ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬಿಟ್ಟೇನೆಂದರೂ ಬಿಡದ ಪ್ರಪಂಚ

ಗುರುರಾಜ ಕರಜಗಿ ಅಂಕಣ
Last Updated 11 ಮೇ 2022, 16:44 IST
ಅಕ್ಷರ ಗಾತ್ರ

ಕೆಟ್ಟ ಪ್ರಪಂಚವಿದು, ಸುಟ್ಟ ಕರಿಮನಸು |
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ||
ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು |
ಗಟ್ಟಿ ಪುರುಳೇನಲ್ಲ – ಮಂಕುತಿಮ್ಮ || 625 ||

ಪದ-ಅರ್ಥ: ಬಿಟ್ಟುಬಿಡಲರಿದದನು=ಬಿಟ್ಟು
ಬಿಡಲು+ಅರಿದ+ಅದನು, ಕಟ್ಟಿಕೊಳೆ=ಕಟ್ಟಿಕೊಂಡರೆ, ಮಷ್ಟು=ಕೊಳೆ, ಮುಟ್ಟಿ ಮುಟ್ಟದವೋಲುಪಾಯದಿಂ=ಮುಟ್ಟಿ+ಮುಟ್ಟದ
ವೋಲ್(ಮುಟ್ಟದಂತೆ) +ಉಪಾಯದಿಂ, ನೋಡದನು=ನೋಡು+ಅದನು, ಪುರುಳೇನಲ್ಲ=
ಪುರುಳು(ವಸ್ತು)+ಏನಲ್ಲ.

ವಾಚ್ಯಾರ್ಥ: ಇದು ಕೆಟ್ಟ ಪ್ರಪಂಚ. ಮನಸ್ಸು ಸುಟ್ಟು ಕರಿಯಾಗಿದೆ. ಆದರೆ ಇದನ್ನು ಬಿಟ್ಟು ಬಿಡಲು ಆಗದು. ಇದನ್ನು ಕಟ್ಟಿಕೊಂಡರೆ ಕೊಳೆ ತುಂಬಿಕೊಳ್ಳುತ್ತದೆ. ಮುಟ್ಟಿಯೂ ಮುಟ್ಟದ ಹಾಗೆ ಉಪಾಯದಿಂದ ಅದನ್ನು ನೋಡು. ಯಾಕೆಂದರೆ ಇದು ಗಟ್ಟಿ ವಸ್ತುವೇನಲ್ಲ.

ವಿವರಣೆ: ನಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ಗಮನಿಸುತ್ತಿದ್ದರೆ ಪ್ರಪಂಚ ತುಂಬ ಕೆಟ್ಟು ಹೋಗಿದೆ ಎನ್ನಿಸುತ್ತದೆ. ಯಾವುದೋ ಒಂದು ವೈರಾಣು ಇಡೀ ಪ್ರಪಂಚವನ್ನೇ ಆಸ್ಪತ್ರೆ, ಮಸಣವನ್ನಾಗಿಸಿತು. ಪ್ರಜೆಗಳು ಶಾಂತಿಯನ್ನು ಜಯಸಿದರೂ ಒಬ್ಬ ಯುದ್ಧದಾಹಿ ನಾಯಕ ಸಹಸ್ರಾರು ಅಮಾಯಕರ ಪ್ರಾಣಹರಣವಾಗುವಂತೆ ಮಾಡಿದ. ಒಂದಿಬ್ಬರು ಅಧಿಕಾರದಾಹಿ ರಾಜಕಾರಣಿಗಳು ಒಂದು ತೀರ ಸಣ್ಣದಾದ ವಿಷಯವನ್ನು ಧಾರ್ಮಿಕ ಸಂಗತಿಯೆಂದು ಬಿಂಬಿಸಿ, ಸಮುದಾಯಗಳನ್ನು ಒಡೆದು ಅಶಾಂತಿಯನ್ನು ತುಂಬಿದರು. ಇದು ಸಾಲದೆಂಬಂತೆ ವೈಯಕ್ತಿಕ ಸ್ವಾರ್ಥ, ಹಣದಾಸೆಗಳು ಪರಿಸ್ಥಿತಿಯನ್ನು ಹದಗೆಡಿಸಿವೆ. ಕಗ್ಗ ಮೊದಲನೆಯ ಸಾಲಿನಲ್ಲಿ ಮೊದಲರ್ಧದಲ್ಲಿ ಫಲಿತಾಂಶವನ್ನು ಹೇಳುತ್ತ, ಎರಡನೆಯ ಅರ್ಧದಲ್ಲಿ ಕಾರಣವನ್ನು ತಿಳಿಸುತ್ತದೆ. ಈ ಪ್ರಪಂಚ ಕೆಡುವುದಕ್ಕೆ ಕಾರಣವೇನು? ಅದೇ ಸುಟ್ಟ ಕರಿ ಮನಸು.

ಪ್ರಪಂಚ ತಾನಾಗಿಯೇ ಕೆಡುವುದಿಲ್ಲ. ಅದು ತನ್ನಷ್ಟಕ್ಕೆ ತಾನೇ ಸಮಸ್ಥಿತಿಯನ್ನು ಹೊಂದಲು ಪ್ರಯತ್ನಿಸುತ್ತದೆ. ಆದರೆ ಈ ಸುಟ್ಟು ಕರಕಾದ ಮನಸುಗಳಿವೆಯಲ್ಲ, ಅವೇ ಪ್ರಪಂಚವನ್ನು ಕೆಡಿಸುವುದು. ಅವು ಎಂಥ ಮನಸುಗಳು ಎಂಬುದನ್ನು ಹದಿನೆಂಟನೆ ಶತಮಾನದ, ಹೇಮಗಲ್ಲದ, ವಚನಕಾರ ಹೇಮಗಲ್ಲ ಹಂಪ, ಸುಂದರವಾಗಿ ತಿಳಿಸುತ್ತಾನೆ.

‘ಸದಾ ಚಣಚಣಕೊಂದೊಂದನೆಣಿಸಿನೆಣಸಿ ಕಾಡೂದೀ ಬಡಗುಮನ, ಜಣಗುಮನ, ಠಕ್ಕಮನ, ಟುಕ್ಕಮನ, ಕೋಪಿಮನ, ಜಾಪಿಮನ’

ಇಷ್ಟು ತರಹದ ವಿಕಾರವಾದ ಮನಸುಗಳು ಪ್ರಪಂಚವನ್ನು ಕೆಟ್ಟದಾಗಿಸುತ್ತವೆ. ಈ ಪ್ರಪಂಚವನ್ನೇ ಬಿಟ್ಟು ಹೋಗಬೇಕೆಂದರೆ ಸಾಧ್ಯವೆ? ಬಿಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲಿಯೇ ಇರೋಣವೆಂದರೆ, ಅದರ ಕೊಳಕು ನಮಗೂ ಅಂಟಿಕೊಳ್ಳುತ್ತದೆ. ಹಾಗಾದರೆ ಇಲ್ಲಿ ಬದುಕುವುದು ಹೇಗೆ ಎನ್ನುವುದನ್ನು ಕಗ್ಗ ತಿಳಿಸುತ್ತದೆ. ಇಲ್ಲಿ ಅಂಟಿಯೂ ಅಂಟದಂತೆ ಇರಬೇಕಂತೆ, ನೀರಿನಲ್ಲೇ ಇದ್ದೂ ನೀರನ್ನು ಅಂಟಿಸಿಕೊಳ್ಳದ ಕಮಲದ ಎಲೆಯಂತೆ. ಪ್ರಪಂಚದ ಜವಾಬ್ದಾರಿಗಳನ್ನು ನಡೆಸುತ್ತಲೇ ಇರಬೇಕು, ಆದರೆ ಇದೊಂದು ಆಟ ಮಾತ್ರ ಎಂಬುದನ್ನು ನೆನಪಿಡಬೇಕು. ಕಗ್ಗ ಬಹುದೊಡ್ಡ ಚಿಂತನೆಯನ್ನು ಕೊನೆಯ ಸಾಲಿನಲ್ಲಿ ಕೊಡುತ್ತದೆ. ಈ ಪ್ರಪಂಚ ಗಟ್ಟಿಯಾದದ್ದಲ್ಲ. ಇದು ತಾತ್ಪೂರ್ತಿಕವಾದದ್ದು. ಇದಕ್ಕಿಂದ ಗಟ್ಟಿಯಾದದ್ದು, ಶಾಶ್ವತವಾದದ್ದು ಮೇಲಿದೆ. ಕೆಲವೇ ದಿನಗಳ ಕಾಲ ಇದ್ದು ಹೋಗುವ ತಾತ್ಪೂರ್ತಿಕವಾದ, ಗಟ್ಟಿಯಲ್ಲದ ಪ್ರಪಂಚದಲ್ಲಿ ಅತಿಥಿ ಇದ್ದ ಹಾಗೆ ಇದ್ದರೆ, ಜಗತ್ತನ್ನು ಬಿಡಲೂ ಬೇಕಲ್ಲ, ಅದರ ಕೊಳೆಯೂ ಅಂಟುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT