ಗುರುವಾರ , ಮೇ 26, 2022
22 °C

ಬೆರಗಿನ ಬೆಳಕು: ಲೋಕನಾಟಕ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕೈಕೇಯಿವೊಲು ಮಾತೆ, ಸತ್ಯಭಾಮೆವೊಲು ಸತಿ |
ಸಾಕಿ ಸಂತಸವೆರೆಯೆ ಸಂಸಾರ ಲೀಲೆ ||
ಬೇಕು ಮತ್ಸರ ಮಮತೆ ಮೋಹಂಗಳಾವೇಶ |
ಲೋಕನಾಟಕಕಾಗಿ – ಮಂಕುತಿಮ್ಮ || 608 ||

ಪದ-ಅರ್ಥ: ಕೈಕೇಯಿವೊಲು=ಕೈಕೇಯಿಯ ಹಾಗೆ, ಸಂತಸವೆರೆಯೆ=ಸಂತಸವ+ಎರೆಯೆ, ಮೋಹಂಗಳಾವೇಶ=ಮೋಹಂಗಳ(ಮೋಹಗಳ)+ಆವೇಶ,

ವಾಚ್ಯಾರ್ಥ: ಕೈಕೇಯಿಯಂತಹ ತಾಯಿ, ಸತ್ಯಭಾಮೆಯಂತಹ ಹೆಂಡತಿ ಸಂತೋಷ ನೀಡಿ ಸಾಕುವುದೆ ಸಂಸಾರಲೀಲೆ. ಇದಕ್ಕೆ ಮತ್ಸರ, ಮಮತೆ, ಮೋಹಗಳ ಆವೇಶ ಬೇಕು. ಇದೆಲ್ಲ ಬೇಕಾಗುವುದು ಲೋಕನಾಟಕಕ್ಕೆ.

ವಿವರಣೆ: ನ್ಯಾಶನಲ್ ಜಿಯೋಗ್ರಾಫಿಕ್ಸ್ ಒಂದು ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಒಂದು ಕಾಡುಕೋಣ, ಕಾಡೆಮ್ಮೆ ಮತ್ತು ಒಂದು ಕರು ಕಾಡಿನಲ್ಲಿ ಮೇಯುತ್ತಿವೆ. ದೂರದಲ್ಲಿ ಅವಿತು ಕುಳಿತ ಆರು ಸಿಂಹಗಳು ಇವುಗಳನ್ನು ಗಮನಿಸುತ್ತ, ಹತ್ತಿರಕ್ಕೆ ಬಂದಾಗ ಹಾರಿ, ಬೆನ್ನತ್ತಿ, ಕರುವನ್ನು ಹಿಡಿಯುತ್ತವೆ. ಕರು ಕೆರೆಯಲ್ಲಿ ನೀರಲ್ಲಿ ಬೀಳುತ್ತದೆ. ಒಂದು ಸಿಂಹ ಅದನ್ನು ಹಲ್ಲಿನಿಂದ ಕಚ್ಚಿ ಎಳೆದರೆ, ಇನ್ನೊಂದೆಡೆಗೆ, ಮೊಸಳೆಯೊಂದು ಅದನ್ನು ಸೆಳೆಯುತ್ತದೆ. ಕೊನೆಗೆ ಆರೂ ಸಿಂಹಗಳು ಸೇರಿ ಅದನ್ನು ದಂಡೆಗೆ ಎಳೆದು ಕರುವಿನ ಮೇಲೆ ದಾಳಿ ಮಾಡಲು ಬರುತ್ತವೆ. ಆಗ ಕಾಡೆಮ್ಮೆ ತನ್ನ ಪರಿವಾರದ ಹತ್ತಿಪ್ಪತ್ತು ಎಮ್ಮೆ ಕೋಣಗಳನ್ನು ಕರೆತಂದು ಸಿಂಹಗಳನ್ನು ಮುತ್ತುತ್ತದೆ. ಹೇಗಾದರೂ ತನ್ನ ಮಗುವನ್ನು ಉಳಿಸಿಕೊಳ್ಳಬೇಕೆಂಬ ಹಾತೊರೆತ ಕಾಡೆಮ್ಮೆಗೆ. ತನ್ನ ಜೀವದ ಹಂಗನ್ನು ತೊರೆದು ಮುನ್ನುಗ್ಗಿ ತನ್ನ ಕರುವಿನ ಮೇಲೆ ಎರಗ ಬಯಸುವ ಸಿಂಹದ ಹೊಟ್ಟೆಗೆ ತನ್ನ ಕೊಂಬನ್ನು ತೂರಿಸಿ ಗಾಳಿಗೆ ಹಾರಿಸಿಬಿಡುತ್ತದೆ. ಕೊನೆಗೆ ತನ್ನ ಮಗುವನ್ನು ಬಿಡಿಸಿಕೊಂಡು ಹೋಗುತ್ತದೆ. ಇದು ತಾಯಿಯ ಪ್ರೀತಿ.

ಕೈಕೇಯಿಯದೂ ಅಂತಹದೇ ಪ್ರೀತಿಯಲ್ಲವೆ, ತನ್ನ ಮಗ ಭರತನ ಬಗ್ಗೆ? ಆಕೆಗೆ ರಾಮನ ಬಗ್ಗೆ ಕೋಪವಿಲ್ಲ, ಆದರೆ ತನ್ನ ಮಗ ಭರತನಿಗೆ ಒಳ್ಳೆಯದಾಗಬೇಕು, ಅವನು ರಾಜನಾಗಬೇಕು ಎಂಬ ಬಲವತ್ತರವಾದ ಅಪೇಕ್ಷೆ. ಅದು ತಪ್ಪಲ್ಲ. ಸತ್ಯಭಾಮೆಯ ಪ್ರೇಮ ಉತ್ಕಟವಾದದ್ದು. ಕೃಷ್ಣನ ಸಂಪೂರ್ಣವಾದ ಪ್ರೀತಿ ತನಗೇ ದಕ್ಕಬೇಕೆಂಬ ಅಪೇಕ್ಷೆ. ಅದಕ್ಕೆ ಉಳಿದವರೊಡನೆ ಅಸಹನೆ, ಮೋಹದ ಆವೇಶ ಕಂಡಿತು. ಬೇರೆಯವರಿಗೆ ಅದು ಮತ್ಸರವಾಗಿ ತೋರಿತು.

ನಮ್ಮ ಇಂದಿನ ಬದುಕಿನಲ್ಲೂ ಅದೇ ತಾಯಿಯ ಪ್ರೇಮ, ಹೆಂಡತಿಯ ಮೋಹದಾಪೇಕ್ಷೆಗಳು ಇದ್ದೇ ಇವೆ. ಅವು ಇರಲೇಬೇಕು. ಅತ್ತೆ-ಸೊಸೆಯರ ನಡುವಿನ ತಕರಾರಿಗೆ ಮುಖ್ಯ ಕಾರಣವೇ ಇವು. ಇಪ್ಪತ್ತೈದು ವರ್ಷಗಳ ಮಗನಾಗಿ, ‘ಅಮ್ಮ ಅದನ್ನು ಮಾಡಲೇ, ಇದನ್ನು ಕೊಳ್ಳಲೇ?’ ಎಂದು ಕೇಳುತ್ತ ಅಮ್ಮನ ಹಿಂದೆಯೇ ಓಡಾಡುತ್ತಿದ್ದ ಹುಡುಗ, ಮದುವೆಯಾದ ಮೇಲೆ ಹೆಂಡತಿಯ ಸೆರಗು ಹಿಡಿದುಕೊಂಡು ಆಕೆ ಹೇಳಿದಂತೆ ಕೇಳಿದಾಗ ಅಮ್ಮನಿಗೆ ಆಘಾತ. ಆಕೆಗೆ ಈಗ ಸೊಸೆಯ ಮೇಲೆ ಮತ್ಸರ. ತನ್ನದಾದದ್ದನ್ನು ಸೆಳೆದುಕೊಂಡು ಹೋದಳಲ್ಲ ಈ ಮಾಯಾವಿ ಎಂದು ಕೋಪ. ಗಂಡ ಪೂರಾ ತನ್ನವನಾಗಬೇಕು, ಮಗುವಿನ ತರಹ ಬರೀ ಅಮ್ಮನ ಸುತ್ತ ತಿರುಗಬಾರದು ಎಂದು ಹೆಂಡತಿ ಅನನ್ಯವಾದ ಮೋಹದ ಬಾಣವನ್ನು ಬಿಡುತ್ತಾಳೆ. ಇಬ್ಬರೂ, ಅವರವರ ದೃಷ್ಟಿಯಿಂದ ಸರಿ, ಇದೇ ತಾನೇ ಸಂಸಾರ ನಾಟಕ?

ಕಗ್ಗ ಇದನ್ನು ಕೊನೆಯ ಸಾಲಿನಲ್ಲಿ ಅಧ್ಯಾತ್ಮಕ್ಕೇರಿಸಿ ಬಿಡುತ್ತದೆ. ಇದು ಕೇವಲ ಒಂದು ಮನೆಯಲ್ಲಿ ನಡೆಯುವ ನಾಟಕವಲ್ಲ, ಇದು ಲೋಕನಾಟಕ. ಇಡೀ ಪ್ರಪಂಚದಲ್ಲಿ ಎಲ್ಲರೂ ತ್ಯಾಗಿಗಳೇ ಆಗಿದ್ದರೆ, ಎಲ್ಲರೂ ಮೋಹರಹಿತರಾಗಿದ್ದರೆ ಪ್ರಪಂಚ ಸುಂದರವಾದ ನಾಟಕವಾಗುತ್ತಿತ್ತು? ಬ್ರಹ್ಮನ ಲೀಲೆ ಆಕರ್ಷಕವಾಗುತ್ತಿತ್ತೇ? ಈ ಲೋಕನಾಟಕ ಆಕರ್ಷಕವಾಗಲು ಮೋಹ, ಮತ್ಸರ, ಮಮತೆಗಳು ಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.