ಬುಧವಾರ, ಜನವರಿ 29, 2020
30 °C

ಶರೀರದ ಮೋಹ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಹತ್ತಿರದ ಹಳ್ಳಿಯೊಂದರಲ್ಲಿ ಬ್ರಾಹ್ಮಣನಾಗಿ ಹುಟ್ಟಿದರೂ ಕೃಷಿಯನ್ನು ಮಾಡುತ್ತ ಬದುಕಿದ್ದ. ಅವನಿಗೊಬ್ಬ ಮಗ ಮತ್ತು ಮಗಳು ಹುಟ್ಟಿದ್ದರು. ಮಗ ದೊಡ್ಡವನಾದ ಮೇಲೆ ಅವನಿಗೆ ಮದುವೆ ಮಾಡಿದ್ದ. ಮನೆಯಲ್ಲಿ ಬೋಧಿಸತ್ವ, ಹೆಂಡತಿ, ಮಗ, ಸೊಸೆ, ಮಗಳು ಮತ್ತು ದಾಸಿ ಎಲ್ಲರೂ ಸೇರಿ ಏಕಚಿತ್ತದಿಂದ ಕೃಷಿಯನ್ನು ಮಾಡುತ್ತಿದ್ದರು. ಅವರಲ್ಲಿ ಯಾವ ಭಿನ್ನಾಭಿಪ್ರಾಯವೂ ಇರಲಿಲ್ಲ. ಬೋಧಿಸತ್ವ ಸಮಯ ಸಿಕ್ಕಾಗಲೆಲ್ಲ ಅವರೊಂದಿಗೆ ದೇಹದ ಅನಿತ್ಯತೆಯನ್ನು ಕುರಿತು ಮಾತನಾಡುತ್ತಿದ್ದ. ಶರೀರ ಎಂದಿಗೂ ಶಾಶ್ವತವಲ್ಲ. ಯಾವುದು ಶಾಶ್ವತವಲ್ಲವೋ ಅದರ ಬಗ್ಗೆ ಮೋಹ ಬೇಡ. ಅದು ಹೋದರೆ ದುಃಖವೂ ಬೇಡ. ಯಾಕೆಂದರೆ ಹೋಗುವುದಕ್ಕೆಂದೇ ಬಂದ ದೇಹ ಹೋದರೆ ದುಃಖವೇಕೆ? ಮನೆಯವರೆಲ್ಲ ಆ ಮಾತುಗಳನ್ನು ಮನನ ಮಾಡಿದ್ದರು.

ಒಂದು ದಿನ ತಂದೆ ಮತ್ತು ಮಗ ಹೊಲದಲ್ಲಿ ಕೆಲಸ ಮಾಡುವಾಗ ಮಗ ಆರಿಸಿದ ಕಸವನ್ನೆಲ್ಲ ಸೇರಿಸಿ ಬೆಂಕಿ ಹಾಕಿ ಸುಡುತ್ತಿದ್ದ. ಆ ಸ್ಥಳದ ಬದಿಯಲ್ಲೇ ಒಂದು ಸರ್ಪದ ಬಿಲವಿತ್ತು. ಕಸವನ್ನು ಸುಡುವಾಗ ಎದ್ದ ಹೊಗೆ ಬಿಲವನ್ನು ತುಂಬಿಕೊಂಡಿತು. ಕೋಪದಿಂದ ಹೊರಗೆ ಬಂದ ಸರ್ಪ ಹೊಗೆಯಿಂದ ಗಾಬರಿಗೊಂಡು ಹತ್ತಿರದಲ್ಲೇ ನಿಂತಿದ್ದ ಮಗನನ್ನು ಬಲವಾಗಿ ಕಚ್ಚಿತು. ಕ್ಷಣ ಮಾತ್ರದಲ್ಲಿ ವಿಷ ನೆತ್ತಿಗೇರಿ ತರುಣ ಸತ್ತು ಹೋದ. ಅದನ್ನು ನೋಡಿದ ಬೋಧಿಸತ್ವ ಓಡಿ ಬಂದ. ಮಗ ಸತ್ತದ್ದು ತಿಳಿಯಿತು. ಆತ ಅಳಲಿಲ್ಲ, ಕೂಗಾಡಲಿಲ್ಲ. ದೇಹವನ್ನು ಎತ್ತಿ ಮರದ ಕೆಳಗೆ ಮಲಗಿಸಿ ಶರೀರದ ಅನಿತ್ಯತೆಯನ್ನು ನೆನೆಯುತ್ತ ಮತ್ತೆ ನೇಗಿಲಿನಿಂದ ಹೊಲ ಉಳತೊಡಗಿದ. ಆಗ ಹತ್ತಿರದಲ್ಲೇ ಹೋಗುತ್ತಿದ್ದ ಗೆಳೆಯನನ್ನು ಕಂಡು, “ಮಿತ್ರಾ, ನೀನು ನನ್ನ ಮನೆಯ ಕಡೆಗೆ ಹೋಗುತ್ತಿದ್ದರೆ ದಯವಿಟ್ಟು ನನ್ನ ಹೆಂಡತಿಗೆ ಇಬ್ಬರಿಗೆ ಊಟ ತರುವುದು ಬೇಡ, ಕೇವಲ ಒಬ್ಬರಿಗೆ ತಂದರೆ ಸಾಕು ಎಂದು ಹೇಳು. ಹಾಗೆಯೇ ಪರಿವಾರದವರೆಲ್ಲ ಶುಭ್ರವಾದ ಬಟ್ಟೆಗಳನ್ನು ಧರಿಸಿ ಆದಷ್ಟು ಹೂಗಳನ್ನು ತರಲು ಹೇಳು” ಎಂದ. ಗೆಳೆಯ ಈ ಮಾತನ್ನು ಹೇಳಿದಾಗ ಮನೆಯವರಿಗೆ ಮಗ ಸತ್ತಿರುವುದು ತಿಳಿಯಿತು. ಅವರೂ ಕೂಡ ಅಳಲಿಲ್ಲ, ಕಿರುಚಾಡಲಿಲ್ಲ. ಯಜಮಾನ ಹೇಳಿದಂತೆ ಶುಭ್ರವಸ್ತ್ರಗಳನ್ನು ಧರಿಸಿ ಹೂಗಳನ್ನು ಹಿಡಿದುಕೊಂಡು ಬಂದರು.

ಅವರೆಲ್ಲ ಸೇರಿ ಅವನ ದಹನ ಕಾರ್ಯವನ್ನು ಮುಗಿಸಿದರು. ಅವರೆಲ್ಲ ಮರಣಾನುಸ್ಮೃತಿಯನ್ನು ಮನನ ಮಾಡಿಕೊಂಡಿದ್ದರಿಂದ ದುಃಖಪಡಲಿಲ್ಲ. ಈ ವಿಷಯವನ್ನು ತಿಳಿದು ಇಂದ್ರ ಆಶ್ಚರ್ಯಪಟ್ಟ. ಭೂಮಿಗಿಳಿದು ಬಂದು ಬೋಧಿಸತ್ವನಿಗೆ ಕೇಳಿದ, “ನಿನ್ನ ಮಗನಿಗೆ ಅಂತ್ಯಕ್ರಿಯೆ ಮಾಡುತ್ತಿರುವ ನಿನ್ನ ಕಣ್ಣಲ್ಲಿ ನೀರಿಲ್ಲ, ದುಃಖ ಕಾಣುತ್ತಿಲ್ಲ, ನಿನ್ನ ಮಗ ಒಳ್ಳೆಯವನಾಗಿರಲಿಲ್ಲವೇ?”

“ಇಲ್ಲ, ನನ್ನ ಮಗನಷ್ಟು ಧರ್ಮಿಷ್ಠನಾದ, ಪ್ರೀತಿಯ ಮೂರ್ತಿಯೇ ಆಗಿದ್ದವನು ಸಿಗುವುದು ಅಸಾಧ್ಯ. ಆದರೆ ಮರಣ ನಿಶ್ಚಿತ. ಯಾವಾಗ ಬಂದೀತು ಎಂಬುದನ್ನು ಹೇಳುವುದು ಕಷ್ಟ. ಬಂದಾಗ ಅದನ್ನು ದುಃಖವಿಲ್ಲದೆ ಸ್ವೀಕರಿಸಬೇಕಲ್ಲ?” ಎಂದ ಬೋಧಿಸತ್ವ. ಇದೇ ರೀತಿ ಇಂದ್ರ ತಾಯಿಯನ್ನು, ತರುಣನ ಹೆಂಡತಿಯನ್ನು, ತಂಗಿಯನ್ನು, ದಾಸಿಯನ್ನು ಕೇಳಿದ. ಅವರೆಲ್ಲರೂ ಅದೇ ರೀತಿ ಸಾವನ್ನು ಅತ್ಯಂತ ಗೌರವದಿಂದ, ನಡೆಯಲೇಬೇಕಾದ ಅನಿವಾರ್ಯದಂತೆ ಒಪ್ಪಿಕೊಂಡಿದ್ದರು. ಇಂದ್ರ ಅವರ ಪಕ್ವವಾದ ಮನಸ್ಥಿತಿಗೆ ಬೆರಗಾದ. “ಇನ್ನು ಮೇಲೆ ನೀವು ಕಷ್ಟಪಡುವುದು ಬೇಡ. ನಿಮ್ಮ ಮನೆಯನ್ನು ಸದಾಕಾಲದ ಸಂಪತ್ತಿನಿಂದ ತುಂಬಿಬಿಟ್ಟಿದ್ದೇನೆ. ಇನ್ನು ಮುಂದೆ ನೀವು ದಾನ ಮಾಡುತ್ತ, ಜನರಿಗೆ ಬೋಧೆ ಮಾಡುತ್ತ ಕಾಲ ಕಳೆಯಿರಿ” ಎಂದು ಹೇಳಿ ತನ್ನ ಲೋಕಕ್ಕೆ ಹೊರಟು ಹೋದ.

ಸಾವು ಅನಿವಾರ್ಯ ಮತ್ತು ನಿಶ್ಚಿತ ಎಂದು ಗೊತ್ತಿದ್ದರೂ ಶರೀರದ ಮೋಹ ನಮ್ಮನ್ನು ಸೆಳೆದು ಮೈಮರೆಸಿ ಬಿಡುತ್ತದೆ. ಅದು ಇಲ್ಲವಾದಾಗ ಅಘಾತವನ್ನುಂಟು ಮಾಡುತ್ತದೆ. ಇದೊಂದು ವಿಶೇಷ ಮಾಯೆ.

ಪ್ರತಿಕ್ರಿಯಿಸಿ (+)