತೋ, ಹೇಗೆ ಬಂದೀತೋ ತಿಳಿಯಲಾರದು. ಬಂದದ್ದೇ ಎಲ್ಲ ಪರಿಸ್ಥಿತಿಯನ್ನು ತಲೆಕೆಳಗು ಮಾಡಿ ಹಾಕೀತು. ಆಗ ಮನುಷ್ಯ ತುಂಬ ಅಸಹಾಯಕನಾಗುತ್ತಾನೆ. ಅದನ್ನೇ ವಿಧಿ, ದೈವ ಎಂದು ಒಪ್ಪಿ ಶರಣಾಗುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.