ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಹಂಕಾರಕ್ಕೆ ಪೆಟ್ಟು

Last Updated 27 ಜೂನ್ 2022, 20:30 IST
ಅಕ್ಷರ ಗಾತ್ರ

ಎಂದೊ ನಿನಗೊಂದು ದಿನ ಮೂಗು ಮುರಿಯುವುದು ದಿಟ|
ವೃಂದಾರಕರು ಮತ್ಸರಿಸರೆ ಗರ್ವಿತರ ?||
ಸಂದರ್ಭಗಳನದಕೆ ಜೋಡಿಪನು ವಿಧಿರಾಯ|
ಅಂದಿಕೊಳ್ಳನೆ ನಿನ್ನ ? – ಮಂಕುತಿಮ್ಮ ||659||

ಪದ-ಅರ್ಥ: ಮೂಗು ಮುರಿಯುವುದು= ಗರ್ವಭಂಗ ಮಾಡುವುದು, ವೃಂದಾರಕರು= ದೇವತೆಗಳು, ಮತ್ಸರಿಸರೆ= ಮತ್ಸರ ಪಡುವುದಿಲ್ಲವೆ, ಗರ್ವಿತರ= ಸೊಕ್ಕಿದವರ, ಸಂದರ್ಭಗಳನದಕೆ= ಸಂದರ್ಭಗಳನು+ ಅದಕೆ, ಜೋಡಿಪನು= ಸೇರಿಸುವನು, ಅಂದಿಕೊಳ್ಳನೆ= ಹಿಡಿದುಕೊಳ್ಳನೆ.

ವಾಚ್ಯಾರ್ಥ: ಗರ್ವಿತನಾದ ನಿನಗೆ ಎಂದೋ ಒಂದು ದಿನ ಗರ್ವಭಂಗವಾಗುತ್ತದೆ. ಸೊಕ್ಕಿದವರನ್ನು ಕಂಡರೆ ದೇವತೆಗಳಿಗೂ ಮತ್ಸರ. ವಿಧಿ ಅದಕ್ಕೆ ಸರಿಯಾಗಿ ಸಂದರ್ಭಗಳನ್ನು ಹೊಂದಿಸಿ, ನಿನ್ನನ್ನು ಹಿಡಿದುಕೊಳ್ಳುತ್ತಾನೆ.

ವಿವರಣೆ: ಅಹಂಕಾರ, ಗರ್ವವೆನ್ನುವುದು ಬಹುದೊಡ್ಡ ಮರಳು ಬೆಟ್ಟವನ್ನೇರಿದ ಪರಿ. ಮೊದಲು ಕೆಲವು ಹೆಜ್ಜೆಗಳು ಸಂಭ್ರಮ ತಂದಾವು, ಅಮಲು ಏರಿಸಿಯಾವು. ಆದರೆ ಅದು ಮರಳು ದಿನ್ನೆಯಾದ್ದರಿಂದ ಕುಸಿದು ಜಾರುವುದು ಖಂಡಿತ. ಗರ್ವ ಬಂದರೆ ಭಂಗವಾಗುವ ಕಾರ್ಯ ದೂರವಿಲ್ಲವೆಂದೇ ತಿಳಿಯಬೇಕು. ನನಗಿಂತ ಪ್ರಬಲರು ಯಾರಿದ್ದಾರೆ ಎಂದು ಮೆರೆದಹಿಟ್ಲರ್, ಇದಿ-ಅಮೀನ್, ಸದ್ದಾಂ ಹುಸೇನ್ ಅವರ ಗತಿ ಏನಾಯಿತೆಂದು ಪ್ರಪಂಚಕ್ಕೇತಿಳಿದಿದೆ.

ವಿಷ್ಣುವಿನ ಅಂತರಂಗ ಭಕ್ತರು, ಸದಾ ಅವನ ಬಾಗಿಲಲ್ಲೇ ಇರುವ ಜಯ-ವಿಜಯರಿಗೆ ಕೂಡ ಗರ್ವ ಬಂದಿತಂತೆ. ಅವರ ಗರ್ವಭಂಗವೂ ನಡೆಯಿತು. ಆನೆಯಾಗಿ, ಮೊಸಳೆಯಾಗಿ ಸಹಸ್ರಾರು ವರ್ಷ ಒದ್ದಾಡಬೇಕಾಯಿತು. ರಾಕ್ಷಸರ ವಿರುದ್ಧ ಹೋರಾಡಲು ದೇವತೆಗಳಿಗೇ ಸಹಾಯ ಮಾಡಿದ ನಹುಷ ಚಕ್ರವರ್ತಿ, ತಾನೇ ಇಂದ್ರನಾಗುವ ಅವಕಾಶ ಬಂದಾಗ, ಗರ್ವವನ್ನು ನೆತ್ತಿಗೇರಿಸಿಕೊಂಡ. ಪ್ರತಿಫಲವಾಗಿ, ಹೆಬ್ಬಾವಾಗಿ ಶತಶತಮಾನಗಳ ಕಾಲ ಕಾಡಿನಲ್ಲಿ ಬಿದ್ದ.

ನಮ್ಮ ದೇಶದಲ್ಲೂ ಅಂತಹ ಅಹಂಕಾರಿಗಳು ಆಗಿ ಹೋಗಿದ್ದಾರೆ, ಇಂದಿಗೂ ಇದ್ದಾರೆ. ಅವರ ಮಾತಿನ ಠೇಂಕಾರವೇನು? ನಡಿಗೆಯ ಗತ್ತೇನು? ಮತ್ತೊಬ್ಬರನ್ನು ಕೀಳು ಮಾಡಿ ತೋರುವ ಬಗೆಯೇನು? ಇಂಥ ಅನೇಕರು ಹಿಂದೆ ಮೂಲೆಗುಂಪಾಗಿ ಹೋಗಿದ್ದಾರೆ. ಆದರೂ ಉಳಿದವರು ಪಾಠ ಕಲಿಯುವುದಿಲ್ಲವಲ್ಲ ಎಂದು ಕಗ್ಗ ಎಚ್ಚರಿಕೆ ನೀಡುತ್ತದೆ. ಎಂದೋ ಒಂದು ದಿನ ನಿನ್ನ ಮೂಗುಮುರಿಯುತ್ತದೆ ಎನ್ನುತ್ತದೆ. ಆ ದಿನ ಬೇಗನೇ ಬರಬಹುದು, ತುಸು ತಡವಾಗಬಹುದು ಆದರೆ ತಪ್ಪುವುದಿಲ್ಲ. ಹೀಗೆ ಗರ್ವಿತರ ಬಗ್ಗೆ ದೇವತೆಗಳಿಗೂ ಅಸೂಯೆಯಾಗುತ್ತದೆ ಎನ್ನುತ್ತದೆ.

ಆಗ ವಿಧಿ ಗರ್ವಭಂಗವಾಗುವುದಕ್ಕೆ ಅನುಕೂಲವಾಗುವಂತೆ ಸಂದರ್ಭಗಳನ್ನು ಜೋಡಿಸುತ್ತಾನಂತೆ. ಅದು ಚುನಾವಣೆಯಲ್ಲಿ ಹೀನಾಯ ಸೋಲಾಗಬಹುದು, ಆಟದಲ್ಲಿ ವಿಫಲತೆಯಾಗಬಹುದು, ಪ್ರೇಮದಲ್ಲಿ ಮೋಸವಾಗಬಹುದು, ಆತ್ಮೀಯರ, ಮನೆಯಲ್ಲಿ ಬಂಧುಗಳ ಸಾವಾಗಬಹುದು. ಅವೆಲ್ಲ ಕೇವಲ ನೆಪಗಳು, ಗರ್ವವನ್ನು ಮುರಿಯುವುದಕ್ಕೆ. ವಿಧಿರಾಯನಿಗೂ ಗರ್ವಿತರನ್ನು ಕಂಡರೆ ಬಲುಪ್ರೇಮ. ಅದಕ್ಕೇ ಅಂಥವರು ಕಂಡಕೂಡಲೇ ಅವರನ್ನು ಅಪ್ಪಿಕೊಳ್ಳುತ್ತಾನಂತೆ. ಅಪ್ಪಿಕೊಂಡಂತೆ ಮಾಡಿ ಮೂಗು ಮುರಿಯುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT