ಮಂಗಳವಾರ, ನವೆಂಬರ್ 30, 2021
21 °C

ದೃಶ್ಯ –ಅದೃಶ್ಯದ ಉಪಾಸನೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸತ್ಯ ಶಿವ ಸುಂದರದ ಸಚ್ಚಿದಾನಂದನದ |

ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ ||
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ |
ವೃತ್ತಿ ತನ್ಮಯವಹುದೊ – ಮಂಕುತಿಮ್ಮ || 331 ||

ಪದ-ಅರ್ಥ: ಸಚ್ಚಿದಾನಂದನದ=ಸತ್+ಚಿತ್+ಆನಂದನದ, ಭಿತ್ತಿ=ಪಟ, ಹಿನ್ನಲೆ; ವೃತ್ತಿ=ಕಾಯಕ, ಅಂತರಂಗದ ಕರಣಗಳು; ತನ್ಮಯ=ತಲ್ಲೀನತೆ

ವಾಚ್ಯಾರ್ಥ: ಸತ್ಯ, ಶಿವ, ಸುಂದರ ಮತ್ತು ಸತ್, ಚಿತ್, ಆನಂದದ ಭಿತ್ತಿಯ ಮೇಲೆ ಬಣ್ಣಬಣ್ಣದ ಜೀವಚಿತ್ರಗಳು ಮೂಡುತ್ತಿವೆ. ನೀನು ನಿತ್ಯ ಆ ಭಿತ್ತಿಯನ್ನು ನೆನೆಯುತ್ತ ಜೀವಚಿತ್ರಗಳಲ್ಲಿ ಮನವಿರಿಸಿದಾಗ ಅಂತರಂಗದ ವೃತ್ತಿಗಳು ತಲ್ಲೀನವಾಗುತ್ತವೆ.

ವಿವರಣೆ: ಇದೊಂದು ಅತ್ಯಂತ ಸುಂದರವಾದ, ಆಧ್ಯಾತ್ಮಿಕತೆಯ ಚಿಂತನೆಯ ಅಭಿವ್ಯಕ್ತಿಯ ಚೌಪದಿ. ಭಗವದ್ಗೀತೆಯ ಹನ್ನೊಂದು ಮತ್ತು ಹನ್ನೆರಡನೆಯ ಅಧ್ಯಾಯಗಳ ಸೂತ್ರ ರೂಪ ಇದರಲ್ಲಿದೆ.

ವಿಶ್ವರೂಪ ದರ್ಶನವನ್ನು ವಿವರಿಸಿದ ಹನ್ನೊಂದನೆ ಅಧ್ಯಾಯದ ಕೊನೆಯಲ್ಲಿ ಅರ್ಜುನನಿಗೆ ಒಂದು ವಿಷಯ ಖಂಡಿತವಾಗಿ ಮನನವಾಯಿತು. ಸದ್ಪಸ್ತು ಎಂಬುದು ಎರಡು ಪ್ರಕಾರದ್ದು. ಒಂದು ವಿಶ್ವರೂಪ, ಮತ್ತೊಂದು ವಿಶ್ವಾತೀತ. ವಿಶ್ವರೂಪ ತನ್ನೆಲ್ಲ ಬಣ್ಣಗಳಿಂದ, ಜೀವಗಳಿಂದ ದೃಶ್ಯ ಸತ್ಯ. ವಿಶ್ವಾತೀತವಾದದ್ದು, ಅದು ಪರಬ್ರಹ್ಮ ತತ್ವ, ಅವ್ಯಕ್ತವಾದದ್ದು ಮತ್ತು ಅದೃಶ್ಯ ಸತ್ಯ. ಇವೆರಡರಲ್ಲಿ ಯಾವುದನ್ನು ಉಪಾಸನೆ ಮಾಡಬೇಕು?

ಭಗವಂತನ ವಿಶ್ವರೂಪವನ್ನು ಕಂಡ ಅರ್ಜುನನಿಗೆ ಒಂದು ವಿಶೇಷ ಅನುಭವವಾಯಿತು. ವಿಶ್ವರೂಪದ ಹಿಂದುಗಡೆ, ಅದಕ್ಕೆ ಆಧಾರವಾಗಿ ಒಂದು ವಿಶ್ವಾತೀತ ತತ್ವ ಒಂದಿದೆ. ಹಾಗೆಂದರೆ ಎರಡು ಇದ್ದಂತಾಯಿತಲ್ಲ. ಆದರೆ ಅವು ವಾಸ್ತವವಾಗಿ ಎರಡಲ್ಲ, ಒಂದೇ. ವಿಶ್ವಕ್ಕೆ ಆಕಾರ, ರೂಪ ಇರುವುದರಿಂದ ಅದು ದರ್ಶನಕ್ಕೆ ದಕ್ಕುವಂಥದ್ದು. ವಿಶ್ವಾತೀತಕ್ಕೆ ರೂಪ, ಆಕಾರವಿಲ್ಲದ್ದರಿಂದ ದರ್ಶನಕ್ಕೆ ಅಸಾಧ್ಯವಾದದ್ದು. ಹೀಗೆ ವಿಶ್ವಾತೀತವಾದದ್ದು ಇಂದ್ರಿಯಗಳಿಗೆ ದಕ್ಕದೆ ಹೋದಾಗ ಅನುಭವವಾಗುವುದು ಹೇಗೆ? ಇದನ್ನೇ ಅರ್ಜುನ ಕೇಳುತ್ತಾನೆ, ‘ನಾನು ಯಾವುದನ್ನು ಆಶ್ರಯಿಸಲಿ? ವ್ಯಕ್ತರೂಪಿಯಾಗಿ, ವಿಶ್ವಮಯನಾಗಿ ಕಣ್ಣಿಗೆ ಕಾಣುವ ನಿನ್ನ ಆಕಾರಗಳನ್ನು ಆಶ್ರಯಿಸಲೇ? ಅಥವಾ ಅದೃಶ್ಯವಾಗಿರುವ ಶುದ್ಧ ತತ್ವವನ್ನು ಪ್ರಾರ್ಥಿಸಲೇ? ಇವೆರಡು ಮಾರ್ಗಗಳಲ್ಲಿ ಯಾವುದು ಉತ್ತಮ?’ ಆಗ ಕೃಷ್ಣ ನೀಡಿದ ಉತ್ತರ ಮನೋಜ್ಞವಾದದ್ದು. ‘ಮಾರ್ಗವನ್ನು ಆರಿಸಿಕೊಳ್ಳುವುದು ಪ್ರವಾಸಿಗನ ದೇಹಬಲ, ಮನೋಬಲಗಳನ್ನು ಅವಲಂಬಿಸುತ್ತದೆ. ಹೆಚ್ಚು ಧೃಡವಾದ ಮನಸುಳ್ಳವರಿಗೆ ಅವ್ಯಕ್ತದ ಮಾರ್ಗ ಉತ್ತಮ. ಆ ಶಕ್ತಿಯನ್ನು ಹೊಂದಿಲ್ಲದವರಿಗೆ ವ್ಯಕ್ತದ ಮಾರ್ಗವೇ ಶ್ರೇಷ್ಠ. ಎರಡೂ ಮಾರ್ಗಗಳಲ್ಲಿ ಫಲಿತಾಂಶದಲ್ಲಿ ವ್ಯತ್ಯಾಸವಿಲ್ಲ’. ಆದರೆ ನಮ್ಮಂತಹವರಿಗೆ ಮಧ್ಯಮ ಮಾರ್ಗ ಕ್ಷೇಮ. ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ರಂಗುರಂಗಿನ ಜೀವಚಿತ್ರಗಳನ್ನು ಕಾಣುತ್ತಲೂ ಇರಬೇಕು ಮತ್ತು ಇದರ ಹಿಂದೆ ಒಂದು ಸತ್ಯವಾದ, ಶಿವವಾದ, ಸತ್, ಚಿತ್, ಆನಂದದ ಹಿನ್ನಲೆಯಾಗಿ, ಭಿತ್ತಿಯಾಗಿ ಒಂದು ಶುದ್ಧಸತ್ವವಿದೆಯೆಂಬುದನ್ನು ನೆನೆಸಿಕೊಂಡಾಗ ನಮ್ಮ ಅಂತಃಕರಣದ ವೃತ್ತಿಗಳೆಲ್ಲ ಅದರಲ್ಲಿ ಲೀನವಾಗುತ್ತವೆ.

ಇದೇ ಎಲ್ಲ ಸಂಸ್ಕಾರಗಳಲ್ಲಿಯೂ ಶ್ರೇಷ್ಠವಾದದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.