ಭಾನುವಾರ, ಜುಲೈ 3, 2022
28 °C

ಬೆರಗಿನ ಬೆಳಕು: ಬ್ರಹ್ಮಾನುಭವದ ಪಾಠಶಾಲೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುರುರಾಜ ಕರಜಗಿ

ಋಣವ ತೀರಿಸಬೇಕು, ಋಣವ ತೀರಿಸಬೇಕು |
ಋಣವ ತೀರಿಸುತ ಜಗದಾದಿಸತ್ತ್ವವನು ||
ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು |
ಮನೆಯೊಳಗೆ ಮಠ ನಿನಗೆ – ಮಂಕುತಿಮ್ಮ || 628 ||

ಪದ-ಅರ್ಥ: ಜಗದಾದಿಸತ್ತ್ವವನು=ಜಗದ+ಆದಿ+ಸತ್ವವನು, ಕಾಣುತ್ತದರೊಳ್= ಕಾಣುತ್ತ+ಅದರೊಳ್(ಅದರೊಳು)

ವಾಚ್ಯಾರ್ಥ: ಬದುಕಿನಲ್ಲಿ ಬಂದ ಮೇಲೆ ಋಣವ ತೀರಿಸಬೇಕು. ಋಣವ ತೀರಿಸುತ್ತಲೇ, ನನ್ನಲ್ಲಿರುವ ಆದಿಸತ್ವವನ್ನು ಸಮಗ್ರ ಜನಪದದಲ್ಲಿ ಕಾಣಬೇಕು. ಎಲ್ಲರೊಡನೆ ಒಂದುಗೂಡಬೇಕು. ಮನೆಯೇ ಪಾಠಶಾಲೆ ನಿನಗೆ.

ವಿವರಣೆ: ಈ ಅಕ್ಷರಗಳನ್ನು ಓದುತ್ತಿದ್ದಂತೆ ನಮ್ಮ ಮೇಲೆ ಇರುವ ಋಣಭಾರದ ಕಲ್ಪನೆ ಬಂದೀತು. ನೀವು ಆರಾಮವಾಗಿ ಕುಳಿತ ಕುರ್ಚಿಯನ್ನು ಮೊದಲು ಯೋಜನೆ ಮಾಡಿದವನು, ನಂತರ ಬೇರೆ ಬೇರೆ ವಸ್ತುಗಳಿಂದ ಅದನ್ನು ಸಿದ್ಧಪಡಿಸಲು ಎಷ್ಟು ಜನ, ಎಷ್ಟು ಕಾಲ ಶ್ರಮಿಸಿದರೋ? ಅದರ ಫಲ ನಿಮಗೆ ದೊರೆತಿದೆ. ಅಲ್ಲಿ ಎಲ್ಲೋ ಶರಾವತಿಯಲ್ಲಿ ನೀರನ್ನು ಧುಮ್ಮಿಕ್ಕಿಸಿ ವಿದ್ಯುತ್‌ ಅನ್ನು ತಯಾರು ಮಾಡುತ್ತಿದ್ದಾರೆ. ಅದೆಷ್ಟು ವಿಜ್ಞಾನಿಗಳು ಅದನ್ನು ಸಾಧಿಸಲು ರಾತ್ರಿಗಳನ್ನು ಸವೆಸಿದರೋ? ಅಲ್ಲಿಂದ ನಿಮ್ಮ ಮನೆಯವರೆಗೆ ಹಬ್ಬದ ತಂತಿಗಳ ಜಾಲ ಅದೆಷ್ಟು ಜೀವನಗಳ ಶ್ರಮದ ಫಲ? ಮಳೆಯಾಗಲಿ, ಬಿಸಿಲಾಗಲಿ ಹಗಲು ರಾತ್ರಿ ಓಡಾಡುತ್ತ ನಿಮಗೆ ವಿದ್ಯುತ್‌ ಅನ್ನು ನಿರ್ವಿಘ್ನವಾಗಿ ತಲುಪಿಸುವ ಜವಾಬ್ದಾರಿ ಹೊತ್ತ ಜನ ಕಣ್ಣಮುಂದೆ ಬಂದಾರೆಯೇ? ಥಾಮಸ್ ಎಡಿಸನ್‌ನಿಂದ ಹಿಡಿದು ಅನೇಕ ತಂತ್ರಜ್ಞರು ದುಡಿದು ನಿಮ್ಮ ಮನೆ ಬೆಳಗುವಂತೆ ಮಾಡಿದ್ದಾರೆ. ನಿಮ್ಮ ವರ್ತಮಾನ ಪತ್ರಿಕೆ ರಾತ್ರೋರಾತ್ರಿ ಆದದ್ದೇ? ಮರದಿಂದ ಕಾಗದವನ್ನು ಮಾಡುವುದಕ್ಕೆ ಅದೆಷ್ಟು ವರ್ಷಗಳ ಪರಿಶ್ರಮ ಬೇಕಾಯಿತೋ? 1440ರಲ್ಲಿ ಜರ್ಮನಿಯ ಗುಟೆನ್‌ಬರ್ಗನಿಂದ ಹಿಡಿದು ಇಲ್ಲಿಯವರೆಗೆ ಅದೆಷ್ಟು ತಲೆಗಳು ಪ್ರಯತ್ನಿಸಿ ಇಂದಿನ ಮುದ್ರಣ ಯಂತ್ರಗಳನ್ನು ಕಂಡುಹಿಡಿದವೋ? ಎಷ್ಟು ಜನ ಪತ್ರಿಕೆಗೆ ಬರೆದು, ಅವುಗಳನ್ನು ಪರಿಷ್ಕರಿಸಿ, ಸಂಯೋಜಿಸಿ, ಮುದ್ರಿಸಿ, ವಾಹನಗಳ ಮೂಲಕ ಸಾಗಿಸಿ, ನಿಮ್ಮ ಮನೆಯನ್ನು ತಲುಪಿಸುವ ಕಾರ್ಯ ಮಾಡಿದರೋ? ನಾನು ಆರಾಮವಾಗಿ ಪತ್ರಿಕೆ ಓದುವಾಗ ಇಷ್ಟೆಲ್ಲ ಜನರ ಪ್ರಯತ್ನದ ಋಣ ನನ್ನ ಮೇಲಿದೆ. ನಾನು ಒಂದು ಕ್ಷಣ ಸಂತೋಷವಾಗಿದ್ದರೆ ಅದಕ್ಕೆ, ಹಿಂದೆ ನೂರಾರು ಜನರ ಋಣವಿದೆ ಎನ್ನುವುದನ್ನು ಮರೆಯಲಾಗದು. ಹೀಗೆ ನಮ್ಮ ಬದುಕಿನುದ್ದಕ್ಕೂ ಋಣಗಳ ಭಾರ ಹೆಚ್ಚಾಗುತ್ತಲೇ ಹೋಗುತ್ತದೆ. ಮನುಷ್ಯರಾಗಿ ಬಂದಂತಹ ನಾವು ಬದುಕಿರುವವರೆಗೆ ಸಾಧ್ಯವಾದಷ್ಟು ಈ ಋಣವನ್ನು ತೀರಿಸಬೇಕು. ಇಲ್ಲದೆ ಹೋದರೆ ಅದನ್ನು ತೀರಿಸಲು ಮತ್ತೆ ಜನ್ಮಗಳನ್ನು ಎತ್ತಿ ಬರಬೇಕಾಗುತ್ತದೆ ಎಂಬುದು ಪೂರ್ವಿಕರ ಕಲ್ಪನೆ.

ಇದರೊಂದಿಗೆ ಇನ್ನೊಂದು ಕಾರ್ಯವನ್ನು ಮಾಡಬೇಕು. ಜಗದ ಆದಿಸತ್ವ ನನ್ನಲ್ಲಿ ಇದೆ ಎನ್ನು ವುದನ್ನು ಅರಿಯುವುದರ ಜೊತೆಗೆ ಅದೇ ಸತ್ವ ಎಲ್ಲ ಜೀವಗಳಲ್ಲೂ, ಜನರಲ್ಲೂ ಇದೆ ಎಂಬುದನ್ನು ಮನ ಗಾಣಬೇಕು. ಆಗ ಭಿನ್ನತೆ ಅಳಿದು, ನಾವೆಲ್ಲ ಒಂದೇ ಎಂಬ ಭಾವನೆ ಮೂಡುತ್ತದೆ. ಎಲ್ಲರಲ್ಲೂ ಒಂದಾಗಿ ಕೂಡಬೇಕು. ತನ್ನಲ್ಲಿ ಇರುವುದೇ ಎಲ್ಲರಲ್ಲೂ ಇದೆ ಎಂದಾಗ ಸರ್ವಾತ್ಮಭಾವವನ್ನು ಅನುಭವಿಸುತ್ತಾನೆ. ಈ ಕಗ್ಗ ಒಂದು ಸುಂದರ ಪಾಠವನ್ನು ಹೇಳುತ್ತದೆ. ಸರ್ವಾತ್ವಭಾವಕ್ಕಾಗಿ ನಾವು ಹೊರಗೆಲ್ಲೋ ಅಲೆಯಬೇಕಾಗಿಲ್ಲ. ಅವನ ಸಂಸಾರದಲ್ಲೇ ಎಲ್ಲವೂ ದೊರಕುತ್ತದೆ. ಅದಕ್ಕೆ ಮನೆಯೇ ಪಾಠಶಾಲೆ. ಇದೇ ಬ್ರಹ್ಮಾನುಭವದ ಪ್ರಯೋಗಶಾಲೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು